ADVERTISEMENT

ಕೊಡಗಿನ ಅರಸನ ನಾಲ್ಕುನಾಡು ಅರಮನೆ...

ಸಹನಾ ಕಾಂತಬೈಲು
Published 26 ಅಕ್ಟೋಬರ್ 2024, 23:30 IST
Last Updated 26 ಅಕ್ಟೋಬರ್ 2024, 23:30 IST
ಅರಮನೆ ಹೊರಗಿನ ನೋಟ
ಅರಮನೆ ಹೊರಗಿನ ನೋಟ   

ಮಡಿಕೇರಿಯಿಂದ ಮೂರ‍್ನಾಡು ರಸ್ತೆಯಲ್ಲಿ 40 ಕಿಲೊಮೀಟರ್‌ ಕ್ರಮಿಸಿದರೆ ಕಕ್ಕಬೆ ಎನ್ನುವ ಗ್ರಾಮ ಸಿಗುತ್ತದೆ. ಅಲ್ಲಿ ಇತಿಹಾಸ ಪ್ರಸಿದ್ಧ ನಾಲ್ಕುನಾಡು ಅರಮನೆ ಇದೆ. ಕೊಡಗಿನ ಅರಸ ದೊಡ್ಡವೀರ ರಾಜೇಂದ್ರ ಈ ಅರಮನೆಯನ್ನು ಕ್ರಿ.ಶ. 1792ರಲ್ಲಿ ನಿರ್ಮಿಸಿದನು. ಕೊಡಗು ಜಿಲ್ಲೆಯ ಮಹತ್ವದ ಕೆಲವೇ ಕೆಲವು ಸ್ಮಾರಕಗಳಲ್ಲಿ ಇದೂ ಒಂದು. ಅದರೊಳಗೆ ಸುತ್ತಾಡಿದಾಗ...

ಅರಮನೆ ಪ್ರವೇಶಕ್ಕೂ ಮೊದಲು ಸುಂದರ ಕೆತ್ತನೆಗಳಿರುವ ಎರಡಾಳೆತ್ತರದ ಬಾಗಿಲನ್ನು ಹೊಂದಿರುವ ಸಣ್ಣ ಕಟ್ಟಡವಿದ್ದು, ಈ ಮುಖ್ಯದ್ವಾರವನ್ನು ಹಾದು ಹೋದರೆ ಅಂಗಳ ಸಿಗುತ್ತದೆ. ಎದುರಿಗೆ ಮೋಹಕ ಅರಮನೆ ಕಾಣುತ್ತದೆ. ಅರಮನೆ ಕರ್ಗಲ್ಲಿನ ಅಡಿಪಾಯವನ್ನು ಹೊಂದಿದ್ದು ಸಂಪೂರ್ಣ ಮಣ್ಣು ಮತ್ತು ಸಾಗುವಾನಿ ಮರದಿಂದ ನಿರ್ಮಿಸಲಾಗಿದೆ. ಅರಮನೆಯ ಮುಂಭಾಗದಲ್ಲಿ ಚೌಕಾಕಾರದ ಆಕರ್ಷಕ ಕೆತ್ತನೆಗಳಿಂದ ಕೂಡಿದ ಸುಂದರ ಮಂಟಪವಿದೆ. ದೊಡ್ಡವೀರ ರಾಜೇಂದ್ರನ ಎರಡನೆಯ ಮದುವೆ ಈ ಮಂಟಪದಲ್ಲೇ ನಡೆಯಿತಂತೆ. ಅರಮನೆಯ ಪ್ರವೇಶದ್ವಾರದ ಮೆಟ್ಟಲಿನಲ್ಲಿ ದೊಡ್ಡವೀರ ರಾಜೇಂದ್ರ ಹಾಗೂ ರಾಣಿ ಚೆನ್ನಮ್ಮಳ ಪಾದದ ಅಚ್ಚನ್ನು ನೋಡಬಹುದು.

ಅರಮನೆ ಎರಡು ಅಂತಸ್ತುಗಳನ್ನು ಹೊಂದಿದೆ. ಅರಮನೆಯ ಕೆಳಭಾಗದ ಮೂಲೆಯಲ್ಲಿರುವ ಮೆಟ್ಟಿಲುಗಳ ಮೂಲಕ ಏರಿದರೆ ಮೊದಲ ಅಂತಸ್ತು ಸಿಗುತ್ತದೆ. ಈ ಅಂತಸ್ತು ಮೂರು ಹಾಲ್‌ಗಳಿಂದ ಕೂಡಿದ್ದು ಮರದ ಹಲಗೆಗಳನ್ನು ಜೋಡಿಸಿದ ಇಲ್ಲಿನ ನೆಲದಲ್ಲಿ ನಡೆಯುವುದೇ ಖುಷಿ. ಗಾಳಿ, ಬೆಳಕು ಹಾಗೂ ಗೋಡೆಗಳಲ್ಲಿ ಸುಂದರ ಚಿತ್ರಗಳಿಂದ ಕೂಡಿದ ಮೊದಲ ಹಾಲ್ ಅದ್ಭುತವಾಗಿದೆ. ಇದನ್ನು ಸಭಾಂಗಣ ಎಂದೂ ಕರೆಯುತ್ತಾರೆ. ಈ ಹಾಲ್‌ನ ತುದಿಯಲ್ಲಿ ಎತ್ತರದ ಕಟ್ಟೆ ಇದೆ. ಇಲ್ಲಿ ಕೂತು ರಾಜ ಸಭೆ ನಡೆಸುತ್ತಿದ್ದನಂತೆ. ಇದರ ಮೇಲ್ಚಾವಣಿಯಲ್ಲಿ ಸಾವಯವ ಬಣ್ಣ ಬಳಸಿ ರಚಿಸಿದ ಚಿತ್ತಾರಗಳು, ಮರದ ಕೆತ್ತನೆಗಳು ನೋಡುಗರನ್ನು ಭಾವಪರವಶಗೊಳಿಸುತ್ತವೆ. ಹಾಲ್‌ನ ಎರಡೂ ಬದಿಯಲ್ಲಿ ಇರುವ ಸರಳ ಕೆತ್ತನೆಯ ಕಂಬಗಳು ಅರಮನೆಯ ಚೆಲುವನ್ನು ಹೆಚ್ಚಿಸಿವೆ. ಇಡೀ ಅರಮನೆಯೇ ಇಂತಹ ಹಲವು ಕಂಬಗಳಿಂದ ಕೂಡಿದೆ. ಮೀಟಿಂಗ್ ಹಾಲ್‌ನಲ್ಲಿ ನಿಂತು ಹೊರಗೆ ಕಣ್ಣು ಹಾಯಿಸಿದರೆ ಪ್ರಕೃತಿಯ ವಿಹಂಗಮ ನೋಟ ಮನಸೆಳೆಯುತ್ತದೆ.

ADVERTISEMENT

ಮಧ್ಯದ ಹಾಲ್‌ನ ಎರಡೂ ತುದಿಯಲ್ಲಿ ಒಂದೊಂದು ಕೋಣೆಯಿದೆ. ಅದರಲ್ಲಿ ಒಂದು ರಾಜನ ಕೋಣೆ, ಇನ್ನೊಂದು ರಾಣಿಯ ಕೋಣೆ ಎಂದು ಗೈಡ್ ಹೇಳಿದರು. ರಾಜನ ಕೋಣೆಗೆ ಮೂರು ಬಾಗಿಲು ಇದ್ದರೆ, ರಾಣಿಯ ಕೋಣೆಗೆ ಒಂದು ಬಾಗಿಲು. ಬಾಗಿಲಿನ ಚೌಕಟ್ಟು ಆಕರ್ಷಕ ಕೆತ್ತನೆ ಕೆಲಸಗಳಿಂದ ಕೂಡಿದೆ. ರಾಜನ ಕೋಣೆಯಿಂದಲೇ ಎರಡನೆಯ ಅಂತಸ್ತಿಗೆ ಏರಬೇಕು. ಆದರೆ ರಾಜನ ಕೋಣೆ ಮತ್ತು ಎರಡನೆಯ ಅಂತಸ್ತನ್ನು ಏರಲು ಅನುಮತಿ ಇಲ್ಲ. ಈಗ ರಾಜರು ಬಳಸುತ್ತಿದ್ದ ಯಾವ ವಸ್ತುವೂ ಇಲ್ಲಿಲ್ಲ. ಅವನ್ನೆಲ್ಲ ಮಡಿಕೇರಿಯ ಮ್ಯೂಸಿಯಂಗೆ ಸ್ಥಳಾಂತರಿಸಲಾಗಿದೆ.

ಇಲ್ಲಿನ ಗೋಡೆಯಲ್ಲಿ ಸುಂದರ ಸ್ತ್ರೀಯ ಮೂರು ಚಿತ್ರಗಳನ್ನು ಕಾಣಬಹುದು. ರಾಣಿ, ರಾಜರ ಕೋಣೆಯ ಹಿಂಭಾಗದಲ್ಲಿ ಅಂದರೆ ಕೊನೆಯ ಹಾಲ್‌ನ ಎರಡೂ ತುದಿಯಲ್ಲಿ ಸ್ನಾನದ ಕೋಣೆಯಿದೆ. ರಾಜನ ಕೋಣೆಯ ಹಿಂದೆ ಇರುವ ಸ್ನಾನದ ಕೋಣೆಯ ಹಿಂಭಾಗದಲ್ಲಿ ಸಣ್ಣ ಚೌಕಾಕಾರದ ಎಡೆಯಿದ್ದು, ಅದಕ್ಕೆ ಏಣಿಯನ್ನು ಆನಿಸಲಾಗಿದೆ. ಇದರ ಮೂಲಕ ಇಳಿದರೆ ನೆಲಮಾಳಿಗೆ ಸಿಗುತ್ತದೆ.

ನೆಲಮಾಳಿಗೆಯಲ್ಲಿ ಎರಡು ಕತ್ತಲೆಯ ಕೋಣೆ ಇವೆ. ಒಂದು ಭಯ ಹುಟ್ಟಿಸುವ ಅತ್ಯಂತ ಕಗ್ಗತ್ತಲೆಯ ಕೋಣೆ. ಇಲ್ಲಿ ಬಾಗಿಲು ತೆರೆದೇ ಇದ್ದರೂ ಏನೇನೂ ಕಾಣಿಸುವುದಿಲ್ಲ. ಟಾರ್ಚ್ ಉರಿಸಿಯೇ ಒಳಗೆ ಏನಿದೆ ಎಂದು ನೋಡಬೇಕಷ್ಟೆ. ಇಲ್ಲಿ ಕೈದಿಗಳನ್ನು ಕೂಡಿಹಾಕುತ್ತಿದ್ದರು.  ನೆಲಮಾಳಿಗೆಯ ಮಧ್ಯಭಾಗದ ಗೋಡೆಯಲ್ಲಿ ಒಂದು ರಂಧ್ರ ಕೊರೆದಿದ್ದಾರೆ. ಇಲ್ಲಿಂದ ನೋಡಿದರೆ ಅರಮನೆಯ ಹೊರಭಾಗ ತುಂಬ ದೂರದವರೆಗೆ ಕಾಣಿಸುತ್ತದೆ. ಬಂದೂಕಿನಿಂದ ಈ ರಂಧ್ರದ ಮೂಲಕ ಗುರಿಯಿಟ್ಟು ಹೊಡೆದರೆ ಮುಖ್ಯದ್ವಾರದಲ್ಲಿ ಪ್ರವೇಶಿಸುವ ಯಾವುದೇ ವ್ಯಕ್ತಿಯ ಎದೆಗೆ ನೇರ ಗುಂಡು ತಗಲುವ ತಾಂತ್ರಿಕತೆ ಇದರ ವಿಶೇಷತೆಯಂತೆ. ಶತ್ರುಗಳ ದಾಳಿಯಾದರೆ ತಪ್ಪಿಸಿಕೊಳ್ಳಲು ನೆಲಮಾಳಿಗೆಯಿಂದ ಸುಮಾರು ಅರ್ಧ ಕಿಲೊಮೀಟರ್‌ ದೂರದವರೆಗೆ ಸುರಂಗ ಮಾರ್ಗವೂ ಇತ್ತು. ಅದನ್ನು ಈಗ ಮುಚ್ಚಲಾಗಿದೆ ಎಂದು ಬಲ್ಲವರು ಹೇಳುತ್ತಾರೆ.

ಇದು ರಾಜರ ಕಾಯಂ ನಿವಾಸವಲ್ಲ. ಬ್ರಿಟಿಷರು ಮತ್ತು ಟಿಪ್ಪುವಿನ ದಾಳಿಯಿಂದ ಅಡಗಲು ನಿರ್ಮಿಸಿದ ತಾಣ. ಆದರೂ ಮಡಿಕೇರಿಯ ಅರಮನೆ ಬೇಸರ ತರಿಸಿದರೆ ರಾಜ ಇಲ್ಲಿ ಬಂದು ಉಳಿಯುತ್ತಿದ್ದದ್ದೂ ಉಂಟಂತೆ. ಅರಮನೆ ಸುತ್ತಲೂ ದಟ್ಟ ಅರಣ್ಯದಿಂದ ಆವೃತವಾಗಿರುವುದರಿಂದ ವೈರಿಗಳು ಇಲ್ಲಿಗೆ ಬರುವುದು ಕಷ್ಟ. ಕ್ರಿ.ಶ. 1834ರಲ್ಲಿ ಬ್ರಿಟಿಷರಿಗೆ ಶರಣಾಗುವುದಕ್ಕೆ ಮುಂಚೆ, ಈ ಅರಮನೆ ಚಿಕ್ಕವೀರ ರಾಜೇಂದ್ರನಿಗೆ ಕಡೆಯ ಅಡಗುದಾಣವಾಗಿತ್ತು. ಮೊದಲು ಈ ಅರಮನೆಗೆ ಹುಲ್ಲಿನ ಚಾವಣಿ ಇತ್ತು. 1883ರಲ್ಲಿ ಬ್ರಿಟಿಷರು ಇದಕ್ಕೆ ಹೆಂಚು ಹೊದೆಸಿದರು ಎಂದು ಇತಿಹಾಸ ಹೇಳುತ್ತದೆ. ‘ಇಲ್ಲಿಂದ ಆರು ಕಿಲೊಮೀಟರ್‌ ಸಾಗಿದರೆ ಕೊಡಗಿನ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟದ ತುದಿ ಸಿಗುತ್ತದೆ’ ಎಂದರು ಗೈಡ್.

ಇತಿಹಾಸ, ವಾಸ್ತುಶಿಲ್ಪ ಕುರಿತು ಆಸಕ್ತಿ ಹೊಂದಿರುವರು ಈ ಅರಮನೆಗೆ ಭೇಟಿ ಕೊಡಬಹುದು.

ಅರಮನೆ ನೋಡಲು ಶುಲ್ಕ ಇಲ್ಲ. ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ತನಕ ವಾರದ ಎಲ್ಲಾ ದಿನವೂ ತೆರೆದಿರುತ್ತದೆ. ಅರಮನೆಯನ್ನು ತೋರಿಸಲು ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯವರು ನೇಮಿಸಿದ ಒಬ್ಬರು ಗೈಡ್ ಇದ್ದಾರೆ.

ಅರಮನೆಯ ಒಳಾಂಗಣ

ಅರಮನೆ ನೋಡಲು ಶುಲ್ಕ ಇಲ್ಲ. ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ತನಕ ವಾರದ ಎಲ್ಲಾ ದಿನವೂ ತೆರೆದಿರುತ್ತದೆ. ಅರಮನೆಯನ್ನು ತೋರಿಸಲು ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯವರು ನೇಮಿಸಿದ ಒಬ್ಬರು ಗೈಡ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.