ADVERTISEMENT

ಗಡಾರಿ ಕೃಷ್ಣಪ್ಪನ ಜಾನಪದ ಕಣಜ

ಸುವರ್ಣಾ ಬಸವರಾಜ್
Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
ಗಡಾರಿ ಕೃಷ್ಣಪ್ಪ
ಗಡಾರಿ ಕೃಷ್ಣಪ್ಪ   

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಡಾರಿ ಕೃಷ್ಣಪ್ಪ ಅವರ ಮನೆಯ ಮೊದಲ ಮಹಡಿಯಲ್ಲಿ ‘ಕುವೆಂಪು ಜಾನಪದ ಕಣಜ’ ಎನ್ನುವ ವಿಶಿಷ್ಟ ವಸ್ತು ಸಂಗ್ರಹಾಲಯವಿದೆ. ಇಲ್ಲಿ ದಿನಬಳಕೆ, ದೇವಸ್ಥಾನದಲ್ಲಿ ಬಳಸುವ ವಸ್ತುಗಳು, ನಾಣ್ಯಗಳು, ಪುಟ್ಟ ಗ್ರಂಥಾಲಯವೂ ಇದೆ. ಇದು ಜಾನಪದ ಸಂಶೋಧಕರು ಹಾಗೂ ಆಸಕ್ತರಿಗೆ ಪ್ರೇರಣೆ ನೀಡುತ್ತದೆ.

ಕೃಷ್ಣಪ್ಪನವರ ಜಾನಪದ ಕಣಜದಲ್ಲಿ ಸಂಗ್ರಹಿಸಿಟ್ಟಿರುವ ವಸ್ತುಗಳಲ್ಲಿನ ವೈವಿಧ್ಯತೆ ಅಚ್ಚರಿ ಮೂಡಿಸುತ್ತದೆ. ತಂತ್ರಜ್ಞಾನ ಬರುವ ಮೊದಲು ಕೃಷಿಯಲ್ಲಿ ಬಳಸುತ್ತಿದ್ದ ವಸ್ತುಗಳು ಇವುಗಳಲ್ಲಿ ಪ್ರಮುಖವಾಗಿವೆ. ಹಲವು ಬಗೆಯ ಮಚ್ಚು, ಕೊಡಲಿ, ಮರಬೋರಿಗೆ, ದೊಡ್ಡಬೋರಿಗೆ, ಸಣ್ಣ ಬೋರಿಗೆ, ತೆಂಗಿನಕಾಯಿ ಸುಲಿಯುವ ಇಕ್ಕಳ, ಗಾರೆ ಕೆಲಸ ಮಾಡುವ ಕರ್ಣಿ, ಎತ್ತಿನ ಸಣ್ಣ ಬಂಡಿ ಚಕ್ರ, ಮರ ಉಜ್ಜುವ ಉಜ್ಕೊಂಡ, ತೂಕ ಮಾಡುವ ತಕ್ಕಡಿಗಳು, ಎಮ್ಮೆ ಕಟ್ಟುವ ಸರಪಣಿ, ಹಮಾಲರು ಚೀಲ ಇಳಿಸಲು ಬಳಸುತ್ತಿದ್ದ ಹುಕ್ಕು, ಕುದುರೆ ಲಾಳ, ಕೈ ಕರಗಸ, ಬಾರಕೋಲು, ಜರಡಿ ಬೆಳಕಿಗೆಂದು ಬಳಸುತ್ತಿದ್ದ ಲಾಟೀನು. ಹೀಗೆ ಸಾಮಗ್ರಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಹಿರಿಯರು ಮನೆಯಲ್ಲಿ ಬಳಸುತ್ತಿದ್ದ ಬೀಸುವಕಲ್ಲು, ಬುಟ್ಟು ವಡೇವು, ಬಿದಿರಿನ ಮೊರ, ಬಿದಿರಿನ ಗೂಡೆ, ಹಲಗೆಯಿಂದ ಮಾಡಿದ ಕಾಯಿ ತುರಿಯುವ ತುರಿಮಣೆ, ಕಾಳು ಅಳೆಯುವ ಅರ್ಪಾವು, ಪಾವು, ಸೇರುಗಳು. ತೂಕ ಮಾಡುವ ಕಲ್ಲು, ಪಾತ್ರೆ ಕೆಳಗೆ ಇಡುವ ಇಲಿಕೆ, ಒನಕೆ, ಟ್ರಾನ್ಸಿಸ್ಟರ್ ರೇಡಿಯೋ, ಮಡಕೆ, ಗುಡಾಣ, ದಬ್ಬದ ಜರಡಿ, ಸೀಮೆಎಣ್ಣೆ ದೀಪ, ಒತ್ತು ಶ್ಯಾವಿಗೆ ಒಳ್ಳು, ಮದುವೆಯಲ್ಲಿ ಬಳಸುವ ಹಸೆ ಮಣೆ, ಮೊಸರು ಕಡೆಯುವ ಕಡೆಗೋಲು, ಕವಡೆ, ಗಂಡು ಮಕ್ಕಳ ಧರಿಸುವ ಕಾಲುಂಗರ, ಬಂಗಾರದ ಅಚ್ಚು, ದಬ್ಬದ ಕಣಜ, ಮರದ ತೊಟ್ಟಿಲು ಒಳಗೊಂಡಂತೆ ನೂರಾರು ಬಗೆಯ ಗೃಹ ಬಳಕೆ ಸಾಮಾನುಗಳು ಸಂಗ್ರಹಾಲದಲ್ಲಿವೆ.

ADVERTISEMENT

ಈ ವಸ್ತು ಸಂಗ್ರಹಾಲಯದಲ್ಲಿ ಬಡಪಿನಿಂದ ಮಾಡಿರುವ ಕುಂಕುಮದ ಬಟ್ಟಲು, ಕಂಚಿನ ಲೋಟ, ತಟ್ಟೆ, ಚೊಂಬು, ಗಿಂಡಿ, ಕುಂಕುಮದ ಬಟ್ಟಲು, ಕಳಸ, ಮಂಗಳಾರತಿಯ ತಟ್ಟೆ, ದೀಪದ ಕಂಬ, ಕಂಚಿನ ಶ್ರೀಕೃಷ್ಣನ ವಿಗ್ರಹ, ಲಕ್ಷ್ಮೀ ವಿಗ್ರಹ, ಆಮೆ ವಿಗ್ರಹ, ಗಣೇಶ, ರಾಧಾಕೃಷ್ಣ, ಶಾರದಾಮಾತೆಯ ವಿಗ್ರಹ, ಹಿತ್ತಾಳೆಯ ಗಂಟೆ, ಗ್ರಾಮ ಫೋನ್ ರೆಕಾರ್ಡ್‌ಗಳಂತಹ ಅಪರೂಪದ ವಸ್ತುಗಳನ್ನು ನೋಡಬಹುದು.

ಜಾನಪದ ಕಣಜದಲ್ಲಿ ಸುಮಾರು 200 ದೇಶಗಳ ನಾಣ್ಯಗಳು, 172 ದೇಶದ ನೋಟುಗಳು, ರಾಜರು ಹಾಗೂ ಬ್ರಿಟಿಷರ ಕಾಲದ ನಾಣ್ಯಗಳು, ನಮ್ಮದೇ ದೇಶದ ಒಂದು ಆಣೆ, ಒಂದು ಪೈಸೆ, ಎರಡು ಪೈಸೆ, ಮೂರು ಪೈಸೆಯಿಂದ 20 ರೂಪಾಯಿವರೆಗಿನ ನಾಣ್ಯಗಳು. 1 ರೂಪಾಯಿ ನೋಟಿನಿಂದ 2 ಸಾವಿರ ರೂಪಾಯಿ ನೋಟಿನವರೆಗೆ ಸಂಗ್ರಹ ಇದೆ. ಅಮೆರಿಕದ 50 ರಾಜ್ಯಗಳ ಒಂದೊಂದು ನಾಣ್ಯಗಳು. ಈಸ್ಟ್ ಇಂಡಿಯಾ ಕಂಪನಿ ನಾಣ್ಯಗಳು. ಬೆಳ್ಳಿ ನಾಣ್ಯಗಳು ಕೂಡ ಸ್ಥಾನ ಪಡೆದಿವೆ.

ಜಾನಪದ ಕಣಜದಲ್ಲಿ ರಾಷ್ಟ್ರಕವಿ ಕುವೆಂಪುರವರ 11 ಸಂಪುಟಗಳಿವೆ. ವ್ಯವಸಾಯಕ್ಕೆ ಸಂಬಂಧಪಟ್ಟ ಮಾಹಿತಿ ಒಳಗೊಂಡಿರುವ 500 ರಿಂದ 600 ಪುಸ್ತಕಗಳಿವೆ. ದಿನಪತ್ರಿಕೆ, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳೂ ಸಿಗುತ್ತವೆ.

‘ಮನಸು ಮಾಡಿದರೆ ಹಿರಿಯರ ಬದುಕಿನ ಶ್ರೀಮಂತಿಕೆಯನ್ನು ಅವರು ಬಳಸುತ್ತಿದ್ದ ವಸ್ತುಗಳ ಮೂಲಕ ಅನಾವರಣ ಮಾಡಬಹುದು. ಈ ನಿಟ್ಟಿನಲ್ಲಿ ಮೂವತ್ತು ವರ್ಷಗಳಿಂದ ಸತತ ಪ್ರಯತ್ನದಲ್ಲಿ ತೊಡಗಿದ್ದೇನೆ. ನನ್ನ ಪುಟ್ಟ ಮನೆಯ ಮಹಡಿಯು ಸಂಗ್ರಹಗಳಿಂದ ಬಹುತೇಕ ಭರ್ತಿಯಾಗಿದೆ’ ಎಂದು ಕುವೆಂಪು ಜಾನಪದ ಕಣಜದ ರೂವಾರಿ ಕೃಷ್ಣಪ್ಪ ಹೇಳುತ್ತಾರೆ.

ಹಿರಿಯೂರಿನಿಂದ 18 ಕಿಲೊಮೀಟರ್‌ ದೂರದಲ್ಲಿರುವ ರಂಗೇನಹಳ್ಳಿಗೆ ಹೇಮದಳ–ಅಂಬಲಗೆರೆ ಮಾರ್ಗವಾಗಿ ಅಥವಾ ಯರಬಳ್ಳಿ–ಕಂದಿಕೆರೆ ಮಾರ್ಗವಾಗಿಯೂ ತಲುಪಬಹುದು. ಸಂಶೋಧನಾ ವಿದ್ಯಾರ್ಥಿಗಳು, ಇತಿಹಾಸದ ಬಗ್ಗೆ ಆಸಕ್ತಿ ಇರುವವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು, ಪದವಿ ವಿದ್ಯಾರ್ಥಿಗಳು ವಸ್ತು ಸಂಗ್ರಹಾಲಯವನ್ನು ಉಚಿತವಾಗಿ ವೀಕ್ಷಿಸಬಹುದು ಎನ್ನುವ ಕೃಷ್ಣಪ್ಪ, ಯಾರ ಮನೆಯಲ್ಲಿಯಾದರೂ ಹಳೆಯ ಕಾಲದ ವಸ್ತುಗಳು ಇದ್ದರೆ ಸಂಗ್ರಹಾಲಯಕ್ಕೆ ಕೊಡಬಹುದು. ಅಂತಹವರ ಹೆಸರನ್ನು ಡೈರಿ ನಮೂದಿಸಲಾಗುವುದು ಎನ್ನುತ್ತಾರೆ.

(ಗಡಾರಿ ಕೃಷ್ಣಪ್ಪ: 88616–31901) ಪ್ರಜಾವಾಣಿ ಪತ್ರಿಕೆ ಸಂಗ್ರಹ!

ಸಾಮಾನ್ಯವಾಗಿ ದಿನಪತ್ರಿಕೆ ಓದುವವರು ಮರುದಿನ ಒಂದು ಕಡೆ ನೀಟಾಗಿ ಜೋಡಿಸಿ ಮೂರ್ನಾಲ್ಕು ತಿಂಗಳ ನಂತರ ರದ್ದಿ ಅಂಗಡಿಯವರಿಗೆ ಮಾರುವುದು ಸಾಮಾನ್ಯ. ಆದರೆ 50 ವರ್ಷಗಳಿಂದ ‘ಪ್ರಜಾವಾಣಿ’ ಓದುಗರಾಗಿರುವ ಕೃಷ್ಣಪ್ಪ, ಪತ್ರಿಕೆಯಲ್ಲಿ ಬರುವ ಅಂತರರಾಷ್ಟ್ರೀಯ ಘಟನಾವಳಿಗಳು, ಸಂಶೋಧನೆಗಳು, ಆವಿಷ್ಕಾರಗಳು, ಆರೋಗ್ಯಕ್ಕೆ ಸಂಬಂಧಿಸಿದ ಟಿಪ್ಸ್‌ಗಳು ಒಳಗೊಂಡಂತೆ ವಿವಿಧ ಅಂಶಗಳನ್ನು ದೇಶವಾರು ಕಡತ ಮಾಡಿ ಒ‍ಪ್ಪವಾಗಿ ಜೋಡಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ 200 ದೇಶಗಳ, ಭಾರತದ 30 ರಾಜ್ಯಗಳಲ್ಲಿ ದೊರೆಯುವ 180 ಗಿಡಮೂಲಿಕೆಗಳ ವಿವರ, ಐತಿಹಾಸಿಕ ಸ್ಥಳಗಳು, ಪ್ರಾಣಿ–ಪಕ್ಷಿ ಒಳಗೊಂಡಂತೆ ಅಲ್ಲಿನ ಅಪರೂಪದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಮಾಹಿತಿ, ಕರ್ನಾಟಕದ ದೊಡ್ಡ ದೊಡ್ಡ ಕೆರೆಗಳು, ಜಲಾಶಯಗಳು, ನದಿಗಳ ವಿವರಗಳಿವೆ. ಬ್ಯಾಂಕಿಂಗ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳಿವೆ.

ಯಶಸ್ವಿ ಸಾವಯವ ಕೃಷಿಕ

ಕೃಷ್ಣಪ್ಪನವರ ಕುಟುಂಬ ಸಾವಯವ ಕೃಷಿಗೆ ಹೆಸರುವಾಸಿ. ಸಾವಯವ ಪದ್ಧತಿಯಲ್ಲಿ ಆರ್ಕ, ನವಣೆ, ಊದಲು, ರಾಗಿ ಬೆಳೆಯುತ್ತಿದ್ದಾರೆ. ಕುಟುಂಬಕ್ಕೆ ಸಾಕಾಗುವಷ್ಟು ಭತ್ತವನ್ನೂ ಬೆಳೆಯುತ್ತಾರೆ. ಬೆಳೆಗಳಿಗೆ ರಾಸಾಯನಿಕ ಗೊಬ್ಬರ, ಔಷಧ ಬಳಸದೆ ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತಾರೆ. ಹೊಲದಲ್ಲಿ ಬೆಳೆದ ಶೇಂಗಾದಿಂದ ಅಡುಗೆಎಣ್ಣೆ, ತೋಟದಲ್ಲಿ ಬಂದ ಕೊಬ್ಬರಿಯಿಂದ ಎಣ್ಣೆಯನ್ನು ಮನೆಯಲ್ಲಿಯೇ ಇರುವ ಗಾಣದಿಂದ ತೆಗೆಯುತ್ತಾರೆ. ಗ್ರಾಹಕರು ಮನೆಗೇ ಬಂದು ಆರ್ಕ, ನವಣೆ, ಊದಲು ಅಕ್ಕಿಯನ್ನು ಖರೀದಿಸುತ್ತಾರೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದು, ಮೀನು ಕೃಷಿಯನ್ನು ನಡೆಸುತ್ತಿದ್ದಾರೆ.

ವಸ್ತುಸಂಗ್ರಹಾಲಯ 

ಪ್ರಜಾವಾಣಿ ಪತ್ರಿಕೆ ಸಂಗ್ರಹ!

ಸಾಮಾನ್ಯವಾಗಿ ದಿನಪತ್ರಿಕೆ ಓದುವವರು ಮರುದಿನ ಒಂದು ಕಡೆ ನೀಟಾಗಿ ಜೋಡಿಸಿ ಮೂರ್ನಾಲ್ಕು ತಿಂಗಳ ನಂತರ ರದ್ದಿ ಅಂಗಡಿಯವರಿಗೆ ಮಾರುವುದು ಸಾಮಾನ್ಯ. ಆದರೆ 50 ವರ್ಷಗಳಿಂದ ‘ಪ್ರಜಾವಾಣಿ’ ಓದುಗರಾಗಿರುವ ಕೃಷ್ಣಪ್ಪ ಪತ್ರಿಕೆಯಲ್ಲಿ ಬರುವ ಅಂತರರಾಷ್ಟ್ರೀಯ ಘಟನಾವಳಿಗಳು ಸಂಶೋಧನೆಗಳು ಆವಿಷ್ಕಾರಗಳು ಆರೋಗ್ಯಕ್ಕೆ ಸಂಬಂಧಿಸಿದ ಟಿಪ್ಸ್‌ಗಳು ಒಳಗೊಂಡಂತೆ ವಿವಿಧ ಅಂಶಗಳನ್ನು ದೇಶವಾರು ಕಡತ ಮಾಡಿ ಒ‍ಪ್ಪವಾಗಿ ಜೋಡಿಸಿದ್ದಾರೆ. ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ 200 ದೇಶಗಳ ಭಾರತದ 30 ರಾಜ್ಯಗಳಲ್ಲಿ ದೊರೆಯುವ 180 ಗಿಡಮೂಲಿಕೆಗಳ ವಿವರ ಐತಿಹಾಸಿಕ ಸ್ಥಳಗಳು ಪ್ರಾಣಿ–ಪಕ್ಷಿ ಒಳಗೊಂಡಂತೆ ಅಲ್ಲಿನ ಅಪರೂಪದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಮಾಹಿತಿ ಕರ್ನಾಟಕದ ದೊಡ್ಡ ದೊಡ್ಡ ಕೆರೆಗಳು ಜಲಾಶಯಗಳು ನದಿಗಳ ವಿವರಗಳಿವೆ. ಬ್ಯಾಂಕಿಂಗ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳಿವೆ.

ಯಶಸ್ವಿ ಸಾವಯವ ಕೃಷಿಕ ಕೃಷ್ಣಪ್ಪನವರ ಕುಟುಂಬ ಸಾವಯವ ಕೃಷಿಗೆ ಹೆಸರುವಾಸಿ. ಸಾವಯವ ಪದ್ಧತಿಯಲ್ಲಿ ಆರ್ಕ ನವಣೆ ಊದಲು ರಾಗಿ ಬೆಳೆಯುತ್ತಿದ್ದಾರೆ. ಕುಟುಂಬಕ್ಕೆ ಸಾಕಾಗುವಷ್ಟು ಭತ್ತವನ್ನೂ ಬೆಳೆಯುತ್ತಾರೆ. ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಔಷಧ ಬಳಸದೆ ಕೊಟ್ಟಿಗೆ ಗೊಬ್ಬರವನ್ನೇ ಬಳಸುತ್ತಾರೆ. ಹೊಲದಲ್ಲಿ ಬೆಳೆದ ಶೇಂಗಾದಿಂದ ಅಡುಗೆಎಣ್ಣೆ ತೋಟದಲ್ಲಿ ಬಂದ ಕೊಬ್ಬರಿಯಿಂದ ಎಣ್ಣೆಯನ್ನು ಮನೆಯಲ್ಲಿಯೇ ಇರುವ ಗಾಣದಿಂದ ತೆಗೆಯುತ್ತಾರೆ. ಗ್ರಾಹಕರು ಮನೆಗೇ ಬಂದು ಆರ್ಕ ನವಣೆ ಊದಲು ಅಕ್ಕಿಯನ್ನು ಖರೀದಿಸುತ್ತಾರೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದು ಮೀನು ಕೃಷಿಯನ್ನು ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.