ಎರಡು ಮೂರು ಅಗ್ರಹಾರಗಳಲ್ಲಿ ಸುತ್ತಾಡಿ ನಾವು ವೈಕುಂಠಪುರಕ್ಕೆ ಬಂದು ತಲುಪಿದಾಗ, ಪಟ್ಟಾಭಿ ‘ನಾನು ಈ location ನೋಡಿದ್ದೇನಲ್ಲ’ ಎಂದು ಒಳಗೆ ಬರಲೇ ಇಲ್ಲ. ಪಟ್ಟಾಭಿಯ ಜಮೀನ್ದಾರೀ ಸಂಸ್ಕೃತಿಗೆ ಹೆಚ್ಚು ದೈಹಿಕ ಶ್ರಮ ಸಹಿಸಿಕೊಳ್ಳಲಾಗುತ್ತಿರಲಿಲ್ಲವಾದ್ದರಿಂದ ನಾವು ಉಳಿದ ಮೂವರು ವೈಕುಂಠಪುರದಲ್ಲಿ ಕಾಲಿಟ್ಟೆವು.
ಆ ಅಗ್ರಹಾರ ನೋಡಿ ನನಗಾದ ಹರ್ಷ ವರ್ಣಿಸಲಾರೆ. ದೃಶ್ಯಕ್ಕೆ ತಕ್ಕುದಾದ location ಸಿಕ್ಕಾಗ, it is like love at first sight. ಪ್ರಥಮ ದರ್ಶನಕ್ಕೆ ಪ್ರೀತಿ ಚಿಗುರಿದಂತೆ ರೋಮಾಂಚನವಾಗುವುದು ಯಾವ ನಿರ್ದೇಶಕನಿಗಾದರೂ ಪರಿಚಿತ ಅನುಭವ. ಅಗ್ರಹಾರ ‘ಸಂಸ್ಕಾರ’ಕ್ಕಾಗಿಯೇ ಮಾಡಿಟ್ಟಂತಿತ್ತು. ಕನಿಷ್ಠ ಪಕ್ಷ ನೂರೈವತ್ತು - ಇನ್ನೂರು ವರ್ಷಗಳಲ್ಲಿ ಅದರಲ್ಲಿ ಯಾವ ಬದಲಾವಣೆಗಳೂ ಆಗಿದ್ದಿಲ್ಲ. (ವಿದ್ಯುಚ್ಛಕ್ತಿ ಬಂದು ಅಗ್ರಹಾರದಲ್ಲಿ ವಿದ್ಯುತ್ತಿನ ಕಂಬಗಳಿದ್ದವು. ಆದರೆ ಅದರಿಂದಾಗಿ ಚಿತ್ರೀಕರಣ ಸುಲಭವಾಯಿತು.) ಮರದಲ್ಲಿ ಕೆತ್ತಿರುವ ಕಂಬಗಳು, ಸಿಮೆಂಟು ಕಾಂಕ್ರೀಟಿನ ಸುಳಿವಿಲ್ಲದ ಮಣ್ಣಿನ ಗೋಡೆ, ಮನೆಗಳೆದುರಿಗೆ ಸಗಣಿ ಸಾರಿಸಿದ ಅಂಗಳ, ಸೋಗೆಯ ಚಪ್ಪರ. ಅಗ್ರಹಾರವಾಸಿಗಳು ಕೂಡ ಧೋತರ, ಗಿಡ್ಡತೋಳಿನ ಅಂಗಿ ಇಲ್ಲವೆ ಪಂಚೆ, ಜುಟ್ಟು, ಜನಿವಾರ - ನಾಮಗಳಿಂದ ವಿಭೂಷಿತರಾಗಿ ಚಿತ್ರೀಕರಣಕ್ಕೆ ಸಿದ್ಧರಾಗಿ ಕುಳಿತಿರುವಂತಿತ್ತು.
ಆದರೆ ‘ಕಸ್ತೂರಿ’ಯ ಲೋಕಪ್ರಿಯತೆ ಒಂದು ಸಮಸ್ಯೆಯನ್ನು ಉಂಟು ಮಾಡಿತ್ತು. ಹಿಂದಿನ ಸಲ ವೈಕುಂಠಪುರ ನಿವಾಸಿಗಳು ಬಂದವರನ್ನೆಲ್ಲ ಪ್ರೀತಿಯಿಂದ ಸ್ವಾಗತಿಸಿದರೆ, ಈ ಸಲ ಅವರ ಮುಖದ ಮೇಲೆ ಆತಂಕವಿತ್ತು. ಶಾಸ್ತ್ರಿಗಳೆಂಬವರು ನನ್ನನ್ನು ಒಂದು ಮನೆಯೆದುರಿನ ಕಟ್ಟೆಯ ಮೇಲೆ ಕೂಡ್ರಿಸಿ ಹೇಳಿದರು: ‘“ಕಸ್ತೂರಿ”ಯಲ್ಲಿ ಕಾದಂಬರಿಯನ್ನು ಓದಿ ಇದು ಸನಾತನ ಧರ್ಮವನ್ನು ಹೀಗಳೆಯುವ ಕೃತಿ ಎಂದು ಗಲಾಟೆಯೆದ್ದಿದೆ. ನಾವು ಶೃಂಗೇರಿ ಮಠದ ಆಶ್ರಿತರು. ನಮ್ಮಲ್ಲೊಬ್ಬರು ಬಯಲಾಟ ಆಡಿಸಿದ್ದಕ್ಕೆ ಬಹಿಷ್ಕಾರ ಎದುರಿಸಿ, ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕಾಯಿತು. ಈ ಕತೆಯಂತೂ ಮಾಧ್ವ ಸಮಾಜವನ್ನು ಸಂಬಂಧಿಸಿದ್ದು. ನಾವು ಸ್ಮಾರ್ತರು. ಈಗ ನಿಮ್ಮ ಚಿತ್ರೀಕರಣಕ್ಕೆ ಆಸ್ಪದವಿತ್ತು, ಮಠದ ಕೋಪವನ್ನು ನಮ್ಮ ಮೇಲೆ ಎಳೆದುಕೊಳ್ಳುವುದಕ್ಕೆ ನಾವು ಸಿದ್ಧರಿಲ್ಲ. ಆದ್ದರಿಂದ ನೀವು ಮಠದಿಂದ ಅನುಮತಿ ಪಡೆದುಕೊಂಡು ಬನ್ನಿರಿ. ಆಮೇಲೆ ಸುಖವಾಗಿ ಪಿಕ್ಚರ್ ಮಾಡಬಹುದು’ ಎಂದರು.
ಅಂದರೆ ಇನ್ನೊಂದು ಸುತ್ತು ಪ್ರದಕ್ಷಿಣೆ ಮತ್ತೆ ಆರಂಭವಾಗಬೇಕು. ಅವತ್ತು ರಾತ್ರಿ ಪಟ್ಟಾಭಿ ಪ್ರವಾಸೀಮಂದಿರದಲ್ಲಿ ನಿರಾಸೆಯ ಕಣ್ಣೀರು ಹಾಕಿದ: ‘ಇವರ ಮನೋವೃತ್ತಿ ಇಷ್ಟು ಸಂಕುಚಿತವೆಂಬುದು ಸ್ಪಷ್ಟವಾಗಿರುವಾಗ ಚಿತ್ರಕ್ಕೇಕೆ ಅಡ್ಡಿ ಮಾಡಬೇಕು?’ ಎಂದು ಬಿಸುಸುಯ್ದ. ಅವನಿಗೆ ಅಗ್ರಹಾರದವರ ತೊಡಕೇ ಅರ್ಥವಾಗಿರಲಿಲ್ಲ.
ಟಾಮ್ ನನಗೆಂದ: ‘ಈ ಅಗ್ರಹಾರದಲ್ಲಿ ಸಮಸ್ಯೆಯಿದ್ದರೆ ನಾವು ವಾಸುದೇವ್ ಆರಿಸಿರುವ ಬೇರೆ ಯಾವುದೇ ಹಳ್ಳಿಯಲ್ಲಿ ಚಿತ್ರೀಕರಣ ಮಾಡುವದು ಸಾಧ್ಯವಿದೆ’.
ನಾನೊಪ್ಪಲಿಲ್ಲ. ಮೊದಲನೆಯದಾಗಿ ಈ ಸಮಸ್ಯೆ ಉಳಿದ ಅಗ್ರಹಾರಗಳಲ್ಲೂ ತಲೆಯೆತ್ತಲಿಕ್ಕಿಲ್ಲ ಎಂಬ ಭರವಸೆ ಇರಲಿಲ್ಲ. ಅದಕ್ಕೂ ಮಹತ್ವದ ಅಂಶವೆಂದರೆ, ಉಳಿದ ಅಗ್ರಹಾರಗಳಿಗೆ ಒಂದು ನಿರ್ದಿಷ್ಟ ಆಕಾರವಿರಲಿಲ್ಲ. ಅಲ್ಲಿ- ಇಲ್ಲಿ ಬೀದಿಗಳೂ ಮನೆಗಳೂ ಇದ್ದವು ಅಷ್ಟೆ. ಈ ವೈಕುಂಠಪುರ ಹಾಗಲ್ಲ.
ಒಂದೇ ಒಂದು ಓಣಿ ನೇರವಾಗಿ ಗುಡ್ಡದ ಬುಡದಿಂದ ತುದಿಯ ತನಕ ಓಡುತ್ತಿದ್ದು ಅದರ ಇಕ್ಕೆಲಗಳಲ್ಲಿ ಹತ್ತೋ- ಹನ್ನೊಂದೋ ಮನೆಗಳಿದ್ದವು. ಓಣಿಯ ಮೇಲ್ತುದಿಯಲ್ಲಿ ಅಗ್ರಹಾರದ ದೈನಂದಿನ ಜೀವನದ ಬಗ್ಗೆ ಎತ್ತರದಿಂದ ಮೇಲ್ವಿಚಾರಣೆ ನಡೆಸುತ್ತಿರುವಂತೆ ಒಂದು ದೇವಸ್ಥಾನವಿತ್ತು. ಅದರ ಸುತ್ತ ಗೋಡೆಯಿದ್ದು ಎದುರಿಗೆ ಇಕ್ಕಟ್ಟಾದ ದ್ವಾರವಿತ್ತು. ನಾನು ಟಾಮ್‌ಗೆ ಹೇಳಿದೆ:
‘ಆ ಗುಡಿಯ ದ್ವಾರವನ್ನು ತಡಿಕೆಯಿಂದ ಮುಚ್ಚಿ ಅದನ್ನು ಒಂದು ಮನೆಯ ಮುಂಬಾಗಿಲೆಂದು ಮಾರ್ಪಡಿಸಿದರೆ, ಅದನ್ನೇ ನಾರಣಪ್ಪನ ಮನೆಯಾಗಿ ಬಳಸಬಹುದು. ಆಗ ಅದರೊಳಗಡೆ ಕೊಳೆಯುತ್ತ ಬಿದ್ದ ನಾರಾಣಪ್ಪನ ಶವ ಇಡಿಯ ಅಗ್ರಹಾರದ ಮೇಲೆ ವರ್ಚಸ್ಸು ಬೀರುತ್ತಿದೆ ಎಂಬ ಆಭಾಸ ದೃಶ್ಯವಾಗಿ ಉಂಟುಮಾಡಬಹುದು. ಅಲ್ಲದೆ ಓಣಿಯ ಬುಡದಲ್ಲಿ ಕ್ಯಾಮೆರಾ ಇಟ್ಟು ಇಡಿಯ ಅಗ್ರಹಾರದ Long Shot ತೆಗೊಂಡಾಗಲೆಲ್ಲ ಆ ದ್ವಾರ ಕಣ್ಣಿಗೆ ಬೀಳುತ್ತದಾದ್ದರಿಂದ ಅದರ ಹಿಂದೆ ಬಿದ್ದುಕೊಂಡಿದ್ದ ನಾರಾಣಪ್ಪನ ಹೆಣ ಪ್ರೇಕ್ಷಕರ ಪ್ರಜ್ಞೆಯಲ್ಲೇ ಇರುತ್ತದೆ. ಅತ್ತಿತ್ತ ಬಾಗಿಲು ಮುಚ್ಚಿಕೊಂಡಿದ್ದ ಮನೆಗಳು, ಅವುಗಳ ನಡುವೆ ಬಿಕೋ ಎಂದೋಡುವ ಓಣಿ, ಮೇಲ್ತುದಿಯಲ್ಲಿ ಊರನ್ನೇ ಹೆದರಿಸುತ್ತಿದ್ದ ನಾರಾಣಪ್ಪನ ಕಳೇಬರದ ಸಂಕೇತ ಹೀಗೆ “ಸಂಸ್ಕಾರ”ದ ಜಟಿಲ ಸಂಬಂಧಗಳನ್ನೆಲ್ಲ ದೃಶ್ಯವಾಗಿ ನೆಲೆಗೊಳಿಸಬಹುದು’.
ಟಾಮ್ ಒಪ್ಪಿದ
ಈಗ ಮಠದ ಬೆನ್ನು ಹತ್ತಿ ಹೊರಟೆವು. ಬೆಂಗಳೂರಲ್ಲಿ ಶಂಕರ ಮಠದಲ್ಲಿ ಶೃಂಗೇರಿಯ ಸ್ವಾಮಿಗಳು ತಂಗಿರುವದು ಗೊತ್ತಾಗಿ ಅಲ್ಲಿಗೆ ಹೋದೆವು. ನಾನು ಸನಾತನ ಧರ್ಮಕ್ಕೆ ಅಹಿತಕರವೆನ್ನಿಸದಿರುವ ಹಾಗೆ ಕತೆಯನ್ನು ಸ್ವಲ್ಪ ತಿರುಚಿ ಕತೆಯ ಸಾರಾಂಶ ಬರೆದು ತೆಗೆದೆ.
ಕಾದಂಬರಿಯ ಕೊನೆಯಲ್ಲಿ ನಾರಾಣಪ್ಪನ ಮುಸಲ್ಮಾನ ಗೆಳೆಯರೇ ಇರುಳುಗತ್ತಲೆಯಲ್ಲಿ ಬಂದು, ಹೆಣವನ್ನು ಕದ್ದುಕೊಂಡು ಹೋಗಿ ಅದನ್ನು ಸುಟ್ಟುಬಿಡುತ್ತಾರೆ ಎಂಬ ಅಂಶ ಮಠಕ್ಕೆಂದೂ ಮಾನ್ಯವಾಗುವಂತಿರಲಿಲ್ಲವಾದ್ದರಿಂದ ಪ್ರಾಣೇಶಾಚಾರ್ಯರೇ ಅಗ್ರಹಾರಕ್ಕೆ ಮರಳಿ ನಾರಾಣಪ್ಪನ ಸಂಸ್ಕಾರ ಮಾಡುತ್ತಾರೆ ಎಂದು ಬದಲಾವಣೆ ಮಾಡಿ ಆ ಟಿಪ್ಪಣಿಯನ್ನು ಮಠದ ಪರಿಚಾರಕರೊಬ್ಬರಿಗೆ ಕೊಟ್ಟೆವು. ಅವರು ಅದನ್ನು ಓದಿದರೋ ಬಿಟ್ಟರೋ, ‘ಚೆನ್ನಾಗಿದೆ. ನೀವು ಚಿತ್ರೀಕರಣ ಮಾಡುವುದಕ್ಕೆ ನಮ್ಮಲ್ಲೇನೂ ಅಭ್ಯಂತರವಿಲ್ಲ. ಸುಂದರವಾದ ನಿಸರ್ಗ! ಬೇಕಾದ ಹಾಗೆ ಬಳಸಿಕೊಳ್ಳಿರಿ!’ ಎಂದರು. ಚಿತ್ರೀಕರಣಕ್ಕೆ ದಾರಿ ಮುಕ್ತವಾಯಿತು.
ಆದರೆ ದೇವರ ಗುಡಿಯನ್ನು ನಾರಾಣಪ್ಪನ ಹೆಣ ಬಿದ್ದಿರುವ ಮನೆಯಾಗಿ ಬಳಸುತ್ತಿದ್ದೇವೆ ಎಂಬ ಅಂಶವನ್ನು ಗುಟ್ಟಾಗಿಯೇ ಇಟ್ಟೆವು. ಇಲ್ಲದಿದ್ದರೆ ಅಗ್ರಹಾರದ ಜನರೇ ಗದ್ದಲವೆಬ್ಬಿಸುವ ಸಂಭವವಿತ್ತು.
ಚಿತ್ರವನ್ನು ಕುರಿತು ನಮ್ಮ ಚರ್ಚೆ ಮುನ್ನಡೆದಂತೆ ನಮ್ಮ ನಮ್ಮಲ್ಲೇ ತುಯ್ತಗಳುಂಟಾಗಹತ್ತಿ, ವಾತಾವರಣ ಉದ್ವಿಗ್ನವಾಗತೊಡಗಿತು. ಇದಕ್ಕೆ ಹಲವು ಕಾರಣಗಳಿದ್ದವು. ‘ಕಲಾತ್ಮಕ ಚಿತ್ರ’ವೆಂದರೆ ‘ಬಂಗಾಲಿ’ ಚಿತ್ರಗಳ ತರಹ ಇರಬೇಕು ಎಂಬ ರೆಡ್ಡಿ ದಂಪತಿಗಳ ಪೂರ್ವಾಗ್ರಹ ಒಂದು ಪ್ರಬಲ ಕಾರಣವಾಗಿತ್ತು. ಸ್ನೇಹಾ ತಾನು ಬಂಗಾಲಿ ಹಿನ್ನೆಲೆಯವಳೆಂದು ಸಿದ್ಧಪಡಿಸಲೆಂಬಂತೆ ‘ಸಂಸ್ಕಾರ’ ಶಬ್ದವನ್ನೇ ‘ಶೋನ್‌ಶ್ಕಾರ್’ ಎಂದು ಉಚ್ಚರಿಸುತ್ತಿದ್ದಳು. (ಕೆಲವು ಸಲ ನಾನು ಬೇಕೆಂದೇ ‘ಅದೇನದು? ನಾನಾ ಶಬ್ದವನ್ನೇ ಕೇಳಿಲ್ಲವಲ್ಲ’ ಎಂದು ಅಣಕಿಸಿದ್ದೂ ಇದೆ.) ಪಟ್ಟಾಭಿ ಶಾಂತಿನಿಕೇತನಕ್ಕೆ ಹೋಗಿ ಅಲ್ಲಿ ವಿದ್ಯಾರ್ಥಿಯಾಗಿದ್ದ. ಇಬ್ಬರಲ್ಲೂ ನಾವು ಮಾಡುವ ಚಿತ್ರ ಕನ್ನಡವಾದರೂ ಅದಕ್ಕೆಲ್ಲ ವಾತಾವರಣ ‘ಬಂಗಾಲಿಯಾಗಿರಬೇಕು’ ಎಂಬ ಪೂರ್ವ ನಿರ್ಧಾರವಿತ್ತು.
ಒಂದು ದಿನ ಪಟ್ಟಾಭಿ ನನ್ನನ್ನು ಏನೋ ಒಂದು ದೊಡ್ಡ ಸಮಸ್ಯೆಯನ್ನು ತೋಡಿಕೊಳ್ಳುವವನಂತೆ ಬದಿಗೆ ಕರೆದು, ‘ಗಿರೀಶ್, ಚಿತ್ರದಲ್ಲಿ ಪ್ರಾಣೇಶಾಚಾರ್ಯರು ಮಾರುತಿಯ ವಿಗ್ರಹದೆದುರಿಗೆ ಕುಳಿತು ಹೂವಿನ ಪ್ರಸಾದಕ್ಕಾಗಿ ಕಾಯುವದು ಹಾಸ್ಯಾಸ್ಪದವೆನಿಸುತ್ತದೆ ಅಲ್ಲವೆ? ಮಾರುತಿಯ ಬದಲಾಗಿ ದೇವಿಯ ಪ್ರತಿಮೆಯನ್ನಿಟ್ಟರೆ ದೃಶ್ಯಕ್ಕೊಂದು ಘನತೆ, ಸೌಂದರ್ಯ ಬಂದೀತು. ಏನೆನ್ನುತ್ತೀ?’ ಎಂದ. ನಾನು ಗಾಬರಿಯಾಗಿ, ‘ಅಯ್ಯೋ, ಮಾಧ್ವರಿಗೆ ಮಾರುತಿ ಎಂದರೆ ಪ್ರಾಣದೇವರು. ನಮ್ಮಲ್ಲಿ ದೇವಿ ಎಂದರೆ ದಲಿತರ ದೇವತೆ’ ಎಂದೆ. ಪಟ್ಟಾಭಿ, ‘ಪ್ರೇಕ್ಷಕರಿಗೆಲ್ಲಿ ಗೊತ್ತಿರುತ್ತದೆ? ನನಗಂತೂ ದೇವಿಯೇ ಇರಲಿ ಎನಿಸುತ್ತದೆ’, ಎಂದು ವಾದಿಸಿದ. ನಾನು ದಿಙ್ಮೂಢನಾಗಿ ವೈಎನ್ಕೆಗೆ ಮೊರೆಹೋದೆ. ವೈಎನ್ಕೆ ಅವರ ಎಂದಿನ ಅರ್ಧ-ಮರ್ಧ ಶಬ್ದ ನುಂಗಿ ಅರ್ಧ ಉಗುಳುತ್ತ ಮಾತನಾಡುವ ಶೈಲಿಯಲ್ಲಿ No, no, that will be stupid; The film will become a laughing stock ಎಂದು ಹೇಳಿ ದೇವಿಯನ್ನು ಚಿತ್ರದಿಂದ ಹೊರತಳ್ಳಿಬಿಟ್ಟರು.
ಆಮೇಲೆ ಪಟ್ಟಾಭಿ ತನ್ನ ಸಹನಿರ್ದೇಶಕನಾಗಿ ಸಿಂಗೀತಂ ಶ್ರೀನಿವಾಸರಾವ್ ಎಂಬ ತರುಣನನ್ನು ಕರೆದು ತಂದ. ಅವನು ಮಾಧ್ವ, ಅಲ್ಲದೆ ವ್ಯವಸಾಯದಲ್ಲಿ ದುಡಿದ ಹಿನ್ನೆಲೆಯಿದ್ದ ವ್ಯಕ್ತಿ. ಆದ್ದರಿಂದ ಉಪಯುಕ್ತನಾಗಬಲ್ಲವನಾದರೂ ಅವನಿಗೂ ಕನ್ನಡ ಬರುತ್ತಿರಲಿಲ್ಲ.
ಅಂದರೆ ಪಟ್ಟಾಭಿ, ಸಿಂಗೀತಂ ಹಾಗೂ ಟಾಮ್ ಕೂಡಿ ಇಡಿಯ ನಿರ್ದೇಶನದ ಗುಂಪು ಕನ್ನಡವಿಹೀನವಾಯಿತು. ಆ ಬಗ್ಗೆ, ನಾನು ಒದರ್ಯಾಡಿದೆ. ಆದರೆ ಪಟ್ಟಾಭಿ ಎಂದಿನಂತೆ, ‘ಹೆದರಬೇಡ. ಅವನು ಒಳ್ಳೆಯವ, ಅನುಭವವಿದೆ’ ಎಂದು ಹೇಳಿ ನನ್ನ ಸಮಾಧಾನ ಮಾಡಿದ.
ಇದಕ್ಕೆಲ್ಲ ಎಣ್ಣೆ ಸುರಿದದ್ದು ರಾಘವೇಂದ್ರರಾವ್ ಎಂಬ ಛಾಯಾಗ್ರಾಹಕ-ಪತ್ರಕರ್ತ, ‘ಕನ್ನಡಪ್ರಭ’ದಲ್ಲಿ ‘ಸಂಸ್ಕಾರ’ ಚಿತ್ರದ ಯೋಜನೆಯನ್ನು ಕುರಿತು ಬರೆದ ಲೇಖನ. ರಾಘವೇಂದ್ರರಾವ್ ನಮ್ಮನ್ನೆಲ್ಲ ಪಟ್ಟಾಭಿಯ ಮನೆಯಲ್ಲೇ ಒಂದುಗೂಡಿಸಿ, ಸಂದರ್ಶಿಸಿ, ಫೋಟೋ ತೆಗೆದು ಲೇಖನ ಬರೆದಿದ್ದ. ಲೇಖನದ ಉದ್ದೇಶ ಇಂಥ ಎಲ್ಲ ಲೇಖನಗಳಂತೆ ಸಾರ್ವಜನಿಕರಲ್ಲಿ ನಮ್ಮ ಯೋಜನೆಯನ್ನು ಕುರಿತು ಕುತೂಹಲ-ಆಸಕ್ತಿ ಉಂಟುಮಾಡುವದೇ ಆಗಿತ್ತು. ಆದರೆ ಲೇಖನ ನಮ್ಮ ಯುನಿಟ್‌ನ ಮೇಲೆ ಬೀರಿದ ಪರಿಣಾಮ ಅನಪೇಕ್ಷಿತವಾಗಿತ್ತು. ವಿಪರೀತವಾಗಿತ್ತು.
ನಾನು ಆಗ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರೀಯ ಪಾರಿತೋಷಕ ಗೆದ್ದಿದ್ದೆ. ವಾಸುದೇವ್ ಲಲಿತಕಲಾ ಅಕಾಡೆಮಿಯ ರಾಷ್ಟ್ರೀಯ ಪಾರಿತೋಷಕ ಗೆದ್ದಿದ್ದ. ಹೀಗಾಗಿ ಕನ್ನಡ ವಾಚಕರಿಗೆ ನಮ್ಮ ಹೆಸರಾದರೂ ಗೊತ್ತಿತ್ತು. ಟಾಮ್ ಕವನ್ ಕನ್ನಡ ಚಿತ್ರದ ಇತಿಹಾಸದಲ್ಲೇ ಪ್ರಪ್ರಥಮ ವಿದೇಶೀ ಛಾಯಾಗ್ರಾಹಕನಾಗಿ ಕುತೂಹಲ ಕೆರಳಿಸುವದು ಅನಿವಾರ್ಯವಾಗಿತ್ತು. ಆದರೆ ಪಟ್ಟಾಭಿರಾಮರೆಡ್ಡಿ ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಅವನ ಬಗ್ಗೆ ‘ಒಬ್ಬ ಅಜ್ಞಾತ ತೆಲುಗು ಚಿತ್ರ ನಿರ್ಮಾಪಕ’ ಎಂದು ಬಿಟ್ಟರೆ ಕುತೂಹಲವೂ ಇರಲಿಲ್ಲ.
ಈ ವಸ್ತುಸ್ಥಿತಿ ಲೇಖನದಲ್ಲಿ ಪ್ರತಿಬಿಂಬಿತವಾಗಿ, ನನಗೆ-ವಾಸುದೇವ್‌ಗೆ ಸಿಗಬೇಕಾದುದಕ್ಕಿಂತ ಹೆಚ್ಚು ಮಹತ್ವ ಸಿಕ್ಕಂತಾಗಿ, ಇಡಿಯ ಸಾಹಸವನ್ನು ತನ್ನ ಹೆಗಲ ಮೇಲೆತ್ತಿಕೊಂಡ ಪಟ್ಟಾಭಿ ಕೊಂಚ ಮೂಲೆಗೆ ಸರಿದ. ಇದರಿಂದ ಪಟ್ಟಾಭಿಗಿಂತ ಹೆಚ್ಚಾಗಿ ಸ್ನೇಹಾ ವಿಚಲಿತಳಾದಳು. ಯೂನಿಟ್‌ನಲ್ಲಿ ಈ ಗಳಿಗೆಯಿಂದ ಕನ್ನಡ-ವಿರುದ್ಧ- ತೆಲುಗು ತಾಕಲಾಟ ಆರಂಭವಾಯಿತು.
ತಾಕಲಾಟಕ್ಕೆ ಮುಖ್ಯ ಕಾರಣವೆಂದರೆ ನಮ್ಮಲ್ಲಿ ಯಾರಿಗೂ ಒಂದು ರೂಪಕ ಚಿತ್ರ (feature film) ಮಾಡಿ ಅನುಭವವಿರಲಿಲ್ಲ. ಹೀಗಾಗಿ ಯಾವುದೇ ಚಿತ್ರೀಕರಣದಲ್ಲಿ ಅನಿವಾರ್ಯವಾಗಿ ಏಳುವ ಸಣ್ಣ-ಪುಟ್ಟ ಸಮಸ್ಯೆಗಳೆಲ್ಲ ನಮಗೆ ಹಿರಿಯ ಪ್ರಮಾದಗಳಾಗಿ ಕಂಡವು. ಏನೋ ತಪ್ಪಾಗಿದೆ ಎನಿಸಿದಾಗ ಅದರ ಬಗ್ಗೆ ಚರ್ಚೆಯಾಗಿ ಅದನ್ನು ಹೇಗೆ ನೀಗಿಸಬಹುದು ಎಂದು ನಿರ್ಣಯವಾಗುವ ಬದಲಾಗಿ ತಪ್ಪಿಗೆ ಹೊಣೆಗಾರ ಯಾರು? ಎಂಬ ಹುಡುಕಾಟ ಆರಂಭವಾಯಿತು. ನಮ್ಮ ಅನುಭವಹೀನ ಉತ್ಸಾಹ ಪ್ರಮಾಣ ಮೀರಿದ ದೂರುಗಳಲ್ಲಿ ಪರ್ಯವಸಾನವಾಗತೊಡಗಿತು. ಸಮಸ್ಯೆಯ ಬುಡ-ತುದಿ ಎರಡೂ ಗೊತ್ತಿಲ್ಲದಿದ್ದಾಗ ಸಮಸ್ಯೆಯಿದ್ದದ್ದು ದೋಷವಾಗಹತ್ತಿತ್ತು. ಬೆನ್ನಮರೆಯ ಕಚ್ಚಾಟಕ್ಕೆ ಕಾರಣವಾಗತೊಡಗಿತು.
ಈ ವಿಷಯದಲ್ಲಿ ನಮ್ಮಲ್ಲಿ ಸ್ವಲ್ಪ ಅನುಭವವಿದ್ದ ವ್ಯಕ್ತಿ ಎಂದರೆ ಟಾಮ್ ಕವನ್ ಒಬ್ಬನೇ. ಅವನು ಕಾಮನ್‌ವೆಲ್ತ್ ಡಾಕ್ಯುಮೆಂಟರಿ ಫಿಲ್ಮ್ ಸಂಸ್ಥೆಗಾಗಿ ಸಾಕ್ಷ್ಯಚಿತ್ರಗಳ ಛಾಯಾಗ್ರಾಹಕನಾಗಿ ದುಡಿದಿದ್ದ. ನಾನು ಅವನ ಜೊತೆಗೆ ಮಾತನಾಡುವಾಗ, ‘ಈಗ ನಮ್ಮಲ್ಲಿ ತುಯ್ತ-ತಾಕಲಾಟ ಆರಂಭವಾಗಿದೆ, ನಿಜ. ಆದರೆ ಚಿತ್ರೀಕರಣ ಆರಂಭವಾದ ಬಳಿಕ ಅದೆಲ್ಲ ಮಾಯವಾಗೇ ಆಗತದೆ’, ಎಂದಾಗ ಟಾಮ್ ಅತ್ಯಂತ ಗಂಭೀರವಾಗಿ, ‘ಎಲ್ಲ ಚಿತ್ರಪಟ ಯೂನಿಟ್‌ಗಳಲ್ಲಿ ಇಂಥ ಕಿರಿಕಿರಿ ಇದ್ದೇ ಇರುತ್ತದೆ. ದುರ್ದೈವದ ಮಾತೆಂದರೆ ಚಿತ್ರೀಕರಣ ಆರಂಭವಾದ ಬಳಿಕ ಅದು ಹೆಚ್ಚಾಗುತ್ತದೆ ಹೊರತು ಕಡಿಮೆಯಾಗುವದಿಲ್ಲ’ ಎಂದು ನುಡಿದ. ಭವಿಷ್ಯವಾಣಿ ನಾವೆಣಿಸಿದ್ದಕ್ಕಿಂತ ಕಠೋರವಾಗಿ ನಿಜವಾಯಿತು. ‘ಸಂಸ್ಕಾರ’ದ ಯೋಜನೆ ಅರ್ಧದಲ್ಲೇ ಕುಸಿದು ಬೀಳದೆ ಸಜೀವ ಹೊರಬಂದದ್ದರ ಮುಖ್ಯ ಶ್ರೇಯಸ್ಸು ಟಾಮ್ ಕವನ್‌ಗೆ ಸೇರಬೇಕು.
ಚಿತ್ರೀಕರಣದ ದಿನಾಂಕಗಳು ನಿಗದಿಯಾದವು. ನಾನು ಆಫೀಸಿನಲ್ಲಿ ಎರಡು ವರ್ಷದ ‘ವಾರ್ಷಿಕ ರಜ’ ಕೂಡಿ ಹಾಕಿ ಚಿತ್ರೀಕರಣಕ್ಕಾಗಿ ಆರು ವಾರಗಳನ್ನು ಕಾದಿರಿಸಿದ್ದೆ. ನಾನು, ಪಟ್ಟಾಭಿ, ವಾಸುದೇವ್ ಹಾಗೂ ಟಾಮ್ ನನ್ನ ಎರಡು ಕದಗಳ ಹೆರಾಲ್ಡ್ ಕಾರಿನಲ್ಲಿ ಹೊರಟೆವು. ಆ ಯುಗದಲ್ಲಿ ಪೇಟೆಯಲ್ಲಿ ಸಿಗುತ್ತಿದ್ದ ಮೂರೇ ಮೂರು ಮಾದರಿಗಳಲ್ಲಿ ಹೆರಾಲ್ಡ್ ಅತ್ಯಂತ ನಾಜೂಕು ವಾಹನವಾಗಿತ್ತು.
ದೂರ ಪ್ರವಾಸದ ಒರಟು ಬಳಕೆಗೆ ಅಂಬಾಸೆಡರ್ ಸಮರ್ಪಕವಾಗಿದ್ದು, ಫಿಯಾಟ್ ಕಾರು ಊರಲ್ಲಿ ಓಡಾಡುವ ಟ್ಯಾಕ್ಸಿಗಳಿಗಾಗಿ ಲೋಕಪ್ರಿಯವಾಗಿತ್ತು. ಹೆರಾಲ್ಡ್ ಕಾರು ಎಂದರೆ ಆಫೀಸಿಗೆ ಹೋಗುವ ಮೇಲಧಿಕಾರಿಗಳಿಗೆ ಅಥವಾ ಸಂಜೆ ಪಾರ್ಟಿಗೆ ಹೋಗುವಾಗ ದಂಪತಿಗಳು ಮುಂಭಾಗದಲ್ಲಿ ಕುಳಿತು ಮಕ್ಕಳನ್ನು ಕದವೇ ಇಲ್ಲದ ಹಿಂಭಾಗದಲ್ಲಿ ಸುಶಿಕ್ಷಿತವಾಗಿ ಹಾಕಲಿಕ್ಕೆ ಯೋಗ್ಯವಾದ ಶಿಷ್ಟ ಕಾರಾಗಿತ್ತು. ಅದನ್ನು ಚಿತ್ರೀಕರಣದ ಹೊತ್ತಿಗೆ ನಿರ್ಮಿತಿ ವಾಹನವಾಗಿ ಬಳಸುವದು, ಆ ವಾಹನಕ್ಕೆ ನಾನು ಮಾಡಿದ ಅಕ್ಷಮ್ಯ ಹಿಂಸೆ ಎನ್ನಬೇಕು.
‘ಆಡಾಡತ ಆಯುಷ್ಯ’ ಗ್ರಂಥವನ್ನು ಮನೋಹರ ಗ್ರಂಥಮಾಲಾ, ಧಾರವಾಡ ಪ್ರಕಟಿಸಿದೆ.
(‘ಪ್ರಜಾವಾಣಿ’ ಮುಕ್ತಛಂದ ಪುರವಣಿಯಲ್ಲಿ ಜನವರಿ 3, 2011ರಂದು ಪ್ರಕಟವಾದ ಬರಹ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.