ಮಾಯಾವಿ ಮಾಂಗಿ
ಲೇ: ಚಿಂತಾಮಣಿ ಕೊಡ್ಲೆಕೆರೆ
ಪು: 184; ಬೆ: ರೂ. 130
ಪ್ರ: ಅಂಕಿತ ಪುಸ್ತಕ, 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬೆಂಗಳೂರು-4.
ಚಿಂತಾಮಣಿ ಕೊಡ್ಲೆಕೆರೆ ಅವರ ಎರಡನೆಯ ಕಥಾಸಂಕಲನ `ಮಾಯಾವಿ ಮಾಂಗಿ~. ಇದರಲ್ಲಿ ಒಟ್ಟು ಹದಿನೇಳು ಕಥೆಗಳಿವೆ. ಇವುಗಳಲ್ಲಿ ಉತ್ತರ ಕನ್ನಡದ ಗೋಕರ್ಣ, ಕುಮಟಾ, ಅಘನಾಶಿನಿ, ಭೀಮಸಾಗರ ಮತ್ತು ಇವುಗಳ ಆಸುಪಾಸಿನ ಭಿತ್ತಿಯನ್ನು ಹೊಂದಿದ ಕಥೆಗಳದು ಒಂದು ಗುಂಪಾದರೆ, ಇನ್ನೊಂದು ಬೆಂಗಳೂರು ಮತ್ತು ಇತರ ಪ್ರದೇಶಗಳ ಭಿತ್ತಿಯನ್ನು ಒಳಗೊಂಡ ಕಥೆಗಳ ಗುಂಪು.
ಕೇವಲ ಭೌಗೋಳಿಕ ಪರಿಸರ ಮಾತ್ರ ಈ ಕಥೆಗಳಲ್ಲಿ ಬದಲಾಗುವುದಿಲ್ಲ; ಕಥೆಯ ವಸ್ತು, ಹರಹು ಮತ್ತು ಆಶಯದಲ್ಲೂ ಗಮನಾರ್ಹ ಬದಲಾವಣೆಗಳಾಗುತ್ತವೆ. ಉತ್ತರಕನ್ನಡದ ಹಿನ್ನೆಲೆಯನ್ನು ಹೊಂದಿದ ಕಥೆಗಳಲ್ಲಿ ಒಂದು ಬಗೆಯ ಹುಡುಕಾಟ, ಅರ್ಥವಾಗದ ಸಂಗತಿಗಳ ಕುರಿತ ತಲ್ಲಣ, ಒಟ್ಟಿನಲ್ಲಿ ಆ ಮೂಲಕ ಪಾತ್ರಗಳ ಭಾವಲೋಕದ ವಿದ್ಯಮಾನಗಳಿಗೆ ಒತ್ತು ಬಿದ್ದಿದೆ.
ಎರಡನೆಯ ಗುಂಪಿನ ಕತೆಗಳ ವಸ್ತುವು ವ್ಯಕ್ತಿಯ ಬಾಹ್ಯಲೋಕದ ವಿದ್ಯಮಾನ ಮತ್ತು ಅನುಭವಗಳಿಗೆ ಸಂಬಂಧಿಸಿದ್ದಾಗಿದ್ದು, ಇಲ್ಲಿ ವ್ಯಂಗ್ಯ, ವಿಡಂಬನೆ, ವಾಚಾಳಿತನ ಇವು ಹೆಚ್ಚು ಇಣುಕಿಬಿಡುತ್ತವೆ.
ಸಂಕಲನವನ್ನು ಓದಿ ಮುಗಿಸಿದ ಬಳಿಕವೂ `ಆ ಕತ್ತಲೆಯಿಂದ~ ಕತೆಯ ಸಾವಿತ್ರಕ್ಕ, `ಪರಮೇಶ್ವರಿ ಮತ್ತು ಮಾಯಾವಿ ಮಾಂಗಿ~ಯ ಪರಮೇಶ್ವರಿ ಮತ್ತು ಮಾಂಗಿ, `ಯಾದೇವೀ~ಯ ಉಷಾಂಬಿಕಾ, `ವೈತರಣಿಯ ಸೆಳವು~ ಕತೆಯ ನಿರೂಪಕಿ, `ಒಬ್ಬ ವಿಫಲ ನಾಯಕನ ವೃತ್ತಾಂತ~ದ ಶಾಂತಿ- ಹೀಗೆ ಹಲವು ಪಾತ್ರಗಳು ಓದುಗರ ಮನದಲ್ಲಿ ಅಚ್ಚಳಿಯದೆ ಉಳಿದು ಹಲವು ಬಗೆಯ ಸಂವಾದ ಮತ್ತು ಚಿಂತನೆಗಳಿಗೆ ಅನುವು ಮಾಡಿಕೊಡುತ್ತವೆ.
ಈ ಸಂಕಲನದ ಉದ್ದಕ್ಕೂ ಮಹಿಳೆಯರ ಲೋಕದೃಷ್ಟಿಯು ಪುರುಷ ಲೋಕದೃಷ್ಟಿಯ ಜೊತೆ ಸಮಾನಾಂತರವಾಗಿ ಸಾಗಿಬಂದು, ತನ್ನ ಅನನ್ಯತೆಯ ಛಾಪನ್ನು ಮೂಡಿಸುತ್ತದೆ. ವರ್ತಮಾನದ ಬದುಕಿನ ಕ್ಷುದ್ರತೆ ಮತ್ತು ನೋವುಗಳಿಗೆ ಪುರುಷ ಪಾತ್ರಗಳು ಪಲಾಯನ ಮಾಡಲು ಎಳಸಿದರೆ, ಸ್ತ್ರೀಪಾತ್ರಗಳು ಅಂತಹ ಸಂದರ್ಭಗಳಲ್ಲಿ ಪರಿಸರದ ಕ್ಷುದ್ರತೆ ಮತ್ತು ನೋವುಗಳನ್ನು ತಮ್ಮದೇ ನೆಲೆಯಿಂದ ಮೀರುವ ದಾರಿಯನ್ನು ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಂಡಿವೆ.
`ಆ ಕತ್ತಲೆಯಿಂದ~ ಕತೆಯ ಸಾವಿತ್ರಕ್ಕ ಅಂತಹ ಒಂದು ನಿದರ್ಶನ. ತನ್ನ ನಡವಳಿಕೆಗಳಿಗೆ ಲೋಕದ ಕಾರಣಗಳ ಹಂಗಿಲ್ಲದ, ಇಳಿವಯಸ್ಸಲ್ಲೂ ವ್ಯಕ್ತಿತ್ವದಲ್ಲಿ ಯಾವ ಬದಲಾವಣೆಯನ್ನೂ ಮಾಡಿಕೊಳ್ಳದ ಸಾವಿತ್ರಕ್ಕ, ನಿರೂಪಕನಿಗೆ ಒಂದು ಸೋಜಿಗ. `ಸ್ವಯವಿಲ್ಲದ~ ಈ ಪಾತ್ರ ಸ್ವಯವಿರುವ ಪಾತ್ರಗಳನ್ನು ಕಾಡುವ ಬಗೆಯೇ ವಿಶಿಷ್ಟವೂ ಪರಿಣಾಮಕಾರಿಯೂ ಆಗಿದೆ.
ಹೊರಜಗತ್ತಿಗೆ ಕಾಣುವ ಅವಳ `ಅರೆಹುಚ್ಚುತನ~ (ಸ್ವಯವಿಲ್ಲದ ಸ್ಥಿತಿ) ಆಕೆ ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಂಡ ರಕ್ಷಣಾತ್ಮಕ ಗೋಡೆಯಾಗಿತ್ತೇ? ಅವಳಿಗದರ ಅರಿವಿತ್ತೆ? ಹನಿಗಣ್ಣನ್ನು ನಿರೂಪಕನಿಗೆ ತೋರಲಾರದೆ ಎದ್ದುಹೋದ ಅವಳ ಕ್ರಿಯೆ ಇದನ್ನು ಸೂಚಿಸುತ್ತದೆ. ಹೆಣ್ಣಿಗೆ ಇಂತಹ ದಾರಿ ಬಿಟ್ಟು ಬೇರೆ `ಅವಕಾಶ~ಗಳೇ ಇಲ್ಲದಂತೆ ಮಾಡಿದ ಸಾಮಾಜಿಕ ಸ್ಥಿತಿಗೆ ಕತೆ ದನಿಯಾಗುವಾಗ ವೈದೇಹಿಯವರ `ಅಕ್ಕು~ ದಿಢೀರನೆ ಎದುರಾಗುತ್ತಾಳೆ.
ಸಂಕಲನದಲ್ಲಿ ವಿವಿಧ ಕಾರಣಗಳಿಗಾಗಿ ಹುಚ್ಚಿನ ಹಣೆಪಟ್ಟಿ ಹೊಂದಿದ ಪಾತ್ರಗಳು ತುಂಬ ಸತ್ವಶಾಲಿಯಾಗಿ ಒಡಮೂಡಿವೆ. `ಮಾಯಾವಿ ಮಾಂಗಿ~ ಅದಕ್ಕೊಂದು ನಿದರ್ಶನ. ಆ ಪರಿಸರದಲ್ಲಿ ಪರಮೇಶ್ವರಿಯ ಸಂಕಷ್ಟಗಳು ಅರಿವಾಗುವುದು ಅವನಿಗೆ ಮಾತ್ರ!
ಅವಳನ್ನು ಕೆಣಕಬಂದವರಿಗೆಲ್ಲ ಕಲ್ಲು ತೂರಿ ಕಾಪಾಡುವ ಆತ ಕೊನೆಗೊಂದು ದಿನ ದೇವರಿಲ್ಲದ ಗರ್ಭಗುಡಿಯಲ್ಲಿ ಮುರುಕು ಕುರ್ಚಿ ಹಾಕಿಕೊಂಡು ತಾನೇ ಪ್ರತಿಷ್ಠಾಪನೆಗೊಳ್ಳುವುದು, ಊರ ಸಮಸ್ತರೂ ತನ್ನನ್ನು ಒಪ್ಪಿಕೊಳ್ಳುವಂತೆ ಮಾಡುವುದು ಒಂದು ರೂಪಕ. ಈತ ಹುಚ್ಚ ಮಾಂಗಿಯೋ ಮಾಯಾವಿ ಮಾಂಗಿಯೋ? ಈ ಹುಚ್ಚನಿಗಷ್ಟೇ ಭಕ್ತಿಯ ಮತ್ತು ಪ್ರೀತಿಯ ಹುಚ್ಚಿನ ಪರಿ ಅರಿವಾಗುವುದೂ ಗಮನಾರ್ಹ.
`ವೈತರಣಿಯ ಸೆಳವು~ ಕತೆಯ ನಿರೂಪಕಿ, `ಒಬ್ಬ ವಿಫಲ ನಾಯಕನ ವೃತ್ತಾಂತ~ದಲ್ಲಿನ ಶಾಂತ ಮತ್ತು ಅವಳ ತಾಯಿ ಮುಂತಾದವರು ತಮ್ಮ ಪ್ರಶ್ನಾತೀತ ಶ್ರದ್ಧೆ, ನಂಬಿಕೆ ಮತ್ತು ಜೀವನಪ್ರೀತಿಯ ಮೂಲಕ ಬದುಕಲ್ಲಿ ತಾವೂ ಗೆಲ್ಲುತ್ತಾರೆ, ಸನಿಹದವರನ್ನೂ ಕೈಹಿಡಿದು ನಡೆಸುತ್ತಾರೆ. `ಯಾವುದೋ ದಾರಿ~ ಕತೆಯ ಗೌರಜ್ಜಿಯಂಥವರು ನಿಷ್ಕಾರಣವಾಗಿ ಸಂಸಾರಕ್ಕೆ ಬೆನ್ನುಹಾಕಿ ಅಲೆಮಾರಿಯಾದ ನಿರೂಪಕನಿಗೆ ಧೃತಿ ಮತ್ತು ಗತಿಯನ್ನು ಸೂಚಿಸುವವರಾಗುತ್ತಾರೆ.
`ಯಾದೇವೀ~ಯ ಉಷಾಂಬಿಕೆ, `ಒಬ್ಬ ವಿಫಲ ನಾಯಕನ ವೃತ್ತಾಂತ~ದ ಮೀರಾ ಕೂಡ ತಮ್ಮ ಅಂತಃಸ್ಸತ್ವ ಮತ್ತು ದೃಢ ನಿರ್ಧಾರದಿಂದ ನಿರೂಪಕನ ಬದುಕಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇರುವುದನ್ನು ಬಿಟ್ಟು ಏನನ್ನೋ ಅರಸಿಹೋಗುವ, ಹಿಡಿಯಹೋಗುವ ಪುರುಷಪಾತ್ರಗಳಿಗಿಂತ ಇಲ್ಲದ ತಾಣದಲ್ಲೇ ಏನನ್ನಾದರೂ ಕಟ್ಟಿಕೊಳ್ಳಲೆಳಸುವ ಸ್ತ್ರೀಪಾತ್ರಗಳು ಕತೆಗಾರರಿಗೆ ಮಾದರಿಗಳಾಗಿ, ಉತ್ತರಗಳಾಗಿ ಕಂಡಿವೆ.
ಕತೆಗಳ ಮುಖ್ಯಪಾತ್ರ ಮತ್ತು ನಿರೂಪಕ ಇವರ ನಡುವಿನ ಸಂಘರ್ಷ ಚಿಂತಾಮಣಿ ಕೊಡ್ಲೆಕೆರೆ ಅವರ ಕೆಲವು ಕತೆಗಳ ವೈಶಿಷ್ಟ್ಯವಾಗಿದೆ. ಅವರಿಬ್ಬರೂ ಚಿಂತನಾ ಸ್ತರದಲ್ಲಿ ಎರಡು ಧ್ರುವಗಳಲ್ಲಿ ನಿಂತಿದ್ದು, ಒಬ್ಬರು ಇನ್ನೊಬ್ಬರಿಂದ ಪ್ರೇರಣೆಗೆ, ಪ್ರಭಾವಕ್ಕೆ ಒಳಗಾಗುವ ಪ್ರಕ್ರಿಯೆ ಕತೆಯೊಳಗೆ ಜರುಗುತ್ತದೆ. ಹೀಗೆ ಪ್ರಭಾವಿತರಾಗುವವರು, ಬದುಕಲ್ಲಿ ಅರ್ಥವನ್ನು ಕಂಡುಕೊಳ್ಳುವವರು ಯಾರು ಎಂಬ ನೆಲೆಯಲ್ಲಿ ಕತೆಗಳ ಅಧ್ಯಯನ ಕೂಡ ಕೆಲವು ಹೊಸ ಚರ್ಚೆಯನ್ನು ಹುಟ್ಟುಹಾಕಬಲ್ಲದು.
ಇವರ ಕೆಲವು ಕತೆಗಳು ಕಾವ್ಯದ ಜಾಡಿನಲ್ಲಿ ಸಾಗಿವೆ. ಕತೆಯನ್ನು ವಾಚ್ಯವಾಗಿಸಬಾರದೆಂಬ ಹಟದಿಂದ ಕೆಲವು ಕತೆಗಳು ಎಲ್ಲ ಹೇಳಿಯೂ ಏನನ್ನೂ ಹೇಳಿರದಂತೆ ಅಥವಾ ಏನೂ ಹೇಳದೆಯೂ ಏನನ್ನೋ ಸೂಚಿಸಿದಂತೆ ಭಾಸವಾಗುತ್ತದೆ; ಆ ಮೂಲಕ ಓದಿದ ಬಳಿಕವೂ ಚಿಂತಿಸುವಂತೆ, ಅರ್ಥದ ಹಲವು ಸಾಧ್ಯತೆಗಳನ್ನು ಸೂಚಿಸುವಂತೆ ಮಾಡುವ ರಚನೆಗಳಾಗಿವೆ.
ಕತೆಯ ತಂತ್ರ ಕೆಲವೆಡೆ ಕತೆಗಾರರನ್ನೇ ಕಟ್ಟಿಹಾಕಿದೆ. `ವೈತರಣಿಯ ಸೆಳವು~, `ಹತ್ತನೆಯವನು~ ಕತೆಗಳು ಅದಕ್ಕೆ ನಿದರ್ಶನ. ಉತ್ತಮಪುರುಷ ಇಲ್ಲವೇ ಪ್ರಥಮ ಪುರುಷ ನಿರೂಪಣೆಯಿಂದ ಆರಂಭಗೊಳ್ಳುವ ಕತೆ ದಿಢೀರನೆ ಬದಲಾಗಿ ಎತ್ತೆತ್ತಲೋ ಹೊರಳಿಕೊಂಡು ಬಿಡುತ್ತದೆ. ಎಂದರೆ ಯಾವ ತಂತ್ರವನ್ನು ಕತೆಗೆ ಪೂರಕವೆಂದು ಆಯ್ದುಕೊಂಡರೋ ಅದೇ ಕತೆಗಾರರನ್ನು ಕಟ್ಟಿಹಾಕಿ ತೊಡಕನ್ನುಂಟುಮಾಡಿದೆ.
ಕೆಲವು ಕತೆಗಳಲ್ಲಿ ಕತೆಗಾರ ತನ್ನ ಚಿಂತನೆಯನ್ನು ಪಾತ್ರಗಳ ಮೇಲೆ ಹೇರಿರುವುದು ನಿಚ್ಚಳವಾಗಿದೆ. ಇಂತಹ ಕೆಲವು ಮಿತಿಗಳು ಇದ್ದಾಗ್ಯೂ `ಮಾಯಾವಿ ಮಾಂಗಿ~ ಓದಬೇಕಾದ ಒಂದು ಕಥಾಸಂಕಲನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.