ಕೇಂದ್ರ ಸಾಹಿತ್ಯ ಅಕಾಡೆಮಿ 1986ರಲ್ಲಿ ಕುವೆಂಪು ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸು ಮಾಡಿದಾಗ ಕುವೆಂಪು ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗಿರಲಿಲ್ಲ. ಪ್ರಭುಶಂಕರ್ ’ಮಲೆಗಳಲ್ಲಿ ಮದುಮಗಳು’ವಿನ ಕೆಲವು ಅಧ್ಯಾಯಗಳನ್ನು ಅನುವಾದಿಸಿದರು. ಅದರಿಂದ ವಿಶೇಷ ಪರಿಣಾಮವಾಗಲಿಲ್ಲ. ಹತ್ತು ವರ್ಷಗಳ ಕೆಳಗೆ ಕೆ.ಎಂ.ಶ್ರೀನಿವಾಸಗೌಡ ಈ ಕಾದಂಬರಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದರು. ಅದು ಪ್ರಕಟವಾಗಲಿಲ್ಲ. ಈಚೆಗೆ ವನಮಾಲ ವಿಶ್ವನಾಥ್ ಅನುವಾದಿಸಿದ ’ಬ್ರೈಡ್ ಇನ್ ದ ಹಿಲ್ಸ್’ ಪ್ರಕಟವಾಗಿದೆ. ಕುವೆಂಪುವನ್ನು ಇಂಗ್ಲಿಷ್ ಜಗತ್ತು ಹೇಗೆ ಸ್ವೀಕರಿಸಲಿದೆ ಎಂಬ ಕುತೂಹಲದ ಜೊತೆಗೆ, ಮದುಮಗಳ ಇಂಗ್ಲಿಷ್ ಪಯಣ ತೀರಾ ತಡವಾಯಿತೇನೋ ಎಂಬ ವಿಷಾದವೂ ಮುತ್ತುತ್ತದೆ.
ಕನ್ನಡ ಕೃತಿಗಳು ಇಂಗ್ಲಿಷ್‌ಗೆ, ಇತರ ಭಾರತೀಯ ಭಾಷೆಗಳಿಗೆ ಅನುವಾದವಾಗುತ್ತಿಲ್ಲ ಎಂಬ ಕೊರಗು ಹಳೆಯದು. ಇದಕ್ಕೆ ಹಲವು ಕಾರಣಗಳಿವೆ: ತಮ್ಮ ಬರಹಗಳು ಇಂಗ್ಲಿಷ್‌ಗೆ ಅನುವಾದವಾಗಬೇಕೆಂಬ ಉತ್ಸಾಹ ಬಹುತೇಕ ಕನ್ನಡ ಲೇಖಕ, ಲೇಖಕಿಯರಿಗಿಲ್ಲ. ತಮ್ಮ ಕೃತಿಗಳು ಕನ್ನಡ ಜಗತ್ತಿನಲ್ಲೇ ಅರಳಿ ಬೆಳೆಯುವ ಸಾರ್ಥಕತೆ, ಅರ್ಥಪೂರ್ಣತೆಯ ಬಗ್ಗೆ, ಕನ್ನಡ ಓದುಗವಲಯದ ವ್ಯಾಪ್ತಿಯ ಬಗ್ಗೆ ಕನ್ನಡ ಬರಹಗಾರರಿಗಿರುವ ಆತ್ಮವಿಶ್ವಾಸ ನಿಜಕ್ಕೂ ಸುಂದರ. ಆದರೆ ವಿಚಾರ ಸಂಕಿರಣ, ಸಾಹಿತ್ಯೋತ್ಸವ ಇತ್ಯಾದಿಗಳಿಗಾಗಿ ದೇಶವಿದೇಶ ಸುತ್ತುವ ಲೇಖಕರಿಗೆ ತಮ್ಮ ಬರಹಗಳು ಇಂಗ್ಲಿಷ್‌ಗೆ ಹೋಗಬೇಕೆಂಬ ಮಹತ್ವಾಕಾಂಕ್ಷೆಯಿದ್ದರೆ, ಅದು ಕೂಡ ಸಹಜವೇ.
ತಂತಮ್ಮ ಕೃತಿಗಳ ಬಗ್ಗೆ ಉತ್ಸಾಹ; ತಾವು ಜಗತ್ತಿನ ದೊಡ್ಡ ಲೇಖಕರಿಗಿಂತ ಕಡಿಮೆಯೇನಲ್ಲ ಎಂಬ ಆತ್ಮವಿಶ್ವಾಸ, ಜಾಗತಿಕ ಸ್ಪರ್ಧೆಯ ಕಾತರ, ಖ್ಯಾತಿಯ ಬಯಕೆ, ಹೆಚ್ಚಿನ ಸಂಭಾವನೆ… ಇವುಗಳಿಂದಲೂ ಲೇಖಕರಲ್ಲಿ ಇಂಗ್ಲಿಷ್ ಅನುವಾದದ ಸೆಳೆತ ಹುಟ್ಟುತ್ತದೆ. ಅನಂತಮೂರ್ತಿಯವರ ’ಸಂಸ್ಕಾರ’ವನ್ನು ಶಿಕಾಗೋದಲ್ಲಿದ್ದ ಎ.ಕೆ.ರಾಮಾನುಜನ್ ಇಂಗ್ಲಿಷ್‌ಗೆ ಅನುವಾದಿಸಿದರು. ಇಂಗ್ಲಿಷ್ ಪರಿಸರದಲ್ಲಿದ್ದು, ಇಂಗ್ಲಿಷನ್ನು ಸೃಜನಶೀಲವಾಗಿ ಬಳಸಬಲ್ಲವರಾಗಿದ್ದ ರಾಮಾನುಜನ್ ’ಸಂಸ್ಕಾರ’ಕ್ಕಿಂತಲೂ ಮಹತ್ವದ ಆಧುನಿಕ ಕೃತಿಗಳನ್ನು ಅನುವಾದಿಸಲಿಲ್ಲ. ಆದರೆ ವಚನಗಳನ್ನು ವಿಶ್ವಮಟ್ಟಕ್ಕೆ ಒಯ್ದರು. ಕನ್ನಡದ ಪರಿಪೂರ್ಣ ನವ್ಯ ಕಾದಂಬರಿಯಾದ ’ಮುಕ್ತಿ’ಯನ್ನು ಬರೆದ ಇಂಗ್ಲಿಷ್ ಪ್ರೊಫೆಸರ್ ಶಾಂತಿನಾಥ ದೇಸಾಯಿ ಅನಂತಮೂರ್ತಿಯವರ ’ಅವಸ್ಥೆ’ಯನ್ನು ಇಂಗ್ಲಿಷ್‌ಗೆ ತಂದರು; ’ಮುಕ್ತಿ’ಯನ್ನು ಅನುವಾದಿಸಲಿಲ್ಲ.
ಗಿರೀಶ ಕಾರ್ನಾಡ ತಮ್ಮ ನಾಟಕಗಳನ್ನು ತಾವೇ ಇಂಗ್ಲಿಷ್‌ಗೆ ಅನುವಾದ ಮಾಡುತ್ತಿದ್ದರು; ಇಂಗ್ಲಿಷ್‌ನಲ್ಲಿ ಮರುಬರವಣಿಗೆ ಮಾಡುತ್ತಿದ್ದರು. ಕಾರ್ನಾಡ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಾಶನದಲ್ಲಿ ಕೆಲಸದಲ್ಲಿದ್ದಾಗ ಅವರ ನಾಟಕಗಳು ಅಲ್ಲೇ ಪ್ರಕಟವಾದವು. ಅನಂತಮೂರ್ತಿ ತಮ್ಮ ಕೃತಿಗಳು ಅನುವಾದವಾಗುವಂತೆ ನೋಡಿಕೊಂಡರು. ಸ್ವೀಡನ್ನಿನ ನೊಬೆಲ್ ಹಂಬಲದಿಂದ ಸ್ವೀಡಿಶ್ ಭಾಷೆಗೂ ಅವರ ’ಸಂಸ್ಕಾರ’ ಅನುವಾದವಾಯಿತು. ಅನಂತಮೂರ್ತಿ, ಕಾರ್ನಾಡರಿಗೆ ಜಾಗತಿಕ ಪ್ರಶಸ್ತಿಗಳ ಮಹತ್ವಾಕಾಂಕ್ಷೆಯಿದ್ದುದರಿಂದ ಅವರು ಅನುವಾದಗಳ ಗುಣಮಟ್ಟದ ಬಗೆಗೆ ಗಮನ ಕೊಡುತ್ತಿದ್ದರು. ಅನಂತಮೂರ್ತಿ ಮ್ಯಾನ್‌ಬುಕರ್ ಪ್ರಶಸ್ತಿಗೂ ಶಾರ್ಟ್ ಲಿಸ್ಟ್ ಆಗಿದ್ದರು.
ಇಷ್ಟೆಲ್ಲ ಉತ್ಸಾಹ, ತಾಳ್ಮೆ, ಖ್ಯಾತಿಯ ತಹತಹ ಲಂಕೇಶ್, ತೇಜಸ್ವಿಯವರಿಗೆ ಇದ್ದಂತಿರಲಿಲ್ಲ. ಮುಂದೆ ಅವರ ಕೆಲವು ಕೃತಿಗಳು ಇಂಗ್ಲಿಷ್‌ಗೆ ಅನುವಾದವಾದವು. ಎಂಬತ್ತರ ದಶಕದಲ್ಲಿ ಬಂದ ದೇವನೂರರ ’ಕುಸುಮಬಾಲೆ’ಯ ಇಂಗ್ಲಿಷ್ ಅನುವಾದದ ಪ್ರಯತ್ನ ಶುರುವಾಗಿ ನಿಂತುಹೋಯಿತು. ಸೂಸನ್ ಡೇನಿಯಲ್ ಅನುವಾದ 2015ರಲ್ಲಿ ಬಂತು. ಸಿದ್ಧಲಿಂಗಯ್ಯನವರ ಬೆಂಕಿಕವಿತೆಗಳು ಎಪ್ಪತ್ತರ ದಶಕದಲ್ಲೇ ದಕ್ಷವಾಗಿ ಅನುವಾದಗೊಂಡಿದ್ದರೆ, ಅವು ದೇಶದ ಇತರ ಭಾಷೆಗಳ ದಲಿತ ಕಾವ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿತ್ತು; ಅಥವಾ ಈಚೆಗೆ ನೊಬೆಲ್ ಪಡೆದ ಆಫ್ರೋ-ಅಮೆರಿಕನ್ ಗೀತರಚನಕಾರ ಬಾಬ್ ಡಿಲನ್ ಥರ ವಿಶ್ವದ ಗಮನ ಸೆಳೆಯುವ ಸಾಧ್ಯತೆಯೂ ಇತ್ತು.
ಆದ್ದರಿಂದಲೇ ಸಾಹಿತ್ಯ ಕೃತಿಗಳ ಅನುವಾದದಲ್ಲಿ ‘ಟೈಮಿಂಗ್’ ಕೂಡ ಮುಖ್ಯ. ಲ್ಯಾಟಿನ್ ಅಮೆರಿಕದ ಮಾಕ್ವೆಜ್ ಕೃತಿಗಳು ಇಂಗ್ಲಿಷ್‌ಗೆ ಬರುವ ಮೊದಲೇ ಅದೇ ಭೂಭಾಗದ ಇಸಬೆಲ್ಲಾ ಅಯಂಡೆಯ ಅನುವಾದಗಳು ಬಂದಿದ್ದರೆ ಅವಳ ಕೃತಿಗಳೇ ಮಾಂತ್ರಿಕ ವಾಸ್ತವತಾವಾದದ ಮುಂಚೂಣಿ ಕೃತಿಗಳಾಗಿರುತ್ತಿದ್ದವೇನೋ! ಮಾಂತ್ರಿಕ ವಾಸ್ತವತಾವಾದಿ ಮಾರ್ಗದ ಅಲೆಯೆದ್ದಿದ್ದ ಎಂಬತ್ತರ ದಶಕದಲ್ಲೇ ‘ಕುಸುಮಬಾಲೆ’ ಇಂಗ್ಲಿಷ್‌ಗೆ ಬಂದಿದ್ದರೆ ಅದು ಕನ್ನಡದಾಚೆಯ ಲೋಕದ ವಿಸ್ತೃತ ಗಮನ ಸೆಳೆಯಬಹುದಿತ್ತೋ ಏನೋ!
ಸಮಸ್ಯೆಯೆಂದರೆ, ಉತ್ತಮ ಕೃತಿ ಬರೆಯುವವರೆಲ್ಲರೂ ದಕ್ಷ ಅನುವಾದಕರನ್ನೂ ಹುಡುಕಿಕೊಳ್ಳುವುದು ಕಷ್ಟ. ಕನ್ನಡದ ಶ್ರೇಷ್ಠ ಕೃತಿಗಳನ್ನಾದರೂ ಇಂಗ್ಲಿಷ್‌ಗೆ ಅನುವಾದಿಸಲು ಸರ್ಕಾರ, ಸಾಂಸ್ಕೃತಿಕ ಸಂಸ್ಥೆಗಳು ಮುಂದಾಗಬೇಕಾಗುತ್ತದೆ. ಕನ್ನಡ-ಇಂಗ್ಲಿಷ್ ಭಾಷೆಗಳೆರಡನ್ನೂ ಬಲ್ಲ ಪ್ರೊಫೆಶನಲ್ ಅನುವಾದಕರಿಗೆ ಇನ್ನೂರು ಪುಟಗಳ ಕಾದಂಬರಿಯ ಅನುವಾದಕ್ಕೆ ಕೊನೆಯ ಪಕ್ಷ ಒಂದೆರಡು ಲಕ್ಷ ರೂಪಾಯಿ ಸಂಭಾವನೆ ಅಥವಾ ಫೆಲೋಶಿಪ್, ಹಾಗೂ ಕಾಪಿ ಎಡಿಟರುಗಳಿಗೂ ಅಷ್ಟೇ ಸಂಭಾವನೆ ಕೊಡಬೇಕಾಗುತ್ತದೆ. ಸಂಸ್ಥೆಗಳು, ಸಾಹಿತ್ಯಾಸಕ್ತ ಸಿರಿವಂತರು, ಲೇಖಕರು ಬಿಟ್ಟು ಹೋಗಿರಬಹುದಾದ ಆಸ್ತಿ, ಹಣವನ್ನು ಅನುಭವಿಸುತ್ತಿರುವ ವಾರಸುದಾರರೂ ಇದಕ್ಕೆ ಸಿದ್ಧರಿರಬೇಕಾಗುತ್ತದೆ.
ಕನ್ನಡದಿಂದ ಇಂಗ್ಲಿಷ್‌ಗೆ ದಕ್ಷವಾಗಿ ಅನುವಾದಿಸುವವರಿಗೆ ತಕ್ಕ ಸಂಭಾವನೆ ಕೊಡುವ ಸಂಸ್ಥೆಗಳೇ ಕರ್ನಾಟಕದಲ್ಲಿಲ್ಲ. ಮಾಕ್ವೆಜ್, ಮಿಲನ್ ಕುಂದೇರ ಥರದವರ ಕೃತಿಗಳ ಅನುವಾದಗಳನ್ನೇ ಪೂರ್ಣಾವಧಿ ವೃತ್ತಿಯನ್ನಾಗಿಸಿಕೊಂಡವರಿದ್ದಾರೆ. ಇಂಥ ಅವಕಾಶ ಕನ್ನಡದಲ್ಲಿಲ್ಲ. ಭಾಷಾಂತರವಾದ ಕೃತಿಗಳನ್ನು ಪ್ರಕಟಿಸುವಲ್ಲಿ ಏಜೆಂಟರು, ಪ್ರಕಾಶಕರ ಲೋಕ ಹಾಗೂ ಪ್ರಕಟಣೆಯ ಸರತಿಸಾಲಿನ ಕಷ್ಟಗಳೂ ಇವೆ. ಇಷ್ಟೆಲ್ಲ ಆಗಿ ಭಾರತದುದ್ದಕ್ಕೂ, ಭಾರತದಾಚೆಗೂ ಅವು ಗಮನ ಸೆಳೆದು, ಮಾರಾಟವಾಗುವ ಹಾದಿ ಸವಾಲಿನದೇ! ಅನಂತಮೂರ್ತಿ, ಕಾರ್ನಾಡ ಭಾರತದೆಲ್ಲೆಡೆ ಅಡ್ಡಾಡುತ್ತಿದ್ದುದರಿಂದ ಅವರ ಕೃತಿಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾದವು. ಇಂಗ್ಲಿಷ್ ಲೋಕದ ಅಡ್ಡಾಟ, ಒಡನಾಟ, ಸೆಲ್ಫ್ ಪ್ರಮೋಶನ್, ಪ್ರಚಾರ ಇವೆಲ್ಲವೂ ಇಂಥ ಲೇಖಕರಿಗೆ ನೆರವಾಗಿವೆ. ಡಿ.ಆರ್. ನಾಗರಾಜರ ದಲಿತ್ ಥಿಯರಿಯ ’ದ ಫ್ಲೇಮಿಂಗ್ ಫೀಟ್’ ಪುಸ್ತಕ ಹಾಗೂ ಅಖಿಲ ಭಾರತೀಯ ಸೆಮಿನಾರುಗಳಲ್ಲಿ ಅವರು ಇಂಗ್ಲಿಷಿನಲ್ಲಿ ಮಂಡಿಸುತ್ತಿದ್ದ ಚಿಂತನೆಗಳು ಅವರನ್ನು ಭಾರತದ ಮುಖ್ಯ ಚಿಂತಕರ ಸಾಲಿನಲ್ಲಿಟ್ಟವು. ಶಿವಪ್ರಕಾಶರ ಕಾವ್ಯ ಕೂಡ ದೇಶದ ಕಾವ್ಯವಲಯಕ್ಕೆ ಪರಿಚಿತವಾಗಿದೆ.
ಈ ನಡುವೆ ಅಪ್ಪಟ ಕನ್ನಡ ಕೃತಿಗಳು ಇಂಗ್ಲಿಷ್ ಅನುವಾದಕ್ಕೆ ಒಗ್ಗದಿರುವ ಕಷ್ಟಗಳೂ ಇವೆ. ರಾವಬಹದ್ದೂರರ ’ಗ್ರಾಮಾಯಣ’ ಅಥವಾ ಕಂಬಾರರ ನಾಟಕಗಳ ದೇಶಿ ಒಗರು ಇಂಗ್ಲಿಷಿನಲ್ಲಿ ಮೂಡುವುದು ಕಷ್ಟ. ಭಾಷಿಕ ಕ್ರಿಯೆ, ಶಾಬ್ದಿಕ ಕ್ರಿಯೆ ಆಗಿರುವ ಕಾವ್ಯ ಇನ್ನೊಂದು ಭಾಷೆಗೆ ಪರಕಾಯ ಪ್ರವೇಶ ಮಾಡುವುದು ಕಷ್ಟ. ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು’ ಎಂದು ಭಾಷೆಯ ಅನಂತ ಸಾಧ್ಯತೆಗಳನ್ನು ನುಡಿಸಲೆತ್ನಿಸಿದ ಬೇಂದ್ರೆ ಕಾವ್ಯದ ಸಮೃದ್ಧಿ ಇಂಗ್ಲಿಷಿನಲ್ಲಿ ಸೊರಗಬಲ್ಲದು. ಬೇಂದ್ರೆಯೇ ತಮ್ಮ ನುಡಿಯಾಟಕ್ಕೆ ಮಿಡಿಯಬಲ್ಲ ಇಂಗ್ಲಿಷ್ ಕವಿಯ ಜೊತೆಗೆ ಕೂತು ಅನುವಾದಿಸಿದ್ದರೆ ಅಷ್ಟಿಷ್ಟು ಒಳ್ಳೆಯ ಅನುವಾದಗಳು ಬರುತ್ತಿದ್ದವೇನೋ! ಗೋಕಾಕರಿಂದ ಹಿಡಿದು ಈಚಿನ ಮಾಧವ ಅಜ್ಜಂಪುರವರೆಗೂ ಬೇಂದ್ರೆ ಕಾವ್ಯ ಅನುವಾದಕರಿಗೆ ಸವಾಲೆಸೆಯುತ್ತಲೇ ಇದೆ!
ಇಷ್ಟಾದರೂ ಕನ್ನಡ ಸಂಸ್ಕೃತಿ ಇಂಗ್ಲಿಷ್ ಅನುವಾದದ ಸವಾಲನ್ನು ಬಿಟ್ಟುಕೊಡಲಾಗದು. ವೃತ್ತಿಪರ ಸೃಜನಶೀಲ ಅನುವಾದಕರು ಶ್ರೇಷ್ಠ ಕನ್ನಡ ಕೃತಿಗಳ ಅನುವಾದವನ್ನು ಕೈಗೆತ್ತಿಕೊಳ್ಳಲು ಆರ್ಥಿಕ ಬೆಂಬಲ ನೀಡಬಲ್ಲ ಸಂಸ್ಥೆಗಳ ಅಗತ್ಯ ಈಗ ಹೆಚ್ಚು ಇದೆ. ಪ್ರಾಚೀನ ಕೃತಿಗಳ ಅನುವಾದದಲ್ಲಿ ತೊಡಗಿರುವ ಮೂರ್ತಿ ಕ್ಲಾಸಿಕ್ಸ್ ಥರದ ಸಂಸ್ಥೆಗಳು, ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಇನ್ನಿತರ ಖಾಸಗಿ ಸಂಸ್ಥೆಗಳು ದೊಡ್ಡ ಮೊತ್ತದ ಸಂಭಾವನೆಯ ಮೂಲಕ ವೃತ್ತಿ ಅನುವಾದಕರನ್ನು ಸೆಳೆಯುವ, ರೂಪಿಸುವ ಕೆಲಸ ಮಾಡಬೇಕು. ಕನ್ನಡ ನೆಲದಲ್ಲಿ ವಿಕಾಸಗೊಂಡ ವೈಚಾರಿಕ ಚಿಂತನೆಗಳು, ಕನ್ನಡ ಕ್ಲಾಸಿಕ್ಸ್, ಕನ್ನಡ ಸ್ತ್ರೀವಾದ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ ಮಾರ್ಗಗಳ ವಿಶಿಷ್ಟ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಪ್ರೊಫೆಶನಲ್ ವಾತಾವರಣ ಸೃಷ್ಟಿಯಾಗಬೇಕು. ಇದಾಗದಿದ್ದರೆ, ಕನ್ನಡ ಕೃತಿಗಳ ಇಂಗ್ಲಿಷ್ ಅನುವಾದ ವ್ಯಾಪಕವಾಗಿ ನಡೆಯಲಾರದು. ಡಿ.ಆರ್. ನಾಗರಾಜರ ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ಯನ್ನು ಅನುವಾದಿಸಲು ನ್ಯೂ ಇಂಡಿಯಾ ಫೌಂಡೇಶನ್ ಎನ್.ಎಸ್. ಗುಂಡೂರ್‌ಗೆ ಆರು ಲಕ್ಷ ರೂಪಾಯಿ ಫೆಲೋಶಿಪ್ ಕೊಟ್ಟಿತು. ಇಂಥ ಆಕರ್ಷಕ ಯೋಜನೆಗಳು ಕನ್ನಡದಲ್ಲೂ ವ್ಯಾಪಕವಾಗಿ ಶುರುವಾಗಬೇಕು. ಕನ್ನಡ ಸಂಸ್ಕೃತಿ ಹವ್ಯಾಸಿ ಅನುವಾದದಿಂದ ವೃತ್ತಿಪರ ಅನುವಾದದೆಡೆಗೆ ನಡೆಯುವುದು ಈ ಕಾಲದ ಅಗತ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.