ಆಡುಕಳ
ಲೇ: ಶ್ರೀಧರ ಬಳಗಾರ
ಬೆ: ರೂ. 150
ಪ್ರ: ಅಂಕಿತ ಪುಸ್ತಕ, ಗಾಂಧಿಬಜಾರ್, ಬಸವನಗುಡಿ, ಬೆಂಗಳೂರು– 560 004
ಪ್ರಸಿದ್ಧ ಕಥೆಗಾರ ಶ್ರೀಧರ ಬಳಗಾರರ ‘ಆಡುಕಳ’ ಈ ವರ್ಷದ ಗಮನಿಸಬೇಕಾದ ಕಾದಂಬರಿ. ‘ಬಿದ್ರಳ್ಳಿಯ ಭೌಗೋಳಿಕ ನಕಾಶೆಯಲ್ಲಿ ಸಂಪರ್ಕಹೀನ ದ್ವೀಪದಂತೆ ಅಗೋಚರವಾಗಿರುವ’ ಆಡುಕಳ ‘ನಿರ್ಜನವಾದರೂ ನಿರ್ಜೀವ ಎಂದೇನೂ ಅನ್ನಿಸುತ್ತಿರಲಿಲ್ಲ’ ಎಂದು ಕಥೆಗಾರರು ಮಲೆನಾಡಿನ ಜನದೂರವಾದ ಈ ಹಳ್ಳಿಯನ್ನು ವರ್ಣಿಸುತ್ತಾರೆ. ಭೌಗೋಳಿಕತೆಯ ದೃಷ್ಟಿಯಿಂದ ಬಳಗಾರರ ಬಹುಪಾಲು ಕಥೆಗಳ ಆವರಣ ಇಂಥದೇ. ‘...ಸದ್ದಿಲ್ಲದೆ ಹರಿಯುವ ಹಳ್ಳದ ನೀರು, ಹಾಡದೆ ಬಯಲನ್ನು ಸೀಳಿ ಹಾರುವ ಪಕ್ಷಿಗಳು ಈ ಊರಿಗೆ ವಿಲಕ್ಷಣ ನೀರವತೆಯನ್ನು ದಯಪಾಲಿಸಿದ್ದವು. ಪಕ್ಕದಲ್ಲಿ ನೀರಮೇಲೆ ಚಲಿಸುವ ಎಲೆಗಳನ್ನು ತಲ್ಲೀನತೆಯಿಂದ ನೋಡುತ್ತ ದಿಗಂತದಲ್ಲಿ ಸರಿದುಹೋಗುವ ಮೋಡ ದಿಟ್ಟಿಸುತ್ತ ನಿಂತವರಿಗೆ ಗದ್ದೆಯೆ ಚಲಿಸುವ ಮಾಯೆಯಾಗಿ ಕಾಡುತ್ತಿತ್ತು. ...ಮನುಷ್ಯನನ್ನು ಪ್ರಾಣಿಯಾಗಿಸುವ ಅಥವಾ ದೇವರನ್ನಾಗಿಸುವ ಪದಾರ್ಥವೊಂದು ಆಡುಕಳದ ಬಯಲಲ್ಲಿ ಅಂತರ್ಧಾನವಾಗಿದೆಯೋ ಏನೋ ...’ ಎಂಬ ವಿವರಗಳು ನಾವು ಆಡುಕಳವನ್ನು ಕುತೂಹಲದಿಂದ ಪ್ರವೇಶಿಸುವಂತೆ ಮಾಡುತ್ತವೆ.
ಆಡುಕಳದ ದಶರಥ ಮಿತಭಾಷಿ, ಕಾಯಕ ಪರಿಶ್ರಮಿ, ನಿಸ್ಸಂಗಿ. ಹತ್ತಿರದ ಮಣ್ಮನೆಯಿಂದ ಇಲ್ಲಿ ಬಂದುಳಿಯುವುದು ಅವನ ಸ್ವಂತ ಆಯ್ಕೆಯಾಗಿತ್ತು. ಕಾದಂಬರಿ ತೆರೆದುಕೊಳ್ಳುವ ಹೊತ್ತಿಗೆ ಆಡುಕಳದ ಮನೆಯಲ್ಲಿ ಕಳ್ಳತನ ನಡೆದು ಗಂಗಣ್ಣನ ಖಾನಾವಳಿಯಲ್ಲಿ ದಶರಥ ಮರಣಾಂತಿಕ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಗಂಗಣ್ಣನ ಈ ಕಾಳಜಿ, ಉಪಚಾರ, ಓಡಾಟಗಳಿಂದಾಗಿ ಕಥೆಯಲ್ಲಿ ಅನೇಕ ಕವಲುಗಳು ಹುಟ್ಟಿಕೊಳ್ಳುತ್ತವೆ. ಮಡದಿ, ಮಕ್ಕಳಿಲ್ಲದ ದಶರಥನ ಆಸ್ತಿ ತಮ್ಮದಾಗಿಸಿಕೊಳ್ಳಲು ಅನೇಕರಿಗೆ ಆಸ್ಥೆಯಿದೆ. ಮೂಲ ಮಣ್ಮನೆಯವರಂತೂ ವಕೀಲರಿಂದ ನೋಟೀಸು ಕಳಿಸುವವರೆಗೂ ಮುಂದುವರಿಯುತ್ತಾರೆ. ಮನುಷ್ಯ ಸಂಬಂಧಗಳ, ಮನುಷ್ಯ ಸ್ವಭಾವದ ಹಲವು ವೈರುಧ್ಯಗಳು ಬಯಲಾಗುತ್ತಾ ನಡೆಯುತ್ತವೆ. ಇಷ್ಟರಲ್ಲಿ ಆಡುಕಳದ ಕಾಮಾಕ್ಷಿಯ ಮೈಮೇಲೆ ದೇವಿ ಅವತರಿಸಿ ನುಡಿಯತೊಡಗುತ್ತಾಳೆ. ದೇವಿಯ ಈ ಹೊಸ ಅವತಾರಕ್ಕೆ ಅವಳು ಈ ನೆಲದ ಮೂಲದೇವತೆಯೆಂಬ ಚರಿತ್ರೆಯ ಬೆಂಬಲವಿದೆ. ಈ ಬೆಳವಣಿಗೆಯಿಂದಾಗಿ ಆಡುಕಳ ಅನೇಕ ಹೊಸ ಬೆಳವಣಿಗೆಗಳ ಕೇಂದ್ರವಾಗುತ್ತದೆ. ದಶರಥ ಗುರುವಾಗಿ, ಬಂದ ಶಿಷ್ಯಕೋಟಿಗೆ ಅನುಗ್ರಹಿಸುವ ಹೊಸ ಪಾತ್ರ ವಹಿಸಬೇಕಾಗಿದೆ!
ಸೂರಣ್ಣ, ಭವಾನಿಯರ ಧೂರ್ತ ಲೆಕ್ಕಾಚಾರಗಳು, ಮಲೆನಾಡ ಗಂಡಿಗೆ ಬಯಲುಸೀಮೆಯ ಹೆಣ್ಣು, ಶಾರದಕ್ಕಳ ಭಾವಾರ್ಥಿ ನಡತೆ, ಕಬ್ಬಿನ ಹಬ್ಬ, ಜೇನುಕಂಬಳ, ಆಡುಕಳದಿಂದ ನಿಗೂಢವಾಗಿ ಕಣ್ಮರೆಯಾಗುತ್ತ ಹೋಗುವ ಪಾತ್ರಗಳ ಸರದಿಸಾಲು... ಮುಂತಾಗಿ ಹತ್ತು ಕಡೆಗಳಿಂದ ಈ ಕಥೆ ಆಕೃತಿ ಪಡೆಯುತ್ತಾ ಆಡುಕಳದ ಮುಷ್ಠಿ ಜಾಗದಲ್ಲಿ ಇಡೀ ಮನುಷ್ಯ ವ್ಯಾಪಾರ ಕಾಣಿಸಿಕೊಳ್ಳತೊಡಗುತ್ತದೆ. ಆಡುಕಳದ ನಿಗೂಢ ಪರಿಸರವೂ, ಯಾವುದನ್ನೂ ಅದರ ಪಾಡಿಗೆ ಬಿಡಲಾರದ ಹೊಸ ಕಾಲದ ಪಲ್ಲಟಗಳ ಅಂಕಗಳೂ ಒಂದನ್ನೊಂದು ತಿಕ್ಕುತ್ತ ನಡೆಯುತ್ತವೆ. ಹಳೆಯ ಕಾಲದ ಜೀವನವನ್ನು ಹೃತ್ಪೂರ್ವಕವಾಗಿ ಪ್ರೀತಿಸುವ ದಶರಥ ಹೇಳುತ್ತಾನೆ: ‘ಮಣ್ಮನೆಯ ಮನೆತನದವರು ಜಮೀನು ಹಾಳುಬಿಟ್ಟವರಲ್ಲ. ಮನೆ ಕಳಚಿ, ಕಟ್ಟದೇ ಬಿಟ್ಟವರಲ್ಲ. ದೇವರು, ದಿಂಡರ ನೇಮ ಮರೆತವರಲ್ಲ. ನೆಪ ಮಾತ್ರಕ್ಕೆ ನಾವು ಯಜಮಾನರು ಎಂದುಕೊಂಡು ಬಾಳಿದವರು... ತಾಯಿ ಹಾಲು ಕುಡಿಸದೇ ಹೋದರೆ ಮಗು ಅಳದೇ ಇರುತ್ತದೆಯೇ? ನಾವೇ ಎಲ್ಲೋ ಹಾದಿ ತಪ್ಪಿದಂತೆ ಕಾಣುತ್ತದೆ’. ಕಾದಂಬರಿಯ ಆ ನಿರ್ದಿಷ್ಟ ಸಂದರ್ಭ ಮೀರಿಯೂ ಈ ವಾಕ್ಯಗಳಿಗೆ ಅರ್ಥವಿದೆ. ಶಾಪಗ್ರಸ್ತ ಋಷಿಯಂತೆ ಈ ಮಾತುಗಳನ್ನು ಹೇಳುತ್ತ ದಶರಥ ದಳದಳ ಅಳತೊಡಗುತ್ತಾನೆ ಅಂದರೆ ತಾಯಿಹಾಲು ಕಳಕೊಂಡ ಮಕ್ಕಳಲ್ಲಿ ದಶರಥನೂ ಸೇರಿದ್ದಾನೆ.
ಬದಲಾಗುತ್ತಿರುವ ಜೀವನಕ್ರಮ, ದೃಷ್ಟಿಗಳೊಡನೆ ಹಳೆಯ ಬಾಳಿನ ವಿಧಾನದ ಅಸಹಾಯಕ ಹೋರಾಟ ಸೋಲು, ಬದಲಾಗುತ್ತಿರುವ ಜೀವನಕ್ರಮಕ್ಕೊಂದು ತಾತ್ವಿಕ ನೆಲೆ ಇಲ್ಲವೆಂದು ತೋರುವುದು, ಆಡುಕಳದಂಥ ದ್ವೀಪಸದೃಶ ಪ್ರದೇಶದ ಬದುಕೂ ವ್ಯಸ್ತಗೊಳ್ಳುತ್ತಿರುವುದು, ‘ಕಣ್ಮರೆಯಾಗುವುದೇ’ ಹಳೆಯ ಬದುಕಿಗಿರುವ ಪರಿಹಾರವಾಗಿರಬಹುದೇ ಎಂಬಂತೆ ಪಾತ್ರಗಳು ಕಾಣಿಸದಂತಾಗುವುದು... ಹೀಗೆ ಹಲವು ಆಯಾಮಗಳಿಂದ ಕೆಣಕುವಂತಿರುವ ‘ಆಡುಕಳ’ ವರ್ತಮಾನವನ್ನು ಎದುರು ಹಾಕಿಕೊಂಡಿರುವ ಬಗೆ ಮನಸೆಳೆಯುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.