ADVERTISEMENT

ಹೀಗಿದ್ದರು ಪ್ರಭುಶಂಕರ

ಜಿ.ಎಸ್.ಜಯದೇವ
Published 28 ಏಪ್ರಿಲ್ 2018, 19:30 IST
Last Updated 28 ಏಪ್ರಿಲ್ 2018, 19:30 IST
ಕುವೆಂಪು ಜೊತೆ ಪ್ರಭುಶಂಕರ
ಕುವೆಂಪು ಜೊತೆ ಪ್ರಭುಶಂಕರ   

‘ಹೀ ಗಿದ್ದರು ಕುವೆಂಪು’ ಪುಸ್ತಕ ಓದಿದ ನಾನು ಪ್ರಭುಶಂಕರ ಅವರನ್ನು ಭೇಟಿಯಾಗಿ ‘ಮಾಮ ನೀವು ಬರೆದಿರುವ ಪುಸ್ತಕ ಓದಿದೆ; ಬಹಳ ಚೆನ್ನಾಗಿದೆ’ ಎಂದೆ. ನನ್ನ ಮೆಚ್ಚುಗೆಯಿಂದ ಅಷ್ಟೇನೂ ಆಶ್ಚರ್ಯಪಡದ ಅವರು ‘ಹೌದೇನಯ್ಯ, ಏನು ಇಷ್ಟವಾಯಿತು ನಿನಗೆ’ ಎಂದರು.

ಅವರ ಕುವೆಂಪು ಕುರಿತಾದ ನೆನಪುಗಳು ಮನದಾಳದಲ್ಲಿ ಹರಳುಗಟ್ಟಿ ಮುತ್ತುಗಳಾಗಿರುವುದು, ಆದರೆ ಅವುಗಳನ್ನು ಹೆಕ್ಕಿತೆಗೆದು ಈ ಜಗತ್ತಿನ ಮಕಮಲ್ಲಿನ ಮೇಲೆ ಪ್ರದರ್ಶಿಸುವ ಮನಸ್ಸಾಗದೇ ಇರುವ ಅವರ ಮಾತುಗಳನ್ನು ಪುಸ್ತಕದಿಂದ ಉಲ್ಲೇಖಿಸಿ - ಈ ಸಾಲುಗಳು ನನಗೆ ಬಹಳ ಹಿಡಿಸಿತು ಎಂದೆ. ಪ್ರಭುಶಂಕರ ಬಹಳ ಸಂತೋಷಪಟ್ಟರು. ಈಗ ಪ್ರಭುಶಂಕರ ನಮ್ಮೊಡನೆ ಇಲ್ಲ, ಕೆಲವೇ ದಿನಗಳ ಹಿಂದೆ ನಮ್ಮನ್ನಗಲಿದರು.

ಆದರೇನು, ಐವತ್ತು ವರ್ಷಕ್ಕೂ ಹೆಚ್ಚು ಕಾಲದ ನನ್ನ ಅವರ ಸ್ನೇಹದ ನೆನಪುಗಳು ನನ್ನ ಮನದಾಳದಲ್ಲಿ ಗಟ್ಟಿಗೊಂಡು ಮುತ್ತು ರತ್ನಗಳಾಗಿವೆ. ನಿಷ್ಕಲ್ಮಶವಾದ ಅವರ ಆತ್ಮೀಯ ಸ್ನೇಹದ ಸ್ವರೂಪವನ್ನು ಪದಗಳಲ್ಲಿ ಕಟ್ಟಿಕೊಡಲಾಗದಿದ್ದರೂ ಕೆಲವು ಸಿಹಿ ನೆನಪುಗಳನ್ನಾದರೂ ಮೆಲುಕು ಹಾಕಬಹುದು.

ADVERTISEMENT

1960ರ ಕಾಲ; ಮೈಸೂರಿನ ಸರಸ್ವತಿಪುರಂನಲ್ಲಿ ಜಿ.ಎಸ್.ಎಸ್ ಮತ್ತು ಪ್ರಭುಶಂಕರ‍ರ ಮನೆಗಳು ಅಕ್ಕಪಕ್ಕದಲ್ಲೇ ಇದ್ದವು. ಕೆ.ಬಿ. ಪ್ರಭುಪ್ರಸಾದ್, ಚಿದಾನಂದಮೂರ್ತಿ, ಕೆ.ಜಿ. ನಾಗರಾಜಪ್ಪ, ಅಂಬಳೆ ವೆಂಕಟರಾಂ ಇವರ ಮನೆಗಳೂ ಇಲ್ಲೇ ಸುತ್ತಮುತ್ತಲಲ್ಲಿ ಇದ್ದವು. ಜಿ.ಎಸ್.ಎಸ್ ಅವರ ಮಕ್ಕಳಾದ ನಮಗೆ ಇವರೆಲ್ಲರೂ ‘ಮಾಮ’.

ಮಾಮ ಎಂದರೆ ಸಲಿಗೆಗೆ ಮತ್ತೊಂದು ಹೆಸರು. ಅಣ್ಣ (ಜಿ.ಎಸ್.ಎಸ್) ಸದಾ ತಮ್ಮ ಗಂಭೀರ ವದನಾರವಿಂದದಿಂದ (ಅಮ್ಮನ ಪ್ರಕಾರ ‘ಗಂಟುಮುಖ’) ನಮಗೆ ದಿಗಿಲು ಹುಟ್ಟಿಸುತ್ತಿದ್ದರು. ಆದರೆ ಪ್ರಭುಶಂಕರ ಮಾಮ ಬಂದರೆಂದರೆ ನಗೆಗಡಲು ಬಂದಂತೆ. ಅವರು ಹೇಳುತ್ತಿದ್ದ ಜೋಕುಗಳು ನನಗೆ ಇಂದಿಗೂ ನೆನಪಿವೆ.

ಒಂದು ರಾತ್ರಿ ಕಾವಲುಗಾರನೊಬ್ಬ ಕುಡಿದ ಅಮಲಿನಲ್ಲಿ ಕಳ್ಳ ಎಂದು ಭಾವಿಸಿ ಒಂದು ಕಡೆ ಗುಂಡು ಹಾರಿಸಿದನಂತೆ. ಹತ್ತಿರ ಹೋಗಿ ನೋಡಿದರೆ ಅದು ಒಣಗಲು ತಂತಿಯ ಮೇಲೆ ಹಾಕಿದ್ದ ತನ್ನದೇ ಶರ್ಟು. ಇವನು ಹಾರಿಸಿದ ಗುಂಡು ಶರ್ಟನ್ನು ತೂತು ಮಾಡಿದೆ. ‘ಸಧ್ಯ, ನಾನು ಈ ಶರ್ಟಿನ ಒಳಗೆ ಇರಲಿಲ್ಲವಲ್ಲ’ ಎಂದು ನಿಟ್ಟುಸಿರುಬಿಡುತ್ತಾನೆ!

ಜಿ.ಎಸ್.ಎಸ್ ಅವರ ಆಪ್ತವಲಯದ ಸ್ನೇಹಿತರೆಲ್ಲ ಸೇರಿ ‘ಸ್ಟಡಿ ಸರ್ಕಲ್’ ಹೆಸರಿನಲ್ಲಿ ಪ್ರತಿ ಭಾನುವಾರ ನಮ್ಮ ಸರಸ್ವತಿಪುರಂ ಮನೆಯಲ್ಲಿ ಸೇರುತ್ತಿದ್ದರು. ಇವರೆಲ್ಲ ಅಪ್ಪಟ ಕನ್ನಡ ಮಾಸ್ತರರು. ಆದರೂ ಈ ಇಂಗ್ಲಿಷ್ ಹೆಸರು ಏಕೆ ಬಂತು ಎಂದು ತಿಳಿಯಲಿಲ್ಲ. ಮುಖ್ಯ ಸಂಗತಿ ಎಂದರೆ ‘ಸ್ಟಡಿ ಸರ್ಕಲ್’ ನಡೆಯುವಾಗ ಮಕ್ಕಳಾದ ನಮಗಾರಿಗೂ ಒಳಗೆ ಪ್ರವೇಶವಿರಲಿಲ್ಲ.

ಹೊರಗೆ ಕಾಂಪೌಂಡಿನಲ್ಲಿ ತೆಂಗಿನಮರದ ಕೆಳಗೋ, ಸೀಬೆ ಮರದ ಕೆಳಗೋ ಕಾಲ ಕಳೆಯುತ್ತಿದ್ದೆವು. ಅಣ್ಣ ತಂಬೂರಿ ಮೀಟಿ ತೇನವಿನಾ... ಹಾಡುತ್ತಿದ್ದುದು ಕೇಳುತ್ತಿತ್ತು. ಕವಿತೆಗಳ ಓದು- ಚರ್ಚೆ ಇವೇ ಮುಂತಾದ ‘ನೀರಸ’ ವಿಷಯಗಳು ಯಾವಾಗ ಮುಗಿದಾವೋ ಎಂದು ನಾವೆಲ್ಲ ಕಾಯುತ್ತಿದ್ದೆವು.

ಆ ಕಾಲದಲ್ಲಿ ನಮ್ಮ ಮನೆಯಲ್ಲಿ ರೇಡಿಯೊ ಇತ್ತು. ಒಂದು ದಿನ ಸಂಜೆ ‘ಅಂಗುಲೀಮಾಲ’ ನಾಟಕ ಆಕಾಶವಾಣಿಯಿಂದ ಪ್ರಸಾರವಾಗುತ್ತದೆಂದು ತಿಳಿದು ಪ್ರಭುಶಂಕರ ಮತ್ತು ಸ್ನೇಹಿತರು ನಮ್ಮ ಮನೆಯಲ್ಲಿ ಸೇರಿದರು. ಬುದ್ಧ- ಆನಂದರ ಮಾತುಗಳಿಗಿಂತ ರೇಡಿಯೊ ರಾಕ್ಷಸನ ‘ಗೊರಗೊರ’ ಸದ್ದು ಹೆಚ್ಚತೊಡಗಿತು. ಅಣ್ಣನಿಗೆ ಸಿಟ್ಟು ಬಂದು ‘ದರಿದ್ರ ರೇಡಿಯೊ’ ಎಂದು ಆಗಾಗ ಬಯ್ಯುತ್ತಲೇ ಇದ್ದರು.

ಆದರೂ ಈ ರೇಡಿಯೊ ತನ್ನ ಅವಿಧೇಯತೆಯನ್ನು ಕೊಂಚವೂ ಕಡಿಮೆ ಮಾಡಿಕೊಳ್ಳಲಿಲ್ಲ. ವಿಧಿ ಇಲ್ಲದೆ ರೇಡಿಯೊ ಆಫ್ ಮಾಡಬೇಕಾಯಿತು. ಆದರೆ ಪ್ರಭುಶಂಕರ ಮಾತ್ರ ಸ್ವಲ್ಪವೂ ಬೇಸರಪಡದೆ ನಗುನಗುತ್ತಲೇ ಹಿಂದಿರುಗಿದರು. ಅವರ ಈ ನಿರ್ಲಿಪ್ತತೆ ಅಂದಿನಿಂದ ಅವರ ಕೊನೆಯ ದಿನದವರೆಗೂ ಹಾಗೆಯೇ ಇತ್ತು. ಹೆಸರು ಕೀರ್ತಿಗಳಿಗಾಗಿ ಅವರ ಮನಸ್ಸು ಎಂದೂ ಹಾತೊರೆಯಲಿಲ್ಲ.

ತಮ್ಮ ಸಾಹಿತ್ಯ ಕೃತಿಗಳ ಬಗ್ಗೆ ಅಗತ್ಯವಾದಷ್ಟು ಚರ್ಚೆ ಆಗಿಲ್ಲ ಎಂಬ ಖೇದವು ಅವರನ್ನೆಂದೂ ಕಾಡಲಿಲ್ಲ. ಸಮಸ್ತ ಸಾಹಿತ್ಯವೂ ‘ತೂಕದ ಸಾಹಿತ್ಯ ಕಣಯ್ಯ’ ಎಂದು ತಮಾಷೆ ಮಾಡುತ್ತಿದ್ದರು. ಅಂದರೆ ಹಳೇ ಪೇಪರ್, ಖಾಲಿ ಶೀಶೆಯವರ ತಕ್ಕಡಿಯಲ್ಲಿ ತೂಗಬಹುದಾದ ಸಾಹಿತ್ಯ! ಅವರಿಗೆ ಸಾಹಿತ್ಯಕ್ಕಿಂತ ಬದುಕು ಮುಖ್ಯವಾಗಿತ್ತು. ‘ನನ್ನ ತಾಯಿ ಕವಿತೆಗಳನ್ನು ಬರೆಯಲಿಲ್ಲ; ಕವನಗಳನ್ನು ಬಾಳಿದಳು’ ಎಂಬ ಖಲೀಲ್ ಗಿಬ್ರಾನನ ಮಾತು ಅವರ ‘ಖಲೀಲ್ ಗಿಬ್ರಾನ್’ ಪುಸ್ತಕದಲ್ಲಿದೆ.

ಈ ಮಾತು ಅವರಿಗೆ ಬಹಳ ಪ್ರಿಯವಾಗಿತ್ತು. ಅಪಾರ ಸೃಜನಶೀಲತೆಯುಳ್ಳವರಾಗಿದ್ದರೂ ಸಾಹಿತ್ಯವೆಂಬುದು ಒಂದು ಹೊರೆ, ಒಂದು ಜವಾಬ್ದಾರಿ ಎಂದು ಭಾವಿಸುತ್ತ ‘ತಿಣುಕುವ ಫಣಿರಾಯ’ನಾಗಲಿಲ್ಲ. ಅವರ ಮುಖದಲ್ಲಿ ಸದಾ ಮಂದಹಾಸವಿರಲು ಬಹುಶಃ ಈ ತಿಳಿವೇ ಕಾರಣ.

ಪು.ತಿ.ನ., ಪ್ರಭುಶಂಕರ ಅವರ ಮೆಚ್ಚಿನ ಕವಿ. ಮೇಲುಕೋಟೆಯಲ್ಲಿ ಪುತಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪ್ರಶಸ್ತಿ ಪಡೆದ ಕವನ ಸಂಕಲನವನ್ನು ಪ್ರಭುಶಂಕರ ಬಿಡುಗಡೆ ಮಾಡಬೇಕಾಗಿತ್ತು. ‘ಏನಯ್ಯಾ ಮಾಡೋದು, ಈಗ ನನ್ನನ್ನು ಬಹಳ ಕಷ್ಟಕ್ಕೆ ಗುರಿಮಾಡಿದ್ದಾರೆ. ಈ ಕವನಗಳಲ್ಲಿ ಮಾತನಾಡುವಂಥದ್ದು ಏನೂ ಇಲ್ಲ’ ಎಂದರು.

‘ಜಿ.ಎಸ್.ಎಸ್ ನಿಮಗಾಗಿ ಕಾಯುತ್ತಾ ಇದ್ದಾರೆ; ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದೆ. ಬಂದು ಪುಸ್ತಕ ಬಿಡುಗಡೆ ಮಾಡಿದರು. ಆದರೆ ಪುಸ್ತಕದ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ಬದಲಾಗಿ ಪು.ತಿ.ನ ಅವರ ಬಗ್ಗೆ ಮಾತನಾಡತೊಡಗಿದರು. ಮಾತು ಸಿಟ್ಟಿಗೆ ತಿರುಗಿತು. ‘ನಮ್ಮ ಕನ್ನಡದ ಜನ ಪು.ತಿ.ನ ಅವರಂತಹ ಕವಿಯನ್ನು ನಡೆಸಿಕೊಂಡಿರುವ ರೀತಿ ನೋಡಿ, ಕನ್ನಡಿಗರಿಗೆ ನಾಚಿಗೆಯಾಗಬೇಕು’ ಎಂದು ಬೈದರು.

ಜಿ.ಎಸ್.ಎಸ್ ಒಡನಾಟದ ಕೆಲವು ಆಪ್ತ ನೆನಪುಗಳನ್ನು ನನ್ನೊಂದಿಗೆ ಆಗಾಗ ಮೆಲುಕು ಹಾಕುತ್ತಿದ್ದುದುಂಟು. ಕಾಲೇಜು ದಿನಗಳಲ್ಲಿ ಪ್ರಭುಶಂಕರ‌ರ ಆರ್ಥಿಕ ಪರಿಸ್ಥಿತಿ ಜಿ.ಎಸ್.ಎಸ್ ಅವರಿಗಿಂತ ಉತ್ತಮವಾಗಿತ್ತು. ಆಗಾಗ ಪ್ರಭುಶಂಕರ, ಜಿ.ಎಸ್.ಎಸ್ ಅವರನ್ನು ಹೊಟೇಲ್‍ಗೆ ಕರೆದೊಯ್ದು ತಿಂಡಿ ಕೊಡಿಸುತ್ತಿದ್ದುದುಂಟು. ಆದರೆ ಪ್ರತಿ ಬಾರಿಯೂ ಜಿ.ಎಸ್.ಎಸ್ ಹಿಂಜರಿಯುತ್ತಿದ್ದುದನ್ನು ಗಮನಿಸಿ, ‘ಏಕೆ’ ಎಂದು ಕೇಳಿದರಂತೆ.

(ಪ್ರಭುಶಂಕರ ಅವರಿಗೆ 1996ರಲ್ಲಿ ಶಿಕ್ಷಣ ಸಚಿವರಾಗಿದ್ದ ಎಚ್.ಜಿ. ಗೋವಿಂದೇಗೌಡ ಅವರು ಗೊರೂರು ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಿದ ಸಂದರ್ಭ. ಗೊರೂರು ಪ್ರತಿಷ್ಠಾನದ ಅಧ್ಯಕ್ಷ ಎಸ್. ರಂಗಸ್ವಾಮಿ, ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಸಾಹಿತಿ ಯು.ಆರ್. ಅನಂತಮೂರ್ತಿ ಚಿತ್ರದಲ್ಲಿದ್ದಾರೆ. (ಪ್ರಜಾವಾಣಿ ಆರ್ಕೈವ್ಸ್‌))

ಅದಕ್ಕೆ ಜಿ.ಎಸ್.ಎಸ್ ಹೇಳಿದರಂತೆ, ‘ನೋಡಿ ಪ್ರಭುಶಂಕರ, ಪ್ರತಿ ಬಾರಿಯೂ ನೀವು ಬಿಲ್ಲು ಕೊಡುತ್ತೀರಿ; ಆದರೆ ನನ್ನ ಬಳಿ ಹಣವಿಲ್ಲ; ಆದ್ದರಿಂದ ದಯವಿಟ್ಟು ಇನ್ನು ಮುಂದೆ ನನ್ನನ್ನು ಹೊಟೇಲ್‌ಗೆ ಕರೆಯಬೇಡಿ’ ಎಂದು. ಈ ಸಂಗತಿಯನ್ನು ನೆನೆದು ‘ನೋಡಯ್ಯ ನಿಮ್ಮಪ್ಪ ಬಹಳ ಕಷ್ಟ ಪಡ್ತಾ ಇದ್ರು, ಅವರಿಗೆ ಬಹಳ ಸ್ವಾಭಿಮಾನ’ ಎಂದರು.

ಪ್ರಭುಶಂಕರರ ಗೊರಕೆಯ ಮಹಾತ್ಮೆಯನ್ನು ಜಿ.ಎಸ್‍.ಎಸ್ ಆಗಾಗ ಹೇಳುತ್ತಿದ್ದುದುಂಟು. ‘ಇರುಳ ಮೌನದ ಕೊರಡ ಕೊರೆಯುವ ಇವರ ಗೊರಕೆಯ ಗರಗಸ, ತಾರಮಂದಿರದಲ್ಲಿ ಏರಿಳಿದೆಂತು ಗೈದಿದೆ ಪರವಶ’ ಇದು ಜಿ.ಎಸ್.ಎಸ್ ಅವರ ‘ಗೊರಕೆ’ ಪದ್ಯದ ಸಾಲುಗಳು. ಹೋಟೆಲ್ ರೂಮ್ ಒಂದರಲ್ಲಿ ಜಿ.ಎಸ್‌.ಎಸ್ - ಪ್ರಭುಶಂಕರ ಒಟ್ಟಿಗೆ ಇದ್ದಾರೆ. ಪ್ರಭುಶಂಕರರ ಗೊರಕೆ ಜಿ.ಎಸ್‍.ಎಸ್ ಅವರ ನಿದ್ದೆ ಕೆಡಿಸಿದೆ. ಆದರೆ ಆ ನಡುರಾತ್ರಿಯಲ್ಲಿ ಒಂದು ಸೊಗಸಾದ ಪದ್ಯ ಹುಟ್ಟಿದೆ.

ರಾಷ್ಟ್ರಕವಿ ಆಯ್ಕೆ ಮಾಡುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಪ್ರಭುಶಂಕರ ಅವರನ್ನು ಆದ್ಯತೆಯ ಮೇರೆಗೆ ಮೂವರು ಕವಿಗಳ ಹೆಸರನ್ನು ಸೂಚಿಸಲು ಕೋರಿತ್ತಂತೆ. ಆದರೆ ಪ್ರಭುಶಂಕರ ಅವರು ಜಿ.ಎಸ್.ಎಸ್ ಅವರ ಹೆಸರನ್ನು ಮಾತ್ರ ಸೂಚಿಸಿ, ಘೋಷಿಸುವುದಾದರೆ ಅವರನ್ನಷ್ಟೇ ರಾಷ್ಟ್ರಕವಿಯಾಗಿ ಘೋಷಿಸಬೇಕೆಂದು ಸರ್ಕಾರಕ್ಕೆ ಆಗ್ರಹಪೂರ್ವಕವಾಗಿ ಶಿಫಾರಸು ಮಾಡಿದ್ದರಂತೆ.

ಒಮ್ಮೆ ಜಿ.ಎಸ್.ಎಸ್, ಪ್ರಭುಶಂಕರ ಹಾಗೂ ಪ್ರಭುಪ್ರಸಾದ್ ಕೋಲ್ಕತ್ತಾ- ಕಾಶಿ ಪ್ರವಾಸ ಕೈಗೊಂಡರು. ರಾಮಕೃಷ್ಣ ಪರಮಹಂಸರು ತಪಸ್ಸು ಮಾಡುತ್ತಿದ್ದ ಪಂಚವಟಿಯಲ್ಲಿ ಧ್ಯಾನಾಸಕ್ತರಾದ ಪ್ರಭುಶಂಕರರಿಗೆ ತೀವ್ರ ವೈರಾಗ್ಯ ಹುಟ್ಟಿ ತಾವು ಇಲ್ಲೇ ಇರುವುದಾಗಿಯೂ, ಎಲ್ಲಿಗೂ ಬರುವುದಿಲ್ಲವೆಂದೂ ಹಟ ಹಿಡಿದು ಕುಳಿತುಬಿಟ್ಟರಂತೆ.

ಈಗಾಗಲೇ ಸಂಸಾರಸ್ಥರಾಗಿದ್ದ ಜಿ.ಎಸ್.ಎಸ್ ಅವರಿಗೆ ಪ್ರಭುಶಂಕರರು ‘ವೈರಾಗ್ಯ ಮುಕ್ತರಾಗಲು’ ಹೆಚ್ಚು ಸಮಯ ಬೇಕಾಗಿಲ್ಲವೆಂದು ತಿಳಿದಿತ್ತು. ಅದು ನಿಜವೂ ಆಯಿತು. ಸರಿ ಪ್ರಭುಶಂಕರ ಅವರನ್ನು ಕರೆದುಕೊಂಡು ಕಾಶಿಗೆ ಬಂದರು. ಗಂಗಾ ಸ್ನಾನಕ್ಕೆಂದು ಇಬ್ಬರೂ ನೀರಿಗಿಳಿದರು. ಬೇಡವೆಂದರೂ ಕೇಳದೆ ಪ್ರಭುಶಂಕರ ಮತ್ತೊಂದು ಮೆಟ್ಟಿಲು ಕೆಳಗೆ ಇಳಿದರಂತೆ.

ನೀರಿನ ಸೆಳೆತಕ್ಕೆ ಸಿಲುಕಿದ ಪ್ರಭುಶಂಕರರನ್ನು ರಕ್ಷಿಸಲು ಪ್ರಯತ್ನಿಸುತ್ತಾ ಇಬ್ಬರೂ ನೀರಿನಲ್ಲಿ ಮುಳುಗಿ ಹೋದರು. ಪುಣ್ಯಕ್ಕೆ ಇದನ್ನೆಲ್ಲಾ ನೋಡುತ್ತಾ ದಡದಲ್ಲಿ ನಿಂತಿದ್ದ ಪ್ರಭುಪ್ರಸಾದರು ‘ಅವರನ್ನು ಕಾಪಾಡಿ, ಅವರಿಗೆ ಈಜು ಬರುವುದಿಲ್ಲ’ ಎಂದು ಕೂಗಿಕೊಂಡರಂತೆ. ಅದೃಷ್ಟವಶಾತ್ ಒಳ್ಳೆಯ ಈಜುಗಾರನೊಬ್ಬ ನೀರಿಗೆ ಧುಮುಕಿ ಇಬ್ಬರನ್ನೂ ದಡಕ್ಕೆ ಎಳೆದು ಹಾಕಿದನಂತೆ.

ಪ್ರವಾಸ ಮುಗಿಸಿ ಬಂದನಂತರ ಮನೆಯಲ್ಲಿ ಬಹುಚರ್ಚಿತ ವಿಷಯ ಇದೇ ಆಗಿತ್ತು. ಇವೆಲ್ಲದರ ಪರಿಣಾಮವೇನೆಂದರೆ ಈ ಮೂವರು ಸ್ನೇಹಿತರು ಸರಸ್ವತಿಪುರಂನಲ್ಲಿದ್ದ ಈಜುಕೊಳಕ್ಕೆ ದಿನವೂ ತಪ್ಪದೇ ಹೋಗಿ ಈಜು ಕಲಿಯಲು ಪ್ರಾರಂಭಿಸಿದರು. ಜೊತೆಗೆ ಮಕ್ಕಳಾದ ನಮಗೂ ಈಜು ಕಲಿಯಲು ಅನುಮತಿ ಸಿಕ್ಕಿತು.

ಪ್ರಭುಶಂಕರ ಅವರು ಗಾಢವಾದ ಭಾವಜೀವಿ. ಕುವೆಂಪು ಅವರನ್ನೂ ಅಥವಾ ಅವರ ದೀಕ್ಷಾ ಗುರುಗಳಾದ ಸ್ವಾಮಿ ಯತೀಶ್ವರಾನಂದರನ್ನೂ ನೆನೆದರೆ ಸಾಕು ಅವರ ಕಣ್ಣುಗಳಲ್ಲಿ ನೀರು ಹರಿಯುತ್ತಿತ್ತು. ಸ್ವಾಮಿ ಯತೀಶ್ವರಾನಂದರ ದೊಡ್ಡತನವನ್ನು, ತಮ್ಮ ಹುಡುಗಬುದ್ಧಿಯ ಮಿತಿಗಳನ್ನು ನೆನೆದು ಅನೇಕ ಘಟನೆಗಳನ್ನು ಹೇಳಿಕೊಳ್ಳುತ್ತಿದ್ದರು.

ಅಂತರಂಗದ ಈ ಭಾವುಕತೆಯ ಜೊತೆಗೆ ಕುವೆಂಪು ಪ್ರಭಾವ ವಲಯದಲ್ಲಿ ಮೈಗೂಡಿಸಿಕೊಂಡ ವೈಚಾರಿಕ ಅರಿವು ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿತ್ತು. ಅವರು ತಮ್ಮ ವೈಚಾರಿಕ ನಿಲುವುಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಮೂವರು ಆಚಾರ್ಯರು ಮತ್ತು ವರ್ಣಾಶ್ರಮದ ವಿಚಾರ ಬಂದಾಗಲಂತೂ ಅವರ ಸಿಟ್ಟು ತಾರಕಕ್ಕೇರುತ್ತಿತ್ತು. ಕೆಲವೊಮ್ಮೆ ಇದು ಅತಿರೇಕಕ್ಕೂ ಹೋಗುತ್ತಿದ್ದುದುಂಟು. ಆದರೆ ಯಾರೂ ಪ್ರಭುಶಂಕರರ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡುತ್ತಿರಲಿಲ್ಲ.

ವಿಶ್ವವಿದ್ಯಾನಿಲಯಗಳಲ್ಲೂ ಜಾತೀಯತೆ ಕಂಡು ರೋಸಿ ಹೋದ ಪ್ರಭುಶಂಕರ ತಮ್ಮ ‘ಬೆರಗು’ ಪುಸ್ತಕದ ಮುನ್ನುಡಿಯಲ್ಲಿ ‘ವಿಶ್ವವಿದ್ಯಾನಿಲಯಗಳು ಇರುವವರೆಗೆ ಜಾತೀಯತೆ ಖಂಡಿತವಾಗಿಯೂ ಈ ದೇಶದಿಂದ ತೊಲಗುವುದಿಲ್ಲ’ ಎನ್ನುತ್ತಾರೆ, ಸಿಟ್ಟಿನಲ್ಲಿ. ಆದರೆ ತಿಳಿಯಾದ ಮನಸ್ಸಿನಿಂದ ವಿಚಾರ ಮಾಡುತ್ತ ಇದೇ ಪುಸ್ತಕದಲ್ಲಿ ಜಾತ್ಯತೀತ ಪ್ರಯತ್ನಗಳ ಮಿತಿಯನ್ನು ಕಣ್ಣು ಕಳೆದುಕೊಂಡ ಮಧುವರಸನ ಬಾಯಿಯ ಮೂಲಕ ನುಡಿಸುತ್ತಾರೆ.

ಇಂತಹ ಕ್ಲಿಷ್ಟ ಸಮಸ್ಯೆಗಳ ವಿಚಾರದಲ್ಲಿ ಯಾವುದನ್ನು ನಾವು ಪರಿಹಾರ ಎಂದು ಭಾವಿಸುತ್ತೇವೊ ಆ ಪರಿಹಾರಗಳು ಸಮಸ್ಯೆಯ ಬೇರುಗಳನ್ನೇ ಅವಲಂಬಿಸಿ ಬೆಳೆದ ಚಿಗುರುಗಳಾಗಿರುತ್ತವೆ. ಈ ಸತ್ಯವನ್ನು ತಿಳಿದೂ ದೋಷರಹಿತ ಪರಿಹಾರವನ್ನು ಅಪೇಕ್ಷಿಸುವುದೇ ವಿವೇಕ ಎಂಬುದನ್ನು ಪ್ರಭುಶಂಕರ ನಮಗೆ ತಿಳಿಸುತ್ತಾರೆ.

ತಮ್ಮ ‘ಬೆರಗು’ ಪುಸ್ತಕದ ಬಗ್ಗೆ ಪ್ರಭುಶಂಕರ ಅವರಿಗೆ ಬಹಳ ಅಭಿಮಾನ. ‘ಇದನ್ನು ನಾನು ಹೇಗೆ ಬರೆದೆ ಅನ್ನೋದೆ ಗೊತ್ತಾಗ್ತಿಲ್ಲ ಕಣಯ್ಯ’ ಎನ್ನುತ್ತ ತಮ್ಮ ಕೃತಿಯ ಬಗ್ಗೆ ತಾವೇ ಬೆರಗಾಗಿ ನಿಲ್ಲುತ್ತಿದ್ದರು. ಅವರ ಇಡೀ ಜೀವನ ಭಾವುಕತೆಯ ಮತ್ತು ವೈಚಾರಿಕತೆಯ ನಡುವೆ ಮೈತ್ರಿಯನ್ನು ಸಾಧಿಸುತ್ತ ವೈಚಾರಿಕತೆಯನ್ನು ಎತ್ತಿ ಹಿಡಿಯುವ ಹೋರಾಟದಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.