ಭಯ ಪಡುತ್ತಿರುವವರಿಗೆ ‘ಧೈರ್ಯವಾಗಿರು’ ಎನ್ನುವ ಮಾತನ್ನೂ ಹೇಳುತ್ತೇವೆ. ಆದರೆ ಧೈರ್ಯ ಹಾಗೆ ಸುಮ್ಮನೆ ಬಂದುಬಿಡುವುದಿಲ್ಲ.
ನಮಗೆ ಯಾವುದರ ಭಯವೂ ಇಲ್ಲದೆ ಇದ್ದಿದ್ದರೆ ಜೀವನ ಹೇಗಿರುತ್ತಿತ್ತು? ಸ್ವಚ್ಛಂದವಾಗಿ, ನೆಮ್ಮದಿಯಾಗಿ, ಸದಾ ಖುಷಿಯಾಗಿ ಇರುತ್ತಿದ್ದೆವೇನೋ ಎಂದು ಮೇಲ್ನೋಟಕ್ಕೆ ಅನಿಸುತ್ತದೆಯಷ್ಟೇ. ಆಳವಾಗಿ ನೋಡಿದರೆ ಭಯವೇ ಇಲ್ಲದೆ ಬದುಕೇ ಅಸಾಧ್ಯ ಎಂದು ತಿಳಿಯದೇ ಇರದು. ಮೊದಲನೆಯದಾಗಿ ಭಯವಿಲ್ಲದೆ ಇದ್ದಿದ್ದರೆ ಬದುಕುಳಿಯುವುದೇ ಅನುಮಾನ. ಭಯ ಎಲ್ಲ ಪ್ರಾಣಿಗಳಿಗೂ ಜೀವಸಂರಕ್ಷಣೆಯ ಕಲೆಯನ್ನು ಕಲಿಸಿಕೊಡುತ್ತದೆ. ಶತ್ರುಗಳ ಭಯ, ರೋಗ ರುಜಿನದ ಭಯ, ಸಾವಿನ ಭಯ, ನೋವಿನ ಭಯಗಳೊಂದೂ ಇರದಿದ್ದರೆ ಅಂತಹ ವಿಪತ್ತುಗಳೊದಗಿದಾಗ ಯಾವ ಪೂರ್ವತಯಾರಿಯೂ ಇಲ್ಲದ ಕಾರಣ ಅವುಗಳಿಗೆ ಸುಲಭವಾಗಿ ತುತ್ತಾಗುವುದರ ಹೊರತು ಬೇರೆ ದಾರಿಯೇ ಇರುತ್ತಿರಲಿಲ್ಲ. ಭಯವಿಲ್ಲದೆ ಇದ್ದರೆ ಜೀವನಕ್ಕೆ ದಿಕ್ಕು, ದಾರಿ, ಗುರಿಯೂ ಇರುತ್ತಿರಲಿಲ್ಲ. ಒಮ್ಮೆ ಯೋಚಿಸಿ ನೋಡಿ, ನಮ್ಮೆಲ್ಲಾ ಬದುಕಿನ ನಿರ್ಧಾರಗಳ ಹಿಂದೆ ಭಯದ ಪಾತ್ರ ಇದ್ದೇ ಇರುತ್ತದೆ. ಭವಿಷ್ಯದ ಬಗ್ಗೆ ಭಯ, ನಾವು ಸಂಕಲ್ಪಿಸಿದ್ದು ನಡೆಯದೇ ಹೋಗಬಹುದೆನ್ನುವ ಭಯ ಎಲ್ಲವೂ ಒಂದು ಮಿತಿಯಲ್ಲಿರುವುದು ಆರೋಗ್ಯಕರವೇ ಹೌದು, ಹಾಗಿದ್ದಾಗ ಗುರಿಯೆಡೆಗೆ ನಮಗೆ ಎಚ್ಚರವಿರುತ್ತದೆ, ಏನು ಮಾಡಬೇಕು ಏನು ಮಾಡಬಾರದು ಎನ್ನುವ ವಿವೇಕವಿರುತ್ತದೆ.
ಭಯ ಜೀವಿಯ ಆದಿಮ ಭಾವನೆಗಳಲ್ಲೊಂದು, ಅದು ಜೀವನಪೂರ್ತಿ ಒಂದಲ್ಲಾ ಒಂದು ರೂಪದಲ್ಲಿ ನಮಗೆ ಎದುರಾಗುತ್ತಲೇ ಇರುತ್ತದೆ. ಭಯದ ಜೊತೆಗಿನ ನಮ್ಮ ಸಂಬಂಧ ಯಾವ ರೀತಿಯದ್ದು, ಭಯವನ್ನು ಅದಕ್ಕಿರುವ ರಚನಾತ್ಮಕ ಶಕ್ತಿಯನ್ನು ನಾವು ಹೇಗೆ ಬಳಸಿಕೊಳ್ಳಬಲ್ಲೆವು ಎನ್ನುವುದು ಮುಖ್ಯವಾಗಿ ಚರ್ಚಿಸಬೇಕಾದ ವಿಷಯ.
ಮೊದಲನೆಯದಾಗಿ ಭಯದ ಬಗ್ಗೆಯೇ ಭಯಪಡಬೇಕಾಗಿಲ್ಲ, ಭಯ ನಮ್ಮ ರಕ್ಷಣೆಗಾಗಿಯೇ ಇರುವಂತದ್ದು, ಭಯದ ಜೊತೆಗಿನ ನಮ್ಮ ಸಂಬಂಧ ಸ್ನೇಹ, ಕುತೂಹಲಗಳಿಂದ ಕೂಡಿದ್ದರೆ ಭಯವನ್ನೂ ನಮ್ಮ ಯಶಸ್ಸಿಗೆ, ಸೌಖ್ಯಕ್ಕೆ ಬಳಸಿಕೊಳ್ಳಬಹುದು. ಭಯಕ್ಕೂ ನಮ್ಮ ಆಳದ ಬಯಕೆಗಳಿಗೂ ನಿಕಟ ಸಂಬಂಧವಿದೆ. ನಮ್ಮನ್ನು ಅತ್ಯಂತ ಕಾಡುವ ಭಯ ಯಾವುದು; ಏನು ದೊರೆತರೆ, ಏನನ್ನು ಈಗಿರುವ ಜೀವನದಲ್ಲಿ ಬದಲಾಯಿಸಿಕೊಂಡರೆ ಅಂತಹ ಭಯದಿಂದ ಬಿಡುಗಡೆ ಸಾಧ್ಯ ಎನ್ನುವುದಕ್ಕೆ ಉತ್ತರ ಹುಡುಕಿಕೊಳ್ಳುವುದು ಭಯವನ್ನು ಅರಿತುಕೊಳ್ಳಲು ಸಹಾಯಕ.
ನಮ್ಮ ಮೂಲ ಭಯ ನಮ್ಮ ಅಸ್ತಿತ್ವಕ್ಕೆ ಸಂಬಂಧಪಟ್ಟಿದ್ದು. ಸಾವಿನ ಭಯವೇ ಎಲ್ಲ ಭಯದ ಮೂಲ, ಸಾವೆಂದರೆ ಭೌತಿಕವಾಗಿ ಇಲ್ಲವಾಗುವುದು ಎಂದಷ್ಟೇ ಅರ್ಥಮಾಡಿಕೊಳ್ಳದೆ, ಸಾವಿನಷ್ಟೇ ಸಂಕಟ ತರುವ, ಭಾವನಾತ್ಮಕವಾಗಿ ನಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸಿಬಿಡುವ ತಿರಸ್ಕಾರ, ಒಂಟಿತನ, ಅವಮಾನಗಳೂ ನಮ್ಮ ಮೂಲ ಭಯಗಳೇ ಹೌದು, ಇಂತಹ ಮೂಲ ಭಯಕ್ಕೂ ಮೂಲ ಬಯಕೆಗಳಿಗೂ ಸಂಬಂಧವಿದೆ.
ಭೌತಿಕವಾಗಿ ಜೀವಂತವಾಗಿರಬೇಕೆಂಬುದು ನಮ್ಮ ಮೊದಲ ಆದ್ಯತೆಯಾದರೂ, ಭಾವನಾತ್ಮಕವಾಗಿ ಜೀವಂತವಾಗಿರುವುದೇ ಎಲ್ಲಕ್ಕಿಂತಲೂ ಮಿಗಿಲಾದ ಬಯಕೆ; ಅಂದರೆ ‘ಪ್ರೀತಿ’ ನಮ್ಮ ಮೂಲ ಬಯಕೆ. ಪ್ರೀತಿಯನ್ನು ಕಳೆದುಕೊಳ್ಳುವ ಅಥವಾ ಪ್ರೀತಿಯನ್ನು ಪಡೆದುಕೊಳ್ಳದೇ ಇರಬಹುದಾದ ಸಾಧ್ಯತೆಯೇ ನಮ್ಮ ಮೂಲ ಭಯ. ‘ಪ್ರೀತಿ ಇಲ್ಲದಿರುವುದು’ ಎಂದರೆ ಅದು ದುಃಖವೇ ಹೌದು ಎನ್ನುವುದನ್ನು ಅತಿ ಚಿಕ್ಕ ವಯಸ್ಸಿನಲ್ಲೇ ಅನುಭವದಿಂದ ಕಂಡುಕೊಂಡಿರುತ್ತೇವೆ; ಹಾಗಾಗಿ ಭಯದ ತಿರುಳು ದುಃಖವೇ ಹೌದು. ಪ್ರೀತಿ ಇಲ್ಲದಿರುವ ಸಾಧ್ಯತೆ ತರಬಹುದಾದ ದುಃಖವನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ, ಆ ದುಃಖವನ್ನು ಹೇಗೆ ಭರಿಸುತ್ತೇವೆ, ಅಂತಹ ದುಃಖಕ್ಕೆ ಉಪಶಮನ ಹೇಗೆ ಕಂಡುಕೊಳ್ಳುತ್ತೇವೆ ಎನ್ನುವುದೇ ಭಯದ ಜೊತೆಗಿನ ನಮ್ಮ ಸಂಬಂಧವನ್ನು ನಿರ್ಧರಿಸುತ್ತದೆ.
ಭಯದಿಂದ, ದುಃಖದಿಂದ ಮುಕ್ತಿ ಹೊಂದಬೇಕೆನ್ನುವುದು ಮನುಷ್ಯ ಜೀವನದ ಪರಮೋನ್ನತ ಗುರಿಗಳಲ್ಲಿ ಒಂದು, ಅಧ್ಯಾತ್ಮ ಸಾಧನೆಯ ಗುರಿಯೂ ಹೌದು. ಪ್ರೀತಿಗೆ ಹೊಸ ವ್ಯಾಖ್ಯೆಯೊಂದನ್ನು ಕಂಡುಕೊಳ್ಳದೆ, ಪ್ರೀತಿಯನ್ನು ಪಡೆಯುವ, ಕೊಡುವ ಅನೇಕ ರೀತಿಗಳನ್ನು ಕಂಡುಕೊಳ್ಳದೇ ದುಃಖದಿಂದ, ಭಯದಿಂದ ಮುಕ್ತಿಯಿಲ್ಲ ಎನ್ನುವುದನ್ನು ಅನೇಕ ಅಧ್ಯಾತ್ಮ ಸಾಧಕರ ಜೀವನ ದರ್ಶನಗಳಲ್ಲಿ ಕಾಣುತ್ತೇವೆ ಕೂಡ.
ನಾವು ಸಾಮಾನ್ಯವಾಗಿ ಭಯಕ್ಕೆ ವಿರುದ್ಧವಾದ ಸ್ಥಿತಿಯೆಂದರೆ ಧೈರ್ಯ ಎಂಬಂತೆ ಮಾತನಾಡುತ್ತೇವೆ, ಭಯ ಪಡುತ್ತಿರುವವರಿಗೆ ‘ಧೈರ್ಯವಾಗಿರು’ ಎನ್ನುವ ಮಾತನ್ನೂ ಹೇಳುತ್ತೇವೆ. ಆದರೆ ಧೈರ್ಯ ಹಾಗೆ ಸುಮ್ಮನೆ ಬಂದುಬಿಡುವುದಿಲ್ಲ, ಎಷ್ಟೇ ಧೈರ್ಯದ ಮಾತುಗಳನ್ನು ಕೇಳಿಸಿಕೊಂಡರೂ, ನಾವು ಭಯವನ್ನೂ, ಭಯಕ್ಕೆ ಮೂಲವಾಗಿರುವ ದುಃಖವನ್ನೂ ಅರಿತುಕೊಳ್ಳುವುದರಲ್ಲಿ ಸೋತಾಗ ಭಯವನ್ನು ಕೇವಲ ಸಕಾರಾತ್ಮಕ ಆಲೋಚನೆಗಳ ಮೂಲಕ ಧೈರ್ಯವನ್ನಾಗಿ ಪರಿವರ್ತಿಸಲು ಆಗುವುದಿಲ್ಲ. ನಿಜವಾಗಿ ನೋಡಿದರೆ ಭಯಕ್ಕೆ ಮದ್ದು ಧೈರ್ಯವಲ್ಲ, ಭಯಕ್ಕೆ ಮದ್ದು ಪ್ರೀತಿ, ನಂಬಿಕೆ, ಭರವಸೆ.
ಭಯ ನಾವು ಬದುಕನ್ನು ಪ್ರೀತಿಸುವುದರ ಸಂಕೇತ, ನಾವು ಚೆನ್ನಾಗಿ ಬದುಕಬೇಕೆಂಬ ನಮ್ಮ ಬಯಕೆಯ ಸಂಕೇತ, ನಮ್ಮ ಬಳಿ ಅಮೂಲ್ಯವಾದದ್ದೇನೋ ಇದೆ, ಎಚ್ಚರ ವಹಿಸದಿದ್ದರೆ ಅದನ್ನು ಕಳೆದುಕೊಳ್ಳಬಹುದೆಂಬ ಅರಿವಿನ ಸಂಕೇತ. ‘ಅಮೂಲ್ಯವಾದದ್ದು’ ಎಂದರೆ ಅದು ಯಾವುದಾದರೂ ಆಗಿರಬಹುದು, ಅದು ಬದುಕನ್ನು ಸವಿಯುವ ಅನೇಕ ಸಾಧ್ಯತೆಗಳಿರಬಹುದು, ಕುಟುಂಬವಿರಬಹುದು, ಸಮಯವಿರಬಹುದು ಅಥವಾ ನನ್ನ ಬಳಿಯಿರುವ ಅಮೂಲ್ಯವಸ್ತುವೆಂದರೆ ಅದು ಸಂವೇದನಾಶೀಲ ‘ನಾನೇ’ ಇರಬಹುದು, ಏಕೆಂದರೆ ನನ್ನನ್ನೇ ನಾನು ಕಳೆದುಕೊಳ್ಳುವ ಸಾಧ್ಯತೆಯೂ ಇದೆಯಲ್ಲ!? ‘ನಾನೇ’ ಅಂದರೆ ಬದುಕನ್ನು ಕಾಣುವ ಕಣ್ಣು, ಅನುಭವಿಸುವ ಹೃದಯವೇ ಕಳೆದುಹೋದರೆ ಸುಮ್ಮನೆ ಉಸಿರಾಡಿಕೊಂಡಿರುವುದು ಬದುಕೆನಿಸಿಕೊಳ್ಳದು. ಹಾಗಾಗಿ ನಮ್ಮ ಬಳಿಯಿರುವ ಆ ‘ಅಮೂಲ್ಯ ವಸ್ತು’, ಅದೇನು? ಅದನ್ನು ಕಳೆದುಕೊಳ್ಳದೆ ಇರುವುದು ಹೇಗೆ? ಕಳೆದುಹೋದದ್ದನ್ನು ಮತ್ತೆ ಕಂಡುಕೊಳ್ಳುವುದು ಹೇಗೆ? ಕಳೆದು ಹೋಗುವುದೇ ಅನಿವಾರ್ಯವಾದಾಗ ಏನು ಮಾಡಬೇಕು? ಎನ್ನುವುದೆಲ್ಲಾ ಬಗೆಹರಿಯದೇ ಭಯಕ್ಕೆ ಪರಿಹಾರವಿಲ್ಲ, ಬದುಕಿನ ಸತ್ಯಗಳನ್ನು ಸ್ವೀಕರಿಸುವ ಮನೋಭಾವವೇ ಭಯಕ್ಕೆ ನಿಜವಾದ ಮದ್ದು.
ನಾವು ಭಯವನ್ನು ಎಷ್ಟು ಆಳವಾಗಿ ಅರ್ಥಮಾಡಿಕೊಳ್ಳುತ್ತೇವೋ ನಮ್ಮ ಧೈರ್ಯಕ್ಕೆ ಅಷ್ಟು ಗಟ್ಟಿತನ ಬರುತ್ತದೆ, ಹಾಗಾಗಿ ಧೈರ್ಯವೆಂದರೆ ಸುಮ್ಮನೆ ಯೋಚಿಸದೆ ಮುನ್ನುಗ್ಗುವುದಲ್ಲ, ಹಾಗೆ ಮುನ್ನುಗ್ಗುವುದು ಕೆಲವೊಮ್ಮೆ ಅನರ್ಥಕಾರಿಯೂ ಆಗಬಹುದು. ಭಯವಾದಾಗ ಹೆದರಿ ಓಡಿ ಹೋಗುವುದರಿಂದ, ಭಯದಿಂದ ಅಡಗಿ ಕುಳಿತು ಏನೂ ಮಾಡದೆ ನಿಷ್ಕ್ರಿಯರಾಗಿರುವುದರಿಂದ, ಭಯದ ವಿರುದ್ಧ ಬುದ್ಧಿಯ ಮೂಲಕ ಆಲೋಚನೆಯ ಮೂಲಕ ಸೆಣೆಸಾಡುವುದರಿಂದ, ಭಯದಲ್ಲೇ ಕುಗ್ಗಿ ಹೋಗುವುದರಿಂದ ಭಯ ನಮ್ಮನ್ನು ಬಿಟ್ಟು ಹೋಗಿಬಿಡುವುದಿಲ್ಲ, ಭಯಕ್ಕೆ ಹೆದರಿ ಬದುಕಿನಿಂದ ದೂರ ಉಳಿದರೆ ಬದುಕಿನ ಸಂತೋಷ ನಮ್ಮನ್ನು ಬಿಟ್ಟುಹೋಗುತ್ತದಷ್ಟೇ. ನಮ್ಮ ಜೀವನದ ದಿಕ್ಕನ್ನು ನಿರ್ಧರಿಸಬೇಕಾದ್ದು ಭಯವೋ ಅಥವಾ ಜೀವನಪ್ರೀತಿಯೋ ಎನ್ನುವ ಆಯ್ಕೆ ನಮ್ಮದು, ಈ ಆಯ್ಕೆಯ ಸ್ವಾತಂತ್ರ್ಯ ನಮಗಿದೆ ಎಂದು ಅರಿವಾಗುವುದು ಭಯಕ್ಕೆ ನಾವು ಪ್ರೀತಿಯಿಂದ ಸ್ಪಂದಿಸುವುದನ್ನು ಕಲಿತಾಗ ಮಾತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.