ಜಗತ್ತು ಚಲನಶೀಲವಾದುದು. ಮನುಷ್ಯ ಸದಾ ಚಟುವಟಿಕೆಯಿಂದಿರುವುದು ಆತನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಒಳ್ಳೆಯದು. ಚಟುವಟಿಕೆ ಅಂದರೆ, ಉದ್ಯೋಗದಲ್ಲಿ ತೊಡಗಿಕೊಂಡರಷ್ಟೇ ಸಾಕೆ? ಇದಿಷ್ಟೇ ಆದಾಗ ಮನುಷ್ಯ ಯಂತ್ರವಾಗಿ ಬಿಡುತ್ತಾನೆ. ನಮ್ಮನ್ನು ಆಂತರಿಕವಾಗಿ ಅರಿತುಕೊಳ್ಳಲು ಇರುವಂತಹ ಒಂದು ಸೃಜನಾತ್ಮಕ ಮಾಧ್ಯಮ ಕಲೆ. ಈ ಜಗತ್ತನ್ನು ತಿಳಿದುಕೊಳ್ಳಲು ಸಾಧ್ಯ ಮಾಡುತ್ತದೆ ಕಲಾಪ್ರಕಾರಗಳು.
ಕಲೆ ಎರಡು ಕಾರಣಕ್ಕೆ ಮುಖ್ಯವಾಗುತ್ತದೆ. ಒಂದು ಸ್ವತಃ ಕಲಾವಿದನ ಮನಃಸಂತೋಷಕ್ಕಾಗಿ, ಇನ್ನೊಂದು ಕಲೆಯನ್ನು ಆಸ್ವಾದಿಸುವವರ ಖುಷಿಗಾಗಿ. ಕಲಾವಿದನ ಸಂತೋಷವೆಂದರೆ ಅಲ್ಲಿ ಲೈಕ್, ಕಮೆಂಟ್, ಶೇರ್‌ಗಳ ಹಂಗಿಲ್ಲ. ಯಾರೂ ನೋಡುತ್ತಾರೆ ಎಂಬ ಹಂಗೂ ಇಲ್ಲ, ಯಾರನ್ನೋ ಮೆಚ್ಚಿಸಲಂತೂ ಖಂಡಿತ ಅಲ್ಲ. ನಮ್ಮ ವೈಯಕ್ತಿಕ ತೃಪ್ತಿಗೆ, ನಮ್ಮ ಸುಧಾರಣೆಗೆ, ನಮ್ಮನ್ನು ನಾವು ಅರಿತುಕೊಳ್ಳುವುದಕ್ಕೆ, ಜೀವನಪ್ರೀತಿಗೆ.
ಇನ್ನೊಂದು ಬೇರೆಯವರ ಬೇಸರ ಕಳೆಯಲು ಕಲೆ. ಕಲೆಯನ್ನು ನೋಡುವುದು, ಕೇಳುವುದು, ಆಸ್ವಾದಿಸುವುದು ಒಂದು ಕಲೆಯೇ. ಕಲಾವಿದ ತಾನು ತಲ್ಲೀನನಾಗಿ ತೊಡಗಿಸಿಕೊಂಡು ವೇದಿಕೆಯಲ್ಲಿ ಪ್ರದರ್ಶನ ನೀಡಿದಾಗ ಇತರರ ಬೇಸರ ಕಳೆಯಲೂ ಕಾರಣನಾಗುತ್ತಾನೆ/ ಆಗುತ್ತಾಳೇ. ಬೇಸರ ಕಳೆಯಲೆಂದೇ ಕಲೆಯ ವೀಕ್ಷಣೆಗೆ ಬರುವವರಿದ್ದಾರೆ. ಅದು ಇಂತಹುದೇ ಕಲಾಪ್ರಕಾರ ಅಂತೇನಿಲ್ಲ. ವ್ಯಕ್ತಿಯ ಅಭಿರುಚಿಗೆ ಹೊಂದುವ ನೃತ್ಯ, ಸಂಗೀತ, ನಾಟಕ, ಯಕ್ಷಗಾನ, ಸಿನಿಮಾ – ಹೀಗೇ ಯಾವುದೂ ಆಗಬಹುದು. ಯಾಂತ್ರಿಕ ಬದುಕಿನ ಜಂಜಾಟಗಳ ನಡುವೆ ಪ್ರತಿಯೊಬ್ಬರ ದೈಹಿಕ, ಮಾನಸಿಕ ಸ್ಥಿತಿಗಳು ವಿಶ್ರಾಂತಿಯನ್ನು ಬೇಡುತ್ತವೆ. ಹಾಗಿರುವಾಗ ಒಂದೋ ಎರಡೋ ಗಂಟೆ ರಂಗದೆದುರು ಕುಳಿತು ಹೋಗುವಾಗ ಮನದ ಬೇಸರ ತೊಲಗಿ ಖುಷಿಯಿಂದ ತೆರಳಬೇಕು ಅಥವಾ ಹೊಸದೇನನ್ನಾದರೂ ಪಡೆದಿರಬೇಕು. ಜೀವನೋತ್ಸಾಹವವನ್ನು ಹೆಚ್ಚಿಸಿಕೊಳ್ಳಲಿರುವ ಒಂದು ಮಾಧ್ಯಮ ಕಲೆ. ಕಲೆ ಬೇಸರ ಕಳೆಯುವುದೇನೋ ಹೌದು. ಎಷ್ಟೋ ಸಲ ಕಲಾವಿದನ ಪ್ರದರ್ಶನದ ಹಿಂದೆ ಕಲಾವಿದನ ವೈಯಕ್ತಿಕ ಬೇಸರಗಳು ಬೆಳಕಿಗೆ ಬರುವುದೇ ಇಲ್ಲ. ರಂಗದಲ್ಲಿ ಪ್ರಜ್ವಲಿಸುವ ಬೆಳಕಿದ್ದರೂ ಅಂತರಂಗದ ಬೇಸರಗಳು ರಂಗದ ಅಬ್ಬರದಲ್ಲಿ, ತಲ್ಲೀನತೆಯಲ್ಲಿ ಎಲ್ಲೋ ಮೂಲೆಯಲ್ಲಿ ಮುದುಡಿರುತ್ತವೆ. ಅದು ಪ್ರೇಕ್ಷಕನಿಗೆ ಕಾಣುವುದಿಲ್ಲ. ಕಲಾವಿದನ ವೈಯಕ್ತಿಕ ಸುಖದುಃಖಗಳು ಅಲ್ಲಿ ಮುಖ್ಯವಾಗುವುದಿಲ್ಲ. ತಾನು ಅತ್ತರೂ ಇತರರನ್ನು ನಗಿಸುತ್ತಾನೆ ಕಲಾವಿದ. ವ್ಯಕ್ತಿಗಿಂತ ಕಲೆ ಮುಖ್ಯ. ಇಲ್ಲಿ ತನ್ನ ಬೇಸರಕ್ಕಿಂತ ಪರರ ಖುಷಿ ಮುಖ್ಯ. ಆಗ ಕಲಾವಿದನೂ ಖುಷಿಗೊಳ್ಳದೇ ಇರುವುದರಲ್ಲಿ ಸಂದೇಹವಿಲ್ಲ. ಕಲೆ ಯಾವತ್ತು ಮನಸ್ಸನ್ನು ಅರಳಿಸುವಂತಿರಬೇಕೇ ಹೊರತು ಕೆರಳಿಸುವಂತಿರಬಾರದು.
ಬೇಸರ ಹೋಗಬೇಕಾದರೆ ತಲ್ಲೀನತೆ ಬೇಕು. ಇದಕ್ಕಾಗಿ ಕಠಿಣ ಪರಿಶ್ರಮ ಅತ್ಯಗತ್ಯ. ಹಾಗಿದ್ದಾಗ ಕಲೆ ಅದನ್ನು ನೀಡಿದವನಿಗೂ ರಸಿಕನಿಗೂ ತೃಪ್ತಿಯನ್ನು ಕೊಡಬಲ್ಲುದು. ಕಲೆ ಬದುಕಿಗೆ ಹತ್ತಿರವಾಗುವುದು. ಹೋಲಿಕೆಗೆ, ಪಾಠಕ್ಕೆ, ಅನುಭವಕ್ಕೆ ಸಮೀಪ ಅನಿಸುವುದು, ಅದರಲ್ಲಿನ ವಾಸ್ತವಿಕ ಪ್ರಜ್ಞೆ ಪ್ರೇಕ್ಷಕನಿಗೆ ಹತ್ತಿರವಾದಾಗ. ಕಲಾವಿದನಿಗೂ ಪ್ರೇಕ್ಷಕನಿಗೂ ನಡುವೆ ಸಂವಹನ ನಡೆದಾಗ. ಕಲಾವಿದ ತನ್ನ ವಿದ್ವತ್ ಪ್ರದರ್ಶಿಸಲು ಹೋದರೆ, ಆತನ ಕಲಾಪ್ರಕಾರದ ಅರಿವಿಲ್ಲದ ಸಾಮಾನ್ಯ ಪ್ರೇಕ್ಷಕ ಆ ಪ್ರದರ್ಶನವನ್ನು ಅನುಭವಿಸಲು ಸಾಧ್ಯವಾಗದೇ ಹೋಗಬಹುದು. ಆಗ ಅರ್ಥ ಮಾಡಿಸಲಾಗದ ಕಲಾವಿದ, ಅರ್ಥ ಆಗದ ಕಲಾವಿದ ಇಬ್ಬರಿಗೂ ಖುಷಿಗಿಂತ ಹೆಚ್ಚು ಬೇಸರವೇ.
ಕಲೆ ಬೇಸರ ಕಳೆಯಲೇಬೇಕೆಂದಿಲ್ಲ. ದುರಂತದ ಅಥವಾ ಮನ ಕಲಕುವ ವಸ್ತುವಿಚಾರವನ್ನು ಹೊಂದಿದ ಪ್ರದರ್ಶನ ಕಲೆಗಳು ಪ್ರೇಕ್ಷಕನನ್ನೂ ಅಳುವಿಗೂ ನೂಕಬಹುದು. ಕಲೆ ಸಾಮಾಜಿಕ ಬದಲಾವಣೆಗೂ ಕಾರಣವಾಗಬಹುದು.
ಕಾಲ್ಪನಿಕ ಕಥೆಗಳು ಬದುಕಿಗಿಂತ ಭಿನ್ನವಾಗಿ ನಮ್ಮನ್ನು ಆವರಿಸಿದಾಗ, ಇಹ ಮರೆತು ಮತ್ತೊಂದು ಕಲ್ಪನೆಯ ವಿಹಾರಕ್ಕೆ ತೆರಳಿದಾಗ ಮನಸ್ಸು ಪ್ರಫುಲ್ಲವಾಗಬಲ್ಲುದು. ಸುಂದರ ಕಲ್ಪನೆಗಳ ಕನಸುಗಳು ಹೆಚ್ಚು ಹೆಚ್ಚು ನಮ್ಮನ್ನು ಆವರಿಸಿಕೊಂಡಷ್ಟು ನಾವು ಲವಲವಿಕೆಯಿಂದಿರುತ್ತೇವೆ.
ಕಲೆ ಮನಸ್ಸಿನ ಒತ್ತಡವನ್ನು, ಆತಂಕವನ್ನು, ತುಮುಲವನ್ನು ಕೆಲಕಾಲವಾದರೂ ದೂರ ಸರಿಸುವಂತೆ ಮಾಡುತ್ತದೆ. ನಮ್ಮೊಳಗಿನ ತಲ್ಲಣಗಳನ್ನು, ಗೊಂದಲಗಳನ್ನು ಮರೆಮಾಚುವ ಉತ್ತರವಾಗಿ ಕಲೆ ನೆರವಾಗುತ್ತದೆ.
ಭಾರತೀಯ ಸಂಸ್ಕೃತಿಯ ಪ್ರಕಾರ ಎಲ್ಲರೂ ಕಲಾವಿದರೇ ಆಗಬೇಕೆಂದಿಲ್ಲ; ಒಳ್ಳೆಯ ಪ್ರೇಕ್ಷಕನಾಗುವುದು ಕೂಡ ಅಷ್ಟೇ ಮುಖ್ಯ. ಹೀಗಾಗಿ ಮನಸ್ಸಿನ ನೆಮ್ಮದಿಗೆ, ಖುಷಿಗೆ ಯಾವುದಾದರೊಂದು ಕಲೆಯ ಅಭ್ಯಾಸ ಅಥವಾ ಆಸ್ವಾದಿಸುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಹೆಚ್ಚು ಹೆಚ್ಚು ಆಗಬೇಕಾಗಿದೆ. ಕಲಿಕೆಗೆ ವಯಸ್ಸಿನ ಹಂಗಿಲ್ಲ.
ಕಲೆ ಕಲಿಸುತ್ತದೆ, ಕಲೆಯುವಂತೆ ಮಾಡುತ್ತದೆ, ಕಲಿತದ್ದನ್ನು ಸುಧಾರಿಸುತ್ತದೆ. ಇನ್ನಷ್ಟು ಕಲಿಯುವಂತೆ ಪ್ರೇರೇಪಿಸುತ್ತದೆ, ಬದುಕನ್ನು ಪ್ರೀತಿಸುವಂತೆ ಮಾಡುತ್ತದೆ.
(ಲೇಖಕಿ ನೃತ್ಯಕಲಾವಿದೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.