ಶೋಷಣೆಯನ್ನು ಖಂಡಿಸಿ ಕಾವ್ಯ ಬರೆದ ಈ ಸಮಾಜ ವಿಮರ್ಶಕ ಸಾಹಿತ್ಯದಲ್ಲಿ ನೊಂದವರ ಪ್ರತಿನಿಧಿಯಂತೆ ಕೆಲಸ ಮಾಡಿದವರು. ಈ ಸಾಹಿತ್ಯ ಸಾಧಕ ಅಚ್ಯುತ ಗೌಡ ಕಿನ್ನಿಗೋಳಿ ಅವರ ನೂರರ ನೆನಪಿನಲ್ಲಿ ಹೀಗೊಂದು ಯಾನ...
‘ಅವಿನಾಶಿ’ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿದ್ದ ಕರಾವಳಿಯ ಮೊದಲನೆಯ ದಲಿತ ಕವಿ ಅಚ್ಯುತ ಗೌಡ ಕಿನ್ನಿಗೋಳಿಯವರು(1921-1976) ಜನಿಸಿದ್ದು 1921ರ ಅ.18ರಂದು. ದಕ್ಷಿಣ ಕನ್ನಡದ ಕಿನ್ನಿಗೋಳಿ ಎಂಬ ಊರಿನವರಾದ ಅವರು ಅ.ಗೌ. ಕಿನ್ನಿಗೋಳಿ ಎಂಬ ಹ್ರಸ್ವ ಹೆಸರನ್ನೇ ಕಾವ್ಯನಾಮವನ್ನಾಗಿ ಮಾಡಿಕೊಂಡು ಬರೆದವರು. ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ನಾವಿದ್ದೇವೆ.
ಅಚ್ಯುತ ಗೌಡರು ಲಿಟ್ಲ್ ಫ್ಲವರ್ ಗರ್ಲ್ಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದು, ‘ಕ್ಷಾತ್ರದರ್ಶನ’ವೆಂಬ ವೀರಕವನದಿಂದ ಮೊದಲಾಗಿ ಕನ್ನಡ ಕವಿಲೋಕಕ್ಕೆ ಪರಿಚಿತರಾದವರು. ಅವಿನಾಶಿ ಎಂಬ ಕಾವ್ಯನಾಮದಲ್ಲಿವಿಡಂಬನಗಳನ್ನೂ, ಏಕಾಂಕ ನಾಟಕಗಳನ್ನೂ ಅವರು ಬರೆದಿದ್ದಾರೆ. ಅವರ ಬಿಡಿಕವಿತೆಗಳು ನೂರರಷ್ಟಿದ್ದರೂ ಇನ್ನೂ ಸಂಕಲನವಾಗಿ ಪ್ರಕಟವಾಗಿಲ್ಲ. ‘ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಕಾವ್ಯ ಲಹರಿಯಲ್ಲಿ ಅವರ ಖಂಡಕಾವ್ಯಗಳೆಲ್ಲ ಸೇರಿವೆ. ಅವರ ಕಾದಂಬರಿಗಳು, ದೃಶ್ಯರೂಪಕಗಳು, ವಿಡಂಬನೆ, ಸಾಹಿತ್ಯ ವಿಮರ್ಶೆ ಇತ್ಯಾದಿ ಬರಹಗಳನ್ನು ಸಂಪಾದಿಸಿ ಪ್ರಕಟಿಸಬೇಕಾಗಿದೆ.
ಅಚ್ಯುತ ಗೌಡ ಕಿನ್ನಿಗೋಳಿಯವರ ಹೆಸರಿನಲ್ಲಿರುವ ‘ಗೌಡ’ ಅನ್ನುವುದು ದಕ್ಷಿಣ ಕನ್ನಡದಲ್ಲಿ ಒಕ್ಕಲಿಗ ಸಮುದಾಯದವರಿಗಲ್ಲದೆ ಸಮಗಾರ ಜನಾಂಗದವರಿಗೂ ಇರುವ ಜಾತಿನಾಮ. ಸರಕಾರದ ಅಧಿಸೂಚನೆಯ ಪ್ರಕಾರ ಇದು ಪರಿಶಿಷ್ಟ ಜಾತಿಗೆ ಸೇರುವ ಸಮುದಾಯ. ಅವರಲ್ಲಿ ಮರಾಠಿ ಮತ್ತು ಕನ್ನಡ ಮಾತನಾಡುವ ಕುಟುಂಬಗಳಿವೆ. ಹಾಗಾಗಿ ಈ ಸಮುದಾಯದವರು ಮಹಾರಾಷ್ಟçದಿಂದ ವಲಸೆ ಬಂದಿರಬಹುದೆಂಬ ಅಭಿಪ್ರಾಯವೂ, ವಿಜಯನಗರದಿಂದ ವಲಸೆ ಬಂದಿರಬಹುದೆಂಬ ಇನ್ನೊಂದು ಅಭಿಪ್ರಾಯವೂ ಇದೆ. ಅ.ಗೌ.ಕಿ. ತಮ್ಮ ಸಮುದಾಯವನ್ನು ಪರಿಚಯಿಸುವಂತಹ ಕೃತಿಯೊಂದನ್ನು ಬರೆಯಲು ಅಧ್ಯಯನ ನಡೆಸಿದ್ದರಂತೆ. ಅದು ಪ್ರಕಟವಾಗಿಲ್ಲ; ಹಸ್ತಪ್ರತಿಯೂ ಲಭ್ಯವಿಲ್ಲ.
ಅ.ಗೌ.ಕಿ.ಯವರ ತಂದೆ ರಂಗನಾಥ ಗೌಡರು ಸಮಗಾರ ವೃತ್ತಿಯನ್ನು ಮಾಡುತ್ತಿದ್ದರು. ಅ.ಗೌ.ಕಿ.ಯವರ ತಾಯಿ ಲಿಂಗಮ್ಮ. 1943 ರಲ್ಲಿ ಅಚ್ಯುತ ಗೌಡರು ಲಕ್ಷ್ಮಿ ಎಂಬವರನ್ನು ಮದುವೆಯಾದರು. ಅವರಿಗೆ ನಾಲ್ವರು ಮಕ್ಕಳು: ಇಂದಿರಾ, ವಿನಯಪಾಲ, ಜಯಂತಿ ಮತ್ತು ವಿಜಯ.
ಅ.ಗೌ.ಕಿ.ಯವರು ಕಿನ್ನಿಗೋಳಿಯ ಪಾಂಪೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೆಯ ತರಗತಿಯವರೆಗೆ ಓದಿ, 1943 ರಲ್ಲಿ ಎಲಿಮೆಂಟರಿ ಟ್ರೈನ್ಡ್ ಟೀಚರ್ ಆಗಿ ಸಮೀಪದ ಶಿಮಂತೂರಿನ ಸೈಂಟ್ ಕ್ಸೇವಿಯರ್ ಎಲಿಮೆಂಟರಿ ಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು. 1944 ರಲ್ಲಿ ಅದೇ ಆಡಳಿತದ ಕಿನ್ನಿಗೋಳಿಯ ಸೈಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದರು. ಆಮೇಲೆ ಖಾಸಗಿಯಾಗಿ ಅಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ಪದವಿಯನ್ನು 1949 ರಲ್ಲಿ ಪಡೆದರು. ಹೀಗೆ ಹೈಸ್ಕೂಲು ಅಧ್ಯಾಪಕರಾಗಲು (ಕನ್ನಡ ಪಂಡಿತರು) ಬೇಕಾದ ಅರ್ಹತೆಯನ್ನು ಸಂಪಾದಿಸಿದ ಮೇಲೆ ಅ.ಗೌ.ಕಿ.ಯವರು ಅದೇ ಆಡಳಿತದ ಲಿಟ್ಲ್ ಫ್ಲವರ್ ಗರ್ಲ್್ಸ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ನೇಮಕಗೊಂಡರು. ಅ.ಗೌ.ಕಿ. 1952 ರಲ್ಲಿ ಖಾಸಗಿಯಾಗಿ ಮೆಟ್ರಿಕ್ಯುಲೇಷನ್ ಪಾಸಾದರು. 1953 ರಲ್ಲಿ ಮತ್ತೊಂದು ಶಿಕ್ಷಕ ತರಬೇತಿಯನ್ನು (ಸೆಕೆಂಡರಿ ಗ್ರೇಡ್ ಟೀಚರ್ ಟ್ರೈನಿಂಗ್) ಪಡೆದು ಬಂದರು. ಅವರು ತಮ್ಮ 55ನೆಯ ವರ್ಷದಲ್ಲಿ ಸೇವೆಯಲ್ಲಿರುವಾಗಲೇ ತೀರಿಕೊಂಡರು. ಅವರಿಗೆ ರಕ್ತದೊತ್ತಡವಿತ್ತು. 1976 ರಲ್ಲಿ ಅನಾರೋಗ್ಯದ ಕಾರಣ ಅವರು ದೀರ್ಘ ರಜೆಯಲ್ಲಿದ್ದರು. ಆಗಲೇ ಸರಕಾರ 58 ವರ್ಷಕ್ಕೆ ನಿವೃತ್ತಿ ಎಂದಿದ್ದುದನ್ನು 55 ಕ್ಕೆ ಇಳಿಸಿತು. ಆಗ ಅಗೌಕಿ ಆಘಾತಕ್ಕೆ ಒಳಗಾದರು. ಮಂಗಳೂರಿಗೆ ಆರೋಗ್ಯ ಪರೀಕ್ಷೆಗೆಂದು ಹೋದವರು ಅಲ್ಲಿಯೇ ಕೊನೆಯುಸಿರೆಳೆದರು.
ಅ. ಗೌ. ಕಿನ್ನಿಗೋಳಿಯವರು ಕೂಡ ಇತರ ಶಾಲೆಗಳ ಭಾಷಾ ಅಧ್ಯಾಪಕರಂತೆ ಶಾಲೆಯ ವಾರ್ಷಿಕೋತ್ಸವಗಳಲ್ಲಿ ವಿದ್ಯಾರ್ಥಿನಿಯರಿಂದ ನಾಟಕಗಳನ್ನು ಆಡಿಸುತ್ತಿದ್ದರು. ಅವರು ಸ್ವತಃ ಸಾಕಷ್ಟು ರೂಪಕಗಳನ್ನು ಇಂತಹ ಪ್ರದರ್ಶನಗಳಿಗಾಗಿ ಬರೆದಿದ್ದು, ಅವುಗಳು ಕೆಲವು ‘ಯುಗಪುರುಷ’ ಪತ್ರಿಕೆಯ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ‘ದೃಶ್ಯಲಹರಿಗಳು’ ಎಂಬ ವಿಭಾಗದಲ್ಲಿ ಪ್ರಕಟವಾದ ಅವರ ರೂಪಕಗಳು: ‘ಪರಾಶರ ಸತ್ಯ’, ‘ಪತನ ಪ್ರಾಯಶ್ಚಿತ್ತ’, ‘ಮಂತ್ರ ರಹಸ್ಯ’, ‘ಅಜ್ಞಾತ ಸಂಹಾರ’, ‘ಗುಪ್ತ ತೀರ್ಥಾಟನೆ’, ‘ವಿಪರ್ಯಾಸ ಸಂತಾನ’.
ಅ.ಗೌ.ಕಿ. ಅವರಿಗೆ ‘ಯುಗಪುರುಷ’ ಪತ್ರಿಕೆ ಮತ್ತು ‘ಯುಗಪುರುಷ’ ಪ್ರಕಾಶನದ ಕೊ.ಅ. ಉಡುಪರು ಆತ್ಮೀಯರಾಗಿದ್ದರು. “ಅ.ಗೌ.ಕಿ.ಯವರು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡದ್ದು ಯುಗಪುರುಷ ಪತ್ರಿಕೆಯ ಮೂಲಕವೇ..... ಯುಗಪುರುಷ ಪತ್ರಿಕೆಗೆ ಕನ್ನಡ ಓದುಗರ ಮನ್ನಣೆಯನ್ನೂ ಸಾಹಿತ್ಯದ ಮೌಲ್ಯವನ್ನೂ ತಂದುಕೊಟ್ಟವರಲ್ಲಿ ಅ.ಗೌ.ಕಿ.ಯವರು ಒಬ್ಬರು”, ಎಂದು ಡಾ. ಕೆ. ಚಿನ್ನಪ್ಪ ಗೌಡರು ದಾಖಲಿಸಿದ್ದಾರೆ.
ಕಳೆದ ಎಪ್ಪತ್ತೈದು ವರ್ಷಗಳಿಂದ (1947 ರಿಂದ) ನಿರಂತರವಾಗಿ ಪ್ರಕಟವಾಗುತ್ತಿರುವ ಕನ್ನಡ ಮಾಸಪತ್ರಿಕೆ ‘ಯುಗಪುರುಷ’ ಮಾಸಪತ್ರಿಕೆ ಇಂದಿಗೂ ತಪ್ಪದೆ ಪ್ರತಿ ತಿಂಗಳೂ ಮಂಗಳೂರು ತಾಲೂಕಿನ ಕಿನ್ನಿಗೋಳಿಯಿಂದ ಪ್ರಕಟವಾಗುತ್ತಿದೆ. ಆಗಿನ ಇದರ ಪ್ರಕಾಶಕ-ಸಂಪಾದಕ ಕೊ.ಅ. ಉಡುಪ ಅವರು ಕಿನ್ನಿಗೋಳಿಯ ಪಾಂಪೆ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಅ. ಗೌ. ಕಿನ್ನಿಗೋಳಿ ಅವರು ಸಮೀಪದಲ್ಲೇ ಇದ್ದ ಮತ್ತೊಂದು ಹೈಸ್ಕೂಲಿನ ಅಧ್ಯಾಪಕರಾಗಿದ್ದರು; ಜತೆಗೆ ಸಾಹಿತಿಯಾಗಿ ಹೆಸರು ಮಾಡಿದ್ದರು. ಸಮಾನ ಉದ್ಯೋಗ, ಸಮಾನ ಆಸಕ್ತಿಗಳು ಈ ಇಬ್ಬರನ್ನೂ ಮಿತ್ರರನ್ನಾಗಿಸಿತು. ಅ.ಗೌ.ಕಿ. ಅವರ ಹೆಚ್ಚಿನ ಕವಿತೆಗಳು, ಖಂಡಕಾವ್ಯಗಳು, ಲೇಖನಗಳು, ರೂಪಕಗಳು ‘ಯುಗಪುರುಷ’ ಪತ್ರಿಕೆಯಲ್ಲಿ ಅಥವಾ ಯುಗಪುರುಷ ಗ್ರಂಥಮಾಲೆಯಲ್ಲಿ ಪ್ರಕಟವಾಗಿವೆ. ಅಗೌಕಿಯವರು ತಮ್ಮ ಬಿಡುವಿನ ವೇಳೆಯಲ್ಲಿ ‘ಯುಗಪುರುಷ’ದ ಕಚೇರಿಯಲ್ಲಿ ಕುಳಿತು ಪ್ರೂಫ್ ರೀಡಿಂಗ್ ಮಾಡಿಕೊಡುತ್ತಿದ್ದರಲ್ಲದೆ, ಪ್ರಕಟಣೆಗೆ ಬರುತ್ತಿದ್ದ ಬರಹಗಳನ್ನು ತಿದ್ದುತ್ತಿದ್ದರು.
ಸಾಮಾಜಿಕ ಅಸಮಾನತೆಯ ವಿರೋಧ
ಮನುಷ್ಯನು ಹುಟ್ಟಿದ ಜಾತಿಯನ್ನು ಕಂಡು ಅವನ ಬೆಲೆಕಟ್ಟುವ ಅನಿಷ್ಟ ಪದ್ಧತಿಯನ್ನು ಅ. ಗೌ. ಕಿನ್ನಿಗೋಳಿ ಅವರು ಖಂಡಿಸಿದ್ದಾರೆ, ಅದಕ್ಕೆ ಗುರಿಯಾಗಿದ್ದಾರೆ ಮತ್ತು ನೊಂದುಕೊಂಡಿದ್ದಾರೆ. ದೊಡ್ಡ ವಿದ್ವಾಂಸರಾಗಿದ್ದ ಅವರು ಮೊದಲು ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದರು. ಕೆಲವೊಂದು ಕಹಿ ಅನುಭವಗಳ ನಂತರ ಆ ಹವ್ಯಾಸವನ್ನು ತೊರೆದರು. ದೇವಾಲಯಗಳಲ್ಲಿ ಮತ್ತು ಹೊರಗೆ ಧಾರ್ಮಿಕ ಆಚರಣೆಗಳಲ್ಲಿ ನಡೆಯುತ್ತಿದ್ದ ಕೆಲವೊಂದು ಅಪಸವ್ಯಗಳನ್ನು, ಕುತ್ಸಿತ ಮನೋಭಾವಗಳನ್ನು ಅವರು ಖಂಡಿಸುತ್ತಿದ್ದುದರಿಂದ ಅವರು ‘ನಾಸ್ತಿಕ’ ಎಂಬ ಮಾತನ್ನು ಕೇಳಬೇಕಾಯಿತು.
ಅ. ಗೌ. ಕಿನ್ನಿಗೋಳಿಯವರು ಸಕ್ರಿಯರಾಗಿದ್ದಾಗ ಕನ್ನಡದಲ್ಲಿ ನವ್ಯ ಸಾಹಿತ್ಯದ ಕಾಲ ಪ್ರಾರಂಭವಾಗಿತ್ತು. ಆಗ ಕಡೆಂಗೋಡ್ಲು ಮಾದರಿಯ ಖಂಡಕಾವ್ಯಗಳನ್ನು ಬರೆದ ಅ. ಗೌ. ಕಿನ್ನಿಗೋಳಿಯವರಿಗೆ ಅವರ ಕಾವ್ಯಗಳಲ್ಲಿ ಹೊಸನೋಟಗಳಿದ್ದರೂ ಸಿಗಬೇಕಾಗಿದ್ದಷ್ಟು ಮನ್ನಣೆ ಸಿಗಲಿಲ್ಲ. ವರ್ತಮಾನದ ಸಂಗತಿಗಳನ್ನು ಎತ್ತಿಕೊಂಡು ಬರೆದ ಅವರ ಸಮಾಜಪರ ಕವಿತೆಗಳು ಬಿಡಿಬಿಡಿಯಾಗಿ ಉಳಿದ ಕಾರಣ ನಾಡಿನಲ್ಲೆಲ್ಲ ಪ್ರಚಾರಕ್ಕೆ ಬರಲಿಲ್ಲ.
ಕಾವ್ಯ
ಅ. ಗೌ. ಕಿನ್ನಿಗೋಳಿಯವರು (1921 – 1976) ಕಡೆಂಗೋಡ್ಲು ಅವರ ಖಂಡಕಾವ್ಯ ಪರಂಪರೆಯ ಮುಂದುವರಿಕೆಯಾಗಿ ಕಂಡು ಬರುತ್ತಾರೆ. ಅವರ ಖಂಡಕಾವ್ಯಗಳು 1954 ರಲ್ಲಿ ಪ್ರಕಟವಾದವು. ಅ. ಗೌ. ಕಿನ್ನಿಗೋಳಿಯವರು ಕಡೆಂಗೋಡ್ಲು ಅವರಂತೆ ಪುರಾಣ ಕಥೆಗಳ (ಪುನರ್ಮಿಲನ, ಚಿತಾಗ್ನಿ) ಮೂಲಕ ಸ್ತ್ರೀಯ ತ್ಯಾಗವನ್ನು, ಅವಳ ಮನಸ್ಸಿನ ನೋವುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು; ಕ್ಷಾತ್ರ ತೇಜದ ಮಹತ್ವವನ್ನು ಎತ್ತಿಹೇಳಿದರು (ಶಿವಲೇಶ್ಯೆ, ಕ್ಷಾತ್ರ ದರ್ಶನ). ಅ. ಗೌ. ಕಿನ್ನಿಗೋಳಿ ಅವರ ಕಾವ್ಯದ ವೈಶಿಷ್ಟ್ಯ ಎಂದರೆ ತಮ್ಮ ಸಮಕಾಲೀನ ಹಿರಿಯ ಕವಿಗಳ ಕಾವ್ಯಗಳನ್ನೇ ಮುಂದುವರಿಸಿ, ಬೇರೊಂದು ದೃಷ್ಟಿಕೋನದಿಂದ ಆ ವಸ್ತುವನ್ನು ಪರಿಶೀಲಿಸಿ, ಅದಕ್ಕೆ ಇನ್ನೊಂದು ಬಗೆಯ ಮುಕ್ತಾಯವನ್ನು ಕೊಡುವುದರಲ್ಲಿ ಅವರಿಗಿದ್ದ ಆಸಕ್ತಿ. ಕವಿಯೊಬ್ಬ ಪರಂಪರೆಯ ಜತೆಗೆ ಈ ರೀತಿಯ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು ಬೇರೆಲ್ಲೂ ಕಾಣದೆ ಇರುವ ಒಂದು ವಿದ್ಯಮಾನವೆನ್ನಬಹುದು.
ಅವರ ಖಂಡ ಕಾವ್ಯಗಳಿಗೆ ಬೇರೆ ಕೃತಿಗಳ ಪ್ರೇರಣೆ ಇದೆ ಎಂದ ಮಾತ್ರಕ್ಕೆ ಅವು ಆ ಮೂಲ ಕೃತಿಗಳ ಛಾಯೆಯಾಗಿದೆ ಎಂದು ಅರ್ಥವಲ್ಲ. ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಮರುಸೃಷ್ಟಿಗಳು ಸ್ವತಂತ್ರ ಕೃತಿಗಳೇ ಎಂದು ಮಾನ್ಯವಾಗುತ್ತವೆ. ಅ.ಗೌ.ಕಿ. ಅವರ ಖಂಡಕಾವ್ಯಗಳು ಮರುಸೃಷ್ಟಿಗಳು ಮಾತ್ರವಲ್ಲ, ಅವುಗಳ ಮುಂದುವರಿಕೆಗಳು ಅನ್ನುವುದು ವಿಶೇಷ.
ಅವರ ಖಂಡಕಾವ್ಯಗಳು ಇತಿಹಾಸ ಮತ್ತು ಪುರಾಣ ಪಾತ್ರಗಳನ್ನು ಹೊಂದಿದ್ದರೆ 1950 ರಿಂದ 1976 ರವರೆಗೆ ಅವರು ಬರೆದಿರುವ ನೂರಾರು ಬಿಡಿ ಕವಿತೆಗಳಲ್ಲಿ ಸಮಕಾಲೀನ ಸಮಾಜ ವಿಮರ್ಶೆ ಪ್ರಧಾನವಾದ ನೆಲೆಯಲ್ಲಿದೆ. ಅವರ ಕವಿತೆಗಳಲ್ಲಿ ಭಾವಗೀತೆಗಳು ಮತ್ತು ಮುಕ್ತಛಂದಸ್ಸಿನ ಸಮಾಜ ವಿಮರ್ಶೆಯ ಕವಿತೆಗಳು ಸೇರಿವೆ.
ಅವರ ಪ್ರಕಟಿತ ಕೃತಿಗಳು: ಸರಸ ವಿರಸ (ನಾಲ್ಕು ವಿನೋದ ಚಿತ್ರಗಳು), ಯೋಗ ಲಹರಿ (ಮೊದಲ ಭಿಕ್ಷುಣಿ, ಪುನರ್ಮಿಲನ, ಚಿತಾಗ್ನಿ ಎಂಬ ಮೂರು ಖಂಡಕಾವ್ಯಗಳು), ಕ್ಷಾತ್ರದರ್ಶನ (ಖಂಡಕಾವ್ಯ), ಶಿವಲೇಶ್ಯೆ (ಖಂಡಕಾವ್ಯ), ವಧೂ ವಸಂತಸೇನೆ, ಸಂಗ್ರಾಮ ಸಿಂಹ (ಐತಿಹಾಸಿಕ ಕಥನ), ನಾಗವರ್ಮನ ಕಾದಂಬರಿ (ಕಥಾವಸ್ತು ಸಂಗ್ರಹ), ಒಡ್ಡಿದ ಉರುಳು (ಕಾದಂಬರಿ), ವತ್ಸ ವಿಜಯ (ಯಕ್ಷಗಾನ ಕಥೆ), ದಾರಾ (ಐತಿಹಾಸಿಕ ಕಾದಂಬರಿ), ಬಿಡುಗಡೆಯ ನಾಂದಿ (ಐತಿಹಾಸಿಕ ಕಾದಂಬರಿ). ಸುಮಾರು ನಲುವತ್ತರಷ್ಟು ಲೇಖನಗಳು ಮತ್ತು ನೂರರಷ್ಟು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ (ಯುಗಾಂತರ, ಸುಬೋಧ, ಮೊಗವೀರ, ಪ್ರಜಾಮತ, ಸತ್ಯಾರ್ಥಿ, ಮಹಾವೀರ, ವೀಣಾ, ವಿಜಯ, ಜೈಹಿಂದ್, ಆದರ್ಶ, ಯುಗಪುರುಷ, ಸಾಹಿತ್ಯ ವಿಹಾರ, ರಾಯಭಾರಿ, ವಿನೋದ ಮೊದಲಾದುವು). ‘ಪರಾಶರ ಸತ್ಯ’, ‘ಪತನ ಪ್ರಾಯಶ್ಚಿತ’, ‘ಮಂತ್ರ ರಹಸ್ಯ’, ‘ಅಜ್ಞಾತ ಸಂಹಾರ’, ‘ಗುಪ್ತ ತೀರ್ಥಾಟನೆ’, ‘ವಿಪರ್ಯಾಸ ಸಂತಾನ’ ಈ ಆರು ದೃಶ್ಯ ಲಹರಿಗಳು, ಕೃತಿವಿಮರ್ಶೆಗಳು ಯುಗಪುರುಷ ಪತ್ರಿಕೆಯ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಅಪ್ರಕಟಿತ ಕೃತಿಗಳೂ ಇವೆ. ಎಲ್ಲ ದೊರೆತರ ಸಾವಿರ ಪುಟಗಳನ್ನು ಮೀರಬಹುದು.
ಅ.ಗೌ.ಕಿ. ಅವರ ‘ಒಡ್ಡಿದ ಉರುಳು’ (1957) ಎಂಬ ಕಾದಂಬರಿ ಆ ಕಾಲದಲ್ಲಿ ಬಹಳ ಪ್ರಸಿದ್ಧವಾಗಿತ್ತು. ಅದರಲ್ಲಿ ಅವರ ಆತ್ಮಕಥಾನಕದಂತಹ ಸನ್ನಿವೇಶಗಳು, ಬಡತನದ ಚಿತ್ರಣ, ಶೋಷಣೆಯ ಚಿತ್ರಣ ಇವುಗಳು ದಾಖಲಾಗಿವೆ.
ಅ.ಗೌ.ಕಿ.ಯವರ ಕಾವ್ಯಗಳು
ಪುನರ್ಮಿಲನ: 1933 ರಲ್ಲಿ ಆಗಿನ ಯುವ ಕವಿ ಕಯ್ಯಾರ ಕಿಞ್ಞಣ್ಣ ರೈಗಳು ಪುತ್ತೂರಿನಲ್ಲಿ ಕಾರಂತರು ನಡೆಸುತ್ತಿದ್ದ ನಾಡಹಬ್ಬದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ‘ಊರ್ಮಿಳಾ’ ಎಂಬ ಕವನವನ್ನು ಓದಿದರು. ಈ ಕವಿತೆಯನ್ನು ಆ ಮೇಲೆ ಕಯ್ಯಾರರ ಕವಿತಾಸಂಕಲನದಲ್ಲಿ ಓದಿದ ಅ. ಗೌ. ಕಿನ್ನಿಗೋಳಿಯವರು ಕಯ್ಯಾರರು ಎತ್ತಿದ ಪ್ರಶ್ನೆಗೆ ಉತ್ತರವೆಂಬಂತೆ ತಮ್ಮ ‘ಪುನರ್ಮಿಲನ’ ಸಣ್ಣಕಾವ್ಯವನ್ನು ಬರೆದರು. ಅದು ‘ಯುಗಪುರುಷ’ದಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ನಂತರ 1954 ರಲ್ಲಿ ಪ್ರಕಟವಾದ ‘ಯೋಗಲಹರಿ’ಯಲ್ಲಿ ಸೇರಿತು.
ಕಯ್ಯಾರ ಅವರು ತಮ್ಮ ಕವನದಲ್ಲಿ ಆದಿಕವಿ ವಾಲ್ಮೀಕಿಯನ್ನೇ ಪ್ರಶ್ನಿಸಿದ್ದರು – ಊರ್ಮಿಳೆಯ ಅಳಲಿಗೆ ಋಷಿ ಕವಿ ಗಮನ ಕೊಡಲಿಲ್ಲವಲ್ಲ ಎಂದು ಅಸಮಾಧಾನವನ್ನು ಸೂಚಿಸಿದ್ದರು. ಅ. ಗೌ. ಕಿನ್ನಿಗೋಳಿಯವರು ಊರ್ಮಿಳೆಯ ಅಳಲು, ಗಂಡಹೆಂಡತಿಯ ಪುನರ್ಮಿಲನವನ್ನು ತಮ್ಮ ಕಲ್ಪನೆಯಿಂದ ವರ್ಣಿಸಿದ್ದಾರೆ.
ಮೊದಲ ಭಿಕ್ಷುಣಿ
ಇದು ‘ಯೋಗಲಹರಿ’ ಯಲ್ಲಿರುವ ಮೂರು ಖಂಡಕಾವ್ಯಗಳಲ್ಲಿ ಒಂದು. (‘ಪುನರ್ಮಿಲನ’ ಮತ್ತು ‘ಚಿತಾಗ್ನಿ’ ಇನ್ನೆರಡು).
ಮಾಸ್ತಿಯವರ ‘ಯಶೋಧರಾ’ ನಾಟಕವನ್ನು ಓದಿ ಈ ಕಾವ್ಯವನ್ನು ಬರೆದುದಾಗಿ ಅ.ಗೌ.ಕಿ.ಯವರು ದಾಖಲಿಸಿದ್ದಾರೆ. ಸಿದ್ಧಾರ್ಥನು ಬುದ್ಧನಾದ ಬಳಿಕ ತನ್ನ ಹುಟ್ಟೂರಿಗೆ ಬಂದಿದ್ದಾಗ ಯಶೋಧರಾ ದೇವಿಯ ಅಂತಃಪುರಕ್ಕೆ ಹೋಗಿ ಭಿಕ್ಷೆಯನ್ನು ಸ್ವೀಕರಿಸಿದ್ದನಂತೆ. ಅವಳನ್ನು ಅವನು ಮೊದಲ ಭಿಕ್ಷುಣಿಯಾಗಿ ಸ್ವೀಕರಿಸಿದ್ದನಂತೆ. ಈ ಸನ್ನಿವೇಶವೇ ಈ ಕಾವ್ಯದ ವಸ್ತು. ದೇ. ಜವರೇಗೌಡರು ಈ ಕಾವ್ಯವನ್ನು ವಿಮರ್ಶಿಸುತ್ತಾ ಹೀಗೆ ಹೇಳಿದ್ದಾರೆ: ‘ಶ್ರೀ ಶ್ರೀನಿವಾಸರು ಈ ವಸ್ತುವನ್ನು ಬಳಸಿಕೊಂಡು ಲಲಿತ ಮನೋಹರವಾದ ನಾಟಕವನ್ನು ರಚಿಸಿದ್ದಾರೆ. ಆ ನಾಟಕವನ್ನು ಬಳಸಿಕೊಂಡಿದ್ದರೂ ಆ ಸಂದರ್ಭವನ್ನು ತಾವು ಕಂಡಂತೆ ಕಿನ್ನಿಗೋಳಿ ಈ ಖಂಡಕಾವ್ಯವನ್ನು ರಚಿಸಿರುವುದರಿಂದ ಹಾಲು ಸಕ್ಕರೆ ಸೇರಿ ಹೊಸ ರುಚಿ ಉಂಟಾಗುವಂತೆ ಇದರಲ್ಲಿ ನೂತನ ಶಕ್ತಿ ಸಂಚಾರವಾಗಿದೆಯೆಂದು ಹೇಳಬಹುದು.’ (ನೂರೆಂಟು ಪುಸ್ತಕಗಳು).
ಊರ್ಮಿಳೆಯ ಬದುಕು ಕೂಡ ಯಶೋಧರೆಯ ಬದುಕಿನಂತೆಯೆ ಇತ್ತು. ಲಕ್ಷ್ಮಣನ ಪುನರಾಗಮನದಿಂದ ಅವಳ ಯೋಗಿನಿಯ ಬದುಕು ಮುಕ್ತಾಯವಾಗಿ ‘ಪುನರ್ಮಿಲನ’ ಸಂಭವಿಸುತ್ತದೆ. ಇಲ್ಲಿ ಯಶೋಧರೆ ಪತಿಯನ್ನಗಲಿ ಕಾವಿ ವಸನವನ್ನುಟ್ಟು ಯೋಗಿನಿಯಂತೆ ಕಾದಿದ್ದವಳು ನಂತರವೂ ಯೋಗಿನಿಯೇ (ಭಿಕ್ಷುಣಿ) ಆಗಿ ಪತಿಯ ಪಥದಲ್ಲಿ ನಡೆಯುತ್ತಾಳೆ.
ಚಿತಾಗ್ನಿ
ಈ ಕಾವ್ಯವನ್ನು ಬರೆಯಲು ತಮಗೆ ಕಡೆಂಗೋಡ್ಲು ಅವರ ‘ಮಾದ್ರಿಯ ಚಿತೆ’ ಹೇಗೆ ಪ್ರೇರಣೆ ನೀಡಿದೆ ಎನ್ನುವುದನ್ನು ಅ.ಗೌ.ಕಿ. ಅವರು ದಾಖಲಿಸಿದ್ದಾರೆ. ಕಡೆಂಗೋಡ್ಲು ಶಂಕರ ಭಟ್ಟರ ‘ಮಾದ್ರಿಯ ಚಿತೆ’ಯ ಕೊನೆ ಬಹಳ ಹ್ರಸ್ವವಾಯಿತೆಂಬ ಅಭಿಪ್ರಾಯ ಹೆಚ್ಚಿನ ಓದುಗರಿಗೆ ಉಂಟಾಗುವಂತಿದೆ. ಯಾಕೆಂದರೆ ಪಾಂಡುವಿನ ಮರಣ, ಮಾದ್ರಿಯ ಸಹಗಮನ ಇವುಗಳನ್ನು ಕವಿ ಒಂದೊಂದೇ ಪದ್ಯಗಳಲ್ಲಿ ಹೇಳಿ ಮುಗಿಸುತ್ತಾರೆ. ಅವರ ಗಮನವಿರುವುದು ಕಥೆ ಹೇಳುವುದರಲ್ಲಲ್ಲ, ಪಾಂಡು ಮತ್ತು ಮಾದ್ರಿಯರ ಆತಂಕ, ತುಮುಲ, ಒಳತೋಟಿಗಳನ್ನು ಚಿತ್ರಿಸುವುದರಲ್ಲಿ. ಅವರ ಕಾವ್ಯದ ಹೊಸತನ ಮತ್ತು ಯಶಸ್ಸು ಇದೇ ಆಗಿದೆ.
ಅ. ಗೌ. ಕಿನ್ನಿಗೋಳಿಯವರು ಮಾದ್ರಿ ಚಿತೆಯೇರುವುದನ್ನು ವಿಸ್ತಾರವಾಗಿ ಚಿತ್ರಿಸಿದ್ದಾರೆ. ಈ ಕಾವ್ಯ ಓದುಗರಿಗೆ ರಸಾನುಭೂತಿ ನೀಡಿ ಯಶಸ್ವಿಯಾಗಿದೆ ಎಂದು ದೇ. ಜವರೇ ಗೌಡರು ಮತ್ತು ಕಯ್ಯಾರ ಕಿಞ್ಞಣ್ಣ ರೈಗಳು ಇದನ್ನು ಶ್ಲಾಘಿಸಿದ್ದಾರೆ.
ಅ.ಗೌ.ಕಿ. ಅವರು ಮೂವರು ಸ್ತ್ರೀಯರ (ಊರ್ಮಿಳೆ, ಯಶೋಧರೆ, ಮಾದ್ರಿ) ಅಂತರಂಗದ ತಾಪ, ತಾಕಲಾಟ ಮತ್ತು ಔನ್ನತ್ಯಗಳನ್ನು ಭಾವಪೂರ್ಣವಾಗಿ ಚಿತ್ರಿಸಿದ್ದಾರೆ.
ಕ್ಷಾತ್ರ ದರ್ಶನ
‘ಕ್ಷಾತ್ರ ದರ್ಶನ’ ಖಂಡ ಕಾವ್ಯವು ಅ.ಗೌ.ಕಿ. ಅವರು ಪುರಾಣ ಕಥೆಯನ್ನಾಧರಿಸಿ ಮರುಸೃಷ್ಟಿಸಿದ ಮತ್ತೊಂದು ಕಾವ್ಯ. ಜೈಮಿನಿ ಭಾರತದ ಚಿತ್ರಾಂಗದಾ ಮತ್ತು ಬಭ್ರುವಾಹನರ ಕಥೆ ಮತ್ತು ತ. ರಾ. ಸು. ಅವರ ‘ಜ್ವಾಲೆ’ ಎಂಬ ನಾಟಕದ ಜ್ವಾಲೆ ಪಾತ್ರದ ಕ್ಷಾತ್ರ ವೈಭವಗಳನ್ನು ತಮ್ಮದೇ ಆದ ರೀತಿಯಲ್ಲಿ ಸಂಯೋಜಿಸಿ ಸೃಷ್ಟಿಸಿದ ಹೊಸಬಗೆಯ ಕಾವ್ಯ. ‘ಕ್ಷಾತ್ರ ದರ್ಶನ’ 1367 ಸಾಲುಗಳ, ಎಂಟು ಭಾಗಗಳ (ಭಾಗಗಳನ್ನು ‘ನೋಟ’ ಎಂದು ಕರೆಯಲಾಗಿದೆ) ಮಧ್ಯಮ ಗಾತ್ರದ ಕಾವ್ಯ. ಮಿಶ್ರಛಂದದಲ್ಲಿದೆ. ಗೋವಿಂದ ಪೈಗಳು ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಇದರ ಭಾಗಗಳು ಪಠ್ಯ ಪುಸ್ತಕಗಳಲ್ಲಿ ಸೇರುತ್ತಿದ್ದವು. ಮದ್ರಾಸಿನ ಸ್ಕೂಲ್ ಬುಕ್ ಅಂಡ್ ಲಿಟರೇಚರ್ ಸೊಸೈಟಿಯು ಈ ಕಾವ್ಯಕ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಅರ್ಜುನ ಚಿತ್ರಾಂಗದೆಯಲ್ಲಿ ಜನಿಸಿದ ಮಗ ಬಭ್ರುವಾಹನನ ಜತೆಗೆ ಯುದ್ಧ ಮಾಡುವ ಸನ್ನಿವೇಶದಲ್ಲಿ ಬಭ್ರುವಾಹನನ ಬಾಣದ ಹೊಡೆತಕ್ಕೆ ಸಿಕ್ಕಿ ಅರ್ಜುನ ಧರೆಗೆ ಉರುಳುತ್ತಾನೆ. ಅವನ ಪ್ರಾಣ ಉಳಿಸಲು ರಕ್ತದಾನದ ಅಗತ್ಯ ಇದೆಯೆಂದು ವೈದರು ಹೇಳುವುದು ಅ. ಗೌ. ಕಿ.ಯವರ ನವೀನ ಕಲ್ಪನೆಯಾಗಿದೆ. ಚಿತ್ರಾಂಗದೆ ಅವನಿಗೆ ರಕ್ತದಾನ ನೀಡಿ ಅವನ ಪ್ರಾಣ ಉಳಿಸುತ್ತಾಳೆ.
ಚಿತ್ರಾಂಗದೆಯು ತನ್ನ ರಕ್ತವನ್ನು ಅರ್ಜುನನಿಗೆ ಕೊಟ್ಟು, ತನ್ನ ಪ್ರಾಣವನ್ನು ತ್ಯಾಗ ಮಾಡುತ್ತಾಳೆ. ಅವಳನ್ನು ಚಿತೆಗೆ ಏರಿಸಲು ಸಿದ್ಧತೆ ನಡೆದಾಗ, ತನ್ನ ದೇಶದ ಸ್ವಾತಂತ್ರ÷್ಯ ಹರಣವಾದುದಕ್ಕೆ ಸೇಡಿನಿಂದ ಉರಿಯುತ್ತಿದ್ದ ನೀಲಧ್ವಜನ ರಾಣಿ ಜ್ವಾಲೆಯು ಅಲ್ಲಿಗೆ ಬರುತ್ತಾಳೆ. ಅರ್ಜುನನ ಮೇಲಿನ ಸೇಡನ್ನು ಬಿಟ್ಟು ತಾನೂ ಚಿತ್ರಾಂಗದೆಯ ಚಿತೆಯನ್ನು ಏರಿ ಪ್ರಾಣತ್ಯಾಗ ಮಾಡುತ್ತಾಳೆ.
ಶಿವಲೇಶ್ಯೆ
ಅ. ಗೌ. ಕಿನ್ನಿಗೋಳಿ ಅವರ ಇನ್ನೊಂದು ಪ್ರಸಿದ್ಧ ಖಂಡಕಾವ್ಯ ‘ಶಿವಲೇಶ್ಯೆ’. ಇದೂ ಮಿಶ್ರಛಂದಸ್ಸಿನಲ್ಲಿದೆ. ಜೋಡುಮಠ ವಾಮನ ಭಟ್ಟರ ‘ದೇಶವೀರ ಶಿವಾಜಿ’ (1948) ಎಂಬ ಕೃತಿಯನ್ನಾಧರಿಸಿ, ಅದರಲ್ಲಿ ನಿರೂಪಿತವಾಗಿರುವ ಶಿವಾಜಿಯ ಹಲವು ಸಾಹಸಗಳಲ್ಲಿ ಒಂದನ್ನು ಆರಿಸಿಕೊಂಡು ಅ.ಗೌ.ಕಿ. ಈ ಖಂಡಕಾವ್ಯವನ್ನು ರಚಿಸಿದ್ದಾರೆ. ಅಫ್ಜಲ್ ಖಾನನು ಶಿವಾಜಿಯನ್ನು ಹಿಡಿದು ತರುವೆನೆಂದು ಪ್ರತಿಜ್ಞೆ ಮಾಡಿ ಬರುತ್ತಾನೆ.
ಐತಿಹಾಸಿಕ ಕಾದಂಬರಿಗಳನ್ನೂ ಅ.ಗೌ.ಕಿ. ಅವರು ಬರೆದಿದ್ದು ಅವು ಪ್ರಕಟವಾಗಿವೆ - ‘ದಾರಾ’ (1959. ಯುಗಪುರುಷ, ಕಿನ್ನಿಗೋಳಿ) ಮತ್ತು ‘ಬಿಡುಗಡೆಯ ನಾಂದಿ’ (1965. ವಿವೇಕ ಸಾಹಿತ್ಯ ಮಾಲೆ, ಮಂಗಳೂರು). ‘ಸಂಗ್ರಾಮಸಿಂಹ’ ಎನ್ನುವ ಐತಿಹಾಸಿಕ ಕಥನ 1955 ರಲ್ಲಿ ‘ಪ್ರಭಾತ ಕಾರ್ಯಾಲಯ’ದಿಂದ ಪ್ರಕಟವಾಗಿತ್ತು. ‘ಶ್ರೀರಂಗ ರಾಯ’ ಮತ್ತು ‘ಸತ್ಯಾಶ್ರಯ ಕುಮಾರ’ ಎಂಬ ಎರಡು ಅಪ್ರಕಟಿತ ಐತಿಹಾಸಿಕ ಕಾದಂಬರಿಗಳು ಹಸ್ತಪ್ರತಿಯ ರೂಪದಲ್ಲಿದ್ದವು.
ಬಿಡಿ ಕವಿತೆಗಳು
ಅ.ಗೌ.ಕಿನ್ನಿಗೋಳಿಯವರು ತಮ್ಮ ಬಿಡಿ ಕವಿತೆಗಳಲ್ಲಿ ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆ, ಸಾಮಾಜಿಕ ಅಸಮಾನತೆಯಿಂದಾಗಿ ಕೆಳಜಾತಿಗಳೆನಿಸಿಕೊಂಡವರ ಅಸಹಾಯಕತೆ, ಶ್ರೀಮಂತ ವರ್ಗ- ಬಡವರ ನಡುವಿನ ಆರ್ಥಿಕ ಕಂದಕ ಮತ್ತು ಬಡಜನರ ಕಷ್ಟಗಳು ಇವುಗಳನ್ನೆಲ್ಲ ಚಿತ್ರಿಸಿದ್ದಾರೆ. ಆ ರೀತಿ ಸಮಾಜಪರವಾಗಿ ಬರೆಯಲಾರಂಭಿಸಿದ್ದ ಕಯ್ಯಾರ ಕಿಞ್ಞಣ್ಣ ರೈಗಳಿಗಿಂತ ಭಿನ್ನವಾದ ನೆಲೆಯಲ್ಲಿ ನಿಂತು ಅ.ಗೌ.ಕಿ. ಬರೆದರು. ರೈಗಳು ಕೂಡ ಸ್ವಾತಂತ್ರ್ಯೋತ್ತರ ಕಾಲದಲ್ಲಿ ದೇಶದ ಆಂತರಿಕ ಸಮಸ್ಯೆಗಳನ್ನು ಅವಲೋಕಿಸುತ್ತ ಮೇಲುಕೀಳು, ಶೋಷಣೆ ಇತ್ಯಾದಿಗಳನ್ನು ಖಂಡಿಸುವ ಕವಿತೆಗಳನ್ನು ಬರೆದರು. ಅವರು ಉದಾರ ಮಾನವತಾವಾದದ ನೆಲೆಯಿಂದ ಕ್ರಾಂತಿಕಾರಕವಾದ ಬದಲಾವಣೆಗಳಾಗಬೇಕೆಂಬ ಸೂಚನೆಯನ್ನು ಕೊಟ್ಟಿದ್ದರು. ಅ.ಗೌ.ಕಿ. ನೊಂದವರ ಪ್ರತಿನಿಧಿಯಾಗಿ ಕವಿತೆಗಳನ್ನು ಬರೆದರು. ಅವರ ಒಂದು ಕವಿತೆಯ ಸಾಲು ಹೀಗಿದೆ: “ದಿನ ದಿನ ಹುಟ್ಟುತ ಸಾಯುವ ಬಡವರ ಬಾಳಿನ ಭೀಷಣ ಬನ್ನವನ್ನು ಕಂಡುಂಡಲ್ಲದೆ ಅರಿಯದು”.
ಅವರ, ‘ಕರುಳಿನ ಕಿಚ್ಚು’, ‘ಇವಕೆಂದಿಗೆ ಕೊನೆ’, ‘ಅದೋ ಅಲ್ಲಿ ಇದೋ ಇಲ್ಲಿ’, ‘ಇಲ್ಲದ ಬದುಕು’ ಇವು ಇಂತಹ ಕೆಲವು ಕವಿತೆಗಳು. ‘ಕರುಳಿನ ಕಿಚ್ಚು’ ಕವನದ ಸಾಲುಗಳಿವು:
ಕರುಳಿನ ಕಿಚ್ಚೇ ದಳ್ಳಿಸುತಿಹುದೆನೆ
ಏನಚ್ಚರಿಯೋ, ಘನತೆಗಳು
ಧನ ದರ್ಪಂಗಳು ಹಿರಿ ಹೆಮ್ಮೆಗಳು
ಉರಿದವು ಶೋಷಕ ವರ್ಗಗಳು.
ಇಲ್ಲಿ ಕ್ರಾಂತಿಯ ಆಶಯವನ್ನು ಕಾಣಬಹುದು. ‘ಇವಕೆಂದಿಗೆ ಕೊನೆ’ ಕವಿತೆಯ ಸಾಲುಗಳಿವು:
ನೋಡಿರೆ, ಹಿಡಿ ಕೂಳಿಗೆ ದಿಕ್ಕಿಲ್ಲದ
ಜೀವದ ಎಲುಬಿನ ಗೂಡುಗಳ
ಸೀತಾ ಸಾವಿತ್ರಿಯರವತರಿಸಿದ
ನಾಡಿನ ಹೆಂಗಳ ಮಾನಗಳ
ಕಾಮಧೇನುವನು ಕರೆದಿಹ ನಾಡಿಗೆ
ಕವಿದಿದೆ ಹಸಿವೆಯ ಮೂರ್ಛನೆಯು
ಮಹಿಮಾನ್ವಿತವೀ ನಾಡಿನ ಸಾಸಿರ
ಹೆಂಗಳು ಅರೆನಗ್ನ.
ಅ.ಗೌ.ಕಿ. ಅವರಿಗೆ ಆರ್ಥಿಕ ಸಮಸ್ಯೆ, ಸಾಂಸಾರಿಕ ತೊಂದರೆಗಳು ಮತ್ತು ಸಾಮಾಜಿಕ ನೆಲೆಯಲ್ಲಿ ಮೇಲುವರ್ಗದವರ ಅಹಂಕಾರ-ಅಸಹನೆಗಳಿಂದಾಗಿ ಅನುಭವಿಸಿದ ಅವಮಾನಗಳು ‘ತಾಪತ್ರಯ’ಗಳಾಗಿ ಕಾಡಿದವು. ಆ ನಡುವೆಯೂ ಅವರು ಸಾಹಿತ್ಯದಲ್ಲಿ ಸಾಂತ್ವನವನ್ನು ಕಂಡುಕೊಂಡು, ಉಳಿಯುವಂತಹ ಕೃತಿಗಳನ್ನು ರಚಿಸಿರುವುದು ಶ್ಲಾಘನೀಯವಾಗಿದೆ. ಅವರು ಕೊನೆಕೊನೆಗೆ ಹೆಚ್ಚುಹೆಚ್ಚು ಅಂತರ್ಮುಖಿಗಳಾಗಿದ್ದರಂತೆ.
ಡಾ. ಕೆ. ಚಿನ್ನಪ್ಪ ಗೌಡರು ತಮ್ಮ ಎಂ.ಎ. ಸಂಪ್ರಬಂಧಕ್ಕಾಗಿ ಅ.ಗೌ.ಕಿನ್ನಿಗೋಳಿಯವರ ಬಗ್ಗೆ ಅಧ್ಯಯನ ನಡೆಸಿದ್ದರು. ಕಾಂತಾವರ ಕನ್ನಡ ಸಂಘಕ್ಕಾಗಿ 2009 ರಲ್ಲಿ ‘ಹಿರಿಯ ಕವಿ ಅ. ಗೌ. ಕಿನ್ನಿಗೋಳಿ’ ಎಂಬ ಪುಸ್ತಕವನ್ನು ಬರೆದುಕೊಟ್ಟಿದ್ದರು. ಕಿನ್ನಿಗೋಳಿ ಸಮೀಪದ ಪುನರೂರಿನವರಾದ ಹರಿಕೃಷ್ಣ ಪುನರೂರು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಅ. ಗೌ. ಕಿನ್ನಿಗೋಳಿ ಅವರ ಎಲ್ಲ ಅಲಭ್ಯ ಖಂಡಕಾವ್ಯಗಳನ್ನು ‘ಕಾವ್ಯ ಲಹರಿ’ (ಕುವೆಂಪು ಶತಮಾನೋತ್ಸವ ಮಾಲಿಕೆ - 2004) ಎಂಬ ಒಂದೇ ಸಂಪುಟದಲ್ಲಿ ಪರಿಷತ್ತಿನ ವತಿಯಿಂದ ಮರುಮುದ್ರಿಸಿದರು. ಅ.ಗೌ.ಕಿನ್ನಿಗೋಳಿಯವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಕೃತಿ ಪ್ರಕಟವಾಗಲಿ ಎನ್ನುವುದು ಹಾರೈಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.