ADVERTISEMENT

ಕವಿ ಕಣವಿ ಇನ್ನು ನೆನಪು | ಸೂರ್ಯನತ್ತ ಹೊರಳಿದ ಚೆಂಬೆಳಕು

ಡಾ.ಜಿ.ಎಂ.ಹೆಗಡೆ
Published 16 ಫೆಬ್ರುವರಿ 2022, 19:45 IST
Last Updated 16 ಫೆಬ್ರುವರಿ 2022, 19:45 IST
ಚೆನ್ನವೀರ ಕಣವಿ
ಚೆನ್ನವೀರ ಕಣವಿ   

ಏನಾದರೂ ಇರಲಿ ಹಾಡು ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು‌
ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ
ಮೂಲೆ ಮೂಲೆಗೆ ಹೋಗಿ ಹಾಯಬಹುದು...

ತೊಂಬತ್ತು ಮೂರು ವರ್ಷಗಳ ಕಾಲ ಬಾಳಿದ ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಕನ್ನಡದಲ್ಲಿ ಶಬ್ದಗಳ ದೀಪ ಮಾಲೆಯನ್ನು ಹೆಚ್ಚುತ್ತಾ ಬಂದವರು.ನೂರು ಮಳೆಗಾಲಗಳ ಕಾಳ ಕವಿತೆಯ ಹಾಡು ಹಾಡಬೇಕಾದ ಕವಿಯ ಎದೆಯ ದೀಪ ಇಂದು ಶಾಂತವಾಗಿದೆ. ‘ಭಾವಜೀವಿಯು ನಾನು,ನನ್ನೆದೆಯ ನಂಬಿರುವ ಕನಸುಗಳೇ ಕಲ್ಪವೃಕ್ಷ’ ಎಂದು ಕವಿಮೌನಕ್ಕೆ ಜಾರಿದ್ದಾರೆ.

ಕಣವಿ ‘ಚಿರಂತನ ದಾಹ’ದ ಕವಿ.ಆದ್ದರಿಂದಲೇ ‘ಜಗವ ತುಂಬಿದ ಬೆಳಕು ನಮಗೇಕೋ ಸಾಲದಿದೆ ಎನಿತು ಮಾನವನೆದೆಯ ಆಳ ಅಗಲ!ಕಾವ್ಯ ಮಾನವತೆಯ ಬೆಳಕಿನ ಪ್ರಭೆ ಹರಡಬೇಕು’ ಎಂದು ಅವರು ಹೇಳಿದ್ದರು.ಅವರ ಜೀವನವೇ ಕಾವ್ಯ.ಕಾವ್ಯವೇ ಜೀವನವಾಗಿತ್ತು. ಕಣವಿ ಮೊದಲ ಕವನ ಸಂಕಲನ ‘ಕಾವ್ಯಸಾಕ್ಷಿ’ಯಿಂದ ಇತ್ತೀಚಿನ ‘ಭೂಮಿ ಬದುಕು’ ಸಂಕಲನದವರೆಗೆ ಆರುನೂರು ಕವಿತೆಗಳನ್ನು ರಚಿಸಿದ ಕಣವಿ ಅವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು.

ADVERTISEMENT

‘ಹೂವು ಹೊರಳುವವು ಸೂರ್ಯನ ಕಡೆಗೆ.ನಮ್ಮ ದಾರಿ ಬರಿ ಚಂದ್ರನವರೆಗೆ’ ಪ್ರಸಿದ್ಧವಾದ ಕವಿತೆ.ಮನುಷ್ಯ ಚಂದ್ರನತ್ತ ಪಯಣ ಬೆಳೆಸಿದರೆ ನಿಸರ್ಗ ಸ್ವಯಂಪ್ರಭೆಯ ಸೂರ್ಯನಿಗೆ ಮುಖ ಮಾಡಿದೆ.ಇಂದು ಪ್ರಪಂಚದಲ್ಲಿ ಮನುಷ್ಯ ಅಹಂಕಾರದಿಂದ ನಿಸರ್ಗದ ವಿರುದ್ಧ ಸಾಗುತ್ತಿದ್ದಾನೆ.ಪ್ರಜ್ಞಾ ಪ್ರಕಾಶದಲ್ಲಿ ನಾವು ಮುನ್ನಡೆಯುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ. ‘ನನ್ನ ನಂಬಿಕೆಯೊಂದು ಆಕಾಶ ನಿಜ ಆದರೆ ತಲೆಬುಡವಿಲ್ಲ.ನಾನೆಷ್ಟು ಬೆಳೆದರೂ ನನಗೆ ನಿಲುಕುವುದಿಲ್ಲ’ ಎಂಬುದು ಕಣವಿ ಕಾವ್ಯ ಜಿಜ್ಞಾಸೆಯಾಗಿದೆ.

ವರಕವಿ ಬೇಂದ್ರೆ ಅವರು ಗುರುತಿಸಿದಂತೆ ಚೆನ್ನ–ವೀರ,ಶಿವ–ರುದ್ರ ಹೆಸರಿನಲ್ಲಿ ಅವಿನಾಭಾವ ಸಂಬಂಧವಿದೆ.ಅವರಿಬ್ಬರನ್ನೂ ‘ಸಮನ್ವಯ’ ಕವಿಗಳೆಂದೂ ಕೆಲವರು ಕರೆದಾಗ ಕಣವಿ ಹಾಗೂ ಶಿವರುದ್ರಪ್ಪ ಇಬ್ಬರೂ ಅದನ್ನು ನಿರಾಕರಿಸಿದರು.ಅವರಿಬ್ಬರದೂ ಅಪೂರ್ವ ‘ಸ್ನೇಹ ಕಾರ್ತೀಕ’.ಕಣವಿ ಅವರಿಗೆ ‘ನಿಮ್ಮ ಹಾಗೆ ನಿಮ್ಮ ಕವಿತೆ’ ಎಂದು ಶಿವರುದ್ರಪ್ಪನವರು ಕವಿತೆಯಲ್ಲಿ ಹೇಳಿದ್ದರೂ ಅವರಿಬ್ಬರ ಕಾವ್ಯದ ದಾರಿ ಬೇರೆಯಾದದ್ದು.ಜನಪರವಾದ ನಿಲುವುಗಳಿಗೆ ಸ್ಪಂದಿಸುತ್ತ ಉದಾರವಾದ ಮಾನವತಾವಾದದಲ್ಲಿ ಕಣವಿ ಅವರು ತಮ್ಮ ಕಾವ್ಯವನ್ನು ನೆಲೆಗೊಳಿಸುತ್ತಾರೆ. ದೇಶದ ಸಮಕಾಲೀನ ಸ್ಥಿತಿಯ ಬಗೆಗೆ ದಟ್ಟವಾದ ವಿಷಾದ ಶಿವರುದ್ರಪ್ಪನವರ ಕವಿತೆ ಪ್ರಕಟಿಸುತ್ತದೆ.

ಕಣವಿ ಅವರು ಕನ್ನಡ ಸಾಂಸ್ಕೃತಿಕ ಪ್ರಪಂಚದ ನಾಯಕರಾಗಿದ್ದರು.ಮೃದು ಮಾತಿನ ಸಜ್ಜನಿಕೆಯ ಕಣವಿ ಅವರು ಕರ್ನಾಟಕದ ತುಂಬಾ ಸಂಚರಿಸಿ ಸಾಹಿತ್ಯ ಪ್ರಸಾರ ಕಾರ್ಯ ನಡೆಸಿದರು. ಯುವ ಮನಸ್ಸುಗಳಿಗೆ ಕಾವ್ಯಪ್ರೀತಿಯನ್ನು ಕಲಿಸಿದರು. ಯಾರೊಡನೆಯೂ ಜಗಳವಾಡದ, ಯಾವುದೇ ವಾಗ್ವಾದದಲ್ಲಿ ಸಿಕ್ಕಿಕೊಳ್ಳದ, ತಮ್ಮ ಸಮತೋಲನವನ್ನು ಕಳೆದುಕೊಳ್ಳದ ವ್ಯಕ್ತಿತ್ವ ಅವರದ್ದಾಗಿತ್ತು.ಹಾಗೆಂದು ಅವರು ಅನ್ಯಾಯದ ವಿರುದ್ಧ ಎಂದೂ ಮೌನಿಯಾಗಿರಲಿಲ್ಲ.ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ ಚಳವಳಿ, ಕನ್ನಡಪರ ಹೋರಾಟಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು.

ಗೋಕಾಕ ಚಳವಳಿಯ ಹೋರಾಟದಲ್ಲಿ ಅವರು ಕನ್ನಡಕ್ಕಾಗಿ ಜೈಲು ವಾಸವನ್ನೂ ಅನುಭವಿಸಿದ್ದರು.ಕನ್ನಡ ಶಕ್ತಿಕೇಂದ್ರದ ಅಧ್ಯಕ್ಷರಾಗಿ, ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಮಾರ್ಗದರ್ಶಕರಾಗಿ ಭಾಷಾ ಚಳವಳಿಯಲ್ಲಿ ದುಡಿದರು.ಅವರ ‘ಹೆಸರಾಯಿತು ಕರ್ನಾಟಕ,ಉಸಿರಾಗಲಿ ಕನ್ನಡ/ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ’ ಗೀತೆ ಗೋಕಾಕ ಚಳವಳಿಯಲ್ಲಿ ರಾಜ್ಯದಾದ್ಯಂತ ಪ್ರಚಾರ ಪಡೆಯಿತು.ಕಣವಿ ಅವರು ಬರೆದ ‘ವಿಶ್ವಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಭೇರಿ’ ಗೀತೆ ನನ್ನಲ್ಲಿ ರೋಮಾಂಚನವನ್ನುಂಟು ಮಾಡಿತು ಎಂದು ಕುವೆಂಪು ಅವರ ಉದ್ಗರಿಸಿದ್ದರು.

ಚೆನ್ನವೀರ ಕಣವಿ ಅವರು ‘ಸುನೀತಗಳ ಸಾಮ್ರಾಟ್’ ಎಂದೇ ಪ್ರಸಿದ್ಧರು.ಹೊಸಗನ್ನಡ ಕಾವ್ಯದಲ್ಲಿ ಅವರಷ್ಟು ಸುನೀತಗಳನ್ನು ಬರೆದ ಕವಿ ಇನ್ನೊಬ್ಬರಿಲ್ಲ.ಕಳೆದ ಶತಮಾನದ ನವೋದಯ ಪ್ರಗತಿಶೀಲ,ನವ್ಯ,ನವ್ಯೋತ್ತರ ಚಳವಳಿಗಳಲ್ಲಿ ನಿರಂತರವಾಗಿ ಸುನೀತಗಳನ್ನು ಬರೆಯುತ್ತ ಬಂದ ಚೆನ್ನವೀರ ಕಣವಿ ಅವರು ತಮ್ಮ ಸುನೀತಗಳ ಮೂಲಕ ಒಂದು ಕಲಾಶಾಲೆಯನ್ನೇ ನಿರ್ಮಿಸಿದ್ದಾರೆ.ಬಳ್ಳಾರಿಯ ಲೋಹಿಯಾ ಪ್ರಕಾಶನ ಕಣವಿ ಅವರ ‘ಸುನೀತ ಸಂಪದ’(2002)ಮೊದಲ ಆವೃತ್ತಿಯನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, 2014ರಲ್ಲಿ ದ್ವಿತೀಯ ಆವೃತ್ತಿಯನ್ನೂ ಪ್ರಕಟಿಸಿವೆ.

‘ವ್ಯಕ್ತಿ–ವ್ಯಕ್ತಿತ್ವ’ ಭಾಗದಲ್ಲಿ ಬಂದ ನೂರಕ್ಕೂ ಹೆಚ್ಚು ಸುನೀತಗಳು ಕನ್ನಡ ಸಾಹಿತ್ಯ ಪ್ರಪಂಚದ ಮಹಾ ವ್ಯಕ್ತಿಗಳ ಜೀವನ ಸಾಧನೆಯು ಕಾವ್ಯಾಭಿವ್ಯಕ್ತಿಯಾಗಿ ಹೊಮ್ಮಿರುವುದು ಬಹಳ ಮಹತ್ವದ್ದಾಗಿದೆ. ‘ನಿಸರ್ಗ ಸ್ಪಂದನ’ದಲ್ಲಿ ಸುಂದರ ಪರಿಸರ ಋತುಮಾನದ ಸೌಂದರ್ಯವನ್ನು ವರ್ಣಿಸುವ ಕವಿತೆಗಳಿವೆ.ಕನ್ನಡದ ಶ್ರೇಷ್ಠ ‘ಕವಿ ಕೃತಿ’ಗಳನ್ನು ಓದಿದಾಗ ಉಂಟಾಗುವ ಆನಂದವನ್ನು ಅವರ ‘ಕೃತಿ–ಆಕೃತಿ’ಯ ಸುನೀತಗಳು ಹೇಳುತ್ತವೆ. ‘ನಿವೇದನೆ’ ‘ಜಿಜ್ಞಾಸೆ’ಯ ಸುನೀತಗಳಲ್ಲಿಯೂ ಕಣವಿಯವರ ಸುಂದರ ಮನಸ್ಸಿನ ಅಭಿವ್ಯಕ್ತಿಯಿದೆ.

ನಿಸರ್ಗ ಪ್ರೀತಿಯನ್ನು ಕವಿ ಜೀವನದ ಅನಂತ ಪಯಣದುದ್ದಕ್ಕೂ ಕಣವಿ ಅವರು ಸ್ಥಾಯೀಭಾವವಾಗಿ ಪ್ರಕಟಿಸುತ್ತಾ ಬಂದಿದ್ದಾರೆ.ಕನ್ನಡದಲ್ಲಿ ಕುವೆಂಪು ಸೂರ್ಯೋದಯದ ಕವಿ,ಬೇಂದ್ರೆ ಶ್ರಾವಣದ ಕವಿ,ಕಣವಿ ಮಳೆಗಾಲದ ಕವಿ. ‘ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ಸೋ ಎಂದು ಶೃತಿ ಹಿಡಿದು ಸುರಿಯುತ್ತಿತ್ತು’, ‘ಬಾನ ಸಾಣಿಗೆ ಹಿಟ್ಟು ಸಣಿಸಿದಂತೆ ಜಿನುಗಿದೆ ಸೋನೆಯು’, ‘ಧಾರವಾಡದಲ್ಲಿ ಮಳೆಗಾಲ’ ಕವಿತೆಯ ಮೋಹಕ ರೂಪಕಗಳು ಮನಸೆಳೆಯುತ್ತವೆ.

ಕಣವಿ ಅವರಿಗೆ ಹೂವುಗಳೆಂದರೆ ಪಂಚಪ್ರಾಣ.ಮನೆಯ ಹೂದೋಟದಲ್ಲಿ ಅರಳಿದ ಹೂಗಳ ಮಧ್ಯೆ ಹರ್ಷಪಡುತ್ತಿದ್ದರು.ಕಣವಿ ಅವರ ಕವಿತೆಗಳಲ್ಲಿ ವಾತ್ಸಲಭಾವವಿದೆ.ಅವರು ತಮ್ಮ ಮಗಳು ‘ರಂಜನಾ’ಳ ಕುರಿತು ಬರೆದ ಕವಿತೆಯಲ್ಲಿ ಎಲ್ಲರ ಮನೆಯ ಮಕ್ಕಳಲ್ಲೂ ಜೀವನೋತ್ಸಹವನ್ನು ಕಾಣುತ್ತಾರೆ.ಬದಲಾಗುತ್ತಿರುವ ಸಾಮಾಜಿಕ ಪರಿಸರಕ್ಕೆ ವ್ಯಗ್ರರಾಗದೆ ಹೊಸ ಪೀಳಿಗೆಯನ್ನು ಸ್ವಾಗತಿಸುವ ಜೀವನದೃಷ್ಟಿ ‘ಈಗಿನ ಮಕ್ಕಳು’ ಕವಿತೆಯಲ್ಲಿದೆ.

ಕಾಲದ ಅನನ್ಯಶೋಧ ಕಣವಿ ಅವರ ಕಾವ್ಯದ ಮುಖ್ಯ ವಸ್ತುವಾಗಿದೆ.ನಗರದ ಯಾಂತ್ರಿಕ ಬದುಕಿನಲ್ಲಿ ಮನುಷ್ಯ ತನ್ನತನವನ್ನು ಕಳೆದುಕೊಳ್ಳುತ್ತಿದ್ದಾನೆ.ಕಣವಿ ಅವರ ‘ಕಾಲ ನಿಲ್ಲುವುದಿಲ್ಲ’, ‘ಮಧ್ಯಾಹ್ನದ ಮಜಲು’, ‘ಕಾಲಾತೀತ’ ಮೊದಲಾದ ಕವಿತೆಗಳು ಕಾಲದಂಥ ಅಮೂರ್ತ ವಸ್ತುವನ್ನು ಚಿಂತನೆಯ ನಿಕಷಕ್ಕೆ ಒಡ್ಡಿರುವುದು ಗಮನಾರ್ಹವಾಗಿದೆ.

ಚೆನ್ನವೀರ ಕಣವಿ ಅವರು ಸಮಕಾಲೀನ ವಾಸ್ತವಕ್ಕೆ,ಭಾರತದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದಾರೆ.ಶೋಷಣೆಯ ವಿರುದ್ಧ ಪ್ರತಿಭಟನೆ,ಸಾಮಾಜಿಕ ಅಸಮಾನತೆಯ ಬಗ್ಗೆ ತೀವ್ರವಾದ ಕಾಳಜಿ,ಭ್ರಷ್ಟಾಚಾರ,ಮೋಸ ವಂಚನೆಯ ವಿರುದ್ಧ ವಿಂಡಬನೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಬಂದಿದ್ದಾರೆ.ಅವರ ಕವಿತೆಗಳಲ್ಲಿ ಸ್ತ್ರೀಪರ ಕಾಳಜಿ,ಸ್ತ್ರೀ ಸಂವೇದನೆಯ ವಿಚಾರಗಳಿವೆ.ಕಣವಿಯವರ ‘ನೀಲಾಂಬಿಕೆ’ ಸ್ತ್ರೀಕೇಂದ್ರಿತ ಕವಿತೆಯಾಗಿ ಪ್ರಸಿದ್ಧವಾಗಿದೆ.ಜೀತಪದ್ಧತಿಯ ನರಕಯಾತನೆಯನ್ನು ‘ಹಂಗರಹಳ್ಳಿ’, ‘ಅಂಬೇಡಕರ’ ಕವಿತೆಯಲ್ಲಿ ದಲಿತರ ನೋವಿನ ಮಿಡಿತವನ್ನೂ ಕಣವಿ ಕವಿತೆ ಪ್ರತಿಮಿಸಿದೆ. ‘ದುಃಖದ ಕಡಲು’ ಸುನಾಮಿ ದುರಂತವನ್ನು ಕಾವ್ಯವಾಗಿಸಿದೆ.

ಚೆನ್ನವೀರ ಕಣವಿಯವರು ಸಹೃದಯ ವಿಮರ್ಶಕರೂ ಆಗಿದ್ದರು.ಅವರು ಸಾಹಿತ್ಯ ಚಿಂತನ ‘ಕಾವ್ಯಾನುಸಂಧಾನ’, ‘ಸಮಾಹಿತ’, ‘ಸಮತೋಲನ’, ‘ಮಧುರಚೆನ್ನ’, ‘ವಚನಾಂತರಂಗ’, ‘ಸಾಹಿತ್ಯ ಸಮಾಹಿತ’, ‘ಸ್ಮೃತಿಸೌರಭ’, ‘ಅವಿನಾಭಾವ’ಗಳಲ್ಲಿ ಮಧ್ಯಕಾಲೀನ,ಆಧುನಿಕ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಾವಿರಾರು ಪುಟಗಳ ಗದ್ಯ ಸಾಹಿತ್ಯ ವಿಮರ್ಶೆ ಕನ್ನಡಕ್ಕೆ ಕೊಟ್ಟಿದ್ದಾರೆ. ‘ಶುಭನುಡಿಯೇ ಹಕ್ಕಿ’ಯಲ್ಲಿ ಹೊಸಕವಿಗಳ ಕವಿತಾ ಸಂಕಲನಗಳಿಗೆ ಮುನ್ನುಡಿ ಬರೆದು ಅವರ ಪ್ರತಿಭೆ ಅರಳುವಂತೆ ಮಾಡಿದ್ದಾರೆ.

ಕಣವಿ ಅವರ ಬಾಳಸಂಗಾತಿ ಶಾಂತಾದೇವಿ ಕಣವಿ ಅವರು ಕನ್ನಡದ ಖ್ಯಾತ ಕಥೆಗಾರ್ತಿಯಾಗಿದ್ದರು. ಎರಡು ವರ್ಷದ ಹಿಂದೆ ಅವರು ಅಗಲಿದಾಗ ಕವಿ ಕಣವಿ ಅವರು ಅಂತರ್ಮುಖಿಯಾದರು.ಇತ್ತೀಚೆಗೆ ಕಣವಿಯವರ ಹೊಸ ಪುಸ್ತಕ ‘ಅಭಿನಂದನ’ ವಿಮರ್ಶಾಲೇಖನಗಳ ಸಂಗ್ರಹ, ಶಾಂತಾದೇವಿ ಕಣವಿ ಅವರ ಸ್ಮತಿ ಸಂಚಯ ’ಸಂಜೆ ಮಲ್ಲಿಗೆ’ ಬಿಡುಗಡೆಯ ಸಮಾರಂಭ ಜರುಗಿತು.ಅದೇ ಕವಿ ಕಣವಿ ಅವರು ಭಾಗವಹಿಸಿದ ಕೊನೆಯ ಸಾರ್ವಜನಿಕ ಸಮಾರಂಭವಾಯಿತು.

ಕಣವಿ ಪರಿವಾರ,ಚೆಂಬೆಳಕಿನ ನಿವಾಸ ಈಗ ಶೋಕ ಸಾಗರದಲ್ಲಿ ಮುಳುಗಿದೆ.

ಲೇಖಕ: ಸಾಹಿತಿ, ಕಣವಿ ಅವರ ನಿಕಟವರ್ತಿ

****

ಸುಮ್ಮನಾಯಿತಲ್ಲ ಸುನೀತದ ಧ್ವನಿ

ಕವಿ ಬೇಂದ್ರೆಯವರ ನಂತರ ಧಾರವಾಡದ ಸಾಹಿತ್ಯಕ್ಷೇತ್ರಕ್ಕೆ ಚೆನ್ನವೀರ ಕಣವಿ ಬಹುದೊಡ್ಡ ಕೊಡುಗೆ. ಅವರೊಂದಿಗಿನ ಒಡನಾಟಗಳು ಮನಸ್ಸಿಗೆ ಖುಷಿನೀಡುವಂಥವು. ಸಾಕಷ್ಟು ಗೀತೆ ಬರೆದರು, ನವ್ಯ ಧ್ವನಿ ಉಳಿಸಿಕೊಂಡು ನವೋದಯದ ಜೊತೆಗೆ ಹೆಜ್ಜೆ ಹಾಕಿದರು. ಮಾಸ್ತಿ ಕನ್ನಡದ ಮೊದಲ ’ಸುನೀತ‘ ಬರೆದರು. ಬೇಂದ್ರೆಯವರು ವ್ಯಕ್ತಿ ಚಿತ್ರಣ ಬರೆದರು. ವಿಶೇಷವಾಗಿ ಕನ್ನಡ ಭಾಷೆ, ಛಂದಸ್ಸು, ಲಯ ಸೇರಿಸಿ ಕಣವಿ ’ಸುನೀತ‘ ಮುಂದುವರಿಸಿದರು. ಅದರಲ್ಲಿ ಯಶಸ್ಸು ಕಂಡರು.

ತಮ್ಮ ಮೃದು ಮಾತಿನಿಂದ ಎಲ್ಲರನ್ನೂ ಹತ್ತಿರಕ್ಕೆ ಕರೆದುಕೊಂಡರು. ಯಾರೇ ಪದ್ಯ, ಲೇಖನ ಕೇಳಿದರೆ, ಬೆನ್ನುಡಿ, ಹಿನ್ನುಡಿ ಕೇಳಿದರೂ ಇಲ್ಲವೆನ್ನದೇ ಬರೆದುಕೊಡುವ ಗುಣ ಅವರಲ್ಲಿತ್ತು. ಅಂತಹ ಸರಳ ಸಜ್ಜನಿಕೆ ಅವರದ್ದು. ಬೇಂದ್ರೆ ಅವರದ್ದು ಆವೇಶದ ಕವನ ವಾಚನವಾದರೆ, ಕಣವಿ ಅವರದ್ದು ಧ್ವನಿ ಮತ್ತು ಅರ್ಥಕ್ಕೆ ಸಂಬಂಧಪಟ್ಟು ಕವಿತೆ ವಾಚನ. ಅದನ್ನು ನಾವು ಅವರಿಂದ ಕಲಿತೆವು. ಎಂದೂ ಯಾರನ್ನೂ ಎದುರು ಹಾಕಿಕೊಳ್ಳದ ಗುಣ ಅವರಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲ ಗೌರವಾದರಗಳನ್ನೂ ಪಡೆದ, ತನ್ನ ಹೆಸರನ್ನು ಉಳಿಸಿಕೊಂಡಿದ್ದ ಕವಿ, ಸಾಹಿತಿಯಿದ್ದರೆ ಅದು ಕಣವಿಯವರು ಅನ್ನಬಹುದು.

–ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಕವಿ, ನಾಟಕಕಾರ

****

ಕಣವಿಯಂಥವರು ಶತಮಾನಕ್ಕೊಬ್ಬರೆ ...

ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ಆರಂಭಿಸಿದಾಗ ಚೆನ್ನವೀರ ಕಣವಿ ಅವರು ಅದರಲ್ಲಿ ಬಹಳ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ಸಾಹಿತ್ಯ ಸಂಭ್ರಮದ ಸಲಹಾ ಸಮಿತಿಯ ಗೌರವಾಧ್ಯಕ್ಷರಾಗಿದ್ದರು. ತಮ್ಮ ಸಲಹೆ, ಸೂಚನೆ ಕೊಟ್ಟು ಮಾರ್ಗದರ್ಶನ ಮಾಡುತ್ತಿದ್ದರು. ಹೀಗಾಗಿ ನಿರಂತರವಾಗಿ ಏಳು ವರ್ಷ ಅಷ್ಟೊಂದು ಸಮೃದ್ಧವಾಗಿ ನಡೆದು ಸಾಹಿತ್ಯಾಸಕ್ತರು ಅದರಲ್ಲಿ ಪಾಲ್ಗೊಳ್ಳುವಂತಾಯಿತು.

ಅವರಿಗೆ ಪದ್ಯ ಮಾತ್ರವಲ್ಲ, ಗದ್ಯ ಪುಸ್ತಕವೊಂದನ್ನು ಬರೆದುಕೊಡುವಂತೆ ಪದೇ ಪದೇ ಬೆನ್ನಟ್ಟಿದಾಗ ’ಸ್ಮೃತಿ ಸೌರಭ‘ ವ್ಯಕ್ತಿ ಚಿತ್ರಣದ ಗದ್ಯ ಸಂಕಲ ಗ್ರಂಥಮಾಲೆಗಾಗಿ ಬರೆದು ಕೊಟ್ಟರು. ನಾವು ಅಷ್ಟೇ ಖುಷಿಯಿಂದ ಪ್ರಕಟಿಸಿದೆವು. ಕಣವಿಯಂಥವರು ಶತಮಾನಕ್ಕೊಬ್ಬರೇ ಹುಟ್ಟುವುದು. ಅವರಂಥ ವ್ಯಕ್ತಿ ನಮ್ಮ ನೆಲದಲ್ಲಿ ಹುಟ್ಟಿದ್ದು ಕನ್ನಡದ ಸುದೈವ.

–ರಮಾಕಾಂತ ಜೋಶಿ,ಮನೋಹರ ಗ್ರಂಥಮಾಲೆ, ಧಾರವಾಡ

****

ಶಿಕ್ಷಣ ಮಾಧ್ಯಮ; ಕಟು ನುಡಿ

ಕನ್ನಡ ಶಾಲೆಗಳ ವಿಲೀನ,ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ ಕುರಿತ ಸರ್ಕಾರದ ನಿಲುವನ್ನು ಕಣವಿ ಅವರು ಅನೇಕ ಸಲ ಟೀಕಿಸಿದ್ದರು.ಕನಿಷ್ಠ 10ನೇ ತರಗತಿವರೆಗಾದರೂ ಮಕ್ಕಳ ಕಲಿಕೆ ಮಾತೃಭಾಷಾ ಮಾಧ್ಯಮದಲ್ಲಿರಬೇಕು ಎನ್ನುವುದು ಅವರ ಆಶಯ. ಈ ಕುರಿತು ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಚಿಸಿ ಸಭೆ ನಡೆಸಿದ್ದ ಅವರು, ‘ಕನ್ನಡ ಶಾಲೆಗಳನ್ನು ಮುಚ್ಚುವ ಮೊದಲು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಖಾರವಾಗಿ ನುಡಿದಿದ್ದರು.

‘ಭಾಷಾ ಮಾಧ್ಯಮ ವಿಚಾರವಾಗಿ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದೆ. ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತಳಹದಿ ಮೇಲೆ ಕನಿಷ್ಠ10ನೇ ತರಗತಿವರೆಗಾದರೂ ಮಕ್ಕಳ ಕಲಿಕೆ ಮಾತೃಭಾಷಾ ಮಾಧ್ಯಮದಲ್ಲಿರಬೇಕು‘ ಎಂದು ಆಗ್ರಹಿಸಿದ್ದರು.

****

ಜನಶಿಕ್ಷಣ ಕಾರ್ಯ...

ಚೆನ್ನವೀರ ಕಣವಿ ಅವರು ಕನ್ನಡ ನಾಡಿನಲ್ಲಿ ಕಾವ್ಯ ಸಂಸ್ಕೃತಿ ನಿರ್ಮಾಣ ಮಾಡಿದಂತೆ, ಪುಸ್ತಕ ಸಂಸ್ಕೃತಿಯ ಪ್ರಸಾರವನ್ನೂ ಮಾಡಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಸಾರಂಗದ ಮೊದಲ ನಿರ್ದೇಶಕರಾಗಿ 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರೋಪನ್ಯಾಸ ನಡೆಸಿ ಜನಶಿಕ್ಷಣ ಕಾರ್ಯ ಮಾಡಿದರು. ಕನ್ನಡ ಅಧ್ಯಾಪಕರ ಪರಿಷತ್ತಿನ ಸಮಾವೇಶ ಮತ್ತು ಹೋರಾಟಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡುತ್ತಿದ್ದರು.

ಸೌಮ್ಯಕವಿಯ ಕಠೋರ ಟೀಕೆ

ರಾಜಕೀಯ ಭ್ರಷ್ಟಾಚಾರದ ಕುರಿತು ಕಣವಿ ಅವರು ತುಸು ಖಾರವಾಗಿಯೇ ಕವಿತೆಗಳನ್ನು ರಚಿಸಿದ್ದಾರೆ. ತಮ್ಮ ಕಠೋರ ವ್ಯಂಗ್ಯದ ನುಡಿಯಲ್ಲಿ ರಾಜಕೀಯವನ್ನು ಟೀಕಿಸಿದ್ದಾರೆ. ‘ನಾಡಿನ ತುಂಬ ನೂರು ಜಗದ್ಗುರು/ ಇರುವುದ ಜಗವೊಂದೇ/ ಕಾಡಿನ ತುಂಬ ಬಣ್ಣದ ಹೂಗಳು/ ವಾಸನೆ ಕೆಲವೊಂದೇ; ಬತ್ತಿಹೋದ ಕೆರೆಯಲ್ಲಿ ಬಂಗಲೆಗಳು ಎದ್ದಿವೆ/ ಜಲದೇವತೆಗೆ ಎಷ್ಟೊಂದು ಗೋರಿಗಳು…’ ಎಂಬ ಸಾಲುಗಳು ಇದಕ್ಕೆ ಪುರಾವೆ ಒದಗಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.