ADVERTISEMENT

‘‘ಚಿಣ್ಣರ ಹೆಸರಿನಲ್ಲಿ ಬಂದದ್ದೆಲ್ಲ ಮಕ್ಕಳ ಸಾಹಿತ್ಯವಲ್ಲ...

ಪ್ರಜಾವಾಣಿ ವಿಶೇಷ
Published 6 ಸೆಪ್ಟೆಂಬರ್ 2014, 19:30 IST
Last Updated 6 ಸೆಪ್ಟೆಂಬರ್ 2014, 19:30 IST

ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಪುರಸ್ಕಾರ’ ಪ್ರಶಸ್ತಿಗೆ ಪಾತ್ರರಾದುದಕ್ಕೆ ಅಭಿನಂದನೆಗಳು. ಈ ಹೊತ್ತಿನಲ್ಲಿ ನಿಮ್ಮ ನೆನಪಿಗೆ ಬರುತ್ತಿರುವ ಸಂಗತಿಗಳೇನು?
ಮಕ್ಕಳ ಸಾಹಿತ್ಯದಲ್ಲಿ ‘ಅಜ್ಜಿ ಮನೆ ಬಹಳ ದೂರ’ ಕೃತಿಯಿಂದ ಅದೇನೋ, ಯಾವ ಕಾರಣದಿಂದಲೋ ತೊಡಗಿಕೊಂಡುದು ಇಲ್ಲಿಯವರೆಗೆ ಬಂದಿತಲ್ಲ ಅಂತ ಅಚ್ಚರಿ ಖಂಡಿತ ಅನಿಸಿದೆ. ಕಳೆದ ದಿನದ ನೆನಪುಗಳು ಒಂದಲ್ಲ ಎರಡಲ್ಲ, ಬಹಳ ಮುಖ್ಯವಾಗಿ ನಮ್ಮ ಗೆಳೆಯರ ಬಳಗ ‘ಸಂಧ್ಯಾ ಸಾಹಿತ್ಯ ವೇದಿಕೆ’ ಎಂದು ಸೇರಿಕೊಂಡುದು ಇದಕ್ಕೆಲ್ಲ ಒತ್ತಾಸೆಯಾಗಿ ನಿಂತುದು. ಗೃಹಗೋಷ್ಠಿಗಳೆಂದು ಕಲಬುರ್ಗಿಯಲ್ಲಿ ಮನೆ ಮನೆಯಲ್ಲಿ ನಡೆಸುತ್ತಿದ್ದ ಚಟುವಟಿಕೆಗಳು ಹಲವಾರು ಕನಸುಗಳನ್ನ ಬಿತ್ತಿದುದು ಇಲ್ಲಿಯವರೆಗೂ ನಡೆತಂದುದಾಗಿದೆ. ಆಗ ನಡೆದ ಎಷ್ಟೋ ರೋಚಕ ಪ್ರಸಂಗಗಳು ಈಗೆಲ್ಲ ಗೆಳೆಯರ ನಡುವೆ ಬಿಚ್ಚಿಕೊಳ್ಳುತ್ತಿರುತ್ತವೆ.

ಚಿಣ್ಣರಿಗಾಗಿ ಬರೆಯುವ ನಿಮ್ಮನ್ನು ಬಾಲ್ಯದಲ್ಲಿ ಸೆಳೆದ ಕಥೆ–ಪದ್ಯಗಳು, ಈಗಲೂ ಕಾಡುವ ಚಿಣ್ಣರ ಕಥೆ–ಪದ್ಯಗಳು ಯಾವುವು?
ನನ್ನ ಮಕ್ಕಳ ಸಾಹಿತ್ಯದ ಹಿನ್ನೆಲೆಯಲ್ಲಿ ಬಾಲ್ಯ ಹಲವಂದದಲ್ಲಿ ನಿಂತುಕೊಂಡಿರುವುದು ನಿಜ. ಘಟಪ್ರಬಾದ ಹೊರವಲಯದಲ್ಲಿ ಧೂಪದಾಳದ ದಾರಿಯಲ್ಲಿ ಬಯಲಿನಲ್ಲಿ ದೂರದಲ್ಲಿ ನಿಂತುಕೊಂಡಿದ್ದ ಶಾಲೆಯ ದಿನಗಳು, ಅಲ್ಲಿನ ಚರ್ಚು, ನಾವೆಲ್ಲ ‘ಫೂಲೋಂಸೆ ಇಸ್ ಗುಲ್ಷನ್‌ ಸೆ ಕಾಟೋಂಕೊ ಹಠಾ ದೋ’ ಅಂತ ಸಾಲಾಗಿ ನಿಂತು ಹಾಡ್ತಾ ಇದ್ದದ್ದು, ನನ್ನ ಪಕ್ಕದ ಮನೆಯ ಪುಟ್ಟ ಗೆಳೆಯನ ತಾಯಿ ಇದ್ದಕ್ಕಿದ್ದ ಹಾಗೆ ಸಾವಿಗೆ ಸಂದುದು, ಅದನ್ನ ಹೇಗೆಲ್ಲ ಗ್ರಹಿಸುವುದಕ್ಕೆ ತೊಡಗಿ ಗೊಂದಲದಲ್ಲಿ ಬಿದ್ದುದು, ನವಿಲುಗುಂದದ ಮಾಡೆಲ್ ಹೈಸ್ಕೂಲಿನ ದೊಡ್ಡ ಗೆಳೆಯರ ಬಳಗ ಕಟ್ಟಿಕೊಟ್ಟ ಅನುಭವದ ಜಗತ್ತು– ಇದೆಲ್ಲ ದೊಡ್ಡದು. ಹೊಸ ಪಠ್ಯ ಪುಸ್ತಕ ಕೈಗೆ ಬಂದಾಗೆಲ್ಲ ಅದರಲ್ಲಿನ ಬಣ್ಣ ಬಣ್ಣದ ರೇಖಾಚಿತ್ರಗಳು ನನ್ನನ್ನ ಬಹಳ ಸೆರೆಹಿಡಿಯುತ್ತಿದ್ದವು.

ಆಗೆಲ್ಲ ನಾನು ಚಿತ್ರ ಬರೆಯುವ ಹುಡುಗನಾಗಿದ್ದುದೇ ಬಹಳ. ಚಿತ್ರಗಾರ ಎಲ್ಲವ್ವ, ಶಿವಪ್ಪ ಯಮನೂರ ಜಾತ್ರೆಗೆಂದು ತಯಾರಿಸುತ್ತಿದ್ದ ಕಿಟ್ಟದ ಗೊಂಬವ್ವನ ಘಾಟು ವಾಸನೆ ಇನ್ನೂ ಮೂಗಿನಲ್ಲಿ ಉಳಿದುಕೊಂಡೇ ಇದೆ. ನಾಗಲಿಂಗಜ್ಜನ ಮಠದಲ್ಲಿ ಜಿಗಿದು ಜಿಗಿದು ಠಣ್ಣಂತ ಗಂಟೆ ಹೊಡೆಯುತ್ತಿದ್ದುದು, ಒಗರು ಒಗರು ಅಂಗಾರ ನಾಲಿಗೆಗೆ ಸವರಿಕೊಂಡು ಸವಿಯುತ್ತಿದ್ದುದು ಏನೇನೆಲ್ಲಾ... ಮರೆವು ಎಲ್ಲವನ್ನ ಗುಡಿಸಿ ಹಾಕುತ್ತದೆ, ಆದರೆ ಮಸುಕು ಮಸುಕಾಗಿಯಾದರೂ ಅದೆಲ್ಲ ಕಾದು ನಿಂತುಕೊಂಡೇ ಇರುತ್ತದೆ ಅನಿಸುತ್ತದೆ.

ಮಕ್ಕಳಿಗಾಗಿ ನಿರಂತರವಾಗಿ ಬರೆಯುತ್ತಿರುವಿರಿ. ಆದರೆ, ಚಿಣ್ಣರೆಲ್ಲ ಶಾಲೆ- ಟ್ಯೂಷನ್ ಚೌಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಅವರ ತಾಯಿಯರು ಟೀವಿ ಎದುರು ಕೂತಿದ್ದಾರೆ. ಹೀಗಿರುವಾಗ ನೀವು ಬರೆಯುವುದು ಮಕ್ಕಳಿಗೆ ತಲುಪುತ್ತಿದೆ ಎನ್ನಿಸುತ್ತಿದೆಯೇ?
ಇದು ಖಂಡಿತ ನಾವೆಲ್ಲ ಪದೇ ಪದೇ ಕೇಳಿಕೊಳ್ಳುತ್ತಿರುವ ಪ್ರಶ್ನೆಯೇ. ಎಲ್ಲೋ ಗ್ರಂಥಾಲಯದಲ್ಲಿ ತೂರಿಕೊಂಡ ಪುಸ್ತಕವನ್ನ ಓದಿದವರು ನೆನಪು ಮಾಡಿಕೊಂಡು ಹೇಳಿದಾಗ ಅಚ್ಚರಿ ಅನ್ನಿಸಿಬಿಡುತ್ತದೆ. ನನ್ನ ಪುಟಾಣಿ ಪದ್ಯಗಳನ್ನ ಶಾಲೆಯ ಮಕ್ಕಳು ಆಕಾಶವಾಣಿಯ ರೆಕಾರ್ಡಿಂಗ್‌ಗೆ ಬಂದಾಗ ಕೈಕಟ್ಟಿಕೊಂಡು ತಪ್ಪದೆ ಬಾಯಿಪಾಠ ಒಪ್ಪಿಸುತ್ತಿದ್ದಾಗ ಭಾರಿ ಅಚ್ಚರಿ ಅನುಭವಿಸಿದ್ದೆ.

ನನ್ನ ಪುಟಾಣಿ ಮಗಳು ನಾನು ಬರೆಯುತ್ತಿದ್ದುದನ್ನೆಲ್ಲ ನನಗೇ ಅಂದು ತೋರಿಸುತ್ತ, ಅದಕ್ಕೆ ತನ್ನದೇ ಯಾವುದೋ ಸಾಲು ಸೇರಿಸುತ್ತಿದ್ದುದು ಖುಷಿಯನ್ನ ತರುವ ಸಂಗತಿಯೇ. ಬರವಣಿಗೆಯ ಹಿಂದಿನ ಬಿಡಲಾರದ ಒತ್ತಾಸೆ ಬಹುಶಃ ನಮ್ಮನ್ನೆಲ್ಲ ಮುಂದೆ ಸಾಗಿಸುತ್ತಿರುವುದು. ತಕ್ಷಣದ ಪ್ರತಿಕ್ರಿಯೆ ಸಿಗದೇ ಹೋಗದಿರಬಹುದು, ಆದರೆ ಅದೆಲ್ಲೋ ದೂರದಲ್ಲಿ, ಯಾವುದೋ ಅರಿಯದ, ಸಂಪರ್ಕಕ್ಕೆ ಸಿಗದ ಕಣ್ಣುಗಳು ಖಂಡಿತ ಈ ಕೃತಿಗಳಲ್ಲಿ ಕಣ್ಣಾಡಿಸುತ್ತಿರುತ್ತವೆ ಅನ್ನಿಸುತ್ತಲೇ ಇರುತ್ತದೆ. ಹೆಚ್ಚಾಗಿ ಒಂದು ಬಗೆಯ ಬಿಡುಗಡೆ ಈ ಬರವಣಿಗೆಯಿಂದ ಸಾಧ್ಯವಾಗುತ್ತದಲ್ಲ, ಅದು ದೊಡ್ಡದು. ಈ ಬರವಣಿಗೆಯ ಮೂಲಕ ನಾನು ನನ್ನ ಹಳೆಯ ಎಷ್ಟೋ ಗೆಳೆಯರ ಜೊತೆಗೆ ಮತ್ತೆ ಮತ್ತೆ ಸಂಭಾಷಿಸುತ್ತಿರುತ್ತೇನೆ ಎನ್ನುವುದು ಆರ್ದ್ರಗೊಳಿಸುವ ಸಂಗತಿ. ಅದುವೇ ಬರವಣಿಗೆಯನ್ನು ಏನೋ ಮಾಯದಂತೆ ಅಂಟುವ ಹಾಗೆ ಮಾಡುತ್ತದೆ ಎಂದು ಕಾಣುತ್ತದೆ. ನಮ್ಮ ನಡುವಿನ ವಿಪರ್ಯಾಸಗಳನ್ನೇ ಗುನುಗುನಿಸುತ್ತ ಕೂಡುವುದಲ್ಲ ಎಂದುಕೊಳ್ಳುತ್ತೇನೆ.

ಚಿಣ್ಣರಿಗಾಗಿ ಬರೆಯುವವರು ಮಕ್ಕಳ ಮನಸ್ಸನ್ನು ಹೊಂದಿರಬೇಕು ಎನ್ನುತ್ತಾರೆ. ಈ ಮಗು ಮನಸ್ಸು ಉಳಿಸಿಕೊಳ್ಳಲು ಅಥವಾ ಆವಾಹಿಸಿಕೊಳ್ಳಲು ಏನು ಮಾಡುವಿರಿ?
ಹೌದು ಹಾಗೆಲ್ಲ ಅಂದುಕೊಳ್ಳುವುದು ಸಾಮಾನ್ಯವಾದುದು. ಆದರೆ ಇದೆಲ್ಲ ಸಹಜವಾಗಿ ಸಂಭವಿಸಬೇಕಾದುದು ಎಂದುಕೊಳ್ಳುತ್ತೇನೆ ನಾನು. ಬಾಲ್ಯ, ಮಕ್ಕಳ ಮುಗ್ಧ ಲೋಕ, ಕೆಲವರನ್ನೆಲ್ಲ ಅದ್ಯಾಕೊ ಆಯ್ದುಕೊಳ್ಳುತ್ತದೆ ಎನಿಸುತ್ತದೆ, ಅಂಥವರೇ ಬರವಣಿಗೆಗೆ ತೊಡಗಿಕೊಳ್ಳುತ್ತಾರೆ. ರಷಿಯಾದ ಲೇಖಕ ನಿಕೊಲಾಯ್ ನಾಸಾವ್‌ನ ಕತೆಗಳನ್ನ ಓದಿದಾಗ ಈ ಬಿಡಲಾರದ ಹುಚ್ಚು ನನ್ನನ್ನು ಬಹುವಾಗಿ ತಟ್ಟಿತ್ತು. ಮಿಲ್ನೆ ಪೂಹಾ ಪುಟ್ಟ ಕರಡಿಯ ಕತೆ ಬರೆದುದು ನಿರಾಕರಿಸುತ್ತ ನಿರಾಕರಿಸುತ್ತ, ದಿನಗಳನ್ನ ಹಾಗೇ ಹಾಗೇ ದೂಡುತ್ತಲೇ. ಆದರೆ ಅದು ಅವನೊಳಗನ್ನ ಎಷ್ಟೆಲ್ಲ ತೆರೆದಿಟ್ಟಿತು ಎನ್ನುವುದೀಗ ಇತಿಹಾಸ.

ಹೀಗೆ ಬಿಡಲಾರದ ತುಡಿತವಾಗಿ ಹೊರಬಂದುದು ತನ್ನ ತಾನೇ ಅಸ್ತಿತ್ವ ಪಡೆಯುತ್ತದೆ, ಅದಕ್ಕಾಗಿಯೇ ಮಕ್ಕಳ ಸಾಹಿತ್ಯದಲ್ಲಿ ಇಂದು ಅನನ್ಯವಾದ ಕೆಲವರೆಲ್ಲ ಲೇಖಕರು ಕಾಣಿಸಿಕೊಂಡಿರುವುದು. ಈ ಅನನ್ಯತೆ, ಬಿಡಲಾರದ ತುಡಿತ ಮಕ್ಕಳ ಸಾಹಿತ್ಯಕ್ಕೆ ಅಸ್ಮಿತೆಯನ್ನ ತಂದುಕೊಡುವಂಥದು. ಕೃತ್ರಿಮವಾಗಿ ಮಾಡುವ ಪ್ರಯತ್ನಗಳಲ್ಲ ಎನ್ನುವುದು ನನ್ನ ಅನಿಸಿಕೆ.

ನಿಮ್ಮ ಬಾಲ್ಯ ಹೇಗಿತ್ತು? ಕಥೆ ಹೇಳುತ್ತಿದ್ದವರು ಯಾರು?
ನನ್ನ ಬಾಲ್ಯ ಸಮೃದ್ಧವಾಗಿತ್ತು ಎಂದೇ ಹೇಳುತ್ತೇನೆ. ಯಾಕೆಂದರೆ ಏನೆಲ್ಲ ಕಲ್ಪನಾ ಲೋಕದಲ್ಲಿ ವಿಹರಿಸುವುದಕ್ಕೆ ಯಾವ ಅಡಚಣೆ ನನಗಾಗಲಿಲ್ಲ. ಕೆಳ ಮಧ್ಯಮವರ್ಗದ ಮನೆಯ ಪರಿಸರವಾದರೂ ಸಾಧ್ಯವಾದ ಎಲ್ಲ ಅನುಕೂಲಗಳನ್ನ ಕಟ್ಟಿಕೊಟ್ಟುದು ಅದಾಗಿತ್ತು. ಅದರಲ್ಲೂ ನನ್ನ ಅಜ್ಜಿಯೊಡನೆಯ ದೀರ್ಘದ ಸಮಯ ಬಾಲ್ಯದ ಸ್ವಚ್ಛಂದತೆಯಲ್ಲಿ ಕಳೆದುದು. ನಾನು ಎಷ್ಟೇ ಎಲ್ಲರೊಳಗೆ ಒಂದಾಗಿ ಹೋಗುವವನಾಗಿದ್ದರೂ, ಅಂತರ್ಮುಖಿಯಾಗಿ ಸಮಯ ಕಳೆಯುತ್ತಿದ್ದುದೇ ಹೆಚ್ಚು. ಸುತ್ತಲಿನದನ್ನೆಲ್ಲ ನನ್ನೊಳಗಿಂದ ಅವಲೋಕಿಸುವುದು, ಒಳಗೇ ಏನೇನೆಲ್ಲ ಲೆಕ್ಕ ಹಾಕಿಕೊಳ್ಳುವುದು ನಡೆದೇ ಇರುತ್ತಿತ್ತು. ಹಾಗಾಗಿಯೇ ನನ್ನ ಮಕ್ಕಳ ಸಾಹಿತ್ಯವೆಂದರೆ ಈ ಬಗೆಯ ಒಳಗಿನ ಅರಿಯದ ಸಂವೇದನೆಗಳ ಲೋಕವೇ ಆಗಿದೆ ಅನಿಸಿದೆ.

ಮಕ್ಕಳ ಸಾಹಿತ್ಯವನ್ನು ಹೇಗೆ ಅರ್ಥೈಸುವಿರಿ?
ಮಕ್ಕಳ ಸಾಹಿತ್ಯ ಎನ್ನುವುದು ಅದೇನೋ ಕಾಳಜಿ ವಹಿಸಿ, ಅಗತ್ಯ ಅಂತೆಲ್ಲ ಬರೆಯುವುದಾಗಬಾರದು ಎಂದುಕೊಳ್ಳುವವನು ನಾನು. ಅದೂ ಸಹಜವಾಗಿ ಸಂಭವಿಸಬೇಕಾದುದು. ಹಾಗಿದ್ದಾಗಲೇ ಅದಕ್ಕೆ ತನ್ನದೇ ಆದ ಲವಲವಿಕೆ, ಗಟ್ಟಿತನ, ಅಸ್ತಿತ್ವ. ಹಾಗಾಗಿ ಮಕ್ಕಳಿಗಾಗಿ ಬರೆಯುತ್ತೇನೆ ಅಂತ ಆಚೆ ನಿಂತು ಏನೇನೆಲ್ಲ ಬರೆಯಬೇಕು, ಹೇಗೆ ಹೇಗೆಲ್ಲ ಇದ್ದರೆ ಚೆನ್ನ ಅಂತೆಲ್ಲ ಲೆಕ್ಕ ಹಾಕಿ ಬರೆಯುವುದಾಗಬಾರದು ಎಂದೇ ಅಂದುಕೊಳ್ಳುತ್ತೇನೆ. ಅದು ಸಹಜವಾಗಿಯೇ ಹರಿಯುವುದಾದರೆ ತನ್ನ ಹರಿವನ್ನ ತಾನೇ ಕಂಡುಕೊಳ್ಳುತ್ತದೆ. ಪುಟಾಣಿಗಳಿಗೆ ಬರೆಯುವುದೇ ಆಗಲಿ, ತುಸು ಬೆಳೆದ ಮಕ್ಕಳಿಗೆ ಅಂತನ್ನುವುದಾಗಲಿ ಅದೆಲ್ಲ ಕೃತ್ರಿಮವಾಗಿ ಸೃಷ್ಟಿಸಿಕೊಂಡು ಬರೆಯುವುದಲ್ಲ, ಸಹಜದ ತುಡಿತವಾಗಿ ಹರಿಯುವ ಸಾಹಿತ್ಯ ತನ್ನ ಓದುಗನನ್ನ ತಾನೇ ಗುರುತಿಸಿಕೊಳ್ಳುತ್ತದೆ.

ಹಾಗಾಗಿ ಮಕ್ಕಳಿಗಾಗಿ ಬರೆಯುವವ ತನ್ನನ್ನೂ ಮೀರುವ ತನ್ನೊಳಗಿಗೆ ಮಾತಾಗುತ್ತ ಹೋಗುತ್ತಾನೆ. ರಸ್ಕಿನ್ ಬಾಂಡ್‌ರ ಬರವಣಿಗೆಯಲ್ಲಿ ಮಕ್ಕಳೂ ಭಾಗವಹಿಸುತ್ತಿರುತ್ತಾರೆ, ಮರಗಳೂ ಕಾಲುಚಾಚುತ್ತಿರುತ್ತವೆ, ಹಸಿರಿನಲ್ಲಿ ಸಳ್ಳನೆ ಹರಿದು ಹೋಗುವ ಹಸಿರು ಹಾವೂ ಕಾಣಸಿಕೊಳ್ಳುತ್ತದೆ, ಒಂದಾವುದೋ ತೊಗಲು ಬಾವಲಿ ಅವರ ಮಲಗುವ ಕಾಟಿಗೆ ಸೋಮಾರಿಯಾಗಿ ಜೋತುಬೀಳುತ್ತದೆ, ಕಗ್ಗತ್ತಲೆಯ ಟನೆಲ್‌ನಲ್ಲಿ ಚಿರತೆಯ ಮಿರುಗುವ ಕಣ್ಣುಗಳು ಹೊಳೆಯುತ್ತವೆ, ಯಾವುಯಾವುದೋ ಸೇರಿಕೊಳ್ಳುತ್ತ ಕಥೆಯಾಗುತ್ತದೆ, ಹಾಡಾಗುತ್ತದೆ, ನೆನಪಾಗುತ್ತದೆ, ಒಂದಾವುದೋ ಚಿತ್ರಣವಾಗುತ್ತದೆ, ಅದು ಹೀಗೇ ಅಂತಲ್ಲವೇ ಅಲ್ಲ. ಅದು ಸಹಜದ, ಸ್ವಚ್ಛಂದದ ಹರಿವು, ತಾನೇತಾನಾಗಿ ಹರಿದುದು.

ಪ್ರಸ್ತುತ ಕನ್ನಡದಲ್ಲಿ ಹೇರಳವಾಗಿ ಮಕ್ಕಳ ಸಾಹಿತ್ಯ ರಚನೆಯಾಗುತ್ತಿದೆ. ಆದರೆ, ಅದರ ಗುಣಮಟ್ಟ ನಿರಾಶೆ ಹುಟ್ಟಿಸುವಂತಿದೆ. ನೀತಿಬೋಧನೆ ಹೊರತಾದ ಸಾಹಿತ್ಯ ಕಡಿಮೆ. ಚಿಣ್ಣರ ಮನರಂಜನೆ, ಮನೋವಿಕಾಸಕ್ಕೆ ಪ್ರೇರಣೆ ಒದಗಿಸುವ ಸಾಹಿತ್ಯ ಕಡಿಮೆ. ಇದಕ್ಕೆ ಕಾರಣಗಳೇನು?
ಹೌದು, ಮಕ್ಕಳ ಸಾಹಿತ್ಯ ಅಂದುಕೊಂಡು ದಂಡಿಯಾದ ಬರವಣಿಗೆ ಬರುತ್ತಿದೆ, ಅದೆಲ್ಲ ಮಕ್ಕಳ ಸಾಹಿತ್ಯವಲ್ಲ! ಅದೆಲ್ಲ ಶಿಕ್ಷಕರಾಗಿಯೋ, ಪಾಲಕರಾಗಿಯೋ, ಡಾಕ್ಟರಾಗಿಯೋ ಮಕ್ಕಳ ಕಾಳಜಿ ವಹಿಸುತ್ತ ಬರೆಯುತ್ತಿರುವುದು. ಬಹಳಷ್ಟು ಸಲ ಸಾಹಿತಿಯಾಗಿ ಕಾಣಿಸಿಕೊಳ್ಳುವ ತುಡಿತದ್ದು, ಹಿಂದಿಯಲ್ಲಿ ಹರಿಕೃಷ್ಣ ದೇವಸರೆ ಅವರು ಇದನ್ನ ಕಟುವಾಗಿ ‘ಬಚಕಾನಾ ಸಾಹಿತ್ಯ’ ಎನ್ನುತ್ತಿದ್ದರು. ಉಪದೇಶ ಹೇಳುವುದಕ್ಕಾಗಿಯೇ ಬರೆಯುವುದು, ಜನಪದ ಕತೆಗಳನ್ನ ಮತ್ತೊಮ್ಮೆ ಬರವಣಿಗೆಗಿಳಿಸಿಬಿಡುವುದು, ಪಂಚತಂತ್ರದ ಕತೆಗಳನ್ನೇ ಮತ್ತೆ ಮತ್ತೆ ಬರೆಯುವುದು ಇದೆಲ್ಲ ನಡೆಯುತ್ತಲೇ ಇದೆ.

ಸುಲಭವಾದ ಮಾರುಕಟ್ಟೆ ಇದರಿಂದ ಸಾಧ್ಯವಾಗಿರಲೂಬಹುದು. ಕಾಲ ಸಾಕಷ್ಟು ಸಂದುಹೋಗಿದೆ, ನಮ್ಮ ಕಾಲದ ಮೌಲ್ಯಗಳು ಹೊಸಹೊಸತಾಗಿ ಕಾಣಸಿಕೊಳ್ಳುತ್ತಿವೆ. ನಮ್ಮ ಮಕ್ಕಳು ಏನೆಲ್ಲ ಹೊಸ ಹೊಸ ಗೊಂದಲಗಳಿಗೆ ಒಳಗಾಗುತ್ತಿದ್ದಾರೆ, ಅವರ ಈ ವಾಸ್ತವದ ನಡುವೆಯೇ ನಮ್ಮ ಏನೆಲ್ಲ ಬರವಣಿಗೆ ಸಾಧ್ಯವಾಗಬೇಕು. ಫ್ಯಾಂಟಸಿ ಅರಳಬೇಕಾದರೂ ಅದು ವಾಸ್ತವದ ಮಗ್ಗುಲಲ್ಲೇ. ಸುಮ್ಮನೆ ಅದ್ಯಾವುದೊ ಕತೆ ಅಂತ ಹಳೆಯ ಸರಕನ್ನ ತಂದಿಡುವುದಲ್ಲ ಅನಿಸುತ್ತದೆ.

ಸುತ್ತಲಿನ, ಅದರಲ್ಲೂ ಸಾಕಷ್ಟು ಕೆಲಸವಾಗಿರುವ, ಹೊಸ ಸಾಧ್ಯತೆಗಳನ್ನ ಕಂಡುಕೊಂಡಿರುವ ಇಂಗ್ಲಿಷಿನ ಓದು ನಮ್ಮ ಮಕ್ಕಳ ಸಾಹಿತ್ಯಾಸಕ್ತ ಬಳಗದಲ್ಲಿ ಅಷ್ಟಾಗಿ ಕಾಣುತ್ತಿಲ್ಲ, ಇದೊಂದು ದೊಡ್ಡ ಕೊರತೆ ಅನಿಸುತ್ತದೆ ನನಗೆ. ಇದು ಕೇವಲ ಕನ್ನಡದ್ದೊಂದೇ ಸಮಸ್ಯೆ ಅಲ್ಲ. ಹೆಚ್ಚು ಹೆಚ್ಚು ಓದು, ಅಧ್ಯಯನದ ಮನಸ್ಸುಗಳು, ಚರ್ಚೆಗಳು ನಮ್ಮ ನಡುವೆ ಕಾಣಿಸಿಕೊಳ್ಳಬೇಕಿದೆ.

ಮಕ್ಕಳ ಸಾಹಿತ್ಯ ರಚನೆಗೆ ತಕ್ಕ ನೆಲೆಬೆಲೆಗಳಿಲ್ಲ ಎನ್ನುವ ಅಳಲು ಕೆಲವರಲ್ಲಿದೆ. ನಿಮಗೆ ಏನನ್ನಿಸುತ್ತದೆ?
ನಾನೂ ಹಾಗೆ ಅಂದುಕೊಳ್ಳುವವನೆ, ಹಾಗಿದ್ದಾಗಲೂ ವಿವಶನಾಗಿ ಇದು ಹೀಗೇ ಅಂತ ನನ್ನಷ್ಟಕ್ಕೆ ನಾನೇ ಗೊಣಗಿಕೊಳ್ಳುವವನೂ ಕೂಡ. ಮಕ್ಕಳ ಸಾಹಿತ್ಯದ ಸ್ವರ್ಗ ಅನ್ನಿಸಿಕೊಳ್ಳುತ್ತಿರುವ ಅಮೇರಿಕಾದಲ್ಲೂ ಮಕ್ಕಳ ಸಾಹಿತ್ಯವನ್ನ ಮುಂಚೂಣಿಗೆ ತಂದಿರುವ ಪ್ರಯತ್ನಗಳೆಲ್ಲ ಖಾಸಗಿಯಾದ, ಆಸಕ್ತ ಬಳಗಗಳೇ ಹೊರತು ಮುಖ್ಯಧಾರೆಯಲ್ಲಿ ಸಾಧ್ಯವಾದುದಲ್ಲ. ರಾಬರ್ಟ್‌ ಫ್ರಾಸ್ಟ್ ಅಂಥ ಕವಿ ಸರಕಾರದ ಮಾನ್ಯತೆಗಳೊಡನೆ ಮಕ್ಕಳ ಲೋಕದಲ್ಲಿ ಗುರುತಿಸಿಕೊಂಡಾಗಿಯೂ ಇದು ಹೀಗೇ ನಡೆದುಬಂದಿದೆ ಎನ್ನುವುದು ಸುಳ್ಳಲ್ಲ, ಹಾಗಿದ್ದಾಗಲೂ ಲೇಖಕರ ಗಟ್ಟಿತನದಿಂದ, ಕೃತಿಗಳ ಸೊಗಸಿನಿಂದ ಅಲ್ಲಿ ಗುರುತಿಸುವಿಕೆ ಅನಿವಾರ್ಯವಾಗತೊಡಗಿದೆ. ನಮ್ಮಲ್ಲಿ ಇನ್ನೂ ವಾತಾವರಣ ಬಿಡುಬೀಸಾಗಿ ತೆರೆದುಕೊಳ್ಳಬೇಕು. ಮಕ್ಕಳಿಗಾಗಿ ಬರೆಯುವವನೂ ಒಬ್ಬ ಗಮನಿಸಬೇಕಾದ ಲೇಖಕ ಎಂದಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.