ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ನೀರಲಕೇರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಸರ್ಕಾರಿ ಶಾಲೆಯ ಮುಂದೆ ‘ಸಂಪೂರ್ಣ ವಿಮಾ ಗ್ರಾಮ’ ಅನುದಾನ: ಸೋಲಾರ್ ವಿದ್ಯುತ್‌ದೀಪ’ ಎನ್ನುವ ಬೋರ್ಡ್ ಕಾಣಿಸಿತು. ಕುತೂಹಲದಿಂದ ಶಾಲೆಗೆ ಹೋಗಿ ವಿಚಾರಿಸಿದಾಗ ಗೊತ್ತಾಗಿದ್ದು ದಿನವಿಡೀ ವಿದ್ಯುತ್ ಇಲ್ಲದಿದ್ದರೂ ಸ್ಮಾರ್ಟ್‌ಕ್ಲಾಸ್ ಮೂಲಕ ಪಾಠ ಮಾಡುತ್ತಿದ್ದರು ರಘು ಹೊಸಟ್ಟಿ ಹಾಗೂ ಕೊಣ್ಣುರ್ ಮಾಸ್ತರರು.
ಇದು ತೋಟದ ಶಾಲೆಯಾದ ಕಾರಣ, ಸುತ್ತಮುತ್ತಲಿರುವ ಹೊಲ, ತೋಟಗಳಲ್ಲಿ ಕೃಷಿ ಕೆಲಸ ಮಾಡುವ ರೈತರು, ಕೂಲಿ ಕಾರ್ಮಿಕರ ಮಕ್ಕಳು ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆೆ ಕಲಿಯಲು ಬರುತ್ತಾರೆ. ಇವರಿಗೆ ಸ್ಮಾರ್ಟ್‌ಕ್ಲಾಸ್ ಮಾಡಬೇಕು ಎಂದರೆ ಕರೆಂಟಿನ ಸಮಸ್ಯೆ. ಈ ಸಮಸ್ಯೆ ನೀಗಿಸಬೇಕು ಎಂದರೆ ಸೋಲಾರ್ ವ್ಯವಸ್ಥೆ ಬೇಕಿತ್ತು. ಆದರೆ ಇದಕ್ಕೆ ಅಂದಾಜು ಒಂದು ಲಕ್ಷ ರೂಪಾಯಿಗಳಾದರೂ ಬೇಕಿತ್ತು. ಇಷ್ಟು ಹಣವನ್ನು ಹೇಗೆ ಜೋಡಿಸಿಬೇಕು ಎನ್ನುವುದು ತೋಚದೇ ಇದ್ದಾಗ ಆಪತ್ಬಾಂಧವನಂತೆ ಸಹಾಯ ಹಸ್ತ ಚಾಚಿದ್ದು ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ).
ಅದೇ ಗ್ರಾಮದವರಾದ ಎಲ್ಐಸಿ ಪ್ರತಿನಿಧಿಗಳಾದ ಬೀರಪ್ಪ, ಸಿದ್ದಪ್ಪ ಹಾಗೂ ದಾನೇಶ್ವರ ಅವರು ಊರಿನ ಪ್ರಮುಖರೊಂದಿಗೆ ಕುಳಿತು, ‘ಒಂದು ಆರ್ಥಿಕ ವರ್ಷದಲ್ಲಿ ನಮ್ಮ ಗ್ರಾಮದಿಂದ ನೂರು ಪಾಲಿಸಿಗಳನ್ನು ಮಾಡಿಸಿದರೆ, ಎಲ್ಐಸಿಯಿಂದ ವಿಮಾ ಗ್ರಾಮ ಯೋಜನೆ ಅಡಿಯಲ್ಲಿ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ ಸಿಗುತ್ತದೆ’ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು. ಈ ಅನುದಾನವನ್ನು ಶೌಚಾಲಯ, ಶುದ್ಧ ಕುಡಿಯುವ ನೀರು, ಸೋಲಾರ್ ದೀಪ ಅಳವಡಿಸಿಕೊಳ್ಳಲು ಅಥವಾ ಗ್ರಂಥಾಲಯ ಹೀಗೆ ಜನೋಪಯೋಗಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎನ್ನುವುದನ್ನೂ ಒತ್ತಿ ಹೇಳಿದರು. ಈ ಪ್ರಸ್ತಾಪ ಗ್ರಾಮದ ಮುಖಂಡರಿಗೂ ಸರಿ ಅನಿಸಿತು.
ತಮ್ಮ ಆರ್ಥಿಕ ಉಳಿತಾಯದ ಜೊತೆಗೆ ವಿಮಾ ರಕ್ಷಣೆ ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುವುದರಿಂದ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಪಾಲಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಗ್ರಾಮಸ್ಥರು ಬಂದರು. ಹೀಗೆ 2022-23ರ ಆರ್ಥಿಕ ವರ್ಷದಲ್ಲಿ ನೂರಕ್ಕೂ ಹೆಚ್ಚು ಪಾಲಿಸಿಗಳನ್ನು ಮಾಡಿಸಿ ಗುರಿಯನ್ನು ಸಾಧಿಸಿಯೇ ಬಿಟ್ಟರು!
ಈಗ ತೋಟದ ಶಾಲೆಯಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ಬೇಕಾದ ಕಡೆಗೆ ಲೈಟ್‌ಗಳು, ಫ್ಯಾನ್, ಸ್ಮಾರ್ಟ್‌ಕ್ಲಾಸ್, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೌಂಡ್ ಸಿಸ್ಟಮ್ ಹೀಗೆ ಎಲ್ಲದಕ್ಕೂ ಅನುಕೂಲವಾಗಿದೆ. ಇದರಿಂದ ವಿದ್ಯುತ್ ಉಳಿತಾಯ ಹಾಗೂ ಸೌರ ವಿದ್ಯುತ್ ಉಪಯೋಗಿಸಿಕೊಂಡ ಶಾಲೆ ಎಂದು ಹೆಗ್ಗಳಿಕೆ ಪಡೆದಿದೆ.
‘ನಮ್ಮ ಮಕ್ಕಳಿಗೆ ತುಂಬಾ ಅನುಕೂಲವಾಗಿದೆ. ಪಟ್ಟಣದ ಶಾಲೆಯ ಮಕ್ಕಳಿಗೆ ಸರಿಸಮನಾಗಿ ಪಾಠ ಕಲಿಯುವುದು ಖುಷಿಯ ವಿಚಾರವಾಗಿದೆ’ ಎಂದು ಗ್ರಾಮಸ್ಥರಾದ ಶಿವಾನಂದ ಕಳಸದ, ನಿಂಗಯ್ಯ ಒಡೆಯರ್, ಮಲ್ಲಪ್ಪ ಹಾವೋಜಿ ಹಾಗೂ ಭೀಮಪ್ಪ ನಂದ್ಯಾಳ ಹೆಮ್ಮೆಯಿಂದ ಹೇಳುತ್ತಾರೆ.
ಇದರಿಂದ ಮಕ್ಕಳು ಮುಂದಿನ ದಿನಗಳಲ್ಲಿ ನಾಯಕರಾಗಿ, ಅಧಿಕಾರಿಗಳಾಗಿ, ಡಾಕ್ಟರ್ ಅಥವಾ ಎಂಜಿನಿಯರ್ ಇಲ್ಲವೇ ಉತ್ತಮ ಕೃಷಿಕರಾಗಿ ಹೊರಹೊಮ್ಮುತ್ತಾರೋ ಗೊತ್ತಿಲ್ಲ. ಒಟ್ಟಾರೆಯಾಗಿ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರುವಂತೆ ಮಾಡುವುದು ಎಲ್ಲರ ಜವಾಬ್ದಾರಿ. ಇದನ್ನು ಈ ಗ್ರಾಮಸ್ಥರು ಹೆಚ್ಚಾಗಿ ಅರಿತಿದ್ದಾರೆ. ಇವರಿಗೆ ಅಭಿನಂದನೆಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.