ಜಗಮಗಿಸುವ ಬೆಳಕಿನಲ್ಲಿ, ಕಲಾವಿದರು ಭಾರತದ ಸಾಂಸ್ಕೃತಿಕ ಲೋಕ ಅನಾವರಣಗೊಳಿಸಿದರೆ, ಯುವ ವಾಸ್ತು ಶಿಲ್ಪಿಗಳು, ಒಳಾಂಗಣ ವಿನ್ಯಾಸಕಾರರು, ಸ್ಥಳೀಯ ಪರಿಸರ, ಸಮುದಾಯಗಳ ಸುಸ್ಥಿರ ಬದುಕಿಗಾಗಿ ರೂಪಿಸಿರುವ 'ಯೋಜನೆ' ಗಳನ್ನು ತೆರೆದಿಟ್ಟರು. ಸಭಿಕರು ಚಪ್ಪಾಳೆ ತಟ್ಟಿದರು. ಇದರ ನಡುವೆ ಯುವ ಸಾಧಕ- ಸಾಧಕಿಯರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದರು!
ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್‌ನಲ್ಲಿ ಕಳೆದ ವಾರ(ಜುಲೈ 5) ನಿಪ್ಪಾನ್ ಪೇಂಟ್ ಆಯೋಜಿಸಿದ್ದ ಏಷ್ಯಾ ಯಂಗ್ ಡಿಸೈನರ್ ಅವಾರ್ಡ್ 2023-24 (AIDA 2024) ನ ಅಂತಿಮ ಸುತ್ತಿನ ಆಯ್ಕೆ(ಫಿನಾಲೆ) ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಸಂಭ್ರಮದ ತುಣಕುಗಳಿವು.
ನಿಪ್ಪಾನ್ ಪೇಂಟ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಭಾಗವಾಗಿರುವ 'ಐಡಾ ಅವಾರ್ಡ್' 2008ರಲ್ಲಿ ಆರಂಭವಾಯಿತು. ನಿರ್ದಿಷ್ಟ ಥೀಮ್‌ನೊಂದಿಗೆ ಪ್ರತಿ ವರ್ಷ ಬೇರೆ ಬೇರೆ ದೇಶಗಳಲ್ಲಿ ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ವರ್ಷದ ಫಿನಾಲೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಚೆನ್ನೈನಲ್ಲಿ ಆಯೋಜಿಸಲಾಗಿತ್ತು. ಈ ವರ್ಷದ ಥೀಮ್ 'CONVERGE: Championing Purposeful Designs'.
17 ರಾಷ್ಟ್ರಗಳ ಫೈನಲಿಸ್ಟ್‌ಗಳು
ಯುವ ವಾಸ್ತುಶಿಲ್ಪಿಗಳು ಹಾಗೂ ಒಳಾಂಗಣ ವಿನ್ಯಾಸಕಾರರನ್ನು ಉತ್ತೇಜಿಸುವ ‘ಐಡಾ ಪ್ರಶಸ್ತಿ’ಗಾಗಿ ಈ ವರ್ಷ ಭಾರತ, ಇಡೋನೇಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಆರು ಸಾವಿರ ಅರ್ಜಿ ಸಲ್ಲಿಕೆಯಾ ಗಿದ್ದವು. ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಆರ್.ವಿ. ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್‌ನ ಎರೊಮಿತ ರಮೇಶ್ ಮತ್ತು ಮುಂಬೈನ ಅಕಾಡಮಿ ಆಫ್ ಆರ್ಕಿಟೆಕ್ಟರ್‌ನ ಸೂರಜ್ ಇಘೆ ಸೇರಿ 17 ರಾಷ್ಟ್ರಗಳ ಮೂವತ್ನಾಲ್ಕು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮೂರು ದಿನಗಳು ನಡೆದ ಅಂತಿಮ ಸುತ್ತಿನ ಆಯ್ಕೆ ಯಲ್ಲಿ ಫೈನಲಿಸ್ಟ್‌ಗಳು ತಮ್ಮ ‘ಯೋಜನೆ'ಗಳನ್ನು ಪ್ರಸ್ತುತಪಡಿಸಿದರು.
ಅಂತಿಮ ಸುತ್ತಿನಲ್ಲಿ ಒಳಾಂಗಣ ವಿನ್ಯಾಸ ವಿಭಾಗದಲ್ಲಿ ಇಂಡೋನೇಷ್ಯಾದ ಟೆಲ್ಕಾಂ ವಿಶ್ವ ವಿದ್ಯಾಲಯದ ಅಲಿಫಿಯಾ ಹಾಗೂ ಆರ್ಕಿಟೆಕ್ಟರ್ ವಿಭಾಗದಲ್ಲಿ ಮಲೇಷ್ಯಾದ ಲಿಂಗ್ ಜಂಗ್ ಯಿಂಗ್ ಅವರು 'ವರ್ಷದ ಉತ್ತಮ ವಿನ್ಯಾಸಕಾರ' ಪ್ರಶಸ್ತಿಗೆ ಆಯ್ಕೆಯಾದರು.
ಪ್ರಶಸ್ತಿ ವಿಜೇತರಿಗೆ ಜೂನ್ 2025ರಂದು ಹಾರ್ವರ್ಡ್ ವಿಶ್ವವಿದ್ಯಾಲಯ ಸಮೂಹದ ಗ್ರಾಜುಯೇಟ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ನಡೆಯಲಿರುವ ಮೂರು ದಿನಗಳ ‘ಡಿಸೈನ್ ಡಿಸ್ಕವರಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ. ಮೂರು ದಿನಗಳು ನಡೆಯುವ ಈ ತರಬೇತಿ 10 ಸಾವಿರ ಡಾಲರ್ ಮೌಲ್ಯದ್ದಾಗಿದೆ.
ಇತರ ಸಾಧಕರಿಗೂ ಗೌರವ
ಇದರ ಜೊತೆಗೆ, ಆರ್ಕಿಟೆಕ್ಚರ್ ಹಾಗೂ ಇಂಟೀರಿಯರ್ ಡಿಸೈನ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಏಳು ಯುವ ಸಾಧಕ- ಸಾಧಕಿಯರಿಗೆ ಪ್ರಶಸ್ತಿ ನೀಡಲಾಯಿತು.
ಆರ್ಕಿಟೆಕ್ಚರಲ್ ವಿಭಾಗ: ಇರಾನ್‌ನ ಅಮಿರ್ಮಸೌದ್ ಅಘಜ ನಿಜಾದೆ ಅವರಿಗೆ 'ಬೆಸ್ಟ್ ಡಿಸೈನ್ ಇಂಪ್ಯಾಕ್ಟ್ ಅವಾರ್ಡ್', ವಿಯೆಟ್ನಾಂನ ಡ್ಯಾನ್ ಮಿನ್ಹ್ ಆನ್ ಅವರಿಗೆ 'ಅತ್ಯುತ್ತಮ ಸುಸ್ಥಿರ ವಿನ್ಯಾಸ ಪ್ರಶಸ್ತಿ', ಶ್ರೀಲಂಕಾದ ನೀಲರಂಧ ಪೊನ್ಸೆಕಾ ಅವರಿಗೆ 'ನಿಪ್ಪಾನ್ ಪೇಂಟ್ ಕಲರ್ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಒಳಾಂಗಣ ವಿನ್ಯಾಸ: ಮಲೇಷ್ಯಾದ ಜೆಸ್ಲಿನ್ ಟ್ಯೂ ಅವರಿಗೆ 'ಬೆಸ್ಟ್ ಡಿಸೈನ್ ಇಂಪ್ಯಾಕ್ಟ್ ಅವಾರ್ಡ್', ಸಿಂಗಪುರದ ಲಿಮ್ ಗಿಯಾ ಝನ್ ಅವರಿಗೆ 'ಅತ್ಯುತ್ತಮ ಸುಸ್ಥಿರ ವಿನ್ಯಾಸ ಪ್ರಶಸ್ತಿ' ಹಾಗೂ ಥಾಯ್ಲೆಂಡ್‌ನ ಪಾಇಸಾ ವಾಂಗ್‌ಚಾಮ್ ಅವರಿಗೆ 'ನಿಪ್ಪಾನ್ ಪೇಂಟ್ ಕಲರ್ ಅವಾರ್ಡ್' ನೀಡಿ ಗೌರವಿಸಲಾಯಿತು. ವಿಯೆಟ್ನಾಂನ ಟ್ರೂಂಗ್ ಥಾನ್ ಕ್ವಿ ಅವರಿಗೆ ‘ತೀರ್ಪುಗಾರರ ಆಯ್ಕೆ ಪ್ರಶಸ್ತಿಗೆ ಪಾತ್ರರಾದರು.
ಉದಯೋನ್ಮುಖರಿಗೆ ವೇದಿಕೆ
‘ಯುವ ವಿನ್ಯಾಸಕರನ್ನು ಪ್ರೋತ್ಸಾಹಿಸುವ ನಿಪ್ಪಾನ್ ಪೇಂಟ್ ಕಂಪನಿಯ ಬದ್ಧತೆ ಶ್ಲಾಘನೀಯ. ಇದು ಈ ಕ್ಷೇತ್ರದ ಶ್ರೇಷ್ಠತೆಯನ್ನು ಗುರುತಿಸಿ ಭವಿಷ್ಯದಲ್ಲಿ ಉಪಯೋಗವಾಗುವಂತಹ ವಿನ್ಯಾಸಗಳ ಮೇಲೆ ಹೂಡಿಕೆ ಮಾಡುತ್ತದೆ. ಉದ್ಯಮ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿಯೊಂದಿಗೆ ವಿಕಸನಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ರತಿ ವರ್ಷ ಇಲ್ಲಿ ಪ್ರವೇಶ ಪಡೆಯುವ ಹೊಸ ಬಗೆಯ ವಿನ್ಯಾಸಗಳ ಗುಣಮಟ್ಟವನ್ನು ನೋಡಲು ಹೆಮ್ಮೆಯೆನಿಸುತ್ತಿದೆ' ಎಂದು ಆರ್ಕಿಟೆಕ್ಟ್ ವಿಭಾಗದ ತೀರ್ಪುಗಾರರಾದ ನೀನಾ ಬೈಲಾನ್ ಆರ್ಕೆ ಅಭಿಪ್ರಾಯಪಟ್ಟರು.
‘ಈ ಸ್ಪರ್ಧೆಯು ಅರ್ಥಪೂರ್ಣ ನಾವೀನ್ಯ ಮತ್ತು ಸೃಜನಶೀಲತೆಯ ದಾರಿದೀಪವಾಗಿದೆ. ಉದಯೋನ್ಮುಖ ಪ್ರತಿಭೆಗಳು ಹೊರ ಹೊಮ್ಮಲು ಮತ್ತು ಅಭಿವೃದ್ಧಿ ಹೊಂದಲು ಉತ್ತಮ ವೇದಿಕೆಯಾಗಿದೆ’ ಎಂದು ಒಳಾಂಗಣ ವಿನ್ಯಾಸ ವಿಭಾಗದ ತೀರ್ಪುಗಾರರಾದ ಸಂತಿ ಅಲೋಸಿಯಸ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.