ADVERTISEMENT

ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ

ಜಿ.ಕೃಷ್ಣಪ್ಪ
Published 30 ಜನವರಿ 2016, 19:30 IST
Last Updated 30 ಜನವರಿ 2016, 19:30 IST
ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ
ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ   

ಬೆಡಗು ಬಿನ್ನಾಣದ ಆಕರ್ಷಕ ಚಿಟ್ಟೆಯನ್ನು ಕಂಡು ನಲಿದ ಮುಗ್ಧ ತಂಗಿಯ ಉತ್ಸಾಹವನ್ನು ಕವಿ ದ.ರಾ. ಬೇಂದ್ರೆ ‘ಪಾತರಗಿತ್ತಿ’ ಕವನವಾಗಿ ರಚಿಸಿದ್ದಾರೆ. ಅವರ ನವನವೀನ ಬಣ್ಣನೆಯಲ್ಲಿ ನಮಗೆ ಗೊತ್ತಿರುವ ಚಿಟ್ಟೆಯ ಅಪರಿಚಿತ ಆಯಾಮಗಳನ್ನು ತಿಳಿದಾಗ ಮನಸ್ಸು ಮುದಗೊಳ್ಳುತ್ತದೆ. ತಂಗಿಯು ಅಕ್ಕನಿಗೆ ಕೇಳುತ್ತಿದ್ದಾಳೆ:

ಪಾತರಗಿತ್ತೀ ಪಕ್ಕಾ / ನೋಡೀದೇನ ಅಕ್ಕಾ!
ತಂಗಿಯು ತಾನು ಪಾತರಗಿತ್ತಿಯ ಪಕ್ಕ(ರೆಕ್ಕೆ)ದಲ್ಲಿ ಕಂಡ ಬೆರಗನ್ನು ಅಕ್ಕನಿಗೆ ಹೇಳುತ್ತ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾಳೆ. ಆ ತಂಗಿಗೆ ಪಾತರಗಿತ್ತಿಯ ರೆಕ್ಕೆಯ ಮೇಲಿರುವುದು ಹಳ್ಳಿಯ ಜನಗಳ ಮೈ ಮುಖದ ಮೇಲೆ ಕಂಡ ಹಚ್ಚೆಯ ಪ್ರತಿರೂಪ. ಅವಳು ಆ ದೇಸಿಕಲೆಯನ್ನು ಹಸಿರು ಗಿಡ ಮೂಲಿಕೆಗಳಿಂದ ತಯಾರಿಸಿದ ರಸವನ್ನು ಹಚ್ಚಿ, ಹಚ್ಚೆ ಚುಚ್ಚುವುದನ್ನು ಕಂಡಿದ್ದಾಳೆ. ಆ ಚುಚ್ಚಿದ ಭಾಗಕ್ಕೆ ನಂಜು ಆಗದಿರಲು ಅರಿಷಿಣ ಹಚ್ಚುವುದನ್ನು ನೋಡಿದ್ದಾಳೆ. ಹಣೆ, ಗಲ್ಲ, ಮುಂಗೈ, ತೋಳುಗಳ ಮೇಲೆ ಚಿತ್ತಾರಗೊಂಡ ಹೂವು, ನಕ್ಷತ್ರ, ಸೀತೆ ಸೆರಗು, ಮುತ್ತಿನ ಬಳ್ಳಿ, ಒಡವೆ, ಶಿವನ ಬಾಸಿಂಗ, ಬಾಳೆಗಿಡ ಚಿತ್ತಾರಗಳ ಕಲೆಯನ್ನು ಮೈ ಮನಗಳಲ್ಲಿ ತುಂಬಿಕೊಂಡಿದ್ದಾಳೆ. ಜೀವಂತ ಚೇತನವಾದ ಪಾತರಗಿತ್ತಿಯ ರೆಕ್ಕೆಗಳಿಗೆ ಅನಂತಶಕ್ತ ಹಚ್ಚೆ ಹಚ್ಚಿರುವುದನ್ನು ಕಂಡು ಅಚ್ಚರಿಗೊಂಡಿದ್ದಾಳೆ. ಅದರ ಬಣ್ಣ ಬೆಡಗು ಲವಲವಿಕೆಗೆ ಸರಿಸಾಟಿಯಾಗಿ ಓಡಿ, ಪಾತರಗಿತ್ತಿಯನ್ನು ಹಿಡಿದು ನೋಡಿ ಅಕ್ಕನಿಗೆ ಹೇಳುತ್ತಿದ್ದಾಳೆ– ಅದನ್ನು ಮುಟ್ಟಿನೋಡಿದೆ ಕೈ ಎಲ್ಲ ಅರಿಷಿಣವಾಯಿತು. ಅದಕ್ಕೆ ಸೃಷ್ಟಿಕರ್ತ ‘ಹಸಿರು ಹಚ್ಚಿ ಚುಚ್ಚಿ! ಮೇಲಕರಿಸಿಣ ಹಚ್ಚಿ’ ಕಳುಹಿಸಿದ್ದಾನೆ!

ಚಿಟ್ಟೆಯ ರೆಕ್ಕೆಯ ಮೇಲೆ ಹುರುಪೆಗಳಿವೆ. ಆ ಮೋಹಕ ಲಾವಣ್ಯದ ‘ಪಕ್ಕ’ ಹಿಡಿಯಲು ಹೋದರೆ ನಮ್ಮ ಕೈಗೆ ಹುರುಪೆ ಅಂಟಿಕೊಳ್ಳುತ್ತದೆ. ಹಾಗೆ ಅಂಟಿಕೊಳ್ಳಲು ಅದರಲ್ಲಿರುವ ವಿವಿಧ ವರ್ಣದ್ರವ್ಯವೇ ಕಾರಣ. ಅದು ಬೆಳಕಿನ ಕಾರಣದಿಂದ ಹಲವು ಬಣ್ಣಗಳನ್ನು ಹೊಮ್ಮಿಸುತ್ತದೆ. ಆ ಹುರುಪೆಯನ್ನು ನಾವು ಹೆಚ್ಚು ಅದುಮಿ ಅಲುಗಾಡಿಸಿ ಹಿಂಸಿಸಿದಾಗ ರೆಕ್ಕೆಗಳ ಸಮತೋಲನಕ್ಕೆ ಧಕ್ಕೆಯಾಗುತ್ತದೆ.

ತಂಗಿಯ ಕುತೂಹಲದ ಹಚ್ಚೆ ಪಾತರಗಿತ್ತಿಯ ರೆಕ್ಕೆಯ ಮೇಲೆ ತನ್ನ ವರ್ಣವೈಭವದ ಚಿತ್ತಾರದಲ್ಲಿ ಮೌನದಲ್ಲಿ ಕಂಗೊಳಿಸುತ್ತಿದೆ. ಹೀಗೆ ಮೌನದ ಪ್ರತಿಮೆಯಂತೆ ಹಚ್ಚೆ ಅಲ್ಲಿರುವುದನ್ನು ಕಾವ್ಯ ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅದು ಕವಿಯ ಕಲ್ಪನಾ ಸಾಮರ್ಥ್ಯದಲ್ಲಿ ಒಂದಾದ ಕಾವ್ಯ ರಚನಾ ಕುಶಲತೆ. ಸ್ಥಾವರವಾದ ದೇಸಿಕಲೆ ಹಚ್ಚೆ ಜಂಗಮವಾಗಿ ಪಾತರಗಿತ್ತಿಯಲ್ಲಿ ಹರಿದಾಡಿ ಸಹೃದಯನಿಗೆ ಕಚಗುಳಿ ಇಡುತ್ತದೆ.

ಪಾತರಗಿತ್ತಿಯ ರೆಕ್ಕೆಯನ್ನು ನೋಡುತ್ತಿದ್ದರೆ ಅದರ ರಚನೆಯಲ್ಲಿ ಸುತ್ತಲೂ ಹೊನ್ನ ಚಿಕ್ಕಿ ಚಿಕ್ಕಿಯ ಹೊಳಪಿದೆ. ಮಧ್ಯದಲ್ಲಿ ಬೆಳಗುವ ಬೆಳ್ಳಿಯಂತಹ ಕಣ್ಣು (ಅಕ್ಕಿ=ಅಕ್ಷಿ) ಇದೆ.

ಹೊನ್ನ ಚಿಕ್ಕಿ ಚಿಕ್ಕಿ / ಇಟ್ಟು ಬೆಳ್ಳೀ ಅಕ್ಕಿ,
ಹೆಣ್ಣುಮಕ್ಕಳು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ನಲಿದ ಸೊಬಗನ್ನು ತಂಗಿಯು ಪಾತರಗಿತ್ತಿಯಲ್ಲಿ ನೋಡಿ ಅಕ್ಕನಿಗೆ ಹೇಳುತ್ತಿದ್ದಾಳೆ:
ಸುತ್ತೂ ಕುಂಕುಮದೆಳಿ / ಎಳೆದು ಕಾಡಿಗೆ ಸುಳಿ,
**
ನನ್ನ ಚಿತ್ರಕ ಶಕ್ತಿ ಉತ್ಪ್ರೇಕ್ಷೆಯನೇರಿ
ಬಣ್ಣ ಬಣ್ಣದ ಬಣ್ಣನೆಗೆ ಒಲಿದಿತು
ಎಂದು ಹೇಳುವ ಬೇಂದ್ರೆಯವರ ಉತ್ಪ್ರೇಕ್ಷೆಯು ‘ಪಾತರಗಿತ್ತಿ’ಯಲ್ಲಿ ಚೆಲ್ಲುವರಿದಿದೆ. ಅವರ ಚಿತ್ರಕಶಕ್ತಿ ತಂಗಿಯ ಕುತೂಹಲದಲ್ಲಿ ಗರಿಗೆದರಿದೆ. ಜನಪದರ ಅನುಭವ ಜಾಣತನದಿಂದ ಧ್ವನಿಯಾಗಿ ಹೊಮ್ಮುವುದೇ ನುಡಿಗಟ್ಟು. ಅದರ ಭಾವತೀವ್ರತೆ ವರ್ಣನಾತೀತ. ಅಂತಹದೇ ನುಡಿಗಟ್ಟು ‘ಗಾಳಿ ಕೆನೆ’ಯನ್ನು ಬೇಂದ್ರೆಯವರು ಪಾತರಗಿತ್ತಿಯನ್ನು ಬಣ್ಣಿಸಲು ಬಳಸಿದ್ದಾರೆ. ಪಾತರಗಿತ್ತಿಯ ಶುಭ್ರತೆ, ನುಣುಪು, ರಂಗು, ಕಾಂತಿಗೆ ಮಾರುಹೋದ ತಂಗಿಯು– ‘ಇದನ್ನು ಗಾಳಿಯ ಕೆನೆಯಲ್ಲಿ ಮಾಡಿದ್ದಾರಲ್ಲವೆ!’ ಎಂದು ಅಕ್ಕನನ್ನು ಕೇಳುತ್ತಾಳೆ.

ಗಾಳೀ ಕೆನೀ ತೀನs / ಮಾಡಿದ್ದಾರ ತಾನ!
ಕಣ್ಣು ಹರಿದಷ್ಟು ದೂರ ಅನಿರ್ಬಂಧಿತವಾಗಿ ಈ ಕೊನೆಯಿಂದ ಆ ಕೊನೆಯವರೆಗೆ (ಆರುಪಾರು) ಹಾರಾಡುತ್ತಿರುವ, ಗುಂಪು ಗುಂಪಾಗಿ ಹಾರಾಡುತ್ತಿರುವ ಅಗಣಿತ ಪಾತರಗಿತ್ತಿಯನ್ನು ವೀಕ್ಷಿಸುತ್ತ ತಂಗಿ ಅಕ್ಕನನ್ನು ಪ್ರಶ್ನಿಸುತ್ತಾಳೆ:

ನೂರು ಆರು ಪಾರು / ಯಾರು ಮಾಡಿದ್ದಾರು!
ತಂಗಿಯ ಪ್ರಶ್ನೆ ಅಕ್ಕನಿಗೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ಅದರ ರೆಕ್ಕೆಯ ಮೇಲೆ ವಿವಿಧ ಬಣ್ಣಗಳ ಮೆರವಣಿಗೆಯಿದ್ದರೂ ಮಧ್ಯದಲ್ಲಿ ನವಿಲುಗಣ್ಣು ಚಿತ್ರಿತವಾಗಿದೆ. ಇಷ್ಟೆಲ್ಲ ವರ್ಣ ವೈಭವದ ಹಚ್ಚೆ ಹೊಂದಿದ ಅದರ ತೆಳುವಾದ ರೆಕ್ಕೆ ರೇಷ್ಮೆಯಷ್ಟು ನಯವಾಗಿದೆ. ಅದರ ಸೂಕ್ಷ್ಮತೆಯ ಕಾರಣ ಅದನ್ನು ಮುಟ್ಟಲು ತನಗೆ ಭಯ ಎಂದು ತಂಗಿ ಹೇಳುವಲ್ಲಿ– ಅವಳ ಮರುಕ ಹಾಗೂ ತನ್ನ ಹಿಡಿತದಿಂದ ಅದು ಹರಿಯುವುದೆಂಬ ನೋವು ಕಾಡಿದೆ.
ಏನು ಬಣ್ಣ ಬಣ್ಣ / ನಡುವೆ ನವಿಲಗಣ್ಣ!

ರೇಶಿಮೆ ಪಕ್ಕ ನಯ / ಮುಟ್ಟಲಾರೆ ಭಯ!
ಹಾರಾಡುವ ಹೂವಿನಂತಿರುವ ಪಾತರಗಿತ್ತಿಯು ಹೂವಿನ ಬಳಿ ಹೋಗಿ ಗಲ್ಲಾ ತಿವಿಯುವುದನ್ನು ಗಮನಿಸಿದ ತಂಗಿಗೆ ಆದ ಮುದವು ಸಹೃದಯರ ಮನಸ್ಸನ್ನು ಅರಳಿಸುತ್ತದೆ.

ಹೂವಿನ ಪಕಳಿಗಿಂತ / ತಿಳಿವು ತಿಳಿವು ಅಂತ?
ಹೂವಿಗೆ ಹೋಗಿ ತಾವ / ಗಲ್ಲಾ ತಿವಿತಾವ.

**
ಚಿಟ್ಟೆಗಳು ಚೆಲ್ಲುವರಿದು, ಚೆಲ್ವುವರಿದು (ಅಂದವಾಗಿ ಓಡು) ಇರುವ ಪ್ರಾಕೃತಿಕ ಎಡೆಗಳಾದ ಹುಲ್ಲುಗಾವಲು, ತೋಟ, ಕಳ್ಳಿ, ನಾಯಿಕೊಡೆ, ರುದ್ರಗಂಟಿ ಹೂ, ವಿಷ್ಣುಗಂಟಿ ಹೂ, ಹೇಸಿಗೆ ಹೂ, ಮದುಗುಣಿಕಿ ಹೂ, ಗುಲಬಾಕ್ಷಿ ಹೂ, ಸೀಗಿಬಳ್ಳಿ, ಗೊರಟಿಗೆ ಹೂ, ಮಾಲಿಂಗನ ಬಳ್ಳಿಗಳಲ್ಲಿ ಓಡಾಡಿರುವುದು ಅವುಗಳ ಬದುಕಿನ ರೀತಿಯ ಸೂಕ್ಷ್ಮ ವಿಶ್ಲೇಷಣೆಯಾಗಿದೆ. ತಂಗಿಯು ಪಾತರಗಿತ್ತಿಯ ಹುಲ್ಲುಗಾವಲದಲ್ಲಿಯ ಚೆಲ್ಲಾಟವನ್ನು, ಹೆಣ್ಣುಮಕ್ಕಳ ಹುಡುಗಾಟಿಕೆಗೆ ಹೋಲಿಸಿಕೊಂಡು ಪ್ರಕಟಪಡಿಸಿರುವ ಸಹಜಾಭಿವ್ಯಕ್ತಿ– ರಸಿಕ ನಿಂತು ನೋಡುವಂತಿದೆ.
ಹುಲ್ಲುಗಾವುಲದಾಗ / ಹಳ್ಳೀ ಹುಡುಗೀ ಹಾಂಗ–

ADVERTISEMENT

ಹುಡದೀ ಹುಡದೀ / ಭಾಳ ಆಟಕ್ಕಿಲ್ಲ ತಾಳ.
(ಮರಾಠಿ ಮೂಲದ ಹುಡದಿ ಪದದ ಅರ್ಥ: 1. ಗೊಂದಲ; ಗಲಾಟೆ; 2. ಹುಡುಗಾಟಿಕೆ; ಚೆಲ್ಲಾಟ.)

ಮದುಗುಣಿಕಿ ವಿಷದ ಗಿಡ. ಅದರ ಎಲೆಯನ್ನು ಕುಟ್ಟಿ ಮಜ್ಜಿಗೆಯಲ್ಲಿ ಕಲಸಿ ಕಡಲೆಗೆ ಹಚ್ಚಿ ಬೀಜೋಪಚಾರ ಮಾಡಿ ರೈತರು ಬಿತ್ತುತ್ತಾರೆ. ಅದರಲ್ಲಿ ರೋಗ ನಿರೋಧಕ ಶಕ್ತಿಯಿದೆ. ಪಾತರಗಿತ್ತಿಯು ಅದನ್ನು ಹುರುಪಿಗಿಷ್ಟು ಮೇಯುತ್ತದೆ! ಎಲೆಯ ತುದಿ ಚೂಪಾಗಿ ಮುಳ್ಳು ಹೊಂದಿರುವ ಗಿಡ ಗೊರಟಿಗೆ. ಅದರ ಬಣ್ಣದ ಹೂವನ್ನು ಪೂಜೆಗೆ ಬಳಸುತ್ತಾರೆ. ಪಾತರಗಿತ್ತಿಯು ಅದಕ್ಕೆ ದೂರದಿಂದಲೆ ನಮಸ್ಕರಿಸುತ್ತದೆ! ಇದು ಅದರ ಜಾಣ, ಎಚ್ಚರದ ನಡೆ.
ಮದುಗುಣಿಕಿಯ ಮದ್ದು / ಹುರುಪಿಗಿಷ್ಟು ಮೆದ್ದು,
**
ಗೊರಟಿಗೆಗೆ ಶರಣ / ಮಾಡಿ ದೂರಿಂದsನ.
ದೀಪಾವಳಿಯಲ್ಲಿ ತಂಗಿಯು ತಾನು ಬಿಸಿನೀರು ಸ್ನಾನ ಮಾಡುವ ಹಂಡೆಗೆ ಸುತ್ತಿದ ಮಾಲಿಂಗನ ಬಳ್ಳಿಯನ್ನು ನೆನೆದು, ಹೊರಗೆ ಸುಖದ ಸೊಬಗಿನಲ್ಲಿ ಪಾತರಗಿತ್ತಿ ಅದರ ಮೇಲೆ ತೂಗಾಡುವುದನ್ನು ವರ್ಣಿಸಿದ್ದಾಳೆ. ಮಾಲಿಂಗನ ಬಳ್ಳಿಯಲ್ಲಿರುವ ಕಾಯಿಗಳು ಲಿಂಗಾಕೃತಿಯಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ.
ಮಾಲಿಂಗನ ಬಳ್ಳಿ / ತೂಗೂ ಮಂಚದಲ್ಲಿ

ತೂಗಿ ತೂಗಿ ತೂಗಿ / ದಣಿಧಾಂಗ ಆಗಿ.
ಚಿಟ್ಟಿಗಳು ಹೂಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಾತರಗಿತ್ತಿಯು ಗುಲಬಾಕ್ಷಿ ಹೂವಿನ ಕುಶಲ ವಿಚಾರಿಸುತ್ತ ಗಂಡು ಹಡಿಯಲು ಹಾರೈಸಿ ಸಾಗುವುದನ್ನು ಕವಿ– ಪ್ರಕೃತಿಯ ವಿಸ್ಮಯ ಮಾತಾಡಿದಂತೆ ಬಣ್ಣಿಸಿದ್ದಾರೆ.

ಗುಲಬಾಕ್ಷಿಯ ಹೂವ / ಕುಶಲ ಕೇಳತಾವ;

ಹುಡಿಯ ನೀರಿನ್ಯಾಗ / ತುಳಕಿಸುತ್ತ ಬ್ಯಾಗ

ಹಡಿಯೆ ಬೀಜ ಗಂಡು / ಹಾರ ಹರಿಕಿ ಅಂದು,

‘ಪಾತರಗಿತ್ತಿ’ ಶಿಶುಗೀತವು ಜಾನಪದ ದ್ವಿಪದಿಯಲ್ಲಿ ಅಂಶ ಛಂದಸ್ಸಿನಲ್ಲಿದೆ. ಪ್ರತಿ ಸಾಲು ಮೂರು ತಾಳಕ್ಕೆ ದುಡಿಯುತ್ತ, ಅಂತ್ಯ ಪ್ರಾಸವು ದೇಸಿಗತ್ತಿಗೆ, ಹಾಡಿನ ಮಟ್ಟಿಗೆ ಕುಣಿಯುತ್ತದೆ. ಇಲ್ಲಿಯ ಕಾವ್ಯಭಾಷೆ ಮಗುವಿನ ಸಹಜ ಸರಳ ನುಡಿಯಲ್ಲಿ ಪಾತರಗಿತ್ತಿಯ ಮೋಹಕ ಲಾವಣ್ಯದಂತಿದೆ.

ತಾಳ ಚವ್ವ ಚಕ್ಕ / ಕುಣಿತ ತಕ್ಕ ತಕ್ಕ
ಪಾತರಗಿತ್ತಿ ನಿಸರ್ಗದ ಶ್ರೇಷ್ಠ ಕೊಡುಗೆ. ಅದರ ಬಗ್ಗೆ ಅರಿವು ಮೂಡಿಸುತ್ತ, ಅದರ ಉಳಿವಿನಲ್ಲಿ ಈ ನೆಲದ ಸೊಗಸು ಇದೆ ಎಂದು ನಿರೂಪಿಸುವ ಅತ್ಯುತ್ತಮ ಪರಿಸರ ಪೋಷಕ ಕವನ ಇದಾಗಿದೆ. ಈ ಜಗದ ಸೃಷ್ಟಿ ಸೌಂದರ್ಯ ಮೂಡುವ ಬಗೆ ಹೇಗೆ ಗೂಢವೊ, ಅದು ನಿಸರ್ಗದಲ್ಲಿ ಒಂದಾಗಿ ಹೋಗುವುದು ಅಷ್ಟೇ ನಿಗೂಢ ಎಂಬುದನ್ನು ಈ ಕವನದ ಕೊನೆಯ ಭಾಗ ಧ್ವನಿಸುತ್ತದೆ.
ಕಾಣದೆಲ್ಲೊ ಮೂಡಿ / ಬಂದು ಗಾಳಿ ಗೂಡಿ,
ಇನ್ನು ಎಲ್ಲಿಗೋಟ? / ನಂದನದ ತೋಟ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.