ಸಂತ ಬಲ್ಬೀರ್ ಸಿಂಗ್–ಈ ಹೆಸರು ಪಂಜಾಬ್ ರಾಜ್ಯದಲ್ಲಿ ಮನೆ ಮನಗಳನ್ನು ತಲುಪಿದೆ. ಜಲಂಧರ್ ಸಮೀಪದ ಸೀಚೆವಾಲ್ ಎಂಬ ಊರಿನಲ್ಲಿ ಇವರ ಆಶ್ರಮವಿದೆ, ಬಡ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳನ್ನು ತೆರೆದಿದ್ದಾರೆ. ಇಷ್ಟೇ ಆಗಿದ್ದರೆ ಬಲ್ಬೀರ್ ಸಿಂಗ್ ನಪ್ರಿಯರಾಗುತ್ತಿರಲಿಲ್ಲ. ಪಂಜಾಬ್‌ನಲ್ಲಿರುವ ಐದು ನದಿಗಳಲ್ಲಿ ಒಂದಾದ 160 ಕಿಲೋಮೀಟರ್ ಉದ್ದದ ‘ಕಾಳಿಬೆನ್’ ನದಿಯನ್ನು ಇವರು ಶುದ್ಧೀಕರಿಸಿದ್ದಾರೆ. ಇದರಿಂದಾಗಿ ಜಗತ್ತಿನ ಗಮನವನ್ನೂ ಸೆಳೆದಿದ್ದಾರೆ.
ಸಿಖ್ಖರ ಪವಿತ್ರ ಗ್ರಂಥವಾದ ‘ಗ್ರಂಥ ಸಾಹಿಬ್’ ಪ್ರತಿಪಾದಿಸಿರುವ ‘ಗಾಳಿ ನಮ್ಮ ಗುರು’, ‘ನೀರು ನಮ್ಮ ತಂದೆ’, ‘ಭೂಮಿ ನಮ್ಮ ತಾಯಿ’–ಈ ಮೂರು ತತ್ವಗಳನ್ನು ಅಕ್ಷರಶಃ ಪಾಲಿಸಿಕೊಂಡು, ತನ್ನ ಅನುಯಾಯಿಗಳನ್ನು ಈ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿರುವ ಅಪರೂಪದ ಸಂತ ಬಲ್ಬೀರ್ ಸಿಂಗ್ ಪರಿಸರ ಚಳವಳಿಗೆ ಮಾದರಿಯಾಗಿದ್ದಾರೆ.
1970ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ ಹಸಿರುಕ್ರಾಂತಿಯ ಪ್ರಥಮ ಪ್ರಯೋಗ ಪಂಜಾಬ್‌ನಲ್ಲಿ ನಡೆಯಿತು. ಅಧಿಕ ಇಳುವರಿಯ ಮೋಹಕ್ಕೆ ಬಲಿ ಬಿದ್ದ ರೈತ ಸಮುದಾಯ ಹೈಬ್ರಿಡ್ ಬಿತ್ತನೆಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಅತ್ಯಧಿಕ ಗೋಧಿ ಮತ್ತು ತರಕಾರಿ ಬೆಳೆ ತೆಗೆಯುವಲ್ಲಿ ಯಶಸ್ವಿಯಾಯಿತು. ಆದರೆ, ಈ ಹುಮ್ಮಸ್ಸು ಮತ್ತು ಅಧಿಕ ಇಳುವರಿಯ ಪ್ರಯೋಗ ಬಹುಕಾಲ ನಿಲ್ಲಲಿಲ್ಲ. ನೋಡ ನೋಡುತ್ತಿದ್ದಂತೆ ಪಂಜಾಬಿನ ಫಲವತ್ತಾದ ಭೂಮಿ ಅಧಿಕ ನೀರು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕದ ಫಲವಾಗಿ ಚೌಳು ಭೂಮಿಯಾಗಿ ಪರಿವರ್ತನೆಗೊಂಡಿತು.
ಕೊಳವೆಬಾವಿಗಳಿಂದ ವಾಣಿಜ್ಯ ಬೆಳೆಗಳಿಗೆ ನೀರಿನ ದುರ್ಬಳಕೆಯಾಗುತ್ತಿದ್ದಂತೆ, ಅಲ್ಲಿನ ಅಂತರ್ಜಲ ಕುಸಿಯಿತು. ಕೆರೆ, ಬಾವಿಗಳು ಬತ್ತಿ ಹೋದವು. ನದಿಗಳು ಒಣಗಿ ಹೋಗುವುದರ ಜೊತೆಗೆ ಹೂಳು ತುಂಬಿಕೊಂಡು, ಹಳ್ಳಿ-ಪಟ್ಟಣಗಳ ಕೊಳಚೆನೀರನ್ನು ಸಾಗಿಸುವ ಗಟಾರಗಳಾಗಿ ಬದಲಾದವು. ಇವುಗಳಿಗೆ ಮೌನ ಸಾಕ್ಷಿಯಾಗಿದ್ದ ಸಂತ ಬಲ್ಬೀರ್ ಸಿಂಗ್ ತಾವು ಬದುಕುತ್ತಿರುವ ಜಲಂಧರ್ ನಗರದ ಪ್ರಾಂತ್ಯದಲ್ಲಿ ಬತ್ತಿ ಹೋಗಿದ್ದ ಹಾಗೂ ಪಂಜಾಬಿನ ಪವಿತ್ರ ನದಿಗಳಲ್ಲಿ ಒಂದಾದ ‘ಕಾಳಿಬೆನ್’ ನದಿಗೆ ಮರುರೂಪ ಕೊಡಬೇಕೆಂದು ನಿರ್ಧರಿಸಿದರು. ಆದರೆ, ಅದು ಸುಲಭದ ಸಂಗತಿಯಾಗಿರಲಿಲ್ಲ. ಏಕೆಂದರೆ ನದಿಯ ಪಾತ್ರ ವಿಕಾರಗೊಂಡಿತ್ತು. ನದಿಯ ಹೂಳಿನಲ್ಲಿ ಗಿಡಗಳು ಬೆಳೆದಿದ್ದವು. ಇದಲ್ಲದೆ ನದಿಯ ಉದ್ದಗಲಕ್ಕೂ ತಟದಲ್ಲಿದ್ದ ಗ್ರಾಮಗಳು ಮತ್ತು ಪಟ್ಟಣಗಳ ಕೊಳಚೆನೀರನ್ನು ನದಿಗೆ ಹರಿಯ ಬಿಡಲಾಗಿತ್ತು. ಇದರ ಶುದ್ಧೀಕರಣದ ಕೆಲಸ ಸರ್ಕಾರ ಮಾತ್ರ ಮಾಡುವ ಕಾರ್ಯವಾಗಿತ್ತು. ಆದರೆ ಜನತೆಯ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ಯಾವೊಂದು ಯೋಜನೆಯೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ಬಲ್ಬೀರ್ ಸಿಂಗ್ ತಮ್ಮ ಅನುಭವದಿಂದ ಅರಿತಿದ್ದರು.
ಈ ಕಾರಣಕ್ಕಾಗಿ ಅವರು ನದಿ ಶುದ್ಧೀಕರಣ ಯೋಜನೆಗೆ ಸಿಖ್ಖರ ಧಾರ್ಮಿಕ ಕ್ರಿಯೆಯೊಂದನ್ನು ಮಾದರಿಯಾಗಿ ಮತ್ತು ಅಸ್ತ್ರವಾಗಿ ಬಳಸಿಕೊಂಡರು. ಸಿಖ್ಖರ ಪವಿತ್ರ ಕ್ರೇತ್ರವಾದ ಅಮೃತಸರದಲ್ಲಿರುವ ಸ್ವರ್ಣ ಮಂದಿರದ ಕೊಳವನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ಸಿಖ್ಖರು ಕರಸೇವೆ ಮೂಲಕ ಸ್ವಚ್ಛಗೊಳಿಸುವುದನ್ನು ನೋಡಿದ್ದ ಸಂತ ಬಲ್ಬೀರ್ ಸಿಂಗ್, ಅದೇ ಪ್ರಯೋಗವನ್ನು ನದಿ ಶುದ್ಧೀಕರಣಕ್ಕೆ ಬಳಸಿಕೊಂಡರು. ನದಿ ತಟದಲ್ಲಿದ್ದ ಪ್ರತಿಯೊಂದು ಗ್ರಾಮ, ಪಟ್ಟಣದ ನಾಗರಿಕರನ್ನು ಮತ್ತು ನದಿ ನೀರಿನಿಂದ ಬೇಸಾಯ ಮಾಡುತ್ತಿದ್ದ ರೈತರ ಮನವೊಲಿಸಿದರು. ತಾವೇ ನದಿಗೆ ಇಳಿದು ಕರಸೇವೆಯಲ್ಲಿ ಪಾಲ್ಗೊಂಡರು. ವಿರೂಪಗೊಂಡಿದ್ದ ನದಿ ಪಾತ್ರವನ್ನು ಸರಿಪಡಿಸಿ, ಅಲ್ಲಲ್ಲಿ ಸೋಪಾನ, ಉದ್ಯಾನಗಳನ್ನು ನಿರ್ಮಿಸಿದರು. ಭೂಸವೆತ ತಡೆಗಟ್ಟಲು ನದಿಯ ತೀರದುದ್ದಕ್ಕೂ ಗಿಡಗಳನ್ನು ನೆಟ್ಟರು.
ಇವುಗಳ ಜೊತೆಗೆ ಅಲ್ಲಿನ ಗ್ರಾಮಗಳ ಮತ್ತು ಪಟ್ಟಣಗಳ ಕೊಳಚೆನೀರನ್ನು ತಡೆಗಟ್ಟುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಪಂಜಾಬ್ ಸರ್ಕಾರದ ಸಹಯೋಗದಲ್ಲಿ ಪ್ರತಿ ಗ್ರಾಮ ಮತ್ತು ಪಟ್ಟಣಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಒಳಚರಂಡಿಗಳನ್ನು ನಿರ್ಮಿಸಿ ಕೊಳಚೆನೀರು ಊರಾಚೆಗಿನ ಒಂದು ಬೃಹತ್ ಗುಂಡಿಯಲ್ಲಿ ನಿಲ್ಲುವಂತೆ ವ್ಯವಸ್ಥೆ ರೂಪಿಸಿದರು. ಹೀಗೆ ಶೇಖರವಾದ ಕೊಳಚೆನೀರು ನೈಸರ್ಗಿಕವಾಗಿ ತಿಳಿಯಾದ ನಂತರ ಈ ನೀರನ್ನು ರೈತರು ಕೃಷಿಗೆ ಉಪಯೋಗಿಸುವಂತೆ ಮಾಡಿ, ಕೊಳವೆಬಾವಿಗಳ ಅವಲಂಬನೆಯನ್ನು ಕಡಿಮೆ ಮಾಡಿದರು.
ಗ್ರಾಮಸ್ಥರ ಸಹಾಯದಿಂದ ‘ಕಾಳಿಬೆನ್’ ನದಿ ಶುದ್ಧೀಕರಣಗೊಂಡು ಅಲ್ಲಿನ ಜನರ ಪಾಲಿಗೆ ಜೀವ ನದಿಯಾಗಿ ರೂಪಾಂತರಗೊಂಡಿದೆ. ಸತತ ಹದಿನಾರು ವರ್ಷಗಳ ಶ್ರಮ, ಬದ್ಧತೆ, ಪರಿಸರದ ಮೇಲಿನ ಪ್ರೀತಿ ಹಾಗೂ ತಮ್ಮ ನೈತಿಕತೆ ಮತ್ತು ವೈಯಕ್ತಿಕ ಚಾರಿತ್ರ‍್ಯ ಇವುಗಳನ್ನು ಮೂಲ ಬಂಡವಾಳವನ್ನಾಗಿ ಮಾಡಿಕೊಂಡು ನದಿಯೊಂದಕ್ಕೆ ಮರುಜೀವ ಕೊಟ್ಟ ಸಂತ ಬಲ್ಬೀರ್ ಸಿಂಗ್ ಅವರು ಇಕೊ ಬಾಬಾ, ಸೀಚ್ ವಾಲೆ ಬಾಬಾ ಮುಂತಾದ ಹೆಸರುಗಳಿಂದ ಪಂಜಾಬ್ ಸೇರಿದಂತೆ ಉತ್ತರ ಭಾರತದಲ್ಲಿ ಹೆಸರುವಾಸಿಯಾದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ತಾವು ಹೋದ ಸ್ಥಳಗಳಲ್ಲಿ ಈ ಮಹಾತ್ಮನ ಕಾರ್ಯವನ್ನು ಗುಣಗಾನ ಮಾಡಿದರು.
ಅಮೆರಿಕದ ನ್ಯೂಯಾರ್ಕ್ ನಗರದಿಂದ ಪ್ರಕಟವಾಗುವ ಪ್ರಸಿದ್ಧ ನಿಯತಕಾಲಿಕೆ ‘ಟೈಮ್ಸ್ ಮ್ಯಾಗಜಿನ್’ ಬಲ್ಬೀರ್ ಸಿಂಗ್ ಅವರಿಗೆ ‘ಹೀರೊ ಆಫ್ ಎನ್ವಿರಾನ್‌ಮೆಂಟ್’ ಎಂಬ ಜಾಗತಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಮತ್ತು ಏಷ್ಯಾ ಮೂಲದ ವ್ಯಕ್ತಿ ಎಂಬ ಗೌರವಕ್ಕೆ ಬಾಬಾ ಪಾತ್ರರಾದರು. ಯಾವೊಂದು ಪ್ರಶಸ್ತಿ, ಗೌರವಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದ ಬಾಬಾ ಅವರು ಜಲಂಧರ್, ದೋಬಾ ಪ್ರಾಂತ್ಯದ ರೈತರಿಗೆ ನೀರಿನ ಮಿತಬಳಕೆಯ ಉಪನ್ಯಾಸ ನೀಡುತ್ತಾ, ಪಂಜಾಬ್ ರಾಜ್ಯದ ಜಲಮೂಲಗಳನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ. ತಾವು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು ಹಾಗೂ ಪರಿಸರದ ಪಾಠವನ್ನು ಬೋಧಿಸುವಂತೆ ನೋಡಿಕೊಳ್ಳುತ್ತಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.