ಇದೇ ಒಂದನೇ ದಿನಾಂಕದಂದು (ಆಗಸ್ಟ್ ೧, ೨೦೧೪) ಜಾತಿ, ಸಮುದಾಯ, ಕೋಮು ಇತ್ಯಾದಿ ಯಾವುದರ ಗೊಡವೆಯೇ ಇಲ್ಲದೆ, ಅವಿನಾಭಾವದಿಂದ ಎಲ್ಲರೊಳಗೊಂದಾಗಿ ಬದುಕಿದ ಅಪೂರ್ವ ಚೇತನವೊಂದು ಕಣ್ಮರೆಯಾಯಿತು.
ಅವರು ಜನಾಬ್ ಹಿರೇಹಾಳು ಇಬ್ರಾಹಿಂ ಸಾಹೇಬ್; ಮಾಸದ ನಸುನಗೆ, ಸಜ್ಜನಿಕೆ. ವಿನೀತತೆಯಿಂದ ಎಂಬಂತೆ ತುಸುವೇ ಬಾಗಿದ ಬೆನ್ನಿನ ಆಜಾನುಬಾಹು. ಚುಟುಕಾಗಿ ಹೇಳಬೇಕೆಂದರೆ ಸರ್ವಧರ್ಮಗಳ ಒಟ್ಟು ಮೌಲ್ಯ ಮೂರ್ತಿವೆತ್ತಂತಿದ್ದರು ಅವರು. ಸಂಸ್ಕೃತಿ ಪೋಷಣೆಯ ಹೊಣೆಯರಿತ ಶ್ರೀಮಂತ. ಕಲಾವಿದರೆದುರು ನಿರಹಂಕಾರದ, ತಾನು ಇವರೆಲ್ಲರೆದುರು ಬಹಳ ಸಣ್ಣವ, ಇವರೆಲ್ಲ ನಿಜವಾದ ಬಲ್ಲಿದರು ಎಂಬರ್ಥ ಸೂಸುವ ಭಾವ ಭಂಗಿ ಅವರದು. ಎಲ್ಲಿಯೂ ಕೃತಕವೆನಿಸದ, ತೋರಿಕೆಯೆನಿಸದ ವಿನಯವದು. ಏರುದನಿಯಲ್ಲಿ ಅವರು ಮಾತಾಡಿದ್ದೇ ಇಲ್ಲವೆನ್ನುತ್ತಾರೆ.
ಕಲಾವಿದರನ್ನು ಅವರು ಮಾತನಾಡಿಸುವುದೂ ಕೈಜೋಡಿಸಿ ನಿಂತು ಮೆಲುದನಿಯಲ್ಲಿ. ಮೆಲುದನಿಯಷ್ಟೇ ಅಲ್ಲ ಅವರದು ಮಿತಮಾತು. ವೃಥಾಚರ್ಚೆ ಅವರಿಗೆ ಒಗ್ಗದು. ‘ಈಗೇನಪ್ಪಾ ಅಂದರೆ ಕೈಗೆತ್ತಿಕೊಂಡ ಕೆಲಸ ಯಶಸ್ವಿಯಾಗಿ ಮುಗಿಯಬೇಕು, ಅಷ್ಟೆ’ ಎನ್ನುವವರು. ಶಿವಮೊಗ್ಗೆಯ ಸಾಂಸ್ಕೃತಿಕ ಜಗತ್ತಿನ ಕೆಲವೇ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದರು ಅವರು. ಪ್ರಧಾನ ಪೋಷಕರಾಗಿದ್ದರು.
ಸಂಸ್ಕೃತಿ ಪೋಷಕರು ಹಲವು ರೀತಿಯವರು. ಕೆಲವರಿಗೆ ತಾವು ನೆರವು ನೀಡಿದ ಕೂಡಲೇ ಅವರ ಹೆಸರು ಕೊರೆದಿಟ್ಟು ದಾಖಲಾಗಬೇಕು. ಕೆಲವರಿಗೆ ಅದು ಶೀಘ್ರ ಸುದ್ದಿಯಲ್ಲಿ ಬರಬೇಕು. ಊರಿಗೆಲ್ಲ ತಿಳಿಯಬೇಕು. ಕೆಲವರಿಗೋ ತಾವು ಯಾವುದಕ್ಕೆ ಪೋಷಕರಾಗಿರುವೆವೋ ಅದರ ಕುರಿತು ಯಾವ ಅರಿವೂ ಇರದು. ನೆರವು ಕೇಳಲು ಬಂದವರಿಗೆ ಅವರು ಯಾಂತ್ರಿಕವಾಗಿ ನೆರವು ನೀಡುತ್ತಾರೆ. ಅಲ್ಲಿಗದು ಮುಗಿಯಿತು. ಆದರೆ ನಮ್ಮ ಇಬ್ರಾಹಿಂ ಸಾಹೇಬರು ತಾನು ನೆರವಾಗುವ ಕಾರ್ಯಕ್ರಮಗಳ ಪ್ರಾಮುಖ್ಯತೆ ಕುರಿತ ಪ್ರಜ್ಞೆ ಇದ್ದವರು. ನೈಜ ಅಕ್ಕರೆಯಿಂದ ಅದರಲ್ಲಿ ಸೇರಿಕೊಂಡವರು.
ಜನಪದದಿಂದ ಎಂದೂ ಬೇರೆಯಾಗಿ ನಿಲ್ಲದೆ ಒಳಗೊಳ್ಳಲೂ ಕೈಲಾದಷ್ಟು (ಕೈಮೀರಿಯೂ) ನೆರವಾಗಲೂ ಬೇಕಾದ ದೃಢವಾದ ಮನೋಸಂಕಲ್ಪ ಅವರಲ್ಲಿತ್ತು. ಜನಪರ ಕಾರ್ಯಕ್ರಮಗಳ ಮಹತ್ವದ ಅರಿವಿತ್ತು. ವೃತ್ತಿಯಲ್ಲಿ ಅಬಕಾರಿ ಗುತ್ತಿಗೆದಾರರಾಗಿ ಅವರು ತಮ್ಮನ್ನು ತಾವೇ ಮೀರಿದ ಪರಿ ಹೀಗೆ ಸಕಾರಾತ್ಮಕವಾಗಿತ್ತು. ಗಾಂಧೀಜಿ ಹೇಳುತಿದ್ದರಲ್ಲ, ‘ಸಿರಿವಂತರು ಸಮಾಜದ ಆರ್ಥಿಕ ವ್ಯವಸ್ಥೆಯ ಟ್ರಸ್ಟಿಗಳು ಅಂತ’– ಆ ಮಾತನ್ನು ನೆನಪಿಸುವಂತಿದ್ದರು ಎಚ್. ಇಬ್ರಾಹಿಂ. ಹ್ಞಾಂ, ಯಾವತ್ತೂ ಅವರು ಎಚ್. ಇಬ್ರಾಹಿಂ ಅಂತಲೇ ಹೆಸರಾದವರು. ಬಿಡದೆ ಊರಿನ ಇನಿಶಿಯಲ್ ಸಮೇತವೇ ಉಲ್ಲೇಖವಾಗುವವರು.
ಇಬ್ರಾಹಿಂ ಬದುಕಿನ ಬಾಲ್ಯದ ಪುಟಗಳನ್ನು ಓದುತಿದ್ದರೆ ಕಳೆದುಹೋದ ಗ್ರಾಮಭಾರತ ಕಣ್ಣೆದುರು ಕಟ್ಟುತ್ತದೆ. ಅವರ ಎಲ್ಲ ಸಾಮಾಜಿಕ ಸಾಂಸ್ಕೃತಿಕ ಕಾಳಜಿಗಳ ಹಿನ್ನೆಲೆಯಲ್ಲಿ ಅವರು ಬೆಳೆದು ಬಂದ ಅಂದಿನ ಬಳ್ಳಾರಿ ಸಮೀಪದ ದಂಡಿನ ಹಿರೇಹಾಳು ಗ್ರಾಮದ ಪಾತ್ರ ಗೋಚರವಾಗುತ್ತದೆ. ಪ್ಲೇಗ್ ಎರಗಿದ್ದರಿಂದ ಅವರ ತಂದೆ ಹುಸೇನಪ್ಪ ಮೂಲ ಊರನ್ನು ತೊರೆದು ಈ ಗ್ರಾಮಕ್ಕೆ ಬರಿಗೈಯಲ್ಲಿ ವಲಸೆ ಬಂದರಂತೆ. ತನ್ನ ಪ್ರಾಮಾಣಿಕತೆಯಿಂದ ಊರಮಂದಿಯನ್ನು ಗೆದ್ದರು. ವಿಚಕ್ಷಣತೆಯಿಂದ ಸಂಪಾದನೆ ವಿಸ್ತರಿಸಿದರು. ಲಿಂಗಾಯತರು, ವೈಶ್ಯರು, ವೀರಶೈವ ಜಂಗಮರು, ಬ್ರಾಹ್ಮಣರು ಮುಂತಾದ ನಾನಾ ಸಮುದಾಯಗಳು ನಾನಾ ದೇವರಗುಡಿಗಳು ಇರುವ ಮುಖ್ಯರಸ್ತೆಯಲ್ಲಿಯೇ ಜಾಗ ಕೊಂಡು ಮನೆಕಟ್ಟಿ, ಊರಲ್ಲಿ ನೀರಂತೆ ಬೆರೆತು ಬದುಕನ್ನೂ ಕಟ್ಟಿದರು. ಗ್ರಾಮಸ್ಥರಿಗೆ ಬೇಕಾದವರಾದರು. ಅಲ್ಲಿನ ನೀಲಕಂಠೇಶ್ವರ ದೇವಾಲಯದ ಎದುರೇ ಇರುವ ಅವರ ಮನೆ, ಇಂದಿಗೂ ಮೂಲಮನೆಯಾಗಿ ಹಾಗೆಯೇ ಇದೆ.
ಆದರೆ ಕಾಲ ಮತ್ತೆ ಹುಸೇನಪ್ಪ ಅವರನ್ನು ಕಂಗೆಡಿಸಿತು. ಸರಣಿ ಸೋಲುಗಳು ದಿಕ್ಕೆಡಿಸಿದವು. ಮಗ ಇಬ್ರಾಹಿಂ, ಮುಂದೆ ಓದಬೇಕೆಂಬ ಅಪಾರ ಆಸೆಯನ್ನು ಹತ್ತಿಕ್ಕಿಕೊಳ್ಳಬೇಕಾಯ್ತು. ಪಿಂಜಾರ ಸಮುದಾಯದ ಪರಂಪರಾ ವೃತ್ತಿಯಾದ ಹತ್ತಿ ವ್ಯವಹಾರದ ಬದಲು ಅಬಕಾರಿ ವ್ಯವಹಾರಕ್ಕೆ ಪ್ರವೇಶಿಸಬೇಕಾಯ್ತು. ವ್ಯವಹಾರ ನಿಮಿತ್ತ ಹೀರೇಹಾಳಿನಿಂದ ಶಿವಮೊಗ್ಗೆಗೆ ಬಂದು ನೆಲೆಸಬೇಕಾಯ್ತು. ಅಬಕಾರಿ ವಹಿವಾಟು ಅವರ ಆಯ್ಕೆಯಾಗಿರಲಿಲ್ಲ, ಬದಲು ಅವರ ಪಾಲಿಗೆ ಅನಿವಾರ್ಯವಾಗಿ ಬಂದೊದಗಿದ ಕಾಯಕವಾಗಿತ್ತು (ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ಕತೆ ನೆನಪಾಗದೆ?). ಸದ್ಯ ಈ ಕಾಯಕ ಮಾಡದೆ ನಿರ್ವಾಹವಿಲ್ಲದ ಸ್ಥಿತಿಯೂ ಇತ್ತು. ಎಂತಲೇ ಶ್ರದ್ಧೆಯಿಂದ ಅದನ್ನು ನಿಭಾಯಿಸಿದರು ಇಬ್ರಾಹಿಂ, ಅದರಲ್ಲಿ ಯಶಸ್ವಿಯಾದರು, ಚೆನ್ನಾಗಿ ಗಳಿಸಿದರು, ತನ್ನೊಳಗಿನ ದ್ವಂದ್ವಗಳಿಗೆ ಆ ಗಳಿಕೆಯ ಬಲದಿಂದ ತನ್ನದೇ ರೀತಿಯಲ್ಲಿ ಅರ್ಥಪೂರ್ಣವಾಗಿ ಮುಖಾಮುಖಿಯಾದರು. ಕೇವಲ ವ್ಯವಹಾರ, ಉದ್ಯಮ, ದುಡ್ಡು ಎಂದು ಅಮಲಿನಲ್ಲಿ ಮುಳುಗದೆ, ದೊಡ್ಡ ಕುಟುಂಬವನ್ನು ಜವಾಬ್ದಾರಿಯಿಂದ ನಿರ್ವಹಿಸಿದರು.
ಕಲೆ, ಸಾಹಿತ್ಯ, ಸಂಸ್ಕೃತಿ ಪೋಷಣೆಯಲ್ಲಿ ಮನಸ್ಸನ್ನು ತೊಡಗಿಸಿಕೊಂಡರು. ಏನೆಂದರೂ ಇವೆಲ್ಲದರ ಹಿನ್ನೆಲೆಯಲ್ಲಿರುವುದು ಅವರ ಮಹತ್ವಾಕಾಂಕ್ಷೆಗಳಿಗೆ ಮನೆಯೊಳಗೆ ಸತತವಾಗಿ ಸಮಸಮ ಬೆಂಬಲ ನೀಡಿದ ಪತ್ನಿ ಶೇಕಮ್ಮ (ಸಕೀನಾ ಬೇಗಂ). ಮತ್ತು ಅವರನ್ನು ಬೆಳೆಸಿದ ಹಿರೇಹಾಳು ಗ್ರಾಮ. ಅಲ್ಲಿನ ಮೇಲುಕೀಳೆನ್ನದೆ ಕೈಕೈ ಹಿಡಿದು ನಡೆದ ‘ಸರ್ವರಿಗೆ ಸಮಪಾಲು, ಸಮಬಾಳು’ ವಾತಾವರಣ. ಮತಭೇದವಿಲ್ಲದೆ ಪೂಜೆಗೊಳ್ಳುವ ಅಲ್ಲಿನ ದೇವರುಗಳು. ನಾಟಕಪ್ರೀತಿಯ ಅಲ್ಲಿನ ಸಾಂಸ್ಕೃತಿಕ ಲೋಕ. ಮೇಲಾಗಿ, ಆ ಊರಲ್ಲಿ ಅವರು ಅನುಭವಿಸಿದ ಪರಮ ಸುಖ ಹಾಗೂ ಪರಮ ಕಷ್ಟದ ನೋವು ನರಳಿನ ಅಸಹಾಯಕತೆಯ ದಿನಾಂತಗಳಿವೆ.
ವಿದ್ಯೆ ಮತ್ತು ಆರ್ಥಿಕ ಬಲ ಎರಡೂ ಇಲ್ಲದ ಪಿಂಜಾರ ಸಮುದಾಯದ ಸಂಕಷ್ಟಗಳೂ ನೋವೂ ಇದೆ. ಮುಂದೆ ಆ ಸಮುದಾಯವನ್ನು ಅವರು ಸಂಘಟಿಸಿ ಆತ್ಮವಿಶ್ವಾಸ ಹುಟ್ಟಿಸಿದ ಪರಿಯೇ ಒಂದು ಗಾಥೆ. ಅದರ ಪರಿಣಾಮ ಇವತ್ತು ಆ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದ ಯುವಜನರನ್ನು ನೋಡುತಿದ್ದೇವೆ.
*****
ಎಚ್. ಇಬ್ರಾಹಿಂ ಎಂದೊಡನೆ ಬೆನ್ನಿಗೇ ನೆನಪಾಗುವ ಒಂದು ಉತ್ಸವವಿದೆ. ಅದು ಕರ್ನಾಟಕ ರಂಗಭೂಮಿಗೆ ನವಸ್ಪರ್ಶ ನೀಡಿದ ಎಪ್ಪತ್ತರ ದಶಕದ ಅವಿಸ್ಮರಣೀಯ ನಾಟಕೋತ್ಸವ. ‘ಇಬ್ರಾಹಿಂ-ರಾಮಸ್ವಾಮಿ ಅರ್ಪಿಸಿದ’ ಜೋಕುಮಾರ ಸ್ವಾಮಿ, ಹಯವದನ ಮತ್ತು ಸತ್ತವರ ನೆರಳು ನಾಟಕತ್ರಯಗಳು ಪ್ರದರ್ಶನಗೊಂಡ ಆ ದಿನಗಳು ಅಂದಿನ ಪ್ರೇಕ್ಷಕರಲ್ಲಿ ಇಂದಿಗೂ ಜೀವಂತವಷ್ಟೆ? ಆ ನಾಟಕಗಳು ನಡೆದದ್ದೇ ಈ ಇಬ್ಬರ ಜಂಟಿ ಯೋಜನೆಯಿಂದ. ಬೆಂಗಳೂರಿನಲ್ಲಿ ಅಲ್ಲದೆ ಶಿವಮೊಗ್ಗೆಯಲ್ಲಿಯೂ ಅವು ನಡೆದು ನಾವೂ ಆ ನಾಟಕಗಳನ್ನು ನೋಡುವಂತಾಯಿತು.
ಅವೆಲ್ಲ ಶಿವಮೊಗ್ಗೆಯ ಸಾಂಸ್ಕೃತಿಕ ಇತಿಹಾಸದ ಸುವರ್ಣರೇಖೆಗಳು. ಬಿ.ವಿ. ಕಾರಂತರನ್ನು, ಅಂದಿನ ಅನೇಕ ರಂಗಕರ್ಮಿಗಳನ್ನು, ಹತ್ತಿರದ ಹೆಗ್ಗೋಡಿನ ಸುಬ್ಬಣ್ಣನವರನ್ನೂ ನಾವು ಅನೇಕರು ಮೊದಲು ಕಂಡದ್ದು ಆ ನಾಟಕಗಳು ನಡೆದ ನ್ಯಾಶನಲ್ ಹೈಸ್ಕೂಲಿನ ಕ್ವಾಡ್ರಾಂಗಲ್‌ನಲ್ಲಿಯೇ. ಸಾಹಿತ್ಯ–ಸಂಗೀತ ಲೋಕದ ಸವಿ ಉಣಿಸಿದ ಶಿವಮೊಗ್ಗೆಯ ಆ ದಿನಗಳೆಲ್ಲ ಮತ್ತೆ ನೆನಪಾಗುತ್ತಿವೆ. ಸ್ಮೃತಿಕೋಶದಲ್ಲಿ ಈಗಲೂ ಅವು ಹೇಗೆ ಅಮೃತವಾಗುಳಿದಿವೆ!
ಅನೇಕಾನೇಕ ಸಂಘ ಸಂಸ್ಥೆಗಳಲ್ಲಿ ಪ್ರಧಾನ ಪೀಠ ಏರಿದರೂ ಸ್ಥಾನದಲ್ಲಿ ಜಡವಾಗಿ ಕುಳ್ಳಿರದೆ ಕ್ರಿಯಾಶೀಲರಾದವರು ಎಚ್. ಇಬ್ರಾಹಿಂ. ‘ಎಲ್ಲಿಂದಲೋ ಬಂದವರು’ ಎಲ್ಲರ ಮನ ಗೆದ್ದರು, ಎಲ್ಲದಕ್ಕೂ ಬೇಕಾದವರಾದರು. ಸಂಗೀತಕಛೇರಿ, ವಿಚಾರಸಂಕಿರಣ, ಸಾಹಿತ್ಯ ಸಮ್ಮೇಳನ, ನಾಟಕೋತ್ಸವ, ಪುಸ್ತಕ ಬಿಡುಗಡೆ, ಗಣೇಶೋತ್ಸವ, ಈದ್ ಮಿಲಾದ್– ಶಿವಮೊಗ್ಗೆಯಲ್ಲಿ ಏನೇ ನಡೆಯಲಿ, ಅಲ್ಲಿ ಎದುರಿಗೆ ಕಾಣಿಸದೆ, ಹಿಂದೆಯೇ ಇದ್ದು ಎಲ್ಲವನ್ನೂ ಸಾಂಗವಾಗಿ ನಡೆವಂತೆ ಕಣ್ಣಿಡುವ ದಾಕ್ಷಿಣ್ಯವಂತ ಇಬ್ರಾಹಿಂ ಅವರ ಸಹಕಾರ, ಸಹಯೋಗ- ಅದು ಇದ್ದೇ ಇದೆ ಎನ್ನುವಷ್ಟು ಸಾಮಾನ್ಯವಾಯ್ತು. ಲಾಗಾಯ್ತಿನಿದಂಲೂ, ಶಿವಮೊಗ್ಗೆಯಲ್ಲಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಒಮ್ಮೆಯಾದರೂ ಅವರ ಮನೆಯಲ್ಲಿ ಊಟ ಉಪಚಾರದ ಏರ್ಪಾಟು (ಅವರು ಶಿವಮೊಗ್ಗೆ ಬಿಡುವ ತನಕವೂ ಇದನ್ನು ತಪ್ಪದೆ ನಡೆಸಿಕೊಂಡು ಬಂದರಂತೆ). ನಾನು ಶಿವಮೊಗ್ಗೆಯಲ್ಲಿದ್ದ ದಿನಗಳವು.
ಯಾವುದೋ ಸಾಹಿತ್ಯ ಕಾರ್ಯಕ್ರಮದ ನಿಮಿತ್ತ ಕೆಲ ಲೇಖಕ ಲೇಖಕಿಯರು ಅಲ್ಲಿಗೆ ಬಂದಿದ್ದರು. ಕಾರ್ಯಕ್ರಮದ ದಿನ ಎಂದಿನಂತೆ ಇಬ್ರಾಹಿಂ ಸಾಹೇಬರ ಮನೆಯಲ್ಲಿಯೇ ಅವರಿಗೆಲ್ಲ ಬೆಳಗಿನ ಉಪಹಾರ. ಸ್ಥಳೀಯರನ್ನೂ ಕರೆದಿದ್ದರಾಗಿ ನಾವೂ ಒಂದಷ್ಟು ಮಂದಿ ಹೋಗಿದ್ದೆವು. ಉಪಹಾರ ನಡೆಯುತ್ತಿದ್ದರೆ, ಹೇಗೂ ಅದು ನಡೆಯುತ್ತದೆ ಎಂಬಂತೆ ಒಂದೆಡೆ ಪಾಳೆಗಾರಿಕೆಯ ಗತ್ತಿನಿಂದ ನೋಡುತ್ತ ಕುಳಿತುಕೊಳ್ಳದೆ (ಅಂತಹ ಜಾಯಮಾನವೇ ಅಲ್ಲ ಅವರದು) ಪ್ರತಿಯೊಬ್ಬರ ಬಳಿಗೂ ಹೋಗಿ ನಿಂತು ಎಲ್ಲ ಬಂದಿದೆಯೇ ನೋಡುವರು, ವಿಚಾರಿಸುವರು, ಉಪಚರಿಸುವರು. ಯಾವ ಧಾವಂತ ತೋರದೆ ಸಾವಧಾನವಾಗಿ ಎಲ್ಲರನ್ನೂ ಮಾತನಾಡಿಸುವರು. ಬಂದ ಅತಿಥಿಗಳೆಲ್ಲರೂ ಅವರಿಗೆ ಸಮಾನ ಮುಖ್ಯರು. ಅಪ್ಪಟ ಸದ್ ಗೃಹಸ್ಥರಲ್ಲಿ ಕಾಣುವ ಗುಣವಷ್ಟೆ ಇದು? ದೊಡ್ಡ ಶ್ರೀಮಂತರ ಮನೆಗಳಲ್ಲಿ ಇಂತಹ ಸಂದರ್ಭಗಳಲ್ಲಿ ಸುಮಾರಾಗಿ ಕಂಡುಬರುವ ಉಸಿರುಗಟ್ಟುವ ವಾತಾವರಣವನ್ನು ಹೀಗೆ ತನ್ನ ನಡವಳಿಕೆ ಮುಖಾಂತರವೇ ಇಲ್ಲವಾಗಿಸಿ ಗೆದ್ದವರು ಇಬ್ರಾಹಿಂ. ನಾನು ಶಿವಮೊಗ್ಗೆಯಲ್ಲಿ ಇದ್ದಷ್ಟು ಸಮಯವೂ, ಅಂದರೆ ಸುಮಾರು ಹದಿಮೂರು ವರ್ಷಗಳ ಕಾಲ ಒಮ್ಮೆ ಕೂಡ ಇದಕ್ಕೆ ವ್ಯತ್ಯಯವಾದ ನಡವಳಿಕೆಯನ್ನು ಅವರಲ್ಲಿ ಕಂಡದ್ದಿಲ್ಲ.
ಜನರಿಂದ ದೂರವಿರುವ ಗುಣವೇ ಅವರದ್ದಲ್ಲ. ಬದಲು ಶಿಶುಸದೃಶ ಸ್ನಿಗ್ಧ ನಗೆ ಮತ್ತು ಸಹೃದಯತೆಯಿಂದ ಜಗತ್ತನ್ನು ಕಾಣುವ ಪ್ರೀತಿಸುವ ಕೆಲವೇ ಅಪರೂಪದ ಚೇತನರಲ್ಲಿ ಒಬ್ಬರಾಗಿದ್ದರು. ಅಂದು ಕಂಡ ಅವರ ವ್ಯಕ್ತಿಚಿತ್ರ ಈಗಲೂ ಒಂದಿಷ್ಟೂ ಅತ್ತಿತ್ತಾಗದೆ ಮನದಲ್ಲಿ ಕೆತ್ತಿ ನಿಂತಿದೆ. 1981ರಲ್ಲಿ ಶಿವಮೊಗ್ಗೆ ಬಿಟ್ಟು ಬಂದ ಮೇಲೆ ಕೇವಲ ಒಂದೆರಡು ಬಾರಿಯಷ್ಟೇ ನಮಗವರ ಭೆಟ್ಟಿಯಾಗಿರಬಹುದು. ಆಮೇಲೆಲ್ಲ (ಆಗ) ಸುರತ್ಕಲ್ಲಿನಲ್ಲಿದ್ದ ಅವರ ಪುತ್ರಿಯೂ ಕವಿಯೂ ನನ್ನ ಗೆಳತಿಯೂ ಆಗಿರುವ ಡಿ.ಬಿ. ರಜಿಯಾಳ ಮೂಲಕ ಅವರ ಕುರಿತು ತಿಳಿಯುತಿದ್ದೆವು.
ಅವಳನ್ನು ಕಂಡೊಡನೆ, ನಮಗಷ್ಟೇ ಅಲ್ಲ, ಯಾರಿಗೂ ಮೊದಲು ನೆನಪಾಗುವುದು ಅವಳ ತಂದೆ. ಅವರು ಹೇಗಿದ್ದಾರೆ ಎಂದು ವಿಚಾರಿಸಿದ ಮೇಲೆಯೇ ಮುಂದಣ ಮಾತು. ಮಗಳು ಕವಿತೆ ಬರೆಯುವವಳೆಂದು ಸಂಭ್ರಮಿಸಿದ ತಂದೆ ಅವರು. ಮೊಮ್ಮಕ್ಕಳ ಅಂತರ್ ಧರ್ಮೀಯ ವಿವಾಹಕ್ಕೆ ಸೇಸೆ ಎರೆದ ಅಜ್ಜ. ಈ ವಿವರಗಳನ್ನೆಲ್ಲ ರಜಿಯಾಗೆ ಹೇಳಿದಷ್ಟೂ ತಣಿಯದು. ತಂದೆಯ ಬಗ್ಗೆ ಹೇಳುವಾಗೆಲ್ಲ ತಾಯಿಯನ್ನು ಬಿಡದೆ ನೆನೆವಳು ರಜಿಯಾ. ‘ಮನೆ ಮತ್ತು ಮಾರು’ ಎರಡರಲ್ಲಿಯೂ ತನ್ನೊಂದಿಗೆ ಏಕದನಿಯಾಗಿ ಮನೆಯೊಳಗಿದ್ದೇ ಜೊತೆಗೂಡಿದ ಪತ್ನಿಯ ನಿಧನದಿಂದ ಇಬ್ರಾಹಿಂ ಆಂತರ್ಯದಲ್ಲಿ ಒಬ್ಬಂಟಿಯಾದರು. ಅಂತರ್ಮುಖಿಯಾದರು. ಪತ್ನಿ ಹೋದ ಕೆಲವೇ ತಿಂಗಳಲ್ಲಿ ಅವರನ್ನು ಹುಡುಕಿಕೊಂಡು ಹೊರಟಂತೆ ತಾವೂ ಹೊರಟುಹೋದರು...
*****
ಶಿವಮೊಗ್ಗೆಯಲ್ಲಿ ಬಹುಕಾಲ ನೆಲೆಸಿ ಸಾರ್ಥಕ ಬಾಳನ್ನು ಬಾಳಿದರು ಜನಾಬ್ ಇಬ್ರಾಹಿಂ. ಪ್ರಾಯಶಃ ಮೂಲ ನೆಲದ ಮೋಹ; ಜೀವನದ ಸಂಧ್ಯೆಯಲ್ಲಿ ಶಿವಮೊಗ್ಗೆ ಬಿಟ್ಟು ಮತ್ತೆ ದಂಡಿನ ಹಿರೇಹಾಳು ಗ್ರಾಮಕ್ಕೆ ಮರಳಿದರು. ಅಲ್ಲಿಂದಲೇ ಒಮ್ಮೆ ನೆನಪಿಸಿಕೊಂಡು ‘ಹೇಗಿದ್ದೀರಿ ಅಕ್ಕಾ? ನಮ್ಮ ಮೂರ್ತಿಯವರು ಹೇಗಿದ್ದಾರೆ? ಎಲ್ಲಿ ಅವರು, ಮಾತಾಡಬೇಕಲ್ಲ’– ಆರೋಗ್ಯ ಸರಿಯಿಲ್ಲದ ಆ ಕ್ಷೀಣದನಿ ಕೇಳಿ ನಾವು ತಳಮಳಿಸಿದ್ದೆವು. ಇದು ಅವರನ್ನು ಬಲ್ಲ ಎಲ್ಲರ ಸ್ಥಿತಿಯೂ. ಅವರನ್ನು ತಿಳಿದವರ ಮನದಲ್ಲಿ ಶಾಶ್ವತವಾಗಿ ಉಳಿದೇ ಬಿಟ್ಟ ಈ ಅಪರೂಪದ ವ್ಯಕ್ತಿ ಸ್ವತಃ ತನ್ನೊಳಗೆ ಅದು ಎಷ್ಟು ಜನರನ್ನು ಪ್ರೀತಿಯಿಂದ ಉಳಿಸಿಕೊಂಡಿದ್ದರೊ! ಲೆಕ್ಕವಿದೆಯೆ!
ಒಬ್ಬ ನಿಜವಾದ ಧರ್ಮಾಚರಣೆಯ ಜಾದೂಗಾರನಾಗಿದ್ದರಷ್ಟೆ ಅವರು? ನಿಜವಾದ ಮುಸ್ಲಿಂ, ನಿಜವಾದ ಹಿಂದೂ, ನಿಜವಾದ ಕ್ರೈಸ್ತ, ನಿಜವಾಗಿಯೂ ದೊಡ್ಡ ಮನುಷ್ಯ ಎನಿಸಿಕೊಳ್ಳುವ ಮೂಲ ಕೀಲಿಕೈ ಬಲ್ಲವರು.
ತನ್ನ ಆಯುಷ್ಯದುದ್ದಕ್ಕೂ ಇಬ್ರಾಹಿಂ ಮೆರೆದ ಸಾಮಾಜಿಕ ಕಾಳಜಿ, ಮಾನವ ಪ್ರೇಮ, ನಡೆಸಿದ ದಾನ ಧರ್ಮ ಸಾಂಸ್ಕೃತಿಕ ದಾಸೋಹದ ವಿವರ ನೆನೆದರೆ ಒಬ್ಬ ಮನುಷ್ಯ ಸಮಾಜಕ್ಕೆ ಒಂದು ಆಯುರ್ಮಾನದಲ್ಲಿ ತನ್ನನ್ನು ಇಷ್ಟೆಲ್ಲ ಬಗೆಯಲ್ಲಿ ಕೊಟ್ಟುಕೊಳ್ಳಲು ಸಾಧ್ಯವೆ ಎಂದು ಅಚ್ಚರಿಯಾಗುತ್ತದೆ. ‘ಸಮಾಜದ ಋಣ ಹೇಗೆ ತೀರಿಸಿಯೇನು?’ ಎಂಬುದೇ ಮುಖ್ಯ ತುಡಿತ ಆಗಿರುವವರಿಗೆ ಮಾತ್ರ ಇದು ಸಾಧ್ಯ ಆಗುವುದೇನೊ.
ಸೌಹಾರ್ದ ಜೀವನದ ಒಂದು ಮಹಾಮಾದರಿಯಾಗಿದ್ದವರು ಎಚ್. ಇಬ್ರಾಹಿಂ.
ಅಕ್ಷರಶಃ- ಇಂಡಿಯಾ ಕಂಡ ನಾಡೋಜರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.