ADVERTISEMENT

ವೈವಿಧ್ಯಮಯ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 1:00 IST
Last Updated 27 ಅಕ್ಟೋಬರ್ 2024, 1:00 IST
ಗ್ರಾಮಸ್ಥರಿಂದ ಹುಲಿದೇವರಿಗೆ ಪೂಜೆ ಸಲ್ಲಿಕೆ
ಗ್ರಾಮಸ್ಥರಿಂದ ಹುಲಿದೇವರಿಗೆ ಪೂಜೆ ಸಲ್ಲಿಕೆ   

ಕಾಲಚಕ್ರದಲ್ಲಿ ಮಳೆ ಅಬ್ಬರವಿಳಿದು ಹಗಲು ಕಿರಿದಾಗಿ ರಾತ್ರಿ ಹಿರಿದಾಗುವ ಚಳಿಗಾಲದ ಆರಂಭದಲ್ಲಿ ಬರುವ ಹಬ್ಬ ದೀಪಾವಳಿ. ಗೋಪೂಜೆ, ಹುಲಿದೇವರ ಪೂಜೆ ಮಾಡುವ ಪರಿಸರಸ್ನೇಹಿಯಾದ ಹಬ್ಬ. ಇದನ್ನು ಮಲೆನಾಡಿನ ಕೆಲ ಭಾಗಗಳಲ್ಲಿ ದೊಡ್ಡ ಹಬ್ಬ ಎಂದೇ ಕರೆಯುತ್ತಾರೆ.

ಈಗ ವಾಸಿಸುತ್ತಿರುವ ನಗರದಲ್ಲಿನ ಹಬ್ಬವೆಂದರೆ ಬಂಗಾರ, ಬಟ್ಟೆ, ಸಿಹಿ ತಿನಿಸು, ಪಟಾಕಿ...ಹೀಗೆ ಖರೀದಿ ಆಧಾರಿತವಾದ ಸಂತೋಷದ್ದು. ಹಬ್ಬ ಮುಗಿದಾಗ ಹಾದಿ ಬೀದಿಯಲ್ಲೆಲ್ಲ ಕಸದ ರಾಶಿ ಎನ್ನುವ ಬೇಸರ ಬೇರೆ. ಕಣ್ಣಿಗೆ ಕಾಣದ ದೇವರನ್ನು ಮಾತ್ರವಲ್ಲ, ನಮ್ಮ ಜೊತೆಗಿರುವ ಸಹಜೀವಿಗಳನ್ನೂ ಪೂಜಿಸುವ ಮಲೆನಾಡಿನ ಸರಳ ಸುಂದರ ದೊಡ್ಡ ಹಬ್ಬ.

ಮಳೆಗಾಲದ ಆರಂಭದಲ್ಲಿ ಅಂಗಳದಲ್ಲಿ ಓಳಿ ಹೊಯ್ದ ಮಣ್ಣಿನಲ್ಲಿ ಗೊಂಡೆರು ಹೂವಿನ (ಚೆಂಡು ಹೂವಿನ) ಬೀಜ ಹಾಕಿದರೆ ದೀಪಾವಳಿಯಲ್ಲಿ ಹೂವು ಸಿಗುತ್ತದೆ ಎಂಬ ಕರಾರುವಾಕ್ಕಾದ ಲೆಕ್ಕಾಚಾರದಲ್ಲಿ ದೊಡ್ಡ ಹಬ್ಬದ ತಯಾರಿ ಶುರುವಾಗುತ್ತಿತ್ತು. ಬೀಜ ಮೊಳೆತು ಹಸಿರು ಚಿತ್ತಾರದೆಲೆಯ ಗಿಡದಲ್ಲಿ ದೀಪ ಬೆಳಗಿದಂತೆ ಹೂವರಳುತ್ತಿತ್ತು. ನವರಾತ್ರಿ ಮುಗಿದು ವಾರ ಕಳೆದರೆ ಸಾಕು ದೀಪಾವಳಿ ಸ್ವಚ್ಛತಾ ಸಂಭ್ರಮ. ಮನೆಯ ಹೊರ ಗೋಡೆಗೆ ಹಳದಿ ಮಣ್ಣು, ಅಡುಗೆ ಮನೆಗೆ ಕೆಮ್ಮಣ್ಣು, ಕಟ್ಟಿಗೆ ಒಲೆ ಇರುವೆಡೆಗೆ ಕಪ್ಪು ಮಸಿಯನ್ನೆ ಸಾರಣೆ ಮಾಡುತ್ತಿದ್ದರು. ಅಣಲೆಕಾಯಿ ಮಸಿ, ಕೆಮ್ಮಣ್ಣು, ಹಳದಿ ಮಣ್ಣು ಎಲ್ಲಾ ನೀರಿನಲ್ಲಿ ಕದಡಿ ಹತ್ತಿಯ ಬಟ್ಟೆ ಮುಳುಗಿಸಿ ಮಣ್ಣಿನ ಗೋಡೆಗೆ ಬರೆಸುತ್ತಾ ಹೋಗುವ ಕೆಲಸದಲ್ಲಿ ಹಿರಿಯರೊಂದಿಗೆ ಕಿರಿಯರೂ ಭಾಗಿ. ಕೊಟ್ಟಿಗೆ ಎದುರಿನ ಗೋಡೆಗೆ, ಬಾವಿಕಟ್ಟೆಗೆ, ತುಳಸಿಕಟ್ಟೆಗೆ ಕೆಮ್ಮಣ್ಣು ಬಳಿದು ಶೇಡಿಯಲ್ಲಿ (ಬಿಳಿಯ ಮಣ್ಣು) ಹಸೆಚಿತ್ರವನ್ನೋ, ರಂಗೋಲಿಯನ್ನೋ ಬಿಡಿಸುವ ಅಮ್ಮಂದಿರು ಹೆಣ್ಣುಮಕ್ಕಳಿಗೂ ಇದನ್ನು ಕಲಿಸುತ್ತಿದ್ದರು.

ADVERTISEMENT

ಬೂರ‍್ಗಳವೆಂಬ ಮೋಜು

‘ಬಲಿವೇಂದ್ರನ ರಾಜ್ಯದಲಿ ಮಗೆಯ ಹಣ್ಣಿನ ತ್ವಾರಣವೇ ಮಗೆಯ ಹಣ್ಣನು ಮೆಟ್ಟಿ ಇಳಿದು ಬಂದನೆ ಬಲಿವೇಂದ್ರ’ ಎನ್ನುತ್ತಾ ಹಾಡು ಹೇಳಿ ಬಾವಿಯ ನೀರು ಸೇದಿ ಕಲಶ ತುಂಬಿ ದೇವರ ಮನೆಯಲ್ಲಿ ಮಣೆಯ ಮೇಲೆ ತಂದಿಟ್ಟಾಗ ಭೂರೆ ಹಬ್ಬ ಶುರುವಾಗುತ್ತಿತ್ತು. ಉದ್ದದ ಮುಳ್ಳು ಸೌತೆಕಾಯಿಗೂ ಚಿತ್ತಾರ ಬರೆದು ಪೂಜೆಗಿಟ್ಟು ಮೇಲೊಂದು ಅಡಿಕೆ ಸಿಂಗಾರ ಮುಡಿಸುತ್ತಿದ್ದರು. ಮಕ್ಕಳಿಗೆ ತಲೆಗೆ ಎಣ್ಣೆ ಹಾಕಿ ಆರತಿ ಎತ್ತುತ್ತಿದ್ದರು. ಎಣ್ಣೆ ಹಚ್ಚಿದ ಮೈಗೆ ಹಂಡೆಯಲ್ಲಿ ಕಾಸಿದ ಬಿಸಿನೀರಿನ ಸ್ನಾನ. ಅಂದು ಗೋವೆಕಾಯಿ ಕಡುಬಿನೂಟ. ಹಿರಿಯರೆಲ್ಲ ‘ಒಂದ್ಗಳಿಗೆ ಆರಾಮ್ ಮಾಡನ’ ಎಂದು ಹಾಸಿಗೆಗೆ ತಲೆ ಕೊಟ್ಟರೆ ‘ಈ ಸಮಯಾ ಆನಂದಮಯಾ’ ಎನ್ನುತ್ತ ನಾವು ಎಲ್ಲರ ಮನೆಯ ಹಿತ್ತಿಲು, ತೋಟದಲ್ಲಿ ಕಳ್ಳ ಹೆಜ್ಜೆಯನ್ನಿಟ್ಟು ಸರ್ಕೀಟು ಹೊಡೆದು, ಕಣ್ಣಿನ ಕ್ಯಾಮೆರಾದಲ್ಲಿ ಎಳೆ ಸೌತೆಕಾಯಿ, ಸೇವಂತಿಗೆ ಹೂವು, ಡೇರೆ ಹೂವು, ಪೇರಲೆ ಹಣ್ಣಿನ ಫೋಟೊ ಹೊಡೆದುಕೊಂಡು ರಾತ್ರಿಯ ಬೂರ‍್ಗಳವಿಗೆ ಸ್ಕೆಚ್ ಹಾಕುತ್ತಿದ್ದೆವು.

ಸಂಜೆಯೊಳಗೆ ಚೆಂಡು ಹೂವು, ಪಚ್ಚೆತೆನೆ, ಹಣ್ಣಡಿಕೆ, ವೀಳ್ಯದೆಲೆಗಳನ್ನು ಬುಟ್ಟಿಯಲ್ಲಿ ತಂದಿಡುತ್ತಿದ್ದರು. ರಾತ್ರಿ ಬಚ್ಚಲು ಬಳ್ಳಿಗೆ ದಬ್ಬಣ ಸುರಿದು ಹೂವಿನ ಮಾಲೆಯನ್ನು, ಅಡಿಕೆ ಮಾಲೆಯನ್ನೂ ಬೇರೆಬೇರೆಯಾಗಿ ಕಟ್ಟುವ ಕೆಲಸ, ಹಿರಿಯರು ಕಲಿಸಲೆತ್ನಿಸಿದರೆ ಕಲಿಯುವ ನಮಗೋ ಕೆಲಸ ಮಾಡಲಾರದಷ್ಟು ಸುಸ್ತು! ಸಣ್ಣ ‘ಕೂ’ ಎನ್ನುವ ಸದ್ದಿಗಾಗಿ ಕಾಯುವ ಕಿವಿ. ಮೆಲ್ಲನೆ ಹೊರಗೆ ಹೋಗಿ ನೋಡಿದರೆ ಗೆಳತಿಯರ ದಂಡು. ಬೂರ‍್ಗಳವು ಮಾಡಲಾರಂಭಿಸುತ್ತಿದ್ದೆವು. ಕುರುಡು ಟಾರ್ಚ್‌ ಬೆಳಕಿನಲ್ಲಿ ಹಗಲಿನಲ್ಲಿ ನೋಡಿಟ್ಟುಕೊಂಡಿದ್ದ ಎಳೆ ಸೌತೆಕಾಯನ್ನು ಕೊಯ್ದು ಲಂಗದಲ್ಲಿ ತಿಕ್ಕಿ ಮುಳ್ಳುದುರಿಸಿ ಮುರಿದು ‘ಎಷ್ಟು ರುಚಿ ಇದ್ದು’ ಎನ್ನುತ್ತಾ ಮುಕ್ಕುತ್ತಿದ್ದೆವು. ಕೈಗೆ ಸಿಕ್ಕ ಸಿಕ್ಕ ಹೂವು ಹಣ್ಣು ಎಲ್ಲವನ್ನು ಕದಿಯುವಾಗ ಹಿರಿಯರ ಕೈಯಲ್ಲಿ ಸಿಕ್ಕಿಬಿದ್ದರೂ ‘ಮರ್ಯಾದಿಲ್ಯನ್ರೆ ಕದಿಯಲ್ಲೆ ಬಂಜ್ರಿ’ ಎಂದು ತುಸುವೆ ಬೈದು ಹುಡುಗಿಯರಾದ್ದರಿಂದ ಶಿಕ್ಷೆಯಲ್ಲಿ ರಿಯಾಯಿತಿ ತೋರುತ್ತಿದ್ದರು. ತಪ್ಪು ಮಾಡಿದರೂ ಅಪರಾಧ ಪ್ರಜ್ಞೆ ಕಾಡದ, ಸಾಹಸ ಮೆರೆದ ಸಂದರ್ಭ ಬೂರ‍್ಗಳವು!. ಬಳ್ಳಿ ಎಂದು ಹಾವು ಹಿಡಿದವರದ್ದು, ಎಳನೀರು ಕದಿಯಲು ಹೋದವರು ಗಂಟೆಗಟ್ಟಲೇ ಮರದ ಮೇಲೆಯೇ ಕುಳಿತವರದ್ದು, ಗದ್ದೆಯಲ್ಲಿ ಜಾರಿಬಿದ್ದು ಮೈ ಕೈ ಕೆಸರಾಗಿಸಿಕೊಂಡವರದ್ದು…ಹೀಗೆ ಅಮಾವಾಸ್ಯೆಯಂದು ರಾತ್ರಿ ಲಕ್ಷ್ಮಿಪೂಜೆಯ ನೆಪದಲ್ಲಿ ನಾಲ್ಕಾರು ಜನ ಸೇರಿದಲ್ಲೆಲ್ಲ ಬೂರ‍್ಗಳವಿನ ರಂಜನೀಯ ಕಥೆಗಳು.

ಪಾಡ್ಯದ ದಿನ ಗೋಪೂಜೆಯೇ ಪ್ರಧಾನವಾದದ್ದು. ಕೊಟ್ಟಿಗೆಯಲ್ಲಿರುವ ಗಂಗೆ, ಗೌರಿ, ಸೀತೆ, ಪುಣ್ಯಕೋಟಿ.. ಹಂಡಿ, ಮುಂತಾದ ದನ ಕರುಗಳಿಗೆಲ್ಲ ಅಂದು ಸ್ನಾನ ಭಾಗ್ಯ.. ಕರುಗಳಿಗೆ ಬಿಸಿನೀರು ದನಗಳಿಗೆ ತಣ್ಣೀರು ಎರಚಿ ತೊಳೆಯುತ್ತಿದ್ದರು. ಅವುಗಳೋ ಕಟ್ಟಿದಲ್ಲಿಯೇ ಜಿಗಿದಾಡಿ ಪ್ರತಿಭಟನೆ ತೋರಿ, ಬಾಲ ಬೀಸಿ ನೀರು ತೊಳೆಯುವ ಗಂಡಸರ ಮೈಯನ್ನೇ ನೆನೆಸುವ ಪರಿ ನೋಡಿದಾಗ ನಮಗೆ ಭರ್ಜರಿ ಮೋಜು. ‘ಮಕ್ಕಳೇ, ಈ ಹಬ್ಬದಲ್ಲಿ ಮಾಡುವ ಅಡುಗೆ ನಿಮಗಾಗಿ ಮಾಡಿದ್ದಲ್ಲ. ದನಕರುಗಳಿಗೆ’ ಎಂದು ಆಯಿ ಹೇಳಿದರೆ, ಮೂತಿ ಉಬ್ಬಿಸುವ ನಮಗಂದು ದನಕರುಗಳ ಯೋಗದ ಬಗ್ಗೆ ಅಷ್ಟಿಷ್ಟು ಹೊಟ್ಟೆಕಿಚ್ಚು. ಬಾಳೆಕಾಯಿ, ತೊಂಡೆಕಾಯಿ ಸೇರಿಸಿ ಮಾಡಿದ ಅರಿಸಿನದ ದೋಸೆ, ಘಮಘಮಿಸುವ ಕಡ್ಲೆಬೇಳೆ ಹೋಳಿಗೆ...ನೋಡುತ್ತಾ ನೈವೇದ್ಯವಾಗುವವರೆಗೆ ತಿನ್ನದೇ ಇರುವುದು ಸಂಯಮದ ಪಾಠ!.

ಮೇಯಲು ಬಿಟ್ಟ ದನಕರುಗಳು ಸುರಕ್ಷಿತವಾಗಿ ಹಿಂದೆ ಬರಲಿ ಎಂಬ ಆಶಯದೊಂದಿಗೆ ಬೆಟ್ಟದಲ್ಲಿರುವ ವಿಷ್ಣು ಸ್ವರೂಪಿಯಾದ ಹುಲಿದೇವರ ಮುಂದೆ ಹೊಸ ದಾಬಿನ ಕಣ್ಣಿಗಳನ್ನಿಟ್ಟು ಊರಿನವರೆಲ್ಲ ಸೇರಿ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ ನಂತರ ಕೊಟ್ಟಿಗೆಯಲ್ಲಿ ಗೋಪೂಜೆ. ಅಪ್ಪನ ಮಂತ್ರ ಶುರುವಾದಾಗ ಅಮ್ಮ ‘ತಂದಳೆ ಗೋಗ್ರಾಸವಾ ದ್ರೌಪತಾ ದೇವಿ ಚೆಂದದ ಹೆಜ್ಜೆಯನಿಡುತಾ..’ ಎಂದು ಹಾಡು ಹೇಳುವುದರ ಜೊತೆಗೆ ನಮ್ಮ ಜಾಗಟೆಯ ನಾದ. ಗಲಾಟೆಯಿಂದ ಗಾಬರಿಯಾಗುತ್ತಿದ್ದ ದನಕರುಗಳನ್ನು ಮೈ ಮುಟ್ಟಿ ಕೊರಳು ತಬ್ಬಿ ಸಂತೈಸುತ್ತಿದ್ದೆವು. ಶೇಡಿ ಕೆಮ್ಮಣ್ಣುಗಳನ್ನು ಬೇರೆ ಬೇರೆಯಾಗಿ ನೀರಿನಲ್ಲಿ ಕದಡಿ ದನಕರುಗಳ ಮೈಮೇಲೆ ಸಿದ್ದೆಯ ಹಿಂಭಾಗದಿಂದ ಬೆಚ್ಚು ಹೊಯ್ಯುತ್ತಿದ್ದೆವು (ಅಚ್ಚು ಹಾಕುತ್ತಿದ್ದೆವು). ಪ್ರತಿ ಗೋವಿನ ಕೊರಳಿಗೂ ಚೆಂಡು ಹೂವಿನ, ಅಡಿಕೆಯ ಮಾಲೆಗಳ ಅಲಂಕಾರ.

ಪೂಜೆಯ ಅಂತ್ಯದಲ್ಲಿ ಹೋಳಿಗೆ, ದೋಸೆ, ಚರುವುಗಳನ್ನು ಒಂದೊಂದು ಬುಟ್ಟಿಯಲ್ಲಿ ತುಂಬಿ ಪ್ರತಿ ಹಸುವಿನ ಮುಂದಿಟ್ಟಾಗ ಸಿಟ್ಟಿನಿಂದ ಬುಸುಗುಡುವ ಹಸುಗಳೂ ಶಾಂತವಾಗುತ್ತಿದ್ದವು. ಗೋಪೂಜೆ ಮುಗಿದ ಮೇಲೆ ಸುತ್ತು ಪೂಜೆ. ಬಾವಿ, ಹೊಸ್ತಿಲು, ಕೃಷಿ ಪರಿಕರಗಳು, ಪಣತ, ತುಳಸಿಕಟ್ಟೆ, ವಾಹನಗಳು, ಒಲೆ... ಹೀಗೆ ಎಲ್ಲವುಗಳನ್ನೂ ಪೂಜಿಸುತ್ತಿದ್ದರು. ಅಂದು ಕುಡಿಬಾಳೆಲೆಯಲ್ಲಿ ಬಡಿಸಿದ ಹೋಳಿಗೆಯೂಟ ಸವಿಯುವ ಯೋಗ.

ಸಂಜೆ ಊರ ಹೊರಗಿರುವ ಶಿವನ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಊರಿನವರೆಲ್ಲ ಪೂಜೆ ಸಲ್ಲಿಸುವ ಕ್ರಮ ಇತ್ತು. ದೇವಸ್ಥಾನದ ಎದುರಿನ ಬಯಲಿನಲ್ಲಿ ಊರಿನಲ್ಲಿರುವ ಎಲ್ಲರ ಮನೆಯ ಹೋರಿ, ಎತ್ತುಗಳಿಗೆ ಚೌಲ ಕಟ್ಟಿ ಅಲಂಕರಿಸಿ ಬಿಡುತ್ತಿದ್ದರು. ಗೋವಳ ಸಡಿಲವಾಗಿ ಹಿಡಿದ ಹಗ್ಗವನ್ನು ಲೆಕ್ಕಿಸದೇ ಅವು ಚಂಗು ಚಂಗೆಂದು ಜಿಗಿದಾಡುತ್ತಿದ್ದವು. ಸಾಹಸಿ ಯುವಕರು ಅವುಗಳ ಕೊರಳಿನಲ್ಲಿರುವ ಹಣ್ಣಡಿಕೆ ಮಾಲೆಗಳನ್ನು ಹರಿಯುತ್ತಿದ್ದರು. ಹೆಚ್ಚು ಮಾಲೆಗಳನ್ನು ಹರಿದವ ಎಲ್ಲರ ಕಣ್ಣಿನಲ್ಲಂದು ಪರಾಕ್ರಮಿ.

ಸಂಜೆ ಗದ್ದೆಯಿಂದ ತಂದ ಭತ್ತದ ತೆನೆಗಳನ್ನು ಮನೆ ದೇವರ ಮಂದಿಟ್ಟು ಪೂಜಿಸಿ ‘ಕದಿರ ತಂದ ಸುಗುಣಬಾಲ ಭರದಿ ನೋಡಿರೆ….’ ಎಂದು ಹಾಡುತ್ತಿದ್ದರು. ಸಿಂಡ್ಲೆಕಾಯಿ ಆರತಿ ಮಾಡುತ್ತಿದ್ದರು. ಭತ್ತದ ಕದಿರು, ಮಾವಿನೆಲೆಗಳನ್ನು ನಾರಿನಲ್ಲಿ ಕಟ್ಟಿ ಹೊಸ್ತಿಲಿಗೆ ತೋರಣ ಕಟ್ಟುತ್ತಿದ್ದರು. ಮೊಳ ಉದ್ದದ ಕೋಲುಗಳಿಗೆ ಬಟ್ಟೆ ಸುತ್ತಿ ಎಣ್ಣೆಯಲ್ಲಿ ಅದ್ದಿ ದೊಂದಿಗಳನ್ನು ತಯಾರಿಸಿ, ಬೆಳಗಿಸಿ, ಸಮೃದ್ಧಿಯ ಸಂಕೇತವಾದ ಗೊಬ್ಬರ ಗುಂಡಿ ಅಂಚಿನಲ್ಲಿ, ಹೊಸ್ತಿಲ ಮುಂದೆ ತುಳಸಿಯ ಮುಂದೆ ಚುಚ್ಚಿಡುತ್ತಿದ್ದರು. ರಾತ್ರಿ ಮನೆಯ ಮುಂದೆ ತುಳಸಿಕಟ್ಟೆಯೆದುರು, ದೇವರ ಮುಂದೆ ಸಾಲಾಗಿ ಹಣತೆಗಳನ್ನು ಬೆಳಗಿ, ತಮವನ್ನು ಕಳೆದು ಬಾಳು ಬೆಳಕಾಗಲಿ ಎಂದು ಪ್ರಾರ್ಥಿಸುತ್ತಿದ್ದರು. ಬಲಿವೇಂದ್ರನನ್ನು (ಪೂಜೆಗೆ ಬಳಸಿದ ಅಡಿಕೆ ಸಿಂಗಾರ) ‘ಮುಂದಿನ ವರ್ಷ ಬಾರೋ’ ಎಂದು ಮನೆ ಮಾಡಿಗೆ ಒಗೆದರೆ ಹಬ್ಬಕ್ಕೆ ಮಂಗಳ ಹಾಡಿದಂತಾಗುತ್ತಿತ್ತು. ಪೂಜೆಗೆ ಬಳಕೆಯಾದ ಬಾಳೆಕಂದು, ಮಾವಿನೆಲೆ, ಹೂವುಗಳೆಲ್ಲ ಮರುದಿನಗೊಬ್ಬರ ಗುಂಡಿಗೆ ಸೇರಿ ನಿಧಾನವಾಗಿ ಕಳಿತು ತೋಟದ ಮರಗಳನ್ನು ಕಸುವಾಗಿಸಲು ನೆರವಾಗುತ್ತಿತ್ತು.

ಹಲವು ಊರುಗಳಲ್ಲಿ ಇಂದಿಗೂ ಸರಿ ಸುಮಾರಾಗಿ ಹೀಗೆಯೇ ಹಬ್ಬದ ಆಚರಣೆ ನಡೆಯುತ್ತಿದೆಯಾದರೂ, ಇತ್ತೀಚೆಗೆ ಮಲೆನಾಡಿನ ಕೃಷಿಕರ ಮನೆಯ ಅವಿಭಾಜ್ಯ ಅಂಗವಾಗಿದ್ದ ಕೊಟ್ಟಿಗೆಗಳೇ ಕಾಲನ ಕಾಲ್ತುಳಿತಕ್ಕೆ ಸಿಕ್ಕು ನಶಿಸುತ್ತಿವೆ. ಗೋವುಗಳಿಲ್ಲದ, ಗೋಪೂಜೆ ಮಾಡದ ಮನೆಗಳಲ್ಲೀಗ ದೊಡ್ಡ ಹಬ್ಬ ದೀಪಾವಳಿಯಾಗಿ ರೂಪಾಂತರಗೊಳ್ಳುತ್ತಿರಬಹುದು. ಕಾಲಾಯ ತಸ್ಮೈ ನಮಃ. ಜ್ಞಾನದ ಸಂಕೇತವಾದ ಬೆಳಕು ನಿತ್ಯದ ಹಂಬಲವಾಗಲಿ.

ಹೋರಿ ತಡೆಯುವ ಸ್ಪರ್ಧೆ ಚಿತ್ರ: ನಾಗೇಂದ್ರ ಮುತ್ಮುರ್ಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.