ADVERTISEMENT

ಹಲವು ದನಿಗಳನ್ನು ಕೂಡಿಸಿಕೊಂಡ ಕಥನ

ನನ್ನ ಇಷ್ಟದ ಪುಸ್ತಕ: 2014

ಅಕ್ಷರ ಕೆ.ವಿ.
Published 3 ಜನವರಿ 2015, 19:30 IST
Last Updated 3 ಜನವರಿ 2015, 19:30 IST
ಹಲವು ದನಿಗಳನ್ನು ಕೂಡಿಸಿಕೊಂಡ ಕಥನ
ಹಲವು ದನಿಗಳನ್ನು ಕೂಡಿಸಿಕೊಂಡ ಕಥನ   

ಭುವನದ ಭಾಗ್ಯ ಎಂ.ಎಸ್
ಸಂ, ಅನು: ಶೈಲಜ ಮತ್ತು ಟಿ.ಎಸ್. ವೇಣುಗೋಪಾಲ,
ಬೆ: ರೂ. 125
ರಾಗಮಾಲಾ ಪುಸ್ತಕಮಾಲಿಕೆ, ಮೈಸೂರು

ಕನ್ನಡದಲ್ಲಿ ಸಂಗೀತದ ಕುರಿತು ಪುಸ್ತಕಗಳೇ ಕಡಿಮೆ. ಅಂಥ ನಿರ್ಲಕ್ಷಿತ ಕ್ಷೇತ್ರವೊಂದರಲ್ಲಿ ಗಹನವಾದ ಬರವಣಿಗೆಯ ಉತ್ಸಾಹವನ್ನಿಟ್ಟುಕೊಂಡು ಹೊರಟಿರುವ ಈ ಪುಸ್ತಕ ಅಪರೂಪದ ಒಂದು ಉದಾಹರಣೆ. ಚೆನ್ನಾಗಿ ವಿನ್ಯಾಸಗೊಂಡು ಅಚ್ಚಾಗಿರುವ ಪುಸ್ತಕಗಳು ಅರ್ಥವತ್ತಾಗಿಯೂ ಇದ್ದರೆ, ಓದುವ ಸಂತೋಷ ಹೆಚ್ಚಾಗುತ್ತದೆ. ಇದು ಅಂಥ ಪುಸ್ತಕವೂ ಹೌದು. ಹೆಸರನ್ನು ನೋಡಿ ಇದು ಪ್ರಸಿದ್ಧ ಸಂಗೀತಗಾರ್ತಿ ಎಂ.ಎಸ್. ಸುಬ್ಬುಲಕ್ಷ್ಮಿಯವರ ಜೀವನದ ಕಥೆಯನ್ನು ವರ್ಣಿಸುವ ಪುಸ್ತಕವೆಂದು ತಿಳಿದರೆ ಮೋಸವಾಗುತ್ತದೆ. ಜೀವನ ಕಥನವೂ ಈ ಪುಸ್ತಕದಲ್ಲಿದೆ; ಆದರೆ, ಅದು ಅವರ ಜೀವನಕ್ಕೆ ಮಾತ್ರ ಸಂಬಂಧಿಸಿದ ಮಾಹಿತಿಯಲ್ಲ.

ಕರ್ನಾಟಕ ಸಂಗೀತದ ಆ ಉತ್ಥಾನಕಾಲದಲ್ಲಿ ಸಂಗೀತ ಮತ್ತು ಸಮಾಜಗಳ ಕೊಡುಕೊಳೆ ಹೇಗಿತ್ತು, ಆ ಕಾಲದ ಸಂಗೀತಗಾರರು ಯಾವ ರೀತಿಯ ಸಂಗೀತದ ಸಂಬಂಧದಲ್ಲಿ ಕೂಡಿಕೊಂಡಿದ್ದರು, ಸುಬ್ಬುಲಕ್ಷ್ಮಿಯವರು ತಮ್ಮ ಸಂಗೀತದ ಮೂಲಕವೇ ಹೇಗೆ ಜಗತ್ತಿಗೆ ಸ್ಪಂದಿಸಿದರು ಮೊದಲಾದ ವಿಶಾಲ ವಿಚಾರಗಳನ್ನು ನಿರ್ದಿಷ್ಟ ದೃಷ್ಟಾಂತಗಳ ಮೂಲಕವೇ ಈ ಪುಸ್ತಕ ಕಟ್ಟುತ್ತದೆ.  ಸುಬ್ಬುಲಕ್ಷ್ಮಿಯವರ ಕುರಿತು ಬೇರೆ ವಿಮರ್ಶಕರು ಮತ್ತು ಕಲಾವಿದರು ಬರೆದ ಬರಹಗಳು ಹಾಗೂ ಸುಬ್ಬುಲಕ್ಷ್ಮಿಯವರ ಉಪಯುಕ್ತವಾದ ಸಂದರ್ಶನ – ಹೀಗೆ ಹಲವು ದನಿಗಳನ್ನು ಕೂಡಿಸಿಕೊಂಡ ಕಥನ ಇಲ್ಲಿದೆ. ಹಾಗಿರುವುದರಿಂದ ಸ್ವತಃ ಸಂಗೀತಾಸಕ್ತರಿಗೆ ಮಾತ್ರವಲ್ಲದೆ ಸಾಂಸ್ಕೃತಿಕ ವಿದ್ಯಮಾನಗಳಲ್ಲಿ ಕುತೂಹಲವಿರುವವರಿಗೂ ಈ ಪುಸ್ತಕ ಲಾಭದಾಯಕವಾಗಿದೆ.

ಈ ಪುಸ್ತಕವು ಒಂದು ಬಿಡಿ ಪ್ರಯತ್ನವಲ್ಲ ಎಂಬುದೂ ಗಮನಾರ್ಹ. ಕಳೆದೆರಡು ವರ್ಷಗಳಿಂದ ಈ ಲೇಖಕರು ಇದೇ ಮಾದರಿಯ ನಾಲ್ಕು ಪುಸ್ತಕಗಳನ್ನು ಹೊರತಂದಿದ್ದಾರೆ. ಪಂಡಿತ ರವಿಶಂಕರ್ ಮತ್ತು ಟಿ.ಎಂ. ಕೃಷ್ಣ ಅವರನ್ನು ಕುರಿತ ಪುಸ್ತಕಗಳು ಮತ್ತು ‘ಕೇಳು ಜನಮೇಜಯ’ ಎಂಬ ಸಂಗೀತದ ಕೇಳ್ಮೆಯ ಸ್ವಾರಸ್ಯ ಮತ್ತು ಸವಾಲುಗಳನ್ನು ಕುರಿತ ಉಪಯುಕ್ತ ಗ್ರಂಥ ಇದೇ ಮಾಲಿಕೆಯಲ್ಲಿ ಬಂದಿದೆ. ಸಂಗೀತದ ಕುರಿತು ಬರೆಯುವುದು ಹೇಗೆ ಎಂಬ ಕ್ಲಿಷ್ಟ ಪ್ರಶ್ನೆಯನ್ನೂ ಈ ಈ ಮಾಲಿಕೆ ಮೈಮೇಲೆ ಎಳೆದುಕೊಂಡಿರುವುದರಿಂದ ಬಿಡಿ ಪುಸ್ತಕಗಳ ಇತಿಮಿತಿಗಳೇನೇ ಇರಲಿ, ಈ ಪ್ರಯತ್ನವೇ ಮಹತ್ವದ್ದೆಂದು ನಾನು ಭಾವಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT