ADVERTISEMENT

KGF | ಕಥನಗಳ ಗಣಿ ಕೆಜಿಎಫ್‌..!

ಎಂ.ವೆಂಕಟಸ್ವಾಮಿ
Published 1 ಸೆಪ್ಟೆಂಬರ್ 2024, 1:50 IST
Last Updated 1 ಸೆಪ್ಟೆಂಬರ್ 2024, 1:50 IST
<div class="paragraphs"><p>1970ರ ದಶಕದಲ್ಲಿ ಕೆಜಿಎಫ್‌ನಲ್ಲಿ ಕಾರ್ಮಿಕರ ಕಾಲೊನಿ &nbsp;</p></div>

1970ರ ದಶಕದಲ್ಲಿ ಕೆಜಿಎಫ್‌ನಲ್ಲಿ ಕಾರ್ಮಿಕರ ಕಾಲೊನಿ  

   

–ಪ್ರಜಾವಾಣಿ ಸಂಗ್ರಹ ಚಿತ್ರ

1880ರಲ್ಲಿ ಕೆಜಿಎಫ್ ಪ್ರದೇಶದಲ್ಲಿ ಆಧುನಿಕ ಚಿನ್ನದ ಗಣಿಗಳು ಪ್ರಾರಂಭವಾದವು. ಆಗ ಭಾರತ ದೇಶ ಇನ್ನೂ ಅಂಧಕಾರದಲ್ಲಿಯೇ ಮುಳುಗಿಹೋಗಿತ್ತು. ಆದರೆ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದು ಯಾವುದೋ ಕಾರಣಕ್ಕೆ ಸ್ಥಗಿತಗೊಂಡಿತ್ತು. ಇಲ್ಲಿನ ಚಿನ್ನ ಸಿಂಧೂ ನದಿಯ ನಾಗರಿಕತೆಯ ತೊಟ್ಟಿಲುಗಳವರೆಗೂ ಸಾಗಿಹೋಗಿರುವುದು ದೃಢಪಟ್ಟಿದೆ. ಆಧುನಿಕ ಕಾಲದಲ್ಲಿ ಚಿನ್ನದ ಗಣಿಗಳು ಪ್ರಾರಂಭವಾದಾಗ ಆಫ್ರಿಕಾದಲ್ಲಿ ಮಾತ್ರ ಚಿನ್ನದ ಗಣಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಇಷ್ಟಕ್ಕೂ ಕೆಜಿಎಫ್ ಗಣಿಗಳ ಬಗ್ಗೆ ಯಾಕಿಷ್ಟು ಕುತೂಹಲ? ಭಾರತ ಸ್ವಾತಂತ್ರ್ಯ ಪಡೆದುಕೊಂಡ ಕಾಲಕ್ಕೆ ಶತಮಾನಗಳ ಕಾಲ ವಿದೇಶಿಯರಿಂದ ಹಿಂಡಿ ಹಿಪ್ಪೆಯಾಗಿತ್ತು. ಮೊದಲ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರೂ ಅವರು ಪಂಚ ವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಿದಾಗ ಹಣಕ್ಕಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಾಗಿಲನ್ನು ತಟ್ಟಬೇಕಾಯಿತು. ಆಗ ಐಎಂಎಫ್ ಆಡಳಿತ, ‘ಸಾಲ ಕೊಡುತ್ತೇವೆ, ಆದರೆ ಅದನ್ನು ಹೇಗೆ ಹಿಂದಿರುಗುಸುತ್ತೀರಿ? ನಿಮ್ಮಲ್ಲಿ ಯಾವ ಸಂಪನ್ಮೂಲಗಳಿವೆ?’ ಎಂದು ಕೇಳಿತು. ಆಗ ನೆಹರೂ, ‘ನಮ್ಮ ಬಳಿ ಕೋಲಾರ ಚಿನ್ನದ ಗಣಿಗಳಿವೆ’ ಎಂದಾಗ, ಭಾರತಕ್ಕೆ ತಕ್ಷಣವೇ ಸಾಲ ದೊರಕಿ ಮೊದಲ ಪಂಚ ವಾರ್ಷಿಕ ಯೋಜನೆ ಚಾಲನೆಗೊಂಡಿತು.

ADVERTISEMENT

ಮೊದಲಿಗೆ ಚಿನ್ನದ ಗಣಿಗಳನ್ನು ಬ್ರಿಟನ್ನಿನ ಗಣಿ ಉದ್ಯಮಿ, ಗಣಿತಜ್ಞ ಜಾನ್ ಟೇಲರ್ ಕೆಜಿಎಫ್‌ನಲ್ಲಿ ಶುರು ಮಾಡಿದಾಗ ಸ್ಥಳೀಯ ತೆಲುಗು-ಕನ್ನಡಿಗರು ಗಣಿಗಳಲ್ಲಿ ಕೆಲಸ ಮಾಡಲು ನಿರಾಕರಿಸಿದರು. ಆಗ ಬ್ರಿಟಿಷರ ಏಜೆಂಟ್‌ ಕಂಗಾನಿಸ್, ಅಂದಿನ ತಮಿಳುನಾಡಿನ ಉತ್ತರ ಮತ್ತು ದಕ್ಷಿಣ ಆರ್ಕಾಟ್ ಜಿಲ್ಲೆಗಳ ಬಡವರು, ಜೀತದಾಳುಗಳು ಮತ್ತು ಜೈಲುಗಳಿಂದ ಬಿಡುಗಡೆಯಾದವರಿಗೆ ಹಣ ಕೊಟ್ಟು ಕರೆದುಕೊಂಡು ಬಂದರು. ಅವರು ಗಣಿಗಳ ಸುತ್ತಲೂ ಗುಡಾರಗಳನ್ನು ಹಾಕಿಕೊಂಡು ಕೆಲಸದಲ್ಲಿ ತೊಡಗಿಕೊಂಡರು. ವಿದ್ಯುತ್ ಇಲ್ಲದ ಕಾಲದಲ್ಲಿ ಹೊಂಗೆಎಣ್ಣೆ ದೀಪ, ಹೊಗೆಸೊಪ್ಪು, ಬೀಡಿ ಮತ್ತು ರಾಗಿಹಿಟ್ಟನ್ನು ತೆಗೆದುಕೊಂಡು ಗಣಿಗಳ ಒಳಕ್ಕೆ ಹೋದವರು ಎರಡು–ಮೂರು ದಿನಗಳು ಅಲ್ಲೇ ಉಳಿದುಕೊಂಡು ಕೆಲಸ ಮಾಡಿ ಬರುತ್ತಿದ್ದರು. ಬರಿ ಮೈಯಲ್ಲಿ ಕೆಲಸ ಮಾಡುತ್ತಿದ್ದ ಇವರು ಹಗ್ಗಗಳ ಮೂಲಕವೇ ಇಳಿದು ಹೋಗಬೇಕಾಗಿತ್ತು ಮತ್ತು ಮೇಲಕ್ಕೆ ಬರಬೇಕಾಗಿತ್ತು. ಒಳಗೆ ಹೋದ ಎಷ್ಟೋ ಜನರು ಹಿಂದಕ್ಕೆ ಬರುತ್ತಿರಲಿಲ್ಲ. ಇವರೆಲ್ಲ ತಾತ್ಕಾಲಿಕ ಕೆಲಸಗಾರರಾಗಿದ್ದರು. ‘ಆಳಕ್ಕೆ ಇಳಿದರೆ ಹೆಣ, ಮೇಲೆ ಬಂದರೆ ಹಣ’ ಎಂಬ ಗಾದೆ ಇವರಿಗಾಗಿಯೇ ಹುಟ್ಟಿಕೊಂಡಿತ್ತು.

1890-1900 ರಲ್ಲಿ ಬ್ರಿಟಿಷರು ಸಣ್ಣ ಬೋಲ್ಟ್‌ನಿಂದ ಹಿಡಿದು ದೈತ್ಯಾಕಾರದ ಯಂತ್ರಗಳವರೆಗೆ ಬ್ರಿಟನ್‌ನಲ್ಲಿ ತಯಾರಿಸಿ ಇಲ್ಲಿಗೆ ತಂದು ಗಣಿಗಳ ಒಳಗೆ ಮತ್ತು ಮೇಲೆ ಜೋಡಿಸಿದರು. ಮುಂದೆ ಜಗತ್ತಿನ ಆಧುನಿಕ ತಂತ್ರಜ್ಞಾನವನ್ನು ಕೆಜಿಎಫ್ ಗಣಿಗಳು ಅಭಿವೃದ್ಧಿಪಡಿಸಿಕೊಳ್ಳುತ್ತಾ ಸಾಗಿದವು. ಇದೇ ಕಾಲಕ್ಕೆ ಬ್ರಿಟಿಷರು ಆಫ್ರಿಕಾದ ವಿಟ್‌ವಾಟರ್ಸ್‌ರ್‍ಯಾಂಡ್‌ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಚಿನ್ನದ ಗಣಿಗಾರಿಕೆಯನ್ನು ನಡೆಸುತ್ತಿದ್ದರು. ಅಲ್ಲಿನ ನೀಗ್ರೊಗಳಿಗಿಂತ ಹೆಚ್ಚು ಚಾಕಚಕ್ಯತೆ, ನಿಪುಣತೆ ಮತ್ತು ತಂತ್ರಗಾರಿಕೆಯನ್ನು ಕೆಜಿಎಫ್ ಗಣಿಗಳ ತಮಿಳು ಕಾರ್ಮಿಕರು ಅಳವಡಿಕೊಂಡಿದ್ದನ್ನು ಗಮನಿಸಿದ ಬ್ರಿಟಿಷರು, ಕೆಜಿಎಫ್ ಕಾರ್ಮಿಕರನ್ನು ಪ್ರಶಂಸಿದರು. 1910ರಲ್ಲಿ ಕೆಜಿಎಫ್ ಗಣಿಗಳನ್ನು ‘ಮದರ್ ಆಫ್ ಮೈನ್ಸ್’ ಎಂದು ಕರೆಯಲಾಯಿತು. ಅಂದರೆ ಇಲ್ಲಿನ ತಂತ್ರಜ್ಞಾನ, ತಂತ್ರಜ್ಞತೆಯು ಆಫ್ರಿಕಾ, ಆಸ್ಟ್ರೇಲಿಯಾ, ಬ್ರಿಟನ್, ಇನ್ನಿತರ ದೇಶಗಳಿಗೆ ತಲುಪಿದ್ದಲ್ಲದೇ, ಇಲ್ಲಿನ ಕಾರ್ಮಿಕರನ್ನು ಜಗತ್ತಿನ ಗಣಿಗಳು ಬರಮಾಡಿಕೊಂಡವು. ಆಫ್ರಿಕಾ ಚಿನ್ನದ ಗಣಿ ಕಾಲೊನಿಗಳಲ್ಲಿ ಕೆಜಿಎಫ್ ಕಾರ್ಮಿಕರ ಕಾಲೊನಿಗಳು ಇಂದಿಗೂ ಇವೆ. ನಮ್ಮ ದೇಶದಲ್ಲಿ ನಡೆಯುತ್ತಿರುವ ಇದ್ದಿಲು, ಕಬ್ಬಿಣ, ಸೀಸ ಮತ್ತು ಸತು ಗಣಿಗಳ ಕಾಲೊನಿಗಳಲ್ಲಿ ಕೆಜಿಎಫ್ ಕಾಲೊನಿಗಳು ಈಗಲೂ ಇವೆ.

ಕೆಜಿಎಫ್ ಗಣಿಗಳಲ್ಲಿ ಚಿನ್ನವನ್ನು ಬೇಗ ಬೇಗನೆ ದೋಚಿಕೊಳ್ಳಲು 1902ರಲ್ಲಿಯೇ ಶಿವನಸಮುದ್ರದ ಕೊಳ್ಳದಿಂದ ವಿದ್ಯುತ್ ಉತ್ಪಾದಿಸಿ ಗಣಿಗಳಿಗೆ ಜೋಡಿಸಲಾಯಿತು. ಇದರ ಪರಿಣಾಮವೇ ಗಣಿಗಳಲ್ಲಿ ಪ್ರತಿ ದಿನ ಮೂವತ್ತೈದು ಸಾವಿರ ಕಾರ್ಮಿಕರು ದುಡಿಯುತ್ತ ವಾರ್ಷಿಕ 30-50 ಟನ್‌ಗಳಷ್ಟು ಚಿನ್ನವನ್ನು ಉತ್ಪಾದನೆ ಮಾಡಿದರು. ಬೆಂಗಳೂರು ಮತ್ತು ಮೈಸೂರಿಗೆ ವಿದ್ಯುತ್ ಬಂದಿದ್ದು 1904-1905ರಲ್ಲಿ. ಇದರ ಫಲಿತಾಂಶ ಸೂರ್ಯ ಮುಳುಗದ ನಾಡು ಬ್ರಿಟನ್, ಭಾರತ ಮತ್ತು ಅಂದಿನ ಮೈಸೂರು ಸಂಸ್ಥಾನ ಚಿನ್ನದಲ್ಲಿ ಲಾಭ ಮತ್ತು ರಾಯಲ್ಟಿಯನ್ನು ಮಿಲಿಯನ್ ಡಾಲರ್‌ಗಟ್ಟಲೇ ಪಡೆದುಕೊಳ್ಳುತ್ತಿದ್ದವು. ಇದರಿಂದ ದೇಶದಲ್ಲಿಯೇ ‘ಮಾದರಿ ರಾಜ್ಯ’ ಎಂದು ಮೈಸೂರನ್ನು ಕರೆಯಲಾಯಿತು. ಸ್ವಾತಂತ್ರ್ಯಪೂರ್ವ ಮತ್ತು ನಂತರದ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹತ್ತಾರು ಕಂಪನಿಗಳು ಪ್ರಾರಂಭಗೊಂಡವು. ಈ ಕಂಪನಿಗಳ ಮೊದಲ ತಲೆಮಾರಿನ ಕಾರ್ಮಿಕರು ಕೆಜಿಎಫ್‌ನವರೇ ಆಗಿದ್ದರು. 

ಈ ಹಿನ್ನೆಲೆಯಲ್ಲೇ ಮುಂದುವರಿದ ಕರ್ನಾಟಕ ಪ್ರಸ್ತುತ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಜೈವಿಕ ತಂತ್ರಜ್ಞಾನ (ಬಿಟಿ), ಇಸ್ರೊ, ರಿಯಲ್ ಎಸ್ಟೇಟ್, ಇತ್ಯಾದಿಗಳಲ್ಲಿ ಈಗಲೂ ದೇಶದಲ್ಲಿ ಮುಂಚೂಣಿಯಲ್ಲಿದೆ.

ಎರಡು ವಿಶ್ವ ಮಹಾಯುದ್ಧಗಳ ಕಾಲದಲ್ಲೂ ಕೆಜಿಎಫ್‌ ಗಣಿಗಳು ನಿಲ್ಲದೆ ಚಿನ್ನದ ಉತ್ಪಾದನೆ ಮಾಡಿದವು. ಗಣಿ ಕಾರ್ಮಿಕರು ಇಲಿಗಳಂತೆ ಎಂಟು ಕಿಲೊಮೀಟರ್‌ ಉದ್ದ, ಎರಡು ಕಿಲೊಮೀಟರ್‌ ಅಗಲ ಮತ್ತು 3.3 ಕಿಲೊಮೀಟರ್‌ ಆಳದಲ್ಲಿ ತೋಡಿದ ಒಟ್ಟು ಸುರಂಗಗಳ ಉದ್ದ 1467 ಕಿಲೊಮೀಟರ್‌ಗಳು. ಗಣಿಗಳ ಮೇಲೆ ಬಿದ್ದ ಗಣಿ ತ್ಯಾಜ್ಯ 50 ದಶಲಕ್ಷ ಟನ್‌ಗಳು. ಈ ಪ್ರಕ್ರಿಯೆಯಲ್ಲಿ ದಾಖಲೆಗಳ ಪ್ರಕಾರ ಸತ್ತವರ ಸಂಖ್ಯೆ ಏಳು ಸಾವಿರ ಮತ್ತು ಗಾಯಗೊಂಡವರ ಸಂಖ್ಯೆ ಹದಿನಾರು ಸಾವಿರ. ಪಳೆಯುಳಿಕೆ ಗಣಿಗಳಲ್ಲಿ ಸತ್ತವರ ಸಂಖ್ಯೆ ಯಾವುದೇ ದಾಖಲೆಗಳಲ್ಲಿ ದೊರಕುವುದಿಲ್ಲ. ನಾಲ್ಕಾರು ದಲಿತ ಪೀಳಿಗೆಗಳು ಆಧುನಿಕ ಗಣಿಗಳ ಸುರಂಗಗಳಲ್ಲಿ ಬಲು ಕಷ್ಟದಿಂದ ಬದುಕನ್ನು ಕಟ್ಟಿಕೊಂಡ ಯಶೋಗಾಥೆಯನ್ನು ಮರೆಯಲಾಗದು. ಇಲ್ಲಿನ ಆಂಗ್ಲೊ-ಇಂಡಿಯನ್ ಶಿಕ್ಷಕರಿಂದ ಇಂಗ್ಲಿಷ್ ಕಲಿತುಕೊಂಡ ಸ್ಥಳೀಯ ಮಕ್ಕಳು ರಾಜ್ಯ ಮತ್ತು ದೇಶದ ಮುಖ್ಯವಾಹಿನಿಯಲ್ಲಿ ಸೇರಿಕೊಂಡರು.

ಮೊನ್ನೆಯಷ್ಟೇ ನೋಡಿದ ತಮಿಳಿನ ಸೂಪರ್‌ ಹಿಟ್‌ ಸಿನಿಮಾ ‘ತಂಗಲಾನ್‌’ ಕಾರಣದಿಂದ ಇವೆಲ್ಲವೂ ಸುರುಳಿಯಂತೆ ಬಿಚ್ಚಿಕೊಳ್ಳುತ್ತಾ ಹೋದವು. ನಿರ್ದೇಶಕ ಪ.ರಂಜಿತ್ ಮತ್ತವರ ತಂಡ ಈ ಸಿನಿಮಾ ನಿರ್ಮಿಸಲು ಸಾಕಷ್ಟು ಬೆವರು ಹರಿಸಿರುವುದು ಕಾಣಿಸುತ್ತದೆ. ಈಗಲೂ ಸಾಕಷ್ಟು ಚಿನ್ನ ಈ ಗಣಿಗಳಲ್ಲಿ ಉಳಿದುಕೊಂಡಿದೆ. ಇವು ಮತ್ತೆ ಯಾವಾಗ ಆರಂಭಗೊಳ್ಳುತ್ತವೆ ಎನ್ನುವ ಕಾತರ ಎಲ್ಲರಲ್ಲೂ ಇದೆ. ಬ್ರಿಟನ್‌ನಿಂದ ಭಾರತದವರೆಗೂ ಕೆಜಿಎಫ್ ಎಂದರೆ ಕುತೂಹಲ ಇದ್ದೇಇದೆ! ಕೆಜಿಎಫ್ ಹೆಸರಿನ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಚಿನ್ನದ ವ್ಯಾಮೋಹವೇ ಹಾಗೆ!

1970ರ ದಶಕದಲ್ಲಿ ಕೆಜಿಎಫ್‌ನಲ್ಲಿ ಕಾರ್ಮಿಕರ ಕಾಲೊನಿ

ಕೆಜಿಎಫ್‌ ಮತ್ತು ತಂಗಲಾನ್‌

ಕೆಜಿಎಫ್‌ನಲ್ಲಿ ಚಿನ್ನದ ಗಣಿಗಳು ಪ್ರಾರಂಭವಾಗುವುದಕ್ಕೆ ಮುನ್ನ (1880-1890) ಅಲ್ಲಲ್ಲಿ ನಾಲ್ಕಾರು ಗುಡಿಸಲುಗಳು ಇದ್ದವು. ಕೋಲಾರ ಪಟ್ಟಣದ ಹತ್ತಿರ ಇದ್ದ ಕಾರಣಕ್ಕೆ ಇದನ್ನು ಬ್ರಿಟಿಷರು ‘ಕೋಲಾರ್ ಗೋಲ್ಡ್‌ಫೀಲ್ಡ್ಸ್‌’ ಎಂದು ಕರೆದರು. ತಮಿಳರು ಕೋಲಾರ್ ತಂಗವೈಯಲ್ (ಗೋಲ್ಡ್ ಫೀಲ್ಡ್ಸ್‌) ಎಂದು ಕರೆಯುತ್ತಾರೆ.

ಈ ಹಿನ್ನೆಲೆಯಲ್ಲಿಯೇ ಸಿನಿಮಾಗೆ ‘ತಂಗಲಾನ್’ ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ತೋರಿಸುವಂತೆ ಆರ್ಕಾಟ್ ಕಡೆಯಿಂದ ತಂಗಲಾನ್ (ನಾಯಕ) ಚಿನ್ನವನ್ನು ಹುಡುಕಿಕೊಂಡು ಕೆಜಿಎಫ್ ಕಡೆಗೆ ಬರಲಿಲ್ಲ. ಎರಡು ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಸ್ಥಳೀಯರು ಗಣಿಗಳನ್ನು ತೋಡಿ ಬಿಟ್ಟಿದ್ದರು. ಬಹುಶಃ ಅವರು ದ್ರಾವಿಡರಾಗಿರಬೇಕು! ಆದರೆ ಸಿನಿಮಾದಲ್ಲಿ ಚಿನ್ನವನ್ನು ಹೇಗೆ ಹುಡುಕುತ್ತಾರೆ ಎಂಬುದನ್ನು ಒಂದಷ್ಟು ವೈಜ್ಞಾನಿಕವಾಗಿ ತೋರಿಸಲಾಗಿದೆ.

ಒಂದು ಕಾಲಕ್ಕೆ ಕೆಜಿಎಫ್ ರಾಜ್ಯದ ಮೂರನೇ ದೊಡ್ಡ ಪಟ್ಟಣವಾಗಿತ್ತು.

ಕೆಜಿಎಫ್‌ ನೋಟ 

ಕೆಜಿಎಫ್‌ ಮತ್ತು ತಂಗಲಾನ್‌

ಕೆಜಿಎಫ್‌ನಲ್ಲಿ ಚಿನ್ನದ ಗಣಿಗಳು ಪ್ರಾರಂಭವಾಗುವುದಕ್ಕೆ ಮುನ್ನ (1880-1890) ಅಲ್ಲಲ್ಲಿ ನಾಲ್ಕಾರು ಗುಡಿಸಲುಗಳು ಇದ್ದವು. ಕೋಲಾರ ಪಟ್ಟಣದ ಹತ್ತಿರ ಇದ್ದ ಕಾರಣಕ್ಕೆ ಇದನ್ನು ಬ್ರಿಟಿಷರು ‘ಕೋಲಾರ್ ಗೋಲ್ಡ್‌ಫೀಲ್ಡ್ಸ್‌’ ಎಂದು ಕರೆದರು. ತಮಿಳರು ಕೋಲಾರ್ ತಂಗವೈಯಲ್ (ಗೋಲ್ಡ್ ಫೀಲ್ಡ್ಸ್‌) ಎಂದು ಕರೆಯುತ್ತಾರೆ.

ಈ ಹಿನ್ನೆಲೆಯಲ್ಲಿಯೇ ಸಿನಿಮಾಗೆ ‘ತಂಗಲಾನ್’ ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ತೋರಿಸುವಂತೆ ಆರ್ಕಾಟ್ ಕಡೆಯಿಂದ ತಂಗಲಾನ್ (ನಾಯಕ) ಚಿನ್ನವನ್ನು ಹುಡುಕಿಕೊಂಡು ಕೆಜಿಎಫ್ ಕಡೆಗೆ ಬರಲಿಲ್ಲ. ಎರಡು ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಸ್ಥಳೀಯರು ಗಣಿಗಳನ್ನು ತೋಡಿ ಬಿಟ್ಟಿದ್ದರು. ಬಹುಶಃ ಅವರು ದ್ರಾವಿಡರಾಗಿರಬೇಕು! ಆದರೆ ಸಿನಿಮಾದಲ್ಲಿ ಚಿನ್ನವನ್ನು ಹೇಗೆ ಹುಡುಕುತ್ತಾರೆ ಎಂಬುದನ್ನು ಒಂದಷ್ಟು ವೈಜ್ಞಾನಿಕವಾಗಿ ತೋರಿಸಲಾಗಿದೆ.

ಒಂದು ಕಾಲಕ್ಕೆ ಕೆಜಿಎಫ್ ರಾಜ್ಯದ ಮೂರನೇ ದೊಡ್ಡ ಪಟ್ಟಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.