ADVERTISEMENT

‘ಅಲಕ್ಷಿತ’ ವಚನಕಾರ

ಅಮರೇಶ ನುಗಡೋಣಿ
Published 24 ಅಕ್ಟೋಬರ್ 2015, 19:40 IST
Last Updated 24 ಅಕ್ಟೋಬರ್ 2015, 19:40 IST

ಜಂಬಣ್ಣ ಅಮರಚಿಂತರು ಚಂದದ ಹೆಸರಿನ, ಸುಂದರ ವ್ಯಕ್ತಿತ್ವದವರು. ಗಟ್ಟಿಯಾಗಿ ನಗುತ್ತಾರಲ್ಲ– ಆಗ ಇನ್ನೂ ಸೊಗಸಾಗಿ ಕಾಣುತ್ತಾರೆ. ಸದ್ದು ಎಂಬುದು ಅಮರಚಿಂತರ ಮೈಮನಕ್ಕೆ ಒಗ್ಗಲಾರದ್ದು. ಅವರು ನಡೆದರೆ ಸದ್ದಿಲ್ಲ. ಕಾವ್ಯ ಬರೆದರೆ ಸದ್ದಿಲ್ಲ. ರಾಯಚೂರಿನ ಯಾವುದೋ ಮೂಲೆಯ ಮನೆಯೊಳಗಿದ್ದರೂ ಸದ್ದಿಲ್ಲ. ಚಳವಳಿಯೊಳಗಿದ್ದರೂ ಸದ್ದಿಲ್ಲದಿರುವುದೇ ಅವರತನವಾಗಿದೆ.

ಜಂಬಣ್ಣ ಅಮರಚಿಂತರನ್ನು ಯಾರೂ ಯಾವುದಕ್ಕೂ ತೆಗೆದುಹಾಕುವ, ಕಡೆಗಣಿಸುವ, ಉದಾಸೀನ ಮಾಡುವ ಮಾತನಾಡಿದ್ದನ್ನು ಕೇಳಿರಲಿಕ್ಕಿಲ್ಲ. ನಮ್ಮ ನಡುವಿನ ಕಾವ್ಯದ ಸಂತ ಅಮರಚಿಂತ. ಪ್ರತಿಕ್ಷಣವೂ ಕಾವ್ಯಕ್ಕೆ ಕುದಿಯುವ ಜೀವ ಜಂಬಣ್ಣನವರದು. ಆದರೆ ರಾಯಚೂರು ಅಸನಕ್ಕೂ ಕುದಿಯುವ ಊರಲ್ಲ. ಕವಿತೆಗೆ ಕುದಿಯುವ ಊರೂ ಅಲ್ಲ. ಯಾವುದನ್ನೂ ಮೈಯಿಗೆ ಹಚ್ಚಿಕೊಳ್ಳುವ ಊರಲ್ಲ.

ಇಲ್ಲಿಯ ಜನಗಳು ಹಣ, ಆಸ್ತಿ, ಆಧಿಕಾರಕ್ಕೂ ಬಡಿದಾಡುವವರಲ್ಲ. ಉದಾರಿಗಳೂ, ಉದಾಸೀನಿಗಳೂ ಆಗಿರುವವರು. ಜಾತಿವಾದವೂ ಇದೆ, ಭೂಮಾಲೀಕರೂ ಇಲ್ಲಿದ್ದಾರೆ. ಹೊಟ್ಟೆಯಿದೆ ಎಂದು, ಸಂಸಾರವಿದೆ ಎಂದು ನೆನಪಾದಾಗ ದುಡಿಯಲು ನಿಲ್ಲುವವರೇ ಹೆಚ್ಚು. ಗಂಟೆ ಜಾಗಟೆ ನುಡಿಸಿ, ಮೆರವಣಿಗೆ ಮಾಡಿಕೊಂಡಿರುವವರು ಇದ್ದಾರೆ. ಹಲಾಯಿ ಕುಣಿದು ಹಸಿದು ಖುಷಿ ಪಡುವವರೂ ಇದ್ದಾರೆ. ನಾಟಕ, ಬೀದಿ ನಾಟಕ, ಹರತಾಳ, ಪ್ರತಿಭಟನೆ, ಹೋರಾಟ ಮಾಡುವವರೂ ಇದ್ದಾರೆ. ಮಳೆ ಸುರಿಯದಿದ್ದರೂ, ಬಿಸಿಲಂತೂ ಯಾರಿಗೂ ಕೇರ್ ಮಾಡದೆ ಭೂಮಿಗಿಳಿದು ಕೂಡುತ್ತದೆ. ಬಿಸಿಲಿಗಂಜಿ ಭಯ ಪಡುವವರು ಈ ದೊಡ್ಡ ಊರಿನಲ್ಲಿ ಯಾರೂ ಇಲ್ಲ.

ಆದರೆ ಅಮರಚಿಂತರು ಹವಾಯಿ ಚಪ್ಪಲಿ ಹಾಕಿಕೊಂಡು ಚೂರು ಸದ್ದಿಲ್ಲದೆ ರಾಯಚೂರಿನ ಇಂಚಿಂಚು ನೆಲವನ್ನೂ, ಅದರ ಮೇಲಿನ ಚರಾಚರ ಜೀವ ಜಂತುಗಳನ್ನೂ, ಕೋಟೆ ಕೊತ್ತಲಗಳನ್ನು, ಬಜಾರಗಳನ್ನು, ಕೋರ್ಟು ಕಚೇರಿಗಳನ್ನು, ಗಂಜ್, ಮಸೀದಿ, ಮಂದಿರಗಳನ್ನು ನೋಡುತ್ತ ಗಲ್ಲಿಯ ನಲ್ಲಿ ನೀರನ್ನು ಕುಡಿಯುತ್ತ, ನಾಲ್ಕೂ ಚಕ್ರಗಳ ಬಂಡಿಯ ಮೇಲೆ ಭರ್‌ರ್ ಎಂದು ಉರಿಯುವ ಸ್ಟವ್ ಮೇಲೆ ಕುದಿಯುವ ಚಹವನ್ನು ಕಂಡರೆ, ಚೂರು ನಿಂತು ಕುಡಿದು, ಅಲ್ಲೇ ಜಗತ್ತು ನಮ್ಮದೆಂದು ಓಡಾಡುವ ಹಂದಿಗಳನ್ನು, ಅವುಗಳ ಸೌಂದರ್ಯವನ್ನು ನೋಡುತ್ತ ನಕ್ಕು ಮುಂದೆ ನಡೆಯುವ ಅವರು ಅಲ್ಲಲ್ಲಿ ಸಿಗುವ ಕವಿತೆಗಳನ್ನು ಜೋಳಿಗೆ ತುಂಬಿಸಿಕೊಂಡು ಮನೆಗೆ ಬಂದು, ಅಂದಿನ ಹಸಿವೆಯನ್ನು ತುಂಬಿಸಿಕೊಳ್ಳುವಂತೆ ಆಯ್ದು ತಂದ ಕವಿತೆಗಳನ್ನು ಸೋಸುತ್ತ ಹಿಡಿ ಕಾವ್ಯವನ್ನು ಕಟ್ಟಿಕೊಂಡು ಮಲಗುವವರು. ಮಲಗಿಯೂ ಅದೇ ಕನಸನ್ನು ಕಾಣುವುದು ಅವರಿಗೆ ಇಂದಿಗೂ ತಪ್ಪಿಲ್ಲವೆಂದು ನನಗೆ ಖಾತ್ರಿಯಿದೆ.

ಜಂಬಣ್ಣ ಅಮರಚಿಂತರು ಮಡಿ ಮಾಡಿಕೊಡುವ ಕುಲಕಸುಬಿನವರೆಂದು ನನಗೆ ನೆನಪಿದೆ. ಲೋಕವನ್ನು, ಸಮಾಜವನ್ನು ಮಡಿ ಮಾಡುವ ಕಡೆಯೇ ಅವರ ಗಮನ. ಸಮಾಜವು ಹೆಚ್ಚು ಮೈಲಿಗೆಯವರಿಂದ ತುಂಬಿರುವುದು ಕಂಡು, ಇದನ್ನು ತೊಳೆದು ಮಡಿ ಮಾಡಲು ಸಾಧ್ಯವಿಲ್ಲ ಎಂದವರು ಸೋತು ಕುಂತವರಲ್ಲ. ನಿಧಾನವಾದರೂ ಸರಿ ಮಾಡಲು ಉಮೇದಿಯುಳ್ಳವರಾಗಿಯೇ ಪ್ರಯತ್ನಿಸುವವರು. ತನ್ನ ಜತೆಗೆ ಮಡಿ ಮಾಡಲು ಮನಸ್ಸಿರುವವರನ್ನೂ ಹುಡುತ್ತಲೇ, ಜತೆಗೆ ಬಂದವರನ್ನು ಕರೆದುಕೊಂಡರು. ಇಲ್ಲವೇ ಅಂಥವರ ಬಳಿ ಹೋಗಿ ಸೇರಿಕೊಳ್ಳಲೂ ಪ್ರಯತ್ನಿಸಿದವರು.

‘ನಾವು ಮಡಿಯಾಗಿಯೇ ಇದ್ದೇವೆ. ನೀವು ಮೈಲಿಗೆಯವರು’ ಎನ್ನುವ ಮಾತು ಯಾರಿಂದಲಾದರೂ ಬಂದದ್ದನ್ನು ಅಮರಚಿಂತರು ಕೇಳಿಸಿಕೊಂಡಿರಬಹುದೆ? ಬಾಹ್ಯ ಮಡಿಯನ್ನು ಮಡಿ ಎಂದು ತಿಳಿದಿರುವವರೇ ಹೆಚ್ಚು. ಇಂಥವರ ವಿರುದ್ಧವಲ್ಲವೇ ಬುದ್ಧ, ಬಸವ, ಅಂಬೇಡ್ಕರ್ ಯುದ್ಧ ಸಾರಿದ್ದು. ಈ ನಿರಂತರ ಯುದ್ಧದಲ್ಲಿ ನಿರಂತರವಾಗಿ ಸೈನಿಕ ಹುದ್ದೆಯನ್ನೇ ಆಯ್ದುಕೊಂಡು ಬದುಕಲು ಬಯಸುವವರು ಅಮರಚಿಂತರು.

2
ಜಂಬಣ್ಣ ಅಮರಚಿಂತರು ಒಮ್ಮೆ ನನ್ನ ಮನೆಗೆ ಬಂದರು. ಪ್ರೀತಿಯ ನಗೆಯನ್ನು ಹೊತ್ತು ಬಂದವರು ಅಮರಚಿಂತರೆಂದು ತಿಳಿದ ನನಗೆ ನಿಬ್ಬೆರಗು. ಆಗ ಎರಡು ಚಿಕ್ಕ ಕೊಠಡಿಯ ಬಾಡಿಗೆ ಮನೆಯಲ್ಲಿದ್ದೆ. ರಾಯಚೂರಿನ ತಿಮ್ಮಾಪುರ ಪೇಟೆಯಲ್ಲಿದ ಆ ಮನೆ ಗೋಮಟಿಗರದ್ದು. ಅಕ್ಕ ಸರೋಜಮ್ಮ ಮನೆಯ ಒಡತಿ. ನನ್ನನ್ನು ತಮ್ಮ ಎಂದೇ ವಿಶ್ವಾಸವಿರಿಸಿದ್ದಳು. ಅಮರಚಿಂತ ಬಂದದ್ದು ನನಗೆ ಗಾಬರಿಯೂ ಖುಷಿಯೂ ಆಗಿತ್ತು. ಅಷ್ಟರಲ್ಲಿ ಸರೋಜಮ್ಮ ಪಕ್ಕದ ತನ್ನ ಮನೆಯಿಂದ ಚಹ ತಂದುಕೊಟ್ಟು ಹೋದಳು. ‘ಈ ಮನೆಯ ಓನರ್’ ಎಂದು ನಾನು ಹೇಳಿದ್ದೆ ತಡ, ನಗತೊಡಗಿದರು. ‘ಕತೆಗಾರರಿಗೆ ಒಳ್ಳೆಯ ಅಕ್ಕ ಸಿಕ್ಕಿದ್ದಾರಲ್ಲ ಬುಡು ಸಾಕು’ ಎಂದರು.

ನಾನು 1980ರ ಸುಮಾರು ಓದಲು ನನ್ನೂರಿನಿಂದ ರಾಯೂರಿಗೆ ಬಂದಿದ್ದೆ. ಹಮದರ್ದ ಜ್ಯೂನಿಯರ್ ಕಾಲೇಜಿಗೆ ಸೇರಿ ಓದುವಾಗ, ಆ ಕಾಲೇಜಿನ ಪ್ರಿನ್ಸಿಪಾಲರಾದ ಶಾಂತರಸರು ಮತ್ತು ಸೀನಿಯರ್ ಎಸ್.ಜಿ. ಸ್ವಾಮಿ ಪರಿಚಿತರಾದರು. ಸ್ವಾಮಿ ಆಗಲೇ ಕವಿತೆ ಬರೆಯುತ್ತಿದ್ದರು. ನಾನೂ ಹಿಂಬಾಲಿಸಿದೆ. ಶಾಂತರಸರ ಬೆಂಬಲವಿತ್ತು. ಆಗ ರಾಯಚೂರಿನಲ್ಲಿ ನಡೆಯುತ್ತಿದ್ದ ಸಾಹಿತ್ಯ ಕಾರ್ಯಕ್ರಮಗಳಿಗೆ ನಾನೂ ಹೋಗಲು ಶುರುಮಾಡಿದೆ.

ಜಂಬಣ್ಣ ಅಮರಚಿಂತರನ್ನು ಮೂರು ನಾಲ್ಕು ಕಾರ್ಯಕ್ರಮಗಳಲ್ಲಿ ಆಗಾಗ ನೋಡಿದೆ. ಡಾ. ಚೆನ್ನಣ್ಣ ವಾಲೀಕಾರರ ಜತೆಗೆ ಇರುತ್ತಿದ್ದರು. ದಲಿತರು, ದಲಿತ ಸಂಘರ್ಷ ಸಮಿತಿ ಅಂತ ಅವರದೊಂದು ಗುಂಪಿತ್ತು. ಏನೂ ಬರೆಯದ, ಯಾವುದೇ ಸಾಹಿತ್ಯಿಕ ವಿಚಾರವಿಲ್ಲದ, ಕ್ರಾಂತಿಕಾರಿ ಭಾಷಣ ಮಾಡಲು ಬರದ ನಾನೂ ಎಸ್.ಜಿ. ಸ್ವಾಮಿಯಿಂದ ತಿರುಗುತ್ತಿದ್ದೆ. ಯಾರ ಪರಿಚಯವನ್ನೂ ಮಾಡಿಕೊಳ್ಳದೆ ಜಂಬಣ್ಣನವರ ಒಳ್ಳೆಯ ಕವಿ ಎಂದು ಅವರಿವರು ಮಾತನಾಡುವುದನ್ನೂ ಕೇಳುತ್ತಿದೆ.  ಅವರು ಪದ್ಯ ಓದುವುದನ್ನು ಕೇಳಿ ನಿರಾಶನಾಗಿದ್ದೆ.

ಅವರಿಗೆ ಚಂದವಾಗಿ ಕವಿತೆ ಓದಲು ಬರುತ್ತಿರಲಿಲ್ಲ. ಶಾಂತರಸರ ಮನೆಯಲ್ಲಿ ಅವರ ಕವನ ಸಂಕಲನವಿತ್ತು. ಓದಿದರೂ ನನಗೆ ಕವಿತೆಯ ಓದು ಒಗ್ಗುತ್ತಿರಲಿಲ್ಲ. ಎಸ್.ಜಿ. ಸ್ವಾಮಿ ಮತ್ತು ಶಾಂತರಸರ ಬೆಂಬಲದಿಂದ ನಾನೂ ಕವಿತೆ ಬರೆದೆ. ಕೆಲವನ್ನು ಆರಿಸಿ ಸಂಕಲನ ಪ್ರಕಟಿಸಿ ಎಂದು ಕೈಗಿತ್ತರು.

ನಾನೂ, ಸ್ವಾಮಿ ಗದುಗಿಗೆ ಹೋಗಿ ಸಂಕಲನವನ್ನೂ ಪ್ರಿಂಟ್ ಮಾಡಿಸಿಕೊಂಡು ಬಂದು, ಊರಿನ ಸಾಹಿತಿಗಳಿಗೆಲ್ಲ ಹಂಚಿದೆವು. ಅಷ್ಟರಲ್ಲೇ ನಾನು ಬಿ.ಎ. ಮುಗಿಸಿದೆ. ಬೇಸಿಗೆಯ ರಜೆಯಲ್ಲಿ ಇದ್ದಕ್ಕಿದ್ದ ಹಾಗೆ ಕತೆಗಳನ್ನು ಬರೆಯತೊಡಗಿದೆ. ಮತ್ತೆ ಎಂ.ಎ. ಓದಲು ಒತ್ತಾಯದ ಮೇರೆಗೆ ಕಲಬುರ್ಗಿಗೆ ಹೋದೆ. ಪದವಿ ಪಡೆದು 1990ರಲ್ಲಿ ರಾಯಚೂರಿಗೆ ಬಂದು ತಾತ್ಕಾಲಿಕವಾಗಿ ನೆಲೆಸಿದೆ. ಈ ನಡುವೆ ಬರೆದ ಕತೆಗಳನ್ನು ರಿಪೇರಿ ಮಾಡುತ್ತ ಕಾಲ ಕಳೆದೆ. ಕತೆಗಳು ಪತ್ರಿಕೆಯಲ್ಲಿ ಪ್ರಕಟವಾದವು.

1991ರಲ್ಲಿ ‘ಮಣ್ಣು ಸೇರಿತು ಬೀಜ’ ಎಂಬ ನನ್ನ ಮೊದಲ ಸಂಕಲನವನ್ನು ಪ್ರಕಟಿಸಿದೆವು. ಶ್ರೀ ಕೃಷ್ಣ ರಾಯಚೂರು ಕಲಾವಿದರಾಗಿ ನನ್ನ ಜತೆಗೇ ಇರುತ್ತಿದ್ದ. ಆತನೇ ಪ್ರಕಟಣೆಗೆ ಪ್ರೇರೇಪಿಸಿದ್ದು. ವರ್ಷದ ಒಳಗೆ ಆ ಸಂಕಲನಕ್ಕೆ ಪ್ರಶಸ್ತಿ ಬಂದವು. ಜಂಬಣ್ಣ ಅಮರಚಿಂತರು ಸಂಕಲನ ಓದಿ, ನನ್ನನ್ನು ಹುಡುಕಿಕೊಂಡು ಆ ದಿನ ಮನೆಗೆ ಬಂದಿದ್ದರು. ನನ್ನ ಕತೆಗಳ ವಸ್ತು, ಭಾಷೆಯ ಶೈಲಿ, ಕತೆ ಕಟ್ಟುವ ರೀತಿ ಕುರಿತು ಮಾತಾಡಿ ‘ರಾಯಚೂರಿಗೆ ಹೆಸರು ತರುತ್ತಿ ಬಿಡು’ ಎಂದು ಪ್ರೀತಿಯಿಂದ ಹೇಳಿಹೋದರು. ಆ ಮಾತುಗಳಲ್ಲಿ ಪ್ರೀತಿ ವಿನಃ ಬೇರೇನೂ ನನಗೆ ಅಂದು ಕಾಣಲಿಲ್ಲ. ಇಂದಿಗೂ ಅದೇ ಪ್ರೀತಿ ಕಾಣುತ್ತಿದೆ. ಪುನಃ ರಾಯಚೂರಿಗೆ ಬಂದಮೇಲೆ ನಾನು ಅಮರಚಿಂತರ ಕವಿತೆಗಳನ್ನು ಓದಿದೆ. ತುಂಬ ಇಷ್ಟವಾದವು. ಅವರ ಆಯ್ದ ಕವಿತೆಗಳನ್ನು ನಾನು, ಶ್ರೀ ಕೃಷ್ಣ ರಾಯಚೂರು ಸೇರಿ ‘ಅಮರಚಿಂತ ಕಾವ್ಯ’ ಪ್ರಕಟಿಸಿದೆವು, ಇರಲಿ.

ನಾನು, ಅಮರಚಿಂತರು ಪರಿಚಿತರಾದ ಮೇಲೆ ಅವರೇ ಆಗಾಗ ನನ್ನ ಮನೆಗೆ ಬರುತ್ತಿದ್ದರು. ಕವಿತೆ ಅಥವಾ ಸಾಹಿತ್ಯ ಕುರಿತು ಮಾತನಾಡುತ್ತಿದ್ದರೇ ಹೊರತು ಬೇರೇನೂ ಮಾತಾಡುತ್ತಿರಲಿಲ್ಲ. ಸಮಾಜದ ಅಸಮಾನತೆ ಕುರಿತು ತುಂಬ ಚಿಂತೆ ಮಾಡುತ್ತಿದ್ದರು.

ಕವಿತೆಗೆ ಬೇಕಾದ ವಸ್ತುವನ್ನು, ಭಾಷೆಯನ್ನು ಕುರಿತು ಹಗಲು ರಾತ್ರಿ ಚಿಂತಿಸುತ್ತಿದ್ದರು. ತೆಲುಗು ದಲಿತ ಕಾವ್ಯವನ್ನು, ವಚನಗಳನ್ನು ಓದುತ್ತಿದ್ದರು. ರಾಯಚೂರಲ್ಲಿ ಅವರಿಗೆ ಚರ್ಚಿಸಲು, ಸಂವಾದ ಮಾಡಲು ಯಾರೂ ಸಿಗುತ್ತಿರಲಿಲ್ಲ. ಇರುವವರ ಬಳಿಯೇ ಸುತ್ತುತ್ತ ಸಂವಾದ ನಡೆಸಿ, ಓದುತ್ತ ಏನೋ ಹೊಸದನ್ನು ಕಂಡುಕೊಂಡು ಬರೆಯುತ್ತಿದ್ದರು. ಕವಿಗೋಷ್ಠಿಗಳಿಗೆ ಹೊರಗಿನಿಂದ ಕರೆ ಬಂದರೆ ಕವಿತೆ ಓದಲು ಹೋಗುವ ಉಮೇದಿಗಿಂತ, ಅಲ್ಲಿ ಪ್ರತಿಭಾವಂತರು ಸಿಗುತ್ತಾರೆ, ಚರ್ಚಿಸಬೇಕು, ಸಂವಾದ ನಡೆಸಬೇಕು, ಏನನ್ನಾದರೂ ಕಲಿತು ಬರಬೇಕೆಂದು ಹೋಗುತ್ತಿದ್ದರು. ಅವರ ದಾಹ ಕಂಡು ನನಗೆ ಅಚ್ಚರಿಯಾಗುತ್ತಿತ್ತು.

ಅಮರಚಿಂತರ ಕಾವ್ಯದ ದನಿ ಅಬ್ಬರದ್ದಲ್ಲ. ಅವರು ತಮ್ಮ ಕವಿತೆಯನ್ನು ಚಮತ್ಕಾರದಿಂದ ಓದುವವರಲ್ಲ. ಓದಿ ಕೇಳುಗರನ್ನು ಬೆಚ್ಚನೆ ಬೀಳಿಸಬೇಕೆಂಬ ಚೂರು ಹಂಬಲ ಅವರದಲ್ಲ. ಕೇಳಿಸಿಕೊಳ್ಳುವ ಮನಸ್ಸಿಗೆ ತಣ್ಣಗೆ ಬಡಿದು ಕುಂತು, ಕಿಚ್ಚು ಹೊತ್ತಿಸುತ್ತಿದ್ದವು ಅವರ ಕವಿತೆಗಳು. ಅವರು ಬರೆದ ಹಾಡುಗಳೂ ಅಷ್ಟೆ. ಅಮರಚಿಂತರು ಎಲ್ಲದರೊಳಗಿದ್ದು, ಇಲ್ಲದಂತಿರುವ ಗುಣದಿಂದ ಪರಿಚಿತರು. ಒಳ್ಳೆಯ ಕವಿತಾ ಗುಣವಿರುವ ಯಾರನ್ನೂ ಮಾತಾಡಿಸಿ, ಅವರ ಸ್ನೇಹ ಬಯಸಿ ಕಾವ್ಯಸಂವಾದ ನಡೆಸಲು ಹಂಬಲಿಸುವ ಅವರ ಗುಣವನ್ನು ನಾನು ಕಂಡಿದ್ದೇನೆ. ಒಂದು ಹಂತದವರೆಗೆ ಅವರು ಶೋಷಿಸುವವರನ್ನು, ಶೋಷಣೆಗೆ ಒಳಗಾಗುವವರನ್ನು ಕುರಿತು ಕವಿತೆ ಬರೆದರು. ಈ ಎರಡು ಪಕ್ಷಗಳನ್ನು ಅವರು ಅರ್ಥ ಮಾಡಿಕೊಂಡಷ್ಟು ಖಚಿತವಾಗಿ ಅವರ ಓರಿಗೆಯವರು ಯಾರೂ ಅರ್ಥಮಾಡಿಕೊಂಡಿಲ್ಲವೆಂದೇ ನನ್ನ ತಿಳಿವಳಿಕೆ.

ರಕ್ತಸಿಕ್ತ ಖಡ್ಗ ನಿಮ್ಮ ಒರೆಯಲ್ಲಿ
ಹಂತರು ಯಾರೆಂದು ಮತ್ತೆ ಕೇಳುವಿರಿ
ಬಿತ್ತುವ ಬೀಜ ನಿಮ್ಮ ಉಗ್ರಾಣದಲ್ಲಿ
ಬೆಳೆಯಾಕೆ ಬರಲಿಲ್ಲವೆಂದು ಮತ್ತೆ ಕೇಳುವಿರಿ
ಈ ಒಂದು ಪದ್ಯ ಸಾಕು ಅವರ ಕಾವ್ಯ ಧೋರಣೆಯನ್ನು ಗುರುತಿಸುವುದಕ್ಕೆ. ‘ನಾನು ಸದಾ ಬೇಟೆಯ ಜೊತೆಗಿದ್ದೇನೆ, ಬೇಟೆಗಾರನ ಜೊತೆಯಲ್ಲ’– ಇದೂ ಅವರ ಕಾವ್ಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.
3
ಜಂಬಣ್ಣ ಅಮರಚಿಂತರು ಎರಡು ಕಾದಂಬರಿಗಳನ್ನು (ಕುರುಮಯ್ಯ ಮತ್ತು ಅಂಕುಶದೊಡ್ಡಿ, ಬೂಟುಗಾಲಿನ ಸದ್ದು) ಬರೆದಿದ್ದಾರೆ. ನವ್ಯದ ಏರುಕಾಲದಲ್ಲಿ ಕವಿಯಾಗಲು ಬಯಸಿದವರು ಹೈದರಾಬಾದು ಕರ್ನಾಟಕದ ಕವಿಗಳು. ಆದರೆ ಬರೆದರೆ ಗೋಪಾಲಕೃಷ್ಣ ಅಡಿಗರಂತೆ ಬರೆಯಬೇಕೆಂಬ ಮಾತನ್ನು ವಿಮರ್ಶಕರು ಹರಿಯಬಿಟ್ಟರು. ಅಮರಚಿಂತರು ಅಡಿಗರನ್ನು ಓದಿದರೆಂದು ಕಾಣುತ್ತದೆ. ನವ್ಯಸಂವೇದನೆ ಹೈದರಾಬಾದು ಕರ್ನಾಟಕ ಪ್ರಾಂತ್ಯದ ಕವಿಗಳಲ್ಲಿ ಸೃಜಿಸಲು ಸಾಧ್ಯವಿರಲಿಲ್ಲ. ಇಲ್ಲಿನ ನೆಲದ ಬಾಳ್ವೆಯೇ ಬೇರೆಯಾಗಿತ್ತು. ಆದರೆ ಕನ್ನಡ ಕಾವ್ಯ ಸಂದರ್ಭ ಇದನ್ನು ಬೇಡಲು ಸಿದ್ಧವಿರಲಿಲ್ಲ.

ಅಮರಚಿಂತರು, ವಾಲೀಕಾರರು, ಶಿವಶರಣ ಪಾಟೀಲ ಜಾವಳಿಯವರು, ಜಿ. ಕಿಶನ್‌ರಾವ್, ಚಂದ್ರಕಾಂತ ಕುಸನೂರರು ನವ್ಯ ಕವಿತೆಯನ್ನು ಬರೆಯಲು ಪ್ರಯತ್ನಿಸಿದರು. ಇವರ ಪುಣ್ಯಕ್ಕೆ ಬಂಡಾಯ ದಲಿತ ಸಾಹಿತ್ಯ ಚಳವಳಿ ರೂಪಗೊಂಡು ಆರಂಭವಾಯಿತಲ್ಲಾ, ಇಲ್ಲಿ ತಮ್ಮ ಉಸಿರಾಟವನ್ನು ಸಲೀಸಾಗಿ ಉಸಿರಾಡಲು ಅವಕಾಶ ಸಿಕ್ಕಿತು ಇವರಿಗೆಲ್ಲ. ಈ ಸಂದರ್ಭದಲ್ಲಿ ಅಮರಚಿಂತರು ಮಾತ್ರ ಎದ್ದುನಿಂತರು. ಸಾಕಷ್ಟು ಉಳಿಯುವ ಕವಿತೆಗಳನ್ನು ಬರೆದರು. ಆದರೂ ಅಮರಚಿಂತರಿಗೆ ಕಾದಂಬರಿ ಬರೆಯಬೇಕೆಂಬ ಹಂಬಲವಿತ್ತು. ಅವರಿಗೆ ಕಾದಂಬರಿ ಪ್ರಕಾರದಲ್ಲಿ ತಮ್ಮ ಅನುಭವ ಲೋಕವನ್ನು ಕಟ್ಟಬೇಕೆಂಬ ತುಡಿತವಿತ್ತು. ಅವರಿಗೆ ‘ಗ್ರಾಮಾಯಣ’, ‘ಕಾನೂರು ಹೆಗ್ಗಡಿತಿ’, ‘ಮರಳಿ ಮಣ್ಣಿಗೆ’ ಮುಂತಾದ ಕಾದಂಬರಿಗಳ ಮಾದರಿ ಕಾಡಿತ್ತು. ಕಾದಂಬರಿಗೆ ಬೇಕಾದ ವಸ್ತು, ಜನಾಂಗೀಯ ಬದುಕು ಪಾತ್ರಗಳು ಎಲ್ಲವನ್ನು ಆಗಾಗ ನನ್ನ ಮುಂದೆ ಹೇಳುತ್ತಿದ್ದರು.

ನಾನು ಬರೆದಿದ್ದ ‘ನೀರು ತಂದವರು’, ‘ತಮಂಧದ ಕೇಡು’ ಮತ್ತೆ ಮತ್ತೆ ಓದಿದ್ದನ್ನು ಹೇಳುತ್ತ, ತಾವೇ ಬರೆದಿರುವ ಕತೆಗಳೆಂದು ಭಾವಿಸಿದಷ್ಟು ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು. ‘ಕುರುಮಯ್ಯ ಮತ್ತು ಅಂಕುಶದೊಡ್ಡಿ’ ಕಾದಂಬರಿ ಹೊರ ಬಂದಾಗ ನಾನು ಕನ್ನಡ ವಿಶ್ವವಿದ್ಯಾಲಯ ಸೇರಿದ್ದೆ. ಅದನ್ನು ಅವರು ಬಹಳ ಹಿಂದೆಯೇ ದೊಡ್ಡದಾಗಿ ಬರೆದಿದ್ದರಂತೆ. ಪ್ರಕಟಿಸುವವರು ಸಿಗಲಿಲ್ಲವೆಂದು, ಅದನ್ನು ಕಿರಿದಾಗಿಸಿ ಪ್ರಕಟಿಸಿದ್ದರು. ಇದೇ ಪರಿಸ್ಥಿತಿ ಶಾಂತರಸರ ‘ಸಣ್ಣ ಗೌಡಸಾನಿ’ಯದು.

ಕುತೂಹಲದ ಸಂಗತಿಯೆಂದರೆ ಈ ಪ್ರಾಂತ್ಯದಲ್ಲಿ ಹುಟ್ಟಿದ ಕಾದಂಬರಿಗಳು ಬೆರಳೆಣಿಕೆಯಷ್ಟು. ‘ಸಣ್ಣ ಗೌಡಸಾನಿ’ (ಶಾಂತರಸ) ಮುಸ್ಲಿಂ ಒಳಪಂಗಡಕ್ಕೆ ಸೇರಿರುವ ಜಾತಿಗೇರ ಎನ್ನುವ ಜನಾಂಗದ ವಸ್ತುವನ್ನು ಒಳಗೊಂಡಿದೆ. ‘ಕುರುವಯ್ಯ ಮತ್ತು ಅಂಕುಶದೊಡ್ಡಿ’ (ಅಮರಚಿಂತ) ಕೊರವ ಜನಾಂಗದ ವಸ್ತುವಿದೆ. ಬಿ.ಟಿ. ಲಲಿತಾ ನಾಯಕರ ‘ಗತಿ’ ಮತ್ತು ಮಲ್ಲಿಕಾರ್ಜುನ ಹಿರೇಮಠರ ‘ಹವನ’ ಕಾದಂಬರಿಗಳಲ್ಲಿ ಲಮಾಣಿ ಜನಾಂಗದ ವಸ್ತುವಿದೆ. ಈ ಕಾದಂಬರಿಗಳು ಊರ ಹೊರಗಿರುವ ಬುಡಕಟ್ಟು ಜನಾಂಗಕ್ಕೆ ಸೇರಿದವರ ಬಾಳ್ವೆಯನ್ನು ಒಳಗೊಂಡಿರುವುದು ಸೋಜಿಗ.

‘ಕುರುಮಯ್ಯ...’ ಕೊರವರು ಸಮಾಜದ ಅಂಚಿನಲ್ಲಿದ್ದು ಬದುಕುವ ಜನಾಂಗ. ತಮ್ಮದೇ ಬದುಕಿನ ಕಟ್ಟುಪಾಡುಗಳ ಒಳಗೇ ಬಾಳುತ್ತ ಅನೇಕ ಸಂಕಷ್ಟಗಳಿಗೆ ಗುರಿಯಾಗುವವರು. ನಾಗರಿಕ ಸಮಾಜದಿಂದ ದೂರವಿದ್ದರೂ, ಅವರ ಕ್ರೌರ್ಯದಿಂದ ತಪ್ಪಿಸಿಕೊಳ್ಳಲಾರದ ಸ್ಥಿತಿಗೆ ಒಳಗಾಗುತ್ತಾರೆ. ಸ್ಥಳೀಯ ಉಳ್ಳವರಿಂದ ಶೋಷಣೆಗೆ ಒಳಗಾಗುತ್ತ, ಅವರ ರಾಜಕೀಯಕ್ಕೆ ಕೊರವರು ಬಲಿಯಾಗುತ್ತಾರೆ. ಊರು ಇವರನ್ನು ಬಿಡದು. ಆಧುನಿಕತೆಯಿಂದ ಈ ಜನಾಂಗ ತಮ್ಮ ಬಾಳ್ವೆಯ ಲಯ ಕಳೆದುಕೊಂಡು ಪರಿತಪಿಸುತ್ತಲೇ ಕವಲು ಬದುಕಿಗೆ ಹೊಂದಿಕೊಳ್ಳಲು ತಮ್ಮತನ ಕಳೆದುಕೊಂಡು ನಗರ ಜೀವನದ ಪ್ರವಾಹಕ್ಕೆ ಸಿಕ್ಕು ಹೇಗೋ ಬಾಳಲು ಕಲಿಯುವ ಸ್ಥಿತಿ ತಲುಪಿದ್ದನ್ನು ಕಾದಂಬರಿ ಚಿತ್ರಿಸಿದೆ.

ಅಮರಚಿಂತರು ಕಾದಂಬರಿಯನ್ನು ಬರೆಯಬಲ್ಲರು ಎಂಬುದನ್ನು ಇದು ಸಾಬೀತು ಮಾಡಿತು. ಆದರೆ ‘ಬೂಟುಗಾಲಿನ ಸದ್ದು’ ಅವರು ಮಹಾತ್ವಾಂಕಾಕ್ಷೆಯ ಕಾದಂಬರಿಯನ್ನಾಗಿ ಬರೆಯಲು ಹಂಬಲಿಸಿದ್ದರು. ಅನಾರೋಗ್ಯದ ಸ್ಥಿತಿಯಲ್ಲಿಯೇ ಬರೆದಿದ್ದರಿಂದ ಅಪಕ್ವತೆ ಉಳಿದುಕೊಂಡಿದೆ. ನಾನು ಆ ಕಾದಂಬರಿಯನ್ನು ಪ್ರಕಟಣೆಗಿಂತ ಮುಂಚೆ ಓದಿದ್ದೆ. ಬರೆದಿದ್ದರಲ್ಲಿಯೇ ಸೇರಿಸಬೇಕಾದ ಅಂಶಗಳನ್ನೂ ಪಟ್ಟಿ ಮಾಡಿಕೊಟ್ಟೆ. ಆದರೆ ಅವರ ಆರೋಗ್ಯ ಸಹಕರಿಸಲಿಲ್ಲವೆಂದು, ಇದ್ದದ್ದನ್ನೇ ಪ್ರಕಟಿಸಲು ಹೇಳಿದರು. ಒಳ್ಳೆಯ ಅನುಭವದ ವಸ್ತು ಮೈತುಂಬಿಕೊಳ್ಳದೆ ಹೋಯಿತು.
4
ಸ್ಥೂಲ ಶರೀರದ ಅಮರಚಿಂತರಿಗೆ ಆರೋಗ್ಯ ಸೂಕ್ಷ್ಮವಾದುದು. ಅದಕ್ಕೆ ಅವರೇನೂ ಚಿಂತಿತರಾಗಿಲ್ಲ. ಅವರಿಗಿರುವ ಒಂದೇ ಚಿಂತೆ ಕಾವ್ಯ ರಚನೆಯದ್ದು. ಉತ್ತಮ ಕಾವ್ಯ ರಚಿಸಬೇಕೆಂಬ ಹಂಬಲದಿಂದ ದೂರ ಸರಿದಿಲ್ಲ. ಅಸಮಾನತೆಯ ಸಮಾಜದ ಬೇರುಗಳನ್ನು ಶೋಧಿಸಿ, ಅದರ ಎಳೆಎಳೆಯನ್ನು ಅರಿಯುವ, ಅಭಿವ್ಯಕ್ತಿಸುವ ತುಡಿತ ಇನ್ನೂ ಜೀವಂತವಾಗಿಯೇ ಅವರಲ್ಲಿದೆ. ಈಚೆಗೆ ಉದ್ದುದ್ದದ ಕವನ ಬರೆಯುವುದನ್ನು ಬಿಟ್ಟರು. ಕಾವ್ಯದ ಪ್ರಕಾರವನ್ನು ಬದಲಿಸಿಕೊಂಡರು.

ನಿಜಾಮ್ ಪ್ರಾಂತ್ಯದಲ್ಲಿ ಹುಟ್ಟಿ ಬೆಳೆದಿದ್ದರಿಂದ, ಹೈದರಾಬಾದ್ ಸಂಸ್ಥಾನದಲ್ಲಿ ಗಟ್ಟಿಯಾಗಿ ಬೇರೂರಿದ್ದ ಉರ್ದು ಮತ್ತು ತೆಲುಗು ಭಾಷೆಗಳಲ್ಲಿನ ಕಾವ್ಯ ಪ್ರಕಾರಗಳನ್ನು ಓದಿಕೊಂಡು ಅದನ್ನು ಕನ್ನಡದಲ್ಲಿ ಪ್ರಯೋಗ ಮಾಡತೊಡಗಿದರು. ಗಜಲ್, ರುಬಾಯಿ, ಖಿತಾ ಮುಂತಾದ ಕಾವ್ಯ ಪ್ರಕಾರಗಳಲ್ಲಿ ತಮ್ಮ ಚಿಂತನೆಗಳನ್ನು ಅಭಿವ್ಯಕ್ತಿಸಿದರು. ಈ ಕಾವ್ಯ ಪ್ರಕಾರಗಳು ಮೂಲದಲ್ಲಿ ಯಾವ ವಸ್ತುವಿನ ಅಭಿವ್ಯಕ್ತಿಗಾಗಿ ಹುಟ್ಟಿದವು, ಯಾವ ಕಾರಣಗಳಿಗೆ ರಚನೆಗೊಂಡವು ಎಂಬುದನ್ನು ತಿಳಿದೂ, ಅದನ್ನು ಬದಿಗಿಟ್ಟು ತಮ್ಮ ಸಂವೇದನೆಗೆ ಅದನ್ನು ಬಳಸಿದರು. ಅದಕ್ಕೆ ಬೇಕಾದ ವ್ಯಾಕರಣವನ್ನು ಅಧ್ಯಯನ ಮಾಡಿದರು. ಓದುವ ಕಾವ್ಯವನ್ನೇ ಬರೆದರು. ನಿಶ್ಶಬ್ದದೊಳಗೇ ಸದ್ದನ್ನು ಕೇಳಿಸುವಂತೆ ಬರೆಯುತ್ತಿರುವ ಅಮರಚಿಂತರು ಈ ಹೊಸ ಕಾವ್ಯ ಪ್ರಕಾರಗಳಲ್ಲಿ ಕಲ್ಯಾಣದ ಕಾರುಣ್ಯವನ್ನೇ ಅಭಿವ್ಯಕ್ತಿಸಿದರು.

ಜಂಬಣ್ಣ ಅಮರಚಿಂತರು ಸದ್ದು ಮಾಡದೇ ಬರೆದರು. ಕನ್ನಡ ವಿಮರ್ಶೆಯಲ್ಲಿಯೂ ಅವರ ಸದ್ದು ಇಲ್ಲ. ಅವರ ಕಾವ್ಯವನ್ನು ಕುರಿತು ಸ್ವಪ್ರೇರಣೆಯಿಂದ ಯಾರೂ ಬರೆದಿಲ್ಲ. ಅವರೇ ಬರೆಸಿಕೊಂಡ ಮುನ್ನುಡಿಗಳು ಮಾತ್ರ ವಿಮರ್ಶೆಯಾಗಿ ಉಳಿದಿವೆ. ಅಮರಚಿಂತರು ರಾಜಧಾನಿಯಲ್ಲಿ ಇದ್ದಿದ್ದರೆ, ಸಾಂಸ್ಕೃತಿಕ ನಗರಗಳಲ್ಲಿ ಬೆಳೆದಿದ್ದರೆ, ವಿಮರ್ಶಕರನ್ನು ಬೆನ್ನತ್ತಿ ಬರೆಸಿಕೊಂಡಿದ್ದರೆ ಪ್ರಚಾರ ದಕ್ಕುತ್ತಿತ್ತೇನೋ! ಗದ್ದಲದ ದಾರಿ ಹಿಡಿಯಲಾರದ್ದಕ್ಕೇ ಕಾವ್ಯವನ್ನು ಹೆತ್ತರು.

ಕೆಳವರ್ಗದ ವಚನಕಾರರೂ ಹೀಗೆಯೇ ಅಮರಚಿಂತರಂತೆ ಬರೆದು ನಿಂತರೆಂದು ಕಾಣುತ್ತದೆ. ‘ಅಲಕ್ಷಿತ’ ವಚನಕಾರರಂತೆ ನನಗೆ ಅಮರಚಿಂತ ಕಾಣುತ್ತಾರೆ. ಈಗ ಅಮರಚಿಂತರಿಗೆ ವಯಸ್ಸಾಗಿದೆ. ಓದುವ, ಬರೆಯುವ ಶಕ್ತಿ ಕುಂದಿದೆ. ಯಾರಾದರು ತಮ್ಮ ಯೌವನವನ್ನು ಅಮರಚಿಂತರಿಗೆ ನೀಡಿ, ಕಾವ್ಯ ಬರೆಯಲು ತೊಡಗಿಸುವ ವಿದ್ಯೆ ಬಲ್ಲವರಿದ್ದಿದ್ದರೆ ಎಷ್ಟು ಚಂದವಿತ್ತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.