ನಾಡಿಗೆಲ್ಲಾ ಭಯಂಕರ ಬರ ಬಂದುಬಿಟ್ಟಿತ್ತು. ಕಾಡುಪ್ರಾಣಿಗಳೂ ಕುಡಿಯಲು ನೀರೂ ಇಲ್ಲದೆ ತತ್ತರಿಸಿ ಹೋದವು. ಕಾಡಿನಲ್ಲಿ ಅತಿಬುದ್ಧಿವಂತನೆಂದು ಹೆಸರು ಪಡೆದಿದ್ದ ನರಿ, ನಾಡಿನ ಜನರೆಲ್ಲಾ ನಗರಕ್ಕೆ ವಲಸೆ ಹೋಗಿ ಅನ್ನ ನೀರು ಸಂಪಾದಿಸುತ್ತಿರುವ ವಿಷಯ ತಿಳಿದು, ತಾನೂ ನಗರಕ್ಕೆ ವಲಸೆ ಬಂದುಬಿಟ್ಟಿತು. ಅಲ್ಲಿ ಉಳಿದುಕೊಳ್ಳುವುದೆಲ್ಲಿ? ಯಾರನ್ನು ನೋಡಬೇಕು? ಒಂದೂ ತಿಳಿಯದೆ ಅಲೆಯುತ್ತಿದ್ದಾಗ, ಕರಡಿಯಣ್ಣ ಕಣ್ಣಿಗೆ ಬಿತ್ತು.
ಹತ್ತು ವರ್ಷಗಳ ಹಿಂದೆ ತಾನು ಮೋಸ ಮಾಡಿದೆನೆಂದು, ‘ನಿನ್ನ ಸಹವಾಸವೇ ಬೇಡ’ ಎಂದು ಕಾಡು ಬಿಟ್ಟಿದ್ದ ಕರಡಿಯಣ್ಣನನ್ನು ನೋಡಿ ನರಿಗೆ ಸಂತೋಷವಾಯಿತು. ಕರಡಿಯಣ್ಣ ಕರೆಯದಿದ್ದರೂ, ಅದು ಬಾಡಿಗೆಗೆ ಇದ್ದ ಮನೆಗೆ ಬಂದು ಉಳಿದುಕೊಂಡಿತು! ಆದರೆ, ಕರಡಿಯಣ್ಣನಿಗೆ ಭಯ–ಬೇಸರ ಆಯಿತು. ಏಕೆಂದರೆ ನರಿಯಣ್ಣ ಬಹಳ ಬುದ್ಧಿವಂತನಾಗಿದ್ದುದಲ್ಲದೆ, ಬಹಳ ಮೋಸಗಾರನೂ ಆಗಿತ್ತು.
ಹತ್ತು ವರ್ಷಗಳ ಹಿಂದೆ, ಕರಡಿಯನ್ನು ಜೊತೆ ಸೇರಿಸಿಕೊಂಡು ವ್ಯವಸಾಯ ಮಾಡಿದ್ದ ನರಿ, ‘ಮೊದಲ ವರ್ಷ ನೆಲದೊಳಗಿನದು ನನ್ನದು, ನೆಲದ ಮೇಲಿನದು ನಿನ್ನದು’ ಎಂದು ಷರತ್ತು ಹಾಕಿ, ನೆಲಗಡಲೆ ಬೆಳೆದು, ಕಡ್ಲೆಕಾಯಿಯನ್ನು ತಾನು ತೆಗೆದುಕೊಂಡು, ಸೊಪ್ಪನ್ನು ಮಾತ್ರ ಕರಡಿಗೆ ಕೊಟ್ಟಿತ್ತು. ಬೇಸರ ಮಾಡಿಕೊಂಡಿದ್ದ ಕರಡಿಗೆ, ನರಿ ‘ಕರಡಿಯಣ್ಣ ಬೇಸರ ಏಕೆ? ಮುಂದಿನ ವರ್ಷ ನೆಲದ ಮೇಲಿನದು ನಿನ್ನದು. ಒಳಗಿನದು ನನ್ನದು’ ಎಂದು ಆಶ್ವಾಸನೆ ಕೊಟ್ಟಿತ್ತು. ಆದರೆ, ಮುಂದಿನ ವರ್ಷ ಜೋಳ ಬೆಳೆದು, ಕರಡಿಗೆ ಬೇರು ಮಾತ್ರ ಕೊಟ್ಟು ಜೋಳವನ್ನೆಲ್ಲಾ ತಾನು ತೆಗೆದುಕೊಂಡಿತ್ತು. ನರಿಯಣ್ಣನ ಮೋಸದಿಂದ ಬೇಸತ್ತ ಕರಡಿಯಣ್ಣ ಕಾಡು ಬಿಟ್ಟು ನಗರ ಸೇರಿ, ಕೊಳಾಯಿ ರಿಪೇರಿ ಮಾಡುವ ಕೆಲಸ ಮಾಡಿಕೊಂಡು ಸುಖವಾಗಿತ್ತು. ಈಗ ನಗರಕ್ಕೂ ನರಿ ಬಂದು, ‘ಏನು ಮೋಸ ಮಾಡುತ್ತದೊ?’ ಎಂಬ ಯೋಚನೆಯಿಂದ ಅದಕ್ಕೆ ನಿದ್ದೆಯೇ ಬರಲಿಲ್ಲ. ಈ ಬಾರಿ ಏನು ಮಾಡಿದರೂ ಸರಿ, ಮೋಸ ಹೋಗಬಾರದು. ಅಲ್ಲಿಯವರೆಗೆ ಅವಕಾಶವನ್ನೇ ಕೊಡದೆ, ನರಿಯನ್ನು ಅಲ್ಲಿಂದ ಓಡಿಸಬೇಕು ಎಂದು ಒಂದು ಉಪಾಯ ಮಾಡಿತು.
ರಾತ್ರಿ ಮಾತನಾಡುತ್ತಾ, ಕರಡಿ ‘ನರಿಯಣ್ಣ ನಗರದ ಬಾಳು ಸಾಕಾಗಿ ಹೋಗಿದೆ. ಇಲ್ಲಿ ಬಹಳ ಕಷ್ಟ. ನಡಿ ನಾವು ಮತ್ತೆ ಕಾಡಿಗೆ ಹೋಗೋಣ. ಅಲ್ಲಿ ಇಬ್ಬರೂ ಸೇರಿ ಹೇಗೋ ಬೆಳೆ ಬೆಳೆದು ಬಂದಿದ್ದರಲ್ಲಿ ಸುಖವಾಗಿರೋಣ’ ಎಂದಿತು. ಅದಕ್ಕೆ ನರಿ ‘ಅದೇನೊ ಸರಿ. ಆದರೆ ಅಲ್ಲಿ ನೀರೇ ಇಲ್ಲವಲ್ಲ’ ಎಂದು ಪೇಚಾಡಿತು. ಆಗ ಕರಡಿಯಣ್ಣ, ‘ಅದಕ್ಕೇಕೆ ಯೋಚನೆ ಮಾಡುತ್ತಿಯ. ನನ್ನ ಮನೆಯ ಗೋಡೆಯಲ್ಲಿ ಕೊಳಾಯಿ ಇದೆಯಲ್ಲಾ... ಅದರಲ್ಲಿ ಯಾವಾಗಲೂ ನೀರು ಬರುವುದನ್ನು ನೀನು ನೋಡಿದ್ದೀಯಲ್ಲಾ... ಅದನ್ನು ಬಿಚ್ಚಿಕೊಂಡು ಹೋಗೋಣ. ಕಾಡಿನಲ್ಲಿ ಅದನ್ನು ಯಾವುದಾದರು ಮರಕ್ಕೆ ಅಂಟಿಸೋಣ’ ಅಂದಿತು. ನರಿಯು ಖುಷಿಯಿಂದ ‘ಈ ಐಡಿಯಾ ಚೆನ್ನಾಗಿದೆ. ಈಗಲೇ ಕೊಳಾಯಿ ಬಿಚ್ಚಿಕೊ, ನಾವೀಗಲೇ ಹೊರಡೋಣ’ ಎಂದು ಅವಸರಿಸಿತು. ಆಗ ಕರಡಿಯಣ್ಣ ‘ಅಣ್ಣಾ ಆ ನೀರಿನ ಟ್ಯಾಂಕ್ ಇಟ್ಟಿದ್ದಾರಲ್ಲಾ, ಆ ಕಂಬವನ್ನು ಸ್ವಲ್ಪ ತಳ್ಳುತ್ತಾ ಇರು. ಆಗ ಕೊಳಾಯಿಯನ್ನು ಸುಲಭವಾಗಿ ಬೇಗ ಬಿಚ್ಚಬಹುದು’ ಎಂದು ಟ್ಯಾಂಕಿನಿಂದ ಕೊಳಾಯಿಯವರೆಗೆ ಬಂದಿದ್ದ ಪೈಪ್ ತೋರಿಸಿತು.
ನರಿಯಣ್ಣ ಟ್ಯಾಂಕನ್ನು ಇಟ್ಟಿದ್ದ ಕಂಬವನ್ನು ತಳ್ಳಲಾರಂಭಿಸಿತು. ಇತ್ತ ಕರಡಿಯಣ್ಣ ತನ್ನ ಮನೆ ಮಾಲೀಕ ಸಾಕಿದ್ದ ನಾಯಿಗಳ ಬಳಿ ಹೋಗಿ, ‘ಅಣ್ಣಾ ನಾಯಿಗಳಿರಾ, ಇಲ್ಲಿ ನೋಡಿ. ಯಾರೋ ಕಳ್ಳ ಬಂದು ನಿಮ್ಮ ಯಜಮಾನನ ಮನೆಯ ನೀರಿನ ಟ್ಯಾಂಕನ್ನು ತಳ್ಳಿಕೊಂಡು ಹೋಗುತ್ತಿದ್ದಾನೆ’ ಎಂದಿತು. ‘ಕಳ್ಳ’ ಎಂಬ ಶಬ್ದ ಕಿವಿಗೆ ಬಿದ್ದಿದ್ದೇ ತಡ, ನಾಯಿಗಳೆಲ್ಲಾ ಟ್ಯಾಂಕಿನ ಕಂಬವನ್ನು ತಳ್ಳುತ್ತಿದ್ದ ನರಿಯ ಮೇಲೆ ಬಿದ್ದುಬಿಟ್ಟವು. ಅವುಗಳಿಂದ ಬಿಡಿಸಿಕೊಳ್ಳುವಷ್ಟರಲ್ಲಿ ಅರೆಜೀವವಾಗಿದ್ದ ನರಿ, ಬದುಕಿದರೆ ಸಾಕು ಎಂದು ಓಡುತ್ತಾ ಮತ್ತೆ ಕಾಡು ಸೇರಿಕೊಂಡಿತು. ‘ಬುದ್ಧಿ ಯಾವಾಗಲೂ ವಂಚಕನ ಸ್ವತ್ತು ಆಗಿ ಉಳಿಯುವುದಿಲ್ಲ’ ಎಂದುಕೊಂಡ ಕರಡಿಯಣ್ಣ ತನ್ನ ಬೆನ್ನು ತಾನೇ ತಟ್ಟಿಕೊಂಡು ಸುಖವಾಗಿ ಬಾಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.