ಕಳೆದ ಒಂದು ವಾರದಿಂದ ಪ್ರೀತಿಯ ಗಾಳಿ ಬೀಸುತ್ತಲೇ ಇತ್ತು.. ಗಲ್ಲಿ, ಮಾಲು ಮೊಹಲ್ಲಗಳಿಂದ. ಆದರೆ ಹದಿನೈದರ ನಂತರ ಇದು ವಿರಹಿಗಳ, ಚಿರ ವಿರಹಿಗಳ ಸಪ್ತಾಹವಾಗಿ ಬದಲಾಗುತ್ತದೆ.
ಹೃದಯ ಬಿರಿದವರ, ಭಗ್ನ ಪ್ರೇಮಿಗಳಿಗಾಗಿ ಎಂದೇ ಒಂದು ವಾರವನ್ನು ಆಚರಿಸಲಾಗುತ್ತದೆ. ಇದು ಯಾವಾಗಿನಿಂದ ಆರಂಭವಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಫೆ.7ರಿಂದ ಹದಿನಾಲ್ಕರವರೆಗೆ ಪ್ರೀತಿಪಾತ್ರರಿಗೆ ಪ್ರೇಮದ ಕಾಣ್ಕೆಗಳನ್ನು ಕೊಡುತ್ತ ಸಂಭ್ರಮಿಸಲಾಗುತ್ತದೆ. ಹದಿನೈದರಿಂದ 21ರವರೆಗೆ ಭಗ್ನಪ್ರೇಮಿಗಳಿಗಾಗಿಯೇ ವಿಶೇಷ ದಿನಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆ.15 ಸ್ಲ್ಯಾಪ್ ಡೇ: ಹೃದಯ ಚೂರಾಗಿಸಿದ ಹಳೆಯ ಸಂಗಾತಿಯ ಕೆನ್ನೆಗೆ ಬಾರಿಸುವ ದಿನವಿದು. ಹೋಗಿ ಬಾರಿಸಲೇ ಬೇಕೆಂಬ ನಿಯಮವೇನಿಲ್ಲ. ಆದರೆ ಅವರು ನಿಮ್ಮ ಬದುಕಿನಲ್ಲಿ ಬಿಟ್ಟು ಹೋಗಿರುವ ಎಲ್ಲ ಗುರುತು, ಸಂಕೇತಗಳನ್ನೂ, ನಿಮ್ಮ ಮನದಲ್ಲಿರುವ ಸಿಟ್ಟು, ರೋಷಗಳಿಂದ ಬಾರಿಸುವಂತೆ ಬಾರಿಸಿ, ಕೊಡವಿಹಾಕಬೇಕು. ಹಳೆಯ ಪ್ರೀತಿಯನ್ನು ಮರೆಯುವ ಹೊಸ ಸೂತ್ರವಿದು.
ಫೆ.16 ಕಿಕ್ ಡೇ: ಅಂದ್ರೆ ಹಳೆಯ ಸಂಗಾತಿ ಬಳಿ ಹೋಗಿ ಒದೆ ಕೊಟ್ಟು ಬರುವುದಲ್ಲ. ಚಾದರೊದ್ದು ಮಲಗುವುದು ಎಂಬ ಮಾತಿದೆಯಲ್ಲ ಹಾಗೇನೆ ಅವರ ನೆನಪುಗಳನ್ನೆಲ್ಲ ಒದ್ದು, ಅವರು ನೀಡಿದ ಕೊಡುಗೆಗಳಿದ್ದರೆ ಆಚೆ ಎಸೆದು, ಅವರ ಯಾವ ಗುರುತುಗಳೂ ಬದುಕಿನಲ್ಲಿರದಂತೆ ಒದ್ದು ಹಾಕುವುದು.
ಜಬ್ ವಿ ಮೆಟ್‌ನ ಪಾತ್ರ ಗೀತ್, ತನ್ನ ಪ್ರೇಮಿಯ ಫೋಟೊವನ್ನು ಸುಟ್ಟು, ಕಮೋಡ್‌ಗೆ ಹಾಕಿ, ಫ್ಲಷ್ ಮಾಡಿ, ಆತನಿಗೆ ಕರೆ ಮಾಡಿ, ಬಾಯ್ತುಂಬ ಬೈದು ನಿರಾಳ ಆಗ್ತಾಳಲ್ಲ.. ಹಾಗೆ ನಿರಾಳವಾಗುವ ದಿನಗಳಿವು.
ಫೆ. 17 ಪರ್ಫ್ಯೂಮ್ ಡೆ: ಭಗ್ನ ಪ್ರೇಮಿಗಳಂತೆ ಗಡ್ಡ ಬಿಟ್ಟು, ಊಟ ನಿದ್ದೆ ಬಿಟ್ಟು ಸೊರಗುವ ಬದಲು ಸ್ವಪ್ರೀತಿಯನ್ನು ಆರಂಭಿಸುವ ದಿನ ಇದು. ನಿಮ್ಮತನವನ್ನು ಸಂಭ್ರಮಿಸುವ ದಿನ. ಮೊದಲೆರಡು ದಿನಗಳಲ್ಲಿ ನಿಮ್ಮದಲ್ಲದ, ನಿಮ್ಮದಾಗದ ಪ್ರೀತಿಯನ್ನು ಮರೆತು, ಸಂಗಾತಿಯನ್ನು ಮರೆತು, ನಿಮ್ಮನ್ನೇ ಮೊದಲಿಗೆ ಪರಿಗಣಿಸುವ ದಿನವಿದು. ನಿಮಗಿಷ್ಟವಾದ ಸುಗಂಧ ದ್ರವ್ಯ ಕೊಂಡುಕೊಮಡು, ಸ್ವಪ್ರೀತಿಯ ಮಾಧುರ್ಯ ಆವರಿಸಿಕೊಳ್ಳುವಂತೆ ಮಾಡುವ ದಿನವಿದು.
ಫೆ.18 ಫ್ಲರ್ಟ್ ಡೆ: ಮತ್ತೊಮ್ಮೆ ಪ್ರೀತಿಸುವ ದಿನವಿದು. ನಮಗೊಂದೇ ಜೀವನ. ನಮ್ಮದೊಂದೇ ಜೀವ. ಸಂತೋಷವಾಗಿರಲಿ ಎನಿಸಿದರೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಜೀವನ. ಹೊರಗೆ ಹೋಗಿ, ಮತ್ತೊಬ್ಬ ಸಂಗಾತಿಯನ್ನು ಹುಡುಕಿ. ನಿಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ. ಪ್ರೀತಿಯನ್ನು ಹೇಳಿಕೊಳ್ಳಿ. ಯಾರಿಗೆ ಗೊತ್ತು, ಬದುಕು ಎರಡನೆಯ ಅವಕಾಶವನ್ನು ನೀಡಲೂಬಹುದು. ಆದರೆ ಹೊರಹೋಗುವ, ಹಳೆಯ ಸಾಂಗತ್ಯದಿಂದ ಹೊರಬರುವ ಮನಸು ಮಾಡಿ.
ಫೆ.19 ಕನ್ಫೆಶನ್ ಡೆ: ಹೆಸರೇ ಹೇಳುವಂತೆ ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ದಿನ. ಈ ಹಿಂದೆ ಯಾರದ್ದಾದರೂ ಮನಸು ನೋಯಿಸಿದ್ದಲ್ಲಿ, ಹೃದಯ ಭಗ್ನವಾಗಿಸಿದ್ದಲ್ಲಿ, ಆ ತಪ್ಪುಗಳ, ಅಪರಾಧಿ ಪ್ರಜ್ಞೆಯ ಬ್ಯಾಗೇಜನ್ನು ಹೊತ್ತು ಅಡ್ಡಾಡದಿರಿ. ತಪ್ಪೊಪ್ಪಿಗೆ ಮಾಡಿಕೊಂಡು ಮನಸು ಹಗುರಾಗಿಸಿಕೊಳ್ಳಿ. ಖಾಲಿಯಾಗಿಸಿಕೊಳ್ಳಿ. ಹೀಗೆ ಖಾಲಿಯಾದಾಗಲೇ ಹೊಸದನ್ನು ಆರಂಭಿಸಲು ಸಾಧ್ಯ. ನಿಮ್ಮೆಲ್ಲ ಭಾವನೆಗಳನ್ನೂ ಪ್ರಾಮಾಣಿಕವಾಗಿ ಹೇಳಬೇಕಾದವರ ಮುಂದೆ ಹೇಳಲಿ ಎನ್ನುವುದೇ ಈ ದಿನದ ಆಶಯ.
ಫೆ.20 ಮಿಸ್ಸಿಂಗ್ ಡೆ: ಕೆಲವೊಮ್ಮೆ ನಮ್ಮ ನಮ್ಮ ಅಹಂಕಾರದ ಗೋಡೆಗಳ ನಡುವೆಯೇ ನಾವು ಬಂಧಿಗಳಾಗಿರುತ್ತೇವೆ. ತೇಪೆ ಹಚ್ಚಬಹುದಾದ, ಮರು ಆರಂಭಿಸಬಹುದಾದ ಸಾಧ್ಯತೆಗಳಿರುವ ಬಾಂಧವ್ಯಗಳಲ್ಲಿ, ಐ ಮಿಸ್ ಯು, ಮಿಸ್ಸಿಂಗ್ ಯು ಅಂತ ಹೇಳುವುದು ಅಮೃತದ ಕೆಲಸ ಮಾಡುತ್ತದೆ. ಚಿರಂಜೀವಿ ಪದಗಳಿವು ಎಂದು ಹೇಳಿದರೂ ತಪ್ಪಾಗದು. ಜಗಳಗಳಿಂದ, ಮನೋ ಕ್ಲೇಷಗಳಿಂದ ನಿಮ್ಮ ನಡುವೆ ಮೌನದ ಗೋಡೆಯೊಂದು ಎದ್ದಿದ್ದರೆ ಅದನ್ನು ಕೆಡವಲೆಂದೇ ಇರುವ ಸುತ್ತಿಗೆಯಂಥ ಪದ ಮಿಸ್ಸಿಂಗ್ ಯು ಎಂಬುದು. ಅದನ್ನು ಬಳಸಿ, ಮತ್ತೆ ಒಂದುಗೂಡಿ ಎಂದು ಹೇಳುವ ದಿನವಿದು.
ಫೆ.21 ಬ್ರೇಕಪ್ ಡೆ: ಇದು ಮತ್ತೊಮ್ಮೆ ಬದುಕು ಅಮೂಲ್ಯವಾದುದು. ಕೇವಲ ಒಟ್ಟಿಗಿರಬೇಕು, ಬಾಂಧವ್ಯ ಬೆಸೆದಿಡಬೇಕು ಎಂಬ ಒತ್ತಡಕ್ಕೆ ಕೂಡಿರಬೇಡಿ. ನಿಮ್ಮನ್ನು ಅವಮಾನಿಸುವ, ಅನುಮಾನಿಸುವ, ಹೊಡೆಯುವ, ಹೀಗಳೆಯುವ, ನಿಯಂತ್ರಣವಿರಿಸುವ ಬಾಂಧವ್ಯದಲ್ಲಿ ನೀವಿದ್ದರೆ, ಅದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಅಲ್ಲಿಂದಾಚೆ ಬನ್ನಿ. ಬದುಕು ಒಂದೇ ಒಂದು ಸಲ ಜೀವಿಸಲು ಸಿಗುವುದು. ಅದರಲ್ಲಿ ಹಿಂಸೆ ಪಡಲೆಂದೇ ಇರಕೂಡದು. ಪ್ರೀತಿಯಿಲ್ಲದ ಮೇಲೆ ಅಲ್ಲಿಂದಾಚೆ ನಡೆದುಬರುವುದೂ ಸ್ವಪ್ರೀತಿಯ ಒಂದು ಹಂತ ಅಷ್ಟೆ. ಆತ್ಮಗೌರವ ಇಲ್ಲದಿದ್ದಲ್ಲಿ, ನಂಬಿಕೆ ಇರದಿದ್ದಲ್ಲಿ ಅಂಥ ಬಾಂಧವ್ಯದಿಂದ ಮುಕ್ತರಾಗಿ ಎಂದು ಹೇಳುತ್ತದೆ ಈ ದಿನ.
ವ್ಯಾಲೆಂಟೈನ್ ವೀಕ್ ಪರಸ್ಪರ ಪ್ರೀತಿಯನ್ನು ಸಂಭ್ರಮಿಸುವುದಾದರೆ, ಆ್ಯಂಟಿ ವ್ಯಾಲೆಂಟೈನ್ ವೀಕ್ ಸ್ವಪ್ರೀತಿಯನ್ನು ಹೇಳುತ್ತಲೇ, ಅನುರಾಗವಿಲ್ಲದ ಬಂಧದಿಂದ ಆಚೆ ಬರಲೂ ಪ್ರೇರೇಪಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.