ADVERTISEMENT

ಸಾರಂಗಿ ವಿಹಾರ

ಸಿ.ಎಸ್.ಸರ್ವಮಂಗಳಾ
Published 5 ಜುಲೈ 2014, 19:30 IST
Last Updated 5 ಜುಲೈ 2014, 19:30 IST

ಸಾರಂಗಿ ವಾದ್ಯದ ನಾದ ನೇರ ಹೃದಯಕ್ಕೇ ನಾಟುತ್ತದೆ. ಆಡುಮಾತಿನ ಒಂದು ನುಡಿಗಟ್ಟು ಬಳಸುವುದಾದರೆ ಕರುಳನ್ನು ಕರಗಿಸುವಂಥ ತೀವ್ರ ಆಳ, ವಿಶಿಷ್ಟ ಆರ್ತತೆ ಅದಕ್ಕಿದೆ. ಆಡಿನ ಕರುಳಿನಿಂದ ತಯಾರಿಸಲಾದ ತಂತಿಗಳನ್ನು ಈ ವಾದ್ಯದಲ್ಲಿ ಅಳವಡಿಸಿರುವುದರಿಂದ ಇದು ಸಹಜವೇನೋ!

ಭಾವನಾತ್ಮಕತೆಯ ಸಾಕಾರ ರೂಪವಾಗಿ ನಿಲ್ಲಬಲ್ಲ ಈ ತಂತಿವಾದ್ಯ ಸೋಲೋ ವಾದ್ಯವಾಗಿ ಹಾಗೂ ಸಹಕಾರಿ ವಾದ್ಯವಾಗಿ ಶತಮಾನಗಳಿಂದ ನುಡಿಯುತ್ತ ಬಂದಿದೆ. ನೇಪಾಳದ ಈ ಪಾರಂಪರಿಕ ತಂತಿವಾದ್ಯ ಗೈನ್ ಅಥವಾ ಗಾಂಧರ್ಭ ಬುಡಕಟ್ಟಿನ ಜಾನಪದ ಸಂಗೀತವಾದ್ಯವಾಗಿದೆ. ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲಿ ಬೇರೆಯದೇ ಸ್ವರೂಪ ಪಡೆದುಕೊಂಡು ಶಾಸ್ತ್ರೀಯ ಸಂಗೀತ ಪ್ರಸ್ತುತಿಗೆ ಸಾಧನವಾಗಿದೆ. ತವಾಇಫ಼ಾ ಪರಂಪರೆಯಲ್ಲಿ, ಸಿನಿಮಾ ಹಾಡುಗಳಲ್ಲಿ, ಹಿನ್ನೆಲೆ ಸಂಗೀತದಲ್ಲಿ ಇದನ್ನು ಒಲಿಸಿಕೊಂಡಿರುವ ಪರಿ ಅನನ್ಯ.

ಆಧುನಿಕ ಯುಗದಲ್ಲಿ, ಕಛೇರಿ ಆವರಣದಲ್ಲಿ ಸಾರಂಗಿಯ ಜನಪ್ರಿಯತೆ ತಗ್ಗಿದ್ದರೂ, ಪಂಡಿತರ, ಸಂಗೀತಾಸಕ್ತರ ಖಾಸಗಿ ಭೂಮಿಕೆಯಲ್ಲಿ ಸಾರಂಗಿಗೊಂದು ವಿಶಿಷ್ಟ ಸ್ಥಾನವಿದ್ದೇ ಇದೆ. ವಯೊಲಿನ್, ಹವಾಯನ್ ಗಿಟಾರ್‌ಗಳ ಹಾಗೆ ಸಾರಂಗಿಗೂ ಸ್ವರಗಳ ನಿಲುಗಡೆ ಸೂಚಿಸುವ ಮನೆಗಳ ಹಂಗಿಲ್ಲ. ಹೀಗಾಗಿ ಹಾಡುವಂತೆಯೇ ನುಡಿಸುವುದಕ್ಕೆ, ಗಾಯಕಿ ಅಂಗದ ಪ್ರತಿಪಾದನೆಗೆ ಹೆಚ್ಚು ಅನುಕೂಲ.

ಮಾನವ ದನಿಗೆ ಗಾಯನದ ಚಲನೆಗೆ ಅತ್ಯಂತ ನಿಕಟ ಬಂಧು ಸಾರಂಗಿಧ್ವನಿ. ಸಾರಂಗಿಯ ಹಾಡುವ ಗುಣವೆಂದರೆ ವಾದ್ಯಸಂಗೀತದ ನುಡಿಸಾಣಿಕೆಯ ಕ್ರಮದ ಪರಿಧಿಯೊಳಗೇ ಖಯಾಲಿನ ಸೂಕ್ಷ್ಮಗಳನ್ನು ಹಿಡಿಯುವ ಸಿತಾರಿನ ಗಾಯಕಿ ಅಂಗದ ಹಾಗಲ್ಲ. ಹಾಡಿನ ಭಾವ, ಪದ ಎಲ್ಲವೂ ಸಾರಂಗಿಯೊಳಗೆ ಸಂಪೂರ್ಣವಾಗಿ ಹುದುಗಿರುತ್ತವೆ. ಸಾಮಾನ್ಯವಾಗಿ ಸಾರಂಗಿವಾದಕರು ಗಾಯಕರೂ ಆಗಿರುತ್ತ ಪಾರಂಪರಿಕ ಬಂದಿಷ್‌ಗಳ ಜೊತೆಗೆ, ಠುಮ್ರಿ ಆದಿಯಾಗಿ ಎಲ್ಲ ಬಗೆಯ ಗಾಯನ ಪ್ರಕಾರಗಳಲ್ಲಿ ಪರಿಣತಿ ಹೊಂದಿರುತ್ತಾರೆ.
ರಾಗ–ವರ್ಣಗಳ ವಿಹಾರ

ಸಾರಂಗಿ ಎಂದರೆ ಸೌ ರಂಗ್ ಅಥವಾ ನೂರಾರು ರಾಗಗಳು ಎಂದರ್ಥ. ಬಣ್ಣಗಳ ವಿಹಾರವನ್ನೇ ಮನಸ್ಸಿಗೆ ತರುವ ಈ ಹೆಸರು ಹಲವು ಸಂಗೀತ ಶೈಲಿಗಳಿಗೆ ಒಗ್ಗಿಕೊಳ್ಳುವ, ಹಲವಾರು ರಾಗಭಾವ ಏರಿಳಿತಗಳಿಗೆ, ನಾದಸೂಕ್ಷ್ಮಗಳಿಗೆ, ಭಾವನಾತ್ಮಕ ಶೋಧನೆಗೆ ಅನುವು ಮಾಡಿಕೊಡುವ ಈ ವಾದ್ಯದ ಸಾಮರ್ಥ್ಯಕ್ಕೆ ತಕ್ಕುದಾಗಿದೆ.

18–19ನೇ ಶತಮಾನದಲ್ಲಿ ಸಂಗೀತ ಲೋಕದಲ್ಲಿ ಅನಿವಾರ್ಯ ಅಂಗವೆನಿಸಿ ಪ್ರಮುಖ ಸ್ಥಾನದಲ್ಲಿದ್ದ ಸಾರಂಗಿ ವಾದ್ಯವು ಹಾರ್ಮೋನಿಯಂ ಆ ಸ್ಥಾನವನ್ನು ಆಕ್ರಮಿಸುವವರೆಗೆ, ಮಧ್ಯಮವರ್ಗದ ಶಿಷ್ಟಾಚಾರ ಸಂಗೀತಲೋಕದಲ್ಲಿ ಮೇಲುಗೈ ಪಡೆಯುವವರೆಗೆ ರಾರಾಜಿಸಿತ್ತು. ಸಿತಾರ್–ಸರೋದ್‌ಗಳು ಕೂಡ ಅಷ್ಟಾಗಿ ಹೆಸರು ಮಾಡದೆ ಇದ್ದ ಕಾಲದಲ್ಲೇ ಸಾರಂಗಿಯ ರಾಗರಂಗು ಎಲ್ಲೆಡೆ ಹರಡಿತ್ತು. ಆ ಕಾಲದ ಪ್ರಾತಿನಿಧಿಕ ವರ್ಣಚಿತ್ರಗಳನ್ನು ಗಮನಿಸಿದರೆ ಸಾರಂಗಿ ಮತ್ತು ಸಾರಂಗಿವಾದಕರ ಹಾಜರಿ ಇದ್ದೇ ಇರುತ್ತದೆ. ಮುಂದೆ ವಾದ್ಯದ ತಾಂತ್ರಿಕ ಮಿತಿಗಳನ್ನು ಬಗೆಹರಿಸಿಕೊಂಡು 20ನೇ ಶತಮಾನದ ನಂತರ ಸಿತಾರ್-ಸರೋದ್‌ಗಳು ದಾಪುಗಾಲು ಹಾಕಿ ಮುನ್ನಡೆದಿದ್ದು ಚರಿತ್ರೆ.

ಸಾಮಾನ್ಯವಾಗಿ ಸಾರಂಗಿ ಕಲಾವಿದರ ವಾದ್ಯಗಳು 50ರಿಂದ 100 ವರ್ಷಗಳಷ್ಟು ಹಳೆಯವು. ಒಂದೊಂದು ವಾದ್ಯವೂ ತನ್ನ ಅಂತರಂಗದಲ್ಲಿ ಇತಿಹಾಸವನ್ನೇ ತುಂಬಿಕೊಂಡಿರುತ್ತದೆ. ಪ್ರಧಾನವಾಗಿ ಮೀರಟ್, ಮುರಾದಾಬಾದ್‌ನಂಥ ಕೇಂದ್ರಗಳಲ್ಲಿ ತಯಾರಾಗುವ ವಾದ್ಯವಿದು. ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸುವಾಗ, ಕೋಮು ದಳ್ಳುರಿಯಂಥ ಸಮಸ್ಯೆ ಇಂಥ ಕಲಾತ್ಮಕ ಚಟುವಟಿಕೆಗಳಿಗೆ ಭಂಗ ತರುತ್ತದೇನೋ ಎಂಬ ಆತಂಕವೂ ಉಂಟಾಗುತ್ತದೆ. ವಾದ್ಯ ಸಂರಚನೆ ತೀರ ಸಂಕೀರ್ಣವಾದುದು.

ಸಾರಂಗಿಯ ತಯಾರಿಕೆ ಒಂದು ಬಗೆಯ ಸವಾಲಾದರೆ, ಅದರ ನುಡಿಸುವಿಕೆಯಂತೂ ಸುದೀರ್ಘ ಕಸರತ್ತನ್ನು ಕಡ್ಡಾಯವಾಗಿ ಬೇಡುತ್ತದೆ. ಬೆರಳ ತುದಿ ಮತ್ತು ಉಗುರಿನ ಬುಡಭಾಗದಿಂದ ನುಡಿಸುವ ಅಪರೂಪ ವಾದನಕ್ರಮದ ಸಾರಂಗಿಯಲ್ಲಿ ಮೂರು ಮುಖ್ಯ ತಂತಿಗಳೊಂದಿಗೆ ನಾಲ್ಕು ವಿವಿಧ ಹಂತಗಳಲ್ಲಿ ಜೋಡಿಸಲಾದ ಸುಮಾರು 35ರಿಂದ 40ರಷ್ಟು ಲೋಹದ ತರಬ್ ಅಥವಾ ಅನುರಣಿಸುವ ತಂತಿಗಳಿರುತ್ತವೆ. ನುಡಿಸುವುದು ಮಾತ್ರವಲ್ಲ ಶ್ರುತಿ ಮಾಡುವುದು ಕೂಡ ಸೂಕ್ಷ್ಮಪರಿಶ್ರಮ ಬೇಡುವ ಕೆಲಸ. ನಿಖರವಾಗಿ ಶ್ರುತಿ ಮಾಡಿದ ಸಾರಂಗಿಯೊಂದು ಜೇನುಗೂಡಿನ ಝೇಂಕಾರವನ್ನು ಹೊಮ್ಮಿಸಬಲ್ಲದು ಎನ್ನುವ ಮಾತಿದೆ.

ಸಾರಂಗಿ ವಾದ್ಯ, ಸಾರಂಗಿ ಅಭ್ಯಾಸ, ಸಾರಂಗಿ ಕಛೇರಿ ಎಲ್ಲವೂ ವಿರಳವೇ. ಅಪರೂಪದ ವಾದ್ಯಗಳ ಸಾಲಿನಲ್ಲಿ, ನಶಿಸಿ ಹೋಗುತ್ತಿರುವ ವಾದ್ಯಗಳ ಸಾಲಿನಲ್ಲಿ ಸಾರಂಗಿಗೆ ಖಾಯಂ ಸ್ಥಾನವುಂಟು. ಭಾರತವನ್ನೆಲ್ಲಾ ಸೋಸಿದರೂ ಉಸ್ತಾದ್ ಫಯ್ಯಾಜ್‌ ಖಾನರು ಹೇಳುವಂತೆ ಬೆರಳೆಣಿಕೆಯಷ್ಟು ಕಲಾವಿದರು, ಗುರು-ಶಿಷ್ಯರು ಕಾಣಸಿಗುತ್ತಾರೆ. ತಲತಲಾಂತರ ಹಾಯುವ ಈ ಕಲಿಕೆ ಕಲಿಸುವಿಕೆಯನ್ನು ಇಂದಿನ ಯುಗದಿಂದ ಭವಿಷ್ಯಕ್ಕೆ ಒಯ್ಯಬೇಕಾದ ಜರೂರು ಜವಾಬ್ದಾರಿ ಫಯ್ಯಾಜ್‌ ಖಾನರ ಹೆಗಲ ಮೇಲಿದೆ.

ಫಯ್ಯಾಜ್‌ರ ಸಾರಂಗಿಯಾತ್ರೆ
ಕಿರಾನಾ ಘರಾಣೆಯ ಸಂಗೀತ ಕಲಾವಿದರ ಮನೆತನಕ್ಕೆ ಸೇರಿದ ಫಯ್ಯಾಜ್‌ ಖಾನರು ಒಂಬತ್ತನೇ ತಲೆಮಾರಿನ ಪ್ರತಿನಿಧಿಯಾಗಿ ಸಂಗೀತಯಾತ್ರೆಯನ್ನು ಮುಂದೊಯ್ಯುತ್ತಿದ್ದಾರೆ. ತಂದೆ ಉಸ್ತಾದ್ ಅಬ್ದುಲ್ ಖಾದರ್ ಖಾನರು ಇವರ ಮೊದಲ ಗುರುಗಳು. ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರಿಗೆ ಸದಾ ಸಾರಂಗಿ ಸಹಕಾರ ನೀಡುತ್ತ ಸಂಗೀತಾನುಭವ ಹಂಚಿಕೊಂಡ ಹಿರಿಯರು. ಗಾಯನ, ಸಾರಂಗಿ ವಾದನ, ಗುರು ಬಸವರಾಜ ಬೆಂಡಿಗೇರಿಯವರಲ್ಲಿ ಕಲಿತ ತಬಲಾವಾದನ, ಎಲ್ಲದಕ್ಕೂ ತೆರೆದುಕೊಂಡ ಫಯ್ಯಾಜ್‌ರ ಸಂಗೀತಮನಸ್ಸು ಸಾರಂಗಿಯಲ್ಲೇ ನೆಲೆನಿಲ್ಲಬೇಕಾದ ಅಗತ್ಯ ಸಂಗೀತಲೋಕಕ್ಕಿದೆ.

ಎಲ್ಲ ಆಯಾಮಗಳೂ ಒಂದಕ್ಕೊಂದು ಪೂರಕ ಎಂಬ ವಾದವನ್ನು ಒಪ್ಪುತ್ತಲೇ ಸಾರಂಗಿ ಅವರ ಪರಮ ಆಸಕ್ತಿಯ ಕೇಂದ್ರವಾಗಬೇಕೆಂಬುದು ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಸಾರಂಗಿ ಭವಿಷ್ಯದ ಸಲುವಾಗಿ ಮುಖ್ಯ. ಇಂಥ ಜವಾಬ್ದಾರಿಯನ್ನು ಸಮರ್ಥವಾಗಿ ಪೂರೈಸುತ್ತಿದ್ದೇನೆ, ಇಗೋ ಎನ್ನುವಂತೆ ಅವರ ಮಗ ಸರ್‌ಫರಾಜ್‌ ಖಾನ್ ಸಾರಂಗಿವಾದನದಲ್ಲಿ ಬೆಳೆದು ನಿಂತಿದ್ದಾರೆ. ಸಾರಂಗಿ ಪರಂಪರೆಯನ್ನು ಸಶಕ್ತವಾಗಿ ಭವಿಷ್ಯಕ್ಕೆ ಕೊಂಡೊಯ್ಯುವ ಸಕಲ ಲಕ್ಷಣಗಳನ್ನೂ ಎಳೆಯ ವಯಸ್ಸಿನಲ್ಲೇ ಕಛೇರಿಯಿಂದ ಕಛೇರಿಗೆ ಖಾತರಿಯಾಗಿ ತೋರುತ್ತಿದ್ದಾರೆ. ಸರ್‌ಫರಾಜ್‌ ಅವರನ್ನು ಯುವ ತಲೆಮಾರಿಗೆ ಸೇರಿದ ಸಾರಂಗಿಲೋಕದ ಅಶಾಕಿರಣ ಎಂದೆಲ್ಲ ಬಣ್ಣಿಸುತ್ತಾರೆ. ಬರೀ ಕಿರಣವಲ್ಲ, ಉಜ್ವಲ ನಕ್ಷತ್ರದ ಎಲ್ಲ ಹೊಳಪೂ ಅವರ ಮನೋಧರ್ಮಕ್ಕಿದೆ.

ರವಿಶಂಕರ್ ಸಿತಾರ್ ಸಂಗೀತವನ್ನು ಗಡಿ ದಾಟಿಸಿ ವಿದೇಶಗಳಿಗೆ ಕೊಂಡೊಯ್ದಂತೆ ಸಾರಂಗಿಯ ರಾಯಭಾರಿ ಕೆಲಸವನ್ನು ಮಾಡಿದ ಪಂಡಿತ್ ರಾಮನಾರಾಯಣ್ ಸಾರಂಗಿಯ ಹೆಸರಿನೊಂದಿಗೆ ಬೆರೆತುಹೋಗಿದ್ದಾರೆ. ಈ ಹೆಸರಾಂತ ಸೋಲೋ ಸಾರಂಗಿ ಕಲಾವಿದರ ಶಿಷ್ಯರಾಗಿ ಫಯ್ಯಾಜ್‌ ಮತ್ತು ಸರ್‌ಫರಾಜ್‌ ಸಂಗೀತ ಸಾಧನೆಯ ಜೊತೆಜೊತೆಗೇ ಭಾರತದ ಧರ್ಮಾತೀತ ಬಂಧಗಳ, ಆರೋಗ್ಯವಂತ ಸಂಸ್ಕೃತಿಯ ಪ್ರತೀಕಗಳಾಗಿ ಅರಳಿದ್ದಾರೆ. ವೈಯಕ್ತಿಕ ಆಘಾತಗಳನ್ನು ಬಗಲಿಗೇರಿಸಿಕೊಂಡು, ಕಂಗೆಟ್ಟ ಮನಸ್ಸುಗಳನ್ನು ಸಂಗೀತದಲ್ಲೇ ನೆಟ್ಟು, ಹೊಸ ಹುಟ್ಟು ಪಡೆದವರಂತೆ ನುಡಿಸುತ್ತಿರುವ ಈ ಎರಡು ತಲೆಮಾರಿನ ಕಲಾವಿದರ  ಸಾರಂಗಿಯಾತ್ರೆ ನಿರಂತರ ಸಾಗಲಿ, ಸಾಗುತ್ತ ಬೆಳೆದು ಬೆಳಗಲಿ.

‘ಸಪ್ತಕ’ದೊಳಗೆ ಸಾರಂಗಿ
ಕನ್ನಡ ಆವರಣದ ನಿಜ ಕಲಾವಿದರನ್ನು ಗುರುತಿ­ಸುವುದಲ್ಲದೆ, ಅಚ್ಚುಕಟ್ಟಾದ ಕಾರ್ಯಕ್ರಮಗಳ ಮೂಲಕ ಶುದ್ಧಾಂಗ ಸಂಗೀತ ಕೇಳಿಸುತ್ತ ಬಂದಿರುವ ಸಂಸ್ಥೆ ‘ಸಪ್ತಕ’. ಬಹುಕಾಲದ ನಂತರ ಬೆಂಗಳೂರಿನ ಸಂಗೀತ ಕೇಳುಗರಿಗೆ ಸಾರಂಗಿ ಕಛೇರಿಯ ಸದವಕಾಶ ಒದಗಿಸಿ ‘ಸಪ್ತಕ’ ಬಳಗ ಸಂಗೀತಪ್ರಿಯರ ಮೆಚ್ಚುಗೆ ಗಳಿಸಿದೆ. ಭಾರತೀಯ ವಿದ್ಯಾ ಭವನದ ಸಹಯೋಗದಲ್ಲಿ ಇತ್ತೀಚೆಗೆ ಈ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಸಂಗೀತ ಮೂಲದ ವಾಚಸ್ಪತಿ ರಾಗ ಹಂಸಧ್ವನಿ, ಆಭೋಗಿ ಇಂಥ ರಾಗಗಳ ಹಾಗೆ ಹಿಂದೂಸ್ತಾನಿ ಕೇಳುಗರ ಮನಸ್ಸಿನಲ್ಲಿ ಸಾಕಷ್ಟು ನೆಲೆ ನಿಂತಿಲ್ಲವೆಂದೇ ಹೇಳಬಹುದು. ತಾಂತ್ರಿಕವಾಗಿ ಯಮನ್ ರಾಗಕ್ಕೆ ಹತ್ತಿರವಿದ್ದು ಸರಸ್ವತಿ ರಾಗವನ್ನು ಹೋಲುವ ವಾಚಸ್ಪತಿ ಕಲ್ಯಾಣ್ ಕುಟುಂಬಕ್ಕೆ ಸೇರಿದ ರಾಗ. ಇನ್ನೂ ಪ್ರಾಯೋಗಿಕ  ಅನಿಶ್ಚಿತ­ತೆಯಿಂದ ಮುಕ್ತಿ ಪಡೆದಿಲ್ಲದ ರಾಗವೆಂದೇ ಪರಿಗ­ಣಿತವಾಗಿದೆ.

ಪಂಡಿತ್ ರವಿಶಂಕರ್, ಬನಾರಸ್ಸಿನ ಪಂಡಿತ್ ಅಮರನಾಥ ಮಿಶ್ರಾರಂತಹ ಸಿತಾರ್ ಪಟುಗಳು, ಸಂತೂರ್ ದಿಗ್ಗಜ ಶಿವಕುಮಾರ್ ಶರ್ಮ ಎಲ್ಲರೂ ಈ ರಾಗದೊಂದಿಗೆ ಸಂವಾದ ಮಾಡಿದ್ದಾರೆ. ಉಸ್ತಾದ್ ವಿಲಾಯತ್ ಖಾನ್ ಸಾಹೇಬರು ‘ಚಾಂದನಿ ಕಲ್ಯಾಣ್’ ಎಂದು ಹೆಸರಿಸಿ ಆ ರಾಗಕ್ಕೊಂದು ಹೊಸ ರೂಪ ನೀಡುವ ಪ್ರಯತ್ನವನ್ನೂ ಮಾಡಿದ್ದರು. ಹಿಂದೂಸ್ತಾನಿ ಪರಂಪರೆಗೆ ಇನ್ನೂ ಸಂಪೂರ್ಣವಾಗಿ ಆಮದುಗೊಂಡಿಲ್ಲದ ಈ ಪಂಡಿತ ವಲಯದ ರಾಗಕ್ಕೆ ಬೈಠಕ್ಕುಗಳಲ್ಲಿ ಪೂರ್ಣ ಯಶಸ್ಸು ದೊರಕೀತು. ಫಯ್ಯಾಜ್‌ ಖಾನರು ಅಪರೂಪದ ಸಾರಂಗಿ ಕಛೇರಿಗೆ, ಅವರು ಮೈಸೂರಿನಲ್ಲಿ ಹಾಡಿದ ಅಪ್ರತಿಮ ಬಾಗೇಶ್ರೀಯಂಥ ಸ್ವೀಕೃತ ರಾಗವೊಂದನ್ನು ನುಡಿಸಿದ್ದರೆ ಸಾರಂಗಿ ಕಾರ್ಯಕ್ರಮ ಇನ್ನೂ ಹೆಚ್ಚು ತಲ್ಲೀನ­ಕಾರಿಯಾಗುತ್ತಿತ್ತೇನೋ ಎನಿಸಿತು.

ಸಾರಂಗಿವಾದನ ಎಂದರೆ ಸಾರಂಗಿಯ ಮೂಲಕ ಹಾಡುವುದೇ. ಪಂಡಿತ್ ರಾಜೀವ ತಾರಾನಾಥರ ಮಾತಿನಲ್ಲಿ ಹೇಳುವುದಾದರೆ, ಗಾಯನದ ಪ್ರಸ್ತುತಿಯ ಮಾದರಿಯಲ್ಲೇ ರಾಗದ ಹರಡುವಿಕೆ. ವಿಲಂಬಿತ್ ಬಂದಿಷ್ ನೈನಾ ಮೋರೆ ಅಬ್ ಲಾಗೀರೇ ನ ಚೌಕಟ್ಟಿನಲ್ಲಿ ವಾಚಸ್ಪತಿ ರಾಗವನ್ನು ಕಲಾವಿದರು ನಯವಾಗಿ ಚುರುಕಾಗಿ ವಿಸ್ತರಿಸಿದರು.

ದೃತ್ ತೀನ್‌ತಾಲ್‌ನಲ್ಲಿ ಪೀಲು ರಾಗದ ಠುಮ್ರಿ ಬೇದರ್ದಿ ಸೈಯ್ಯಾಂ ಆಜಾ ಆಜಾ ಮತ್ತು ಕಂಗಳಿದ್ಯಾತಕೋ ಕಾವೇರಿರಂಗನ ನೋಡದಾ... ಎಂಬ ಶ್ರೀಪಾದರಾಯರ ಕೃತಿಯನ್ನು ಮನತಾಕುವಂತೆ ನುಡಿಸಿದರು. ಆತ್ಮನಿವೇದನೆಯ ಕ್ರಮದಲ್ಲಿ ಸಾರಂಗಿಯೊಳಕ್ಕೆ ಸದ್ದಿಲ್ಲದೆ ಇಳಿಯುವ ಸರ್‌ಫರಾಜ್‌, ಫಯ್ಯಾಜ್‌ ಖಾನರ ಜೊತೆಜೊತೆಗೇ ವಿನಮ್ರ ಶೈಲಿಯಲ್ಲಿ ನುಡಿಸುತ್ತ ತಂತ್ರಕಾರಿ ನಿಪುಣತೆಯ ಭಾಗವಾಗಿ ಹೊಳೆಹೊಳೆವ ತಾನ್‌ಗಳನ್ನು ಧರೆಗಿಳಿಸಿದರು. ಸಾರಂಗಿಯ ಗಾಯನಅಂಗ ಮತ್ತು ವಾದ್ಯಪ್ರಸ್ತುತಿ ಎರಡಕ್ಕೂ ಹೊಂದುವಂಥ ವಿನ್ಯಾಸಗಳನ್ನು ತೊಡಿಸಿದ ಪಂಡಿತ್ ವಿಶ್ವನಾಥ್ ನಾಕೋಡರ ತಬಲಾ ಕೆಲಸ ಲವಲವಿಕೆಯ ಯಶಸ್ವೀ ವಾದನವೆನಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.