ADVERTISEMENT

ಗಾಂಧೀ ತಾತಾ ಇನ್ನೂ ಬಾರದೆ ಎಲ್ಲಿರುವೆ?

ವೈದೇಹಿ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಚಿತ್ರ:  ಶಿಲ್ಪಾ ಕಬ್ಬಿಣಕಂತಿ
ಚಿತ್ರ: ಶಿಲ್ಪಾ ಕಬ್ಬಿಣಕಂತಿ   

ತಾತಾ ತಾತಾ ಆಗಸದಲ್ಲೇ
ಏಕೆ ನೀನು ನಿಂತೆ?
ಬರುತೇನೆಂದು ಹೋದೆಯಂತೆ!
ಬರಲಿಲ್ಲಲ್ಲಾ ಮತ್ತೆ?
ಇಂದಾದರೂ ಬಾ ಬಂದರೆ ನಿನಗೆ
ಕೊಡುವೆನು ಹೊಸ ಗಂಟೆ
ಕುಳಿತಿಹೆ ಚುಪು ಚುಪ್ ನಿನ್ನನೆ ಕಾಯುತ
ಮಾಡದೆ ಏನೂ ತಂಟೆ

ಬರೋಣವೆನಿಸಿದೆ, ಬರೋದು ಹೇಗೆ
ಗೊತ್ತೇ, ಆಗಸ ದೂರ
ಬಸ್ಸೂ ರೈಲೂ ಕಾರುಗಳಿಲ್ಲ
ವಿಮಾನ ತಲುಪೋದಿಲ್ಲ
ಬರುತೇನೆಂದರೆ ಬರುವುದು ಹೇಗೆ
ಹೇಳೇ ಪುಟ್ಟಿ ಪುಟಾಣೀ
ನನಗೂ ತರಲಿದೆ ನಿನಗಾಗೆಂದೇ
ಇಲ್ಲೀ ಬೆಳೆವ ಬಟಾಣೀ
ತಾತಾ ತಾತಾ ಒಂದು ಉಪಾಯ
ಮುಗಿಲ ಬಾಗಿಲಾ ತೆರೆದು
ಕರೆ ನನ್ನನ್ನು ಬಂದೇ ಎನ್ನು
ಬರುವೆನು ನಾನೂ ಹೊರಗೆ

ಆಗಸದಿಂದ ನಮ್ಮಂಗಳಕೆ
ಕೋಲನ್ನೂರಿ ನಿಲ್ಲು
ನಾನದನೇರಿ ಹ್ಹೆ ಹ್ಹೆ ಹ್ಹೇ
ಅಜ್ಜನ ಕೋಲಿದು ನನ್ನಯ ಕುದುರೇ
ಹಾಡುತ ಬರುವೆನು ಬಳಿಗೆ

ADVERTISEMENT

ನೀ ಬಟಾಣಿಯ ಕೊಡು
ನಾ ಗಡಿಯಾರವನು
ಬಾನ ದಾರಿಯಲಿ ಗುಡುಗುಡು ಗುಮ್ಮಟ
ಹೇಳುತ ಸಾವಿರ ಕತೆಗಳನು
ಇಬ್ಬರೂ ಗಜ್ಜುಗ ಆಡೋಣ
ಆರಿಸಿ ತಾರೆಗಳನ್ನು
ಚಂದಿರ ಬೆಂಚಲಿ ಬಟಾಣಿ ತಿನ್ನುತ
ಟಿಕ್ ಟಿಕ್ ಗೆಳೆಯಾ ಹಾಡೋಣ
ಅಮ್ಮನು ಕರೆದರೆ ಓ ಓ ಎನ್ನದೆ
ಮೋಡದ ಮನೆಯಲಿ ಅಡಗೋಣ

ಆಹಾ! ಭೂ ನಕ್ಷತ್ರವು ನೀನು
ಇಲ್ಲಿಗೆ ಬಂದೆಯಾದಲ್ಲಿ
ಬರಿದಾಗುವುದು ಲೋಕದ ಮಡಿಲು,
ಒಣಗುವುದಲ್ಲಿನ ಕಡಲೂ
ಬಂದಾಯಿತು ನಾ, ಇದ್ದಾಯಿತು ಅಲ್ಲಿ
ಮುಗಿಸಿದೆ ಜನುಮದ ಆಟ
ಮುಗಿಸಿದ ಮೇಲೆ ಮುಗಿಯಿತು ತಾನೆ
ಜನನದಾಟದ ವೃತ್ತ?
ಆಡುವೆನೆಂದರೆ ನಿಯಮವೂ ಇಲ್ಲ
ಕರಕೊಂಬವರೂ ಇಲ್ಲ
ಹಂಬಲವಿರಲಿ, ಹಂಬಲವಾಗಿಯೆ
ನಿಜವಾದರೆ ಅದು ವ್ಯರ್ಥ

ಎಲ್ಲೆಲ್ಲಿರುವೆವೊ ಅಲ್ಲಲ್ಲಿಂದಲೇ
ಆಡುತಲಿರೋಣ ಮಗುವೇ
ನೀನಲ್ಲೆ ಇರು ಪುಟಾಣಿ ಪುಟ್ಟಾ,
ನಾನಿಲ್ಲೇ ಇರುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.