ಕಲ್ಲು ಮಣ್ಣೊಳಗೆ ಮಲಗಿದ ನೀರ ದೇವಿಯ ಕರೆತಂದ ಕರಗಳ ತುಂಬಾ ಗಾಯಗಳ ಕತೆಗಳಿವೆ..
ಮಂಕ್ರಿಯ ತುಂಬ ಹೊತ್ತ ಮಣ್ಣಿನ ಘಮಲಿಗೂ ಬದುಕಿನ ಬಣ್ಣವಿದೆ..
ಬೆಂಗಳೂರಿನ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಗೋಡೆಯಲ್ಲಿ ದೊಡ್ದದಾದ ಚಿತ್ರವೊಂದರ ನಡು ನಡುವೆ ಬರೆದಿರುವ ಈ ಸಾಲುಗಳು ಪ್ರತಿದಿನ ಕಣ್ಣಿಗೆ ಬೀಳುತ್ತಿದ್ದವು. ಚಿತ್ರದ ಹಿಂದಿನ ಸ್ವಾರಸ್ಯದ ಜಾಡು ಹಿಡಿದು ಹೊರಟಾಗ ತೆರೆದುಕೊಂಡಿದ್ದು ಬೆಂಗಳೂರು ಮಹಾನಗರಿಯ ದಾಹ ತಣಿಸುವ ಜಲಯೋಧರ ಕಥೆ!
‘ಬೆಂಗಳೂರಿನಲ್ಲಿ ಇಷ್ಟಾದರೂ ನೀರು ಸಿಗಲು ಅವರೇ ಕಾರಣ. ಅವರಿಲ್ಲದಿದ್ದರೆ ನಗರದ ನೀರಿನ ಪರಿಸ್ಥಿತಿ ಇನ್ನಷ್ಟು ಭೀಕರವಾಗಿರುತ್ತಿತ್ತು. ಬೆಂಗಳೂರಿಗರೆಲ್ಲ ಅವರಿಗೆ ಆಭಾರಿಯಾಗಿರಬೇಕು’ ಎನ್ನುತ್ತಲೇ ಚಿತ್ರದ ಹಿಂದಿನ ಕಥೆಯನ್ನು ಬಿಚ್ಚಿಟ್ಟವರು ಪರಿಸರ ಸಂರಕ್ಷಣೆಗಾಗಿ ಇರುವ ಬಯೋಮ್ ಟ್ರಸ್ಟ್‌ನ ಸಲಹೆಗಾರ ವಿಶ್ವನಾಥ್. ಎಲ್ಲೂ ಪ್ರವರ್ಧಮಾನಕ್ಕೆ ಬಾರದೆ, ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುತ್ತ, ಪೂರ್ವಸೂರಿಗಳು ದಾಟಿಸಿದ ಮಣ್ಣು ಅಗೆಯುವ ಕುಲಕಸುಬನ್ನೇ ನಂಬಿ, ಭೂಮಿತಾಯಿಯ ದಾಹ ಇಂಗಿಸುವ, ನಗರದ ಅಂತರ್ಜಲವನ್ನು ಕಾಪಿಟ್ಟುಕೊಳ್ಳುವ ಮಣ್ಣಿನ ಮಕ್ಕಳಾದ ಬೋವಿ ಅಥವಾ ರಾಜಾ ಬೋವಿ ಸಮುದಾಯದವರ ಕಥನ...
ಬಾವಿ, ಇಂಗುಬಾವಿಗಳನ್ನು ತೋಡುವ ಮೂಲಕ ನೀರಿನ ಮರುಪೂರಣ ಹಾಗೂ ಅಂತರ್ಜಲ ಮಟ್ಟ ಕಾಪಾಡುವಲ್ಲಿ ಇವರ ಪಾತ್ರ ಹಿರಿದು. ಬೆಂಗಳೂರಿನಲ್ಲಿ ಅಂದಾಜು 2.5 ಲಕ್ಷ ಬಾವಿಗಳು, ಇಂಗುಬಾವಿಗಳನ್ನು ತೋಡಿ ನೀರಿನ ಸಂರಕ್ಷಣೆಯಲ್ಲಿ, ನಗರದ ಪ್ರವಾಹವನ್ನು ಕೊಂಚವಾದರೂ ತಡೆಗಟ್ಟುವಲ್ಲಿ ಕೊಡುಗೆ ನೀಡಿದ್ದಾರೆ. ಹಳೆಯ ಬಾವಿಗಳಿಗೆ, ಕೆರೆಗಳಿಗೆ, ಬತ್ತಿದ ಕೊಳವೆಬಾವಿಗಳಿಗೆ ಜೀವ ನೀಡಿದ್ದೂ ಇದೇ ಸಮುದಾಯದ ಶ್ರಮಜೀವಿಗಳು.
ನಗರೀಕರಣದ ಬೇನೆ ಬೆಂಗಳೂರನ್ನು ಬಾಧಿಸದಂತೆ ಜನ ಮತ್ತೆ ಪ್ರಕೃತಿ ಕಡೆ ಮರಳಲು ಪ್ರಾರಂಭಿಸಿದ್ದಾರೆ. ಈ ಬಾರಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದ್ದರಿಂದ ಜನರು ಎಚ್ಚೆತ್ತುಕೊಂಡಿದ್ದಾರೆ. ಮನೆಗಳು, ಅಪಾರ್ಟ್‌ಮೆಂಟ್‌ಗಳು, ಟೆಕ್‌ಪಾರ್ಕ್‌ಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಇಂಗುಬಾವಿ ತೋಡಿಸುತ್ತಿದ್ದಾರೆ.
‘ತೊಂಬತ್ತರ ದಶಕದ ಆರಂಭದಲ್ಲಿ ಬೋರ್‌ವೆಲ್‌ಗಳ ಹಾವಳಿ ಜೊತೆಗೆ ಮನೆ ಮನೆಗೆ ಕಾವೇರಿ ನೀರು ಬರಲು ಆರಂಭವಾಗಿದ್ದರಿಂದ ಇವರಿಗೆ ಖಾಲಿ ಕೂರುವ ಪರಿಸ್ಥಿತಿ ಬಂದಿತ್ತು. ಪಾಯ ತೋಡುವ ಕೆಲಸವನ್ನು ಯಂತ್ರಗಳು ಮಾಡತೊಡಗಿದಾಗ ಇವರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು. ಹೊಟ್ಟೆಪಾಡಿಗೆ ಕೂಲಿಯನ್ನು ಆಶ್ರಯಿಸಬೇಕಾಗಿ ಬಂತು. ಈಗ ನೀರಿನ ಸಮಸ್ಯೆಗೆ ಮೂಲ ಕಾರಣ ತಿಳಿದುಕೊಂಡ ಬಳಿಕ ಜನರ ಮನಸ್ಥಿತಿ ಬದಲಾಗಿದೆ. ಬಾವಿಗಳು, ಇಂಗುಬಾವಿಗಳಿಗೆ ಬೇಡಿಕೆ ಹೆಚ್ಚಿದೆ. ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸುತ್ತಿದ್ದಾರೆ. ಇವೆಲ್ಲ ಕೆಲಸವನ್ನೂ ಬೋವಿ ಜನಾಂಗದವರೇ ಮಾಡುವುದರಿಂದ ಅವರಿಗೆ ಮತ್ತೆ ಬೇಡಿಕೆ ಹೆಚ್ಚಾಗಿದೆ, ಹಣ ಬರುತ್ತಿದೆ. ಭೂಮಿಯ ದಾಹ ತೀರಿಸುವ ಕೆಲಸವೂ ಆಗುತ್ತಿದೆ’ ಎಂದು ವಿಶ್ವನಾಥ್ ವಿವರಿಸಿದರು.
‘ಮೊದಲು ಬಾವಿಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಈಗ ಇಂಗುಬಾವಿಗಳನ್ನು ತೋಡಿಸುತ್ತಿದ್ದಾರೆ. ಹಿಂದೆ ಮನೆ ಮನೆಗೆ ತೆರಳಿ ಕೆಲಸ ಇದೆಯೇ ಎಂದು ಕೇಳುತ್ತಿದ್ದೆವು. ಈಗ ಮೊಬೈಲ್ ಬಂದಿದೆ. ಏಪ್ರಿಲ್ ತಿಂಗಳೊಂದರಲ್ಲೇ 400-500 ಕರೆಗಳು ಬಂದಿವೆ. ಈಗ ಕಂಪನಿಗಳು ನಮ್ಮ ಜೊತೆ ಒಪ್ಪಂದ ಮಾಡಿಕೊಂಡು ಕೆಲಸ ಮಾಡಿಸುತ್ತಿವೆ. ನಾವೂ ಅಪಾರ್ಟ್‌ಮೆಂಟ್, ವಿವಿಧ ಸಂಸ್ಥೆಗಳಿಗೆ ತೆರಳಿ ನೀರಿನ ಮರುಪೂರಣ ಹಾಗೂ ಇಂಗುಬಾವಿಯ ಅವಶ್ಯಕತೆ, ಅನಿವಾರ್ಯತೆ ಹಾಗೂ ಲಾಭಗಳನ್ನು ತಿಳಿಸಿ ಜಾಗೃತಿ ಮೂಡಿಸುತ್ತೇವೆ. ಅವರೇ ಕರೆದು ನಮಗೆ ಕೆಲಸ ಕೊಡಿಸುತ್ತಾರೆ. ಒಂದು ಕೆಲಸ ಸಿಕ್ಕರೆ ನಾಲ್ಕೈದು ಕುಟುಂಬಗಳ ಹೊಟ್ಟೆ ತುಂಬುತ್ತದೆ’ ಎನ್ನುತ್ತಾರೆ ಆನೇಕಲ್ ತಾಲ್ಲೂಕಿನ ಸರ್ಜಾಪುರದ ಬೋವಿಪಾಳ್ಯದ ರಾಮಕೃಷ್ಣ.
‘ಮೂವತ್ತು ವರ್ಷದಿಂದ ಬಾವಿ ತೋಡುವ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆ 6-7 ಗಂಟೆಗೆಲ್ಲಾ ತಂಡವಾಗಿ ಮನೆಯಿಂದ ಹೊರಡುತ್ತೇವೆ. 3*30 ಅಡಿಯ ಸಾಧಾರಣ ಬಾವಿ ತೋಡಲು 5-7 ಜನರಿಗೆ ಎರಡು ದಿನ ಬೇಕು. ಬಾವಿಯ ಹೂಳೆತ್ತಲು ಒಂದು ದಿನ ಸಾಕು’ ಎಂದು ಹೊರಮಾವು ಬಳಿಯ ಮನೆಯೊಂದರಲ್ಲಿ ಇಂಗುಬಾವಿ ತೋಡುತ್ತಿದ್ದ ಆನಂದ್ ಕುಮಾರ್ ಹೇಳಿದರು. ಬೇಸಿಗೆಯಲ್ಲಿ ಬಾವಿ ತೋಡಲು ಬೇಡಿಕೆ ಜಾಸ್ತಿ. ಕೋಲಾರ, ಚಿಕ್ಕಬಳ್ಳಾಪುರ, ಆಂಧ್ರಪ್ರದೇಶ, ತಮಿಳುನಾಡಿಗೂ ತೆರಳಿ ಬಾವಿ ತೋಡುತ್ತಾರೆ.
ಬೆಂಗಳೂರಿನಲ್ಲಿ ಇಂಗುಬಾವಿ ಮಾಡಿಸುವವರ ಸಂಖ್ಯೆ ಹೆಚ್ಚು. ನಗರದ ಹೊರಗೆ ಸಾಮಾನ್ಯ ಬಾವಿಯನ್ನು ಜನ ಬಯಸುತ್ತಾರೆ. ಬಾವಿ ತೆಗೆದು ಅದಕ್ಕೆ ಬೇಕಾದ ರಿಂಗ್ ಹಾಗೂ ಇನ್ನಿತರ ಕೆಲಸಗಳನ್ನು ಇವರೇ ಮಾಡಿಕೊಡುತ್ತಾರೆ. ಕೆಲಸ ಇಲ್ಲದ ಸಮಯದಲ್ಲಿ ಪ್ಲಂಬ್ಲಿಂಗ್, ಕೂಲಿ, ಗಾರೆ ಕೆಲಸ ಮಾಡುತ್ತಾರೆ.
ಕಬ್ಬನ್ ಪಾರ್ಕ್, ಲಾಲ್‌ಬಾಗ್, ಜೆ.ಪಿ. ಪಾರ್ಕ್, ಮೆಟ್ರೊ ಕಂಬಗಳ ನಡುವೆ, ರಸ್ತೆ ಹಾಗೂ ರಾಜಕಾಲುವೆ ಬಳಿ–ಹೀಗೆ ಹಲವು ಕಡೆ ಅಪಾರ ಸಂಖ್ಯೆಯಲ್ಲಿ ಇಂಗುಬಾವಿಗಳನ್ನು ತೋಡಿದ್ದಾರೆ. ಬೆಂಗಳೂರಿನಲ್ಲಿ ಹತ್ತು ಲಕ್ಷ ಇಂಗುಬಾವಿಗಳನ್ನು ತೋಡಲು ಯೋಜನೆ ಹಾಕಿಕೊಂಡಿರುವ ಬಯೋಮ್ ಟ್ರಸ್ಟ್, ಇವರೊಂದಿಗೆ ಮಾತುಕತೆ ನಡೆಸಿ ಜಲ ಸಂರಕ್ಷಣೆ, ಮರುಪೂರಣ, ಮಳೆ ನೀರು ಸಂಗ್ರಹ, ಬತ್ತಿದ ಬೋರ್‌ವೆಲ್ ಪುನಶ್ಚೇತನ ಮಾಡುವುದರ ಬಗ್ಗೆ ತರಬೇತಿ ನೀಡಿದೆ. ಕೆಲಸಕ್ಕೆ ಹೋದಲ್ಲಿ ಇವರೇ ಜನರಿಗೆ ಈ ಬಗ್ಗೆ ಅರಿವನ್ನೂ ಮೂಡಿಸುತ್ತಾರೆ.
ಬೋವಿಪಾಳ್ಯ, ವಡ್ಡರಪಾಳ್ಯ ಹೀಗೆ ಬೆಂಗಳೂರಿನ ಸುತ್ತಮುತ್ತ ಬೋವಿ ಸಮುದಾಯಕ್ಕೆ ಸೇರಿದ ಸುಮಾರು ಹದಿನೈದು ಗ್ರಾಮಗಳಿವೆ. ಎಲ್ಲರದ್ದೂ ಮೂಲ ಕಸುಬು ಬಾವಿ ತೋಡುವುದೇ. ಮಹಿಳೆಯರೂ ಕೆಲಸದಲ್ಲಿ ಪುರುಷರ ಬೆನ್ನಿಗೆ ನಿಂತಿದ್ದಾರೆ. ‘ನಾನು ಎಂ.ಕಾಂ ಓದುತ್ತಿದ್ದೇನೆ. ರಜಾ ದಿನಗಳಲ್ಲಿ ಬಾವಿ ತೋಡುವ ಕೆಲಸಕ್ಕೆ ಬರುತ್ತೇನೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ನಮ್ಮ ಸಮಾಜ ಹಿಂದಿದೆ. ಸರ್ಕಾರ ನಮ್ಮ ಸಮುದಾಯದ ಅಭಿವೃದ್ಧಿ ಜೊತೆಗೆ ಮುಖ್ಯವಾಹಿನಿಗೆ ಕರೆತರಲು ಕಾಳಜಿ ವಹಿಸಬೇಕು’ ಎಂದು ತೋಡುತ್ತಿದ್ದ ಬಾವಿಯೊಳಗಿಂದಲೇ ಪ್ರದೀಪ್ ಕೂಗಿ ಹೇಳಿದರು.
ಬೆಂಗಳೂರಿನ ನೀರಿನ ಸಮಸ್ಯೆಗೆ ಮುಖ್ಯ ಪರಿಹಾರ ಇಂಗುಬಾವಿ ಎನ್ನುವುದು ವಿಶ್ವನಾಥ್ ಅವರ ಅಂಬೋಣ. ‘ಮೂರು ಅಡಿ ಸುತ್ತಳತೆಯ ಇಪ್ಪತ್ತು ಅಡಿಯ ಒಂದು ಬಾವಿಯಲ್ಲಿ ವರ್ಷಕ್ಕೆ ಸುಮಾರು ಒಂದು ಲಕ್ಷ ಲೀಟರ್ ನೀರನ್ನು ಭೂಮಿಯ ಒಳಗೆ ಇಳಿಸಬಹುದು. ಮಳೆನೀರನ್ನು ಸೋಸಿ ಇಂಗುಬಾವಿಗೆ ಇಳಿಸಿದರೆ ಭೂಮಿಯ ದಾಹ ತಣಿಸಬಹುದು. ಒಂದು ಕೊಳವೆಬಾವಿಗೆ ₹2-4 ಲಕ್ಷ ಖರ್ಚಾಗುತ್ತದೆ. ಆದರೆ ಇಂಗುಬಾವಿಗೆ ₹30-40 ಸಾವಿರ ಮಾತ್ರ ಖರ್ಚಾಗುತ್ತದೆ. ಬೆಂಗಳೂರಿನಲ್ಲಿ ಪ್ರತಿದಿನ ಸರಾಸರಿ ಮೂರು ಸಾವಿರ ದಶಲಕ್ಷ ಲೀಟರ್ ಮಳೆಯಾಗುತ್ತದೆ. 10 ಲಕ್ಷ ಇಂಗುಬಾವಿಗಳನ್ನು ಮಾಡಿದರೆ ಇದರ ಅರ್ಧದಷ್ಟು ನೀರನ್ನು ಭೂಮಿಯೊಳಗೆ ಕಳುಹಿಸಬಹುದು. ಕಾವೇರಿಯಿಂದ ಪ್ರತಿದಿನ 1,450 ದಶಲಕ್ಷ ನೀರು ಬೆಂಗಳೂರಿಗೆ ಸರಬರಾಜಾಗುತ್ತದೆ. ಅಂದರೆ, 10 ಲಕ್ಷ ಇಂಗುಬಾವಿಗಳಿಂದ ಮತ್ತೊಂದು ಕಾವೇರಿಯನ್ನೇ ಸೃಷ್ಟಿಸಬಹುದು. ಇದೇ ಕೆಲಸವನ್ನು ಬೋವಿ ಸಮುದಾಯ ಮಾಡುತ್ತಿದೆ. ಇಂಗು ಬಾವಿಗಳು ಇದ್ದಲ್ಲಿ ಈ ಬಾರಿ ನೀರಿನ ಸಮಸ್ಯೆಯೇ ಬಂದಿಲ್ಲ’ ಎಂದು ಅವರು ಹೇಳಿದರು. ಈ ಜಲಯೋಧರ ಜೊತೆಗಿನ ಹಲವು ಗಂಟೆಗಳ ಮಾತುಕತೆ ನಂತರ ಮರಳುವಾಗ ಮೆಟ್ರೊ ಗೋಡೆ ಮೇಲಿನ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತಲೇ ಇವೆ.
ಒಣಭೂಮಿಯೊಳಗೆ ಹರಿವ ಬಿಕ್ಕುಗಳು.. ಅಗೆದಷ್ಟೂ ಆಳಕ್ಕೆ ಸರಿವ ತರಂಗಗಳು..
ಕಲ್ಲಿನ ಪದರಗಳ ನಡು ನಡುವೆ ನಡೆಯುತ್ತಿದೆ ಜಲಜಾತ್ರೆ, ಸದ್ದೇ ಆಗದೇ..
ಈ ಬಾರಿಯಷ್ಟು ನೀರಿನ ಸಮಸ್ಯೆ ಯಾವತ್ತೂ ಎದುರಾಗಿರಲಿಲ್ಲ. ಜೇಬಿಗೆ ಭಾರವಾದರೂ ಟ್ಯಾಂಕ್ ನೀರೇ ಅನಿವಾರ್ಯವಾಗಿತ್ತು. ಅದೂ ಕೂಡ ಬಳಕೆಗೆ ಯೋಗ್ಯವಾಗಿರಲಿಲ್ಲ. ನೀರು ಮರುಪೂರಣದ ಬಗ್ಗೆ ಮಾಹಿತಿ ಪಡೆದುಕೊಂಡು ಇಂಗು ಬಾವಿ ತೋಡಿಸಿದ್ದೇನೆ.ಜಯಲಕ್ಷ್ಮಿ ಹರಿಹರನ್, ಹೊರಮಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.