ಜಗತ್ತಿನಲ್ಲಿ ತಂದೆ ಹಾಗೂ ತಾಯಿಗೆ ಸಮಾನ ಗೌರವ ಸಿಕ್ಕಿರುವುದರಿಂದಲೇ ತಾಯಿಯನ್ನು ಭೂಮಿಗೂ, ತಂದೆಯನ್ನು ಆಕಾಶಕ್ಕೆ ಹೋಲಿಸಲಾಗಿದೆ.
ಅಪ್ಪನ ದುಡ್ಡು ಎಣಿಸೋಕಾಗಲ್ಲ ಅಮ್ಮನ ಸೀರೆ ಮಡಿಚೋಕಾಗಲ್ಲ ಎಂಬ ಒಗಟಿಗೆ ಉತ್ತರ ನಕ್ಷತ್ರ ಮತ್ತು ಆಕಾಶ. ಅರ್ಥಾತ್ ಅಮ್ಮ ಅಪ್ಪ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದಲ್ಲವೇ?
ಅಮ್ಮ ಮನಸ್ಸಿನಿಂದ ಮಾತನಾಡುತ್ತಾಳೆ. ಹಾಗಾಗಿ ಅಮ್ಮನೆಂದರೆ ಮೃದುಸ್ವಭಾವ. ಅಪ್ಪಾ ಬುದ್ಧಿಯಿಂದ ಖಾರವಾಗಿ ಮಾತನಾಡುತ್ತಾನೆ. ಏನೇ ಇದ್ದರೂ ಅಪ್ಪ ಅಮ್ಮ ಇಬ್ಬರೂ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾರೆ.
ಅಪ್ಪನ ಪ್ರಭಾವದಿಂದ ಮಕ್ಕಳ ಆತ್ಮಗೌರವ, ಆತ್ಮವಿಶ್ವಾಸ ಎರಡೂ ಬೆಳೆಯುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಪುರುಷರ ಮೇಲಿನ ಅಭಿಪ್ರಾಯಗಳು ತಂದೆಯ ನಡವಳಿಕೆಯನ್ನೇ ಅವಲಂಬಿಸಿರುತ್ತವೆ.
ಅಪ್ಪ ಮಕ್ಕಳಿಗೆ ಬುದ್ಧಿವಾದ ಹೇಳುವಾಗ ಆ ನಿಷ್ಠುರ ಮಾತಿನ ಹಿಂದಿರುವುದು ನಿಷ್ಕಲ್ಮಶ ಕಾಳಜಿ ಮತ್ತು ಮಕ್ಕಳ ಭವಿಷ್ಯದ ಕುರಿತ ಆತಂಕಗಳು ಗೋಚರವಾಗುತ್ತವೆ.
ಮಕ್ಕಳ ಪಾಲಿಗೆ ನಿಜವಾದ ಹೀರೋಗಳೆಂದರೆ ಅವರ ಅಪ್ಪಂದಿರೆ. ಮಕ್ಕಳ ಪಾಲನೆ, ವಿದ್ಯಾಭ್ಯಾಸ,ಅವರ ಉದ್ಯೋಗ, ಮದುವೆ, ಮಕ್ಕಳು ಇವುಗಳ ಸುತ್ತವೇ ಅವರ ಯೋಚನೆ ಇರುತ್ತದೆ.
ಅಮ್ಮನ ಅನುಪಸ್ಥಿತಿಯಲ್ಲಿ ಅಮ್ಮನಾಗಿಯೂ ಆರೈಕೆ ಮಾಡುವ ಅಪ್ಪಂದಿರಿದ್ದಾರೆ. ಆ ಜೀವದ ಕನಸು ಸಾಕಾರಗೊಳ್ಳುವುದು ಅಪ್ಪನ ಪರಿಶ್ರಮದಿಂದ. ಎಲ್ಲ ಮಕ್ಕಳಿಗೂ ಅವರಪ್ಪನೇ ಸದೃಢ ಹಿರೋ.
ಜನಕ ಮಹಾರಾಜ ಸೀತಾಮಾತೆಯನ್ನು ಮದುವೆ ಮಾಡಿ ರಾಮರ ಸಂಗಡ ಕಳುಹಿಸುವಾಗ ಒಂದು ಕೋಣೆಯ ತುಂಬಾ ಅರಿಶಿನ ಹರಡಿ ‘ಇದರ ಮೇಲೆ ನಿನ್ನ ಹೆಜ್ಜೆ ಗುರುತನ್ನು ಮೂಡಿಸಿ ಹೋಗು. ಇದರ ನೆನಪಲ್ಲಿ ಮಗಳೇ ನೀನಿಲ್ಲದ ಕೊರಗನ್ನು ಮರೆಯುತ್ತೇನೆ’ ಎಂದಿದ್ದನಂತೆ.
‘ ಕನ್ನಡದ ಒಲುಮೆಯ ಕವಿ’, ‘ಪ್ರೇಮ ಕವಿ’ ಕೆ.ಎಸ್. ನರಸಿಂಹ ಸ್ವಾಮಿ ಅವರು ಬರೆದಿರುವ ‘ಶಾನುಭೋಗರ ಮಗಳು’ ಗೀತೆಯಲ್ಲಿ ತಂದೆಯಾದವನು ತಾಯಿಯಿಲ್ಲದ ಮಗಳು ಸೀತೆಗೆ ಬಂದ ಕಪ್ಪು ವರನೊಂದಿಗೆ ಮದುವೆ ಮಾಡಿಸಿ ಕೈ ತೊಳೆದುಕೊಳ್ಳುವುದಿಲ್ಲ.ಬದಲಾಗಿ ವೈದಿಕರ ಮನೆಗಳಲಿ ಊಟ ಹೊತ್ತಾಗುವುದು ಎಂದ ಮಗಳ ಮಾತಿನಲ್ಲಿಯೇ ಆಕೆಯ ಮನದಿಂಗಿತವನ್ನು ಅರಿತುಕೊಂಡು ಬಂದ ವರನನ್ನು ಬಂದ ದಾರಿಗೆ ಸುಂಕವಿಲ್ಲದಂತೆ ಕಳಿಸುತ್ತಾನೆ.
ಪ್ರಸಿದ್ಧ ತಂದೆ ಮಕ್ಕಳ ಜೋಡಿ ನೆನಪಿಸಿಕೊಳ್ಳಬಹುದೆಂದರೆ ಸಾಹಿತ್ಯ ಕ್ಷೇತ್ರದಲ್ಲಿ ಡಿ.ವಿ.ಜಿ. ಮತ್ತು ಬಿ.ಜಿ.ಎಲ್ ಸ್ವಾಮಿ, ಕುವೆಂಪು ಮತ್ತು ತೇಜಸ್ವಿ, ದೇ.ಜ.ಗೌ ಮತ್ತು ಶಶಿಧರ ಪ್ರಸಾದ್, ಬೆಸಗರಹಳ್ಳಿ ರಾಮಣ್ಣ ಮತ್ತು ರವಿಕಾಂತೇಗೌಡ. ಕ್ರೀಡಾಕ್ಷೇತ್ರದಲ್ಲಿ ಸುನಿಲ್ ಗವಾಸ್ಕರ್ ಮತ್ತು ರೋಹನ್ ಗವಾಸ್ಕರ್, ಪ್ರಕಾಶ್ ಪಡುಕೋಣೆ ಮತ್ತು ದೀಪಿಕಾ ಪಡುಕೋಣೆ, ಸಿನಿಮಾದಲ್ಲಿ ಧರ್ಮೇಂದ್ರ ಮತ್ತು ಸನ್ನಿಡಿಯೋಲ್, ಬಾಬಿಡಿಯೋಲ್, ರಾಜಕೀಯದಲ್ಲಿ ಕರುಣಾನಿಧಿ ಮತ್ತು ಕನಿಮೋಳಿ. 2018 ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್ ಏರಿದ ಅಪ್ಪ ಮಗಳ ಜೋಡಿ ಅಜೀತ್ ಬಜಾಜ್ ಮತ್ತು ದಿಯಾ ಬಜಾಜ್ ಅವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.
ಅಪ್ಪ ಎಂದರೆನೇ ಅದ್ಭುತ. ಆ ಜೀವ ತನ್ನ ನಗು ಮುಖದಲ್ಲಿ ಅದೆಷ್ಟೋ ದುಃಖಗಳನ್ನು ಮರೆಮಾಚಿಕೊಂಡು, ಮಕ್ಕಳಿಗೆ ಬೇಕು ಅನ್ನಿಸಿದೆಲ್ಲವನ್ನೂ ಕಣ್ಮುಂದೆ ತಂದಿರಿಸುತ್ತಾನೆ.
ಕಪ್ಪೆ ಚಿಪ್ಪಿನೊಳಗೆ ಅಡಗಿರುವ ಮುತ್ತುಗಳ ಹಾಗೆ ಮಕ್ಕಳನ್ನು ಜೋಪಾನ ಮಾಡುತ್ತಾನೆ. ಹಾಗೆ ಜೋಪಾನ ಮಾಡುತ್ತಲೇ ಮಕ್ಕಳನ್ನು ಜಗತ್ತಿನ ಅನುಭವಕ್ಕೆ ತೆರೆದುಕೊಳ್ಳುವಂತೆ ಬುದ್ಧಿ ಹೇಳುತ್ತಾನೆ. ಸ್ನೇಹಿತ, ಗುರು, ಮಾರ್ಗದರ್ಶಕನಾಗಿದ್ದುಕೊಂಡು ಬದುಕನ್ನು ರೂಪಿಸಿದ ಅಪ್ಪನಿಗೆ ಮನತುಂಬಿ ಧನ್ಯವಾದಗಳನ್ನು ಹೇಳಲೇಬೇಕು.
ಪೋಷಕರ ಬಗ್ಗೆ ವಿಶೇಷ ಕಾಳಜಿ, ಪ್ರೀತಿ ಪ್ರತಿಯೊಬ್ಬರಲ್ಲಿಯೂ ಇದ್ದಾಗ ವೃದ್ಧಾಶ್ರಮಗಳೇ ಇರುವುದಿಲ್ಲ. ಇಂತಹ ನಿರ್ಧಾರ ಈ ಅಪ್ಪಂದಿರ ದಿನದಂದು ಆಗಲಿ ಎನ್ನೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.