ADVERTISEMENT

ಇಂದು ಅಲ್‌ಝೈಮರ್‌ ದಿನ | 60ರ ನಂತರ ಅರುಳು ಮರುಳಾಗುವುದೇಕೆ?

ಜೀವನ ಸಂಧ್ಯಾಕಾಲ

ಶ್ರೀದೇವಿ ಬಿರಾದಾರ
Published 20 ಸೆಪ್ಟೆಂಬರ್ 2019, 19:42 IST
Last Updated 20 ಸೆಪ್ಟೆಂಬರ್ 2019, 19:42 IST
ಅಲ್‌ಝೈಮರ್‌ ಅಥವಾ ಮರೆಗುಳಿ
ಅಲ್‌ಝೈಮರ್‌ ಅಥವಾ ಮರೆಗುಳಿ   

‘ಡಾಕ್ಟ್ರೆ ಇವ್ರು ನಮ್ಮ ಯಜಮಾನ್ರು, ಏನೇನೋ ಮಾತಾಡ್ತಾರೆ, ಯಾರನ್ನು ಗುರುತಿಸುವುದಿಲ್ಲ. ಮಗ, ಮಗಳು ಅನ್ನೋದು ಗೊತ್ತಾಗುವುದಿಲ್ಲ. ಮನೆಯವರನ್ನು ಗುರುತೇ ಹಿಡಿಯುತ್ತಿಲ್ಲ. ಸರಿಯಾಗಿ ನಿದ್ರೆ ಮಾಡುವುದಿಲ್ಲ. ಒಬ್ಬರೇ ಮಾತಾಡ್ತಾರೆ. ಮಾತುಗಳಿಗೆ ಅರ್ಥನೇ ಇರುವುದಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಕಿತ್ತಾಡ್ತಾರೆ. ಏನು ಬೇಕೆಂದು ಕೇಳಿದ್ರೆ, ಉತ್ತರ ಕೊಡೋಕೋ ಗೊತ್ತಾಗುವುದಿಲ್ಲ. ಜಳಕಾ ಮಾಡಾಕ, ಬಟ್ಟಿ ಹಾಕ್ಕೋಳಾಕ ಗೊತ್ತಾಗುದಿಲ್ಲ. ಹಗಲು ಯಾವ್ದು ರಾತ್ರಿ ಯಾವ್ದು ಗೊತ್ತಾಗುದಿಲ್ಲ, ರಾತ್ರಿಹೊರಗಡೆ ಹೋದ್ರೆ ಮನೆಗೆ ಬರುವುದು ಗೊತ್ತಾಗುವುದಿಲ್ಲ. ಊಟ ಮಾಡಿದ್ರೆ ಮಾಡಿಲ್ಲ ಅಂತಾರೆ. ಚಹಾ ಕೊಟ್ಟಿದ್ರು ಕೊಟ್ಟಿಲ್ಲ ಅಂತಾರೆ. ಇದನ್ನು ಬೇರೆಯವರ ಮುಂದೆ ಹೇಳ್ತಾರೆ...’

ಧಾರವಾಡದ ಡಿಮ್ಹಾನ್ಸ್‌ಗೆ ಪತಿಯೊಂದಿಗೆ ಬಂದಿದ್ದ ಆ ಅಜ್ಜಿ, ತನ್ನ ಗೋಳನ್ನು ಹೇಳುತ್ತ ಹೋದರು. ‘ಇಂವಾ ಸ್ವಲ್ಪ ಶಾಂತ ಇರುವಂಗ ಮಾಡ್ರಿ, ಅವನಿಗ ಸಮಾಧಾನಾನ ಇಲ್ಲ’ ಎಂದು ಬೇಡಿಕೊಂಡರು.

ಇಂಥ ಸಮಸ್ಯೆಗಳನ್ನು, ತೊಂದರೆಗಳನ್ನು ಹೊತ್ತು ಡಿಮ್ಹಾನ್ಸ್‌ನ ಮನೋವೈದ್ಯರಲ್ಲಿ ಅಥವಾ ನರರೋಗತಜ್ಞರಲ್ಲಿ ಚಿಕಿತ್ಸೆಯನ್ನು ಪಡೆಯಲು ಬರುತ್ತಾರೆ. ಎಲ್ಲ ಲಕ್ಷಣಗಳೂ ಒಬ್ಬರಲ್ಲಿಯೇ ಕಾಣಿಸಿಕೊಳ್ಳಬೇಕಂತೇನಿಲ್ಲ. ಅವರು ಹೊಂದಿರುವಂಥ ಲಕ್ಷಣಗಳ ಆಧಾರದ ಮೇಲೆ, ಚಿಕಿತ್ಸೆಯನ್ನು ಪಡೆದು ಕಾಯಿಲೆಯ ಲಕ್ಷಣಗಳಿಂದ ನಿಯಂತ್ರಣವನ್ನು ಹೊಂದಿರುತ್ತಾರೆ. ಆದರೆ ಅವರಿಗೆ ನಿಯಮಿತವಾದ ಚಿಕಿತ್ಸೆ ಮತ್ತು ಮುಖ್ಯವಾಗಿ ಮನೆಯವರ ಸಹಕಾರ, ಆರೈಕೆ, ಪ್ರೀತಿ ವಾತ್ಸಲ್ಯ ಅವಶ್ಯಕವಾಗಿರುತ್ತದೆ.

ADVERTISEMENT

ಅಲ್‌ಝೈಮರ್‌ ಅಥವಾ ಮರೆಗುಳಿ ಕಾಯಿಲೆಯನ್ನು ಹೊಂದಿದ ವೃದ್ಧರು ತಮಗೆ ಗೊತ್ತಿಲ್ಲದೆಯೇ ಮನೆಯನ್ನು ಬಿಟ್ಟು ಹೋಗಿರುತ್ತಾರೆ. ಅವರಿಗೆ ತನ್ನತನದ, ಪರಿಸರದ ಅರಿವೇ ಮರೆಯಾಗಿಬಿಟ್ಟಿರುತ್ತದೆ. ಯಾರಾದರು ಪರಿಚಯದವರು ಕಂಡಾಗ ಮನೆಯನ್ನು ಸೇರುತ್ತಾರೆ. ಇಲ್ಲದೇ ಹೋದಲ್ಲಿ ಅವರನ್ನು ಯಾರಾದರು ಯಾವುದಾದರೂ ಆಶ್ರಮಕ್ಕೆ ಕರೆದುಕೊಂಡುಹೋಗಿ ಬಿಟ್ಟು ಬಂದಿರುತ್ತಾರೆ. ಇತ್ತ ಅವರ ನೆನಪಿನಲ್ಲಿ ಮನೆಯವರು ಕಾಲ ಕಳೆಯುತ್ತಿರುತ್ತಾರೆ. ಮನೆ ಬಿಟ್ಟು ಹೋದ ಮೇಲೆ ಅವರ ಪತ್ತೆ ಕೂಡ ಇರುವುದಿಲ್ಲ. ಹೆಚ್ಚಿನವರು ಮರಣ ಕೂಡ ಹೊಂದಿರುತ್ತಾರೆ.

ಅಲ್‌ಝೈಮರ್‌ ಕಾಯಿಲೆಯನ್ನು ಹೊಂದಿದಂಥ ಸಮಯದಲ್ಲಿ ಮನೆಯ ಸದಸ್ಯರ ಸಹಕಾರ ತುಂಬಾ ಅವಶ್ಯವಾಗಿರುತ್ತದೆ. ಮನೆಯಲ್ಲಿ ಮಕ್ಕಳಿಗೆ ಹೇಗೆ ಪ್ರತಿಯೊಂದನ್ನು ತಿಳಿಸಿಕೊಡುತ್ತೇವೆಯೋ ಅದೇ ರೀತಿ, ಅವರನ್ನು ನೋಡಿಕೊಳ್ಳಬೇಕಾಗುತ್ತದೆ. ಅವರಿಗೆ ದಿನನಿತ್ಯದ ಚಟುವಟಿಕೆಗಳನ್ನು ಮುಂದೆ ನಿಂತು ಅವರಿಂದ ಮಾಡಿಸಬೇಕಾಗುತ್ತದೆ. ಅವರೊಡನೆ ವಾಯುವಿಹಾರ, ಪರಿಚಯಸ್ಥರೊಡನೆ ಮಾತುಕತೆ, ಸಂಗೀತ ಆಲಿಸುವಿಕೆಯಿಂದ ಅವರಲ್ಲಿ ಸಮಾಧಾನವನ್ನು ಕಂಡುಕೊಳ್ಳಬಹುದಾಗಿದೆ. ದೈಹಿಕ ಕಾಯಿಲೆಗಳಿಗೊಳಗಾದರೆ ಸೂಕ್ತ ವೈದ್ಯರಿಂದ ಚಿಕಿತ್ಸೆಯನ್ನು ಕೊಡಿಸಬೇಕು. ನಿಯಮಿತವಾಗಿ ಅವರಿಗೆ ಔಷೋಧೋಪಚಾರ ನೀಡಬೇಕು.

ಕಾಯಿಲೆ ಹೊಂದಿದವರ ಲಕ್ಷಣಗಳು, ಮನೆಯವರು ನಿತ್ಯ ನೋಡುವುದರಿಂದ ಅವರ ಮೇಲೂ ಪ್ರಭಾವ ಬೀರುತ್ತದೆ. ಎಷ್ಟೋ ಜನರು ಅವರನ್ನು ಪ್ರೀತಿಯಿಂದ ನೋಡಿಕೊಂಡರೆ, ಇನ್ನು ಕೆಲವರು ಅವರನ್ನು ಮನೆಯಲ್ಲಿ ಅವರನ್ನು ಕೀಳಾಗಿ ಕಾಣುತ್ತಾರೆ. ಯಾವುದಕ್ಕೂ ಅವರನ್ನು ಗಮನಿಸುವುದಿಲ್ಲ. ಕಾಟಾಚಾರಕ್ಕೆ ಊಟಕೊಟ್ಟು, ಅವರ ಮೇಲೆಯೇ ಸಿಟ್ಟಾಗುತ್ತಾರೆ. ಕಾರಣ ಅವರು ದುಡಿಯುವುದಿಲ್ಲ, ದುಡ್ಡು ತರುವುದಿಲ್ಲ, ತಮಗೆ ಭಾರ ಅನ್ನುವ ಮನೋಭಾವನೆ ಹೊಂದಿರುತ್ತಾರೆ. ಆದರೆ ಅದೇ ಅವರ ಹರೆಯದ ವಯಸ್ಸಿನಲ್ಲಿ ದುಡಿದು, ಗಳಿಸಿ, ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿ, ಒಂದು ಉತ್ತಮ ಸ್ಥಾನವನ್ನು ಕಲ್ಪಿಸಿ, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಕಾರಣೀಕರ್ತರಾಗಿರುತ್ತಾರೆ. ಇದನ್ನು ಅರಿತು ನಡೆಯಬೇಕಾಗುತ್ತದೆ. ವೃದ್ಧಾಪ್ಯ ವಯಸ್ಸಿನಲ್ಲಿ ಕಾಯಿಲೆಗೊಳಗಾದವರನ್ನು ನೋಡಿಕೊಳ್ಳುವುದು ಮನೆಯ ಸದಸ್ಯರ ಕರ್ತವ್ಯ. ಈ ಕಳಂಕವನ್ನು ಹೋಗಲಾಡಿಸಲು, ಅವರನ್ನು ಪ್ರೀತಿಯಿಂದ, ಗೌರವದಿಂದ ನೋಡಿಕೊಳ್ಳುವಂತೇ ಪ್ರೇರೇಪಿಸಲು, ಈ ಅಲ್‌ಝೈಮರ್‌ ಡೆಮೆನ್ಷಿಯಾ ದಿನವನ್ನು ಆಚರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.