ADVERTISEMENT

ಹಿಂದಿ ಶಾರದೆ ಮೆಚ್ಚಿದ ಕನ್ನಡದ ‘ನವನೀತ’

ಸುಬ್ಬರಾವ್
Published 14 ಜೂನ್ 2014, 19:30 IST
Last Updated 14 ಜೂನ್ 2014, 19:30 IST
ಹಿಂದಿ ಶಾರದೆ ಮೆಚ್ಚಿದ ಕನ್ನಡದ ‘ನವನೀತ’
ಹಿಂದಿ ಶಾರದೆ ಮೆಚ್ಚಿದ ಕನ್ನಡದ ‘ನವನೀತ’   

ಹಿರಿಯ ಪತ್ರಕರ್ತ ಎಚ್‌.ವೈ. ನಾರಾಯಣದತ್ತ (ನಿಧನ: ಜೂನ್ 1, 2014) ಅವರು ಕನ್ನಡ ನಾಡಿಗೆ ಹೆಚ್ಚು ಪರಿಚಿತರಲ್ಲ. ಆದರೆ ಅವರನ್ನು ಹಿಂದಿ ಪತ್ರಿಕಾಕ್ಷೇತ್ರದಲ್ಲಿ ‘ಕಾವೇರಿ ತೀರದಿಂದ ಗಂಗಾ ತಟಕ್ಕೆ ಬೀಸಿದ ಹೊಸಗಾಳಿ’, ‘ಹಿಂದಿ ಸರಸ್ವತಿಗೆ ಕನ್ನಡಮ್ಮನ ವರದಾನ ’– ಎಂದು ಬಣ್ಣಿಸಲಾಗುತ್ತಿತ್ತು.

ಹಿಂದಿ ಪತ್ರಿಕಾ ಜಗತ್ತಿನ ಶಬ್ದಬ್ರಹ್ಮ ಎಂದೇ ಗುರುತಿಸಲಾಗುವ ಹೊಳೆನರಸೀಪುರ ಯೋಗನರಸಿಂಹ ನಾರಾಯಣ ದತ್ತ (ಜನನ: ೧೯೨೯) ಕೊನೆಯ ಆರೇಳು ವರ್ಷಗಳ ಕಾಲ ಬೆಂಗಳೂರಿನಲ್ಲೇ ಕಳೆದರೂ ಕನ್ನಡಿಗರಿಂದ ಬಚ್ಚಿಟ್ಟುಕೊಂಡಿದ್ದರೆಂದೇ ಹೇಳಬೇಕು. ಈ ಬಹುಭಾಷಾ ವಿಶಾರದ, ಕೊನೆಯುಸಿರು ಇರುವವರೆಗೂ ಲೈಮ್‌ಲೈಟಿನಿಂದ ದೂರವಿರಬೇಕೆಂದು ಪಣತೊಟ್ಟು ನೇಪಥ್ಯದಲ್ಲೇ ಉಳಿದರು. ಹೇಗೆ ಬಾಳಿದರೋ ಹಾಗೆಯೆ ಸದ್ದಿಲ್ಲದೆ ಇದೇ ಜೂನ್‌ ಒಂದರಂದು ನಿಶ್ಶಬ್ದವಾದರು.

ನಾರಾಯಣ ದತ್ತರ ತಂದೆ ಹೊಳೆನರಸಿಪುರ ಯೋಗನರಸಿಂಹ (೧೮೯೭–೧೯೭೧) ಸಂಸ್ಕೃತ ವಿದ್ವಾಂಸರು. ಮೈಸೂರು-ಬೆಂಗಳೂರಿನ ಸಂಸ್ಕೃತ ಪಾಠಶಾಲೆಗಳಿಗೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಎಂಟು ಮಕ್ಕಳ ತುಂಬು ಕುಟುಂಬ. ಮಕ್ಕಳಿಗೆಲ್ಲಾ ಆಧುನಿಕ ಶಿಕ್ಷಣ ಕೊಡಿಸಿದ ಯೋಗನರಸಿಂಹರಿಗೆ, ಒಬ್ಬ ಮಗನಾದರೂ ತನ್ನಂತೆ ಸಂಸ್ಕೃತ ಓದಬೇಕೆಂದು ಹಂಬಲ. ‘ಸಂಸ್ಕೃತ ಓದುತ್ತೀಯೇನಪ್ಪಾ’ ಎಂದು ತಂದೆ ಕೇಳಿದಾಗ, ‘ಓದ್ತೀನಿ’ ಎಂದು ಉತ್ತರಿಸಿದ ಎರಡನೆ ಮಗ ನಾಣಿ ಆಗ ೧೧ ವರ್ಷದ ಎಳೆಯ. ಪಂಡಿತರಿಗೆ, ಸಂಸ್ಕೃತದಲ್ಲಿ ಅಭಿಮಾನವಿದ್ದರೂ, ಮಗ ಗೊಡ್ಡು ಪಂಡಿತನಾಗುವುದು ಬೇಕಿರಲಿಲ್ಲ.

ಸಂಸ್ಕೃತ ಪಾಂಡಿತ್ಯದ, ಜೊತೆಜೊತೆಗೆ ಆಧುನಿಕ ದೃಷ್ಟಿಕೋನ, ವಿಜ್ಞಾನ ಪ್ರಜ್ಞೆ , ಇಂಗ್ಲಿಷ್ ಸಾಹಿತ್ಯ-ವಿಚಾರಧಾರೆಗಳ ಗಂಧ ಹಾಗೂ ದೇಶಪ್ರೇಮದ (ಆಗ ಗಾಂಧೀ ಯುಗ) ಕಿಡಿಹೊತ್ತಿಸುವ ವಿದ್ಯಾಭ್ಯಾಸವನ್ನು ನಾಣಿ ಪಡೆಯಬೇಕೆಂದು ಅವರು ನಿಶ್ಚಯಿಸಿದರು. ಹರಿದ್ವಾರದ ಗುರುಕುಲ ಕಾಂಗ್ರಿ ಮಹಾವಿದ್ಯಾಲಯಕ್ಕೆ ಭೇಟಿಕೊಟ್ಟರು.

ಸ್ವಾಮಿ ಶ್ರದ್ಧಾನಂದರು ಸ್ಥಾಪಿಸಿದ ಈ ಮಹಾವಿದ್ಯಾಲಯದಲ್ಲಿ ಗುರುಕುಲ ಪದ್ಧತಿಯಲ್ಲಿ ಸಂಸ್ಕೃತವೊಂದೇ ಅಲ್ಲ, ಇಂಗ್ಲಿಷ್, ಹಿಂದಿ, ವಿಜ್ಞಾನ, ಇತಿಹಾಸ, ರಾಜ್ಯಶಾಸ್ತ್ರ ಮೊದಲಾದ ವಿಷಯಗಳಲ್ಲಿ ವಿದ್ಯಾರ್ಥಿಗಳನ್ನು ತರಬೇತಿ ಮಾಡುತ್ತಿದ್ದ ವಿಧಾನ ಹಾಗೂ ದೇಶಭಕ್ತಿಯ ವಾತಾವರಣ ಯೋಗನರಸಿಂಹರಿಗೆ ರುಚಿಸಿತು. ೧೯೪೨ರಲ್ಲಿ ಅಣ್ಣ ಎಚ್‌.ವೈ. ಶಾರದಾ ಪ್ರಸಾದ್ (ಮೂವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದವರು) ಮೈಸೂರಿನ ಮಹಾರಾಜ ಕಾಲೇಜಿನ ತರಗತಿಯಿಂದ ಹೊರಬಂದು ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿ, ಜೈಲು ಸೇರಿದಾಗ, ತಮ್ಮ ನಾಣಿ, ದೂರದ ಗುರುಕುಲದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡುತ್ತ, ದೇಶದ ಭದ್ರ ಭವಿಷ್ಯಕ್ಕೆ ಸಮಾಜವಾದದ ಬುನಾದಿ ಅಗತ್ಯ ಎಂದು ಸ್ನೇಹಿತರೊಡನೆ ಚರ್ಚಿಸುತ್ತಿದ್ದರು.

ರಜೆಯಲ್ಲಿ ಬೆಂಗಳೂರಿಗೆ ಬಂದಾಗ ಮನೆಯಲ್ಲಿ ಕಬೀರ, ರವಿದಾಸ ಹಾಗೂ ಗುರು ನಾನಕನ ಗೀತೆಗಳನ್ನು ಅಣ್ಣ ಹಾಡುವುದು, ಸ್ವತಃ ವಾಗ್ಗೇಯಕಾರರಾದ ಅಪ್ಪ (ಯೋಗನರಸಿಂಹರ ಕೃತಿಗಳನ್ನು ಎಂ.ಎಸ್.ಸುಬ್ಬುಲಕ್ಷ್ಮಿ ಹಾಡಿದ ಕ್ಯಾಸೆಟ್ ಲಭ್ಯವಿದೆ), ನಾಣಿಯ ಗಾಯನಕ್ಕೆ ತಲೆದೂಗುತ್ತಿದುದನ್ನು ತಂಗಿ ನೀರಜ ನೆನೆಯುತ್ತಾರೆ. ನಾಣಿ ತಬಲ ಬಾರಿಸುತ್ತ ಹಾಡುತ್ತಿದ್ದ ಎಂದು ತಮ್ಮ ಮೋಹನರಾಮ್ ಹೇಳುತ್ತಾರೆ. ಡಿ.ವಿ.ಜಿ., ಮಾಸ್ತಿ, ದೇವುಡು, ವೀಸೀ ಮೊದಲಾದ ಹಿರಿಯ ಸಾಹಿತಿಗಳು ತಂದೆಯ ಸ್ನೇಹಿತರು. ಇವರೆಲ್ಲರ ಸಾಹಿತ್ಯ ಸಲ್ಲಾಪವನ್ನು ಮೈಯೆಲ್ಲಾ ಕಿವಿಯಾಗಿ ಕೇಳುತ್ತಿದ್ದ ಹುಡುಗರು– ನಾಣಿ ಮತ್ತು ಹಿರಿಯಣ್ಣ ಶೌರಿ ( ಶಾರದಾ ಪ್ರಸಾದ್). ಮಾಸ್ತಿಯವರು ‘ಪೆನ್ ಅಧಿವೇಶನ’ದ ಅಧ್ಯಕ್ಷತೆ ವಹಿಸಲು ಮುಂಬಯಿಗೆ ಬಂದಾಗ, ಅವರಿಗೆ ಊರು ತೋರಿಸಿದ್ದು ನಾಣಿಯೆ. ಮಾಸ್ತಿಯವರ ನಾಲ್ಕಾರು ಕಥೆಗಳನ್ನು ನಾರಾಯಣ ದತ್ತ ಹಿಂದಿಗೆ ಅನುವಾದಿಸಿದ್ದಾರೆ.

ವೃತ್ತಿ ಜೀವನದಲ್ಲಿ ಕನ್ನಡದ ಸಂಪರ್ಕ ಕಡಿಮೆಯಾದರೂ ಅವರ ಓದಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಕನ್ನಡ ಪುಸ್ತಕಗಳಿದ್ದವು.  ಅನಂತಮೂರ್ತಿಯವರ ‘ಸಂಸ್ಕಾರ’ ಓದಿ, ಗೂಡಿನಿಂದ ಹೊರಬಿದ್ದ ಆ ಕಾಲದ ಬ್ರಾಹ್ಮಣ ಸಮಾಜವನ್ನು ಚಿತ್ರಿಸಿದ್ದಾರೆ ಎಂದು ಮೆಚ್ಚಿದರೆ, ಎಸ್.ಎಲ್. ಭೈರಪ್ಪನವರ ಆತ್ಮಕಥೆ, ಚಿತ್ತಾಲರ ಸಣ್ಣಕಥೆಗಳನ್ನು ಮೆಚ್ಚಿ ಮಾತನಾಡುತ್ತಿದ್ದುದನ್ನು ನಾನು ಕೇಳಿದ್ದೇನೆ. ತೀ.ನಂ.ಶ್ರೀ ಅವರ ಭಾರತೀಯ ಕಾವ್ಯ ಮೀಮಾಂಸೆ ಹಾಗೂ ಎ.ಆರ್. ಕೃಷ್ಣಶಾಸ್ತ್ರಿಗಳ ವಚನ ಭಾರತ ಅವರು ಮೆಚ್ಚಿದ ಮೇರುಕೃತಿಗಳು. ಇಂತಹ ಇನ್ನೊಂದು ಕೃತಿ ಬೇರೆ ಯಾವ ಭಾಷೆಯಲ್ಲೂ ಬಂದಿಲ್ಲ ಎಂದು ಹೇಳುತ್ತಿದ್ದರು.
ನಾರಾಯಣ ದತ್ತ ಅವರ ಕನ್ನಡ ಬರಹವನ್ನು, ಶಾರದಾಪ್ರಸಾದ್ ಸಂಪಾದಿಸಿದ, ‘ಮೊಮ್ಮಕ್ಕಳು ಹೇಳಿದ ಅಜ್ಜಿ ಕಥೆ’ ಸಂಗ್ರಹದಲ್ಲಿ ಕಾಣಬಹುದು. ವಾಗ್ಗೇಯಕಾರ ತಂದೆ ಯೋಗನರಸಿಂಹರ ಸಂಸ್ಕೃತ ಗೀತ ರಚನೆಗಳನ್ನು ನಾರಾಯಣ ದತ್ತ ಕನ್ನಡಕ್ಕೆ ಅನುವಾದಿಸಿದ್ದಾರೆ.

ಸ್ವತಂತ್ರ ಭಾರತದ ಮೊದಲ ದಶಕದಲ್ಲಿ ಗುರುಕುಲ ಕಾಲೇಜಿನಿಂದ ಪದವೀಧರರಾಗಿ ಹೊರಬಂದ ನಾರಾಯಣ ದತ್ತ ತಮ್ಮ ವೃತ್ತಿ ಜೀವನವನ್ನು ಮುಂಬಯಿಯಲ್ಲಿ ಪ್ರಾರಂಭಿಸಿದರು. ಮೊದಲು, ಸಿನಿಮಾ ಪತ್ರಿಕೆ ‘ಸ್ಕ್ರೀನ್’, ನಂತರ ೧೯೫೧ರಲ್ಲಿ ಹಿಂದಿ ಮಾಸಿಕ ‘ನವನೀತ್’ ಸೇರಿದರು. ೧೯೫೭ ರಲ್ಲಿ ‘ನವನೀತ’ದ ಸಂಪಾದಕರಾದರು.

‘ಹೊಸಭಾರತವನ್ನು ರೂಪಿಸುವುದರಲ್ಲಿ ಬರಹಗಾರರು ರೂವಾರಿಗಳಾಗಬೇಕೆಂದು ಬಯಸಿದ ನಾರಾಯಣ ದತ್ತ ನವನೀತ್‌ ಮಾಸ ಪತ್ರಿಕೆಯನ್ನು ಹೊಸಪೀಳಿಗೆಯ ಹಿಂದಿ ಬರಹಗಾರರನ್ನು ರೂಪಿಸುವ ಕಮ್ಮಟವನ್ನಾಗಿ ಬಳಸಿಕೊಂಡರು. ‘ಯುವ ಬರಹಗಾರರು ನವನೀತದಲ್ಲಿ ಪ್ರಕಟವಾದ ತಮ್ಮ ಲೇಖನಗಳ ಸಂಪಾದಿತ ಕರಡು ಪ್ರತಿಯನ್ನು ಬೇಡಿ ತೆಗೆದುಕೊಳ್ಳುತ್ತಿದ್ದರು’ ಎಂದು ಲೇಖಕ, ನವ ಭಾರತ್ ಟೈಮ್ಸ್ ದೈನಿಕದ ಸಂಪಾದಕರಾಗಿ ನಿವೃತ್ತಿ ಹೊಂದಿ ಈಗ ನವನೀತದ ಸಂಪಾದಕರಾಗಿರುವ ವಿಶ್ವನಾಥ್ ಸಚ್‌ದೇವ್ ಹೇಳುತ್ತಾರೆ. ‘ಹಿಂದಿ ಬರಹಗಾರರ ಸಮುದಾಯವನ್ನು ತಯಾರು ಮಾಡಿದ ಅಪ್ಪಟ ಸಮಾಜವಾದಿ ಸಂಪಾದಕ ನಾರಾಯಣ ದತ್ತ’ ಎಂದು ಅವರು ವರ್ಣಿಸುತ್ತಾರೆ.

ಕಾರ್ಯಕ್ರಮವೊಂದರಲ್ಲಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ನಾರಾಯಣ್‌ ದತ್ತ ಕನ್ನಡಿಗ ಎಂದು ತಿಳಿದಾಗ ಅಚ್ಚರಿಯಾಗಿತ್ತು. ‘ಹಿಂದೀ ಜನರು ಈ ಕನ್ನಡಿಗನಿಗೆ ಋಣಿಗಳು’ ಎಂದವರು ಶ್ಲಾಘಿಸಿದ್ದರು.

ಗಣೇಶ್ ಶಂಕರ್ ವಿದ್ಯಾರ್ಥಿ ಸನ್ಮಾನ್, ಗಣೇಶ್ ಮಂತ್ರಿ ಸನ್ಮಾನ್, ಭೂಪಾಲದ ಪತ್ರಿಕಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಅವರಿಗೆ ಸಂದಿವೆ. ನಾರಾಯಣ ದತ್ತ ಅವರ- ವ್ಯಕ್ತಿ ಮತ್ತು ಸಾಧನೆ ಕುರಿತು ಹಿಂದಿಯಲ್ಲಿ ಹಲವಾರು ಕೃತಿಗಳೂ ಬಂದಿವೆ.

‘ತಮ್ಮ ಸುತ್ತಲಿನ ಪರಿಸರವಷ್ಟೇ ಅಲ್ಲ, ಜಗತ್ತಿನ ಆಗುಹೋಗುಗಳಲ್ಲಿ ಓದುಗರಿಗೆ ಸಂವೇದನಾಶೀಲತೆಯನ್ನು ಜಾಗೃತಗೊಳಿಸುವುದು ಪತ್ರಕರ್ತನ ಕೆಲಸ’ ಎಂದವರು ನಂಬಿದ್ದರು. ಇದಕ್ಕಾಗಿ, ಮೊದಲು ಪತ್ರಕರ್ತನ ಹೃದಯ ಮಿಡಿಯಬೇಕು ಎನ್ನುತ್ತಿದ್ದರು. ಬಡಕಲು ದೇಹದ ಈ ಬ್ರಹ್ಮಚಾರಿಗೆ ಎರಡು ತುತ್ತು ಮೊಸರನ್ನ ಸಾಕಾದರೂ, ಅವರ ಜ್ಞಾನದಾಹಕ್ಕೆ ಕೊನೆಯೇ ಇರಲಿಲ್ಲ.

ಅವರಿಗೆ ರುಚಿಸದ ವಿಷಯಗಳೇ ಇರಲಿಲ್ಲ. ೫೦ ವರ್ಷಗಳಲ್ಲಿ ಕೈಯಲ್ಲೊಂದು ಪುಸ್ತಕವಿಲ್ಲದೆ ಅವರನ್ನು ನಾನು ಕಂಡೇ ಇಲ್ಲ. ಅವರದು ಯಾವಾಗಲೂ ಅಪ್‌ಡೇಟೆಡ್ ನಾಲೆಡ್ಜ್. ಡೌಟ್ ಇದ್ದರೆ ಬಿಟ್ಟು ಬಿಡು ಎಂದು ಪಾಶ್ಚಾತ್ಯ ಪತ್ರಕರ್ತರು ಹೇಳಿದರೆ, ಡೌಟ್ ಇದ್ದಲ್ಲಿ ಇನ್ನೂ ಅಗಿ, ಸತ್ಯವನ್ನು ಹುಡುಕು ಎಂದು ಭಾಯಿಸಾಬ್ ನಮ್ಮನ್ನು ಹುರಿದುಂಬಿಸುತ್ತಿದ್ದರು. ಓದುಗರಿಗೆ ತಿಳಿದುಕೊಳ್ಳುವ ಹಕ್ಕಿದೆ ಎನ್ನುತ್ತಿದ್ದರು. ‘ಅವರಿಗೆ ಜರ್ನಲಿಸಂ ಒಂದು ಯಜ್ಞವಾಗಿತ್ತು’ ಎಂದು ವಿಶ್ವನಾಥ್ ಸಚ್‌ದೇವ್‌ ನೆನಪಿಸಿಕೊಳ್ಳುತ್ತಾರೆ.

‘ಗಂಗೂಬಾಯಿ ಹಾನಗಲ್ ಹಾಡು ಕೇಳಬೇಕೂಂತ ಆಸೆ ಆಗ್ತಿದೆ. ಎಲ್ಲಿಂದಾದರು ಸಿ.ಡಿ. ತರಿಸಿ ಒಮ್ಮೆ ಕೇಳಿಸೊ’ ಎಂದು ಅವರು ತಮ್ಮ ಸಹೋದರ ಮುಕುಂದ್‌ಗೆ ಇತ್ತೀಚೆಗೆ ಹೇಳಿದ್ದರಂತೆ. ‘ಅವರಿವರಿಂದ ಕೇಳಿ, ಪತ್ತೆ ಹಚ್ಚಿ ಸಿ.ಡಿ ಸಂಪಾದಿಸಿದೆ. ನಂತರ ಅವನು ಆಸ್ಪತ್ರೆ ಸೇರಿದ’ ಎಂದು ಮುಕುಂದ ಹೇಳುತ್ತಾರೆ.ನಾರಾಯಣ ದತ್ತರ ನೆನಪು, ಪತ್ರಿಕೋದ್ಯಮದ ಬಗ್ಗೆ ಗೌರವ ಮೂಡಿಸುವ ಹಾಗೂ ಭಾರತೀಯ ಭಾಷೆಗಳ ಅಪಾರ ಸಾಧ್ಯತೆಗಳನ್ನು ಅರಿತುಕೊಳ್ಳುವ ಒಂದು ಮಾರ್ಗ ಕೂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.