ADVERTISEMENT

ಬಹುಮುಖಿ ಸಮಾಜದ ಭಿತ್ತಿಯಲ್ಲಿ ಸಂಬಂಧಗಳ ಸಂಕೀರ್ಣ ಚಿತ್ರಣ

ಜ.ನಾ.ತೇಜಶ್ರೀ
Published 17 ಅಕ್ಟೋಬರ್ 2020, 19:31 IST
Last Updated 17 ಅಕ್ಟೋಬರ್ 2020, 19:31 IST
ಲೂಯಿ ಎಲಿಜಬೆತ್ ಗ್ಲಿಕ್
ಲೂಯಿ ಎಲಿಜಬೆತ್ ಗ್ಲಿಕ್    
""

ಲೂಯಿ ಎಲಿಜಬೆತ್ ಗ್ಲಿಕ್ ಕವನ ಸಂಕಲನ ‘ವಿತಾ ನೋವಾ’ದ (1999) ಮೊದಲ ಪುಟದಲ್ಲಿ ಬರುವ ಸಾಲುಗಳಿವು:‘ಗುರು ಹೇಳಿದ:

ಕಂಡದ್ದನ್ನು ಮಾತ್ರ ಬರೆ.
ಆದರೆ ಕಾಣುತ್ತಿರುವುದು ನನ್ನ ಸೋಂಕುತ್ತಿಲ್ಲವಲ್ಲ?
ಗುರು ಉತ್ತರಿಸಿದ:
ಕಾಣುತ್ತಿರುವುದನ್ನು ಮಾರ್ಪಡಿಸಿಕೋ’

ಈ ಸಾಲುಗಳು ಗ್ಲಿಕ್ ಕವಿತೆಗಳನ್ನು ಗ್ರಹಿಸಲು ಅಗತ್ಯವಿರುವ ದೃಷ್ಟಿಕೋನವನ್ನು ನೀಡುತ್ತವೆ. ಅದೆಂದರೆ, ನಾವು ಲೋಕವನ್ನು ನೋಡುತ್ತಿರುವ ಬಗೆಯನ್ನು ಬದಲಿಸಿಕೊಳ್ಳುವ ಮೂಲಕ ಅದನ್ನು ಹೊಸದಾಗಿ ಸೃಷ್ಟಿಸಿಕೊಂಡು, ಅದು ಮೂಡುವಂತಹ ಭಾಷೆಯಲ್ಲಿ ಕವಿತೆಯಾಗಿಸುವುದು. ಇದೇ ನಿಲುವು ಅವರನ್ನು ಈ ವರ್ಷದ ನೊಬೆಲ್ ಪ್ರಶಸ್ತಿಯವರೆಗೆ ಕರೆತಂದಿದೆ. ‘ಕವಿತೆಯಿಂದ ಏನು ಪ್ರಯೋಜನ?’ ಎಂದು ಕೇಳುವ ಈ ಕಾಲದಲ್ಲಿ ಕವಿಗೆ ಸಂದ ಈ ಗೌರವ ಕವಿತೆಯನ್ನು ಪ್ರೀತಿಸುವ ಕೆಲವರಿಗಾದರೂ ಕವಿತೆಯ ಬಗೆಗಿನ ಭರವಸೆಯನ್ನು ಹೆಚ್ಚಿಸುವಂತಹದ್ದು.

ADVERTISEMENT

‘ಲಾ ವಿತಾ ನೋವಾ’ (ನವಜೀವನ) ಎಂಬುದು 1294ರಲ್ಲಿ ಪ್ರಕಟಗೊಂಡ ಇಟಲಿಯ ಮಹಾಕವಿ ಡಾಂಟೆಯ ಕವನಸಂಕಲನದ ಹೆಸರು. ಪದ್ಯ ಮತ್ತು ಗದ್ಯಗಳ ಸಂಯೋಜನೆಯ ಈ ಕಾವ್ಯವು ವ್ಯಕ್ತಿ ಕೇಂದ್ರಿತವಾಗಿದ್ದ ‘ಆಸ್ಥಾನ ಶೃಂಗಾರ ಕಾವ್ಯ’ವನ್ನು ದೈವೀನೆಲೆಗೆ ಏರಿಸುವ ಉದ್ದೇಶದ್ದು. ತರುಣ ಕವಿ ಡಾಂಟೆಯು ಇದರಲ್ಲಿ ಬಿಯಾಟ್ರಿಸ್‍ಳನ್ನು ಕೇಂದ್ರವಾಗಿ ಇಟ್ಟುಕೊಂಡರೂ ಸೌಂದರ್ಯವು ಹುಟ್ಟಿಸುವ ಹುಚ್ಚು ಹಂಬಲವನ್ನು ಕುರಿತು ಬರೆಯುತ್ತಾನೆ. ಇದು ದೇವರಿಗಾಗಿ ಆತ್ಮದ ಅರಸುವಿಕೆಯನ್ನೂ ಸಂಕೇತಿಸುತ್ತದೆ. ಗ್ಲಿಕ್‌ಳ ‘ವಿತಾ ನೋವಾ’ ಈ ಮಾದರಿಯನ್ನು ಬಳಸಿಕೊಂಡಿದೆ. ಸಂಕಲನದ ಮೊದಲ ಮತ್ತು ಕೊನೆಯ ಕವಿತೆಗಳ ಶೀರ್ಷಿಕೆಯೂ ‘ವಿತಾ ನೋವಾ’ ಎಂದೇ ಇರುವುದು ಕುತೂಹಲಕಾರಿ ಬಂಧ ಮತ್ತು ಚೌಕಟ್ಟನ್ನು ಸಂಕಲನಕ್ಕೆ ಒದಗಿಸಿದೆ. ಗದ್ಯ ಮತ್ತು ಪದ್ಯಗಳ ಸಂಯೋಜನೆಯ ಈ ಸಂಕಲನದ ಕವಿತೆಗಳಲ್ಲಿ ಹರಡಿರುವ ವಿರಹ ಅಥವಾ ನೋವಿನ ಎಳೆಗಳು ನಮ್ಮ ಮೈತುಂಬ ಹರಿಯುವಂತದ್ದು:

‘..ಮೇಜುಗಳ ಪಕ್ಕದಲ್ಲಿ ಚಿಗುರು ಹುಲ್ಲಿನೆಸಳುಗಳ ಮಡಿ, ಬಿಳಿಚು ಹಸಿರನ್ನು/ಜೀವಚಿಮ್ಮುವ ಕಪ್ಪು ನೆಲದೊಳಗೆ ಹುದುಗಿಸಿಟ್ಟಂತಿದೆ/ವಸಂತ ಮತ್ತೆ ಬಂದಿದ್ದಾನೆ ನನ್ನೊಳಗೆ, ಈ ಬಾರಿ/ಪ್ರೇಮಿಯಾಗಿ ಅಲ್ಲ ಸಾವಿನ ಸುದ್ದಿಗಾರನಾಗಿ...’ ಎನ್ನುವ ಮೊದಲ ಕವಿತೆ ‘ವಿತಾ ನೋವಾ’ ನೀಡುವ ಸಾವಿನ ಈ ಚಿತ್ರಣ, ಸಂಕಲನದ ಕೊನೆಯ ಕವಿತೆ ‘ವಿತಾ ನೋವಾ’ “..ಹಿಂದೊಮ್ಮೆ ನಾನು ಅಂದುಕೊಂಡಿದ್ದೆ ನನ್ನ ಬದುಕು ಮುಗಿಯಿತೆಂದು, ಹೃದಯ ನುಚ್ಚುನೂರಾಗಿತ್ತು ಆಗ/ ಆಮೇಲೆ ನಾನು ಕೇಂಬ್ರಿಡ್ಜ್‌ಗೆ ಬಂದೆ’ ಚಿತ್ರಿಸುವ ಸಾವಿನನುಭವ ಮತ್ತು ಅದನ್ನು ಅಭಿವ್ಯಕ್ತಿಸುವ ಭಾಷೆಯು ಕವಿಯೊಬ್ಬಳು ಕ್ರಮಿಸುವ ಹಾದಿಯ ಹೆಜ್ಜೆಗುರುತು.

ಗ್ಲಿಕ್‍ಳ ಮೊದಲ ಸಂಕಲನ ‘ಫಸ್ಟ್ ಬಾರ್ನ್’ನ (1968) ಶೀರ್ಷಿಕೆಯೇ ಮೊದಮೊದಲ ಕವಿತೆಗಳು ಮತ್ತು ಚೊಚ್ಚಲ ಕೂಸು ಎನ್ನುವ ಎರಡರ್ಥಗಳನ್ನೂ ಸೂಚಿಸುತ್ತ ಕವಿ ಮತ್ತು ಕವಿತೆಗಳ ಪಯಣವನ್ನು ನಿರ್ದೇಶಿಸುವಂತಿದೆ. ಉದ್ಯಮಿ ಡೇನಿಯಲ್ ಗ್ಲಿಕ್ ಮತ್ತು ಗೃಹಿಣಿ ಬಿಯಾಟ್ರಿಸ್‍ರ ಮೂರು ಮಕ್ಕಳಲ್ಲಿ ಲೂಯಿ (1943) ಮೊದಲನೆಯವಳು. ಮಗಳಿಗೆ ಬಾಲ್ಯದಲ್ಲಿಯೇ ಗ್ರೀಕ್ ಪುರಾಣಗಳ ಕತೆಗಳನ್ನು ಹೇಳುತ್ತಿದ್ದ ರಷ್ಯನ್ ಯಹೂದಿ ಮೂಲದ ತಾಯಿ ಮತ್ತು ಬರಹಗಾರನಾಗಬೇಕು ಎಂಬ ಆಸೆಯಿದ್ದ ಹಂಗರಿ ಯಹೂದಿ ಮೂಲದ ತಂದೆಯ ಪ್ರಭಾವ ಮಗಳ ಮೇಲೆ ಗಾಢವಾಗಿದೆ. ಗ್ಲಿಕ್ ಎಳೆವಯಸ್ಸಿನಲ್ಲಿಯೇ ಕವಿತೆ ಬರೆಯತೊಡಗಿದಳು. ತಾರುಣ್ಯದ ಹೊಸಲಿನಲ್ಲಿ, ಅನೊರೆಕ್ಸಿಯ ನರ್‍ವೊಸಾ ಎಂಬ ಕಾಯಿಲೆಯಿಂದ ಹಲವು ವರ್ಷಗಳವರೆಗೆ ನರಳಿದ ಗ್ಲಿಕ್, ನಿಯಮಿತವಾಗಿ ವಿದ್ಯಾಭ್ಯಾಸ ಪಡೆಯಲಾಗದೆ ಪದವಿ ಗಳಿಸಲಿಲ್ಲ. ಇದರ ಪರಿಣಾಮವಾದ ಒಂಟಿತನವೇ ತನಗೆ ಕಾಯಿಲೆ ಮತ್ತು ದೇಹಗಳನ್ನು ಮೀರಿ ಆಲೋಚಿಸುವ ಹಾದಿಗಳ ಬಗ್ಗೆಯೂ ಕಲಿಸಿತು ಎನ್ನುತ್ತಾಳೆ. ಪದವಿ ಪಡೆಯದ ವಿದ್ಯಾರ್ಥಿಗಳಿಗೆಂದೇ ಕಾವ್ಯ-ಕಾರ್ಯಾಗಾರಗಳನ್ನು ನಡೆಸಿ ಪದವಿ ನೀಡುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ದಾಖಲಾಗುವ ಗ್ಲಿಕ್, ಅಲ್ಲಿನ ಅಧ್ಯಾಪಕರ ಸಾಂಗತ್ಯದಲ್ಲಿ ತನ್ನೊಳಗಿನ ಕವಿಯನ್ನು ಕಂಡುಕೊಂಡೆ ಎಂದು ಗೌರವದಿಂದ ಬರೆಯುತ್ತಾಳೆ.

ಮೊದಲ ಸಂಕಲನದ ಅಸ್ಪಷ್ಟ, ಛಿದ್ರ ಪ್ರತಿಮೆಗಳ ಕವನಗಳಿಂದ ಹಿಡಿದು ಸ್ಪಷ್ಟ, ಸರಳ, ತೀವ್ರ ಅನುಭವಗಳ ಇತ್ತೀಚಿನ ಸಂಕಲನದವರೆಗಿನ ಗ್ಲಿಕ್ ಕಾವ್ಯದಲ್ಲಿ ಪ್ರಧಾನವಾಗಿ ಕಾಣುವುದು ಆತ್ಮಕಥನಾತ್ಮಕವಾದ ಸಾಂಕೇತಿಕ ಅನುಭವಗಳು, ಅದರಲ್ಲೂ ವಿಶೇಷವಾಗಿ ಬಾಲ್ಯದ ನೆನಪಿನ ಚಿತ್ರಗಳು. ಮೆಲುದನಿಯಲ್ಲಿ ತನ್ನೊಡನೆ ತಾನು ಮಾತಾಡಿಕೊಳ್ಳುವ ಗ್ಲಿಕ್ ಕವಿತೆಗಳು ಏರುದನಿಯನ್ನು ಬಯಸುವವರಿಗೆ ಇಷ್ಟವಾಗದೆ ಇರಬಹುದು:

ಕನ್ನಡಿ ಬಿಂಬ
ಈ ದಿನ ರಾತ್ರಿ
ಕಪ್ಪುಕಿಟಕಿಯಲ್ಲಿ ನನ್ನನ್ನು ನಾನೇ ಕಂಡೆ
ನನ್ನ ತಂದೆಯದೇ ಪ್ರತಿಬಿಂಬದಂತೆ.
ಅವನ ಬದುಕು ಕಳೆದಿತ್ತು ಮುಗಿದಿತ್ತು ಹೀಗೆ:
ಗಳಿಗೆ ಗಳಿಗೆಯೂ ಸಾವಿನ ಬಗ್ಗೆ ಯೋಚಿಸುತ್ತ
ಉಳಿದೆಲ್ಲಾ ಇಂದ್ರಿಯಸುಖ ಕಡೆಗಣಿಸುತ್ತ...
ಹೀಗೇ ಹೀಗೇ ಕೊನೆಯ ಕ್ಷಣ ಬಂದಾಗ
ಜೀವ ಬಿಡುವುದೂ ಕಷ್ಟವೆನಿಸಲಿಲ್ಲ
ಬಿಡಲು ಏನಿತ್ತು ಆ ಜೀವನದೊಳಗೆ.
ಬದಲಿಸಲಿಲ್ಲ, ಹಿಂದಿರುಗಿಸಲಿಲ್ಲ ಅವನನ್ನು
ನನ್ನಮ್ಮನ ದನಿ ಕೂಡ.
ಯಾಕೆಂದರೆ ಹೀಗಿತ್ತು ಅವನ ಅಂತಿಮ ತಿಳಿವಳಿಕೆ:
ಇನ್ನೊಂದು ಜೀವವನ್ನು ಪ್ರೀತಿಸಲಾರದವನಿಗೆ
ಇಲ್ಲಿರಲು ಎಡೆಯಿಲ್ಲ ಇಲ್ಲಿ

ಕನಸು-ವಾಸ್ತವ, ನಿದ್ರೆ-ಎಚ್ಚರ, ದೇಹ-ಮನಸ್ಸು, ಕತ್ತಲು-ಬೆಳಕುಗಳ ನಡುವೆ ಈ ಬಗೆಯಲ್ಲಿ ತುಯ್ಯುವ ಗ್ಲಿಕ್ ಕವಿತೆಗಳಲ್ಲಿ ವೈರುಧ್ಯಗಳು ಒಂದು ಕ್ಷಣ ಬೇರೆಬೇರೆಯಾಗಿಯೇ ಉಳಿದಿವೆ ಅನ್ನಿಸಿದರೆ, ಮತ್ತೊಂದು ಕ್ಷಣ ಅವು ಬೆರೆಯುತ್ತವೆ. ವೈರುಧ್ಯಗಳ ನಡುವೆ ಯಾವುದೋ ಘನವಾದ ಸಂಗತಿಯು ತುಂಬುಹೊಳೆಯ ಹಾಗೆ ಹರಿಯುತ್ತಿದ್ದಾಗ ಮಾತ್ರ ಅಂತಹ ವಿರುದ್ಧ ಸಂಗತಿಗಳ ನಡುವೆ ಬಂಧವಿರಲು ಸಾಧ್ಯ. ಗ್ಲಿಕ್ ಕವಿತೆಗಳಲ್ಲಿ ಆ ಬಂಧ ಏರ್ಪಡುವುದು ಅತ್ಯಂತ ನೋವಿನ/ಸಂತೋಷದ ಭಾವಗಳನ್ನೂ ಅಭಿವ್ಯಕ್ತಿಸುವ ನಿರುದ್ವಿಗ್ನ ಭಾಷೆಯಿಂದಾಗಿ. ಈಕೆಯ ಕವಿತೆಗಳು ಬಳಸುವ ಭಾಷೆಯು ಮೂಡಿಸುವ ಸರಳ, ಶುದ್ಧ ಭಾವವು ಎಚ್ಚರದಿಂದ ಓದದಿದ್ದರೆ ಸಾಮಾನ್ಯವೆಂದು ತಿಳಿಯುವಷ್ಟು ಸರಳವಾಗಿದೆ.

ಪುರಾಣ ಪ್ರತಿಮೆ (ಮಿಥ್)ಗಳನ್ನು ಜೀವನದ ಸಂಕೀರ್ಣಗಳ ಶೋಧನೆಗೆ ಬಳಸಿಕೊಳ್ಳುವುದು ಗ್ಲಿಕ್‍ಳ ಕಾವ್ಯದ ಮುಖ್ಯ ಲಕ್ಷಣಗಳಲ್ಲಿ ಒಂದು. ಹಳೆಯ ಪ್ರತಿಮೆಗಳ ಮೂಲಕ ಹೊಸಪ್ರತಿಮೆಗಳನ್ನು ಸೃಷ್ಟಿಸಿ, ಅವನ್ನು ತನ್ನ ಕಾಲದ ಅನುಭವಗಳಿಗೆ ಹೆಣಿಗೆ ಹಾಕುತ್ತ, ಸಮಕಾಲೀನ ಕವಿತೆಯ ಮಾದರಿಗಳಿಗೆ ಗ್ಲಿಕ್ ಮುಖಾಮುಖಿಯಾಗುತ್ತಾಳೆ. ಇಂತಹ ಮುಖಾಮುಖಿಯಲ್ಲಿಯೇ ಗ್ಲಿಕ್ ‘ದ ಮಿಥ್ ಆಫ್ ಇನೊಸೆನ್ಸ್’ ಎನ್ನುವ ಮಾತನ್ನು ಸೃಷ್ಟಿಸಿದ್ದು. ‘ಮಿಥ್’ಅನ್ನು ‘ಸುಳ್ಳು’ ಎಂತಲೂ, ‘ಪುರಾಣ’ ಅಂತಲೂ ಏಕಕಾಲಕ್ಕೆ ಧ್ವನಿಸುವ ಇದೇ ಹೆಸರಿನ ಆಕೆಯ ಕವಿತೆಯು ಮುಗ್ಧತೆಯ ಕುರಿತಾದ ಹಲವು ನೆಲೆಗಳನ್ನು ನಮಗೆ ಕಾಣಿಸುತ್ತದೆ. ‘ಸರ್ಸಿಯ ಶಕ್ತಿ’ ಇಂತಹದ್ದೇ ಒಂದು ಕವಿತೆ. ಹೋಮರನ ಒಡೆಸ್ಸಿ ಕಾವ್ಯದಲ್ಲಿ ಬರುವ ಸರ್ಸಿ ಎಂಬ ಮಾಟಗಾತಿಯು ಒಡೆಸ್ಯೂಸ್ ಮತ್ತು ಅವನ ಜೊತೆಯ ನಾವಿಕರನ್ನು ತನ್ನ ದ್ವೀಪಕ್ಕೆ ಆಕರ್ಷಿಸುತ್ತಾಳೆ. ಅವನ ಸಂಗಡಿಗರನ್ನು ಹಂದಿಗಳಾಗಿ ಪರಿವರ್ತಿಸಿ ಅವನನ್ನು ಪ್ರೀತಿಸುತ್ತಾಳೆ. ಆದರೆ ತನ್ನ ಸ್ವದೇಶಕ್ಕೆ ಹಿಂದಿರುಗಬೇಕೆಂಬ ಅವನ ಹಂಬಲವನ್ನು ಅರ್ಥ ಮಾಡಿಕೊಂಡು ಸರ್ಸಿ ಅವನಿಗೆ ನೆರವು ನೀಡುತ್ತಾಳೆ. ಅವನ ನಿರ್ಗಮನದಿಂದ ಆಕೆ ವಿಚಲಿತಳಾಗುವುದಿಲ್ಲ. ಸರ್ಸಿಯ ಈ ಪುರಾಣ ಪ್ರತಿಮೆ ಗ್ಲಿಕ್‍ಳ ಕವಿತೆಯಾಗುವುದು ಹೀಗೆ:

ಸರ್ಸಿಯ ಶಕ್ತಿ
ಇಲ್ಲ, ನಾನು ಯಾರನ್ನೂ ಹಂದಿಯಾಗಿ ಬದಲಾಯಿಸಲಿಲ್ಲ.
ಕೆಲವು ಮನುಷ್ಯರು ಹಂದಿಗಳು.
ನಾನು ಅವರ ನಿಜರೂಪವನ್ನು ತೋರಿಸುತ್ತೇನೆ.
ಬಹಿರಂಗವು ಅಂತರಂಗವನ್ನು ಮರೆಮಾಚಲು ಬಿಡುವ
ಈ ನಿನ್ನ ಜಗತ್ತು ಹೇಸಿಗೆಯೆನಿಸಿದೆ ನನಗೆ.
ನಿನ್ನ ಜೊತೆ-ನಾವಿಕರು ಕೆಟ್ಟವರೇನಲ್ಲ;
ಕಡಿವಾಣವಿರದ ಬದುಕು ಹಾಗೆ ಮಾಡಿತ್ತು ಅವರನ್ನು.
ನನ್ನ ಮತ್ತು ನನ್ನ ಗೆಳತಿಯರ ಆಳ್ವಿಕೆಯಲ್ಲಿ
ಹಂದಿಗಳಾಗಿ ಬದುಕುವಾಗ
ಸಜ್ಜನರಾದರು ಅವರು ಮತ್ತೆ ಮೊದಲಿನಂತೆ
ಆಮೇಲೆ ನಾನು ಬದಲಿಸಿದೆ ನನ್ನ ಮಾಟದ ದಿಕ್ಕನ್ನು
ತೋರಿಸಿದೆ ನಿನಗೆ ನನ್ನ ಒಳ್ಳೆಯತನವನ್ನು, ಅಂತೆಯೇ ಶಕ್ತಿಯನ್ನು.
ಗೊತ್ತಾಯಿತು ನನಗೆ:
ನಾನು ನೀನು ಅವರು ಕೂಡ ಬಾಳಬಹುದಿಲ್ಲಿ ಸುಖವಾಗಿ
ಸರಳ ಬಯಕೆಗಳ ಗಂಡುಹೆಣ್ಣುಗಳಾಗಿ.
ಆದರೆ, ಇದು ಕೂಡ ಗೊತ್ತಾಯಿತು ಆ ಕೂಡಲೆ ನನಗೆ:
ನೀವಿಲ್ಲಿಯೆ ಉಳಿಯುವರಲ್ಲ, ಯಾವುದೋ ಹೆಬ್ಬಯಕೆ...
ಕರೆಯುತ್ತಿದೆ ನಿಮ್ಮೆಲ್ಲರನ್ನು, ಬಂದೇ ಬರಲಿದೆ ಅಗಲಿಕೆ
ಕಿರುಚುವ ಕೂಗುವ ಕಡಲನ್ನು ಪಳಗಿಸಿದರು ನಿನ್ನವರು
ನನ್ನ ನೆರವಿನಿಂದ........
ನೀ ಸುರಿಸುವ ಈ ಕಂಬನಿ ಹನಿ
ಕರಗಿಸುವುದೆ ನನ್ನ...?
ಕೇಳು ಗೆಳೆಯ ಕೇಳು:
ಪ್ರತಿ ಮಾಟಗಾತಿಯು ಒಳಮನದಲ್ಲಿ ವಿವೇಕಿ
ಇತಿಮಿತಿಗಳನರಿಯದವಳು ಕಾಣುವಳೇ ಒಳತಿರುಳ?
ನಿನ್ನನ್ನು ಪಡೆಯುವುದಷ್ಟೇ ಗುರಿಯಾಗಿದ್ದರೆ ನನ್ನ
ಸೆರೆಯಾಳಾಗಿಯೇ ಉಳಿಸುತ್ತಿದ್ದೆ ಅನುಗಾಲವು ನಿನ್ನ.

ಮೇಲ್ನೋಟಕ್ಕೆ ತಿಳಿಯಾಗಿದೆ ಎನ್ನಿಸುವ ಆದರೆ ಆಳದಲ್ಲಿ ತೀವ್ರಭಾವಗಳನ್ನು ಹುದುಗಿಸಿಕೊಂಡ ಮತ್ತು ಅದೇ ತೀವ್ರತೆಯನ್ನು ಓದುಗರಿಗೆ ದಾಟಿಸಬಲ್ಲ ಶಕ್ತಿ ಗ್ಲಿಕ್ ಕಾವ್ಯದ್ದು. ಆಕೆಯು ಕವಿತೆಗಳನ್ನು ನಿರೂಪಿಸುವ ಕ್ರಮದಲ್ಲಿ, ತೀವ್ರತೆಯಲ್ಲಿ ಪ್ರೀತಿಯ ಅನುಭವದಂತೆಯೇ ಸಾವಿನ ಅನುಭವ ಕೂಡ ಪ್ರಿಯವಾಗುತ್ತದೆ. ಈ ತೀವ್ರತೆಯೇ ಆಕೆಯ ಕಾವ್ಯದ ಜೀವದ್ರವ.

ಪ್ರಶಸ್ತಿ ಬಂದಾಗ ದೂರದರ್ಶನದ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗ್ಲಿಕ್ ಹೇಳಿರುವ ಮಾತುಗಳು ಆಕೆಯ ವ್ಯಕ್ತಿತ್ವ ಮತ್ತು ಕಾವ್ಯಸ್ವಭಾವಕ್ಕೆ ಹಿಡಿದ ಕನ್ನಡಿಯಂತಿವೆ:

“...ಈ ವಿಷಯ ಕೇಳಿದ ಕೂಡಲೇ, ನನ್ನ ಮೊದಲ ಆಲೋಚನೆ, ‘ಓಹೋ! ಹಾಗಾದರೆ ನನಗೆ ಇನ್ನು ಮೇಲೆ ಗೆಳೆಯರು ಇರುವುದಿಲ್ಲ, ಯಾಕೆಂದರೆ ಅವರೆಲ್ಲರೂ ಸಾಹಿತಿಗಳು’ ಎಂದು. ಆಮೇಲೆ, ‘ಅಯ್ಯೋ ಹಾಗೇನೂ ಆಗುವುದಿಲ್ಲ’. ಎಂದುಕೊಂಡೆ. ಇದೆಲ್ಲಾ ತುಂಬಾ ಹೊಸದು...ನಿಜ. ಇದು ದೊಡ್ಡ ಗೌರವ. ಆದರೆ ಈ ಪ್ರಶಸ್ತಿ ಬಂದವರಲ್ಲಿ ಎಷ್ಟೋ ಜನ ನಂಗೆ ಇಷ್ಟ ಇಲ್ಲ. ಆದರೆ ನಾನು ಇಷ್ಟ ಪಡೋರೂ ಬೇಕಾದಷ್ಟು ಜನ ಇದಾರೆ. ಇನ್ನು ಮೇಲೆ ಕೂಡ ನಾನು ಪ್ರೀತಿಸೋ ಜನರ ಜೊತೇಲಿ ದೈನಂದಿನ ಜೀವನ ಸಮಾಧಾನವಾಗಿ ಮುಂದುವರಿಸೋದು ನನಗೆ ಮುಖ್ಯ. ಹೌದು... ಇದು ಖಾಸಗೀ ಜೀವನದಲ್ಲಿ ಆಕ್ರಮ ಪ್ರವೇಶ ಅನ್ನಿಸತ್ತೆ. ಫೋನು ಬೆಳಿಗ್ಗೆಯಿಂದ ಕಿರುಚಿಕೊಳ್ತಾನೇ ಇದೆ...”

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಾಗಲೂ ಕನ್ನಡಕ್ಕೆ ಕಮ್ಮಿ ಎಂದರೆ ಎರಡು ನೊಬೆಲ್ ಪ್ರಶಸ್ತಿಗಳಾದರೂ ಬರಬೇಕಿತ್ತು ಅನ್ನುವ ಸಂಗತಿ ಮನಸ್ಸಿಗೆ ಬಂದು ಹೋಗುತ್ತದೆ. ಕುವೆಂಪು-ಬೇಂದ್ರೆ ಕೃತಿಗಳ ಹೋಲಿಕೆಯಲ್ಲಿ ಗ್ಲಿಕ್ ಕವಿತೆಗಳ ಬಗ್ಗೆ ಏನನ್ನಿಸುತ್ತದೆ ಎನ್ನುವುದು ಬೇರೆ ಮಾತು. ತಾನು ವಂಚಿತಗೊಂಡಾಗಲೂ ಬೇರೆಯವರ ಸಂತೋಷದಲ್ಲಿ ಹೆಮ್ಮೆ ಪಡುವ ಔದಾರ್ಯಕ್ಕೆ ನಾವು ಖ್ಯಾತರಲ್ಲವೆ? ಏನೇ ಇರಲಿ, ಗ್ಲಿಕ್‍ಗೆ ಸಂದ ನೊಬೆಲ್ ಪಾರಿತೋಷಕವು ನಿಜವಾದ ಕವಿತೆಯ ಘನತೆ, ಮಾನವನ್ನು ಹೆಚ್ಚಿಸಿದೆ ಎಂಬುದು ನೆಮ್ಮದಿಯ ಮಾತು.

ಯೌವನದ ದಿನಗಳಲ್ಲಿ ಕಾವ್ಯವಾಚನ (ಚಿತ್ರಕೃಪೆ: ಇಂಟರ್‌ನೆಟ್‌)

ಕವಿ ಶಕ್ತಿಗೆ ಸಂದ ಗೌರವ
ಅಮೆರಿಕ ಸಂಯುಕ್ತ ಸಂಸ್ಥಾನದ ಕವಿ ಲೂಯಿ ಗ್ಲಿಕ್ ಹುಟ್ಟಿದ್ದು 1943ರಲ್ಲಿ. ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು ಮತ್ತು ಕವಿತೆಯನ್ನು ಕುರಿತಾದ ಪ್ರಬಂಧ ಸಂಕಲನಗಳನ್ನು ಪ್ರಕಟಿಸಿರುವ ಗ್ಲಿಕ್ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪುಲಿಟ್ಜರ್ ಪ್ರಶಸ್ತಿ, ನ್ಯಾಶನಲ್ ಬುಕ್ ಅವಾರ್ಡ್‌ನಂತಹ ಹಲವಾರು ಪ್ರತಿಷ್ಠಿತ ಗೌರವಗಳ ಜೊತೆಗೆ ಈಗ ನೊಬೆಲ್ ಬಹುಮಾನ ಗ್ಲಿಕ್‌ಳ ಕಾವ್ಯಶಕ್ತಿಗೆ ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.