ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನ ಆರು ಪ್ಲಾಟ್‌ಫಾರಂಗಳಲ್ಲಿ ಐದು ನಿಮಿಷಕ್ಕೊಮ್ಮೆ ಬಂದು ಹೊರಡುವ ‘ಲೋಕಲ್’ ರೈಲುಗಳು ತಮ್ಮೊಡಲೊಳಗೆ ಹತ್ತಾರು ಕತೆಗಳನ್ನು ಹೊತ್ತು ಓಡಾಡುತ್ತವೆ. ಸ್ಟೇಷನ್ ತುಂಬಾ ಫಾಸ್ಟ್ ಮೋಷನ್ ದೃಶ್ಯಾವಳಿಯ ರೀತಿ ನೂರಾರು ಜನರ ಓಡಾಟ. ಇಲ್ಲಿ ಶ್ರೀಸಾಮಾನ್ಯ ಚಲಿಸುವ ಚಿತ್ರವಾಗಿಬಿಡುತ್ತಾನೆ!
ಮುಂಬೈನ ಫೋರ್ಟ್ ಏರಿಯಾ ಸರ್ಕಾರಿ ಸಚಿವಾಲಯ, ಕಾರ್ಯಾಲಯ, ಕೋರ್ಟು, ಬ್ಯಾಂಕುಗಳ ಹೆಡ್ ಆಫೀಸುಗಳು, ಮಹಾನಗರಪಾಲಿಕೆ ಇವೆಲ್ಲವುಗಳಿಂದ ಕೂಡಿ ಊರಿನ ಮೆದುಳಿನಂತೆ ಅನ್ನುವುದಾದರೆ, ಚರ್ಚ್ ಗೇಟ್ ಮತ್ತು ಸಿಎಸ್‌ಎಂಟಿ (ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್) ರೈಲು ನಿಲ್ದಾಣಗಳು ಚಲನವಲನ ನಿರ್ದೇಶಿಸುವ ನರಕೇಂದ್ರಗಳಂತೆ. ಅದರಲ್ಲೂ ಸಿಎಸ್‌ಎಂಟಿ ನಿಲ್ದಾಣ ತನ್ನ ಭವ್ಯತೆ ಮತ್ತು ಚಿತ್ತಾರಭರಿತ ಅರಮನೆಯಂತಹ, ಭದ್ರಕೋಟೆಯಂತಹ, ಭಯಂಕರವೆನ್ನಬಹುದಾದ ಆಕರ್ಷಣೆಗೆ ಪ್ರಸಿದ್ಧಿ.
ಸಿಎಸ್‌ಎಂಟಿಯ ಹೊರನೋಟ ಎಷ್ಟು ದೈವಿಕವೋ, ಆ ಕಟ್ಟಡದೊಳಗಿನ ಚಟುವಟಿಕೆಗಳು ಅಷ್ಟೇ ದೈನಿಕ. ಯಾವುದೇ ಸ್ಟೇಷನ್‌ನಂತೆ ಇಲ್ಲೂ ಟಿಕೆಟ್ ಕೌಂಟರ್, ಪಾಪ್‌ಕಾರ್ನ್ ಅಂಗಡಿ, ಶೇಂಗಾ ಮಾರುವಾತ, ಶೂ ಪಾಲಿಶ್ ಇತ್ಯಾದಿ... ಇವತ್ತಿಗೂ ಶೂ ಪಾಲಿಶ್ ವೃತ್ತಿ ಮುಖ್ಯವಾಗಿ ಕಂಡುಬರುವುದು ಮುಂಬೈನ ಲೋಕಲ್ ರೈಲು ನಿಲ್ದಾಣಗಳಲ್ಲಿ. ಅದೂ ಸೇರಿದಂತೆ ಅನೇಕ ವೃತ್ತಿಗಳನ್ನು ಸಲೀಸಾಗಿ ಆಲದಮರದಂತೆ ಸಿಎಸ್‌ಎಂಟಿ ಸಂಭಾಳಿಸುತ್ತದೆ. ಅದರ ಆರು ಪ್ಲಾಟ್‌ಫಾರಂಗಳಲ್ಲಿ ಐದು ನಿಮಿಷಕ್ಕೊಮ್ಮೆ ಬಂದು ಹೊರಡುವ ‘ಲೋಕಲ್’ ರೈಲುಗಳಿವೆ. ಐದು ನಿಮಿಷದ ಅಂತರ ಕಮ್ಮಿಯಾಯಿತು ಎನಿಸುವಂತೆ ಸ್ಟೇಷನ್ ತುಂಬಾ ಫಾಸ್ಟ್ ಮೋಷನ್ ದೃಶ್ಯಾವಳಿಯ ರೀತಿ ನೂರಾರು ಜನರ ಓಡಾಟ. ಮುಂಬೈನ ಶ್ರೀಸಾಮಾನ್ಯ ಇಲ್ಲಿ ಚಲಿಸುವ ಚಿತ್ರವಾಗಿಬಿಡುತ್ತಾನೆ. ಸಿಎಸ್‌ಎಂಟಿಯ ಮೋಹಕ ಕಂಬ ಕಮಾನು ಕಿಟಕಿ ಬೀಭತ್ಸ ಫ್ಯಾನುಗಳನ್ನು ಒಂದಿನಿತೂ ಪ್ರಶಂಸಿಸದೆ, ಇವತ್ತು ತನ್ನ ರೈಲು ಯಾವ ಪ್ಲಾಟ್‌ಫಾರಂಗೆ ಬರಲಿದೆ ಎನ್ನುವುದೊಂದೇ ಪರಮಸತ್ಯವೆಂದು ಹತ್ತಾರು ಭುಜಗಳನ್ನು ಸವರಿಕೊಂಡು ದಾಟುತ್ತಾ ತನ್ನ ಭುಜಕ್ಕೆ ಗುದ್ದಿಕೊಂಡು ಹೋದವರನ್ನು ತಿರುಗಿ ಕೂಡ ನೋಡದೆ ಓಡುತ್ತಾನೆ. ಹೀಗೆ ದಡಬಡಾಯಿಸುತ್ತಾ ‘ಚಿಸ್‌ಚಿಸ್‌ಚಿಸ್‌ಚಿಸ್’ ಎನ್ನುವ ಕೋಡ್‌ವರ್ಡ್ ಮೂಲಕ ‘ಜಾಗ ಬಿಡು ಮಾರಾಯ..’ ಅಂತ ಸಂವಹಿಸಿಕೊಳ್ಳುತ್ತಾ ರೈಲಿನೆಡೆಗೆ ಚಿಮ್ಮುವ ನೂರಾರು ಶ್ರೀಸಾಮಾನ್ಯರ ಚಿತ್ರಗಳು.
ಮಹಾನಗರಗಳಲ್ಲಿ ಪ್ರಶ್ನೆಗಳು ಜಾಸ್ತಿ, ಉತ್ತರಗಳು ಕಮ್ಮಿ ಮತ್ತು ಸಂಕ್ಷಿಪ್ತ. ಮುಂಬೈಗೆ ಬಂದ ಪ್ರಾರಂಭದಲ್ಲಿ ಹೀಗೆ ಜನರ ಸಂದಣಿ ಕಂಡಾಗೆಲ್ಲಾ ಇವರೆಲ್ಲಾ ಏನೇನು ಕೆಲಸ ಮಾಡಬಹುದು, ಯಾವ ಬಗೆಯ ಉದ್ಯಮಗಳು, ಎಲ್ಲೆಲ್ಲಿ ಮನೆ ಮಾಡಿರಬಹುದು, ಎಷ್ಟು ದೂರ, ಎಷ್ಟು ಬಾಡಿಗೆ, ಈ ಧಗೆಯಲ್ಲಿ ಹೇಗೆ ಈ ಚಲನಶಕ್ತಿ, ದೇವರು ಧರ್ಮ ಹಬ್ಬ ಸಂಭ್ರಮಕ್ಕೆ ಸಮಯವಿದೆಯಾ ಇತ್ಯಾದಿ ಎಷ್ಟು ಪ್ರಶ್ನೆಗಳು! ಕಾಲಕ್ರಮೇಣ ನಾನೂ ಅವರಲ್ಲೊಬ್ಬನಾದಂತೆ ಪ್ರಶ್ನೆಗಳು ನನ್ನೆಡೆಗೇ ತಿರುಗಿದವು. ಫೋರ್ಟ್ ಏರಿಯಾದಲ್ಲಿರುವ ನನ್ನ ಆಫೀಸಿನಲ್ಲಿ ಸಂಜೆ ಹೊರಡುವುದು ಸ್ವಲ್ಪ ತಡವಾದಾಗಲೆಲ್ಲಾ ‘ಕ್ಯೂ, ತೇರಿ ಗಾಡಿ ಕೌನ್‌ಸಿ ಹೈ?’ ಎಂಬ ಗೊಂದಲಭರಿತ ಪ್ರಶ್ನೆ ನನ್ನೆಡೆಗೆ. ಅಂದರೆ ಒಂದು ರೈಲುಗಾಡಿಯನ್ನು ಶಿಸ್ತಾಗಿ ನನ್ನದೇ ಮಾಡಿಕೊಂಡು ಅದನ್ನು ಹಿಡಿದು ಒಂದಾಗುವುದೇ ದಿನಚರಿಯ ಭಾಗವಾಗಬೇಕು. ಇಂತಹ ವ್ಯಕ್ತಿಯೆಂದರೆ ಇಂತಹ ರೈಲು ಎಂಬಂತೆ! ಇಲ್ಲದೇ ಹೋದರೆ ಈ ನಗರವನ್ನು ರೂಪಿಸುವ ಅನಿವಾರ್ಯ ಕ್ರಿಯಾಶಕ್ತಿಗಳೇ ತಿಳಿಯುವುದಿಲ್ಲ.
ಜಂಗಮನಾಗದೆ ಗುಂಪಿನ ನಡುವೆ ಸ್ಥಾವರನಾಗಿದ್ದರೆ ಮುಂಬೈನಲ್ಲಿ ಧಗೆ ಕಮ್ಮಿಯಾಗುವುದಿಲ್ಲ, ಬೆವರುಪಾತ ನಿಲ್ಲುವುದಿಲ್ಲ. ಸಂಜೆ ಆರೂ ನಲವತ್ತೊಂಬತ್ತರ ವಾಶಿ ರೈಲಿನ ಮೊದಲ ಫಸ್ಟ್‌ಕ್ಲಾಸ್ ಬೋಗಿಯಲ್ಲಿ ಗಡ್ಡಧಾರಿ ಬೊಕ್ಕತಲೆಯವನೊಬ್ಬ ಸದಾ ಕಾರ್ನರ್ ಸೀಟಿನಲ್ಲಿ ಕಾಣ್ತಾನಲ್ಲ, ಅಲ್ಲಿಯೇ ಹುಟ್ಟಿ ಬೆಳೆದವನಂತೆ. ಹಾಗೆಯೇ ಸ್ವಲ್ಪ ಕುಂಟುವ, ಯಾವತ್ತೂ ಗುರುತಿನ ಕಾರ್ಡ್ ಅನ್ನು ಕತ್ತಿನಿಂದ ತೆಗೆಯದ ಎಕ್ಸಿಮ್ ಬ್ಯಾಂಕ್ ಉದ್ಯೋಗಿಯ ಹಾಜರಾತಿ ಆ ರೈಲಿಗೆ ತಪ್ಪುವುದಿಲ್ಲ. ತನ್ನ ದೊಡ್ಡ ಮೊಬೈಲ್ ಸ್ಕ್ರೀನಿನಲ್ಲಿ ಮುಳುಗುವ ಆ ಗಡ್ಡಧಾರಿ ಬೊಕ್ಕತಲೆಯವನನ್ನು ಯಾವತ್ತೂ ಮಾತಾಡಿಸಿಲ್ಲ. ಆದರೆ 2019 ರಲ್ಲಿ ಆತನ ಫೋನಿನಲ್ಲೇ ಅಲ್ಲವೆ, ಅವನ ಬೆನ್ನ ಹಿಂದೆ ನಿಂತು ವಿಶ್ವಕಪ್‌ನ ಸೆಮಿಫೈನಲ್ ಅಂತ್ಯವನ್ನು ಲೈವ್ ನೋಡುತ್ತಾ ನಾವು ನಾಲ್ಕಾರು ಅಪರಿಚಿತರು ನಿಟ್ಟುಸಿರಾದದ್ದು. ಇವತ್ತಿಗೂ ಅವ ಕಂಡಾಗ ಧೋನಿಯ ರನೌಟ್ ಮತ್ತು ಕಣ್ಣಂಚಿನ ಹನಿ ನೆನಪಾಗುತ್ತದೆ.
ಹೀಗೆ ಆಗಾಗ ಪ್ರಶ್ನೆ, ಗೊಂದಲ, ಕಿರಿಕಿರಿ ಹುಟ್ಟಿಸುವ ಮಹಾನಗರದಲ್ಲಿ ಉತ್ತರಗಳು ಬೇಕೆಂದರೆ ಒಂದಿಡೀ ರೈಲುಗಾಡಿ ನನ್ನದಾಗಬೇಕು. ನನ್ನ ದಿನಚರಿ ನಗರದ ಆತ್ಮಗಡಿಯಾರದ ಕೋಟಿ ಮುಳ್ಳುಗಳಲ್ಲಿ ಒಂದಾಗಬೇಕು. ಆ ನಿರ್ಭಾವುಕ ರೈಲನ್ನು ಹಿಡಿಯಲು ಮುಷ್ಟಿಕಟ್ಟಿ ದಿನದ ಸುಸ್ತು, ಹೊರಗಿನ ಒಳಗಿನ ಸೆಕೆ ಎಲ್ಲಾ ಮರೆತು ಓಡಬೇಕು.
ಇನ್ನು ಮನೆಯಿರುವ ಬಾಂದ್ರಾದಲ್ಲೋ, ಚೆಂಬೂರ್‌ನಲ್ಲೋ, ಮಲಾಡ್‌ನಲ್ಲೋ ಸಂಜೆ ‘ಉಸ್ಸಪ್ಪಾ’ ಅಂತ ರೈಲಿಂದ ನಿಲ್ದಾಣಕ್ಕೆ ನೆಗೆದು, ನಾನು ಬಿಟ್ಟುಬಂದ ಜಾಗ ಆವರಿಸಿಕೊಳ್ಳಲು ನಿಲ್ದಾಣದಲ್ಲಿ ಹವಣಿಸುತ್ತಿರೋ ಹತ್ತಾರು ಮಂದಿಯ ನಡುವೆ ತೂರಿ ಹೋಗುವಷ್ಟರಲ್ಲಿ, ರೈಲು ವೇಗವಾಗಿ ಮುಂದುವರಿದಾಗ ಒಂದರೆಕ್ಷಣ ಅದರೊಳಗೆ ಏನನ್ನೋ ಮರೆತುಬಿಟ್ಟೆನಾ ಅಂತ ಗಾಬರಿಯಾಗುತ್ತದೆ.
ಸ್ಟೇಷನ್‌ನಿಂದ ಆಚೆ ರಸ್ತೆ ತಲುಪುತ್ತಿದ್ದಂತೆ ಜಗತ್ತು ಬದಲಾಗಿ, ಆಟೊ ಹಿಡಿಯುವ ಸಾಹಸದಲ್ಲಿ ಆ ಕ್ಷಣದ ಸವಾಲಿಗೆ ಹೊಸ ಚಹರೆ ಬಂದು, ಹಳೆಯ ಆತಂಕ ಮರೆಯಾಗಿಬಿಡಬಹುದು. ಆದರೆ ಸ್ಟೇಷನ್‌ನಲ್ಲಿನ ಆ ಅರೆಕ್ಷಣ ಮಾತ್ರ ಬ್ಯಾಟನ್ ಇಸಿದುಕೊಂಡ ರಿಲೆಯ ಹೊಸ ಓಟಗಾರನಂತೆ ರೈಲು ಮೊದಲ ಹೆಜ್ಜೆಯಿಂದಲೇ ಬಿರುಸಾಗಿ ಓಡಿಬಿಟ್ಟಾಗ, ನನ್ನೊಳಗಿಂದಲೇ ಏನನ್ನೋ ಹೊತ್ತುಕೊಂಡು ಹೋಯಿತೆನ್ನುವ ಗಾಬರಿ.
ಸರಿ, ಏನೂ ಮರೆತಿಲ್ಲವೆಂದು ಖಾತ್ರಿಯಾಗುತ್ತಾ, ನನ್ನ ಜೊತೆಗೆ ರೈಲಿಂದ ಹಾರಿದ ಉಳಿದ ಸಾಹಸಿಗಳ ಗುಂಪಿನಿಂದ ಬೇರೆಯಾಗಿ ವಾಚ್ ನೋಡಿಕೊಳ್ಳುತ್ತಾ ನಡಿಗೆ ವೇಗ ಪಡೆದಂತೆ, ‘ಟಪ್ ಟಪ್’ ಅಂತ ತನ್ನ ಹತಾರನ್ನು ಮರದ ಸಣ್ಣ ಸ್ಟೂಲ್‌ಗೆ ಬಡಿಯುತ್ತಾ ಶೂ ಪಾಲಿಶ್‌ನವ ತನ್ನ ಜಗತ್ತಿಗೆ ಕರೆಯುತ್ತಾನೆ. ರೈಲು ಪ್ರಯಾಣದ ಪ್ರಹಸನದಲ್ಲಿ ಪದೇಪದೇ ತುಳಿಸಿಕೊಳ್ಳುತ್ತಾ ಬಾಗಿಲ ಬಳಿ ನಿಂತು ಧೂಳು ಕಾಣುತ್ತಾ ಬಸವಳಿದ ಶೂಗಳಿಗೆ ಮನೆಗೆ ಅಥವಾ ಆಫೀಸಿಗೆ ಹೋಗುವ ಮುನ್ನ ಈತನ ಕಡೆಯಿಂದ ಒಮ್ಮೆ ಟಚಪ್. ಅವನ ‘ಟಪ್ ಟಪ್’ಗೆ ಬೆಲೆ ಕೊಟ್ಟು ಅತ್ತ ಸಾಗಿದರೆ ಆ ಸ್ಟೂಲ್ ಮೇಲೆ ಕಾಲಿಡುವಂತೆ ಸೂಚಿಸಲು ಮತ್ತೊಮ್ಮೆ ಅದಕ್ಕೆ ಬಡಿಯುತ್ತಾನೆ. ಒಂದು ಸಣ್ಣ ಚಾಪೆಯೇ ಅವನಂಗಡಿ, ಅದರ ಬಹುಪಾಲು ಆ ಸ್ಟೂಲ್‌ಗೆ. ಸುತ್ತ ನಮೂನೆ ಪಾಲಿಶ್, ಬಟ್ಟೆ, ಲೇಸ್, ಬ್ರಶ್, ಶೂ ಸೋಲ್ ಇತ್ಯಾದಿ. ಕೆಲವೊಮ್ಮೆ ಅಲ್ಲೇ ಮೂಲೆಯಲ್ಲಿ ಒಂದು ಟೀ ಲೋಟ ಮತ್ತದರ ಮೇಲೆ ಮುಚ್ಚಲೊಂದು ಪಾಲಿಶ್ ಡಬ್ಬಿ.
ಮುಂದಿನ ಐದು ನಿಮಿಷ ಅವನ ಆಣತಿಯಂತೆ ಒಮ್ಮೆ ಎಡಗಾಲು ಮತ್ತೆ ಬಲಗಾಲು ಎಂಬಂತೆ ಬದಲಾಯಿಸುತ್ತಿರಬೇಕು. ಅವನು ಪದೇಪದೇ ಕಾಲು ಮುಟ್ಟುವುದರಿಂದ ನನಗೋ ಮುಜುಗರ. ಅದು ತನ್ನ ಕೆಲಸ ಎಂಬಂತೆ ಆತ ಮಗ್ನನಾಗಿರುವುದು ಎಷ್ಟೋ ಸಮಾಧಾನ. ಅಕಸ್ಮಾತ್ ಆತ ತಲೆಯೆತ್ತಿ ಕಣ್ಣಲ್ಲಿ ಕಣ್ಣಿಟ್ಟು ಆರ್ತವಾಗಿ ನೋಡಿಬಿಟ್ಟಿದ್ದರೆ ಬಹುಶಃ ಇನ್ನೊಮ್ಮೆ ಪಾಲಿಶ್ ಮಾಡಿಸಲು ಮನಸ್ಸಾಗದೇನೋ..
ಸಿಎಸ್‌ಎಂಟಿ ನಿಲ್ದಾಣ ಕೂಡ ಅದೇ ಬಗೆಯ ಕೌಶಲದಲ್ಲಿ ಒಂದೆಡೆ ಲೋಕಲ್‌ನ ಧಾವಂತವನ್ನೂ, ಇನ್ನೊಂದೆಡೆ ಮುಂಬೈ ಜನಗಳ ಅನಿವಾರ್ಯ ಜೀವನೋತ್ಸಾಹವನ್ನೂ ತೂಗಿ ಸಂಭಾಳಿಸುವುದನ್ನು ನಾನು ಬಾಲ್ಯದ ಬೆರಗಿನಲ್ಲೇ ಪ್ರತಿದಿನ ನೋಡುತ್ತೇನೆ. ಮುಂಬೈನ ಜೀವಾತ್ಮವೊಂದು ‘ಚಿಸ್‌ಚಿಸ್’ ಎಂದು ಭುಜ ತಾಕಿಕೊಂಡು ನನ್ನನ್ನು ಓರೆಮಾಡಿ ಅವಸರದಲ್ಲಿ ಓಡುವ ತನಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.