‘ಟಕ್.. ಟಕ್.. ಟಕ್.. ಟಕ್…’ ಎಂದು ಸದ್ದು ಮಾಡುತ್ತಾ ಸಾಗುವ ಟಾಂಗ ಮೇಲೆ ಕುಳಿತು ಮೈಸೂರಿನ ಅರಮನೆಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಮಜಾ! ದಸರಾ ಸಮಯದಲ್ಲಿ ಈ ಖುಷಿ ದುಪ್ಪಟ್ಟಾಗುತ್ತದೆ. ಇದಕ್ಕೆ ಕಾರಣ ನಗರವನ್ನು ಮದುವಣಗಿತ್ತಿಯಂತೆ ಸಿಂಗರಿಸಿರುವ ಬಗೆ ಬಗೆಯ ದೀಪಾಲಂಕಾರ…
ಪ್ರವಾಸಿಗರು ಮೈಸೂರನ್ನು ಕಾರಿನಲ್ಲಿ ಕುಳಿತು ನೋಡಬಹುದು, ಇಲ್ಲವೇ ಬೈಕ್, ಆಟೊ ಏರಿ ನಗರ ದರ್ಶನ ಮಾಡಬಹುದು. ಇದೂ ಬೇಡ ಎಂದರೆ, ‘ಟ್ರಿನ್.. ಟ್ರಿನ್..’ ಸೈಕಲ್ ಹತ್ತಿ ಸುತ್ತಬಹುದು. ಆದರೆ, ಇವೆಲ್ಲವನ್ನೂ ಮೀರಿ ವಿಶೇಷ ಅನುಭವ ನೀಡುವುದು ಟಾಂಗ ಸವಾರಿ!
ಹೌದು, ಮೈಸೂರಿನ ಇತಿಹಾಸದೊಂದಿಗೆ ಮಿಳಿತವಾಗಿರುವ ಟಾಂಗ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ತನ್ನನ್ನು ಒಂದಷ್ಟು ಆಕರ್ಷಕವಾಗಿಸಿಕೊಂಡು ನಗರ ನೋಡಲು ಬರುವ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತಿದೆ.
ಪ್ರವಾಸಿಗರನ್ನು ತಮ್ಮತ್ತ ಸೆಳೆದು ನಗರ ಸುತ್ತಿಸುವ ಸಲುವಾಗಿ ಟಾಂಗಗಳಿಗೆ ಟಾಂಗವಾಲಾಗಳು ಹೊಸ ಸ್ಪರ್ಶ ನೀಡಿದ್ದಾರೆ. ಅಂದರೆ, ಬಣ್ಣ ಬಣ್ಣದ ದೀಪಾಲಂಕಾರ ಮಾಡಿದ್ದಾರೆ. ಝಗಮಗಿಸುವ ಟಾಂಗಗಳಲ್ಲಿ ಕುಳಿತು ನಗರ ಸುತ್ತುವುದನ್ನು ಪ್ರವಾಸಿಗರು ಇಷ್ಟಪಡುತ್ತಾರೆ. ಮಕ್ಕಳಿಗಂತೂ ಟಾಂಗ ಸವಾರಿ ದುಪ್ಪಟ್ಟು ಖುಷಿ ನೀಡುತ್ತದೆ. ‘ಮೈಸೂರಿಗೆ ಬರುವ ಪ್ರವಾಸಿಗರು ಅದರಲ್ಲೂ ಕೇರಳ, ಮಹಾರಾಷ್ಟ್ರ ಹಾಗೂ ಉತ್ತರ ಭಾರತದವರಿಗೆ ಟಾಂಗ ಸವಾರಿ ಎಂದರೆ ಅಚ್ಚುಮೆಚ್ಚು ಎನ್ನುತ್ತಾರೆ’ ಟಾಂಗವಾಲಾ ವೆಂಕಟೇಶ್.
‘ಟಾಂಗದಲ್ಲಿ ಕುಳಿತು ನಗರವನ್ನು ಸುತ್ತುವಂತಹ ಅನುಭವ ಮೈಸೂರಿನಲ್ಲಿ ಸಿಗುತ್ತಿದೆ. ಮಕ್ಕಳು-ಪತ್ನಿಯೊಂದಿಗೆ ಟಾಂಗದಲ್ಲಿ ಕುಳಿತು ನಗರ ಪ್ರದಕ್ಷಿಣೆ ಹಾಕಿದ್ದು ಮರೆಯಲಾಗದ ಕ್ಷಣಗಳು. ಅದರಲ್ಲೂ ದಸರಾ ವೇಳೆ ಮೈಸೂರಿಗೆ ಬಂದು ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ರಸ್ತೆಗಳು, ಕಟ್ಟಡಗಳು, ಸರ್ಕಲ್‌ಗಳು ಹಾಗೂ ಅರಮನೆಯನ್ನು ನೋಡಿ ಮಕ್ಕಳು ತುಂಬಾ ಖುಷಿಪಟ್ಟರು’ ಎಂದು ಕೇರಳದ ಪ್ರವಾಸಿ ದೀಪಕ್ ಹೇಳಿದರು.
ಈಗ ಟಾಂಗ ಮೈಸೂರು ಪ್ರವಾಸೋದ್ಯಮದ ಭಾಗವಾಗಿ ಬದಲಾಗಿದೆ. ವರ್ಷದಿಂದ ವರ್ಷಕ್ಕೆ ಟಾಂಗಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಇದರ ಸವಾರಿ ಕುರಿತಾದ ಪ್ರವಾಸಿಗರ ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ. ಮೈಸೂರಿಗೆ ಬರುವ ಪ್ರವಾಸಿಗರು ಟಾಂಗದಲ್ಲಿ ಕುಳಿತು ಅರಮನೆ ಸುತ್ತು ಹಾಕುವುದನ್ನು ಮಿಸ್ ಮಾಡುವುದಿಲ್ಲ. ಟಾಂಗಗಳ ಜತೆಗೆ ಸಾರೋಟ್ ಕೂಡ ಸೇರಿಕೊಂಡಿವೆ. ಸಾಕಷ್ಟು ಕುಟುಂಬಗಳು ತಮ್ಮ ಜೀವನ ನಿರ್ವಹಣೆಗೆ ಟಾಂಗಗಳನ್ನೇ ನಂಬಿಕೊಂಡಿವೆ. ಟಾಂಗವಾಲಾಗಳಿಗೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕೂಡ ಪ್ರೋತ್ಸಾಹ ನೀಡುತ್ತಿದೆ. ದಸರಾ ಸಂದರ್ಭದಲ್ಲಿ ಟಾಂಗ ಸವಾರಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮವನ್ನೂ ಆಯೋಜಿಸುತ್ತಿದೆ.
ಒಂದು ಕಾಲದಲ್ಲಿ ಟಾಂಗಗಳು ಮೈಸೂರು ನಗರದ ಸಂಚಾರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದವು. ದೂರದಿಂದ ಬರುವ ಪ್ರವಾಸಿಗರನ್ನು ಹೊತ್ತು ನಗರ ಮಾತ್ರವಲ್ಲದೆ, ದೂರದ ಊರುಗಳಿಗೂ ಸಾಗುತ್ತಿದ್ದವು. ವಾಹನ ಸೌಲಭ್ಯವಿಲ್ಲದ ಆ ದಿನಗಳಲ್ಲಿ ಟಾಂಗಗಳೇ ಸಾರ್ವಜನಿಕ ಸಾರಿಗೆಯಾಗಿದ್ದವು. ನಗರ ಸೇರಿದಂತೆ ವಿವಿಧ ಬಡಾವಣೆಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಪ್ರಮುಖ ಸಾಧನವಾಗಿದ್ದವು. ಹೀಗಾಗಿಯೇ ಮೈಸೂರು ಎಂದಾಕ್ಷಣ ‘ಟಕ.. ಟಕ…’ ಸದ್ದು ಮಾಡುತ್ತಾ ಓಡುವ ಟಾಂಗಗಳ ಚಿತ್ರಣ ಹಿರೀಕರ ಕಣ್ಮುಂದೆ ಹಾದು ಹೋಗುತ್ತದೆ.
ಮೈಸೂರಿನಲ್ಲಿ ವಾಹನ ಸೌಲಭ್ಯವಿಲ್ಲದ ದಿನಗಳಲ್ಲಿ ಎತ್ತಿನಗಾಡಿಯಲ್ಲಿ ಜನರು ಸಾಗುತ್ತಿದ್ದರಾದರೂ ಟಾಂಗಗಳು ಬಂದಿದ್ದು ಮಹಾರಾಜರ ಕಾಲದಲ್ಲಿ. ಅಂದರೆ 1897 ಎಂದು ಹೇಳಲಾಗಿದೆ. ಅಂದಿನ ದಿನಗಳಲ್ಲಿ ಟಾಂಗಗಳು ಜನಪ್ರಿಯತೆ ಪಡೆದಿದ್ದವು. ಜತೆಗೆ ಟಾಂಗಗಳಲ್ಲಿ ತೆರಳುವುದೆಂದರೆ ಪ್ರತಿಷ್ಠೆಯ ಸಂಕೇತವೂ ಆಗಿತ್ತು. ಇದರ ಉಸ್ತುವಾರಿಯನ್ನು ಮುನ್ಸಿಪಾಲಿಟಿ ವಹಿಸಿಕೊಂಡಿತ್ತು. ದೂರದ ಊರುಗಳಿಗೆ ತೆರಳುವವರು ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗದಲ್ಲಿ ಹೋಗಬೇಕಿತ್ತು.
ಮೈಸೂರು ನಗರದಲ್ಲಿ ಕೆಲ ವರ್ಷಗಳ ಹಿಂದೆ 600ಕ್ಕೂ ಹೆಚ್ಚು ಟಾಂಗಗಳು ಓಡಾಡುತ್ತಿದ್ದವು. ಈಗ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಕೇವಲ 60-80 ಟಾಂಗವಾಲಾಗಳು ಕೆಲಸ ಮಾಡುತ್ತಿದ್ದಾರೆ. ದಸರಾ ಸಮಯದಲ್ಲಿ ಇವರಿಗೆ ಒಳ್ಳೆಯ ಸಂಪಾದನೆ ಆಗುತ್ತದೆ. ಆಮೇಲೆ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಜೇಬು ತುಂಬುತ್ತದೆ. ಉಳಿದ ಸಮಯದಲ್ಲಿ ಇದೇ ಮಾತನ್ನು ಹೇಳಲು ಬರುವುದಿಲ್ಲ. ಹೀಗಿದ್ದರೂ ಮೈಸೂರು ಪರಂಪರೆಯ ಭಾಗವಾಗಿ ಟಾಂಗ ಸಂಸ್ಕೃತಿ ಇನ್ನೂ ಉಸಿರಾಡುತ್ತಿದೆ ಎನ್ನುವುದೇ ಸಮಾಧಾನ.
‘ಮೈಸೂರು ಟಾಂಗ’ ಹೆಸರಿನ ಸಿನಿಮಾ
1968ರಲ್ಲಿ ಜಿ.ವಿ. ಅಯ್ಯರ್ ನಿರ್ದೇಶನದಲ್ಲಿ ‘ಮೈಸೂರು ಟಾಂಗ’ ಹೆಸರಿನ ಸಿನಿಮಾ ನಿರ್ಮಾಣವಾಗಿದೆ. ಕಲ್ಯಾಣ್‌ಕುಮಾರ್ ಬಿ.ವಿಜಯಲಕ್ಷ್ಮಿ ಉದಯಕುಮಾರ್ ಮತ್ತು ಬಾಲಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಮೈಸೂರು ಟಾಂಗ ಎಷ್ಟು ಪ್ರಸಿದ್ಧ ಎಂಬುದಕ್ಕೆ ನಿದರ್ಶನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.