ADVERTISEMENT

ಸಂತತಿ ನಾಶದ ಸಂಕಟದಲ್ಲಿ ಸಿಂಗಳೀಕ

ಡಾ.ರವಿ ಹೆಗಡೆ
Published 31 ಮೇ 2014, 19:30 IST
Last Updated 31 ಮೇ 2014, 19:30 IST

 ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಸಂಶೋಧನಾ ಅಭ್ಯರ್ಥಿ ಆಗಿರುವ ಡಾ. ರವಿ ಹೆಗಡೆ ಅವರು ಜೀವ ಭೌತಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ವಿದ್ಯಾರ್ಥಿಯೂ ಹೌದು. ಕಳೆದೊಂದು ದಶಕದಿಂದ ಪರಿಸರ ಸಂಬಂಧಿ ಚಟುವಟಿಕೆಗಳು–ಅಧ್ಯಯನಗಳಲ್ಲಿ ಅವರು ಸಕ್ರಿಯರು. ಅವರ ಇಲ್ಲಿನ ಬರಹ, ಅಳಿವಿನ ಅಂಚಿನಲ್ಲಿರುವ ಸಿಂಗಳೀಕಗಳ ಬಗ್ಗೆ ಎಲ್ಲರ ಗಮನಸೆಳೆಯುವಂತಿದೆ. ಮನುಷ್ಯನ ಹಸ್ತಕ್ಷೇಪದಿಂದಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿ ವಿಶಿಷ್ಟ ಜೀವಿಗಳ ಬದುಕಿನಲ್ಲಿ ಉಂಟಾದ ತಳಮಳವನ್ನು ಇದು ಕಟ್ಟಿಕೊಡುವಂತಿದೆ.

ನೂರಾರು ಬಗೆಯ ಸಸ್ತನಿಗಳು, ಸರೀಸೃಪಗಳು, ಉಭಯವಾಸಿಗಳು, ಮೀನುಗಳು, ಹಕ್ಕಿಗಳು, ಅಕಶೇರುಕಗಳು ಕಾಣಸಿಗುವ ಪಶ್ಚಿಮಘಟ್ಟ ಜೀವವಿಕಾಸದ ತೊಟ್ಟಿಲು. ಈ ನಿತ್ಯ ಹರಿದ್ವರ್ಣದ ಮಳೆಕಾಡನ್ನು ಮಾತ್ರವೇ ಅವಲಂಬಿಸಿ ಬದುಕುತ್ತಿರುವ ಹಲವು ಜೀವಿಗಳು ಪ್ರಸ್ತುತ ವಿನಾಶದ ಅಂಚಿಗೆ ಬಂದು ತಲುಪಿವೆ. ನೂರಾರು ಜೀವಿಗಳು, ಸಸ್ಯಗಳು ನಮ್ಮ ಗಮನಕ್ಕೆ ಬರುವ ಮೊದಲೇ ನಶಿಸುವ ಹಂತದಲ್ಲಿವೆ. ಈ ಭೂಮಿಯ ಮೇಲೆ ಇಂಥದೊಂದು ಜೀವಿ ಇತ್ತು ಎಂದು ಚಿತ್ರದಲ್ಲಿ ತೋರಿಸಲೂ ಆಗದಂತೆ, ಹಲಜೀವಿಗಳು ದಾಖಲಾತಿಗೆ ಮೊದಲೇ ನಾಶವಾಗುವ ಅಪಾಯ ಎದುರಿಸುತ್ತಿವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಪಶ್ಚಿಮಘಟ್ಟ ಪ್ರದೇಶದಿಂದ ನೂರಕ್ಕೂ ಹೆಚ್ಚು ಹೊಸ ಕಪ್ಪೆ ತಳಿಗಳ ಸಂಶೋಧನೆ ನಡೆಸಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ–ವಿಜ್ಞಾನಿ ಡಾ. ಸತ್ಯಭಾಮ ದಾಸ್‌ಬಿಜು ಅವರ ಅವಿಷ್ಕಾರಗಳು ಈ ಮಳೆಕಾಡು ಪ್ರದೇಶದ ಮಹತ್ವವನ್ನು ಸಾರಿ ಹೇಳುತ್ತವಂತಿವೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ಡಾ. ಕೆ.ವಿ. ಗುರುರಾಜ ಅವರು ಕತ್ತಲೆಕಾನು ಅರಣ್ಯದಲ್ಲಿ ಇತ್ತೀಚೆಗೆ ಪತ್ತೆಹಚ್ಚಿದ ಕುಂಬಾರ ಕಪ್ಪೆ ಅಂಥ ಇನ್ನೊಂದು ಉದಾಹರಣೆ.

ಅರಣ್ಯ ರಕ್ಷಣೆಯಲ್ಲಿನ ನಮ್ಮ ನಡವಳಿಕೆ, ತಾತ್ಸಾರ, ದೂರದೃಷ್ಟಿಯ ಕೊರತೆ, ಇತ್ಯಾದಿ ಕಾರಣಗಳು ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸಿವೆ. ಹೀಗೆ ವಿನಾಶದಂಚಿಗೆ ತಲುಪುತ್ತಿರುವ ಜೀವಿಗಳಲ್ಲಿ ಅತಿ ಪ್ರಮುಖವಾದದ್ದು ಸಿಂಹಬಾಲದ ಸಿಂಗಳೀಕ.
ಬಾಲದ ತುದಿ ಮತ್ತು ಮುಖ ಚಹರೆಯಲ್ಲಿ ಸಿಂಹವನ್ನು ಹೋಲುವುದರಿಂದ ‘ಸಿಂಹ ಬಾಲದ ಸಿಂಗಳೀಕ’ (Lion Tailed Macaque ಅಥವಾ Wanderoo; ವೈಜ್ಞಾನಿಕ ಹೆಸರು: Macaca silenus) ಎಂದು ಕರೆಸಿಕೊಳ್ಳುವ ವಾನರ ಈ ಭೂಮಿಯ ಮೇಲೆ ಕೇವಲ ನಮ್ಮ ಪಶ್ಚಿಮ ಘಟ್ಟದಲ್ಲಿ ಮಾತ್ರವೇ ಕಾಣಸಿಗುತ್ತದೆ. ಕರ್ನಾಟಕದ ಹೊನ್ನಾವರ–ಶಿರಸಿ ಅರಣ್ಯ (ಗೇರುಸೊಪ್ಪೆ), ತಮಿಳುನಾಡಿನ ಅಣ್ಣಾಮಲೈ ಬೆಟ್ಟ ಪ್ರದೇಶ ಮತ್ತು ಕೇರಳದ ಮೌನ ಕಣಿವೆಯ ದಟ್ಟಾರಣ್ಯದಲ್ಲಿ ಕಾಣಸಿಗುವ ಈ ಅಪೂರ್ವ ಜೀವಿಗಳ ಸಂಖ್ಯೆ ಸುಮಾರು 2000ದ ಆಸುಪಾಸಿನಲ್ಲಿದೆ. ಸಿಂಗಳೀಕದ ಹೆಚ್ಚಿನೆಲ್ಲ ಗಣತಿ 90ರ ದಶಕದ್ದು ಇಲ್ಲವೆ 2000 ಇಸವಿಯ ಆಸುಪಾಸಿನಲ್ಲಿ ನಡೆದಂತಹದ್ದು.

ಹಾಗಾಗಿ ಇವುಗಳ ಸಂಖ್ಯೆಯ ಕುರಿತ ತೀರ ಇತ್ತೀಚಿನ ನಿಖರ ಮಾಹಿತಿಯ ಕೊರತೆಯಿದೆ. 2008ರಲ್ಲಿ IUCN (International Union for Conservation of Nature) ಸಿಂಗಳೀಕವನ್ನು Endangered species ಎಂದು ಗುರುತಿಸಿದೆ. IUCN 1986ರಿಂದ ಸಿಂಗಳೀಕವನ್ನು ಅಳಿವಿನಂಚಿನ ಪ್ರಾಣಿ ಎಂದೇ ಗುರುತಿಸುತ್ತ ಬಂದಿದೆ. ಸಿಂಗಳೀಕಗಳ ಸಂಖ್ಯೆ 2500ಕ್ಕಿಂತ ಕಡಿಮೆ ಇರುವುದು, ಮುಂದಿನ 25 ವರ್ಷಗಳಲ್ಲಿ ಶೇಕಡಾ 20ರಷ್ಟು ಸಂತತಿ ನಾಶ ಹೊಂದುವ ಸಾಧ್ಯತೆ ಅನುಸರಿಸಿ ಅಳಿವಿನ ಈ ಲೆಕ್ಕಾಚಾರ ಮಾಡಲಾಗಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಉತ್ತರಕನ್ನಡ ಜಿಲ್ಲೆಯ ಗೇರುಸೊಪ್ಪೆ ಸಮೀಪದ ಶರಾವತಿ ಕೊಳ್ಳದ ಕತ್ತಲೆಕಾನು ಮತ್ತು ಮಲೆಮನೆ ಘಟ್ಟ ಪ್ರದೇಶ ಇವುಗಳ ಪ್ರಮುಖ ವಾಸಸ್ಥಾನ. ಭಾರತದ ಪಶ್ಚಿಮ ಘಟ್ಟಗಳ ಸಾಲಿನಲ್ಲಿನ ಉತ್ತರದ ತುತ್ತ ತುದಿಯ ವಾಸತಾಣ ಈ ಅಪೂರ್ವ ಜೀವಿಗಳದು! ಗೇರುಸೊಪ್ಪೆ ಅರಣ್ಯದಲ್ಲಿ ಕಾಣಸಿಗುವ ಗುಂಪುಗಳೇ ಶೇ 33ರಷ್ಟು ಸಿಂಗಳೀಕಗಳನ್ನು ಹೊಂದಿರುವುದನ್ನು ದಾಖಲಿಸಲಾಗಿದೆ. ಗುಂಪುಗಳಲ್ಲಿ ಕಾಣಸಿಗುವ ಇವುಗಳ ಸರಾಸರಿ ಸಂಖ್ಯೆ ಇಂತಿದೆ: ಕೇರಳದ ಮೌನಕಣಿವೆ (19.6), ತಮಿಳುನಾಡಿನ ಅಣ್ಣಾಮಲೈ ಬೆಟ್ಟ (16.3) ಮತ್ತು ನಮ್ಮ ಗೇರುಸೊಪ್ಪೆ ಅರಣ್ಯ ಪ್ರದೇಶ (24.7).

ಎತ್ತರದ ಬದುಕು!
ಮಳೆಕಾಡಿನ ದಟ್ಟಾರಣ್ಯದ ಅತಿ ಎತ್ತರದ ಪ್ರದೇಶದಲ್ಲಿ ಮಾತ್ರವೇ ಕಾಣಸಿಗುವ ಈ ಜೀವಿಗಳು ಗಗನಚುಂಬಿ ಮರಗಳನ್ನು ಆಶ್ರಯಿಸಿ ಬದುಕುತ್ತವೆ. ಶೇಕಡಾ 99 ಸಮಯವನ್ನು ಮರಗಳ ಮೇಲೆಯೇ ಕಳೆಯುತ್ತವೆ. ಅಪರೂಪಕ್ಕೆ ನೆಲದ ಮೇಲೆ ಬಂದರೂ ಎಂದೆಂದಿಗೂ ಮಂಜು ಕವಿದಂತಿರುವ ದಟ್ಟ ಮಳೆಕಾಡಿನ ಮರಗಳ ಮೇಲ್ಛಾವಣಿಯೇ ಅವುಗಳಿಗೆ ಅಚ್ಚುಮೆಚ್ಚು. ಇವು ರಾತ್ರಿ ನಿದ್ರಿಸುವುದೂ ಮರಗಳ ಮೇಲೆಯೇ. ಮರದಿಂದ ಮರಕ್ಕೆ ಹಾರುವಲ್ಲಿ ಅತಿ ನಿಷ್ಣಾತರಾದ ಸಿಂಗಳೀಕಗಳು ಈಜುವುದರಲ್ಲೂ ಹೆಸರುವಾಸಿ.

ಸುಮಾರು 17 ಬಗೆಯ ಶಬ್ದಗಳನ್ನು ಹೊರಡಿಸಬಲ್ಲ ಸಿಂಗಳೀಕಗಳು– ಸಂಜ್ಞೆ, ಮುಖ ಚಹರೆಯ ಬದಲಾವಣೆ, ತುಟಿಗಳ ವಿಶಿಷ್ಟ ಚಲನೆ, ಕೋರೆಹಲ್ಲು ತೋರ್ಪಡಿಕೆ, ದೊಡ್ಡದಾಗಿ ಶಬ್ದ ಹೊರಡಿಸುವಿಕೆ, ಕಿರುಚುವಿಕೆ ಮುಂತಾದವನ್ನು ವ್ಯವಸ್ಥಿತ ಸಂವಹನಕ್ಕಾಗಿ ಬಳಸಬಲ್ಲವು. ಉಳಿದ ಮಂಗಗಳಂತೆ ಚೇಷ್ಟೆ ಮಾಡುವ, ಪೀಡಿಸುವ ಪರಿಪಾಠ ಇವುಗಳದಲ್ಲ. ಘನತೆಯಿಂದ ಕೂಡಿದ ಶಿಸ್ತುಬದ್ಧ ಜೀವನ ಕ್ರಮ ಈ ಸಿಂಗಳೀಕಗಳದ್ದು.

ಹಣ್ಣುಗಳು, ನಿರ್ದಿಷ್ಟ ಜಾತಿಯ ಎಲೆಗಳು (ಉದಾ: ರಾಮ ಪತ್ರೆ), ಅಣಬೆಗಳು, ಕೀಟಗಳು, ಸಣ್ಣ ಗಾತ್ರದ ಪಕ್ಷಿಗಳು ಮತ್ತು ಸಸ್ತನಿಗಳು ಇವುಗಳ ಮುಖ್ಯ ಆಹಾರ. ಅಳಿಲ ಮರಿಗಳನ್ನು ತಿನ್ನುವ ಅಭ್ಯಾಸ ಈ ಜೀವಿಗಳಿಗಿದೆ. ಮರದ ಪೊಟರೆಯ ಒಳಗೆ ಅವಿತಿರುವ ಕೀಟಗಳನ್ನು ಹುಡುಕಿ ತಿನ್ನಬಲ್ಲವು. ಮಂಜು ಕವಿದ ವಾತಾವರಣದ ಅರಣ್ಯದ ಮರಗಳೆಲೆಗಳ ಮೇಲೆ ಶೇಖರಗೊಂಡ ನೀರ ಹನಿಗಳನ್ನು ನೆಕ್ಕಿ ಸೇವಿಸುವ ಪರಿಪಾಠವೂ ಇವುಗಳಿಗಿದೆ.

ಸಿಂಗಳೀಕಗಳ ಗುಂಪಿನ ಮುಂಚೂಣಿಯಲ್ಲಿ ಒಂದು ಗಂಡು ವಾನರನಿದ್ದರೆ, ಉಳಿದವೆಲ್ಲ ಹೆಣ್ಣು ಮತ್ತು ಮರಿ ಸಿಂಗಳೀಕಗಳು. ಗಂಡುಮರಿಗಳು ಪ್ರೌಢಾವಸ್ಥೆ ತಲುಪಿದಾಗ ಇತರ ಗುಂಪನ್ನು ಅರಸಿ ಹೋಗುತ್ತವೆ. ಗುಂಪಿನ ಪ್ರಮುಖ ಗಂಡು ಸಿಂಗಳೀಕ ಉಳಿದೆಲ್ಲ (ಹೆಣ್ಣು) ಸಿಂಗಳೀಕಗಳಿಗಿಂತ ಹೆಚ್ಚು ವಯಸ್ಸಿನದ್ದಾಗಿರುತ್ತದೆ. ಅವುಗಳಲ್ಲಿನ ವರ್ತನೆ–ವಿಕಾಸ ಪ್ರಕ್ರಿಯೆ ನಮ್ಮ ಸಂಸಾರ ವ್ಯವಸ್ಥೆಯನ್ನು ಕೆಲಮಟ್ಟಿಗೆ ಹೋಲುತ್ತದೆ. ಪ್ರಣಯ ಕ್ರಿಯೆಯಲ್ಲಿ ಇವು ನಮ್ಮಂತೆ ಶಿಸ್ತುಬದ್ಧ, ಸುಸಂಸ್ಕೃತ ಜೀವಿಗಳು, ಸಂತಾನೋತ್ಪತ್ತಿಗಾಗಿ ಮಿಲನ ಪ್ರಕ್ರಿಯೆಯಲ್ಲಿ ತೊಡಗುವ ಗಂಡು–ಹೆಣ್ಣು ಸಿಂಗಳೀಕಗಳು ಗುಂಪಿನಿಂದ ತಾತ್ಕಾಲಿಕವಾಗಿ ಬೇರ್ಪಟ್ಟು ಮರೆಯಲ್ಲಿ ತಮ್ಮ ಕ್ರಿಯೆ ನಡೆಸುತ್ತವೆ. ಗುಂಪಿನ ಇನ್ನಿತರ ಸಿಂಗಳೀಕಗಳ ಎದುರು ಮಿಲನ ಪ್ರಕ್ರಿಯೆ ನಡೆಸುವ ಪರಿಪಾಠ ಇವುಗಳಲ್ಲಿ ನಿಷಿದ್ಧ. ಹೆಣ್ಣು ಕೇವಲ 5 ವರ್ಷಗಳಲ್ಲಿ ಪ್ರೌಢಾವಸ್ಥೆ ತಲುಪಿದರೆ, ಗಂಡಿಗೆ 8 ವರ್ಷಗಳೇ ಬೇಕು. ವರ್ಷದ ಎಲ್ಲ ಋತುಮಾನದಲ್ಲೂ ಸಂತಾನೋತ್ಪತ್ತಿಯ ಸಾಮರ್ಥ್ಯ ಹೊಂದಿರುವ ಸಿಂಗಳೀಕಗಳ ಗರ್ಭಾವಸ್ಥೆಯ ಅವಧಿ 165 ದಿನಗಳು. ಹೆಣ್ಣು ಮಿಲನಕ್ಕೆ ಸಿದ್ಧಗೊಂಡು ನಿರ್ಧರಿಸಿತೆಂದಾದರೆ ತನ್ನ ಬಾಲದ ಮೂಲವನ್ನು ಊದಿಸಿಕೊಂಡು ಗಂಡಿಗೆ ಸಂಕೇತ ರವಾನಿಸುತ್ತದೆ. ಒಮ್ಮೆ ಒಂದೇ ಮರಿಗೆ ಜನ್ಮ ಕೊಡುವ ಸಿಂಗಳೀಕಗಳಲ್ಲಿ ಮರಿ ಪೋಷಣೆಯ ಜವಾಬ್ದಾರಿ ಹೆಣ್ಣಿನದ್ದು. ಹುಟ್ಟುವ ಮರಿಗಳು ಇತರ ವಾನರಗಳ ಮರಿಗಳಂತೆಯೇ ಕಾಣುತ್ತವಾದರೂ ಕಾಲಕ್ರಮೇಣ ಸಿಂಹ ಮುಖಚಹರೆ ಮತ್ತು ಬಾಲ ಹೊಂದುತ್ತವೆ. 

ADVERTISEMENT

ಆತಂಕದ ಕರಿನೆರಳು
ನಿತ್ಯಹರಿದ್ವರ್ಣದ ಮಳೆಕಾಡನ್ನು ವಿರೂಪಗೊಳಿಸಿದರೆ ಆ ಕಾಡುಗಳಲ್ಲಿನ ಎತ್ತರದ ಮರಗಳು ಬೇಗನೇ ನಶಿಸುತ್ತವೆಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಚಾರ. ಕರ್ನಾಟಕದ ಅರಣ್ಯದಲ್ಲಿ ಆಗಿರುವುದೂ ಇದೇ. ದಿನಗಳೆದಂತೆ ಕ್ಷೀಣಿಸುತ್ತಿರುವ ಅರಣ್ಯತಾಣಕ್ಕೆ ಸಿಂಗಳೀಕಗಳು ತಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಇಂಥ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಸಿಂಗಳೀಕಗಳು ರೋಗರುಜಿನ ಹರಡಬಲ್ಲ ಪರಾವಲಂಬಿ ಕ್ರಿಮಿಗಳಿಗೆ ತುತ್ತಾಗುವ ಸಾಧ್ಯತೆ ಅತಿಹೆಚ್ಚು ಎಂಬುದನ್ನು ಹೈದರಾಬಾದಿನ CCMB ಸಂಸ್ಥೆಯ ವಿಜ್ಞಾನಿಗಳು ವರದಿ ಮಾಡಿದ್ದಾರೆ. ಸೀಮಿತ ಅರಣ್ಯದಲ್ಲಿನ ಲಭ್ಯ ಆಹಾರದ ಕೊರತೆ ಹಾಗೂ ಬೆಳಕು, ಗಾಳಿ, ಉಷ್ಣತೆ, ತೇವಾಂಶ ಮುಂತಾದವುಗಳಲ್ಲಿನ ಅಸಮತೋಲನ ಈ ಜೀವಿಗಳಿಗೆ ಮಾರಕವಾಗಿ ಪರಿಣಮಿಸುತ್ತವೆ. ಗೇರುಸೊಪ್ಪೆ ಅರಣ್ಯ ಭಾಗದ, ಶರಾವತಿ ಕೊಳ್ಳದಂಚಿನಿಂದ ಹಾದು ಹೋಗುವ ಹೊನ್ನಾವರ–ಬೆಂಗಳೂರು ಹೆದ್ದಾರಿಯಲ್ಲಿನ ವಾಹನಗಳ ಶಬ್ದ, ಮಾನವರ ಸಂಚಾರ ಕೂಡ ಈ ಅಪೂರ್ವ ಜೀವಿಗಳಿಗೆ ಗಂಡಾಂತರವಾಗಿ ಪರಿಣಮಿಸಿದೆ.

ಸಿಂಗಳೀಕಗಳ ಸಂತತಿ ಮುಂದುವರೆಯಲು ಗುಂಪು ಗುಂಪುಗಳ ಮಧ್ಯೆ ಗಂಡು ಸಿಂಗಳೀಕಗಳ ನಿರಂತರ ವರ್ಗಾವಣೆ ಅತಿ ಮುಖ್ಯ. ಆದರೆ ಈ ಸಿಂಗಳೀಕಗಳು ತುಣುಕು ತುಣುಕುಗೊಳಿಸಿದ ಅರಣ್ಯವನ್ನು ಮೀರಿ ಬೇರೆಡೆ ಹೋಗಲಾರವು. ಹುಲ್ಲುಗಾವಲು, ತೋಟ, ವಿಸ್ತಾರವಾದ ತೆರೆದ ಪ್ರದೇಶ, ಎತ್ತರದ ಮರಗಳಿಲ್ಲದ ಅರಣ್ಯ ಪ್ರದೇಶಗಳನ್ನು ದಾಟಲು ಇವು ಹೆದರುತ್ತವೆ. ಇತರ ಜೀವಿಗಳಿಂದ, ಮಾನವರಿಂದ ಒದಗಬಹುದಾದ ದಾಳಿಯ ಸಾಧ್ಯತೆ, ಎತ್ತರದ ಮರಗಳಿಲ್ಲದಾಗಿನ ರಕ್ಷಣೆಯ ಕೊರತೆಯನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲ ಸಾಮರ್ಥ್ಯವುಳ್ಳ ಈ ವಾನರುಗಳು ತಮ್ಮನ್ನು ತೀರಾ ಸೀಮಿತ ಅರಣ್ಯಕ್ಕೆ ಹೊಂದಿಸಿಕೊಂಡು ಬದುಕು ಸಾಗಿಸುತ್ತಿವೆ. ಇದು ಈ ಜೀವಿಗಳ ಸಂತತಿಯನ್ನು ವಿನಾಶದಂಚಿಗೆ ತಳ್ಳುತ್ತಿದೆ. ಕಾಲಕಾಲಕ್ಕೆ ಗುಂಪಿನ ಗಂಡುಗಳ ಪುನರ್‌ವಿಂಗಡಣೆ ಆಗದಿದ್ದಲ್ಲಿ, ಸೀಮಿತ ಗುಂಪಿನಲ್ಲಿಯೇ ಸಂತಾನೋತ್ಪತ್ತಿಯ ಅನಿವಾರ್ಯತೆಗೆ ಇವುಗಳು ಸಿಲುಕುತ್ತವೆ. ಹೀಗೆ ಸೀಮಿತ ಅರಣ್ಯದಲ್ಲಿದ್ದು ಒತ್ತಡಕ್ಕೆ ಒಳಗಾಗಿರುವ ಸಿಂಗಳೀಕಗಳಲ್ಲಿ ಸಂತಾನೋತ್ಪತ್ತಿಯ ಖಿನ್ನತೆ ಕಂಡುಬಂದಿದೆ. ಸಂತಾನೋತ್ಪತ್ತಿಯಲ್ಲಿ ಇಳಿಕೆ, ಹುಟ್ಟುವ ಮರಿಗಳ ತೂಕದಲ್ಲಿ ಇಳಿಕೆ, ಜೀವಿತಾವಧಿಯಲ್ಲಿನ ಕ್ಷೀಣಿಸುವಿಕೆ ಸಾಮಾನ್ಯವಾಗುತ್ತಿದೆ.

ಸಿಂಗಳೀಕಗಳ ರಕ್ಷಣೆಗೆ ಕೇಂದ್ರ, ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನಿಸುತ್ತಿವೆ. ಕೇರಳದ ಮೌನಕಣಿವೆಯಲ್ಲಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾಪ ಬಂದಾಗ ಅರಣ್ಯ ಮುಳುಗಡೆಯಿಂದಾಗಿ ಅಲ್ಲಿನ ಸಿಂಗಳೀಕಗಳ ಸಂತತಿಗೆ ಧಕ್ಕೆ ಬರುತ್ತದೆ ಎಂಬುದು ಮನವರಿಕೆಯಾದ ತಕ್ಷಣವೇ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಅಣೆಕಟ್ಟು ನಿರ್ಮಾಣಕ್ಕೆ ಶಾಶ್ವತ ತಡೆಯಾಜ್ಞೆ ನೀಡಿದ್ದರು (1981ರಲ್ಲಿ). ಸಿಂಗಳೀಕಗಳ ರಕ್ಷಣೆಗೆ ಪ್ರಾಮಾಣಿಕ ಆಸಕ್ತಿ ತೋರಿದ್ದ ಈ ಘಟನೆ ಜಾಗತಿಕ ಪ್ರಶಂಸೆಗೆ ಕಾರಣವಾಗಿತ್ತು. ಆದರೆ, ಸಿಂಗಳೀಕಗಳ ಅಪೂರ್ವ ತಾಣವಾದ ಶರಾವತಿ ಕೊಳ್ಳದ ಸಹಸ್ರಾರು ಹೆಕ್ಟೇರ್‌ ನಿತ್ಯಹರಿದ್ವರ್ಣ ಮಳೆಕಾಡನ್ನು ಮುಳುಗಡೆಗೊಳಿಸಿದ ಶರಾವತಿ ಟೇಲರೇಸ್‌ ಅಣೆಕಟ್ಟು ಯೋಜನೆ ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೇ ಅನುಷ್ಠಾನಗೊಂಡಿತು. ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರಜ್ಞ ಡಾ. ಸಫೀಯುಲ್ಲಾ ಅವರು ಶರಾವತಿ ಕೊಳ್ಳದ ಅಪೂರ್ವ ಮಳೆಕಾಡಿನ ರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿ ನೀಡಿದ್ದ ತಜ್ಞ ವರದಿಗೆ ನಿರೀಕ್ಷಿಸಿದಷ್ಟು ಮಾನ್ಯತೆಯೇ ದೊರೆಯಲಿಲ್ಲ. ವಿದ್ಯುತ್‌ ಅಗತ್ಯದ ಎದುರು ನಮಗೆ ಈ ಭೂಮಂಡಲದ ಅತ್ಯಪೂರ್ವ ಮಳೆಕಾಡಿನ ರಕ್ಷಣೆ ಗೌಣವಾಯಿತು. ಸಿಂಗಳೀಕಗಳ ರೋದನ ಅಳಿದುಳಿದ ಅರಣ್ಯದಲ್ಲೇ ಕೇಳಿಸದಷ್ಟು ಕ್ಷೀಣಿಸುತ್ತಿದೆ.

ಮಾನವನ ಸಂಪರ್ಕವನ್ನು ಬಯಸದ ಸಿಂಗಳೀಕಗಳ ರಕ್ಷಣೆಗೆ ನಾವು ಕೈಗೊಳ್ಳುತ್ತಿರುವ ಕ್ರಮ ತೀರಾ ಕಡಿಮೆ. ಅರಣ್ಯ ಇಲಾಖೆ ಸಿಂಗಳೀಕಗಳ ಚಿತ್ರ, ವಿವರವಿರುವ ಬೋರ್ಡುಗಳನ್ನು ಗೇರುಸೊಪ್ಪೆ ಅರಣ್ಯದ ರಸ್ತೆಯುದ್ದಕ್ಕೂ ಹಾಕಿದೆಯಾದರೂ, ಅಂಥ ಬೋರ್ಡುಗಳು ನೀಡುವ ವಿವರ ಅನುಸರಿಸಿ ವಾಹನಗಳನ್ನು ನಿಧಾನವಾಗಿ ಚಲಿಸುವ ಉದಾಹರಣೆ ವಿರಳ. ಇನ್ನು ಶರಾವತಿ ಕೊಳ್ಳದ ಆಸುಪಾಸಿನ ಅರಣ್ಯ ಪ್ರದೇಶದಲ್ಲಿ ನಡೆದಿರುವ, ಮುಂದಣ ದಿನಗಳಲ್ಲಿ ಆಗಬಹುದಾದ ಅರಣ್ಯ ಒತ್ತುವರಿ ಗಾಬರಿ ಹುಟ್ಟಿಸುವಂತಿದೆ.

ಕಳೆದ ವರ್ಷ ಸೆಪ್ಟೆಂಬರ್‌–ಅಕ್ಟೋಬರ್‌ ಸುಮಾರಿಗೆ ಶರಾವತಿ ಕೊಳ್ಳದ ರಕ್ಷಿತಾರಣ್ಯ ಪ್ರದೇಶದ ವ್ಯೂ ಪಾಯಿಂಟ್‌ನಲ್ಲೊಂದು ಅನಧಿಕೃತ ಗೂಡಂಗಡಿ ತಲೆ ಎತ್ತಿತ್ತು. ಶರಾವತಿ ಕೊಳ್ಳದ ಅಳಿದುಳಿದ, ಮುಳುಗಡೆಗೊಂಡ ದೃಶ್ಯ ಸವಿಯಲು ವೀಕ್ಷಣಾ ಗೋಪುರವೊಂದು ಇದ್ದು ಅಲ್ಲಿಗೆ ಬರುವ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪುಗೊಂಡ ಅನಧಿಕೃತ ಗೂಡಂಗಡಿಯದು. ಪ್ರವಾಸಿಗರು ಖರೀದಿಸಿ ನೀಡುತ್ತಿದ್ದ ಹಣ್ಣು–ಹಂಪಲುಗಳನ್ನರಸಿ ಬಂದ ಮಂಗಗಳು, ಬೀದಿ ನಾಯಿಗಳು ಅಲ್ಲೇ ಬೀಡುಬಿಟ್ಟವು. ಮಂಗಗಳು ಸಿಂಗಳೀಕಗಳ ಮೇಲೆ ದಾಳಿ ನಡೆಸುತ್ತವೆ ಮತ್ತು ಬೀದಿನಾಯಿಗಳಿಂದಾಗಿ ನಿತ್ಯ ಹರಿದ್ವರ್ಣ ದಟ್ಟ ಮಳೆಕಾಡಿನ ವನ್ಯಜೀವಿಗಳಿಗೆ ರೇಬಿಸ್‌ ಹರಡುವ ಎಲ್ಲ ಸಾಧ್ಯತೆ ಇದೆ ಎಂಬುದನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಲಾಯಿತು. (ಈ ಲೇಖಕ ಜಿಲ್ಲಾಡಳಿತಕ್ಕೆ ಆ ಕುರಿತು ದೂರನ್ನು ಸಲ್ಲಿಸಿದ್ದ). ಆಗ ಎಚ್ಚೆತ್ತ ಅರಣ್ಯ ಇಲಾಖೆ ಜಿಲ್ಲಾಡಳಿತದ ನಿರ್ದೇಶನದನ್ವಯ ಅನಧಿಕೃತ ಗೂಡಂಗಡಿಯನ್ನು ತೆರವುಗೊಳಿಸಲಾಯಿತಾದರೂ ಕೆಲವೇ ವಾರಗಳಲ್ಲಿ ಪುನಃ ಗೂಡಂಗಡಿ ಎಲೆ ಎತ್ತಿತು. ಆಗ ಇದೇ ಲೇಖಕ ಕರ್ನಾಟಕ ರಾಜ್ಯ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯವರ ಗಮನಕ್ಕೆ ಈ ವಿಚಾರವನ್ನು ತರಬೇಕಾಗಿ ಬಂತು, ದೂರನ್ನು ದಾಖಲಿಸಬೇಕಾಯಿತು. ಆಗ ಅವರ ನಿರ್ದೇಶನದನ್ವಯ ಸ್ಥಳೀಯ ಅರಣ್ಯಾಧಿಕಾರಿಗಳು ಗೂಡಂಗಡಿಯನ್ನು ಪುನಃ ತೆರವುಗೊಳಿಸಿದರು.

ಮದ್ರಾಸಿನಲ್ಲಿ ಸಸ್ಯಶಾಸ್ತ್ರಜ್ಞರಾಗಿದ್ದ ಕನ್ನಡಿಗ ಡಾ. ಬಿ.ಜಿ.ಎಲ್‌. ಸ್ವಾಮಿಯವರು ತಮ್ಮ ಶಿಷ್ಯಂದಿರನ್ನು ಪ್ರತಿವರ್ಷ ಕರ್ನಾಟಕದ ಅಪೂರ್ವ ಮಳೆ ಕಾಡುಗಳ ಕ್ಷೇತ್ರ ಅಧ್ಯಯನಕ್ಕೆ ಕರೆತರುತ್ತಿದ್ದರು! ಈಗ ಪದವಿ ಹಂತದಲ್ಲಿ ಜೀವವಿಜ್ಞಾನ ಬೋಧಿಸುವ ಸಸ್ಯಶಾಸ್ತ್ರದ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳನ್ನು ಕ್ಷೇತ್ರ ಅಧ್ಯಯನಕ್ಕೆಂದು ಊಟಿಯ ಬೊಟಾನಿಕಲ್‌ ಗಾರ್ಡ್‌ನ್‌ಗೆ ಕರೆದೊಯ್ಯುತ್ತಾರೆ. ಹೀಗೆ, ನಮ್ಮ ಶಿಕ್ಷಣ ವ್ಯವಸ್ಥೆಯೂ ನಮ್ಮ ನಾಡಿನ ಅಪೂರ್ವ ನಿಸರ್ಗ ಸಂಪತ್ತನ್ನು ಅರಿಯುವಲ್ಲಿ, ವಿದ್ಯಾರ್ಥಿಗಳ ಆಸಕ್ತಿ ಕೆರಳಿಸುವಲ್ಲಿ ವಿಫಲವಾಗಿದೆ.
ಪಶ್ಚಿಮ ಘಟ್ಟದ ಶರಾವತಿ ಕೊಳ್ಳದ ನಿತ್ಯಹರಿದ್ವರ್ಣ ಮಳೆಕಾಡು ಕ್ಷೀಣಿಸುತ್ತ ಹೋದಂತೆ, ಅಪೂರ್ವ ಸಿಂಗಳೀಕಗಳ ವಾಸತಾಣ ನಶಿಸುತ್ತಲೇ ಹೋಗುತ್ತದೆ. ಮಿತಿಮೀರಿದ ಮಾನವನ ದುರಾಸೆಗೆ ಬಲಿಯಾಗುವ, ಸಂತತಿ ವಿನಾಶದ ಸಂಕಟದಲ್ಲಿರುವ ಸಿಂಹಬಾಲದ ಸಾತ್ವಿಕ ಸಿಂಗಳೀಕಗಳಿಗೆ, ರಕ್ಷಣೆಗೆ, ಸಿಂಹ ಘರ್ಜಿಸಿದಂಥ ಧ್ವನಿ ನೀಡುವವರು ಯಾರು? ರಕ್ಷಿಸುವವರು ಯಾರು? ದೇಶದ ಅಭಿವೃದ್ಧಿಯ ಬಗ್ಗೆ ಅತ್ಯುತ್ಸಾಹದ ಮಾತುಗಳು ಕೇಳಿಬರುತ್ತಿರುವ ಇಂದಿನ ಸಂದರ್ಭದಲ್ಲಿ ಸಿಂಗಳೀಕಗಳ ಅಳಲನ್ನೂ ಕೇಳಿಸಿಕೊಳ್ಳಬೇಕಾಗಿದೆ. ಅಲ್ಪಸಂಖ್ಯಾತರ ಅಭ್ಯುದಯ ಸಾಧ್ಯವಾಗದ ಯಾವ ಅಭಿವೃದ್ಧಿಯೂ ಪೂರ್ಣವಲ್ಲ ಎನ್ನುವ ತಿಳಿವಳಿಕೆಯಲ್ಲಿ ನಾವು ಸಿಂಹ ಬಾಲದ ಸಿಂಗಳೀಕಗಳ ಬಗ್ಗೆ ಗಮನಹರಿಸಬೇಕಿದೆ.

ಜಾಣ ಸಿಂಗಳೀಕಗಳು
ಸಿಂಗಳೀಕಗಳಿಗೆ ದಿನದ ಆರಂಭವಾಗುವುದೇ ಆಹಾರ ಸೇವನೆಯಿಂದ. ದಿನವಿಡೀ ಆಹಾರ ಅರಸುತ್ತ, ಎತ್ತರದ ಮರಗಳ ಮೇಲೆಲ್ಲ ಸಿತ್ತಾಡುವ ಇವುಗಳು ದಿನವೊಂದಕ್ಕೆ ಸುಮಾರು 20 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಆದರೆ ಅಷ್ಟೊಂದು ವಿಶಾಲ ಅಖಂಡ ಅರಣ್ಯ ಇವುಗಳಿಗೆ ಪ್ರಸ್ತುತ ಲಭಿಸುವುದೇ ಕಷ್ಟ. ಗಡಿಬಿಡಿಯಲ್ಲಿ ಆಹಾರ ಸೇವಿಸುವ ಸಂದರ್ಭ ಎದುರಾದಾಗಲೆಲ್ಲ ತಮ್ಮ ಬಾಯಿಯ ಪೊಟರೆಯಲ್ಲಿ ಆಹಾರವನ್ನು ತಾತ್ಕಾಲಿಕವಾಗಿ ಶೇಖರಿಸಿಟ್ಟು, ವಿರಾಮದಲ್ಲಿ ಮೆಲ್ಲುವ ವಿಶಿಷ್ಟ ಜೀವಿಗಳಿವು. ಇವುಗಳ ಬಾಯಿಯ ಪೊಟರೆ/ಚೀಲ, ಜಠರದಷ್ಟೇ ಆಹಾರವನ್ನು ಶೇಖರಿಸಬಲ್ಲ ಸಾಮರ್ಥ್ಯ ಹೊಂದಿದೆ. ಸಿಂಗಳೀಕಗಳು ಆಹಾರ ಸೇವಿಸಲು ತಾವೇ ಸಾಧನಗಳನ್ನು ವಿನ್ಯಾಸಗೊಳಿಸಿ ಬಳಸುವ ಅತ್ಯಂತ ಅಚ್ಚರಿ ಮೂಡಿಸುವಂತಿದೆ. ದೇಹದಲ್ಲಿ ಮುಳ್ಳಿರುವ ಕೀಟಗಳನ್ನು ಸೇವಿಸಬೇಕಾಗಿ ಬಂದಾಗ ಎಲೆಗಳನ್ನು ನಿರ್ದಿಷ್ಟ ರೀತಿಯಲ್ಲಿ ಮಡಚಿ ಸಾಧನದಂತೆ ಬಳಸುತ್ತವೆ. ಹಲಸಿನ ಹಣ್ಣನ್ನು ಕೀಳಬೇಕಾದಾಗ, ಇಡಿಯ ಹಣ್ಣನ್ನೇ ತಿರುಗಿಸುತ್ತ ಮರದಿಂದ ಬೇರ್ಪಡಿಸುತ್ತವೆ.

ಲೇಖಕರ ಇ–ಮೇಲ್‌: biologisthegde@gmail.com
(ಪಶ್ಚಿಮ ಘಟ್ಟದ ಚಿತ್ರ ಲೇಖಕರದು. ಸಿಂಗಳೀಕ ಚಿತ್ರಗಳು: ಕಲ್ಯಾಣ್ ವರ್ಮಾ, ವಿಕಿಕಾಮನ್ಸ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.