ADVERTISEMENT

ಮಲೆನಾಡ ದೇವರ ಬನ ಬಾಂಧವ್ಯದ ವನ

ಪ್ರಜಾವಾಣಿ ವಿಶೇಷ
Published 11 ಮೇ 2024, 21:38 IST
Last Updated 11 ಮೇ 2024, 21:38 IST
ಕಾಡಿನ ಮಧ್ಯದಲ್ಲಿರುವ ಬನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಪೂಜೆ  -ಪ್ರಜಾವಾಣಿ ಚಿತ್ರ
ಕಾಡಿನ ಮಧ್ಯದಲ್ಲಿರುವ ಬನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಪೂಜೆ  -ಪ್ರಜಾವಾಣಿ ಚಿತ್ರ   

‘ದೈಯದ ಬನದ ಸಾರು ತರ‍್ರೋ...’, ‘ಕಡುಬು ಬೆಂದ ನೋಡ್ರೋ...’, ‘ಕೋಳಿ ಹಿಡ್ಕೊ ಬರ‍್ರೋ...ಟೈಮ್ ಆಗೋತು’–ಮಲೆನಾಡಿನಲ್ಲಿ ಹರಕೆಯ ದಿನ ‘ದೇವರ ಬನ’ದಲ್ಲಿ ಇಂಥ ಮಾತುಗಳದ್ದೇ ಸದ್ದು, ಗದ್ದಲ.

ಊರು ಬಿಟ್ಟು ಉದ್ಯೋಗ ಅರಸಿ ಮಹಾನಗರಗಳಿಗೆ ಹೋದವರು, ಮದುವೆ ಮಾಡಿಕೊಂಡು ಗಂಡನ ಮನೆಗೆ ಸೇರಿದ ಹೆಣ್ಣು ಮಕ್ಕಳು, ಬೇರೆ ಯಾವುದೋ ಕಾರಣಕ್ಕೆ ಬೇರೆ ಊರಿನಲ್ಲಿ ನೆಲೆಸಿದವರು ಹೀಗೆ… ಎಲ್ಲರೂ ವರ್ಷಕ್ಕೆ ಒಮ್ಮೆ ‘ಆದಿ ಸ್ಥಳ’ಕ್ಕೆ ಬಂದು ಕುಟುಂಬದ ಆರಾಧ್ಯ ದೈವಕ್ಕೆ ಪೂಜೆ, ಪುನಸ್ಕಾರ ಮಾಡಿ ಹರಕೆ ಒಪ್ಪಿಸುವ ದಿನ ಎಲ್ಲರ ಮೊಗದಲ್ಲಿ ಸಂಭ್ರಮ ಸಡಗರ.

ಹೌದು, ಮಲೆನಾಡಲ್ಲಿ ಈಗ ದೈವದ ಹರಕೆಯ ಕಾಲ. ಪ್ರತಿ ವರ್ಷ ಏಪ್ರಿಲ್‌ ಆರಂಭದಿಂದ ಜೂನ್‌ ವರೆಗೆ‌ ದೇವರ ಬನಗಳಲ್ಲಿ ಹರಕೆ ಅಥವಾ ಮಾವುಳ‌ಗಳು ನಡೆಯುತ್ತವೆ.

ADVERTISEMENT

ಇಲ್ಲಿನ ಪ್ರತಿ ಕುಟುಂಬವೂ (ರಕ್ತ ಸಂಬಂಧಿಗಳನ್ನು ಒಳಗೊಂಡ‌ ಹಲವು ಕುಟುಂಬಗಳು) ಒಂದೊಂದು‌ ದೇವರ ಬನ‌ ಅಥವಾ ದೈಯದ ಬನವನ್ನು ಹೊಂದಿರುತ್ತದೆ. ಸಣ್ಣಪುಟ್ಟ ಗಿಡ, ಮರ, ಬಳ್ಳಿಗಳಿಂದ ಹಿಡಿದು ರೆಂಬೆಕೊಂಬೆಗಳನ್ನು ಆ ತುದಿಯಿಂದ ಈ ತುದಿವರೆಗೆ ಚಾಚಿಕೊಂಡ ದೊಡ್ಡ ಗಾತ್ರದ ಮರಗಳನ್ನೂ ಒಳಗೊಂಡ ‘ಕಾಡಿನ ಗೂಡು’ ಕುಟುಂಬದ ಆರಾಧ್ಯ ದೈವಕ್ಕೆ ಮೀಸಲು. ಇಲ್ಲಿ ಭೂತ, ಚೌಡಿ, ಗಿಡನ ದೈಯ, ಕೀಳು ಚೌಡಿ… ಹೀಗೆ ಹಲವು ದೈಯಗಳನ್ನು ನೆಲೆಹಾಕಿ ಆರಾಧಿಸಲಾಗುತ್ತದೆ. ಈ ದೈವಗಳು ಕುಟುಂಬದ ಹಿತ ಕಾಯುತ್ತವೆ, ಬೆಳೆಗೆ ರೋಗ ರುಜಿನ ತಗುಲದಂತೆ ರಕ್ಷಿಸುತ್ತವೆ, ಜಾನುವಾರು, ಆಸ್ತಿ ಪಾಸ್ತಿಯನ್ನು ಕಾಪಾಡುತ್ತವೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಹಾಸುಹೊಕ್ಕಾಗಿದೆ.

ಸಾಮಾನ್ಯವಾಗಿ ಜಮೀನಿನ ಅಂಚಿನಲ್ಲಿ ಅಥವಾ ದರುಗಿನ ಹಡ್ಡೆಗಳಲ್ಲಿ ದೈವದ ಬನಗಳು ಇರುತ್ತವೆ. ಅಲ್ಲಿರುವ ಮರಗಿಡಗಳನ್ನು ಯಾರೂ ಕಡಿಯುವುದಿಲ್ಲ. ದೊಡ್ಡ ಗಾತ್ರದ ಮರವೊಂದರ ಕೆಳಗಿರುವ ಕಾಡು ಕಲ್ಲಿನಲ್ಲೇ ದೈವತ್ವ ಕಂಡುಕೊಂಡು ಪೂಜಿಸುತ್ತಾರೆ. ಇತ್ತೀಚೆಗೆ ಈ ಮರದ ಬುಡದಲ್ಲಿ ಕಟ್ಟೆ ನಿರ್ಮಿಸಿ ದೈವವನ್ನು ನೆಲೆ ಹಾಕುವ ಸಂಪ್ರದಾಯ ಮುನ್ನೆಲೆಗೆ ಬಂದಿದೆ. ಕೆಲವು ಕಡೆಗಳಲ್ಲಿ ನಿರಾಕಾರ ಕಲ್ಲುಗಳ ಜೊತೆಗೆ ಶೂಲ ಇರುತ್ತದೆ. ಹೆಣ್ಣು ದೈವ (ಉದಾ: ಚೌಡಿ) ಆಗಿದ್ದರೆ ಶೂಲ, ಹಸಿರು ಗಾಜಿನ ಬಳೆಗಳೂ ಇರುತ್ತವೆ. ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಯುವಂತೆ ಈ ದೈವಗಳಿಗೆ ನಿತ್ಯ ಪೂಜೆ ನಡೆಯುವುದಿಲ್ಲ. ವರ್ಷಕ್ಕೊಮ್ಮೆ ಒಳ್ಳೆಯ ದಿನವನ್ನು ಗೊತ್ತು ಮಾಡಿ ಪೂಜೆ ಮಾಡುತ್ತಾರೆ. ಮಾಂಸಾಹಾರ ದೈವಗಳಾಗಿದ್ದಲ್ಲಿ ಪ್ರಾಣಿ ಬಲಿ ನೀಡಿ ಹರಕೆ ತೀರಿಸುತ್ತಾರೆ.

ಒಂದೊಂದು ದೈವಕ್ಕೆ ಒಂದೊಂದು ಬಗೆಯಲ್ಲಿ ಹರಕೆ ಒಪ್ಪಿಸುವ ಸಂಪ್ರದಾಯ ಇದೆ. ಈ ಆಚರಣೆಯು ಕುಟುಂಬದಿಂದ ಕುಟುಂಬಕ್ಕೆ ಭಿನ್ನವಾಗಿರುತ್ತದೆ. ಹರಕೆಯ ದಿನದ ಮುನ್ನಾ ದಿನ ದೈವದ ಬನವನ್ನು ಶುಚಿ ಮಾಡಿ, ಓರಣಗೊಳಿಸುತ್ತಾರೆ. ಮುಂಜಾನೆಯೇ ಎದ್ದು ಕಡುಬು‌ ಮತ್ತು ಬಲಿಕೊಡುವ ಪ್ರಾಣಿಯ ಸಾರು ಮಾಡಲು ಅಗತ್ಯ ಪದಾರ್ಥ ಸಿದ್ಧಪಡಿಸಿಕೊಂಡು ಬನಕ್ಕೆ ತೆರಳುತ್ತಾರೆ. ಅಲ್ಲಿ ಪೂಜೆ ಸಲ್ಲಿಸಿ ನಂತರ ದೈವಕ್ಕೆ ಕುರಿ, ನಾಟಿಕೋಳಿ, ಕೋಳಿ, ಹಣ್ಣು, ಕಾಯಿ ಸಮರ್ಪಿಸುತ್ತಾರೆ.

ರಕ್ತಾಹಾರ ಬೇಡುವ ದೈಯಗಳಿಗೆ ಕುಟುಂಬದ ಯಜಮಾನ ತನ್ನ ಕೈಯಿಂದಲೇ ಪ್ರಾಣಿಗಳನ್ನು ವಧಿಸಿ, ಅರ್ಪಿಸುತ್ತಾನೆ. ಬಲಿ ಅರ್ಪಿಸಿದ ಪ್ರಾಣಿಯ ತಲೆಯನ್ನು ದೇವರಿಗೆ ಬಿಟ್ಟು ಉಳಿದ ದೇಹದ ಭಾಗವನ್ನು ಸಂಬಂಧಪಟ್ಟವರು ಮನೆಗೆ ಒಯ್ಯುತ್ತಾರೆ. ಆ ದಿನ ಸಂಬಂಧಿಕರು, ಆಪ್ತರಿಗೆ ಆಹ್ವಾನ ನೀಡಿ ಔತಣವನ್ನು ಏರ್ಪಡಿಸುತ್ತಾರೆ.

ಮಾಂಸದ ಅಡುಗೆಯನ್ನು ದೈವಕ್ಕೆ ಸಮರ್ಪಿಸಿದ ನಂತರ ದೈವದ ಬನದ ಸಾರನ್ನು ಪ್ರಸಾದವಾಗಿ ಸಾಮೂಹಿಕ ಭೋಜನ ಮಾಡುತ್ತಾರೆ. ಮನೆಯಲ್ಲಿ ಬಗೆಬಗೆಯ ಮಾಂಸಾಹಾರ ಖಾದ್ಯ ಮಾಡಿದರೂ ದೈವದ ಬನದ ಸಾರಿನ ರುಚಿಗೆ ಸಮ ಅಲ್ಲ ಎಂಬುದು ಎಲ್ಲರ ಮಾತು, ನಂಬಿಕೆ.

ವಿಶೇಷ ಎಂದರೆ ಮಾಂಸಾಹಾರ ಸೇವಿಸದ ಜಾತಿಗಳಲ್ಲೂ ಈ ದೈವಗಳನ್ನು ಆರಾಧಿಸಿ ಕುರಿ, ಕೋಳಿ ಬಲಿ ನೀಡುತ್ತಾರೆ. ದೈವಕ್ಕೆ ಅರ್ಪಿಸಿದ ಕುರಿ ಕೋಳಿಯನ್ನು ಮಾಂಸಾಹಾರ ಸೇವಿಸುವ ಜನರಿಗೆ ನೀಡುತ್ತಾರೆ.

ಈ ದೈವದ ಹರಕೆಯು ಮೇಲ್ನೋಟಕ್ಕೆ ಧಾರ್ಮಿಕ ಆಚರಣೆ ಅನಿಸಿದರೂ ಹರಿದು ಹಂಚಿ ಹೋಗಿರುವ ಕುಟುಂಬದ ಹಲವು ತಲೆಮಾರುಗಳನ್ನು ಒಟ್ಟಿಗೆ ಸೇರಿಸುವ, ಹೊಸ ತಲೆಮಾರಿಗೆ ಹಳೆ ಬೇರುಗಳನ್ನು ಪರಿಚಯಿಸುವ ಬೆಸುಗೆಯೂ ಆಗಿದೆ.

ಸರ್ವಕಾಲದಲ್ಲೂ ಹಚ್ಚ ಹಸಿರನ್ನು ಹೊದ್ದು ಕಂಗೊಳಿಸುವ ಮಲೆನಾಡಿನ ಪ್ರಾಕೃತಿಕ ಸೌಂದರ್ಯ ಮತ್ತಷ್ಟು ರಮಣೀಯವಾಗಿ‌ ಕಾಣಲು ಈ ‘ದೇವರ ಬನಗಳು’ ಬಹುಮುಖ್ಯವಾಗಿವೆ. ಆಧುನಿಕತೆ ಮತ್ತು ಮನುಷ್ಯನ‌ ದುರಾಸೆಯಿಂದ ಮಲೆನಾಡಿನಲ್ಲಿ ಕಾಡು‌ ಕಣ್ಮರೆಯಾಗುತ್ತಿರುವ ಹೊತ್ತಲ್ಲಿ ಅಲ್ಪಸ್ವಲ್ಪವಾದರೂ ಕಾಡು ಉಳಿಯಲು ಇಂಥ ಬನಗಳು ಕಾರಣ. ಕಾಡು ಕಲ್ಲುಗಳಲ್ಲೇ ದೈವತ್ವ‌ ಕಂಡುಕೊಂಡು ಅದಕ್ಕಾಗಿ ಬನ‌ ನಿರ್ಮಿಸಿ ಪೂಜಿಸುವ ಅಪೂರ್ವ ಆಚರಣೆಗೆ ಅಡಿಪಾಯ ಹಾಕಿಕೊಟ್ಟವರು ನಮ್ಮ ಪೂರ್ವಿಕರು, ಅವರ ದೂರದೃಷ್ಟಿಗೆ ನಮ್ಮದೊಂದು ಸಲಾಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.