ಇಡೀ ಗ್ರಾಮ ನಿದ್ರೆಯಲ್ಲಿತ್ತು. ಆದರೆ ಒಂದಿಬ್ಬರು ಮಾತ್ರ ಹಣೆಗೆ ಬ್ಯಾಟರಿ ಕಟ್ಟಿಕೊಂಡು ಕಾಡಿನತ್ತ ಹೊರಟಿದ್ದರು. ‘ಬೇಗ ಬೇಗ ಬಾರೋ, ಯಾರಾದ್ರೂ ನೋಡಿದ್ರೆ ಕಷ್ಟ. ಬೇರೆಯವ್ರು ಬರುವಷ್ಟರಲ್ಲಿ ನಾವ್ ಕಾಡಿಗೆ ಬೆನ್ನು ಮಾಡಿರಬೇಕು....’ ಎನ್ನುತ್ತಾ ತಮ್ಮ ನಡಿಗೆಯನ್ನು ಮತ್ತಷ್ಟು ಬಿರಿಸುಗೊಳಿಸಿದರು. ನೋಡ ನೋಡುತ್ತಿದ್ದಂತೆ ಅವರು ಕಾಡಿನಲ್ಲಿ ಲೀನವಾಗಿಬಿಟ್ಟರು!.
‘ಅಲ್ನೋಡೋ, ಕೀಳು... ಕೀಳು, ನಿಧಾನ... ನಿಧಾನ, ಬಗ್ಗಿ ಕೀಳೋ ಶ್…! ಮೆತ್ತಗೆ ಮಾತ್ನಾಡೋ...’ ಕಾಡಿನ ಎಲ್ಲೆಡೆಯಿಂದ ಹೆಚ್ಚುಕಮ್ಮಿ ಇವೇ ಮಾತುಗಳು ತೇಲಿ ಬರತೊಡಗಿದವು. ನನಗೆ ಅಚ್ಚರಿ, ಆತಂಕ ಒಟ್ಟೊಟ್ಟಿಗೇ ಆದವು. ಹೋಗಿದ್ದು ಇಬ್ಬರೇ. ಅದು ಈ ಕಡೆ. ಅದ್ಹೇಗೆ ಎಲ್ಲೆಡೆಯಿಂದ ಇಂತಹ ಮಾತುಗಳು ಕೇಳಿ ಬರುತ್ತಿವೆ!? ಕುತೂಹಲಕ್ಕೆ ಅಲ್ಲೇ ಇದ್ದ ಪುಟ್ಟ ಮರವನ್ನೇರಿ ಕಾಡಿನೊಳಗೆ ದೃಷ್ಟಿ ನೆಟ್ಟೆ. ಅಡವಿ ತುಂಬಾ ಬರೀ ಬ್ಯಾಟರಿ, ಮೊಬೈಲ್ ಬೆಳಕು!.
ಇದು ಅಣಬೆ ಬೇಟೆ
ಅವರೆಲ್ಲ ಬ್ಯಾಟರಿ ಬೆಳಕಿನಲ್ಲಿ ಹುಡುಕುತ್ತಿದ್ದದ್ದು ನಾಟಿ ಅಣಬೆಗಳನ್ನು!. ಹಳ್ಳಿ ಕಡೆ ಮಳೆಗಾಲದ ಈ ದಿನಗಳಲ್ಲಿ ಅಣಬೆ ಎದ್ದೇಳುವ ಮಳೆ, ತಿಥಿಗೆ ಕಾದಿದ್ದು ಕಾಡಿನತ್ತ ಚಿತ್ತ, ದೃಷ್ಟಿ ನೆಟ್ಟಿರುತ್ತಾರೆ. ಹೀಗಾಗಿ ಈ ಋತುವಿನಲ್ಲಿ ಅಣಬೆಗಳನ್ನು ಅರಸಿಕೊಂಡು ಬರುವವರು ಕಾಡಿನ ಗಿಡಕ್ಕೊಬ್ಬರಂತೆ ಸಿಗುತ್ತಾರೆ. ಇವರೆಲ್ಲರೂ ಗಾಢ ಕತ್ತಲು, ಪೊದೆಗಳನ್ನು ಸೀಳಿಕೊಂಡು, ತೆಗ್ಗು-ದಿನ್ನೆಗಳನ್ನು ದಾಟಿಕೊಂಡು, ಏದುಸಿರು ಬಿಡುತ್ತಾ ಅಣಬೆಗಳನ್ನು ಹುಡುಕುತ್ತಾ, ಕೀಳುತ್ತಾ ಪಾದರಸದಂತೆ ಓಡಾಡುತ್ತಿದ್ದರು.
ಇದೇ ಮಳೆಗೆ, ಇದೇ ಜಾಗದಲ್ಲಿ ಅಣಬೆಗಳು ಎದ್ದೇಳುತ್ತವೆ ಎನ್ನುವ ಪಾರಂಪರಿಕ ಜ್ಞಾನ ಹಳ್ಳಿಗರಲ್ಲಿ ಇರುತ್ತದೆ. ಆದರೆ ಇಂತಹದ್ದೇ ದಿನ ಎದ್ದೇಳುತ್ತವೆ ಎಂದು ಕರಾರುವಕ್ಕಾಗಿ ಹೇಳುವುದು ಕಷ್ಟ. ಹೀಗಾಗಿ ಭಾಗಶಃ ಮಳೆಯ ಸರಿಪಾದಕ್ಕೆ, ಎರಡು ಮಳೆಗಳು ಸಂಧಿಸುವ ವೇಳೆ ಕಾಡು, ಹೊಲಗಳಲ್ಲಿ ಒಮ್ಮೆ ಅಡ್ಡಾಡಿಕೊಂಡು ಬರುತ್ತಾರೆ. ವಿಶೇಷವಾಗಿ ಕುರಿ ಕಾಯೋರು, ದನ ಮೇಯಿಸೋರು, ಕಾಡಿನ ಉತ್ಪನ್ನ ಸಂಗ್ರಹಿಸೋರು.. ಇವುಗಳು ಎದ್ದೇಳುವ ಮುನ್ಸೂಚನೆ ಹೊತ್ತು ತರುತ್ತಾರೆ. ಇಂತಹವರು ತಮ್ಮ ಆಪ್ತರಿಗಷ್ಟೇ ಈ ಸುದ್ದಿ ಮುಟ್ಟಿಸುತ್ತಾರೆ. ಸುದ್ದಿ ತಿಳಿದವರು ಗುಟ್ಟಾಗಿ ಇಡುತ್ತಾರೆ. ಇಂತಹವರು, ನಾವೊಬ್ಬರೇ ಅಣಬೆ ಬೇಟೆಗೆ ಹೋಗೋದು ಎನ್ನೋ ಭಾವದಲ್ಲಿ ಕಾಡಿಗೆ ಬಂದಿರುತ್ತಾರೆ. ಆದರೆ ಅಲ್ಲಿ ಇಡೀ ಊರೇ ನೆರೆದಿರುತ್ತದೆ!.
ಎಷ್ಟೇ ಆಪ್ತರಿದ್ದರೂ ಅಣಬೆ ಬೇಟೆಗೆ ಹೋಗುವ ಗುಟ್ಟನ್ನು ಬಿಟ್ಟು ಕೊಡುವುದಿಲ್ಲ. ಮತ್ತೊಬ್ಬರನ್ನು ಕರೆದೊಯ್ದರೆ ತಮಗೆ ಸಿಗುವ ಪಾಲು ಕಮ್ಮಿ ಆಗುತ್ತದೆ ಎನ್ನುವ ಲೆಕ್ಕಚಾರ. ಎಲ್ಲರಿಗಿಂತ ಮೊದಲು ಕಾಡಿನಲ್ಲಿರಬೇಕು, ಕಿತ್ತುಕೊಂಡು ಬರಬೇಕು ಎನ್ನುವ ಉಮೇದಿನಲ್ಲಿ ಹಲವರು ರಾತ್ರಿಯೆಲ್ಲಾ ನಿದ್ದೆಯನ್ನೇ ಮಾಡುವುದಿಲ್ಲ. ಕತ್ತಲು, ಕಲ್ಲು-ಮುಳ್ಳು, ಪೊದೆಗಳು, ಕಾಡು ಪ್ರಾಣಿಗಳೆನ್ನದೆ ಕಾಡುಮೇಡಿನ ಯಾವ ಮೂಲೆಯನ್ನೂ ಬಿಡದೇ ಅಣಬೆ ಬೆದಕುತ್ತಾರೆ.
ಮಳೆಗಾಲದ ಅತಿಥಿ
ಅಣಬೆಯಲ್ಲಿ ಅಂದಾಜು 125 ಜಾತಿಗಳೂ, 4,000 ಪ್ರಭೇದಗಳಿವೆ. ಕಾಡು ಅಣಬೆಗಳು ಕೆಂಪು, ಕಲ್ಲು ಮಿಶ್ರಿತ ಮಸಾರೆ, ಮಿದು, ಸಾವಯವ ಭೂಮಿಯಲ್ಲಿ ಹಾಗೆ ಹೆಚ್ಚು ತೇವಾಂಶ ಮತ್ತು ಆರ್ದ್ರತೆ ಇರುವ ಕಡೆ ಗುಂಪು ಗುಂಪಾಗಿ ಹುಟ್ಟುತ್ತವೆ. ಆರಿದ್ರಾ ಮಳೆಗೆ ಮೊದಲು ಹುಟ್ಟಿ ಆಶ್ಲೇಷ ಮಳೆಯಲ್ಲಿ ಸಮೃದ್ಧವಾಗಿ, ಮಘಾ ಮಳೆಯಲ್ಲಿ ಸಾಧಾರಣವಾಗಿ, ಹಸ್ತ ಚಿತ್ತ ಮಳೆಗೆ ವಿರಳವಾಗಿ ಸಿಕ್ಕು ಕೊನೆಯಾಗುತ್ತವೆ. ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ.. ಹೀಗೆ ಬಯಲು ಸೀಮೆ, ಅರೆ ಮಲೆನಾಡು ಭಾಗಗಳಲ್ಲಿ ಅಡವಿ ಅಣಬೆ ಬೇಟೆಗೆ ಹೋಗುತ್ತಾರೆ. ಅಣಬೆಗೆ ಸಸ್ಯಗಳ ರಾಜ, ಕಾಡು ಬುತ್ತಿ, ಕಾಡಿನ ಬಂಗಾರವೆಂತಲೂ ಕರೆಯಲಾಗುತ್ತದೆ.
ಅಂದಹಾಗೆ ಶಿಲೀಂಧ್ರ ಜಾತಿಗೆ ಸೇರಿರುವ ಅಣಬೆಗಳಲ್ಲಿ ಖಾದ್ಯ ಮತ್ತು ವಿಷ ಅಣಬೆಗಳು ಎಂಬ ಎರಡು ಬಗೆ. ಬಹುತೇಕ ವರ್ಣರಂಜಿತ ಅಣಬೆಗಳು ವಿಷ ಅಣಬೆಗಳಾದರೆ ಬಿಳಿ ಗುಂಡಿ ಅಣಬೆಗಳು ತಾಜಾ ತರಕಾರಿಗಳಿಗಿಂತ ಹೆಚ್ಚು ಪೋಷಕಾಂಶ ಹೊಂದಿರುತ್ತವೆ. ಇವು ಮೊಟ್ಟೆ, ಮಾಂಸದ ರುಚಿಯನ್ನೂ ಮೀರಿಸಬಲ್ಲದು. ಹೀಗಾಗಿ ರೋಮನ್ನರು ಈ ಅಣಬೆಗಳನ್ನು ದೇವರ ಆಹಾರವೆಂದು ವರ್ಣಿ ಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೆಲವೆಡೆ ಒರಪು, ನುಚ್ಚು ಅಣಬೆ ಅಂತ ಇವುಗಳನ್ನು ಕರೆಯಲಿದ್ದು, ಇವು ತುಂಬಾ ರುಚಿಕರ ಮತ್ತು ಪುಷ್ಟಿದಾಯಕ. ಇವುಗಳನ್ನು ನೀರಿನಲ್ಲಿ ಉಪ್ಪು ಹಾಕಿ ಚೆನ್ನಾಗಿ ತೊಳೆದು ಎಣ್ಣೆ, ಖಾರ, ದನಿಯಾ ಪುಡಿ, ಹುಣಸೆ ಹುಳಿ ಹಿಂಡಿ ಸಾರು ಮಾಡಿ ಕೊನೆಗೆ ಜೋಳದ ಹಿಟ್ಟನ್ನು ಹದ ಪ್ರಮಾಣದಲ್ಲಿ ಕಲಿಸಿದರೆ ಅದರ ರುಚಿ, ಪರಿಮಳ ಆಹಾ... ಇವು ಪೂರ್ತಿ ಅರಳುವ ಮುಂಚೆ ಬಳಸಬೇಕು. ಇವು ಮರಗಿಡ, ಬೆಳೆಗಳಿಗೆ ಬೇಕಾದ ರಂಜಕ ಮುಂತಾದ ಆಹಾರಾಂಶಗಳನ್ನು ಒದಗಿಸುತ್ತವೆ. ಸಸ್ಯಗಳ ಬೇರುಗಳಿಗೆ ಬರುವ ರೋಗಗಳನ್ನು ತಡೆಗಟ್ಟುತ್ತವೆ.
‘ಈಗ ಮುಂಚಿನಂಗೆ ಅಣಬೆ ಸಿಗುತ್ತಿಲ್ಲ. ಮೊದಲೆಲ್ಲ ನಮಗೆ ಹೆಚ್ಚಾಗಿ ಪಟ್ಟಣಗಳಿಗೆ ಒಯ್ದು ಮಾರಿಕೊಂಡು ಬರುತ್ತಿದ್ದೆವು. ಈಗ ನಮಗೇ ಸಾಲ್ದು…’ ಎನ್ನುತ್ತಾರೆ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯ ಶಶಿ. ಮಳೆ ಕೊರತೆ, ಹವಾಮಾನ ವೈಪರೀತ್ಯ, ಬೆಳೆಗಳಿಗೆ ವಿಪರೀತ ರಾಸಾಯನಿಕಗಳ ಬಳಕೆ ಇತ್ಯಾದಿಗಳಿಂದ ನಾಟಿ ಅಣಬೆಗಳು ದುರ್ಲಾಭವಾಗುತ್ತಿವೆ. ಹೀಗಾಗಿ ಒಂದು ವೇಳೆ ಅಣಬೆ ಸಿಗದಿದ್ದರೂ ಒಳ್ಳೆಯ ಪರಿಸರ, ಶುದ್ಧಗಾಳಿ ಜೊತೆಗೆ ಕವಳೆ, ಬುಕ್ಕೆ, ಲೇಬಿ.. ಕಾಡುಹಣ್ಣು, ಹೂವುಗಳಿಗಿಂತೂ ಮೋಸವಿಲ್ಲ.
ಕತ್ತಲಿನಲ್ಲಿ ಅಡವಿ ಅಂಚಿನ ಹೊಲಗಳಿಗೆ ಹೋಗುವುದರಿಂದ ಕಾಡುಪ್ರಾಣಿಗಳು ಮುಖಾಮುಖಿ ಆಗುವ, ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಜಾಗೃತವಾಗಿರಬೇಕು. ಇದಕ್ಕಾಗಿ ಕಾಡು ಬಲ್ಲವರು ಇಲ್ಲವೇ ಅರಣ್ಯ ಇಲಾಖೆಯ ಸಿಬ್ಬಂದಿಯವರೊಂದಿಗೆ ತೆರಳಿ. ಇಲ್ಲವೇ ಕಾಡುಪ್ರಾಣಿಗಳ ಉಪಟಳ ಇಲ್ಲದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ಬೆಳಕು ಹರಿದ ಮೇಲೆ ಕಾಡಿಗೆ ಹೋದರೆ ಇನ್ನೂ ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.