ಮಲೆನಾಡಿನ ಮಣ್ಣಿನ ಮೇಲೆ ಮಳೆ ಮುತ್ತಿಕ್ಕಿ, ರಾತ್ರಿ ಗುಡುಗು, ಸಿಡಿಲಿನ ಅಬ್ಬರದ ಅಲಾರಾಮಿಗೆ ಮಲೆಯ ಮಣ್ಣಿನ ಮಕ್ಕಳಿಗೆ ಅಣಬೆಯ ನೆನಪು ಹಸಿಯಾಗಿ ಬೆಳಗಿನ ಜಾವಕ್ಕಾಗಿ ಕಾಯದೆ ಇರಲಾರರು. ಬೆಳಗಿನ ಚಹಾ ಕುಡಿಯುವ ಮೊದಲೇ ಅಣಬೆಯ ಅನುಭವವಿರುವ ಮಲೆನಾಡಿಗರು ಕೊಡ್ಲಗದ್ದೆಯ ಇಕ್ಕಲ ಬೆಟ್ಟ, ಖಂಟಗಾರಿನ ಸೊವೆಹಕ್ಕಲು, ನಂದೊಳ್ಳಿಯ ಕುಂಬ್ರಿಬೆಟ್ಟ, ತಟಗಾರಿನ ಗವಿಯನಪಾಲು, ಹೊಳೆಮಕ್ಕಿಯ ದನದಗುಡ್ಡ, ಇಡಗುಂದಿಯ ದೊಡ್ಡಹಕ್ಕಲುಗಳನೆಲ್ಲಾ ಸುತ್ತಾಡಿ ಅಣಬೆ ಬೇಟೆಗೆ ‘ಜೈ’ ಎಂದು ಮನೆ ಸೇರುವಾಗ ಬುಟ್ಟಿ ತುಂಬ ಬಾಯಲ್ಲಿ ನೀರೂರಿಸುವ ಅಣಬೆಯೋ ಅಣಬೆ!
ಸಸ್ಯ ವರ್ಗಕ್ಕೆ ಸೇರಿದ ಅಣಬೆಗೆ ಪತ್ರಹರಿತ್ತು ಇಲ್ಲದ ಕಾರಣ, ತಾನೇ ಆಹಾರ ತಯಾರಿಸಿ ಕೊಳ್ಳಲಾಗದ ಪರಾವಲಂಬಿ. ಫಂಗೈನ ಜಾತಿಗೆ ಸೇರಿದ ಅಣಬೆ ಯೂಕಾರ್ಯೋಟ ಕುಟುಂಬದ್ದಾಗಿದ್ದು ಮೈಕೋಟ ಸಾಮ್ರಾಜ್ಯಕ್ಕೆ ಸೇರಿದೆ. ಇವುಗಳಲ್ಲಿ ಕೆಲವೇ ಅಣಬೆಗಳನ್ನು ಬಿಟ್ಟರೆ ಉಳಿದವು ವಿಷಕಾರಿ. ಆ ಕಾರಣದಿಂದಲೆ ಚೀನಾ ದೇಶದಲ್ಲಿ ಅಣಬೆ ಸೇವಿಸಿ ಪ್ರತಿ ವರುಷ ಜನ ಸಾಯುತ್ತಾರೆ. ವಿಟಮಿನ್ ಟಿ2 ಹಾಗೂ ಡಿ ಜೀವನ ಸತ್ವವಿರುವ ಅಣಬೆ ಮಧುಮೇಹಿಗಳಿಗೆ ಔಷಧವಿದ್ದಂತೆ. ಸಾವಿರಾರು ಜಾತಿಯ ಅಣಬೆಗಳಲ್ಲಿ ಸುಮಾರು 20 ಜಾತಿಯ ಅಣಬೆಗಳನ್ನು ತಿನ್ನಲು ಬಳಸುತ್ತಾರೆ.
ತಿನ್ನುವ ಹಾಗೂ ತಿನ್ನದೆ ಇರುವ ಎರಡೂ ಬಗೆಯ ಅಣಬೆಗಳನ್ನು ನೋಡಿ ಆನಂದಿಸುವುದೇ ಸೊಗಸು. ಅವುಗಳ ಆಕರ್ಷಣೆ ಅಭೂತಪೂರ್ವವಾದದ್ದು. ಅದರ ಆಕಾರಕ್ಕೆ ಅನುಗುಣವಾಗಿ ಸ್ಥಳೀ ಯರು ತಮ್ಮದೆ ರೀತಿಯಲ್ಲಿ ಅವುಗಳಿಗೆ ಹೆಸರಿಟ್ಟಿದ್ದಾರೆ. ಹೆಗ್ಲಿ ಅಣಬೆ, ಕಲ್ಲಣಬೆ, ಹಾಲಣಬೆ, ಮರಳಣಬೆ, ಹಪ್ಪಳಣಬೆ, ಬೆಳ್ಳಣಬೆ, ಮರಣಬೆ, ಮುತ್ತಣಬೆ, ಬೋಗಿ ಅಣಬೆ, ದೋಸೆ ಅಣಬೆ, ಇಡ್ಲಣಬೆ, ಶೃಂಗಾರ ಅಣಬೆ–ಹೀಗೆ. ಸಸ್ಯ ಮತ್ತು ಮಾಂಸಾಹಾರಿಗಳು ಇಷ್ಟ ಪಡುವ ಅಣಬೆಗೆ ಮಾಂಸಾಹಾರಿ ಮಸಾಲೆಯನ್ನೆ ಹೆಚ್ಚು ಬಳಸುತ್ತಾರೆ. ಸಾರು, ಪಲ್ಲೆ, ಫ್ರೈ ಮುಂತಾದ ರುಚಿಕಟ್ಟಾದ ಅಡುಗೆಯನ್ನು ಅಣಬೆಯಿಂದ ತಯಾರಿಸಿ ಮೆಲ್ಲುತ್ತಾರೆ.
ನಿಸರ್ಗದತ್ತವಾದ ಅಣಬೆ ಮಳೆಗಾಲದಲ್ಲಿ ಮಾತ್ರ ದೊರೆತರೆ, ಅಣಬೆ ಬೆಳೆಯುವುದನ್ನೆ ಉದ್ಯಮವಾಗಿಸಿ ಕೊಂಡವರಲ್ಲಿ ಎಲ್ಲ ಕಾಲದಲ್ಲಿಯೂ ಅಣಬೆ ದೊರೆಯುತ್ತದೆ. ಆದರೆ ನಿಸರ್ಗದತ್ತವಾದ ಅಣಬೆ ರುಚಿ ಹಾಗೂ ಸತ್ವದಲ್ಲಿ ಮೇಲು. ಕೃಷಿಕ ಬೆಳೆದ ಅಣಬೆಯ ಬೆಲೆ ಒಂದು ಕೆ.ಜಿ.ಗೆ ₹200 ರಿಂದ 300 ಇದ್ದರೆ ನಿಸರ್ಗದತ್ತವಾದ ಒಂದು ದೊಡ್ಡ ಅಣಬೆ ಕೆಲವೊಮ್ಮೆ ಐದು ರೂಪಾಯಿಗೆ ಮಾರಾಟವಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಜೊಯ್ಡಾ, ಹಳಿಯಾಳ, ಯಲ್ಲಾಪುರ, ಸಿರ್ಸಿ, ಸಿದ್ದಾಪುರ, ಭಟ್ಕಳ ಪೇಟೆಯಲ್ಲಿ ಮಾರಾಟಕ್ಕಾಗಿ ಅಣಬೆ ಹೇರಳವಾಗಿ ಮಳೆಗಾಲದಲ್ಲಿ ಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.