ಹೆಣ್ಣು ಮಕ್ಕಳಿಗೆ ಧ್ವನಿಯಿಲ್ಲದ ಕಾಲವೊಂದಿತ್ತು. ಅಡುಗೆ ಮನೆಯ ಚೌಕಟ್ಟಿನ ಹೊರತು ಅವಳಿಗೆ ಪ್ರಪಂಚವಿರಲಿಲ್ಲ. ಆದರೆ ಈಗ ಕಾಲ ಬದಲಾಗುತ್ತಿದೆ. ಹೆಣ್ಣು ತನ್ನ ಏಳಿಗೆಯ ಕನಸುಗಳಿಗೆ ರೆಕ್ಕೆ ಕಟ್ಟುತ್ತಿರುವುದನ್ನು ಗಂಡು ಮಕ್ಕಳು ಕುತೂಹಲದಿಂದ ಗಮನಿಸುತ್ತಿದ್ದಾರೆ. ಆದರೂ ಅವಳು ಈಗಷ್ಟೇ ಮೊಟ್ಟೆಯೊಡೆದ ’ಲಾರ್ವ’. ಇನ್ನೂ ಕಲಿತು, ಬಲಿತು ಗಟ್ಟಿಗೊಳ್ಳಬೇಕಿದೆ. ಅವಳು ತನ್ನ ಪ್ರಯಾಣದಲ್ಲಿ ಎರಡು ಮುಖ್ಯ ತೊಡಕುಗಳನ್ನು ಎದುರಿಸಬೇಕಿದೆ. ಮೊದಲನೆಯದು ’ಸಮಾನತೆ’, ಎರಡನೆಯದು ’ರಕ್ಷಣೆ’.
ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಣ್ಣಿಗೆ ಈಗಲೂ ರಕ್ಷಣೆಯಿಲ್ಲ. ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ, ಅವಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಹಕ್ಕುಗಳ ಅರಿವಿರಬೇಕಾಗುತ್ತದೆ. ಈ ಅರಿವು ಮೂಡಿಸುವ ಜವಾಬ್ದಾರಿ ಪೋಷಕರದ್ದು. ಈ ಜವಾಬ್ದಾರಿಯನ್ನು ನಿಭಾಯಿಸಲು ಪೋಷಕರು ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳುವುದು ತೀರಾ ಅಗತ್ಯ.
1. ಹೆಣ್ಣು ಮಕ್ಕಳ ಬದುಕುವ ಹಕ್ಕು
2011 ರ ಅಂಕಿಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 914 ಹೆಣ್ಣುಮಕ್ಕಳಿದ್ದಾರೆ. ಹುಟ್ಟಿದ 12 ಮಿಲಿಯನ್ ಹೆಣ್ಣು ಮಕ್ಕಳಲ್ಲಿ, 3 ಮಿಲಿಯನ್ ಮಕ್ಕಳು ತಮ್ಮ 15 ನೆಯ ಹುಟ್ಟು ಹಬ್ಬವನ್ನು ಕಾಣುವುದಿಲ್ಲ. 1 ಮಿಲಿಯನ್ ಹೆಣ್ಣು ಮಕ್ಕಳು ಹುಟ್ಟಿದ ಮೊದಲ ವರ್ಷದೊಳಗೇ ಕಾಣೆಯಾಗುತ್ತಾರೆ. ಪ್ರತಿ 6 ನೇ ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. ಉತ್ತರ ಭಾರತದ ಹಳ್ಳಿಗಾಡಿನಲ್ಲಿ ಹೆಣ್ಣು ಮಗು ಹುಟ್ಟಿದರೆ, ಅವರೇನೂ ತಮ್ಮ ಕೈಯಾರೆ ಆ ಮಗುವಿನ ಕತ್ತು ಹಿಸುಕಿ ಸಾಯಿಸುವಷ್ಟು ಕ್ರೂರಿಗಳಲ್ಲವಂತೆ, ಬದಲಾಗಿ ಮನೆಯ ಹಿತ್ತಲಲ್ಲಿ ಒಂದು ಮಂಚ ಹಾಕಿ ಆ ಮಗುವನ್ನು ಹಗಲು ರಾತ್ರಿಗಳೆನ್ನದೆ ಮಲಗಿಸಿ ಬಿಡುತ್ತಾರಂತೆ! ನಾಳಿನ ತಾಯಾಗಬಲ್ಲ, ಮುಂದಿನ ಮಕ್ಕಳಿಗೆ ಉಜ್ವಲ ಭವಿಷ್ಯ ಕೊಡಬಲ್ಲ, ಸ್ವತಃ ಸಮಾಜದ ಬೆಳವಣಿಗೆಗೆ ಗಾಲಿಯಾಗಬಲ್ಲ ಹೆಣ್ಣನ್ನು, ಎಳೆಯ ಮೊಳಕೆಯಲ್ಲೇ ಹೊಸಕಿ ಇಲ್ಲವಾಗಿಸಿ ಬಿಡುವುದು ಎಷ್ಟು ಸರಿ?
2. ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಹಕ್ಕು
ಮಾನವ ಸಂಪನ್ಮೂಲದಲ್ಲಿ ಸುಮಾರು ಅರ್ಧ ಪಾಲು ಹೆಣ್ಣುಗಳದ್ದು. ಆದರೆ, ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ. ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಹೆಣ್ಣು ಮಕ್ಕಳೆಲ್ಲ ಶಿಕ್ಷಿತರಾದಾಗ ಮಾತ್ರ, ಸಂವಿಧಾನದ ಕಲ್ಪನೆಯ ಭಾರತವನ್ನು ನಾವು ತಲುಪಲು ಸಾಧ್ಯ.
3. ಹೆಣ್ಣು ಮಗುವಿನ ಅಗತ್ಯ ಪೂರೈಕೆಯ ಹಕ್ಕು
ಹೆಣ್ಣು ಗಂಡಿನ ಎಲ್ಲ ಮೂಲಭೂತ ವ್ಯತ್ಯಾಸಗಳನ್ನು ಸಮಾನತೆಯ ಮಾಪನದಲ್ಲಿ ಅಳೆಯುವುದು ಸರಿಯಲ್ಲ. ಹೆಣ್ಣಿನ ದೈಹಿಕ ಸೂಕ್ಷ್ಮತೆ, ದೈಹಿಕ ರಚನೆ, ಋತುಚಕ್ರ ಮೊದಲಾದವುಗಳಿಗಾಗಿ ಕೆಲವು ವಿಶೇಷ ಸವಲತ್ತುಗಳಿಗೆ ಅವಳು ಹಕ್ಕುದಾರಳು ಎಂಬುದನ್ನು ಗಂಡು ಮರೆಯಬಾರದು. ಹೆಣ್ಣು ಮಗುವಿನ ದೈಹಿಕ ಸೂಕ್ಷ್ಮತೆಯನ್ನು ಅವಳ ದೌರ್ಬಲ್ಯವೆಂದು ಪರಿಗಣಿಸಬಾರದು. ಈ ಕಾರಣಗಳಿಗಾಗಿಯೇ, ಶಾಲೆಗಳಲ್ಲಿ ಅವಳಿಗೆ ಯೋಗ, ಕರಾಟೆ, ಕ್ರೀಡೆ, ರಂಜನೆ ಹಾಗೂ ಹವ್ಯಾಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಇದರಿಂದ ಅವಳಿಗೆ ಬೆಳೆಯುವ ಹಂತದಲ್ಲೇ ದೈಹಿಕ ಹಾಗೂ ಮಾನಸಿಕ ಆತ್ಮವಿಶ್ವಾಸ (body confidence) ಉಂಟಾಗಿ ಹಲವು ಬಗೆಯ ಕೀಳರಿಮೆ, ಆತಂಕ ದೌರ್ಬಲ್ಯಗಳಿಂದ ಅವಳು ದೂರಾಗಬಹುದು.
ಹೆಣ್ಣು ಮಕ್ಕಳ ಶಾಲಾ ಶಿಕ್ಷಣದ ಬಗ್ಗೆ ಯೋಚಿಸುವವರು ಮೊತ್ತ ಮೊದಲು ನಿಭಾಯಿಸಬೇಕಾಗಿರುವುದು ಶೌಚಾಲಯದ ಸಮಸ್ಯೆಯನ್ನು. ಸರಿಯಾದ ಶೌಚಾಲಯವಿಲ್ಲದ ಕಾರಣ ಅದೆಷ್ಟೋ ಹೆಣ್ಣು ಮಕ್ಕಳು ಮುಜುಗರವನ್ನೂ, ಮುಜುಗರ ತಪ್ಪಿಸಲು ದಿನವಿಡೀ ನೀರನ್ನೇ ಕುಡಿಯದೆ ದೈಹಿಕ ತೊಂದರೆಗಳನ್ನೂ ಅನುಭವಿಸುತ್ತಿರುವುದು ಹೆಣ್ಣು ಕುಲಕ್ಕೆಲ್ಲ ಗೊತ್ತಿರುವ ಗುಟ್ಟು. ಇತ್ತೀಚೆಗಷ್ಟೇ ರಾಜ್ಯದ ಒಂದೆರಡು ಪ್ರತಿಷ್ಠಿತ ಶಾಲೆಗಳಲ್ಲಿ ನಡೆದ ಪ್ರಕರಣಗಳಿಗೆ, ಅದು ನಗರದ ಸಿರಿವಂತರ ಮಕ್ಕಳು ಓದುವು ಪ್ರತಿಷ್ಠಿತ ಶಾಲೆಗಳು ಎಂಬ ಕಾರಣಕ್ಕಷ್ಟೇ ಎರಡು ದಿನ ಸುದ್ದಿಯಾದವು. ಇಂತಹ ನೂರಾರು ಶಾಲೆಗಳಲ್ಲಿ ಇಂದಿಗೂ, ಪ್ರತಿದಿನವೂ ಹತ್ತಾರು ಎಳೆಯ ಕನಸುಗಳು, ಕಾಮನಬಿಲ್ಲುಗಳು ಸದ್ದಿಲ್ಲದೆ ಕಣ್ಣೀರಲ್ಲಿ ಮುಳುಗುತ್ತಿರುವುದು ಯಾವುದೇ ‘ವೆಬ್ ಕ್ಯಾಮ್’ ಗಳಲ್ಲಿ ದಾಖಲಾಗುವುದಿಲ್ಲ. ಹಳ್ಳಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಜಲಬಾಧೆ ನೀಗಿಸಿಕೊಳ್ಳಲು, ಒಂದು ಸಣ್ಣ ಮರೆಯ ಸ್ಥಳ ಒದಗಿಸಲಾಗದ ಈ ಗಂಡು ಸಮಾಜ, ನಗರದ ಪ್ರತಿಷ್ಠಿತ ಶಾಲೆಗಳಿಗೆ ವೆಬ್ ಕ್ಯಾಮ್ ಅಳವಡಿಕೆಯ ಕಾನೂನು ರೂಪಿಸುತ್ತಿವೆ!
4. ಹೆಣ್ಣು ಮಕ್ಕಳ ಲಿಂಗ ತಾರತಮ್ಯದ ವಿರುದ್ಧ ಹಕ್ಕು
ಹೆಣ್ಣಿನ ಬೆಳವಣಿಗೆಯ ವಿಕಾಸದಲ್ಲಿ ಇದೀಗ ಹೆಣ್ಣುಗಳದ್ದು ‘ಲಾರ್ವ’ ಹಂತ. ಹಲವಾರು ಸರಪಳಿಗಳ ಕೊಂಡಿಯನ್ನು ಅವರು ಕಳಚಿ ಬಂದಿದ್ದಾರೆ. ಆದರೂ ನಿಷಾನು ಇನ್ನೂ ಮಾಸಿಲ್ಲ. ಹಾಗಾಗಿ ನಮ್ಮ ಮುಂದಿನ ಪೀಳಿಗೆ ಅಥವಾ ಇಂದಿನ ಹೆಣ್ಣು ಮಕ್ಕಳಿಗೆ ನಾವು ಲಿಂಗತಾರತಮ್ಯದ ಕುರುಹುಗಳನ್ನು ಆದಷ್ಟು ಶಮನಗೊಳಿಸಿ ಅವರಿಗೆ ಆಡಲು ಶುದ್ಧ ಅಂಗಳವನ್ನು ಸಿದ್ಧಗೊಳಿಸಬೇಕಾಗಿದೆ. ಸಮಾನತೆಯ ಶಿಕ್ಷಣ ಅಥವಾ ಅನುಭೂತಿ ಹೆಣ್ಣುಮಕ್ಕಳಿಗೆ ಮನೆಯಿಂದಲೇ ಮೊದಲುಗೊಳ್ಳಬೇಕು. ಹೆಣ್ಣು ಮಕ್ಕಳಿಗೆ ಸೌಮ್ಯ ಮತ್ತು ಗಂಡಿಗೆ ಸ್ವಲ್ಪ ಬಲಿತ ಬಣ್ಣದ ಬಟ್ಟೆಯನ್ನು ಕೊಡಿಸುವುದು. ಹೆಣ್ಣು ಮಕ್ಕಳಿಗೆ ಪುಟ್ಟ ಗೊಂಬೆ, ಅಡುಗೆ ಮನೆ ಸಾಮಾನು ಇತ್ಯಾದಿ ಆಟದ ವಸ್ತುಗಳನ್ನು ಕೊಡಿಸಿದರೆ ಗಂಡಿಗೆ ಕಾರು, ರೈಲು, ಬಂದೂಕುಗಳನ್ನು ಕೊಡಿಸುವುದರಿಂದಲೇ ಶುರುವಾಗುತ್ತದೆ ನಮ್ಮ ಲಿಂಗ ತಾರತಮ್ಯ ನೀತಿ.
ಮಕ್ಕಳಿಗೆ ಅತಿ ಸೂಕ್ಷ್ಮ ಗ್ರಹಿಕಾ ಸಾಮರ್ಥ್ಯವಿರುತ್ತದೆ. ಹಿರಿಯರು ಮಕ್ಕಳಿಗೆ ಕನ್ನಡಿಯಿದ್ದಂತೆ. ಮಕ್ಕಳ ಪಠ್ಯಗಳಲ್ಲಿ ಕಂಡು ಬರುವ ‘ಅಪ್ಪ ಪೇಪರ್ ಓದುವುದು, ಅಮ್ಮ ಅಡುಗೆ ಮಾಡುವುದು, ತಂಗಿ ಅಮ್ಮನಿಗೆ ಸಹಾಯ ಮಾಡಿದರೆ, ಅಣ್ಣ ಪುಸ್ತಕ ಹಿಡಿದಿರುವುದು’ ಇತ್ಯಾದಿ ಚಿತ್ರಣಗಳು ಇನ್ನು ಸಾಕು. ಮಾಧ್ಯಮಗಳಲ್ಲಿ ಬಿತ್ತರ ಗೊಳ್ಳುವ ಚೋಟಾ ಭೀಮ್ ಮತ್ತು ಚುಟ್ಕಿಯರ ನಡಾವಳಿಗಳು ನಮ್ಮ ಮಕ್ಕಳಿಗೆ ಬೇಡ.
5. ಹೆಣ್ಣು ಮಕ್ಕಳ ಶೋಷಣೆಯ ವಿರುದ್ಧ ಹಕ್ಕು
‘ಎಲ್ಲಿ ಮಕ್ಕಳು ನಗುತ್ತಾರೋ ಅಲ್ಲಿ ದೇವರು ಇರುತ್ತಾನ” ಎಂಬ ನಂಬಿಕೆಯ ಸಂಸ್ಕೃತಿ, ಅಸ್ತಿತ್ವಗಳನ್ನು ಕಟ್ಟಿಕೊಂಡ ನಮ್ಮ ದೇಶದ 2 ಮಿಲಿಯನ್ ವೇಶ್ಯೆಯರು 5 ರಿಂದ 15 ವರ್ಷಗಳೊಳಗಿನ ಮಕ್ಕಳು! 3.3 ಮಿಲಿಯನ್ ಹೆಣ್ಣುಗಳು 15 ರಿಂದ 18 ವರ್ಷದೊಳಗಿನವರು! ಒಟ್ಟು ಲೈಂಗಿಕ ಕಾರ್ಯಕರ್ತೆಯರಲ್ಲಿ 40% ಪುಟ್ಟ ಮಕ್ಕಳು! ಪ್ರತಿವರ್ಷ 5 ಲಕ್ಷ ಹೆಣ್ಣು ಮಕ್ಕಳನ್ನು ನಾವು ವೇಶ್ಯಾವೃತ್ತಿಗೆ ದೂಡುತ್ತಿದ್ದೇವೆ! 2001 ರಿಂದ 2011 ರೊಳಗೆ ದಾಖಲೆಯಾದ ಬಾಲ ಅತ್ಯಾಚಾರ ಪ್ರಕರಣಗಳ ಸಂಖ್ಯೆ 50,000ಕ್ಕೂ ಹೆಚ್ಚು.
ಯಾವುದೇ ವಿಧದ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದ ವಿರುದ್ಧ ದನಿ ಎತ್ತುವುದು ಮತ್ತು ನ್ಯಾಯ ಪಡೆಯುವುದು ಪ್ರತಿಯೊಬ್ಬ ಹೆಣ್ಣು ಮಗಳ ಹಕ್ಕು. ಎಲ್ಲಕ್ಕೂ ಮಿಗಿಲಾಗಿ ಪೋಷಕರು ತಮ್ಮ ಮಗು ಅತ್ಯಾಚಾರಕ್ಕೊಳಗಾದರೆ ತಕ್ಷಣ ಅದನ್ನು ಪೊಲೀಸರಲ್ಲಿ ದಾಖಲಿಸಬೇಕು. ಹೀಗೆ ನಮ್ಮ ಕಾನೂನನ್ನು, ರಕ್ಷಣಾದಳವನ್ನು ಸರಿಯಾಗಿ ಉಪಯೋಗಿಸದೆ ಹೆಣ್ಣು ಮಕ್ಕಳನ್ನು ಪಂಜರದ ಹಕ್ಕಿಯಂತೆ ಬಂಧಿಸುವುದು ತಪ್ಪು.
6. ಹೆಣ್ಣು ಮಕ್ಕಳ ಸ್ವಾತಂತ್ರ್ಯದ ಹಕ್ಕು
ಹೆಣ್ಣು ಮಗುವೊಂದು ಕೆಲವೇ ವರ್ಷಗಳಲ್ಲಿ ಅರಳಲಿರುವ, ಘಮಿಸಿ ಹೂವಾಗುವ ಮೊಗ್ಗು. ಅವಳ ಬೆಳವಣಿಗೆಗೆ ತಕ್ಕ ಪೋಷಣೆ, ಬೆಂಬಲವನ್ನು ಕೊಡುತ್ತಾ ಸ್ವತಂತ್ರವಾಗಿ ಬೆಳೆಯಲುಬಿಡಬೇಕು. ಹೆಜ್ಜೆ ಹೆಜ್ಜೆಗೂ ಪ್ರಶ್ನಿಸಿ, ಬಂಧಿಸಿ, ಆತಂಕದಿಂದ ನಾವು ‘ಜೋಪಾನಿಸುತ್ತಿದ್ದೇವೆ’ ಎಂದುಕೊಂಡರೆ ಅದು ಅಪರಾಧ. ಹೆಣ್ಣೊಬ್ಬಳು ನಾಳೆಯದಿನ ಎಲ್ಲ ರೀತಿಯಿಂದಲೂ ಸ್ವಾವಲಂಭಿಯಾಗಬೇಕಾದರೆ, ಅವಳು ಮಗುವಾಗಿರುವಾಗಲೇ ಅವಳೊಳಗೆ ‘ದೈಹಿಕ ಮತ್ತು ಮಾನಸಿಕ ಚೈತನ್ಯ’ ಎಂಬ ಪೋಷಕಾಂಶವನ್ನು ಸೇರಿಸಬೇಕು. ಮುಂದೊಮ್ಮೆ ಸಶಕ್ತ ಕೆಂದ್ರಬಿಂದುವಾಗಬಲ್ಲ, ಸಮಾಜಕ್ಕೆ ಬೆಳಕನ್ನು ನೀಡಬಲ್ಲ ವಿದ್ಯುತ್ ಶಕ್ತಿಯ ತಂತು ಇಂದು ನಮ್ಮ ಕಣ್ಣ ಮುಂದಿದೆ. ಅದರ ಝಗಮಗಿಸುವ ಬೆಳಕಿನ ಸ್ವಿಚ್ಚು ನಮ್ಮ ಕೈಲಿದೆ. ಸರಿಯಾಗಿ ಉಪಯೋಗಿಸುವುದು ನಮ್ಮ ಮನಸ್ಸಿನ ಅರಿವಿನಲ್ಲಿದೆ. ಇಲ್ಲದಿದ್ದರೆ ತರಿಸಿಕೊಳ್ಳಲು ಅವಕಾಶ, ಸಮಯ ಇದೀಗ ಪ್ರಶಸ್ತವಾಗಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.