ADVERTISEMENT

ಸಂಪಿಗೆ ಮರದಾ ಹಸುರೆಲೆ ನಡುವೆ

ಪಿ.ಬಿ.ಪ್ರಸನ್ನ
Published 5 ಮಾರ್ಚ್ 2016, 19:39 IST
Last Updated 5 ಮಾರ್ಚ್ 2016, 19:39 IST
ಸಂಪಿಗೆ ಮರದಾ ಹಸುರೆಲೆ ನಡುವೆ
ಸಂಪಿಗೆ ಮರದಾ ಹಸುರೆಲೆ ನಡುವೆ   

‘ಏಯ್ ಚುಮ್ಮೀ... ಸಂಪಿಗೆ ಹೂ ಮುಡ್ಕೊಂಡು ಕಾಲೇಜಿಗೆ ಹೋಗು ಮಗಾ’. ‘ಅಜ್ಜೀ... ಬೆಳಗ್ಗಿಂದ ಯೆಂತಕ್ಕೆ ಪಿರಿಪಿರಿ ಮಾಡ್ತೀರಿ. ಸಂಪಿಗೆ ಮರ ಕಡ್ದು ಹಾಕಿ ಒಂದು ವರ್ಷ ಮೇಲೆ ಆಯ್ತು. ನಿಮಿಗೆಂತಕ್ಕೆ ಗ್ರಾಂತು?  ಸಂಪಗೆಯೂ ಇಲ್ಲ ಮರವೂ ಇಲ್ಲ’. ‘ಹೌದಲ್ವಾ? ನಂಗೇ ಗ್ರಾಂತು ಹಿಡ್ದಿದೆ. ಎಲ್ಲ ಈ ಮುಂಡೆಯಿಂದ್ಲೇ ಆದದ್ದು. ಮಗನನ್ನು ಪುಸಲಾಸಿ ಮದುಮಗಳ ಹಾಗೆ ಬೆಳ್ದಿದ್ದ ಸಂಪಿಗೆ ಮರವನ್ನು ಕಡ್ದೇ ಹಾಕಿದ್ಲು. ನನ್ನ ಮಗನನ್ನು ನುಂಗಿ ನೀರು ಕುಡಿದ್ಲು ಹಲ್ಕಟ್...’

‘ನಾನು ಹಲ್ಕಟ್‌... ಅಲ್ವಾ? ನೀವೆಂಥದು? ನನ್ನ ಗಂಡ ಹಾಳಾಗ್ಲಿಕ್ಕೆ ನೀವೇ ಕಾರಣ. ಅವ್ರ ಕುಡಿತ, ಇಸ್ಪೀಟು ಎಲ್ಲ ಬಿಡಿಸ್ಲಿಕ್ಕೆ ನಿಮ್ಮ ಕೈಯಲ್ಲಿ ಆಗ್ತಿತ್ತು. ಆದ್ರೆ ಕುಲಪುತ್ರ ಒರಿ ಮಗೆ ಬಸವ ತಿನು ಮಗ ತೌಡು (ಒಬ್ಬ ಮಗ ಬಸವ ತಿನ್ನು ತೌಡನ್ನು) ಅಂತ ಹೇಳುವ ಹಾಗೆ ಯಾವ ಜವಾಬ್ದಾರಿಯೂ ಇಲ್ಲದೆ ಕೈಗೆ ಎರ್ಡು ಮಕ್ಳನ್ನು ಕೊಟ್ರು ಹೋದ್ರು.

ಮಾವ ಸಾರಿ ಸಾರಿ ಹೇಳ್ತಿದ್ರು ನಿಮ್ಮತ್ರ. ಮಗನಿಗೆ ಬುದ್ಧಿ ಹೇಳು ಅಂತ. ನೀವು ಯೆಂತ ಹೇಳಿದ್ರಿ ಮಣ್ಣಾಂಗಟ್ಟಿ?’– ಸೊಸೆ ನಾಗವೇಣಿ ಭೂತದ ಹಾಗೆ ಆವೇಶದಿಂದ ಬೊಬ್ಬೆ ಹೊಡೀತಾ ಮನೆಯ ಹೊರ ಜಗಲಿಗೆ ಬಂದ್ಲು. ‘ಅಮ್ಮಾ, ಅಜ್ಜಿ ಪ್ಲೀಸ್ ಬಾಯಿ ಮುಚ್ಚಿ. ಬೆಳಿಗ್ಗೆ ಬೆಳಿಗ್ಗೆ ನಿಮ್ಮ ಜಗಳ ಸುರು ಮಾಡ್ಬೇಡಿ. ಊರಿನವ್ರು ಎಲ್ರೂ ನಮ್ಮನ್ನು ಮರ್ಲರ ಹಾಗೆ ನೋಡ್ತಾರೆ’ ಮೊಮ್ಮಗಳು ಸುಷ್ಮಾ ಬಾಯಿ ಮುಚ್ಚಿಸಿದ್ಲು.

‘ಹೌದೇ.... ಮನೆಯಲ್ಲಿರುವ ನಾವು ನಮ್ಮ ಒಡಲಿನ ಸಂಕಟ ಹೇಳಿಕೊಂಡ್ರೆ ನಿಮಿಗೆಲ್ಲ ನಾವು ಮರ್ಲರ ಹಾಗೆ ಕಾಣ್ತೇವೆ. ನಿನ್ನ ಅಜ್ಜ ಹೋದ್ರು. ಬದುಕಿರುವಾಗ ಒಬ್ರಿಗೆ ಒಂದು ಕೆಟ್ಟದು ಮಾಡಿದವ್ರಲ್ಲ. ಆದ್ರೆ ನಿನ್ನ ಅಪ್ಪನನ್ನು ಸರೀ ಬೆಳೆಸ್ಲಿಲ್ಲ. ಮದುವೆ ಮಾಡಿದ್ಮೇಲೆ ಆದ್ರೂ ಸರಿಯಾಗ್ತಾನಾ ನೋಡುವ ಅಂತ ನನ್ನನ್ನು ಕಟ್ಟಿದ್ದಂತೆ. ನಾನು ಯಾವ ಸುಖ ಪಟ್ಟೆ? ನಿನ್ನನ್ನು ನಿನ್ನ ಅಣ್ಣನನ್ನು ಸಾಕುವ ಜವಾಬ್ದಾರಿ ನಂಗೆ ಕೊಟ್ಟು ಕಣ್ಣು ಮುಚ್ಚಿದ್ರು.

ಆದ್ರೆ ಈ ಪೀಡೆ ಇನ್ನೂ ಕಣ್ಣು ಮುಚ್ಲಿಲ್ಲ. ದಿನಾ ಒಂದು ಸರ್ತಿ ಸಂಪಿಗೆಯ ಮರದ ಸುದ್ದಿ ಹೇಳಿ ನನ್ನ ಪಿತ್ಥ ಕೆದರಿಸ್ತದೆ’ ಅಂತ ನಾಗವೇಣಿ ಕೂಗ್ತಾ ಹೇಳಿದ್ಲು. ಗಂಡನ ನೆನಪಾಗಿ ಹತಾಶೆಯಿಂದ ಕೂಗುವ ತಾಯಿ ಒಂದು ಕಡೆ, ಮಗನ ನೆನಪಾಗಿ ಸೆರಗಿಗೆ ಬಾಯಿ ಅಡ್ಡ ಇಟ್ಟಿರುವ ಅಜ್ಜಿ ಮತ್ತೊಂದು ಕಡೆ. ದಿನಾ ಇದೇ ನೋಡಿ ಬೇಜಾರಾಗಿದ್ದ ಸುಷ್ಮಾ ಒಂದು ರೀತಿ ಹತಾಶೆಯಿಂದ ‘ನಾನು ಕಾಲೇಜಿಗೆ ಹೋಗಿ ಬರ್ತೇನೆ’ ಅಂತ ಹೇಳಿ ಹೊರಟ್ಳು.

ಇಷ್ಟೂ ಕತೆ ನಡ್ದದ್ದು ಉಚ್ಚಿಲದ ಕಿಟ್ಟಣ್ಣ ಭಟ್ರ ಮನೆಯಲ್ಲಿ. ಕಿಟ್ಟಣ್ಣ ಭಟ್ರು ಉಚ್ಚಿಲದ ನಾಗಲಿಂಗೇಶ್ವರ ದೇವಸ್ಥಾನದ ಮೈನ್ ಭಟ್ರು.  ತುಂಬ ನೇಮನಿಷ್ಠೆಯಿಂದ ಪೂಜೆ ಮಾಡಿಕೊಂಡಿದ್ರು. ಯಾರೋ ಅವ್ರಿಗೆ, ‘ಭಟ್ರೇ.... ಶಿವನಿಗೆ ಸಂಪಿಗೆ ಹೂ ತುಂಬ ಪ್ರೀತಿಯಂತೆ.  ನೀವ್ಯಾಕೆ ಒಂದು ಸಂಪಿಗೆ ಗಿಡ ತಂದು ನಿಮ್ಮ ಮನೆಯಲ್ಲಿ ನೆಡ್ಬಾರ್ದು? ದೇವ್ರ ಪೂಜೆಗೂ ಆಯ್ತು, ಮನೆಗೊಂದು ಚೆಂದವೂ ಆಯ್ತು’ ಅಂತ ಹೇಳಿದ್ರು.

ಕಿಟ್ಟಣ್ಣ ಭಟ್ರು ಜಲಜಾಕ್ಷಿಯನ್ನು ಮದುವೆಯಾದ ಹೊಸತು. ಒಂದು ಮಳೆಗಾಲ ಸುರು ಆಗುವಾಗ ಕಿಟ್ಟಣ್ಣ ಭಟ್ರು ಒಂದು ಸಣ್ಣ ಗುಂಡಿ ತೋಡಿದ್ರು. ‘ಜಲಜಾಕ್ಷೀ.... ಗಿಡ ನೆಡು’ ಅಂತ ಹೇಳಿದ್ರು. ಅವ್ರು ಪ್ರೀತಿಯಿಂದ ನೆಟ್ರು. ‘ಕಾಲಾದಿ ಕಾಲಕ್ಕೆ ಹೂ ಆದಾಗ ಸ್ವಲ್ಪ ದೇವ್ರಿಗೆ ಸ್ವಲ್ಪ ನಿಂಗೆ’ ಎಂದು ಮೋಕೆಯಿಂದ ಹೇಳಿದ್ರು. ‘ನಂಗೇಂತ ಪ್ರತ್ಯೇಕ ಬೇಡ. ಎಲ್ಲವೂ ನೀವು ಪೂಜೆ ಮಾಡುವ ದೇವ್ರಿಗೆ. ಮರುದಿವ್ಸ ನಿರ್ಮಾಲ್ಯ ನಂಗೆ ಕೊಟ್ರೆ ಸಾಕು. ಸಂಪಿಗೆ ಹೂ ಎರ್ಡು ಮೂರು ದಿನ ಆದ್ರೂ ಪರಿಮಳ ಹಾಗೇ ಇರ್ತದೆ’ ಅಂತ ಹೇಳಿದ್ದಿದ್ರು.

ಕಾಲಾದಿಕಾಲಕ್ಕೆ ಸಂಪಗೆಯ ಗಿಡ ಬೆಳೀತಾ ದೊಡ್ಡದಾಗ್ತಾ ಬಂತು. ಮಳೆಗಾಲ ಸುರುವಾದ ಕೂಡ್ಳೆ ಹೂ ಬಿಡ್ಳಿಕ್ಕೆ ಸ್ಟಾರ್ಟ್ ಆಯ್ತು.  ಡೈಲಿ ಕಿಟ್ಟಣ್ಣ ಭಟ್ರು ಬುಟ್ಟಿ ತುಂಬ ಹೂ ಕೊಯ್ದು ದೇವ್ರಿಗೆ  ಹಾಕ್ತಿದ್ರು. ಮರುದಿವ್ಸ ದೇವಸ್ಥಾನದಿಂದ ಬರುವಾಗ ನಿರ್ಮಾಲ್ಯ ತೆಕ್ಕೊಂಡು ಬಂದು ಹೆಂಡತಿಗೆ ಕೊಡ್ತಿದ್ರು. ಇವ್ರಿಗೆ ಹುಟ್ಟಿದ ಒಬ್ನೇ ಮಗ ನಿರಂಜನ. ಮಾಣಿ ಮಗ ಅಲ್ವಾ? ಜಲಜಾಕ್ಷಿ ಅಮ್ಮನವ್ರು ಕಂಡಾಬಟ್ಟೆ ಕೊಂಡಾಟದಿಂದ ಬೆಳೆಸಿದ್ರು. ಪ್ರಾಯ ಬರುವಾಗ ಅವ ಅಡ್ಡದಾರಿ ಹಿಡಿದನೇ ಶಿವಾಯಿ ಒಳ್ಳೇದು ಯೆಂತಲೂ ಕಲೀಲಿಲ್ಲ.

ಉಪನಯನ ಮಾಡಿ ನಾಲ್ಕು ಮಂತ್ರ ಕಲಿಸ್ಲಿಕ್ಕೆ ನೋಡಿದ್ರೆ ಅದ್ರಲ್ಲೂ ಉಪ್ರಾಟಿಯೇ. ಕಿಟ್ಟಣ್ಣ ಭಟ್ರಿಗೆ ಎಲ್ಲಾದ್ರೂ ದೊಡ್ಡ ಪುರೈತಿಕೆ ಇದ್ದ ದಿವ್ಸ ‘ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಾರಾ ಮಾಣಿ’ ಅಂತ ಹೇಳಿದ್ರೆ ಅರ್ಧಂಬರ್ಧ ಮಂತ್ರ ಹೇಳಿ ದೇವ್ರ ಮುಸುಡಿ ಮುಂದೆ ಆರತಿ ಎತ್ತಿ ಬರ್ತಿದ್ದ. ಕಿಟ್ಟಣ್ಣ ಭಟ್ರು ಬುದ್ಧಿ ಹೇಳ್ಳಿಕ್ಕೆ ಬಂದ್ರೆ ಹೆಂಡತಿ, ‘ಇವತ್ತಲ್ಲ ನಾಳೆ ಸರಿಯಾಗ್ತಾನೆ. ನೀವು ಬೈದ್ರೆ ನನ್ನ ಮೇಲೆ ಆಣೆ’ ಅಂತ ಹೇಳ್ಳಿಕ್ಕೆ ಸುರು ಮಾಡಿದ್ರು.

ಹೀಗಾಗಿ ನಿರಂಜನ ಅಲಕ್ ನಿರಂಜನನೇ ಆಗಿ ಹೋದ! ಪ್ರಾಯ ಬಲೀತಾ ಬಂದ ಹಾಗೆ ಮಂಗ್ಳೂರಿಗೆ ಹೋಗುದು, ಇಸ್ಪೀಟು ಆಡುದು, ಕುಡಿಯುದು ಎಲ್ಲ ಮಾಡ್ಳಿಕ್ಕೆ ಸುರು ಮಾಡಿದ. ಒಂದು ದಿವ್ಸ ಭಟ್ರು ಸಂಜೆಯ ಪೂಜೆ ಮುಗಿಸಿಕೊಂಡು ಕೈಯಲ್ಲಿ ಸಂಪಗೆಯ ಹೂವಿನ ಪ್ರಸಾದ ಹಿಡ್ಕೊಂಡು ಬರೂದಕ್ಕೂ ಇವ ಮಂಗ್ಳೂರಿಂದ ಬಸ್ಸಿಳಿದು ಟೈಟ್ಟಾಗಿ ತೂರಾಡಿಕೊಂಡು ಬರೂದಕ್ಕೂ ಸರೀ ಆಯ್ತು.  ದಾರಿಯಲ್ಲಿ ಕಂಡವ್ರು ಯಾರೋ, ‘ಎಂಥಾ ಅಪ್ಪನಿಗೆ ಎಂಥಾ ಮಗ ಭಟ್ರು ನೋಡಿದ್ರೆ ಹಾಗೆ, ಇವ ನೋಡಿದ್ರೆ ಹೀಗೆ’ ಅಂತ ಹೇಳುದು ಕೇಳಿತು.

ತುಟಿ ಬಿಗಿ ಹಿಡ್ಕೊಂಡು ಮನೆಗೆ ಬಂದ್ರು. ನಿರಂಜನ ಬಂದ ಕೂಡ್ಳೆ ಕಂಡಾಬಟ್ಟೆ ಬೈದ್ರು. ಅವ ತೂರಾಡ್ತಾ, ‘ಏ ಭಟ್ಟಾ.... ಇಸ್ಪೀಟು ಆಡಿ ಕೂತ ಪೆಟ್ಟಿಗೆ ಐವತ್ತು ಸಾವಿರ ಸಂಪಾದನೆ ಮಾಡಿದ್ದೇನೆ. ನಿನ್ನ ಹತ್ರ ಜನ್ಮದಲ್ಲಿ ಸಾಧ್ಯ ಉಂಟನಾ ಇದು?’ ಅಂತ ಏಕವಚನದಲ್ಲೇ ಕೇಳಿದ್ದ. ಮಾತ್ರ ಅಲ್ಲ, ‘ಇಡೀ ಜೀವಮಾನದಲ್ಲಿ ಇಷ್ಟು ಹಣ ನೋಡ್ಳಿಕ್ಕೆ ನಿನ್ನ ಹತ್ರ ಆಗ್ತಿರ್ಲಿಲ್ಲ.

ಕೆಲಸಕ್ಕೆ ಬಾರದ ಪುರೊತಿಕೆ ನಿನ್ನದು’ ಅಂತ ಹೀನಾಯವಾಗಿ ಮಾತಾಡಿದ್ದ. ಭಟ್ರಿಗೆ ಮಂಡೆ ಬಿಸೀ ಆಯ್ತು. ಯಾರೋ ಹೇಳಿದ್ರು, ‘ಪ್ರಾಯಕ್ಕೆ ಬಂದ ಮಗನಿಗೆ ಒಳ್ಳೆ ಹೆಣ್ಣು ನೋಡಿ ಮದುವೆ ಮಾಡಿ, ಸರಿಯಾಗ್ತಾನೆ’ ಅಂತ. ಭಟ್ರು ಹುಡುಕಿ ಸ್ವಲ್ಪ ಬಡತನದ ಹಿನ್ನೆಲೆಯಿದ್ದ ಹುಡುಗಿ ನಾಗವೇಣಿಯನ್ನು ತಂದು ಮದುವೆ ಮಾಡಿದ್ರು.

ಆದ್ರೆ ಅವ ಎಲ್ಲಿ ಉದ್ಧಾರ ಆಗ್ತಾನೆ? ಮದುವೆ ಆದ ಎರಡೇ ವರ್ಷದಲ್ಲಿ ಒಂದು ಗಂಡು, ಒಂದು ಹೆಣ್ಣು ಮಗುವನ್ನು ಹೆಂಡತಿಯ ಕೈಗೆ ಕೊಟ್ಟ ಹಳೇ ಚಾಳಿ ಕಂಟಿನ್ಯೂ ಮಾಡಿದ. ನಾಗವೇಣಿಗೆ ಫಸ್ಟ್‌ಫಸ್ಟಿಗೆ ಯೆಂತದೂ ಅನ್ನಿಸ್ತಿರ್ಲಿಲ್ಲ. ಕಡೆಕಡೆಗೆ ಅವನ ಕಲ್ಯಾಣ ಗುಣ ಗೊತ್ತಾಗ್ಲಿಕ್ಕೆ ಸುರುವಾಯ್ತು. ಅಪ್ಪನ ಮನೆಯವ್ರು ಹಾಕಿದ ಒಂದೊಂದೆ ಬಂಗಾರ ಮಾಯ ಆಗುದು ಇವನಿಂದ್ಲೇ ಅಂತ ಗೊತ್ತಾಗಿ ಕಂಗಾಲಾದ್ಲು.

ಅತ್ತೆಯ ಹತ್ರ ಹೇಳಿದ್ರೆ, ‘ನನ್ನ ಮಗ ಒಳ್ಳೆಯವ. ನೀನೇ ಸರಿ ಇಲ್ಲ’ ಅಂತ ಹೇಳಿದ್ರು. ಮಾವನ ಹತ್ರ ಹೇಳಿದಾಗ, ‘ನಾಗವೇಣೀ... ನನ್ನಿಂದ ಅಪರಾಧ ಆಯ್ತು. ಮಾಪು ಮಾಡು. ಇವತ್ತಲ್ಲ ನಾಳೆ ಸರಿ ಆಗ್ತಾನೆ ಅಂತ ಎಣಿಸಿ ನಿನ್ನ ಕುತ್ತಿಗೆಗೆ ಇವ್ನನ್ನು ಕಟ್ಟಿದೆ. ಮಕ್ಳು ಬೆಳೀತಾ ಬಂದಾಗ್ಲಾದ್ರೂ ಇವ ಅವುಗಳ ಮೇಲಿನ ಪಾಶದಿಂದ ಸರಿಯಾಗ್ತಾನೆ ಅಂತ ಎಣಿಸಿದೆ. ನನ್ನ ಲೆಕ್ಕಾಚಾರ ಎಲ್ಲ ತಪ್ಪಾಯ್ತು’ ಅಂತ ಹೇಳಿ ದಿಣ್ಣ (ಒಂದೇ ಸಮ) ಕಣ್ಣೀರು ಹಾಕಿದ್ರು. ಆವತ್ತು ರಾತ್ರಿ ಊಟ ಮಾಡಿ ಮಲಗಿದವ್ರು ಮೇಲೆ ಏಳ್ಳೇ ಇಲ್ಲ.

ಅಪ್ಪ ಸತ್ತ ಮೇಲೆ ನಿರಂಜನ ಪೂರ್ತಿ ಮರ್ಲರ ಹಾಗೆ ಆದ. ದೇವಸ್ಥಾನದ ಪೂಜೆ ಎಂಥದೋ ಒಂದು ವಿಚಿತ್ರ ರೀತಿಯಲ್ಲಿ ಮಾಡ್ತಿದ್ದ.  ಆಮೇಲೆ ಗೊತ್ತಾಯ್ತು, ನಾಗವೇಣಿಗೆ ತನ್ನ ಗಂಡನಿಗೆ ಯಂತಕ್ಕೆ ಒಳ್ಳೇ ಬುದ್ಧಿ ಬಂತು ಅಂತ. ಮನೆಯಿಂದ ದೇವ್ರ ಮಂಡೆ ಮೇಲೆ ಇಡ್ಳಿಕ್ಕೆ ಅಂತ ತೆಕೊಂಡು ಹೋಗ್ತಿದ್ದ ಸಂಪಗೆಯ ಹೂಗಳನ್ನು ದೇವಸ್ಥಾನದಲ್ಲಿ ಕಸ ಗುಡಿಸ್ಲಿಕ್ಕೆ ಬರ್ತಿದ್ದ ವನಜಳ ಮಂಡೆಗೆ ಸಿಕ್ಕಿಸ್ತಿದ್ದ.

ಫಸ್ಟ್‌ಫಸ್ಟಿಗೆ ಕೆಲವ್ರು, ‘ನಾಗವೇಣೀ ನಿನ್ನ ಗಂಡನನ್ನು ಹಿಡಿತದಲ್ಲಿ ಇಟ್ಟುಕೋ. ದೇವಸ್ಥಾನಕ್ಕೆ ಬರುವವರನ್ನು ಒಂದು ಟೈಪಲ್ಲಿ ನೋಡ್ತಾನೆ. ಅವ್ನಿಗೂ ಅಲ್ಲಿ ಕೆಲ್ಸ ಮಾಡುವ ವನಜಳಿಗೂ ಸಂಬಂಧ ಉಂಟಂತೆ’ ಅಂತ ಹೇಳ್ತಿದ್ರು. ನಾಗವೇಣಿಗೆ ಅವ್ನ ಉಳ್ದ ಗುಣಗಳು ಗೊತ್ತಿದ್ರೂ ಇಷ್ಟ್ರ ಮಟ್ಟಿಗೆ ಊರಲ್ಲೇ ಮುಂದುವರೀಲಿಕ್ಕಿಲ್ಲ ಅಂತ ಎಣಿಸಿದ್ಲು. 

ಆದ್ರೆ ಯಾವಾಗ ಅವ್ಳೇ ಸ್ವತಹ ಒಂದು ಸರ್ತಿ ಸಡನ್ನಾಗಿ ದೇವಸ್ಥಾನಕ್ಕೆ ಹೋದಾಗ ಬಾಗಿಲ ಸಂದಿಯಲ್ಲಿ ತನ್ನ ಗಂಡ, ವನಜ ತಬ್ಬಿಕೊಂಡು ಇರೋದನ್ನು ನೋಡಿದ್ಳೋ ಕಂಡಾಬಟ್ಟೆ ಕಂಗಾಲಾದ್ಲು. ಈಶ್ವರಲಿಂಗ ಬೋಳು ಬೋಳು. ವನಜಳ ಮಂಡೆ ತುಂಬ ಸಂಪಗೆ ಹೂ. ವನಜ ಇವ್ಳನ್ನು ಕಂಡವ್ಳೇ ಸೀರೆಯನ್ನು ಸುತ್ತಿಕೊಂಡು ಓಡಿದ್ಲು. ಆದ್ರೆ ನಿರಂಜನ ಎಂತದೂ ಆಗ್ಲಿಲ್ಲ ಎನ್ನುವವ್ರ ಹಾಗೆ ಕೋಮಣ ಸರಿ ಮಾಡಿಕೊಳ್ತಿದ್ದ.

ನಾಗವೇಣಿ ಕೂಡ್ಳೆ ಆವೇಶ ಬಂದವ್ರ ಹಾಗೆ ಕೂಗಿದ್ಲು, ಅವ್ಳ ಬೊಬ್ಬೆ ಕೇಳಿ ಜನ ಓಡಿ ಬಂದ್ರು. ವಿಷಯ ಎಲ್ಲ ಕೇಳಿದ್ರು.  ‘ದೇವಸ್ಥಾನದಲ್ಲಿ ಇಂಥ ಹಲ್ಕಟ್ ಕೆಲಸ ಮಾಡುದಾ ಇವ, ಷ್ಯಕ್’ ಅಂತ ಎಲ್ರೂ ಮಾತಾಡಿಕೊಂಡ್ರು. ಊರಿನ ಹಿರಿಯರು, ದೇವಸ್ಥಾನದ ಆಡಳಿತ ಮೊಕ್ತೇಸರರು, ಕಮಿಟಿಯವ್ರು ಎಲ್ಲ ಒಟ್ಟಾಗಿ, ‘ನೀನು ನಾಳೆಯಿಂದ ದೇವಸ್ಥಾನದ ಒಳಗೆ ಕಾಲು ಇಟ್ರೆ ಜಾಗ್ರತೆ’ ಅಂತ ಹೇಳಿದ್ರು.

ಅಲ್ಲಿಗೆ ನಿರಂಜನನ ಪೂಜೆ ಮಾಡುವ ಅವತಾರ ನಿಂತಿತು. ಆದ್ರೆ ಚಟ ಬಿಡ್ಬೇಕಲ್ಲ? ಎರ್ಡು ದಿವ್ಸ ಸುಮ್ನೆ ಇದ್ದವ ‘ಅಷ್ಟು ಕೊಡು, ಇಷ್ಟು ಕೊಡು’ ಅಂತ ಹೆಂಡತಿಗೆ ಹೊಡಿಯುದು, ಕುಡ್ದು ಇಸ್ಪೀಟು ಆಡಿ ಬರುದು ಮುಂದುವರೀತು. ಪಾಪ ಅವ್ಳಾದ್ರೂ ಎಷ್ಟು ಕೊಡ್ತಾಳೆ. ಹೊಟ್ಟೆ ಬಟ್ಟೆಗೆ ಅಂತ ಹಪ್ಪಳ, ಸೆಂಡಿಗೆ, ಬತ್ತಿ ಎಲ್ಲ ಮಾಡಿ ಚೂರು ಪಾರು ಸಂಪಾದನೆ ಮಾಡಿ ಮಕ್ಳನ್ನು ಶಾಲೆಗೆ ಕಳಿಸ್ತಿದ್ಲು.

ತನ್ನ ಗಂಡ ಯಾವಾಗ, ಹೇಗೆ ಸರಿಯಾದಾನು ಅಂತ ಕಂಡ ಕಂಡ ಜೋಯಿಸರ ಹತ್ರ ಕೇಳ್ಳಿಕ್ಕೆ ಸುರು ಮಾಡಿದ್ಲು. ಯಾರೋ ಒಬ್ಬ, ‘ನಿಮ್ಮ ಮನೆಯ ಮುಂದೆ ಸಂಪಿಗೆಯ ಮರ ಉಂಟು. ಅದೇ ದೋಷ. ಮನೆಯ ಮುಂದೆ ಸಂಪಗೆಯ ಮರ ಇದ್ರೆ ಯಾವ ಕಾರಣಕ್ಕೂ ಒಳ್ಳೇದಾಗೋದಿಲ್ಲ’ ಅಂತ ಹೇಳಿಬಿಟ್ಟ.
ಅವತ್ತಿಂದ ನಾಗವೇಣಿಗೆ ಮಂಡೆ ಬಿಂಗ್ರಿ ಆಗ್ಲಿಕ್ಕೆ ಸುರುವಾಯ್ತು. ಸಂಪಗೆಯ ಪರಿಮಳ ನನ್ನ ಗಂಡನ ಮೂಗಿಗೆ ತಾಗಿದ್ದೇ ಅವ ಹುಚ್ಚರ ಹಾಗೆ ಆಗ್ತಾನೆ.

ದೇವ್ರ ಮಂಡೆ ಮೇಲೆ ಇರ್ಬೇಕಾದ ಹೂ ವನಜಳ ಮಂಡೆ ಮೇಲೆ ಇದ್ದದ್ದು, ತನ್ನ ಗಂಡನ ಈ ಟೈಪಿನ ಹುಚ್ಚಿನಿಂದ್ಲೇ ಅಂತ ಅವ್ಳಿಗೆ ಗ್ಯಾರಂಟಿಯಾಯ್ತು. ಹೇಗಾದ್ರೂ ಮಾಡಿ ಸಂಪಿಗೆಯ ಮರವನ್ನು ಕತ್ತರಿಸಿ ಹಾಕಿಸ್ಬೇಕು ಅಂತ ಎಣಿಸಿದ್ಲು. ಒಂದು ಸರ್ತಿ ಮರಕೊಯ್ದು ಹಾಕ್ಲಿಕ್ಕೆ ಆಳನ್ನು ಬರ್ಲಿಕ್ಕೆ ಹೇಳಿದ್ಲು. ಆದ್ರೆ ವಿಷಯ ಗೊತ್ತಾಗಿ ಅತ್ತೆ ಜಲಜಾಕ್ಷಿ, ‘ಇದು ನಾನು ನನ್ನ ಗಂಡ ನೆಟ್ಟ ಮರ... ಇದನ್ನೇನಾದ್ರೂ ಕತ್ತರಿಸೋದಿದ್ರೆ ಮೊದ್ಲು ನನ್ನನ್ನು ಸೀಳಿ ಹಾಕಿ’ ಅಂತ ಮರದ ಬುಡದಲ್ಲಿ ಹೋಗಿ ಕೂತ್ಲು. ಸಾಲದ್ದಕ್ಕೆ ಕುಡ್ದು ಬಂದಿದ್ದ ಮಗನ ಹತ್ರ ಬಾಯಿಗೆ ಬಂದ ಹಾಗೆ ಚಾಡಿ ಹೇಳಿಕೊಟ್ಳು. ಅವ ಬಿಡ್ತಾನಾ? ನಾಯಿಗೆ ಹೊಡ್ದ ಹಾಗೆ ಹೆಂಡತೀನ ಹೊಡ್ದ, ಬೆಳ್ದು ನಿಂತಿದ್ದ ಮಕ್ಳ ಎದುರು.

ನಾಗವೇಣಿಯ ಕಷ್ಟದ ದಿನಗಳು ಹೆಚ್ಚು ಕಾಲ ಮುಂದುವರೀಲಿಲ್ಲ. ಯೆಂತಕ್ಕೆ ಅಂದ್ರೆ ಒಂದು ದಿವ್ಸ ಸಂಜೆ ನಿರಂಜನ ಕುಡ್ದು ತೂರಾಡಿಕೊಂಡು ಬರ್ತಿದ್ದವ ಮನೆ ಎದುರೇ ಬಸ್ಸಿಗೆ ಸಿಕ್ಕಿ ಸತ್ತ. ತನ್ನ ಬದುಕಿನ ಸುಖವನ್ನು ಮನೆಯೆದುರು ಇದ್ದ ಸಂಪಗೆಯ ಮರ ನಾಶ ಮಾಡಿದೆ ಅನ್ನುವ ಸಿಟ್ಟು ನಾಗವೇಣಿಯ ಹತ್ರ ಯಾವಾಗ್ಲೂ ಇತ್ತು. ಒಂದಲ್ಲ ಒಂದು ದಿವ್ಸ ಅದನ್ನು ಕಡ್ದು ಹಾಕ್ಲೇಬೇಕು ಅಂತ ಎಣಿಸ್ತಾ ಇದ್ಲು.
***
ನಾಗವೇಣಿಯ ಅದೃಷ್ಟ ಚೆನ್ನಾಗಿತ್ತು. ಮಗ ಇಂಜಿನಿಯರಿಂಗ್ ಓದಿ ಊರಲ್ಲೇ ಸಣ್ಣಪುಟ್ಟ ಕಾಂಟ್ರಾಕ್ಟ್ ಹಿಡೀಲಿಕ್ಕೆ ಸುರು ಮಾಡಿದ.  ಕೈಯಲ್ಲಿ ನಾಲ್ಕು ಕಾಸು ಓಡಾಡ್ಲಿಕ್ಕೆ ಸುರುವಾಯ್ತು. ಮಗ್ಳೂ ಇಂಜಿನಿಯರಿಂಗ್‌ಗೆ ಸೇರಿದ್ಲು. ಒಂದು ದಿವ್ಸ ಮಗ, ‘ಅಮ್ಮ ... ನಮ್ಮ ಮನೆ ಹೈವೇ ಸೈಡಿಗೇ ಉಂಟು. ಮನೆ ಮುಂದೆ ಸ್ವಲ್ಪ ಜಾಗದಲ್ಲಿ ಇರುವ ಮರಗಳನ್ನು ಕಡಿಸಿ ಷಾಪಿಂಗ್ ಕಾಂಪ್ಲೆಕ್ಸ್ ಮಾಡಿಸುವ ಆಸೆ ಉಂಟು. ಮಾಡಿಸುದಾ?’ ಅಂತ ಕೇಳಿದ. ನಾಗವೇಣಿಗೆ ಆದ ಖುಷಿ ಅಷ್ಟಿಷ್ಟಲ್ಲ. ಯೆಂತಕ್ಕೆ ಅಂದ್ರೆ ಮನೇ ಮುಂದೆ ಇರುವ ಸಂಪಿಗೆಯ ಮರ ಹೋಗ್ತದಲ್ಲಾ ಅಂತ.

‘ಅದಕ್ಕೇನು ಮಗಾ... ಕಟ್ಟಿಕೋ... ನಿಂಗೆ ಒಳ್ಳೇದಾದ್ರೆ ನಂಗೂ ಒಳ್ಳೆದೇ. ವಿಷಯ ಅಜ್ಜಿಗೆ ಮಾತ್ರ ಹೇಳ್ಬೇಡ. ಎದ್ರು ಇರುವ ಐದು ಸೆಂಟ್ಸ್ ಜಾಗದಲ್ಲಿ ಯೆಂತ ಮಾಡ್ಳಿಕ್ಕಾಗ್ತದಾ ಅದನ್ನು ಮಾಡು’ ಅಂತ ಹೇಳಿದ್ಲು. ಕೆಲವೇ ದಿನದಲ್ಲಿ ಮಗ ಜೆಸಿಬಿ ತೆಕೊಂಡು ಬಂದು ಮನೆ ಮುಂದೆ ಅವ್ನಿಗೆ ಬೇಕಾದ ಹಾಗೆ ಸಪಾಯ್ ಮಾಡಿದ. ಜಲಜಾಕ್ಷಿ ಅಜ್ಜಿಗೆ ಯೆಂತ ಆಗ್ತದೆ ಅಂತ ಗೊತ್ತಾಗೂದ್ರೊಳಗೆ ಸಂಪಗೆ ಮರವನ್ನು ಬೇರು ಸಮೇತ ಜೆ.ಸಿ.ಬಿ. ಕಿತ್ತುಹಾಕಿತ್ತು. ತಾನು ತನ್ನ ಕೈಯಾರೆ ನೆಟ್ಟು ಬೆಳೆಸಿದ ಮರ, ಗಂಡ ಪ್ರತಿನಿತ್ಯ ಪೂಜೆ ಹೂ ತೆಕ್ಕೊಂಡು ಹೋಗ್ತಿದ್ದ ಮರ, ಒಮ್ಮೆಲೇ ನಾಶವಾದದ್ದು ನೋಡಿ ಅವಳಿಗೆ ತನ್ನ ಹೃದಯವನ್ನೇ ಕಿತ್ತಂತೆ ಆಯ್ತು.

ವಿಚಿತ್ರವಾಗಿ ನರಳಿದ್ರು. ಬಾಯಿಗೆ ಬಂದ ಹಾಗೆ ಬೈದ್ರು. ಆದ್ರೆ ಜೆ.ಸಿ.ಬಿ. ಸೌಂಡಲ್ಲಿ ಯಾರಿಗೂ ಯೆಂತದೂ ಕೇಳ್ಳಿಲ್ಲ. ಸೊಸೆ, ಮೊಮ್ಮಗ ಸೇರಿ ಸಂಪಿಗೆಯ ಮರವನ್ನು ಕಡ್ದು ಹಾಕಿದ್ರು ಅಂತ ಇದ್ದ ಬದ್ದವ್ರ ಹತ್ರ ಹೇಳ್ಳಿಕ್ಕೆ ಸುರು ಮಾಡಿದ್ರು. ಕೇಳಿದವ್ರೆಲ್ಲ ‘ಅಜ್ಜಿ .... ನಿಮಿಗೆ ಯೆಂತಕ್ಕೆ ಸಂಪಿಗೆ ಹೂ? ಮೊಮ್ಮಗ ಕೋಂಪ್ಲೆಕ್ಸ್ ಕಟ್ಟಿ ಡೆವಲಪ್ ಆಗಿದ್ದಾನೆ. ಸಂಪಿಗೆ ಮರದಿಂದ ಯೆಂತ ಪ್ರಯೋಜನ? ಸುಮ್ನೆ ಯೆಂತಕ್ಕೆ ಸೊಸೆ, ಮೊಮ್ಮಗನನ್ನು ಬಾಯಿಗೆ ಬಂದ ಹಾಗೆ ಬೈತೀರಿ’ ಅಂತ ಬಾಯಿ ಮುಚ್ಚಿಸಿದ್ರು. ಆದ್ರೆ ಅಜ್ಜಿ ಬಿಡ್ಳಿಲ್ಲ. ಸೊಸೆಯನ್ನು ಬಯ್ಯುದು, ಕಂಡ ಕಂಡವ್ರ ಹತ್ರ ‘ಸಂಪಿಗೆಯ ಹೂ ಮುಡ್ಕೊಳ್ಳಿ’ ಅಂತ ಬಿಂಗ್ರಿ ಬಿಂಗ್ರಿಯಾಗಿ ಹೇಳುದು ಮಾಡ್ತಾನೇ ಇದ್ಲು.
***
ಮಗಳು ಇಂಜಿನಿಯರಿಂಗ್ ಮುಗಿಸಿದ್ಲು. ನಾಗವೇಣಿಯ ಖುಷಿ ಡಬ್ಬಲ್ ಆಯ್ತು. ಯೆಂತಕ್ಕೆ ಅಂದ್ರೆ ಬೆಂಗ್ಳೂರಲ್ಲಿ ಒಳ್ಳೇ ಕೆಲ್ಸ ಸಿಕ್ಕಿತ್ತು ಮಾತ್ರ ಅಲ್ಲ, ಅವ್ಳದ್ದೇ ಕಂಪೆನಿಯ ಒಳ್ಳೇ ಹುಡುಗ ಮದ್ವೆ ಮಾಡ್ಕೊಳ್ಳಿಕ್ಕೆ ಒಪ್ಪಿದ್ದ. ಮೊಮ್ಮಗಳು ಮದ್ವೆ ಮುಗಿಸಿ ಬೆಂಗ್ಳೂರಿಗೆ ಹೊರಟು ನಿಂತಾಗ ಅಜ್ಜಿ ಕಷ್ಟಪಟ್ಟು ಹೊರಗೆ ಬಂದ್ರು. ಕೈಯಲ್ಲಿ ಒಂದು ಸಂಪಗೆಯ ಗಿಡ, ‘ಚುಮ್ಮೀ ಈ ಗಿಡ ನನ್ನ ಉಡುಗೊರೆ. ನಿನ್ನ ಮನೆಯ ಕಂಪೌಂಡ್ ಒಳಗೆ ಜಾಗ ಇದ್ರೆ ಇದನ್ನು ನನ್ನ ನೆನಪಿಗೆ ಅಂತ ನೆಡು’ ಅಂತ ಹೇಳಿ ದಿಣ್ಣ ಕೂಗಿದ್ರು. ಮಗ್ಳ ಮದುವೆ ಆದ ಖುಷಿಯಲ್ಲಿ ನಾಗವೇಣಿ ಯೆಂತದೂ ಹೇಳ್ಳಿಲ್ಲ.
***
ಇದೆಲ್ಲ ಆಗಿ ಕೆಲವು ವರ್ಷ ಆಗಿದೆ. ಮೊಮ್ಮಗಳು ಸುಷ್ಮಾಳ ಮನೆಯ ಮುಂದೆ ಅಜ್ಜಿ ಕೊಟ್ಟ ಸಂಪಗೆಯ ಗಿಡ ಮರವಾಗಿ ಬೆಳ್ದಿದೆ.  ಗಂಡ ಹೆಂಡತಿ ಚೆಂದವಾಗಿ ಇದ್ದಾರೆ. ಸುಷ್ಮಾ ತನ್ನ ಆರು ವರ್ಷದ ಮಗ್ಳಿಗೆ ಅರಳಿರುವ ಸಂಪಗೆಯ ಹೂವನ್ನು ಒಂದೊಂದೇ ಕೊಯ್ದು ಕೊಡ್ತಾ, ‘ಇದು ನಿನ್ನ ಮುತ್ತಜ್ಜ, ಇದು ಮುತ್ತಜ್ಜಿ, ಇದು ಅಜ್ಜ, ಇದು ಅಜ್ಜಿ.... ಇವ್ರೆಲ್ಲ ದಿನಾ ಇಲ್ಲಿ ಅರಳ್ತಾರೆ’ ಅಂತ ಹೇಳ್ತಾಳೆ. ಮಗಳು ಕಣ್ಣು ಬಾಯಿ ಬಿಟ್ಕೊಂಡು ಕೇಳ್ತಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.