ಭಾರತೀಯ ಚಿಂತನ ವಿಧಾನವೊಂದು ಇದೆಯೆ? (Is There an Indian Way of Thinking?) ಎಂಬ ಪ್ರಶ್ನೆಯನ್ನು ಎ. ಕೆ. ರಾಮಾನುಜನ್ ಎತ್ತಿದ್ದರು. ಈ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಂಡು ‘ಭಾರತೀಯತೆ ಎಂದರೇನು?’ ಎಂದು ನೂರು ವರ್ಷಗಳಿಗೂ ಮೊದಲೇ ವಿವರಿಸಿದ್ದರು ಆನಂದ ಕುಮಾರಸ್ವಾಮಿ. ನಮ್ಮ ಕಾಲದಲ್ಲಿ ಹೀಗೆ ಭಾರತೀಯ ಸಂವೇದನೆಯ ಹುಡುಕಾಟವನ್ನು ನಡೆಸಿದವರು, ಇತ್ತೀಚೆಗಷ್ಟೆ (ಜ.22) ನಮ್ಮನ್ನು ಅಗಲಿದ ವಿದ್ವಾಂಸ ಪಾದೆಕಲ್ಲು ನರಸಿಂಹ ಭಟ್ಟ (1935–2018).
ಪ್ರಾಚೀನ ಭಾರತದ ಎಲ್ಲ ಗ್ರಂಥಗಳನ್ನೂ ಇಂದು ಭಾರತೀಯತೆಯ ಪ್ರಾತಿನಿಧಿಕ ಕೃತಿಗಳನ್ನಾಗಿ ಸ್ವೀಕರಿಸಲಾಗುತ್ತಿದೆ. ಇದು ಭಾರತೀಯತೆಯನ್ನು ಆರಾಧಿಸುವವರಿಗೂ ಟೀಕಿಸುವವರಿಗೂ ಸಮಾನವಾಗಿದೆ. ಈ ಕೃತಿಗಳ ಅನುಸಂಧಾನ ನಡೆಸಿ ‘ಭಾರತೀಯತೆ’ಯನ್ನು ಲಕ್ಷಣೀಕರಿಸಲು ಸಾಧ್ಯವೆ? ಈ ಪ್ರಶ್ನೆ ತುಂಬ ಪ್ರಮುಖವಾದುದು. ಹೀಗೆ ಪ್ರಾಚೀನ ವಾಙ್ಮಯವನ್ನು ಆಳವಾಗಿ ಅಧ್ಯಯನ ಮಾಡಿ ಭಾರತೀಯತೆಯನ್ನು ಕಂಡರಿಸಿದವರು ನರಸಿಂಹ ಭಟ್ಟ. ಆದರೆ ಇಂದು ಪಾಂಡಿತ್ಯ ಪರಂಪರೆಯೇ ತುಂಬ ತೆಳುವಾಗುತ್ತಿದೆ; ಭಾರತದ ಬಹುಪಾಲು ವಿಶ್ವವಿದ್ಯಾಲಯಗಳಲ್ಲಿ ತತ್ತ್ವಶಾಸ್ತ್ರದ ಕಲಿಕೆಯೇ ಮಾಯವಾಗಿದೆ. ಭಾರತೀಯತೆಯ ಪರಿಕಲ್ಪನೆಗಳ ರೂಪರೇಷೆಗಳನ್ನು ಮರಳಿ ಪಡೆದುಕೊಳ್ಳುವ ದಾರಿಯಾದರೂ ಏನು? ಇಂಥ ಸಂದರ್ಭದಲ್ಲಿ ನಮಗೆ ನರಸಿಂಹ ಭಟ್ಟರ ಹೊಳಹುಗಳು ಕೈ ಹಿಡಿದು ನಡೆಸಬಲ್ಲವು. ‘ಭಾರತೀಯ ಋಷಿ ಪರಂಪರೆ ಮತ್ತು ಸಂಸ್ಕೃತ ಸಾಹಿತ್ಯ’, ‘ಅಭಿನವ ಗುಪ್ತ’, ‘ಶಿಕ್ಷಣ ಶೋಧನ’, ‘ಕಾವ್ಯಮೀಮಾಂಸೆ ಹೊಸ ಹೊಳಹುಗಳು’ – ಈ ಒಂದೊಂದು ಕೃತಿಯೂ ಆಳವಾದ ವಿಶ್ಲೇಷಣೆಗಳಿಂದ ಭಾರತೀಯತೆಯನ್ನು ನಿರೂಪಿಸುತ್ತವೆ. ಸುಮಾರು ಮೂರು ದಶಕಗಳ ಹಿಂದೆ (1981) ಪ್ರಕಟವಾಗಿದ್ದ ಅವರ ‘ಭಾರತೀಯ ಸಂವೇದನೆ’ ಅವರ ಈ ಎಲ್ಲ ಕೃತಿಗಳಿಗೂ ಬೀಜರೂಪವಾಗಿದೆ. ಇತ್ತೀಚೆಗೆ (2012) ಈ ಮೂಲ ಲೇಖನವನ್ನು ವಿದ್ವಾಂಸರ ಪ್ರತಿಕ್ರಿಯೆಗಳು ಮತ್ತು ಲೇಖಕರ ಉತ್ತರಗಳೊಂದಿಗೆ ಪಾದೆಕಲ್ಲು ವಿಷ್ಣು ಭಟ್ಟ ಸಂಪಾದಿಸಿದ್ದಾರೆ. ಈ ಕೃತಿಯೂ ಭಾರತೀಯತೆಯ ಅನ್ವೇಷಣೆಯಲ್ಲಿ ನಮಗೆ ಬೆಳಕಾಗುವಂಥದ್ದು.
ಭಾರತೀಯತೆಯನ್ನು ಋಷಿಪರಂಪರೆಯೊಂದಿಗೆ ಸಮೀಕರಿಸಿರುವ ನರಸಿಂಹ ಭಟ್ಟರ ದಾರಿ ಹೊಸದೇನೂ ಅಲ್ಲ, ದಿಟ. ಆದರೆ ಅದನ್ನೇ ಕೇಂದ್ರ ವಿಷಯವನ್ನಾಗಿಸಿಕೊಂಡು ಕೆಲಸ ಮಾಡಿದವರು ಕಡಿಮೆ ಎನ್ನಬಹುದು. ಈಗ ನಮಗೆ, ಎಂದರೆ ಆಧುನಿಕರಿಗೆ, ‘ಋಷಿ ಪರಂಪರೆ’ ಎಂದ ಕೂಡಲೇ ಒಂದು ವಿಧದ ಪರಕೀಯ ಸಂವೇದನೆ ಆವರಿಸಿಕೊಳ್ಳುವುದು ಸಹಜ. ಆದರೆ ‘ಋಷಿ ಪರಂಪರೆ’ ಎಂದರೇನು – ಎನ್ನುವುದನ್ನು ನರಸಿಂಹ ಭಟ್ಟರು ಹೇಗೆ ಕಂಡಿದ್ದಾರೆ ಎನ್ನುವುದನ್ನು ಮೆಲುಕು ಹಾಕಿದರೆ ಆಗ ನಮಗೆ ಅದು ಹತ್ತಿರವಾಗುವುದರಲ್ಲಿ ಅನುಮಾನವಿಲ್ಲ:
ಪಾದೆಕಲ್ಲು ನರಸಿಂಹ ಭಟ್ಟ
‘ಋಷಿ ಪರಂಪರೆ ಎಂದಾಗ ಎಂದೋ ಗತಿಸಿದವರನ್ನು ಆದರ್ಶವಾಗಿಟ್ಟುಕೊಳ್ಳುವ ಪರಿಕಲ್ಪನೆ ಎಂದು ಭಾವಿಸುವವರು ಪ್ರಸ್ತುತ ಪ್ರಬಂಧಕ್ಕೆ ಸಂವಾದಿಗಳಾಗಲಾರರು. ಬದಲಾಗಿ ‘ಋಷಿ’’ ಎಂದರೆ ದ್ರಷ್ಟ (= ನೋಡಿದವನು); ‘ಯಾವುದನ್ನು ನೋಡಿದವನು?’ ಎಂದರೆ ಜೀವನ ಸಮಗ್ರತೆಯನ್ನು ನೋಡಿದವನು’; ಅಂತಹವನು ಎಲ್ಲಾ ಕಾಲಗಳಲ್ಲಿ ಕಾಣಿಸಿಕೊಳ್ಳಬಲ್ಲವನು; ಎಂದರೆ ಅವನು ವ್ಯಕ್ತಿ ಎಂಬುದಕ್ಕೆ ಬದಲಾಗಿ ‘ತತ್ತ್ವಸ್ವರೂಪನು’; ‘ಎಲ್ಲಿ ಗೋಚರಿಸುವವನು?’ ಎಂದರೆ ತತ್ತ್ವಸ್ವರೂಪವನ್ನು ಕಲ್ಪಿಸಬಲ್ಲವರೆಲ್ಲರ ಮನಸ್ಸಿನಲ್ಲೂ ಗೋಚರಿಸುವವನು; ತತ್ತ್ವಸ್ವರೂಪಕ್ಕೆ ಕಾಲದೇಶಗಳ ಮಿತಿ ಇಲ್ಲ – ಎಂಬ ವಿಶಾಲದೃಷ್ಟಿಯನ್ನು ಅಳವಡಿಸಿಕೊಳ್ಳಬೇಕು. ಆ ದೃಷ್ಟಿಯಿಂದ ನೋಡಿದಾಗ, ಋಷಿಗಳು ಅಥವಾ ವೇದದ್ರಷ್ಟಗಳೆಂದು ಉಲ್ಲೇಖಿಸಲ್ಪಟ್ಟವರು ಕೇವಲ ಗತಿಕಾಲಿಕರಲ್ಲ; ಬದಲಾಗಿ, ಇಂದಿಗೂ ಗೋಚರವಾಗತಕ್ಕವರೇ; ಇನ್ನೂ ಮುಂದೆಯೂ ಗೋಚಾರವಾಗತಕ್ಕವರೇ, ಜೀವನ ಸಮಗ್ರತೆಯ ಆಯಾಮಗಳನ್ನಷ್ಟೇ ತೋರಿಕೊಡುವುದು ಅವರ ಉದ್ದೇಶವಾಗಿರುವುದರಿಂದ ಅವರಿಗೆ ಯಾವುದೂ ವಿರೋಧವಲ್ಲ, ಎಂತಹ ವಿರೋಧವನ್ನೂ ಅವರು ಆಪಾತಮಾತ್ರವೆಂಬ ನೆಲೆಯಲ್ಲಿ ಸ್ವೀಕರಿಸಿ ತಮ್ಮದಾಗಿಸಬಲ್ಲವರು. ಅವರು ಪ್ರತಿಯೊಬ್ಬನಿಗೂ ಹೃದ್ಗೋಚರರಾಗಿದ್ದು ಅಂತಮುರ್ಖೀಯ ಅವಧಾನವನ್ನಷ್ಟೇ ನಿರೀಕ್ಷಿಸುವವರು. ‘ಒಬ್ಬ ಋಷಿ ಹೇಳಿದುದನ್ನು ಇನ್ನೊಬ್ಬನು ವಿರೋಧಿಸುತ್ತಾನೆ’ ಎಂದು ಭಾವಿಸುವುದು ಕಥಾಸಂದರ್ಭಗಳಲ್ಲಿಯ ಸನ್ನಿವೇಶಗಳನ್ನು ಕೇವಲ ವಾಚ್ಯಾರ್ಥವಾಗಿ ಸ್ವೀಕರಿಸಿ ಅವುಗಳಿಂದಾಚೆಗಿನ ತಾತ್ತ್ವಿಕ ವ್ಯಂಗ್ಯಗಳನ್ನು ಗ್ರಹಿಸಲಾರದುದರ ಪರಿಣಾಮ ಮಾತ್ರ.’
ಅತಿರೇಕಗಳಲ್ಲೂ ಆಗ್ರಹಗಳಲ್ಲೂ ಅಹಂಕಾರಗಳಿಂದಲೂ ಸಂಸ್ಕೃತಿಯ ಮತ್ತು ಪರಂಪರೆಯ ವ್ಯಾಖ್ಯಾನಗಳು ನಡೆಯುತ್ತಿರುವುದರ ನಮ್ಮ ಕಾಲಕ್ಕೆ ನರಸಿಂಹ ಭಟ್ಟರಂಥವರ ವಿವೇಕದ ಸಂವೇದನೆ ಬೇಕಿದೆ. ಜೀವನದ ಸಮಗ್ರ ಏಳಿಗೆಗಾಗಿ ಪೂರಕವಾಗಿರುವುದೇ ಭಾರತೀಯತೆಯ ಮೂಲ ಆಶಯ ಎನ್ನುವ ಅವರ ನಿಲುವು ನಾವಿಂದು ಮರೆಯಬಾರದ ಸೂತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.