ADVERTISEMENT

ಬಂಡೆಗಳ ಮೇಲೆ ಕಾವ್ಯ ಬರೆಸಿದ ನಾಡು

ಎಚ್.ಎಸ್.ಅನುಪಮಾ
Published 15 ಜೂನ್ 2024, 22:30 IST
Last Updated 15 ಜೂನ್ 2024, 22:30 IST
<div class="paragraphs"><p>ಕೊಪ್ಪಳದ ಗವಿಮಠದ ಹಿಂದಿರುವ ಗುಡ್ಡ </p></div>

ಕೊಪ್ಪಳದ ಗವಿಮಠದ ಹಿಂದಿರುವ ಗುಡ್ಡ

   

ಚಿತ್ರಗಳು: ಭರತ್‌ ಕಂದಕೂರ

ಬಯಲಿಗೊಂದು ಸೌಂದರ್ಯ, ಬಂಡೆಗಳಿಗೊಂದು ಗಾಂಭೀರ್ಯ. ದಟ್ಟಡವಿಗೊಂದು ನಿಗೂಢ ಚೆಲುವು, ಮನ ತೆರೆದು ಹರಡುವಂತೆ ಬಯಲು. ಪ್ರಕೃತಿ ಎಲ್ಲೆಡೆಯೂ ‘ಸಿರಿ’ಯೇ ಆದರೂ ಹಸಿರು ಹೊದ್ದ ಬುವಿಯನ್ನು ನೋಡುತ್ತಲೇ ಇರುವ ಮಲೆಸೀಮೆಯ ನಮಗೆ ಧೀರ ಗಂಭೀರವಾಗಿ ನಿಂತ ಬಂಡೆಗಳ ಬೆಟ್ಟಗಳೆಂದರೆ ಕಣ್ಣಿಗೆ ಹಬ್ಬ.

ADVERTISEMENT

ಕಣ್ಣು ಹಾಯಿಸಿದತ್ತ ಬಂಡೆಗಳೆಂಬ ಕಾವ್ಯ ಎದುರುಗೊಳ್ಳುವ ಊರು ಕೊಪ್ಪಳ. ಊರೊಳಗೂ ಬಡಾವಣೆಗಳಲ್ಲಿ ನಿಸರ್ಗ ವ್ಯಾಪಾರಗಳಿಗೆ ಸಾಕ್ಷಿಯಾಗಿ ಕೋಟ್ಯಂತರ ವರ್ಷಗಳಿಂದ ಮಲಗಿರುವ ಮೌನಿಗಲ್ಲುಗಳು ಕಾಣಸಿಗುತ್ತವೆ. ಏನು ಸೋಜಿಗವೋ, ಬೃಹತ್ ಬಂಡೆಯೊಂದರ ಎದುರು ನಿಂತರೆ ನಮ್ಮೊಳಗೊಂದು ಏಕಾಂತ ಸೃಷ್ಟಿಯಾಗಿಬಿಡುತ್ತದೆ!

ಅಂತಹ ಕೊಪ್ಪಳ ನಾಡಿಗೆ ಕಾಲಿಟ್ಟ ಮೇಲೆ ಸಣ್ಣ ಬೆಟ್ಟವನ್ನಾದರೂ ಹತ್ತಿಯೇ ಸಿದ್ಧ ಎಂದು ಪಟ್ಟಣದ ಸೆರಗಿಗೆ, ಗವಿಮಠದ ಹಿಂದಿರುವ ಗುಡ್ಡಕ್ಕೆ ಆ ಬೆಳಗು ಹೊರಟೆವು. ನಿಲುಕದ ಬಂಡೆಯೊಂದರ ಮೇಲೆ ಅಂದೆಂದೋ ನಾಡನಾಳಿದ ಅರಸು ಅಕ್ಷರಗಳನ್ನು ಅಕ್ಕರೆಯಿಂದ ಕಡೆಸಿಟ್ಟಿರುವ ತಾಣವದು. ಎರಡು ಸಾವಿರದ ಮುನ್ನೂರು ವರುಷ ಕೆಳಗೆ ಲೋಕದ ಶೋಕ ಕಾರಣವ ಹೋಗಲಾಡಿಸುವೆನೆಂದು ಪಣ ತೊಟ್ಟು ಲೋಕಹಿತದ ಬೌದ್ಧ ಮಾರ್ಗ ತುಳಿದ ಸಾಮ್ರಾಟ ಅಶೋಕನು ತನ್ನ ಪ್ರಜೆಗಳಿಗೆ ಕಾಲಾತೀತ ಸತ್ಯವನ್ನರುಹಲು ಬರೆಸಿದ ಶಾಸನ ಅಲ್ಲಿದೆ. ಮಳೆ ಗಾಳಿ, ಚಳಿ ಧೂಳಿಗೆ ಅಕ್ಷರಗಳೀಗ ಮಸುಕು ಮಸುಕಾಗಿವೆ. ನಮ್ಮ ಕಣ್ಣಬೆಳಕು ಆರುವ ಮೊದಲೇ ನೋಡಬೇಕೆಂಬ ತುರ್ತುಭಾವ ಆವರಿಸಿ ಬಳಗದೊಂದಿಗೆ ನಾನಲ್ಲಿದ್ದೆ.

ದಿಬ್ಬದಂತಹ ಬೆಟ್ಟದ ಬುಡದ ಬೇಲಿ ದಾಟಿ, ಪುರಾತತ್ವ ಇಲಾಖೆಯ ಫಲಕ ಓದಿ ಏರತೊಡಗಿದೆವು. ಕಣ್ಣು ಹಾಯಿಸಿದತ್ತ ನಾನಾ ಆಕಾರ, ರೂಪ, ರಚನೆ, ಜೋಡಿದಾರಿಕೆಯ ಬಂಡೆಗಳು. ಹಿಡಿಮಣ್ಣು ಇರುವಲ್ಲೆಲ್ಲ ಹಸಿರು. ಸಂದಿಗೊಂದಿಗಳಲ್ಲಿ ಬಾವಲಿ, ನಾಯಿ, ಹಾವುಹರಣೆ. ವಾರದ ಕೆಳಗೆ ಸುರಿದ ಮಳೆಯಿಂದ ಮೇ ತಿಂಗಳಿನಲ್ಲೂ ತಂಗಾಳಿ ಬೀಸುತ್ತಿತ್ತು.

ಏರತೊಡಗಿದ ಹತ್ತು ನಿಮಿಷದಲ್ಲಿ ದೊಡ್ಡ ಬಂಡೆಯೊಂದರ ಎದುರು ನಿಂತೆವು. ನಾವು ಕುಬ್ಜರೆನಿಸುವಂತೆ ಮಾಡಿದ ಅದು ಅಗಮ್ಯವೇನಲ್ಲ, ಆದರೆ ಡಬಲ್ ಡೆಕರನ್ನು ಏರುವುದು ಐವತ್ತು ದಾಟಿದ ಹೆಣ್ಣು ಮೊಣಕಾಲುಗಳಿಗೆ ಸುಲಭವಾಗಿರಲಿಲ್ಲ. ಚತುಷ್ಪಾದಿಗಳಾಗಿ ಕೆಳಬಂಡೆಯ ಮೇಲೆ ಕೆತ್ತಿಟ್ಟ ಕಚ್ಚುಗಳಲ್ಲಿ ಕೈಕಾಲಿಟ್ಟು ಹತ್ತಿದರೆ ಮೇಲಿನ ಬಂಡೆ ಛತ್ರಿಯಂತೆ, ಸೂರಿನಂತೆ ಹರಡಿಕೊಂಡು ವಿಶಾಲ ಆವರಣ ರೂಪಿಸಿರುವುದು ಕಾಣುತ್ತದೆ. ಅದರಡಿ ಬಿಸಿಲು ತಾಗಲು ಸಾಧ್ಯವೇ ಇಲ್ಲ. ರುಮುರುಮು ಗಾಳಿಗೆ ಬೆವರು ಸುಳಿಯುವುದಿಲ್ಲ. ಮಳೆ ಬಂದರೂ ನೆನೆಯುವುದಿಲ್ಲ. ಹುಡುಕಿ ನೋಡಿದರಷ್ಟೇ ಬ್ರಾಹ್ಮಿ ಲಿಪಿಯ ಅಕ್ಷರಗಳು ಕಾಣುವಂತಿವೆ.

ಬುದ್ಧ ಮಾರ್ಗವನ್ನರಿತು, ಹಾಗೆಯೇ ನಡೆದುಕೊಂಡು, ತನಗಾದ ಅರಿವು ಬಹುಕಾಲ ಜನರ ನೆನಪಿನಲ್ಲಿರುವಂತಾಗಲಿ ಎಂದು ಕಾವ್ಯದಂತಹ ಸಾಲುಗಳನ್ನು ಸಾಮ್ರಾಟ ಅಶೋಕ ಬರೆಸಿದ ಶಿಲಾಶಾಸನವದು. ಎಂಟು ಸಾಲುಗಳ ಶಾಸನದ ಸಾರಾಂಶ ಹೀಗಿದೆ:

‘ದೇವನಾಂಪ್ರಿಯ ಪ್ರಿಯದರ್ಶಿಯು ಹೇಳುತ್ತಾನೆ: ನಾನು ಎರಡೂವರೆ ವರ್ಷಗಳಿಂದ ಶಾಕ್ಯನಾಗಿದ್ದೆ. ಆದರೆ ಮನಃಪೂರ್ವಕ ಬೌದ್ಧನಾಗಲು ಪ್ರಯತ್ನಿಸಿರಲಿಲ್ಲ. ವರ್ಷದ ಕೆಳಗೆ ಸಂಘದೊಳಹೊಕ್ಕು ಈಗ ನಿಜ ಬೌದ್ಧನಾಗಲು ಮನಸ್ಸಿಟ್ಟು ಯತ್ನಿಸುತ್ತಿರುವೆನು. ಜಂಬೂದ್ವೀಪದಲ್ಲಿ ದೇವರುಗಳು ಸಾಮಾನ್ಯ ಜನರೊಂದಿಗೆ ಸಂಪರ್ಕವಿಟ್ಟುಕೊಂಡಿರಲಿಲ್ಲ. ಉನ್ನತ ಜನ್ಮದವರಷ್ಟೇ ದೇವರುಗಳ ಮಿತ್ರರಾದರು. ಅದು ಪ್ರಯತ್ನದ ಫಲ. ಆದರೆ ಅವರಿಗಷ್ಟೇ ಇದು ಸಾಧ್ಯವೆಂದು ತಿಳಿಯಬೇಡಿ. ಸಾಮಾನ್ಯ ಜನರೂ ನಿಷ್ಠೆಯಿಂದ ಪ್ರಯತ್ನಿಸಿದರೆ ವಿಮುಕ್ತಿಯನ್ನು ಪಡೆಯಬಹುದು. ಈ ದಿಕ್ಕಿನಲ್ಲಿ ಕ್ಷುದ್ರರೂ, ಮಹಾತ್ಮರೂ, ಜಯಶಾಲಿಗಳಾಗಲಿ ಎಂದು; ನೆರೆಹೊರೆಯ ಗಡಿನಾಡಿನವರೂ ಇದನ್ನರಿಯಲೆಂದು; (ದಮ್ಮವು) ಚಿರಸ್ಥಾಯಿಯಾಗಿ ನಿಲ್ಲಲೆಂದು ಇದನ್ನು ಮಾಡಿಸಿರುವುದು. ಇದು (ಅನುಸರಿಸಿದಲ್ಲಿ ದಮ್ಮವು) ವರ್ಧಿಸುತ್ತದೆ. ವಿಪುಲವಾಗಿಯೇ ವರ್ಧಿಸುತ್ತದೆ.’

1931ರಲ್ಲಿ ಕೊಪ್ಪಳದ ಲಿಂಗಾಯತ ಮಠಾಧಿಪತಿಗಳೊಬ್ಬರಿಗೆ ಬಂಡೆಯ ಮೇಲೆ ಅಕ್ಷರಗಳಿರುವುದು ಕಂಡುಬಂತು. ಇತಿಹಾಸಕ್ತರಾಗಿದ್ದ ಅವರು ಅಕ್ಷರಗಳನ್ನು ಎನ್. ಬಿ. ಶಾಸ್ತ್ರಿಯವರಿಗೆ ತೋರಿಸಿದರು. ಬಂಡೆಯ ಮೇಲೆ ತಮಿಳು ಅಕ್ಷರಗಳಿದ್ದು ಪರಿಶೀಲಿಸಬೇಕೆಂದು ಹೈದರಾಬಾದಿನ ಪುರಾತತ್ವ ಇಲಾಖೆಯನ್ನು ಶಾಸ್ತ್ರಿ ಕೋರಿದರು. ಇಲಾಖೆಯ ನಿರ್ದೇಶಕ ಯಜ್ದಾನಿ, ಸಹಾಯಕ ನಿರ್ದೇಶಕ ಸೈಯದ್ ಯೂಸುಫ್ ಕೊಪ್ಪಳಕ್ಕೆ ಬಂದರು. ಕೂಲಂಕಷ ಸಂಶೋಧನೆ ನಡೆಸಿ, ಅದು ಬ್ರಾಹ್ಮಿಲಿಪಿಯ ಅಶೋಕನ ಶಿಲಾಶಾಸನವೆಂದು ಪತ್ತೆ ಹಚ್ಚಿದರು. ಪಶ್ಚಿಮದ ಕಡೆಯಿಂದ ಕೊಪ್ಪಳ ಊರು ಪ್ರವೇಶಿಸುವಾಗ ಬಲಬದಿಯಲ್ಲಿ ಪಾಲ್ಕಿಗುಂಡು ಬೆಟ್ಟವಿದೆ. ಅದರ ತುತ್ತತುದಿಯಲ್ಲಿ ಕಲ್ಲು ಚಪ್ಪಡಿಯೊಂದನ್ನು ಎರಡು ಬಂಡೆಗಳ ಮೇಲೆ ಹೊದೆಸಿಟ್ಟಿರುವಂತಹ ರಚನೆ ಕಾಣುತ್ತದೆ. ಅಲ್ಲಿಯೂ ಇದೇ ಬರಹವುಳ್ಳ ಶಾಸನವಿದೆ.

ಇದಾದ ಬಳಿಕ ಒಂದಾದಮೇಲೊಂದು ಅಶೋಕನ ಶಿಲಾಶಾಸನಗಳು ಪತ್ತೆಯಾದವು. ಈವರೆಗೆ ಕರ್ನಾಟಕದ ಕೊಪ್ಪಳದಲ್ಲಿ ಎರಡು, ರಾಯಚೂರು ಜಿಲ್ಲೆಯ ಮಸ್ಕಿಯಲ್ಲೊಂದು, ಬಳ್ಳಾರಿ ಜಿಲ್ಲೆಯ ನಿಟ್ಟೂರು-ಉದೆಗೊಳದಲ್ಲಿ ತಲಾ ಒಂದು, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ-ಜತಿಂಗ ರಾಮೇಶ್ವರ-ಅಶೋಕ ಸಿದ್ದಾಪುರಗಳಲ್ಲಿ ತಲಾ ಒಂದು, ಯಾದಗಿರಿ ಜಿಲ್ಲೆಯ ಸನ್ನತಿಯಲ್ಲೊಂದು - ಒಟ್ಟು ಒಂಬತ್ತು ಶಿಲಾಶಾಸನಗಳು ಸಿಕ್ಕಿವೆ. ಇವುಗಳಲ್ಲಿ ಸನ್ನತಿಯದು ಬೃಹತ್ ಶಿಲಾಶಾಸನ (ಮೇಜರ್ ಎಡಿಕ್ಟ್). ಮಿಕ್ಕವು ಕಿರಿಯವು (ಮೈನರ್ ಎಡಿಕ್ಟ್). ಗ್ರಾನೈಟ್ ಕ್ವಾರಿಗಾಗಿ ಒಡೆದುಕೊಂಡ ಎಷ್ಟು ಬಂಡೆಗಳಲ್ಲಿ ಎಷ್ಟೆಷ್ಟು ಬರಹ, ಕನಸು, ಸಂದೇಶಗಳಿದ್ದವೋ; ಯಾವ್ಯಾವುವು ನಮ್ಮ ಮನೆಗಳ ನೆಲಹಾಸಾಗಿ ಸದಾಶಯವನ್ನು ಹುದುಗಿಸಿಕೊಂಡಿವೆಯೋ, ನೆಲದವ್ವನೇ ತಿಳಿಸಬೇಕು.

ಶಿಲಾಶಾಸನಗಳು  
ಶಿಲಾಶಾಸನಗಳು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.