ಮಧ್ಯರಾತ್ರಿಯಾಗಿದೆ. ನಿದ್ದೆ ಬೀಳುತ್ತಿಲ್ಲ. ವರ್ಷಗಳು ಎಷ್ಟು ಬೇಗ ಕಳೆಯುತ್ತವೆ! ನಮ್ಮ ಮುಕುಂದ ಹೋಗಿಯೂ (ಎಲ್ಲಿಗೆ?) ವರ್ಷ ಆಗಿಯಾಯಿತು. ಅಂದಹಾಗೆ- ಪಂಚಾಂಗದ ಪ್ರಕಾರ (ತಾರೀಕು ಪ್ರಕಾರ 18.7.2023) ಮುಕುಂದರ ವರ್ಷಾಂತಿಕ ಮುಗಿದಿದೆ. ಒಂದಿಷ್ಟೂ ಗದ್ದಲ ಗೌಜಿಯಿಲ್ಲದೆ, ನಿರಪೇಕ್ಷೆಯಿಂದ, ಯಾರಿಗೂ ಅಲ್ಲ, ಯಾರಿಗಾಗಿಯೂ ಅಲ್ಲ, ತನ್ನ ತೀವ್ರ ಆಸಕ್ತಿಗೇ ಮಣಿದು ಕನ್ನಡದ ದೊಡ್ಡ ಕೆಲಸ ಮಾಡಿ ಹೊರಟು ಹೋದ ಮುಕುಂದ ಆತ. ಆತನ ‘ಮುಖಮುದ್ರೆ’ ಕೃತಿ ಇಲ್ಲೇ ಎದುರಲ್ಲೇ ಇದೆ. ನೋಡುತ್ತ ನೋಡುತ್ತ ಏನೋ ತಳಮಳ.
ಅವರ ಪರಿಚಯವಾಗಿದ್ದು ಹೆಗ್ಗೋಡಿನಲ್ಲಿಯೇ. ಸಾಹಿತಿಗಳ ಅಂತರ್ಭಾವ ಚಿತ್ರ ತೆಗೆಯೋದರಲ್ಲಿ ನಿಷ್ಣಾತರು ಎಂದು ಯಾರೊ ಪರಿಚಯಿಸಿದ್ದರು. ಆಗಲೇ ಹೆಗ್ಗೋಡಿನಲ್ಲಿ ಅವರು ತೆಗೆದ ಕೆಲ ಫೋಟೊಗಳನ್ನು ನೋಡಿದ್ದೆ. ಸ್ಥೂಲಕಾಯ, ತಡೆತಡೆದು ಉಚಿತ ಶಬ್ದ ಸಿಗುವವರೆಗೂ ಕಾದು ಮಾತಾಡುವ ಸಾವಧಾನದ ಪರಿ, ಎರಡೂ ಕೈ ಬೀಸಿ ಕತ್ತು ಅರೆಬಾಗಿಸಿ ಅರೆನೇರನೆ ನಡೆವ ಬೀಸ ನಡಿಗೆಯ ಮುಕುಂದ. ಪಕ್ಕದಲ್ಲೇ ತುಸು ತೂಗು ನಡಿಗೆಯ, ಉದ್ದ ನಿಲುವಿನ ನಗುಮೊಗದ ಬಡನಡುವಿನ ಮಡದಿ ಉಮಾ. ಫೋಟೊಗ್ರಫಿಯಲ್ಲಿ ಪರಮಾಸಕ್ತ, ನೀನಾಸಂ ಚಿತ್ರ ರಸಗ್ರಹಣ ಶಿಬಿರಗಳಲ್ಲಿ ಅನೇಕ ಬಾರಿ ಉಪನ್ಯಾಸ ನೀಡಿದವರು, ಸಂಗೀತ, ಸಿನಿಮಾ ಮತ್ತು ಸಾಹಿತ್ಯ-ಒಟ್ಟು ಕಲಾ ಪ್ರಕಾರಗಳ ಅಪೂರ್ವ ರಸಗ್ರಾಹಿ ಈ ಮುಕುಂದ ಅಂತೆಲ್ಲ ಕೇಳಿದೆ. ಸಣ್ಣ ಸಣ್ಣ ಮಾತುಕತೆಗಳಲ್ಲೇ ನಮ್ಮ ಅಂದಿನ ಭೇಟಿ ಮುಗಿಯಿತು.
ಆದರೆ ಈತ ಒಂದು ದಿನ ನನ್ನ ಫೋಟೊ ಕೂಡ ತೆಗೆಯುತ್ತಾರೆಂಬ ಎಣಿಕೆಯೇ ನನಗಿರಲಿಲ್ಲ.
ಅದು 1993ರ ನವೆಂಬರ್ ತಿಂಗಳೆಂದು ಕಾಣುತ್ತದೆ. ಮಡಿಕೇರಿಯ ಕಾವೇರಿ ಭವನದಲ್ಲಿ ಎರಡು ದಿನಗಳ ಕಾಲ ನೀನಾಸಂ ವತಿಯಿಂದ ಸಾಹಿತ್ಯ ಸಂವಾದ, ಕತೆ, ಕಾವ್ಯ ಗೋಷ್ಠಿ ಇತ್ಯಾದಿ ನಡೆಯಿತು. ನಾನದರಲ್ಲಿ ಭಾಗವಹಿಸಿದ್ದೆ. ಅಲ್ಲಿ ಮುಕುಂದರೂ ಬಂದಿದ್ದರು. ಅವತ್ತು ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ಮುಕುಂದ ನನ್ನ ಬಳಿ ಬಂದು, ‘ನಿಮ್ಮ ಫೋಟೊ ತೆಗೆಯಬೇಕು ಅಂತಿದೆ, ಬರುವಿರ?’ ಕೇಳಿದರು. ಅವರು ಕೇಳುವ ಶೈಲಿ ಹೇಗಂದರೆ, ಅದರಲ್ಲೊಂದು ಸಂಕೋಚ, ವಿಶ್ವಾಸ, ಪ್ರೀತಿ ಎಲ್ಲವೂ ಬೆರೆತಂತೆ.
ವ್ಯಕ್ತಿಗಳ ಫೋಟೊ ತೆಗೆಯುವ ಹೊತ್ತಿಗೆ ಮಾತಾಡಿಸಲು ಹೆಚ್ಚಾಗಿ ಅವರ ಜೊತೆಗಿರುವುದು ಪತ್ನಿ ಉಮಾ. ಅವಳಿದ್ದರೆ ತನಗೆ ಬಲ ಎನ್ನುತ್ತಿದ್ದರು ಮುಕುಂದ. ಅದೊಂದು ಅಪೂರ್ವ ಜೋಡಿ. ಪತಿಯ ಕಾವ್ಯಾತ್ಮಕ ಫೋಟೋಗ್ರಫಿಯನ್ನು ನೋಡು ನೋಡುತ್ತ ನಿಧಾನವಾಗಿ ತನ್ನೊಳಗಿನ ಕವಿಯನ್ನು ಎಚ್ಚರಿಸಿಕೊಂಡ ಉಮಾ, ಮುಂದೆ ಕವಿತೆಗಳನ್ನೂ ಬರೆದು ಪ್ರಕಟಿಸಿಯೂ ಬಿಟ್ಟರು. ಮುಕುಂದರ ವಿಚಾರ ಹೇಳುತ್ತ ಉಮಾ ವಿಚಾರಕ್ಕೆ ಬಂದೆನೆ! ಬರದೆ ಮತ್ತೆ? ಅವರಿಬ್ಬರೂ ಇದ್ದಿದ್ದರಲ್ಲ ಹಾಗೆ, ಇಬ್ಬರಲ್ಲ ತಾವು, ಒಬ್ಬರು ಎಂಬಂತೆ!
ಮುಕುಂದ ಮತ್ತು ಉಮಾ ಜೊತೆಜೊತೆಯಲ್ಲಿ ತಾವಾಗಿಯೇ ಇಷ್ಟಪಟ್ಟು ಅದೆಷ್ಟು ಬರಹಗಾರರ ಭಾವಚಿತ್ರ ತೆಗೆದಿದ್ದಾರೋ. ಆಯುಷ್ಯದ ಎಷ್ಟು ಭಾಗವನ್ನು ಅದಕ್ಕಾಗಿ ವ್ಯಯಿಸಿದ್ದಾರೋ. ಕೇವಲ ಗೌರವ ಮತ್ತು ಪ್ರೀತಿ ಎರಡೇ ಕಾರಣಭಾರದಿಂದ. ಮುಕುಂದರೇ ಬೇಕೆಂದು ಹಟ ಬಿದ್ದು ಫೋಟೊ ತೆಗೆಸಿಕೊಂಡಿರುವ ಕರ್ನಾಟಕದ ವರಿಷ್ಠರು ಎಷ್ಟು ಮಂದಿ!
ಒಮ್ಮೆ ಶಿವರಾಮ ಕಾರಂತ, ಕೋ.ಲ. ಕಾರಂತ, ಸೇಡಿಯಾಪು ಅವರ ಫೋಟೊ ತೆಗೆಯಲು ಉಡುಪಿಗೆ ಬಂದಿದ್ದರು ಮುಕುಂದ. ಆ ಸಮಯದಲ್ಲಿ ಲೇಖಕಿ ರಾಜವಾಡೆಯವರ ಫೋಟೊ ತೆಗೆಯಬೇಕೆಂದು ಇದ್ದೂ ಏನೋ ತಡೆ ಬಂದು ಆಗಲಿಲ್ಲ. ಇನ್ನೊಮ್ಮೆ ತೆಗೆಯುವ ಆಸೆಯಿಂದ ಹೊರಟುಹೋದರು. ಆದರೆ ಕೆಲ ಸಮಯದಲ್ಲೇ ರಾಜವಾಡೆಯವರು ತೀರಿಕೊಂಡು ಆ ಆಸೆ ಪೂರೈಸಲೇ ಇಲ್ಲ.
****
ಹ್ಞಾ. ಅಂದು ಹಾಗೆ ಕೇಳಿದರಲ್ಲ. ಫೋಟೊ, ಯಾರದು? (. . .ಎಲ್ಲ ಬಿಟ್ಟು ನನ್ನದಾ?) ನನಗೆ ಗಾಬರಿ. ಇನ್ನೂ ನನಗದೆಲ್ಲ ಹೊಸತು. ಅಲ್ಲಿಯೇ ಸುಬ್ಬಣ್ಣನವರು ಕುಳಿತಿದ್ದರು. ಮುಕುಂದ ‘ಗಾಬರಿ ಬೇಡ. ನೀವು ಸುಮ್ಮನೆ ಸುಬ್ಬಣ್ಣನವರೊಡನೆ ಮಾತಾಡುತ್ತಿರಿ. ಸಾಕು’ ಎಂದರು. ಸುಬ್ಬಣ್ಣನವರ ಎದುರಲ್ಲಿ ಕೂಡಿಸಿ ‘ದಯವಿಟ್ಟು ಏನಾದರೂ ಮಾತಾಡುತ್ತಿರಿ ಸರ್. ನಾನು ಫೋಟೊ ತೆಗೆಯುತ್ತಿರುತ್ತೇನೆ’ ಎಂದರು. ದೇವರೆ! ಆವರಿಸಿ ಬಂದ ಇನ್ನಷ್ಟು ಗಾಬರಿ, ಹೇಗೆ ಹೇಳುವುದು! ಈಗ ಸುಬ್ಬಣ್ಣನವರೇ ನನ್ನ ಭಯ ಬಿಡಿಸಲು ಲೋಕಾಭಿರಾಮವಾಗಿ ಮಾತಾಡತೊಡಗಿದರು. ನಾನೂ ನಿಧಾನವಾಗಿ ತುಸು ಹಗುರಾಗುತ್ತ ಹೋದೆ. ಆಚಿನಿಂದ ಒಂದೇ ಸಮ ಕ್ಲಿಕ್ ಕ್ಲಿಕ್, ಮೊದಮೊದಲು ಕೇಳಿಸುತ್ತ, ಮಾತಿನಲ್ಲಿ ತೊಡಗಿಕೊಂಡ ಹಾಗೂ ಕೇಳದೆ ಹೋಯಿತು. ಫೋಟೋ ತೆಗೆಯುತ್ತ ಹೋದರು ಮುಕುಂದ. ಆಯ್ದ ಫೋಟೊಗಳನ್ನು ಕಳಿಸಿಕೊಟ್ಟರು ಕೂಡ. ಮಾತಿನಲ್ಲಿ ಮೈಮರೆಯುವಂತೆ ಮಾಡಿ, ಮುಕುಂದ ವ್ಯಕ್ತಿಚಿತ್ರ ತೆಗೆಯುವ ವಿಧಾನ ಇದು.
ನಮ್ಮಮ್ಮ ನಿಧಾನವಾಗಿ ನಂದುತ್ತ ಇದ್ದಳು. ಹೆಚ್ಚು ಕಾಲ ಅವಳಿರುವುದಿಲ್ಲ ಎಂಬುದನ್ನು ನೆನೆದರೂ ಸಾಕು, ಚೇತನವೇ ಸ್ತಬ್ದವಾಗುತಿದ್ದ ಸ್ಥಿತಿ. ನನಗೆ ಮುಕುಂದ ಅವಳ ಚಿತ್ರ ತೆಗೆದುಕೊಟ್ಟರೆ ಆದೀತು ಎಂಬ ಹಂಬಲವಾಯ್ತು. ಮುಕುಂದರ ಬಳಿ ಎಲ್ಲ ಹೇಳಿ, ಅವಳ ಭಾವಚಿತ್ರ ತೆಗೆದುಕೊಡುವಿರ? ಎಂದು ಕೋರಿದೆ. ತನ್ನ ವಸ್ತುವಿಷಯ ಹಾಗಿಲ್ಲದಿದ್ದರೂ ತಕ್ಷಣ ಒಪ್ಪಿಕೊಂಡರು. ಆ ತೂಕದ ಉಪಕರಣಗಳೊಂದಿಗೆ ಬಸ್ಸಿನಲ್ಲಿ ಬಂದರು. ಒಂದು ದಿನವಿಡೀ ಕುಂದಾಪುರದ ನನ್ನ ತವರು ಮನೆಯಲ್ಲಿ ಕಳೆದು, ಅಮ್ಮನ ಒಂದಷ್ಟು ಫೋಟೊಗಳನ್ನು ತೆಗೆದರು. ರಾತ್ರಿ ಅವರು ಹೊರಟು ಹೋದ ಮೇಲೆ ಅಮ್ಮ ‘ಎಷ್ಟು ಸಮಾಧಾನಿ!’ ಎಂದು ಉದ್ಗರಿಸಿದ್ದು ನೆನಪಾಗುತ್ತಿದೆ. ಅಮ್ಮನ ವಿವಿಧ ಭಾವಗಳ ಆ ಅದ್ಭುತ ಚಿತ್ರಗಳು ಈಗಲೂ ಅವಳ ಮಕ್ಕಳ ಜೊತೆಗಿವೆ.
****
ಎಷ್ಟು ಪತ್ರಿಕೆಗಳು ಅಗತ್ಯ ಬಿದ್ದಾಗ ಅವರ ಬಳಿ ಬರಹಗಾರರ ಫೋಟೊ ಕೇಳಿ ಪ್ರಕಟಿಸಿರಬಹುದು; ಎಷ್ಟು ಪುಸ್ತಕಗಳ ಮುಖಪುಟಕ್ಕೆ ಅವರು ತೆಗೆದ ಫೋಟೊ ಬಳಸಿರಬಹುದು? ಧೇನಿಸುತ್ತಿದ್ದಂತೆ, ಮನದೆದುರು ಕಾಣುವುದು ಚರ್ಚೆಯನ್ನು ಹೊರತುಪಡಿಸಿ ಸದಾ ಮಿತಭಾಷಿ ಮುಕುಂದರು. ತನ್ನ ಬಗ್ಗೆ ಚಕಾರ ಹೇಳಿಕೊಳ್ಳದವರು. ಅವಕಾಶವಾದ ಎಂಬುದು ಅವರೆದುರು ಸುಳಿಯದು. ಬೇರೊಬ್ಬರ ಮಾತಿಗೆ ಕಿವಿಯಾಗುವ ಅವರು ಮುಖ್ಯರಾಗುವುದು ಯಾರನ್ನೂ ನೋಯಿಸದೆ ಇರುವ ಸ್ವಭಾವಕ್ಕೆ. ಅವರು ತನ್ನಲ್ಲಿ ಪೋಷಿಸಿಕೊಂಡು ಬಂದ ಸದಭಿರುಚಿಗೆ, ಪ್ರಶಸ್ತ ರಸಗ್ರಾಹಿತ್ವಕ್ಕೆ. ಮನೆಯಲ್ಲಿ ಪ್ರಪಂಚದ ಅತ್ಯುತ್ತಮ ಚಿತ್ರಗಳ ಸಂಗ್ರಹವಿಟ್ಟಿದ್ದ ಅವರು ಮಾತಾಡುವುದಿದ್ದರೆ-ನೋಡಿದ ಚಿತ್ರ, ನಾಟಕ, ಓದಿದ ಕತೆ–ಕಾದಂಬರಿ, ಕೇಳಿದ ಒಂದು ಅತ್ಯುತ್ತಮ ಸಂಗೀತ, ಇತ್ಯಾದಿಗಳ ಕುರಿತು. ಒಂದು ಸಣ್ಣಕತೆಯನ್ನೂ ಅವರು ಅದರ ಮೂಲಾದಿಮೂಲದ ಜಾಡು ಹಿಡಿದು ಶಬ್ದಗಳ ಆಂತರ್ಯ ಭಾವ ಹೊರಗೆಳೆದು, ಅದರ ಸೋಲನ್ನೂ ಕರಾರುವಾಕ್ಕಾಗಿ ಪತ್ತೆಹಚ್ಚಿ, ಸಣ್ಣದೆಂದು ಸದರ ಮಾಡದೆ ದೀರ್ಘವಾಗಿ ಚರ್ಚಿಸುವ ಪರಿ ಅಚ್ಚರಿ ತರಿಸುತಿತ್ತು.
****
ಸದಾ ನಮ್ಮ ಆರೋಗ್ಯದ ಬಗ್ಗೆ ವಿಚಾರಿಸುತಿದ್ದರು ಅವರು, ಹೆಲ್ತ್ ಇನ್ಶೂರೆನ್ಸಿನ ಕೆಲ ಸಂಗತಿಗಳನ್ನು ನಮಗೆ ತಿಳಿಸಿ ಅತ್ತ ಗಮನ ಹರಿಸುವಂತೆ ಒತ್ತಾಯಿಸುತಿದ್ದರು. ಅಂಥ ಅರಿವಿನವರನ್ನೂ ವಿಧಿ ಅತ್ತಿತ್ತ ನೋಡುವುದರೊಳಗೆ ಸ್ವತಃ ಅವರಿಗೂ ತಿಳಿಯದಂತೆ, ಹೇಗೆ ಕಣ್ಣು ಹಾಕಿ ಹಾರಿಸಿಕೊಂಡೇ ಹೋಯ್ತು! ತಮ್ಮ ಅಭಿರುಚಿ, ಫೋಟೋಗ್ರಫಿಯ ಒಳಗಣ್ಣು, ಸಭ್ಯತೆಗಳನ್ನು ಪುತ್ರ ಪ್ರತೀಕನಿಗೂ ದಾಟಿಸಿ ಕೃತಕೃತ್ಯತೆ ಅನುಭವಿಸುತ್ತಿರುವಾಗಲೇ ಥಟ್ಟಂತ ಕರೆ ಬಂದಂತೆ ಹೊರಟೇಹೋದರು.
ಅವರ ‘ಮುಖಮುದ್ರೆ’ ಸಂಕಲನದ ಮುಖಪುಟದಲ್ಲಿ ಮುಕುಂದರು ಕ್ಯಾಮೆರಾ ಕಣ್ಣಿನಿಂದ ಯಾವುದೋ ವಸ್ತುವಿಶೇಷವನ್ನು ತದೇಕ ನೋಡುತ್ತಿದ್ದಾರೆ. ಅಂದೊಮ್ಮೆ ಮನೆ ಹೊರಗೆ ಬೆಳಕಿನ ಹರಿವಿನಲ್ಲಿ ಉಮಾ ಬರುತ್ತಿರುವಾಗ, ಬೆಳಕಿನ ಚೆಲುವಿನ್ಯಾಸ ಕಂಡೊಡನೆ ಗರಿಗೆದರುವ ಫೋಟೋಗ್ರಾಫರ್ ಮುಕುಂದ ಅವಳನ್ನು ನಿಲ್ಲು ನಿಲ್ಲು ಎಂದು ತಡೆದು, ಫೋಟೊ ತೆಗೆಯಹೊರಟದ್ದು, ಇದನ್ನು ನೋಡಿದ ಪ್ರತೀಕ ಓಡಿ ಬಂದು ತಾಯಿಯ ಫೋಟೊ ತೆಗೆಯುತಿದ್ದ ತಂದೆಯ ಫೋಟೊ ತೆಗೆದದ್ದು ಅಂತೆಲ್ಲ ಪ್ರಸಂಗ ಈ ಫೋಟೊದ ಹಿಂದಿದೆ. ಒಂದು ಬಗೆಯಲ್ಲಿ ಮೂವರೂ ಹೀಗೆ ಈ ಮುಖಪುಟದಲ್ಲಿ ಒಟ್ಟಿಗಿದ್ದಾರೆ. . .
ನೋಡುತ್ತ ಕುಳಿತಿದೆ ಮನಸ್ಸು, ಹನಿಗೂಡಿದೆ. ಒಳಮುಖವಾಗಿದೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.