ADVERTISEMENT

ಕೌದಿ ನೆನಪುಗಳ ಹಾದಿ

ರಾಹುಲ ಬೆಳಗಲಿ
Published 30 ಡಿಸೆಂಬರ್ 2023, 23:30 IST
Last Updated 30 ಡಿಸೆಂಬರ್ 2023, 23:30 IST
<div class="paragraphs"><p>ಕೌದಿ</p></div>

ಕೌದಿ

   

ಕೌದಿ ಎಂದರೆ ಬಹುತೇಕ ಜನರಿಗೆ ವಿಶಾಲ ಹೊದಿಕೆ. ಚಳಿಯಲ್ಲಿ ಬೆಚ್ಚಗಾಗಿಸುವ ದಪ್ಪನೆಯ ಬಟ್ಟೆ. ಇದೇ ಗುಂಗಿನಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಸುಮ್ಮನೆ ದಿನಪೂರ್ತಿ ಒಂದು ಸುತ್ತು ಹಾಕಿ, ಅಲ್ಲಿ ಯಾರೊಂದಿಗೂ ಮಾತನಾಡಿಸುವ ಗೋಜಿಗೆ ಹೋಗಬೇಡಿ. ಸಂಶೋಧನೆಗೂ ಇಳಿಯಬೇಡಿ. ಆದರೆ, ಕುತೂಹಲ ಮಾತ್ರ ಕಳೆದುಕೊಳ್ಳಬೇಡಿ.

ಮನೆಯ ಎದುರಿಗೆ ದಪ್ಪನೆಯ ಬಟ್ಟೆ ಹಾಸಿಕೊಂಡು, ಸೂಜಿ–ದಾರ ಹಿಡಿದು ಕೂತ ಹೆಣ್ಣುಮಕ್ಕಳ ಎದುರು ನಿಲ್ಲಿ. ಅವರು ಹೊಲಿಯುತ್ತಿರುವುದು ಬರೀ ಹೊದಿಕೆಯಲ್ಲ ಎಂಬುದು ಅರಿವಾಗಲು ಹೆಚ್ಚು ಸಮಯ ಬೇಕಾಗದು. ಅವರ ಮಾತು ಆಲಿಸುತ್ತಾ, ಅವರ ಶ್ರದ್ಧೆ‌ ಕಂಡಾಗ, ಮನದಲ್ಲಿನ ಹಲವು ಪ್ರಶ್ನೆಗಳಿಗೆ–ಸಣ್ಣಪುಟ್ಟ ಗೊಂದಲಗಳಿಗೆ ಒಂದೇ ಸಾಲಿನ ಸ್ಪಷ್ಟ ಉತ್ತರ ಸಿಗುತ್ತದೆ: ಕೌದಿ ಎಂದರೆ ಅಕ್ಷರಶಃ ನೆನಪುಗಳ ಗುಚ್ಛ.

ADVERTISEMENT

ಗಂಟೆಗಟ್ಟಲೆ ಒಂದೇ ಕಡೆ ಕೂತು ಕೌದಿಗಳನ್ನು ಸಿದ್ಧಪಡಿಸುವ ಮಹಿಳೆಯರ ಬಳಿ ನೀವು ಎಷ್ಟೇ ಹುಡುಕಾಡಿದರೂ ಒಂದು ತುಂಡೂ ಹೊಸ ಬಟ್ಟೆ ಸಿಗದು. ಮೂಟೆಯಲ್ಲಿ ಮುದುಡಿ ಮಾಡಿ ತುಂಬಿಟ್ಟ ಹಳೆಯ ಬಟ್ಟೆಗಳ ರಾಶಿ, ಹರಿದ ಜಮಖಾನ, ಬಣ್ಣ ಎಲ್ಲವೂ ಮಾಸಿ ಹೋಗಿ ಬಳಸಲು ಆಗದ ಶರ್ಟು–ಪ್ಯಾಂಟು, ಹೊಳಪು ಕಳೆದುಕೊಂಡ ಸೀರೆ, ಚೂಡಿದಾರ, ಲುಂಗಿಗಳಿಗೆ ಕೊರತೆ ಇರಲ್ಲ. ಸತ್ವ ಕಳೆದುಕೊಂಡ ಈ ಬಟ್ಟೆಗಳೇ ಕೌದಿಗೆ ಜೀವಾಳ. ನಿಸ್ಸಂಶಯವಾಗಿ ಜೀವಕಳೆ ತರುತ್ತವೆ.

ಎಲ್ಲವನ್ನೂ ಮೇಳೈಸಿಕೊಂಡ ಕೌದಿಯನ್ನು ಹೊದ್ದುಕೊಂಡರೆ, ಕುಟುಂಬ ಸದಸ್ಯರ ನೆನಪುಗಳನ್ನೇ ಸುತ್ತಿಕೊಂಡಂತೆ. ಒಂದು ತುದಿಯಲ್ಲಿ ಅಜ್ಜನ ಪಂಚೆ ದೊರೆತರೆ, ಇನ್ನೊಂದರಲ್ಲಿ ಅಜ್ಜಿಯ ಸೀರೆಯ ಸ್ಪರ್ಶ. ಸಹೋದರ, ಸಹೋದರಿಯರ ಇಲ್ಲವೇ ಸ್ವಂತದ ಹಳೆಯ ಬಟ್ಟೆಗಳೂ ಅಲ್ಲಲ್ಲಿ. ಚಳಿಗಾಲದಲ್ಲಿ ಬೆಚ್ಚನೆಯ ಮತ್ತು ಬೇಸಿಗೆಯಲ್ಲಿ ತಂಪಾದ ಅನುಭೂತಿಯನ್ನು ಕೌದಿ ನೀಡುತ್ತದೆ.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಸಿಸುವ ಮೋಚಿ ಸಮುದಾಯದ ಕುಲಕಸುಬು ಕೌದಿ ಹೊಲಿಯುವುದು. ಇದು ಒಂದು ರೀತಿಯ ವಿಶಿಷ್ಟ ಕಲೆ. ಅನಾದಿ ಕಾಲದಿಂದ ಆ ಸಮುದಾಯದ ಪುರುಷರು ಚರ್ಮಗಾರಿಕೆ ಕೆಲಸ ಮಾಡಿದರೆ, ಮಹಿಳೆಯರು ಕೌದಿ ಹೊಲಿಯುವುದನ್ನೇ ಬದುಕು ಆಗಿಸಿಕೊಂಡರು. ವರ್ಷಗಳು ಕಳೆದಂತೆ ಎಲ್ಲವೂ ಬದಲಾಗಿ, ಜೀವನಶೈಲಿ ಹಲವು ಸ್ವರೂಪಗಳ ಪರಿವರ್ತನೆ ಕಂಡರೂ ಕೌದಿಯ ಸಾಂಗತ್ಯ ಮಾತ್ರ ಕಳಚಿಲ್ಲ.

ಶ್ರಮಜೀವಿ ನಿಂಗಮ್ಮ

ಅರವತ್ತು ವರ್ಷಗಳಿಂದ ಕೌದಿ ಹೊಲಿಯುವುದನ್ನೇ ಕಾಯಕ ಮಾಡಿಕೊಂಡಿರುವ ಗಜೇಂದ್ರಗಡದ ನಿಂಗಮ್ಮ ಸವಣೂರು ಅವರಿಗೆ ಈಗ ವಯಸ್ಸು 76. ಸುಮಾರು 16ನೇ ವಯಸ್ಸಿನಲ್ಲೇ ಕೌದಿಯೊಂದಿಗೆ ನಂಟು ಬೆಸೆದುಕೊಂಡ ಅವರು, ಈಗಲೂ ಸೂಜಿ–ದಾರಕ್ಕೆ ವಿರಾಮ ನೀಡಲು ಬಯಸಲ್ಲ. ಬೆಳಗಿನ ತಿಂಡಿ ಇಲ್ಲವೇ ಮಧ್ಯಾಹ್ನದ ಊಟದ ಬಳಿಕ ನಿದ್ದೆಗೆ ಜಾರುವ ಬದಲು ಅವರು ಬಟ್ಟೆಗಳ ರಾಶಿ ಹಾಕಿ ಕೂತುಬಿಡುತ್ತಾರೆ. ನಂತರ ಒಂದೊಂದೇ ಬಟ್ಟೆಯನ್ನು ಆಯ್ದುಕೊಂಡು ಕೌದಿ ಹೊಲಿಯುವುದರಲ್ಲಿ ಮಗ್ನರಾಗುತ್ತಾರೆ.

ವಿವಿಧ ಬಗೆಯ ಹೊದಿಕೆಗಳನ್ನು ಯಂತ್ರ ಇಲ್ಲವೇ ಹೊಚ್ಚಹೊಸ ಬಟ್ಟೆಗಳನ್ನು ಪೇರಿಸಿ ಸಿದ್ಧಪಡಿಸಬಹುದು. ಆದರೆ, ಕೌದಿ ಹಾಗಲ್ಲ. ಇದಕ್ಕೆ ಮಹಿಳೆಯರ ಶ್ರಮ, ಏಕಾಗ್ರತೆ, ಆಸ್ಥೆ ಅಗತ್ಯ. ಇಂಚು ಇಲ್ಲವೇ ಸೆಂಟಿಮೀಟರ್‌ಗೆ ತಕ್ಕಂತೆ ಹೊಲಿಗೆ ಹಾಕಬೇಕು. ಎಲ್ಲವೂ ಸಡಿಲವಾಗಬಾರದು. ಸ್ವಲ್ಪವೂ ಮುದುಡಿದಂತೆ ಆಗಬಾರದು. ಇದರ ಲೆಕ್ಕದಲ್ಲಿ ಸ್ವಲ್ಪ ಆಚೀಚೆಯಾದರೂ ಹೊಲಿದದ್ದನ್ನು ಮತ್ತೆ ಮತ್ತೆ ಬಿಚ್ಚಬೇಕು. ಮತ್ತೆ ಸರಿಪಡಿಸಬೇಕು. ಪುನಃ ಮೊದಲಿನಿಂದ ಆರಂಭಿಸಬೇಕು.

‘ಮೊದಲೆಲ್ಲ ತುಂಡು ಬಟ್ಟೆಗಳನ್ನೆಲ್ಲ ಒಂದು ಕಡೆ ಗುಡ್ಡೆ ಹಾಕಿ ಪಗಡಿ, ಬಾಸಿಂಗ, ತೇರು ಕೌದಿ ಎಂದೆಲ್ಲ ಹೊಲಿಯುತ್ತಿದ್ದೆವು. ದೊಡ್ಡದಾದ ಬಟ್ಟೆಯ ಮೇಲೆ ಅಲ್ಲಲ್ಲಿ ಅಡ್ಡಡ್ಡ, ಉದ್ದುದ್ದ, ಚೌಕ, ದುಂಡನೆಯ ಬಟ್ಟೆಗಳನ್ನು ಇಟ್ಟು ರಂಗೋಲಿ ರೂಪದಲ್ಲಿ ವಿನ್ಯಾಸ ಮಾಡುತ್ತಿದ್ದೆವು. ಆದರೆ, ಈಗ ಅದೆಲ್ಲವನ್ನೂ ಮಾಡುವುದು ಕಷ್ಟ. ತುಂಬಾ ಸಮಯ ಬೇಕು. ತಾಳ್ಮೆ ಕೂಡ. ಅದಕ್ಕೇ ಎರಡು–ಮೂರು ಪದರ ಬಟ್ಟೆಗಳನ್ನು ಹೊಂದಿಸಿಕೊಂಡು ಕೌದಿ ಹೊಲಿಯುತ್ತೇವೆ’ ಎಂದು ಹೇಳುವಾಗ ನಿಂಗಮ್ಮ ಸವಣೂರು ಅವರ ಮೊಗದಲ್ಲಿ ಉತ್ಸಾಹವಿತ್ತೇ ಹೊರತು ದಣಿವಿನ ಸುಳಿವು ಕಿಂಚಿತ್ತೂ ಇರಲಿಲ್ಲ. ಲಕ್ಷ್ಮೀದೇವಿ ಡಂಬಳ ಕೂಡ ಇದೇ ಹಾದಿಯಲ್ಲಿ ನಡೆದು ಬಂದವರು.

ಗ್ರಾಮಗಳಿಗೇ ಹೋಗಿ ಕೇಳುವ ಪರಿಸ್ಥಿತಿ

ದಶಕಗಳ ಹಿಂದೆ ಒಂದು ಮೊಳಕ್ಕೆ ನಾಲ್ಕು ಆಣೆ ಇಲ್ಲವೇ ಎಂಟು ಆಣೆಗೆ ಹೊಲಿದುಕೊಡುತ್ತಿದ್ದ ಅವರು ಈಗ ದಿನಪೂರ್ತಿ ದುಡಿದರೂ ಸಿಗುವ ಕೂಲಿ ಕಡಿಮೆ. ಮೊದಲೆಲ್ಲ ಆಯಾ ಗ್ರಾಮದವರೇ ಕೌದಿ ಹೊಲಿಯುವವರ ಮನೆಗೆ ಬಂದು, ಹಳೆ ಬಟ್ಟೆಗಳನ್ನು ಕೊಡುತ್ತಿದ್ದರು. ಆದರೆ, ಈಗ ಇವರೇ ಆಯಾ ಗ್ರಾಮಗಳಿಗೆ ಹೋಗಿ, ‘ಕೌದಿ ಹೊಲಿದುಕೊಡುತ್ತೇವೆ. ಹಳೆಯ ಬಟ್ಟೆಗಳ ಕೊಡಿ’ ಎಂದು ಕೋರುತ್ತಾರೆ.

ಪರಿಶಿಷ್ಟ ಜಾತಿಯಾದ ಮೋಚಿ ಸಮುದಾಯದವರ ಜನಸಂಖ್ಯೆ ತುಂಬಾ ಕಡಿಮೆ. ಕೌದಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ನ್ಯಾಯಯುತ ಬೆಲೆ ನಿಗದಿಪಡಿಸಿ ಎಂಬುದು ಅವರ ತುಂಬಾ ಹಳೆಯ ಬೇಡಿಕೆ. ಅದಕ್ಕಾಗಿ ಅವರ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅಧಿಕಾರಿಗಳಿಂದ ಜನಪ್ರತಿನಿಧಿಯವರೆಗೆ ಅವರು ಮನವಿ ಸಲ್ಲಿಸಿದ್ದಾರೆ, ಕಷ್ಟಕೋಟಲೆಗಳನ್ನು ಹೇಳಿಕೊಂಡಿದ್ದಾರೆ. ಆದರೆ, ಅವರಿಗೆ ಭರವಸೆ ಹೊರತುಪಡಿಸಿ ದಕ್ಕಿದ್ದೇನೂ ಇಲ್ಲ.

‘ಬ್ಲಾಂಕೆಟ್‌, ಕಂಬಳಿ, ಹೊದಿಕೆ, ರಗ್, ಬೆಡ್‌ಶೀಟ್‌ ಮುಂತಾದವುಗಳಿಗೆ ಹೋಲಿಸಿದರೆ ಕೌದಿಯ ಬೆಲೆ ತುಂಬಾ ಕಡಿಮೆ. ಎಲ್ಲವೂ ಕಾರ್ಖಾನೆಗಳಲ್ಲಿ ಸಿದ್ಧವಾದರೆ, ಕೌದಿಯನ್ನು ಕೈಯಲ್ಲೇ ಹೊಲಿಯಬೇಕು. ಶ್ರಮಕ್ಕೆ ತಕ್ಕಂತೆ ಬೆಲೆ ನಿಗದಿ ಆಗುತ್ತಿಲ್ಲ. ರಾಜ್ಯದ ವಿಶಿಷ್ಟ ಉತ್ಪನ್ನವೆಂದು ಇದನ್ನು ಬಿಂಬಿಸಲಾಗುತ್ತಿಲ್ಲ. ಇತ್ತ ಮೀಸಲಾತಿ ಸೌಲಭ್ಯವಿಲ್ಲ, ಅತ್ತ ಸರ್ಕಾರ ನಮಗೆ ಕಿವಿಯಾಗುತ್ತಿಲ್ಲ’ ಎಂಬ ನೋವು ಶಿಕ್ಷಕ ಸುರೇಶ ಚಳಗೇರಿ ಅವರದ್ದು. ಇದೇ ರೀತಿಯ ನಿರಾಸೆಯ ಮಾತುಗಳು ನಾಗರಾಜ ಕೋಟಿ ಎಂಬುವರದ್ದೂ ಹೌದು.

‘ನೂರಾರು ವರ್ಷಗಳಿಂದ ಅಜ್ಜ, ಮುತ್ತಜ್ಜ ಕಾಲದಿಂದಲೂ ಪಾಲಿಸಿಕೊಂಡು ಬಂದ ಕೌದಿ ಹೊಲಿಯುವ ಕಸುಬು ಕ್ರಮೇಣ ಕಡಿಮೆ ಆಗುತ್ತಿದೆ. ಮನೆಯಲ್ಲಿ ಅಜ್ಜಿಯಂದಿರು ಬಿಟ್ಟರೆ ನಂತರದ ಪೀಳಿಗೆಯವರು ಕೌದಿ ಹೊಲಿಯುವತ್ತ ಆಸಕ್ತಿ ತೋರುತ್ತಿಲ್ಲ. ಓದು, ಕಲಿತು ದೊಡ್ಡವರಾದ ಕೂಡಲೇ ಬಹುತೇಕ ಮಂದಿ ಉದ್ಯೋಗ ಹುಡುಕಿಕೊಂಡು ದೂರದ ಊರುಗಳಿಗೆ ಹೊರಟು ಬಿಡುತ್ತಾರೆ. ಇನ್ನೂ ಕೌದಿ ತಯಾರು ಆಗುವುದಾದರೂ ಹೇಗೆ? ಬಳಸುವುದಾದರೂ ಯಾರು’ ಎಂಬ ಆತಂಕ ಕೌದಿ ಹೊಲಿಯುವವರದ್ದು. 

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಕೌದಿಗಳನ್ನು ಹೊಲಿಯುತ್ತಿರುವ ಮಹಿಳೆಯರು ಪ್ರಜಾವಾಣಿ ಚಿತ್ರ: ಶ್ರೀಶೈಲ ಎಂ. ಕುಂಬಾರ

ಕೌದಿ ವ್ಯಾಪ್ತಿ: ಎಲ್ಲಾ ಕಡೆ ಚದುರಿ ಹೋಗಿರುವ ಮೋಚಿ ಸಮುದಾಯದವರು ಆಯಾ ಪ್ರದೇಶಕ್ಕೆ ತಕ್ಕಂತೆ ಬೇರೆ ಬೇರೆ ವೃತ್ತಿ ಕಂಡುಕೊಂಡರೂ ಕೌದಿ ಹೊಲಿಯುವುದರಿಂದ ವಿಮುಖರಾಗಿಲ್ಲ. ಕೊಪ್ಪಳ ಜಿಲ್ಲೆಯ ಕಾರಟಗಿ, ಗಂಗಾವತಿ, ಭಾಗ್ಯನಗರ, ರಾಯಚೂರು ಜಿಲ್ಲೆಯ ಸಿಂಧನೂರು, ಯಾದಗಿರಿಯ ಸುರಪುರ, ಹಾವೇರಿಯ ಶಿಗ್ಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಗ್ರಾಮಗಳು ಸೇರಿದಂತೆ ಬಹುತೇಕ ಕಡೆ ಇರುವ ಅವರ ಅಸ್ತಿತ್ವ ಮತ್ತು ಜೀವನಶೈಲಿಯನ್ನು ಅವರ ಕೌದಿ ಮೂಲಕ ಕಾಣಬಹುದು. ಸಮುದಾಯದ ಎಲ್ಲರನ್ನೂ ಒಟ್ಟುಗೂಡಿಸುವ ಮತ್ತು ಜಾಗೃತಿ ಮೂಡಿಸುವ ನಿರಂತರವಾಗಿ ನಡೆದಿದೆ. ಆದರೆ, ಫಲ ಸಿಕ್ಕಿದ್ದು ಕಡಿಮೆ.

ಒಂದೇ ಸಮುದಾಯಕ್ಕೆ ಸೀಮಿತವಾಗಿದ್ದ ಕೌದಿ ಹೊಲಿಯುವ ಕೆಲಸ ಕ್ರಮೇಣ ವಿವಿಧ ಜಾತಿ, ಸಮುದಾಯದವರಿಗೂ ವಿಸ್ತರಿಸಿದೆ. ಕೆಲ ಅಲೆಮಾರಿ ಸಮುದಾಯದವರು, ಪರಿಶಿಷ್ಟ ಜಾತಿಯವರು, ಹಿಂದುಳಿದ ವರ್ಗದವರು ಇದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಕೌದಿಗೆ ಕೌಂದಿ, ಕವುದಿ, ಕವಿದಿ, ಕವದಿ ಎಂದೆಲ್ಲ ಹೆಸರುಗಳು ಬಂದಿವೆ. ಇನ್ನೂ ಕೆಲ ಕಡೆ ದಟ್ಟ ಎಂದೂ ಕರೆಯಲಾಗುತ್ತದೆ.

₹ 100 ಕೂಡ ಉಳಿಯದು

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಕೌದಿಗಳನ್ನು ಹೊಲಿಯುತ್ತಿರುವ ಮಹಿಳೆಯರು ಪ್ರಜಾವಾಣಿ ಚಿತ್ರ: ಶ್ರೀಶೈಲ ಕುಂಬಾರ

ಒಂದು ಕೌದಿ ಹೊಲಿಯಲು ಸುಮಾರು ₹ 400ರವರೆಗೆ ಖರ್ಚು ಆಗುತ್ತದೆ. ಆದರೆ, ಓಡಾಟ, ಸೂಜಿ–ದಾರ, ಶುಚಿಗೊಳಿಸುವುದು, ಹೊಲಿಯುವುದು ಸೇರಿ ಎಲ್ಲಾ ಖರ್ಚುಗಳನ್ನು ತೆಗೆದರೆ, ಅವರ ಕೈಯಲ್ಲಿ ₹ 100 ಕೂಡ ಉಳಿಯುವುದಿಲ್ಲ. ಒಂದು ಕೌದಿ ಹೊಲಿದು ಪೂರ್ಣಗೊಳಿಸಲು ಒಂದು ವಾರ ಬೇಕು. ಅದಕ್ಕಾಗಿ ಹಾಕಿದ ಶ್ರಮ ಲೆಕ್ಕಕ್ಕೆ ಸಿಗದು. ಜೊತೆಗೆ ಬೆನ್ನುನೋವು ಸೇರಿ ಇನ್ನಿತರ ಆರೋಗ್ಯ ಸಮಸ್ಯೆಯೂ ಅವರನ್ನು ಕಾಡುತ್ತದೆ.

ಬಳಸಲು ಸಿದ್ಧವಾದ ಕೌದಿ
ಬಳಕೆಗೆ ಸಿದ್ಧವಾಗಿರುವ ಕೌದಿಗಳು
ಕೌದಿ ವ್ಯಾಪ್ತಿ
ಎಲ್ಲಾ ಕಡೆ ಚದುರಿ ಹೋಗಿರುವ ಮೋಚಿ ಸಮುದಾಯದವರು ಆಯಾ ಪ್ರದೇಶಕ್ಕೆ ತಕ್ಕಂತೆ ಬೇರೆ ಬೇರೆ ವೃತ್ತಿ ಕಂಡುಕೊಂಡರೂ ಕೌದಿ ಹೊಲಿಯುವುದರಿಂದ ವಿಮುಖರಾಗಿಲ್ಲ. ಕೊಪ್ಪಳ ಜಿಲ್ಲೆಯ ಕಾರಟಗಿ ಗಂಗಾವತಿ ಭಾಗ್ಯನಗರ ರಾಯಚೂರು ಜಿಲ್ಲೆಯ ಸಿಂಧನೂರು ಯಾದಗಿರಿಯ ಸುರಪುರ ಹಾವೇರಿಯ ಶಿಗ್ಗಾವಿ ವಿಜಯಪುರ ಬಾಗಲಕೋಟೆ ಜಿಲ್ಲೆಯ ಗ್ರಾಮಗಳು ಸೇರಿದಂತೆ ಬಹುತೇಕ ಕಡೆ ಇರುವ ಅವರ ಅಸ್ತಿತ್ವ ಮತ್ತು ಜೀವನಶೈಲಿಯನ್ನು ಅವರ ಕೌದಿ ಮೂಲಕ ಕಾಣಬಹುದು. ಸಮುದಾಯದ ಎಲ್ಲರನ್ನೂ ಒಟ್ಟುಗೂಡಿಸುವ ಮತ್ತು ಜಾಗೃತಿ ಮೂಡಿಸುವ ನಿರಂತರವಾಗಿ ನಡೆದಿದೆ. ಆದರೆ ಫಲ ಸಿಕ್ಕಿದ್ದು ಕಡಿಮೆ. ಒಂದೇ ಸಮುದಾಯಕ್ಕೆ ಸೀಮಿತವಾಗಿದ್ದ ಕೂಲಿ ಹೊಲಿಯುವ ಕೆಲಸ ಕ್ರಮೇಣ ವಿವಿಧ ಜಾತಿ ಸಮುದಾಯದವರಿಗೂ ವಿಸ್ತರಿಸಿದೆ. ಕೆಲ ಅಲೆಮಾರಿ ಸಮುದಾಯದವರು ಪರಿಶಿಷ್ಟ ಜಾತಿಯವರು ಹಿಂದುಳಿದ ವರ್ಗದವರು ಇದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಕೌದಿಗೆ ಕೌಂದಿ ಕವುದಿ ಕವಿದಿ ಕವದಿ ಎಂದೆಲ್ಲ ಹೆಸರುಗಳು ಬಂದಿವೆ. ಇನ್ನೂ ಕೆಲ ಕಡೆ ದಟ್ಟ ಎಂದೂ ಕರೆಯಲಾಗುತ್ತದೆ.
₹ 100 ಕೂಡ ಉಳಿಯದು
ಒಂದು ಕೌದಿ ಹೊಲಿಯಲು ಸುಮಾರು ₹ 400ರವರೆಗೆ ಖರ್ಚು ಆಗುತ್ತದೆ. ಆದರೆ ಓಡಾಟ ಸೂಜಿ–ದಾರ ಶುಚಿಗೊಳಿಸುವುದು ಹೊಲಿಯುವುದು ಸೇರಿ ಎಲ್ಲಾ ಖರ್ಚುಗಳನ್ನು ತೆಗೆದರೆ ಅವರ ಕೈಯಲ್ಲಿ ₹ 100 ಕೂಡ ಉಳಿಯುವುದಿಲ್ಲ. ಒಂದು ಕೌದಿ ಹೊಲಿದು ಪೂರ್ಣಗೊಳಿಸಲು ಒಂದು ವಾರ ಬೇಕು. ಅದಕ್ಕಾಗಿ ಹಾಕಿದ ಶ್ರಮ ಲೆಕ್ಕಕ್ಕೆ ಸಿಗದು. ಜೊತೆಗೆ ಬೆನ್ನುನೋವು ಸೇರಿ ಇನ್ನಿತರ ಆರೋಗ್ಯ ಸಮಸ್ಯೆಯೂ ಅವರನ್ನು ಕಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.