ಶ್ರವಣಬೆಳ್ಗೊಳದ ಸಾಹಿತ್ಯ ಚರಿತ್ರೆ ‘ಕನ್ನಡ ಸಾಹಿತ್ಯ ಚರಿತ್ರೆ’ಯ ಉಜ್ವಲ ಅಧ್ಯಾಯಗಳನ್ನು ಒಳಗೊಂಡಿರುವಂತಹದ್ದು. ಇಲ್ಲಿನ ಕವಿಗಳು ಕನ್ನಡದ ಗದ್ಯಪದ್ಯ ಪ್ರಭೇದಗಳೆರಡನ್ನೂ ಗಟ್ಟಿಗೊಳಿಸಿ, ಎರಡೂ ಮಾಧ್ಯಮಗಳನ್ನು ಸ್ವತಂತ್ರವಾಗಿ ಮತ್ತು ಸಂಯುಕ್ತವಾಗಿ ದುಡಿಸಿಕೊಂಡು, ಚಂಪೂಕಾವ್ಯ ಪ್ರಭೇದವನ್ನು ಕನ್ನಡದಲ್ಲಿ ಪರಿಚಯಿಸಿದರು.
ಶ್ರವಣಬೆಳ್ಗೊಳದ ವಿಂಧ್ಯಗಿರಿ ಮತ್ತು ಚಂದ್ರಗಿರಿ ಭೂಮಿಯ ಮೇಲೆ ಸ್ಪಷ್ಟವಾಗಿ ಗೋಚರಿಸುವ ಎರಡು ಕಲ್ಬೆಟ್ಟಗಳು. ಧಾರ್ಮಿಕರು ಇವನ್ನು ಗೊಮ್ಮಟಗಿರಿ, ತೀರ್ಥಗಿರಿ, ಋಷಿಗಿರಿ, ಎಂದು ಗೌರವದಿಂದ ಕರೆದಿರುವರು. ಈ ಎರಡು ಗಿರಿಗಳಲ್ಲದೆ ಅಗೋಚರ ಗಿರಿಯೊಂದು ಇಲ್ಲಿದೆ. ಇದು ಚರಿತ್ರೆಯ ಆಳದಲ್ಲಿ ಅಡಗಿಕೊಂಡಿದೆ. ಚಂದ್ರಗಿರಿಯ ಪುರಾತನತೆಯನ್ನು ಮತ್ತು ವಿಂಧ್ಯಗಿರಿಯ ಅಗಾಧತೆಯನ್ನು ಒಗ್ಗೂಡಿಸಿಕೊಂಡಿರುವ ಈ ಅಕ್ಷರಗಿರಿಯ ರೂಹುಗಳನ್ನು ಇನ್ನೂ ಹುಡುಕಿ ತೆಗೆಯಬೇಕಾಗಿದೆ.
ಸುಮಾರು ಆರನೆಯ ಶತಮಾನದಿಂದ ಪ್ರಾರಂಭಗೊಳ್ಳುವ ಶ್ರವಣಬೆಳ್ಗೊಳದ ಸಾಹಿತ್ಯ ಚರಿತೆಯು ಎರಡು ವರ್ಗಗಳ ಲೇಖಕರನ್ನು ಪರಿಚಯಿಸುವುದು: ಒಂದು, ಐತಿಹಾಸಿಕ ಘಟನೆಗಳನ್ನು ಕಾವ್ಯದಲ್ಲಿ ಕಟ್ಟಿ, ಕಲ್ಲಮೇಲೆ ಕೆತ್ತಿಸಿದವರದ್ದು, ಇನ್ನೊಂದು ಈ ಕ್ಷೇತ್ರದೊಡನೆ ಒಂದಿಲ್ಲೊಂದು ಬಗೆಯಲ್ಲಿ ಗುರುತಿಸಿಕೊಂಡ ಕವಿಗಳದ್ದು. ಸುಮಾರು 550 ಹಿರಿಕಿರಿಯ ಶಾಸನಗಳನ್ನು ಬರೆಯಲು ಇಲ್ಲಿ ಬಳಸಿದ ಲಿಪಿ ಮತ್ತು ಭಾಷೆ ಕನ್ನಡ; ಇದಕ್ಕೆ ಅತಿದೂರದ ಎರಡನೆಯ ಸ್ಥಾನದಲ್ಲಿರುವುದು ಸಂಸ್ಕೃತ ಭಾಷೆ ಮತ್ತು ನಾಗರಿ ಲಿಪಿ. ಮರಾಠಿ, ಮಹಾಜನಿ ಮತ್ತು ತಮಿಳು ಅಲ್ಲಲ್ಲಿ ಮಿಣುಕಿವೆ ಮಾತ್ರ. ಸಂಸ್ಕೃತ ಭಾಷೆಯು ನಾಗರೀಲಿಪಿಗಿಂತ ಇಲ್ಲಿ ಹೆಚ್ಚು ಆಶ್ರಯಿಸಿರುವುದು ಕನ್ನಡಲಿಪಿಯನ್ನು.
ಆರಂಭಕಾಲದ ಶ್ರಮಣಕವಿಗಳಾದ ಕುಂದಕುಂದ, ಅಕಲಂಕ, ಸಮಂತಭದ್ರ ಮುಂತಾದವರು ಬರೆದದ್ದು ಶಾಸ್ತ್ರ, ಸಿದ್ಧಾಂತ ಮತ್ತು ಆಚಾರ ಗ್ರಂಥಗಳನ್ನು ಮಾತ್ರ. ಅವರಿದ್ದ ನೆಲೆಯ ಖಚಿತತೆ ಇಲ್ಲ. ಆದರೆ, ಇವರು ಶ್ರವಣಬೆಳ್ಗೊಳದ ನಿವಾಸಿಗಳಂತೂ ಆಗಿರಲಿಲ್ಲ. ದಿಗಂಬರ ಮುನಿಗಳ ತತ್ವಕ್ಕನುಗುಣವಾಗಿ ಮೂರು ದಿನಗಳಿಗಿಂತ ಹೆಚ್ಚು ಒಂದೆಡೆ ನಿಲ್ಲದೆ ಇವರೆಲ್ಲರೂ ಸದಾ ಸಂಚಾರಿಗಳಾಗಿದ್ದ ಸಾಧ್ಯತೆ ಇದೆ. ಪ್ರಾಕೃತ ಇವರ ಪ್ರೀತಿಯ ಮಾಧ್ಯಮ. ಸಂಸ್ಕೃತ ಗೊತ್ತಿರಲು ಸಾಧ್ಯ, ಆದರೆ ಕನ್ನಡವಂತೂ ಗೊತ್ತಿರಲಿಲ್ಲ. ಈ ಕಾಲದಲ್ಲಿ ಕನ್ನಡವು ಬರಹ ಮಾಧ್ಯಮವೂ ಆಗಿರಲಿಲ್ಲ.
ಒಂಭತ್ತು, ಹತ್ತನೆಯ ಶತಮಾನಗಳಲ್ಲಿ ಇದೆಲ್ಲವೂ ಬದಲಾಗಿ, ಇಪ್ಪತ್ನಾಲ್ಕು ತೀರ್ಥಂಕರರ ಜೀವನ ಚರಿತ್ರೆಯನ್ನು ಪರಿಚಯಿಸುವುದೇ ಪ್ರಧಾನ ಕಾವ್ಯವಸ್ತುವಾ ಯಿತು. ಪೂರ್ವಪುರಾಣ ಬರೆದ ಜಿನಸೇನಾಚಾರ್ಯರು, ಉತ್ತರಪುರಾಣ ಬರೆದ ಗುಣಭದ್ರಾಚಾರ್ಯರು ಇವರಲ್ಲಿ ಪ್ರಥಮರು. ರಾಷ್ಟ್ರಕೂಟರ ಕಾಲದ ಕರ್ನಾಟಕವು ನೆಲೆಯಾಗಿದ್ದರೂ ಇವರು ಬಳಸಿದ ಭಾಷೆ ಸಂಸ್ಕೃತ. ಈ ಕಾಲಕ್ಕಾಗಲೇ ಪ್ರಾಕೃತವು ಇಲ್ಲಿ ಮಸಕಾಗಿತ್ತು, ಕನ್ನಡ ಸದೃಢಗೊಂಡಿತ್ತು. ನೆಲದ ಭಾಷೆಯನ್ನು ಬಳಸದಿದ್ದರೂ ಪಂಡಿತರಿಗಾಗಿ ಬರೆದ ‘ಪೂರ್ವಪುರಾಣ’ವು ನೆಲದ ವಾಸನೆಯನ್ನು ಹೊಂದಿದೆ. ಇಲ್ಲಿಯ ನೆಲ, ಜಲ, ಜನಾಂಗೀಯ ಧರ್ಮದ ಆಚರಣೆಗಳು ಈ ಕಾವ್ಯದಲ್ಲಿ ಸೂಕ್ಷ್ಮವಾಗಿ ಉಸಿರಾಡಿವೆ. ಜಿನಸೇನ-ಗುಣಭದ್ರರ ಮಾದರಿಯನ್ನು ಮುಂದುವರಿಸಿದ ಕನ್ನಡದ ಕವಿಚಿಂತಕರೆಂದರೆ ಹತ್ತನೆಯ ಶತಮಾನದ ಗದ್ಯಕವಿಗಳಾದ ಶಿವಕೋಟ್ಯಾಚಾರ್ಯ, ಚಾವುಂಡರಾಯ, ಚಂಪೂ ಕವಿಗಳಾದ ಪಂಪ, ಪೊನ್ನ, ರನ್ನ. ಜಿನಧರ್ಮದ ಅರಿವನ್ನು ಕನ್ನಡಭಾಷೆಯ ಸೊಗಸನ್ನು ಪ್ರಚುರಪಡಿಸಿದರು.
ಕನ್ನಡದ ಗದ್ಯಪದ್ಯ ಪ್ರಭೇದಗಳೆರಡನ್ನೂ ಗಟ್ಟಿಗೊಳಿಸಿದ ಇವರು ಈ ಎರಡು ಮಾಧ್ಯಮಗಳನ್ನು ಸ್ವತಂತ್ರವಾಗಿ ಮತ್ತು ಸಂಯುಕ್ತವಾಗಿ ದುಡಿಸಿಕೊಂಡು, ಚಂಪೂಕಾವ್ಯ ಪ್ರಭೇದವನ್ನು ಕನ್ನಡದಲ್ಲಿ ಪರಿಚಯಿಸಿದರು. ಸಂಸ್ಕೃತವನ್ನು ಸಮರ್ಥವಾಗಿ ಜೀರ್ಣಿಸಿಕೊಂಡು ಈ ಭಾಷೆಯನ್ನು ತಮ್ಮ ಕೃತಿಗಳ ಮೂಲಕ ಅವರಿಲ್ಲಿ ಅಪ್ರಸ್ತುತಗೊಳಿಸಿದರು. ಶಿವಕೋಟ್ಯಾಚಾರ್ಯನು ಕನ್ನಡದಲ್ಲಿ ‘ವಡ್ಡಾ ರಾಧನೆ’ಯನ್ನು ಬರೆದು, ಸಂಸ್ಕೃತದ ಶಿವಾರ್ಯನ ‘ಮೂಲಾರಾಧನೆ’ಯನ್ನು, ಪಂಪನು ‘ಆದಿಪುರಾಣ’ವನ್ನು ಬರೆದು ‘ಪೂರ್ವಪುರಾಣ’ವನ್ನು, ಪೊನ್ನ ಮತ್ತು ರನ್ನರು ‘ಶಾಂತಿಪುರಾಣ’ ಮತ್ತು ‘ಅಜಿತಪುರಾಣ’ವನ್ನು ಬರೆದು ‘ಉತ್ತರಪು ರಾಣ’ ವನ್ನು ಹಿನ್ನಲೆಗೊತ್ತಿದರು. ಕನ್ನಡ ಭಾಷೆಯನ್ನು ಜೈನಧರ್ಮಕ್ಕೆ, ಜೈನಧರ್ಮವನ್ನು ಕನ್ನಡ ಭಾಷೆಗೆ ಪ್ರಸ್ತುತಗೊಳಿಸಿದ್ದಲ್ಲದೆ ಈ ಕಾಲದ ಕನ್ನಡ ಸಾಹಿತ್ಯವೆಂದರೆ ಜೈನಸಾಹಿತ್ಯವೇ ಎನ್ನುವಂತೆ ಮಾಡಿದರು. ಇವರೆಲ್ಲರೂ ಕನ್ನಡದ ನೆಲದವ ರಾ ಗಿದ್ದರು ಮಾತ್ರವಲ್ಲ, ಚಾವುಂಡರಾಯ ಮತ್ತು ರನ್ನ ಶ್ರವಣಬೆಳ್ಗೊಳದ ನಿವಾಸಿಗಳಾಗಿದ್ದರು.
ದೊಟ್ಟಬೆಟ್ಟದ ಮೇಲೆ ಗೊಮ್ಮಟನ ಮಹಾವಿಗ್ರಹವನ್ನು ನಿಲ್ಲಿಸಿ, ಚಾಗದ ಕಂಬವನ್ನು ಸ್ಥಾಪಿಸಿ, ಚಿಕ್ಕಬೆಟ್ಟದ ಮೇಲೆ ಬಸ್ತಿಯೊಂದನ್ನು ಕಟ್ಟಿಸಿದ ಚಾವುಂಡರಾಯನು ಈ ಮೂರು ಸ್ಥಳಗಳಲ್ಲಿ ಎಲ್ಲಿ ಕುಳಿತು ‘ತ್ರಿಶಷ್ಟಿಶಲಾಕಪುರುಷಚರಿತೆ’ಯನ್ನು ಬರೆದನು ಎಂಬುದನ್ನು ಊಹಿಸಿಯೇ ತಿಳಿದುಕೊಳ್ಳಬೇಕು.
ರನ್ನ ತನ್ನ ಹೆಸರನ್ನು ಚಂದ್ರಗಿರಿಯ ಬಂಡೆಗಲ್ಲಿನ ಮೇಲೆ ಬರೆದು ಈ ತೀರ್ಥಕ್ಷೇತ್ರದೊಡನೆ ಸ್ಪಷ್ಟವಾಗಿ ಗುರುತಿಸಿಕೊಂಡಿರುವನು. ಈ ಕವಿಗಳಲ್ಲಿ ಒಬ್ಬರು ಮತ್ತೊಬ್ಬರ ಪ್ರಭಾವಕ್ಕೊಳಗಾಗಿರುವರು. ಚಾವುಂಡರಾಯನ ಕೃತಿಯಲ್ಲಿ ಪಂಪನ ನೆರಳಿದ್ದರೆ, ರನ್ನನ ಕಾವ್ಯದಲ್ಲಿ ಚಾವುಂಡರಾಯನ ನೆರಳಿದೆ. ಅಲ್ಲದೆ ರನ್ನನ ಕಾವ್ಯದ ತುಣುಕುಗಳನ್ನು ಶ್ರವಣಬೆಳ್ಗೊಳದ ಶಾಸನ ಕವಿಗಳು ತಮ್ಮ ಬರವಣಿಗೆಯಲ್ಲಿ ಅಲ್ಲಲ್ಲಿ ಪೋಣಿಸಿಕೊಂಡಿರುವರು. ಇದು ಶ್ರವಣಬೆಳ್ಗೊಳದೊಡನಿದ್ದ ಇವರ ಸನಿಹದ ದೂರದ ನಂಟು.
ಮೊದಲ ಕಾಲದ (ನಾಲ್ಕರಿಂದ ಎಂಟನೆಯ ಶತಮಾನ) ಸಾಹಿತ್ಯದ ದಿಕ್ಕನ್ನು ಒಂಭತ್ತು – ಹತ್ತನೆಯ ಶತಮಾನದ ಕವಿಗಳು ಬದಲಿಸಿದಂತೆ, ಎರಡನೆಯ ಕಾಲದ ದಿಕ್ಕನ್ನು 12ನೆಯ ಶತಮಾನದ ಕವಿಗಳು ಬದಲಿಸಿದರು. ಚಂಪೂಕಾವ್ಯವು ಸದೃಢವಾಗಿದ್ದರೂ ತನ್ನ ಏಕಸ್ವಾಮ್ಯವನ್ನು ಕಳೆದುಕೊಂಡು, ವಚನಪ್ರಭೇದಕ್ಕೆ ಸ್ಥಳ ಹಂಚಿಕೊಟ್ಟು, ಅದು ತೆವಳಲಾರಂಭಿಸಿದ್ದು ಈ ಶತಮಾನದಲ್ಲಿ. ಶ್ರವಣಬೆಳ್ಗೊಳವು ಭೌತಿಕವಾಗಿ ಆರ್ಥಿಕವಾಗಿ, ಸಾಂಸ್ಥಿಕವಾಗಿ ಬೆಳಗತೊಡಗಿದರೂ, ಸಾಹಿತ್ಯ ಕ್ಷೇತ್ರದಲ್ಲಿ ಸ್ವಲ್ಪ ಸೊರಗತೊಡಗಿತೆನ್ನಬಹುದು. ಅಂದರೆ, ಇಲ್ಲಿ ಪಂಡಿತರ ಸಂಖ್ಯೆ ಕಡಿಮೆಯಾಯಿತೆಂದು ಅರ್ಥವಲ್ಲ, ಅವರ ಪ್ರಧಾನ ಹೇತು ಕಾವ್ಯಕೃಷಿಯಾಗಿರಲಿ ಲ್ಲವೆನ್ನಲು ಈ ಮಾತು. ಈ ಶತಮಾನವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದದ್ದು, ವಚನವೆಂಬ ಹೊಸ ಪ್ರಭೇದ ಹುಟ್ಟು ಹಾಕಿದ್ದು, ಚಂಪೂಕಾವ್ಯ ರಚನೆಯ ಮತ್ತು ಅದರೊಡನೆ ಜೈನ ಕವಿಗಳ ಏಕಸ್ವಾಮ್ಯವನ್ನು ಅಂತ್ಯಗೊಳಿಸಿದ್ದು ತುಂಬಾ ಪರಿಚಿತ ವಿಷಯ. ಆದರೂ, ಇದು ಹತ್ತನೆಯ ಶತಮಾನದಿಂದ ಬಂದ ಜೈನ ಕಾವ್ಯ ಪರಂಪರೆಯನ್ನು ಮುಕ್ತಾಯಗೊಳಿಸಲಿಲ್ಲ. ಈ ಕಾಲದಲ್ಲಿ ಪ್ರವಹಿಸಿ ಬಂದ ಧಾರ್ಮಿಕ ಮತ್ತು ಸಾಹಿತ್ಯಕ ಅಲೆಯನ್ನು ತಡೆಗಟ್ಟಲು ಜೈನಕವಿಗಳು ತಮ್ಮದೇ ಬಗೆಯಲ್ಲಿ ಶ್ರಮಿಸಿದರು. ‘ಮಲ್ಲಿನಾಥಪುರಾಣ’ದ ನಾಗಚಂದ್ರ, ‘ಧರ್ಮಾಮೃತ’ದ ನಯಸೇನ, ‘ಕಬ್ಬಿಗರಕಾವ’ದ ಆಂಡಯ್ಯ, ಇವರೆಲ್ಲರಿಗೂ ಮಿಗಿಲಾಗಿ, ‘ಸಮಯಪರೀಕ್ಷೆ’ಯ ಬ್ರಹ್ಮಶಿವನು ವಿಡಂಬನಾ ಅಸ್ತ್ರದಿಂದ ಪರಮತೀಯರ ಧರ್ಮಕಾವ್ಯದ ವಿರುದ್ಧ ಆಕ್ರಮಣಕಾರಿ ಹೋರಾಟದ ಮಾರ್ಗವನ್ನು ತುಳಿದರೆ, ಕರ್ಣಪಾರ್ಯ, ನೇಮಿಚಂದ್ರ, ಅಗ್ಗಳ, ಬಂಧುವರ್ಮ, ಆಚಣ್ಣ ಮೊದಲಾದವರು ಈ ವಿವಾದಗಳಿಗೆ ಗಮನ ಕೊಡದೆ ಪಂಪನ ಪರಂಪರೆಯನ್ನು ಮುಂದುವರೆಸಿ, ಜೈನವಾಙ್ಮಯವನ್ನು ವಿಸ್ತರಿಸಿದರು. ಇದು 14ನೆಯ ಶತಮಾನದ ಬಾಹುಬಲಿ ಪಂಡಿತನ ಕಾಲ ದ ವ ರೆಗೂ ಮುಂದುವರೆಯಿತು.
ಶ್ರವಣಬೆಳ್ಗೊಳದ ಕವಿಗಳು ಈ ಎಲ್ಲ ಆಗುಹೋಗುಗಳಿಗೆ ಹೆಚ್ಚು ಗಮನ ಕೊಡದೆ ತಮ್ಮ ಮುಖದ ಮುಂದಿದ್ದ ಗೊಮ್ಮಟನನ್ನೇ ವಸ್ತುವಾಗಿಸಿಕೊಂಡು ಕಾವ್ಯರಚನೆ ಯನ್ನು ಮುಂದುವರೆಸಿದರು. ಇದಕ್ಕೆ ಅಡಿಗಲ್ಲು ಹಾಕಿದ ಶ್ರವಣಬೆಳ್ಗೊಳದ ಕವಿ ‘ಗೊಮ್ಮಟ ಸ್ತುತಿ’ಯ ಬೊಪ್ಪಣ ಪಂಡಿತ.
ಬೊಪ್ಪಣನು ಗೊಮ್ಮಟಮೂರ್ತಿಯನ್ನು ಬೆರಗುಗಣ್ಣುಗಳಿಂದ ಮಾತ್ರ ಕಾಣಲಿಲ್ಲ. ಅವನ ರೂಪಾತಿಶಯವನ್ನು ತೃಪ್ತಿಯಾಗುವವರೆಗೂ ಕಣ್ತುಂಬಿಸಿಕೊಂಡನು. ಅವನು ಕೇವಲಿಯಾದ ರೋಚಕ ಕತೆಯನ್ನು ಅರಿತುಕೊಂಡನು.
ಚಾವುಂಡರಾಯನು ಇವನನ್ನು ಮೂರ್ತಿರೂಪದಲ್ಲಿ ತಂದದ್ದನ್ನು ಮನನ ಮಾಡಿಕೊಂಡನು. ಇವನ್ನೆಲ್ಲ ಭಟ್ಟಿ ಇಳಿಸಿ ಗೊಮ್ಮಟಸ್ತುತಿಯನ್ನು ರಚಿಸಿದನು. ಅಲ್ಲದೆ ಇವನ ಶಿಲ್ಪಸ್ವರೂಪವನ್ನು ನಿಷ್ಣಾತ ಕಲಾವಿದನ ಕಣ್ಣಿಂದ ಕಂಡು, ಅವನ ತುಂಗಾಕೃತಿ, ಸೌಂದರ್ಯ, ಅತಿಶಯತೆಯ ಸಂಗಮವನ್ನು ಗುರುತಿಸಿ ಸೌಂದರ್ಯ ಮೀಮಾಂಸೆಗಿಳಿದನು. ಇಪ್ಪತ್ತೇಳು ತಾರಾವಳಿಗಳಲ್ಲಿ ಬರೆದ ‘ಗೊಮ್ಮಟಸ್ತುತಿ’ಯು ಶ್ರವಣಬೆಳ್ಗೊಳದ ಕವಿಯೊಬ್ಬ ರಚಿಸಿದ ಕನ್ನಡದಲ್ಲಿ ರಚಿಸಿದ ಅದ್ಭುತವಾದ ಕಾವ್ಯ. ಇದರೊಡನೆ ಇನ್ನು ಹತ್ತು ಮುನ್ನುಡಿ-ಬೆನ್ನುಡಿಗಳನ್ನು ಸೇರಿಸಿ, ಸಿದ್ಧಪಡಿಸಿದ ಈ ಕಾವ್ಯದ ಸೊಗಸು ಎಷ್ಟು ಮನಮೋಹಕವಾಗಿತ್ತೆಂದರೆ, ಇದನ್ನು ಎಲೆಯ ಮೇಲೆ ಬರೆದರೆ ಸರಿಯಲ್ಲ, ಶಿಲೆಯ ಮೇಲೆಯೇ ಬರೆದು ಶಾಶ್ವತಗೊಳಿಸಬೇಕೆನಿಸಿತು. ಕಾರಣ, ಗೊಮ್ಮಟನ ದರ್ಶನಕ್ಕೆ ಬರುವವರು ಮಂಟಪದ ದಾರಿಯನ್ನು ಕ್ರಮಿಸುವಾಗ ಬೃಹತ್ ಶಿಲಾಫಲಕದ ಮೇಲೆ ಕಂಡರಿಸಿದ 72 ಸಾಲುಗಳ ಈ ಕಾವ್ಯವನ್ನು ಓದಿಯೋ, ನೋಡಿಯೋ, ಈಗ ಮುಂದೆ ಹೆಜ್ಜೆ ಹಾಕಬೇಕಾಗಿದೆ.
ಇತರ ಕವಿಗಳಂತೆ ಬೊಪ್ಪಣನು ಒಬ್ಬ ಶಾಸನಕವಿಯಾಗಿ ಕಾಣಿಸಿಕೊಂಡು ನಂತರ ಕಣ್ಮರೆಯಾಗಲಿಲ್ಲ. ಅವನ ಕಾವ್ಯದ ವಸ್ತುವಿನಂತೆ ಶಾಶ್ವತವಾಗಿ ನಿಂತು ಮುಂದಿನ ಕನ್ನಡಕವಿಗಳಾದ ಪಾರ್ಶ್ವನಾಥ, ಆಚಣ್ಣ, ಕೇಶೀರಾಜರ ಮನಗೆದ್ದು ಅವರಿಗೂ ಮಾದರಿಯಾದನು. ‘ಸೃಜನೋತ್ತಂಸ’ನೆಂಬ ಅವನ ಬಿರುದು ಕಾವ್ಯದ ಸುಮಾರ್ಗ ವನ್ನು ಕಂಡುಕೊಳ್ಳಲು ಕೇಶೀರಾಜನನ್ನು ಪ್ರೇರೇಪಿಸಿದ್ದು ಇದಕ್ಕೊಂದು ನಿದರ್ಶನ.
ಶ್ರವಣಬೆಳ್ಗೊಳದ ಹೊರಗೆ ನಾಗಚಂದ್ರನನ್ನು ಮೊದಲ್ಗೊಂಡು ಬ್ರಹ್ಮಶಿವನು ಎಬ್ಬಿ ಸಿದ ಧಾರ್ಮಿಕ ವಾದವಿವಾದಗಳು ಬೆಳ್ಗೊಳದ ಪಂಡಿತರನ್ನು ಪ್ರಭಾವಿಸಿ ಅವರನ್ನು ಕಾವ್ಯರಚನೆಯಿಂದ ವಿಮುಖಗೊಳಿಸಿ, ವಾದವಿವಾದದ ಮಲ್ಲಯುದ್ಧಕ್ಕೆ ಅಣಿಗೊಳಿ ಸಿ ದವೆನ್ನಬಹುದು. ಇವರು ಅತ್ಯಂತ ಗರ್ವದಿಂದ, ವಾದಿಭಸಿಂಹ ವಾದಿಕೋಲಾಹಲ, ವಾದಿಕಂಠೀರವ, ವಾದಿರಾಜ, ವಾದಿಚತುರ್ಮುಖ, ಎಂದು ಗುರುತಿಸಿಕೊಂಡು, ಪರಮತೀಯರನ್ನು ವಾಗ್ವಾದಕ್ಕೆ ಆಹ್ವಾನಿಸಿದರು.
ವಿದ್ಯಾಧನಂಜಯ ಹೇಮಸೇನ ಇದಕ್ಕೊಂದು ನಿದರ್ಶನ ಒದಗಿಸುವನು.
ಆತನು ರಾಜನ ಆಸ್ಥಾನಕ್ಕೆ ಬಂದು ಒಡ್ಡಿದ ಸವಾಲಿನ ನುಡಿ ಹೀಗಿತ್ತು: ‘‘ತರ್ಕ ಹಾಗೂ ವ್ಯಾಕರಣಗಳ ಸತತಾಭ್ಯಾಸದಿಂದ ಮತ್ತು ವಾಕ್‌ಚಾತುರ್ಯದಿಂದ ಯಾರಾದರೂ ರಾಜನ ಸಮ್ಮುಖದಲ್ಲಿ ಹಾಗೂ ಪಂಡಿತ ನಿರ್ಣಾಯಕರ ಎದಿರು ನನ್ನೊಂದಿಗೆ ಸ್ಪರ್ಧೆಗಿಳಿದರೆ ಅವರನ್ನು ಧೂಳೀಪಟ ಮಾಡುವೆ. ಅದನ್ನು ಶಬ್ದಗಳಲ್ಲಿ ವರ್ಣಿಸುವುದಸದಳ. ಎಲೈ ರಾಜನೇ, ಹೇಮಸೇನನ ಆತ್ಮವಿಶ್ವಾಸ ಅಂತಹದೆಂಬುದನ್ನು ಅರಿ. ಸೋತು ನೆಲಕಚ್ಚುವ ಭಯವನ್ನು ಹೀಗೆ ಹುಟ್ಟಿಸಿ, ತನ್ನನ್ನು ಎದುರಿಸಲೆತ್ನಿಸಿದ ತಾರ್ಕಿಕರನ್ನು ಅವನು ಕರುಣಾಜನಕ ಸ್ಥಿತಿಗೆ ತಂದನೆಂಬುದನ್ನು ತಿಳಿ’’.
ಜಯಸಿಂಹನಿಂದ ಪೂಜಿತನಾದ ವಾದಿರಾಜನನ್ನು ಎಲ್ಲ ಪ್ರಜೆಗಳು, ತಾರ್ಕಿಕರು, ಜಯಕಾರ ಹಾಕಿ ಸ್ವಾಗತಿಸಿ ಬಗೆಯನ್ನು ವರ್ಣಿಸಲಾಗಿದೆ: ‘‘ಸರಸ್ವತಿಯ ಜನ್ಮ ಸ್ಥಳವಾದ ಪ್ರಖ್ಯಾತ ಚಾಳುಕ್ಯ ಸಾಮ್ರಾಟನ ರಾಜಧಾನಿಯಲ್ಲಿ ವಿಜೇತನಾದ ವಾದಿ ರಾಜನ ಭೇರಿಯು ಪರಿಭ್ರಮಿಸುತ್ತಿದೆ. ದಂಡದಿಂದ ಬಾರಿಸದಿದ್ದರೂ ಅದು (ತನ್ನ ಯಜಮಾನನನ್ನು ಉದ್ದೇಶಿಸಿ) ಗರ್ಜಿಸಿ ಹೀಗೆ ಸಾರುತ್ತಿದೆ: ಜಹಿ ಅರ್ಥಾತ್ ಪ್ರತಿ ಸ್ಪರ್ಧಿ ಲೌಕಿಕರನ್ನು ಹೊಡಿ. ತರ್ಕದಲ್ಲಿ ಹೆಚ್ಚುತ್ತಿರುವ ಹೆಮ್ಮೆಯೊಂದಿಗೆ; ಜಹಿನೀ ಅರ್ಥಾತ್ ವಾಕ್ಚಾತುರ್ಯದ ಪರಮ ಅಭಿಮಾನದಿಂದ ಎದುರಾಳಿ ವಾಗ್ಮಿಯನ್ನು ತೊಲಗಿಸಿಬಿಡು; ಜಹಾನಿ ಅರ್ಥಾತ್ ಅವನ ಸಂವಾದದಿಂದ ಅಸಮಾಧಾ ನ ಗೊಂಡು ಎದುರಾಳಿ ವಾಗ್ಮಿಗಳನ್ನು ತೊಲಗಿಸಿಬಿಡು; ಜಹೀನಿ ಅರ್ಥಾತ್ ಸ್ಪಷ್ಟ, ನಿಷ್ಠ, ಮತ್ತು ಹಿತಕರ ಕಾವ್ಯದಲ್ಲಿ ಅಭಿಮಾನಪಟ್ಟು ಎದುರಾಳಿ ಕವಿಯನ್ನು ತೊಲಗಿಸಿಬಿಡು.
ರಾಜನ ಆಸ್ಥಾನದಲ್ಲಿ ಸಾರ್ವಭೌಮನಾದ ವಾದಿರಾಜನಿಗೆ ತಮ್ಮ ಅಹಂಕಾರವನ್ನು ಕಳೆದುಕೊಂಡು ತಲೆಬಗ್ಗಿಸದ ತಾರ್ಕಿಕರು ಇನ್ನಾರಿರುವರು? ಪ್ರಾಚೀನ ಮುನಿಯ (ಬ್ರಹ್ಮ) ತ್ರಾಹಿ ತ್ರಾಹಿ ಎಂಬ ಚೀತ್ಕಾರ ನಿಮ್ಮನ್ನು ರಕ್ಷಿಸಲಿ...’’
ಈ ವಾದೀಭಸಿಂಹರನ್ನು ಹೊರತುಪಡಿಸಿದರೆ ಕವಿತಾಪಿತಾಮಹರೆನಿಸಿಕೊಂಡ ಮತ್ತೊಂದು ವರ್ಗ ಈ ಕಾಲದಲ್ಲಿತ್ತು. ಚತುರಸತ್ಕವಿ ದೇವಕೀರ್ತಿಮುನಿ, ಸಾಹಿತ್ಯಪ್ರಮದಾಮುಖಾಬ್ಜಮುಖುರ ನಯಕೀರ್ತಿದೇವ, ಕವಿಕಾಂತ ಶಾಂತಿದೇವ, ಕವಿತಾಪಿತಾಮಹ ಗೋಪಣಂದಿಯರ, ಹೆಸರುಗಳು ಪ್ರಚಾರದಲ್ಲಿದ್ದರೂ ಸುಜನೋತ್ತಂಸನಂತೆ ಇವರಾರೂ ತಾವು ರಚಿಸಿದ ಕಾವ್ಯಗಳನ್ನು ಪರಿಚಯಿಸಿಲ್ಲ.
ಇನ್ನು ಕೆಲವರು ತಾವು ತ್ರೈವಿದ್ಯ (ವೈದಿಕ ತ್ರಿವೇದಿಗಳನ್ನು ನೆನಪಿಗೆ ತರುವ)ರೆಂದು ಕರೆದುಕೊಂಡಿದ್ದರೂ, ವ್ಯಾಕರಣ ತರ್ಕ ಮತ್ತು ದರ್ಶನಗಳಲ್ಲಿದ್ದ ತಮ್ಮ ಜ್ಞಾನಭಂಡಾರವನ್ನು ತೆರೆದು ತೋರಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.