ಆ ದಿನ ರಾತ್ರಿ ಹಳ್ಳಿಯೊಂದರ ರಸ್ತೆ ಬದಿಯ ಗೋಡೆಗೆ ಬ್ಯಾನರ್ ಕಟ್ಟಲಾಗಿತ್ತು. ಕುರ್ಚಿ ಮೇಲೆ ಅಂಬೇಡ್ಕರ್ ಭಾವಚಿತ್ರ. ರಸ್ತೆಗೇ ಹಾಸಿದ ಪ್ಲಾಸ್ಟಿಕ್ ತಾಟು. ಅಲ್ಲಿ ಪುರುಷರಿಗಿಂತ ಮಹಿಳೆಯರು ಮತ್ತು ಮಕ್ಕಳ ಹಾಜರಿಯೇ ಹೆಚ್ಚು. ಸಂಪನ್ಮೂಲ ವ್ಯಕ್ತಿ ಮೈಕ್ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಮಾತನಾಡುತ್ತಿದ್ದರು. ಎಲ್ಲರೂ ಅದಕ್ಕೆ ಕಿವಿಯಾಗಿದ್ದರು. ಇಂತಹದೇ ದೃಶ್ಯಗಳನ್ನು ರಾಯಚೂರು ಜಿಲ್ಲೆಯ ಹಳ್ಳಿ ಹಳ್ಳಿಗಳ ಗಲ್ಲಿಗಳಲ್ಲಿ, ಕೇರಿಗಳಲ್ಲಿ, ಬಯಲಲ್ಲಿ, ಗುಡಿಸಲುಗಳ ಮುಂದೆ ಮೂರು ವರ್ಷಗಳಿಂದ ಕಾಣಬಹುದು.
ರಾಯಚೂರು ಜಿಲ್ಲೆಯಲ್ಲಿ ಹೀಗೆ ನಡೆಯುತ್ತಿರುವ ಅಂಬೇಡ್ಕರ್ ಕುರಿತಾದ ಅರಿವು ಕಾರ್ಯಕ್ರಮದ ಹಿಂದಣ ಕಥೆ ಏನು ಎಂದು ಹುಡುಕಿದರೆ, ‘ಮನೆ ಮನೆಗೆ ಅಂಬೇಡ್ಕರ್’ ಎನ್ನುವ ಪುಟ್ಟ ಕಾರ್ಯಕ್ರಮ ಅನಾವರಣಗೊಂಡಿತು. ಇದರಿಂದಾಗಿ ರಾಯಚೂರು ಜಿಲ್ಲೆಯಾದ್ಯಾಂತ ಅಂಬೇಡ್ಕರ್ ಕುರಿತು ಮಾತನಾಡುವ ಹತ್ತಾರು ಸಂಪನ್ಮೂಲ ವ್ಯಕ್ತಿಗಳು ರೂಪುಗೊಂಡಿದ್ದಾರೆ. ವಿಶೇಷವಾಗಿ ದಲಿತ ಹೋರಾಟಗಳಲ್ಲಿ, ಹೊರಗಡೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ, ಅಂಬೇಡ್ಕರ್ ಜಯಂತಿಗಳಲ್ಲಿ ಬಹುತೇಕ ಗಂಡಸರು ಮಾತ್ರ ಪಾಲ್ಗೊಳ್ಳುತ್ತಾರೆ. ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಪಾಲ್ಗೊಳ್ಳುತ್ತಿದ್ದಾರೆ. ಇದರಿಂದಾಗಿ ಕಲಿಯುವ ಮಕ್ಕಳಲ್ಲಿ ಅಂಬೇಡ್ಕರ್ ಬಗೆಗೆ ಕುತೂಹಲ ಮೂಡುತ್ತಿದೆ. ಮಹಿಳೆಯರಲ್ಲಿಯೂ ಬಾಬಾ ಸಾಹೇಬರ ವಿಚಾರಗಳು ಬಿತ್ತನೆ ಆಗುತ್ತಿದೆ. ಮಹಿಳೆಯರೂ ಬಾಬಾ ಸಾಹೇಬರ ಕುರಿತು ಮಾತನಾಡುವಂತಾಗಿದೆ. ಕೆಲವು ವೇದಿಕೆಗಳಿಗೆ ಸೀಮಿತವಾಗಿದ್ದ ಅಂಬೇಡ್ಕರ್ ಈಗ ಮನೆ ಮನೆಗೆ ತಲುಪುತ್ತಿದ್ದಾರೆ. ಅಂತೆಯೇ ಅಂಬೇಡ್ಕರ್ ದಲಿತರಿಗೆ ಮಾತ್ರ ಎನ್ನುವ ನಂಬಿಕೆಯೂ ಬದಲಾಗಿ ಮುಸ್ಲಿಮರ ಮನೆಗಳನ್ನೂ ಒಳಗೊಂಡಂತೆ ಅಸ್ಪೃಶ್ಯ ಸಮುದಾಯಗಳನ್ನು ಹೊರತುಪಡಿಸಿ ಪರಿಶಿಷ್ಟ ಪಂಗಡದವರ, ಹಿಂದುಳಿದ ಸಮುದಾಯಗಳು ಈ ಕಾರ್ಯಕ್ರಮ ಮಾಡಲು ಮುಂದೆ ಬರುತ್ತಿವೆ.
ಮನೆಗಳಲ್ಲಿರುವ ಹೆಣ್ಣುಮಕ್ಕಳಿಗೆ ಅಂಬೇಡ್ಕರ್ ತಲುಪಬೇಕು. ಅಂಬೇಡ್ಕರ್ ಅವರ ಚಿಂತನೆಯ ಶಕ್ತಿ ಮಹಿಳಾ ನಾಯಕಿಯರನ್ನು ಬೆಳೆಸುತ್ತದೆ.–ರೂಪ ಶ್ರೀನಿವಾಸ ನಾಯಕ, ರೈತ ನಾಯಕಿ ರಾಯಚೂರು
ಏನಿದು ‘ಮನೆ ಮನೆಗೆ ಅಂಬೇಡ್ಕರ್’?
ಅಂಬೇಡ್ಕರ್ ಬಗೆಗೆ ಪ್ರೀತಿ ಅಭಿಮಾನ ಇರುವ, ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇರುವವರು ತಮ್ಮ ಮನೆಯಲ್ಲಿ ಈ ಕಾರ್ಯಕ್ರಮ ಮಾಡುವುದಾಗಿ ಕೋರುತ್ತಾರೆ. ಮನೆಯವರೇ ಅಂಬೇಡ್ಕರ್ ಬಗ್ಗೆ ಮಾತನಾಡಬಹುದು, ಇದು ಸಾಧ್ಯವಾಗದೇ ಇದ್ದರೆ ಆಯೋಜಕರೇ ಸಂಪನ್ಮೂಲ ವ್ಯಕ್ತಿಯೊಬ್ಬರನ್ನು ಗುರುತು ಮಾಡುತ್ತಾರೆ. ಚಾಲನೆಗೊಬ್ಬ ಹಿರಿಯರ ಗೊತ್ತು ಮಾಡುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡುತ್ತಾರೆ. ವೇದಿಕೆಯ ಶಿಷ್ಟಾಚಾರಗಳಿಲ್ಲದೆ ಸರಳವಾಗಿ ಮಾತು-ಚರ್ಚೆ ನಡೆಯುತ್ತವೆ. ಆ ದಿನ ಮನೆಯವರ ಸರಳ ಆತಿಥ್ಯ ಸ್ವೀಕರಿಸಿ, ನೆನಪಿಗೆ ಅಂಬೇಡ್ಕರ್ ಭಾವಚಿತ್ರವನ್ನು ನೀಡಿ ಎಲ್ಲರೂ ಮರಳುತ್ತಾರೆ. ಇದಿಷ್ಟು ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದ ಸ್ವರೂಪ. ವಾರಕ್ಕೊಂದು ಮನೆಯಂತೆ ಮನೆ ಅಂಗಳದಲ್ಲಿ ಸಂಜೆ 6.30 ಕ್ಕೆ ಆರಂಭವಾಗಿ 8.30 ಕ್ಕೆ ಕಾರ್ಯಕ್ರಮ ಮುಗಿಯುತ್ತದೆ.
ಜನವರಿ 26, 2022ರ ಗಣರಾಜ್ಯೋತ್ಸವ ದಿನದಂದು ಪರಿಶಿಷ್ಟ ಪಂಗಡದ ಬಸವರಾಜ ನಾಯಕ ಅವರ ಮನೆಯಲ್ಲಿ ಮೊದಲ ಕಾರ್ಯಕ್ರಮ ನಡೆಯಿತು. ಹೀಗೆ ಶುರುವಾದ ಅಭಿಯಾನ ಮೂರನೆ ವರ್ಷದಲ್ಲಿ ನವಂಬರ್ 10 ರಂದು ನೂರನೇ ಮನೆಗೆ ಅಂಬೇಡ್ಕರ್ ಪ್ರವೇಶಿಸಿದರು. ನೂರನೇ ವಿಶೇಷ ಕಾರ್ಯಕ್ರಮದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಭಾಗಹಿಸಿದ್ದರು.
‘ಬುದ್ಧನ ಮತ್ತು ಬೌದ್ಧದಮ್ಮದ ಅರಿವನ್ನು ಮನೆ ಮನೆಗೆ ತಲುಪಿಸುವ ‘ಧಮ್ಮದೀಪ' ಎನ್ನುವ ಕಾರ್ಯಕ್ರಮವನ್ನು ಹಿಂದೆ ಮಾಡುತ್ತಿದ್ದೆವು. ಈ ಮಾದರಿಯಲ್ಲಿ ‘ಮನೆ ಮನೆಗೆ ಅಂಬೇಡ್ಕರ್’ ರೂಪಿಸಿದೆವು. ಯಾರಿಗೂ ಹೊರೆಯಾಗದಂತೆ, ಖರ್ಚಿಲ್ಲದೆ ಅಂಬೇಡ್ಕರ್ ಚಿಂತನೆಯನ್ನು ಮಹಿಳೆಯರು ಮತ್ತು ಮಕ್ಕಳಿಗೆ ತಲುಪಿಸಿ ವಿಸ್ತರಿಸುವ ಕನಸೊತ್ತು ಆರಂಭಿಸಿದೆವು’ ಎನ್ನುತ್ತಾರೆ ಆಯೋಜಕರಲ್ಲಿ ಒಬ್ಬರಾದ ಎಂ.ಆರ್.ಭೇರಿ.
ಇಂತಹದ್ದೊಂದು ಕನಸೊತ್ತು ರಾಯಚೂರಿನ ಜೆ.ಶರಣಪ್ಪ ಬಲ್ಲಟಗಿ, ಎಂ.ಆರ್.ಭೇರಿ ಅವರ ಮುಂದಾಳತ್ವದಲ್ಲಿ ಶಿವಪ್ಪ ನಾಯಕ, ಮೋದಿನ್ ಸಾಬ್ ಮೊದಲಾದ ಸಂಗಾತಿಗಳು ಸೇರಿಕೊಂಡು, ‘ಬಹುಜನ ಸಂಘರ್ಷ ಸಮಿತಿ’ ರಚಿಸಿ, ಮೊದಲ ಹಂತದಲ್ಲಿ ರಾಯಚೂರು ಜಿಲ್ಲೆಯಲ್ಲಿ ‘ಮನೆ ಮನೆಗೆ ಅಂಬೇಡ್ಕರ್’ ಕಾರ್ಯಕ್ರಮ ರೂಪಿಸಿದರು. ‘ಅಂಬೇಡ್ಕರ್ ಜಾತಿ ಮತ ಮೀರಿ ಎಲ್ಲರ ಮನೆಗಳಿಗೂ ತಲುಪಬೇಕೆಂಬ ಆಶಯದಲ್ಲಿ 'ಬಹುಜನ ಸಂಘರ್ಷ ಸಮಿತಿ’ ಎಂದು ಹೆಸರಿಸಲಾಯಿತೇ ಹೊರತು ರಾಜಕೀಯ ಪಕ್ಷ ‘ಬಹುಜನ ಸಮಾಜ ಪಕ್ಷ’ಕ್ಕೂ ನಮಗೂ ಸಂಬಂಧವಿಲ್ಲ. ಮೊದಲಿಗೆ ಬಹುಜನ ಸಮಾಜ ಪಕ್ಷದವರಿಂದಲೂ, ನಂತರ ದಲಿತ ಸಂಘಟನೆಗಳ ಮುಖಂಡರುಗಳಿಂದಲೂ ಸ್ವಲ್ಪ ಮಟ್ಟಿನ ವಿರೋಧ ಬಂತು. ಈಗ ಈ ಕಾರ್ಯಕ್ರಮವನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ’ ಎನ್ನುತ್ತಾರೆ ಶರಣಪ್ಪ ಬಲ್ಲಟಗಿ. ಇದೀಗ ಈ ಕಾರ್ಯಕ್ರಮ ಆಯೋಜನೆಯ ತಾಲ್ಲೂಕು ಘಟಕಗಳನ್ನು ಮಾಡಿ ಜವಾಬ್ದಾರಿಗಳನ್ನು ಬೇರೆ ಬೇರೆಯವರಿಗೂ ಹಂಚಲಾಗಿದೆ. ಈ ಯೋಜನೆಯನ್ನು ಇತರೆ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯವ್ಯಾಪಿ ವಿಸ್ತರಿಸುವ ಕನಸು ಈ ಸಂಘಟಕರದು.
ಸಿರವಾರ ತಾಲ್ಲೂಕಿನ ಮಾಚನೂರಿನ ಶಿಕ್ಷಕರಾದ ಮೋದೀನ್ ಸಾಬ್ ‘ಅಂಬೇಡ್ಕರ್ ಎಸ್ಸಿ ಎಸ್ಟಿಗೆ ಸೀಮಿತ ಅಲ್ಲ. ಅವರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತ ಮಾಡಬಾರದು. ಶಾಲೆಯಲ್ಲಿ ನಾವು ಮಕ್ಕಳಿಗೆ ಪಾಠ ಇದ್ರೂ ಅಂಬೇಡ್ಕರ್ ಬಗ್ಗೆ ಹೆಚ್ಚಾಗಿ ಹೇಳಿಕೊಡಲ್ಲ, ಮನೆಗಳಲ್ಲಿ ಅಂಬೇಡ್ಕರ್ ಬಗ್ಗೆ ಹೆಚ್ಚೆಚ್ಚು ಮಾತಾಡಿದರೆ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ, ಮತ್ತದೇ ಮಕ್ಕಳು ಶಾಲೆಯಲ್ಲೂ ಅಂಬೇಡ್ಕರ್ ಬಗ್ಗೆ ಮಾತಾಡೋಕೆ ಶುರು ಮಾಡ್ತಾರೆ’ ಎನ್ನುತ್ತಾರೆ.
ಒಂದೆಡೆ ಚಿಂತಕರಾದ ಆಕಾಶ್ ಸಿಂಗ್ ರಾಥೋರ್, ಸೂರಜ್ ಯಂಗ್ಡೆ, ಅಶೋಕ್ ಗೋಪಾಲ್, ಆನಂದ ತೇಲ್ತುಂಬ್ಡೆ, ಸುಖದೇವ್ ಥೋರಟ್, ಕ್ರಿಸ್ಟಫರ್ ಜಫರಲೆಟ್, ಅರುಂಧತಿ ರಾಯ್ ಮೊದಲಾದವರ ಬರಹಗಳು ಜಾಗತಿಕವಾಗಿ ಅಂಬೇಡ್ಕರ್ ಬದುಕು ಮತ್ತು ಚಿಂತನೆಯನ್ನು ಭಿನ್ನವಾಗಿ ಪರಿಚಯಿಸುತ್ತಿವೆ. ಮತ್ತೊಂದೆಡೆ ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗಳಿಗೆ ಅಂಬೇಡ್ಕರ್ ಅವರನ್ನು ತಲುಪಿಸುವ ‘ಮನೆ ಮನೆಗೆ ಅಂಬೇಡ್ಕರ್’ ತರಹದ ಕಾರ್ಯಕ್ರಮಗಳೂ ಅಂಬೇಡ್ಕರ್ ಅರಿವನ್ನು ವಿಸ್ತರಿಸುವ ಅರ್ಥಪೂರ್ಣ ಪ್ರಯತ್ನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.