ಮೊಮ್ಮಗಳನ್ನು ದೇವದಾಸಿ ವಿಮುಕ್ತಳಾಗಿ ಮಾಡಿ, ಕೃಷಿ ಕಾಯಕ ಮಾಡುತ್ತಾ ದೇವದಾಸಿ ತಾಯಂದಿರ ಪ್ರತಿನಿಧಿಯಂತಿರುವ ನಾಗಮ್ಮಜ್ಜಿಯ ಕೃಷಿ ಮತ್ತು ಬದುಕಿನ ಪ್ರೀತಿಯನ್ನು ಗುರುತಿಸಿ ರಾಜ್ಯ ಸರ್ಕಾರ ‘ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ’ ನೀಡಿದೆ
ತನ್ನ ಹದಿನಾಲ್ಕನೆ ವಯಸ್ಸಿಗೇ ದೇವದಾಸಿ ಕೂಪಕ್ಕೆ ಬಿದ್ದ ನಾಗಮ್ಮಜ್ಜಿಗೆ ಈಗ 84 ವರ್ಷ. ಈಕೆಯ ಅಜ್ಜಿ, ಅಮ್ಮನೂ ದೇವದಾಸಿಯಾಗಿ ಬದುಕು ಸವೆಸಿದವರೇ. 70 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ತಮ್ಮೂರು ಇಂಗಳಗಿಯಲ್ಲಿ ನಡೆದ ಘಟನೆಗಳು ಇವರ ನೆನಪಿನ ಕೋಶದಲ್ಲಿ ಹಾಗೇ ಇವೆ.
ನಾಗಮ್ಮ ದೊಡ್ಡಮಗಳನ್ನು ಅನಿಷ್ಟ ಪದ್ಧತಿಗೆ ದೂಡಬೇಕಾದ ಒತ್ತಡವನ್ನು ಮೀರಲಾಗಲಿಲ್ಲ. ಸಂಪ್ರದಾಯವನ್ನು ಮುಂದುವರಿಸುವ ಭಾರಕ್ಕೆ ಮಗಳೂ ಹೆಗಲು ನೀಡಬೇಕಾಯಿತು. ಆದರೆ ಮೊಮ್ಮಗಳ ಕಾಲಕ್ಕೆ ಧೈರ್ಯ ಬಂದಿತ್ತು. ಕಾನೂನಿನ ಬೆಂಬಲ, ಸಂಘ-ಸಂಸ್ಥೆಗಳ ತಿಳಿವಳಿಕೆಗಳಿಂದ ನೂರಾರು ವರ್ಷಗಳ ಸರಪಳಿಯನ್ನು ತುಂಡರಿಸಿದರು. ಮೊಮ್ಮಗಳು ಲಕ್ಷ್ಮಿ ದೇವದಾಸಿ ಹಣೆಪಟ್ಟಿಗೆ ಬದಲಾಗಿ ಈಗ ತನ್ನದೇ ಸಮುದಾಯಕ್ಕೆ ಸುಸ್ಥಿರ ಕೃಷಿ ಮಾಹಿತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.
ಮೊಮ್ಮಗಳನ್ನು ದೇವದಾಸಿಯನ್ನಾಗಿ ಮಾಡದಿರುವ ತೀರ್ಮಾನದಿಂದಾಗಿ ಗ್ರಾಮದಲ್ಲಿ ಕಿರಿಕಿರಿ ಶುರುವಾಯಿತು. ಆಗ ಇಂಗಳಗಿಯನ್ನು ತೊರೆದು ಹೊಸಪೇಟೆ ಬಳಿಯ ಕಾರಿಗನೂರಿಗೆ ಬಂದರು. ಅಲ್ಲಿನ ಬೀಳು ಜಮೀನನ್ನು ಅಭಿವೃದ್ಧಿಪಡಿಸಿ ಬೇಸಾಯ ಮಾಡತೊಡಗಿದರು. ಆದರೆ ಕೆಲವು ವರ್ಷಗಳಲ್ಲಿ ಅರಣ್ಯ ಇಲಾಖೆಯು ಅದು ಸರ್ಕಾರದ ಭೂಮಿ ಎಂದು ವಶಪಡಿಸಿಕೊಂಡು ನೆಡುತೋಪು ಮಾಡಿತು. ಅಲ್ಲಿಂದ ಹೊರಬಿದ್ದ ನಾಗಮ್ಮನ ಕುಟುಂಬ ಹೊಸಕಾರಿಗನೂರಿನಲ್ಲಿ ತನ್ನ ಅಮ್ಮನಿಗೆ ಬಂದಿದ್ದ ಎರಡು ಎಕರೆ ಜಮೀನಿನಲ್ಲಿ ಕೃಷಿ ಆರಂಭಿಸಿತು. ಇಂದಿಗೂ ಅದೇ ಅವರ ಕಾಯಕ ಭೂಮಿ. ಮಕ್ಕಳು, ಮೊಮ್ಮಕ್ಕಳೆಲ್ಲಾ ಸೇರಿ 12 ಜನರ ಕುಟುಂಬವನ್ನು ಕೃಷಿಯೇ ಪೊರೆಯುತ್ತಿದೆ.
ಮಳೆ ಆಶ್ರಯದ ಈ ಮಸಾರಿ ಜಮೀನಿನಲ್ಲಿ ಉಳುಮೆಗೆ ಯೋಗ್ಯವಾಗಿರುವುದು ಒಂದೂವರೆ ಎಕರೆ ಮಾತ್ರ. ಉಳಿದಿದ್ದು ಕಲ್ಲುಬಂಡೆಗಳ ಕುರುಚಲು. ಇದರಲ್ಲಿ ಅಕ್ಕಡಿ ಬೇಸಾಯ ಮಾಡುವ ಮೂಲಕ ಮನೆಗೆ ಬೇಕಾದ ಆಹಾರ ಧಾನ್ಯಗಳನ್ನು ಬೆಳೆದುಕೊಳ್ಳುತ್ತಾರೆ. ಜೋಳ, ಸಜ್ಜೆ, ತೊಗರಿ, ನವಣೆ, ಊದಲು, ಎಳ್ಳು, ಹುರುಳಿ–ಹೀಗೆ ಇವರ ಹೊಲ ವೈವಿಧ್ಯಮಯ ಬೆಳೆಗಳ ತಾಣ. ಎರಡು ಸಾಲು ತೊಗರಿ, ನಾಲ್ಕು ಸಾಲು ಸಿರಿಧಾನ್ಯ, ಮತ್ತೆ ತೊಗರಿ ಹೀಗಿರುತ್ತದೆ ಇವರ ಅಕ್ಕಡಿ ವಿನ್ಯಾಸ. ಬದುಗಳು ಮತ್ತು ಹೊಲದ ತೆಗ್ಗುಗಳಲ್ಲಿ ತರಕಾರಿಗಳನ್ನೂ ಹಾಕುತ್ತಾರೆ. ಹೊಲದ ಬಿತ್ತನೆ, ಕಳೆ, ಕಟಾವು, ರಾಶಿ ಸಮಯ ಬಂದಾಗ ಮನೆಯ ಎಲ್ಲರೂ ಕೈಜೋಡಿಸಿದರೆ ಫಟಾಫಟ್ ಮುಗಿದುಹೋಗುತ್ತವೆ.
ಕೆಲಸ ಇರಲಿ, ಬಿಡಲಿ ನಾಗಮ್ಮಜ್ಜಿ ಪ್ರತಿದಿನ ಹೊಲಕ್ಕೆ ಹೋಗುತ್ತಾರೆ. ಮನೆಯಿಂದ ಎರಡು ಕಿಲೋಮೀಟರ್ ದೂರದ ಹೊಲಕ್ಕೆ ಅಡ್ಡಾಡಲು ಯಾವುದೇ ಆಯಾಸವಿಲ್ಲ. ಬೆಳೆಗೆ ದಾಳಿ ಮಾಡುವ ಹಕ್ಕಿಗಳನ್ನು ಓಡಿಸುತ್ತಲೋ, ಕಳೆ ಕೀಳುತ್ತಲೋ ಹೊತ್ತು ಮುಳುಗಿಸುತ್ತಾರೆ.
ಐದಾರು ವರ್ಷಗಳಿಂದ ಹೊಸಪೇಟೆಯ ಸಖಿ ಸಂಸ್ಥೆ ಇವರಿಗೆ ಬೆಂಬಲವಾಗಿ ನಿಂತಿದೆ. ಈ ಭಾಗದ ಗಣಿಬಾಧಿತ ಗ್ರಾಮಗಳಲ್ಲಿ ಹಾಗೂ ವಿಮುಕ್ತ ದೇವದಾಸಿ ಕುಟುಂಬಗಳಿಗೆ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಸಖಿ ನಾಗಮ್ಮಜ್ಜಿಯ ಭೂಮಿ ಅಭಿವೃದ್ಧಿಗೊಳಿಸಲು, ಸುಸ್ಥಿರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತಿದೆ. ಸಂಸ್ಥೆಯು ಮೊಮ್ಮಗಳು ಲಕ್ಷ್ಮಿಗೆ ಉದ್ಯೋಗ ನೀಡಿದ್ದು ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿರುವುದು ಸುಳ್ಳಲ್ಲ. ಸಖಿ ವಿವಿಧ ಬಿತ್ತನೆ ಬೀಜಗಳನ್ನು ನೀಡಿದ ಪರಿಣಾಮ ಮೊದಲಿಗಿಂತ ಹೆಚ್ಚು ವೈವಿಧ್ಯ ಬೆಳೆಗಳು ಇವರ ಹೊಲಕ್ಕೆ ಸೇರ್ಪಡೆಯಾಗಿವೆ. ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಾವಯವ ಗೊಬ್ಬರಗಳು, ಜೈವಿಕ ಕೀಟ ಮತ್ತು ರೋಗನಾಶಕಗಳ ಬಳಕೆಯಿಂದ ವೆಚ್ಚವೂ ಕಡಿಮೆಯಾಗಿ ವಿಷಮುಕ್ತ ಕೃಷಿಯತ್ತ ಹೊರಳುತ್ತಿದ್ದಾರೆ.
ಬಾಲ್ಯದಲ್ಲಿ ಅಮ್ಮ ಹಾಗೂ ಇತರರು ಅನುಸರಿಸುತ್ತಿದ್ದ ಹಲವು ಕೃಷಿ ಪದ್ಧತಿಗಳು ಈಗಲೂ ಇವರ ನೆನಪಿನಲ್ಲಿವೆ. ಉದಾಹರಣೆಗೆ ಮೆಣಸಿನಕಾಯಿಗೆ ಹುಳ ಬಿದ್ದಾಗ ಕೆಂಪು ಮಣ್ಣನ್ನು ನೀರಿನಲ್ಲಿ ಕಲಸಿಕೊಂಡು ಗಿಡಗಳ ಮೇಲೆ ಎರಚುತ್ತಿದ್ದರಂತೆ. ಇದರಿಂದ ಹುಳ ಸಾಯುತ್ತಿದ್ದವು. ಅಲ್ಲದೆ ತೊಗರಿ ಗಿಡಕ್ಕೆ ಹುಳ ಬಿದ್ದಾಗ ಸುಣ್ಣದ ಪುಡಿಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿಕೊಂಡು ಚಿಮುಕಿಸುತ್ತಿದ್ದ ಪದ್ಧತಿಯನ್ನು ನೆನಪಿಸಿಕೊಳ್ಳುತ್ತಾರೆ. ಇಂತಹ ಹತ್ತಾರು ಕೃಷಿ ವಿಧಾನಗಳ ಕಣಜವೇ ಇವರಲ್ಲಿದೆ. ಈ ಜ್ಞಾನವನ್ನು ಎಳೆಯರಿಗೆ ದಾಟಿಸಲು ಮತ್ತು ದಾಖಲಿಸಲು ಸಖಿ ಪ್ರಯತ್ನಿಸುತ್ತಿದೆ.
‘ಅಲಕ್ಷಿತ ಕುಟುಂಬಗಳ ಬದುಕಿನ ಪ್ರೀತಿ ದೊಡ್ಡದು. ಕೃಷಿ ಜ್ಞಾನ ಅಗಾಧವಾದುದು. ಇವರ ಚರಿತ್ರೆಯನ್ನು ಮುಂದಿನ ತಲೆಮಾರುಗಳಿಗೆ ಅರ್ಥ ಮಾಡಿಸುವ ಪುಟ್ಟ ಪ್ರಯತ್ನದಲ್ಲಿ ನಾವಿದ್ದೇವೆ’ ಎನ್ನುತ್ತಾರೆ ಸಖಿ ಸಂಸ್ಥೆಯ ಮುಖ್ಯಸ್ಥೆ ಎಂ. ಭಾಗ್ಯಲಕ್ಷ್ಮಿ.
‘ಈಗ ಯಾರ್ ತಂಟಿಲ್ಲ, ತಗಾದಿಲ್ಲ. ನಮ್ ದುಡಿಮೆ ನಾವ್ ಮಾಡ್ತೀವಿ ಜೀವ್ಣ ನಡೆಸ್ತಿವಿ. ನಮ್ಮಮ್ಮನ್ನ ನೂರಾ ನಾಕ್ ವರ್ಷ ಜ್ವಾಪಾನ ಮಾಡಿದ್ದೆ, ಹಂಗೇ ಈ ಭೂಮಿನೂ ಜ್ವಾಪಾನ ಮಾಡಿವ್ನಿ’ ಎನ್ನುವ ನಾಲ್ಕು ಮಾತುಗಳಲ್ಲಿ ನಾಗಮ್ಮನ ಎಂಟೂವರೆ ದಶಕಗಳ ಬದುಕಿನ ಸಾರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.