ಸಿಗ್ನಲ್ ಲೈಟ್ ಬಳಿ ನಿಂತಿರುವ ಐಶಾರಾಮಿ ಕಾರು. ಹವಾನಿಯಂತ್ರಣದಿಂದ ತಣ್ಣಗಿರುವ ಕಾರಿನ ಒಳಭಾಗದಲ್ಲಿ ಫ್ರೆಂಚ್ ದೇಶದ ಸುಗಂಧದ ಸುವಾಸನೆ ನಿಮ್ಮ ಕಲ್ಪನೆಗೆ ಬಿಟ್ಟಿದ್ದು. ಕಾರಿನ ಒಂದು ಕಿಟಕಿಯ ಗಾಜು ಸ್ವಲ್ಪ ಕೆಳಗಿಳಿದಿದೆ. ಮಳೆಗೆ ಗಾಜು ತೋಯ್ದಿದೆ. ಒದ್ದೆ ಗಾಜಿನಿಂದಾಗಿ ಹೊರಜಗತ್ತಿನ ಚಿತ್ರಣ ಮಸುಕಾಗಿದೆ. ಅಸ್ಪಷ್ಟವಾಗಿದೆ.
ಹೊರಗೆ ಕೆಂಪು ಸೀರೆಯುಟ್ಟ ಎಳೆ ವಯಸ್ಸಿನ ಮಹಿಳೆಯೊಬ್ಬಳು ಪುಟ್ಟಮಗುವನ್ನು ಕಂಕುಳಿನಲ್ಲಿ ಹೊತ್ತು ಮಳೆಯಲ್ಲಿ ತೊಯ್ದು ನಿಂತಿದ್ದಾಳೆ. ಕಾರಿನೊಳಗಿನ ಪ್ರಪಂಚವನ್ನು ಸ್ಪರ್ಶಿಸಲೆತ್ನಿಸುವಂತೆ ಆಕೆಯ ಕೈಗಳು ಕಿಟಕಿಯ ಗಾಜನ್ನು ಮುಟ್ಟಿನೋಡುತ್ತಿವೆ. ಬಡತನ ಹಸಿವು ಅಸಹಾಯಕತೆ ತುಂಬಿದ ಅವಳ ಕಣ್ಣುಗಳು ಕಿಟಕಿಯ ಗಾಜಿನೊಳಗೆ ಇಣಕುತ್ತವೆ. ಬಹುಶಃ ಏನೂ ಕಾಣುತ್ತಿಲ್ಲ. ಕಂಕಳಲ್ಲಿರುವ ಮಗುವಿನ ಅಗಲವಾದ ಹೊಳಪಿನ ಕಣ್ಣುಗಳಲ್ಲಿ ಹಸಿವು... ಕುತೂಹಲ, ನಿರೀಕ್ಷೆ, ಭರವಸೆಗಳು.
ಒಂದು ಗಾಜಿನ ಒಳಗೆ ಮತ್ತು ಹೊರಗೆ ಅನಾವರಣಗೊಳ್ಳುವ ಎರಡು ವ್ಯತಿರಿಕ್ತವಾದ ಜಗತ್ತುಗಳು.
ಇದು ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿರುವ ಛಾಯಾಚಿತ್ರಗಳಲ್ಲಿ ಒಂದು. ನೋಡುಗರನ್ನು ಕಾಡುವ ‘ಸ್ಟೀವ್ ಮ್ಯಾಕ್ರಿ’ ತೆಗೆದ ಈ ಚಿತ್ರ ‘ಡಗ್ಲಾಸ್ ಚಾದ್ವಿಕ್’ ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌ಗೆ ಮುಂಬೈ ಕುರಿತು ಬರೆದ ಲೇಖನದ ಒಳಗೆ ಮುನ್ನುಡಿಯಂತೆ ಕರೆದೊಯ್ಯುತ್ತದೆ.
ಲಕ್ಷಾಂತರ ವಲಸಿಗರ ಪಾಲಿಗೆ ಭರವಸೆಗಳ ಸ್ವರ್ಗವೆಂದೇ ಖ್ಯಾತವಾಗಿರುವ, ಅವರ ಶ್ರಮದಿಂದಲೇ ಬೆಳೆದು ರಾಷ್ಟ್ರದ ಆರ್ಥಿಕ ಕಣಜವಾಗಿರುವ, ಜೊತೆಜೊತೆಗೆ ತೀವ್ರ ಅಸಮಾನತೆಯನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಒಂದು ಮಹಾನಗರ ಮುಂಬೈ. ಒಂದು ಇಡೀ ನಗರದ ಕನಸು, ನೋವುಗಳನ್ನೆಲ್ಲಾ ಅಕ್ಷರಗಳ ನೆರವಿಲ್ಲದೇ ಕೇವಲ ಒಂದು ಫ್ರೇಮಿನಲ್ಲಿ ಹಿಡಿದಿಡುವುದಾದರೂ ಹೇಗೆ ಸಾಧ್ಯ?
ಇಷ್ಟೆಲ್ಲಾ ಆಯಾಮಗಳನ್ನು ಹೊಂದಿರುವ ಚಿತ್ರಗಳು ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌ನಲ್ಲಿ ಆಗಾಗ್ಗೆ ಕಂಡುಬರುವುದು ಕಾಕತಾಳೀಯವಲ್ಲ.
ನಾವು ಸಣ್ಣವರಿದ್ದಾಗಿನಿಂದಲೂ ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌ನಲ್ಲಿ ಪ್ರಕಟವಾಗುತ್ತಿದ್ದ ಚಿತ್ರಗಳನ್ನು ನೋಡುತ್ತಾ, ಲೇಖನಗಳನ್ನು ಓದುತ್ತಾ ಆ ಪತ್ರಿಕೆಗೆ ಆಕರ್ಷಿತರಾಗಿದ್ದೆವು. ಅದರಲ್ಲೂ ಜೀವವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳು ನಮ್ಮನ್ನು ಮೋಡಿಗೊಳಗಾಗಿಸುತ್ತಿದ್ದವು. ನಾವು ತೆಗೆಯುತ್ತಿದ್ದ ಚಿತ್ರಗಳನ್ನು ನ್ಯಾಷನಲ್ ಜಿಯಾಗ್ರಫಿಕ್‌ನ ಚಿತ್ರಗಳೊಂದಿಗೆ ಹೋಲಿಸಿ ನೋಡುತ್ತಿದ್ದೆವು. ಹಾಗೆಯೇ ನಮ್ಮ ಯಾವ ಚಿತ್ರಗಳು ಅಷ್ಟು ಪರಿಣಾಮಕಾರಿಯಾಗಿಲ್ಲವಲ್ಲ ಏಕೆ ಎಂದು ಗಂಭೀರವಾಗಿ ಚಿಂತಿಸುತ್ತಿದ್ದೆವು. ಇಂತಹ ಹಲವಾರು ಚಿತ್ರಗಳು ನಮ್ಮ ಮನಸ್ಸಿನಲ್ಲಿ ಹೇಗೆ ಮುದ್ರೆ ಒತ್ತುತ್ತಿದ್ದವೆಂದರೆ ವರ್ಷ ಕಳೆದಂತೆ ಛಾಯಾಗ್ರಾಹಕರ ಹೆಸರುಗಳು ಮಾಸಿ ಹೋದರೂ ಕೂಡ, ಚಿತ್ರಗಳು ಮಾತ್ರ ತಮ್ಮ ಎಲ್ಲಾ ಸೂಕ್ಷ್ಮ ವಿವರಗಳೊಂದಿಗೆ ಹಾಗೇ ಕುಳಿತಿರುತ್ತಿದ್ದವು.
ಆನಂತರದ ದಿನಗಳಲ್ಲಿ ನಮಗೆ ನ್ಯಾಷನಲ್ ಜಿಯಾಗ್ರಫಿಕ್‌ನ ಹಲವಾರು ಛಾಯಾಗ್ರಾಹಕರನ್ನು, ಲೇಖಕರನ್ನು ಭೇಟಿಯಾಗುವ, ಕೆಲವೊಮ್ಮೆ ಅವರೊಂದಿಗೆ ಕೆಲಸ ಮಾಡುವ ಅವಕಾಶಗಳು ತೆರೆದುಕೊಂಡವು. ಇದರಲ್ಲಿ ನಮಗೆ ಹೆಚ್ಚು ನೆನಪಿನಲ್ಲಿ ಉಳಿದದ್ದು ಡಗ್ಲಾಸ್ ಚಾದ್ವಿಕ್ ಅವರೊಂದಿಗೆ ಕಳೆದ ದಿನಗಳು. ಚಾದ್ವಿಕ್ ಜೀವವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದ ಅಪೂರ್ವ ಪ್ರತಿಭೆ. ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್ ಪತ್ರಿಕೆಯಲ್ಲಿ ಐವತ್ತಕ್ಕೂ ಹೆಚ್ಚು ಲೇಖನಗಳನ್ನು ಬರೆದ ಹಿರಿಮೆ ಅವರದು. ಇದಲ್ಲದೆ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ರಚಿಸಿದ್ದಾರೆ. ಇದೆಲ್ಲದ್ದಕ್ಕಿಂತ ಅವರ ಗ್ರಹಿಕೆ, ಕಥಾನಿರೂಪಣೆಯ ತಂತ್ರಕ್ಕೆ ನಾವು ಮನಸೋತಿದ್ದೆವು. ಹಾಗಾಗಿ ನ್ಯಾಷನಲ್ ಜಿಯಾಗ್ರಫಿಕ್ ಎಂದಾಗ ನಮಗೆ ಕೂಡಲೆ ನೆನಪಾಗುವುದು ಡಗ್ಲಾಸ್ ಚಾದ್ವಿಕ್. ‘Out of time out of space’ ಎಂಬ ಆನೆಗಳ ಕುರಿತ ಲೇಖನಕ್ಕಾಗಿ ಚಾದ್ವಿಕ್ ಮುದುಮಲೈಗೆ ಬಂದಿದ್ದರು. ವಾರಗಳ ಕಾಲ ಆನೆಗಳ ಜಾಡು ಹಿಡಿದು ಕಾಡಿನಲ್ಲಿ ಅಲೆದ ನೆನಪು ಇಂದಿಗೂ ಮಾಸಿಲ್ಲ. ಅವರೊಂದಿಗೆ ಜರುಗಿದ ನಮ್ಮ ಮಾತುಕತೆಗಳಲ್ಲಿ ಜೀವವಿಜ್ಞಾನದ ವಿಷಯದ ಬಗ್ಗೆ ಅವರಿಗಿರುವ ಅಪಾರ ಜ್ಞಾನ ನಮ್ಮ ಅರಿವಿಗೆ ಬಂತು. ಹೌದಲ್ಲ, ಒಬ್ಬ ಅಗ್ರಗಣ್ಯ ಲೇಖಕನಾಗಲು ಸಾಮಾನ್ಯ ಅರ್ಹತೆ ನೆರವಾಗಲಾರದು.
ಆಗೊಮ್ಮೆ ಮರುದಿನ ಭೇಟಿಯಾಗುವ ಯೋಜನೆಯ ಕಾರ್ಯಕ್ರಮವಿದ್ದರು ಚಾದ್ವಿಕ್ ಬರಲೇ ಇಲ್ಲ. ನಡುರಾತ್ರಿಯಲ್ಲಿ ಬಂದ ಫೋನ್ ಕರೆಗೆ ಅವರು ಬ್ಯಾಂಕಾಕ್‌ಗೆ ತೆರೆಳಿದ್ದರು. ಅಲ್ಲಿಂದ ವಾರದಲ್ಲಿ ವಾಪಸ್ಸಾಗುವುದಾಗಿ ತಿಳಿಸಿದ ಅವರು ಚೀನಾದತ್ತ ಮುಖಮಾಡಿದ್ದರು. ಬಳಿಕ ಶ್ರೀಲಂಕಾ... ಹೀಗೆ ಅವರು ಮತ್ತೆ ವಾಪಸ್ಸಾಗುವಾಗ ಮೂರು ವಾರಗಳೇ ಕಳೆದಿತ್ತು. ಅವರು ದಿಕ್ಕುತಪ್ಪಿ ಅಲೆದಾಡುತ್ತಿರುವಂತೆ ಕಂಡಿತು.
ಅವರು ಏಷ್ಯಾಟಿಕ್ ಗಂಡಾನೆಗಳ ಹತ್ಯೆ, ಬಳಿಕ ದಂತಗಳು ಸಾಗುವ ಕಳ್ಳದಾರಿ, ಅವು ತಲುಪುವ ಸ್ಥಳ, ಅವುಗಳ ಮಾರುಕಟ್ಟೆ ಏನು, ಎಲ್ಲಿ, ಅದರಲ್ಲಿ ಪಾಲ್ಗೊಂಡಿರುವವರು ಯಾರು... ಇಡೀ ಕಳ್ಳದಂದೆಯ ವಹಿವಾಟಿನ ಖಚಿತ ವರದಿಗಾಗಿ ಗೂಢಾಚಾರನಂತೆ ಅಲೆದಾಡುತ್ತಿದ್ದರು. ಅಷ್ಟೇ ಅಲ್ಲ, ಆನೆಗಳ ಬಗ್ಗೆ ಸಂಶೋಧನೆ ನಡೆಸಿ ಅನೆಗಳ ಬದುಕನ್ನರಿತ ವಿಜ್ಞಾನಿಗಳೊಂದಿಗೆ ಸಮಾಲೋಚಿಸಿ ಆನೆ ಸಂತತಿಯ ಬದುಕು ಭವಿಷ್ಯಗಳನ್ನು ಅಂದಾಜಿಸುತ್ತಿದ್ದರು. ಈ ಚರ್ಚೆಗಳಲ್ಲಿ ಅವರು ಅಧಿಕೃತ ಛಾಯಾಗ್ರಾಹಕ ಥಾಮ್ಸನ್‌ನನ್ನು ಜೊತೆಯಲ್ಲಿರಿಸಿಕೊಳ್ಳುತ್ತಿದ್ದರು. ಏಕೆಂದರೆ ಛಾಯಾಗ್ರಾಹಕ ತನಗಿಷ್ಟಬಂದದ್ದನ್ನು ತೆಗೆದಾಗ ಅವು ಲೇಖನದೊಂದಿಗೆ ಜೋಗುಳ ಹಾಡುವುದಿಲ್ಲ. ಬದಲಾಗಿ ಅಂಚೆಪತ್ರದೊಂದಿಗೆ ಅಂಟಿಸಿರುವ ಸ್ಟಾಂಪ್‌ಗಳಂತಾಗಿಬಿಡುತ್ತವೆ. ಹಾಗಾಗಿ ದಿನದಿಂದ ದಿನಕ್ಕೆ ದಕ್ಕುವ ಮಾಹಿತಿಗಳಿನುಸಾರವಾಗಿ ರೂಪ ಬದಲಾಗುವ ಕತೆಗೆ ಪೂರಕ ಚಿತ್ರಗಳನ್ನು ಒದಗಿಸಲು ಆತನನ್ನು ಸದಾ ಕತೆಯೊಳಗಿರಿಸಿಕೊಳ್ಳುತ್ತಿದ್ದರು. ಬಹುಶಃ ಇದು ನ್ಯಾಷನಲ್ ಜಿಯಾಗ್ರಫಿಕ್‌ನ ಕಾರ್ಯಶೈಲಿಯಿರಬಹುದೇನೊ. ಇದಲ್ಲದೆ ಮುಂಜಾನೆಯಿಂದ ರಾತ್ರಿಯವರೆಗೂ ಕತೆಯೊಳಗಿದ್ದೇ ಚಿಂತಿಸುವ ವೃತ್ತಿಪರತೆ. ಹೀಗೆ ಎರಡು ವರ್ಷಗಳ ಕಾಲ ಧ್ಯಾನಿಸಿದ ಬಳಿಕ ಮೂವತ್ತೈದು ಪುಟಗಳ ಆ ಚಿತ್ರಲೇಖನ ಪ್ರಕಟಗೊಂಡಿತ್ತು.
ಚಾದ್ವಿಕ್ ನೆನಪಾದದ್ದು ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್ ಕಣ್ಮುಚ್ಚುತ್ತಿದೆ ಎಂಬ ಸುದ್ಧಿ ಓದಿದಾಗ. 135 ವರ್ಷಗಳಿಂದ ನಿರಂತರವಾಗಿ ಪ್ರಕಟಗೊಂಡ ಅದು ಇಲ್ಲಿಯವರೆಗೆ 1400 ಸಂಚಿಕೆಗಳು ಎಂಟು ಸಾವಿರ ಲೇಖನಗಳನ್ನು ಎರಡುಲಕ್ಷ ಚಿತ್ರಗಳನ್ನು ಜಗತ್ತಿಗೆ ನೀಡಿದೆ. ಓದುಗರನ್ನು ರಂಜಿಸಿದೆ, ಪ್ರಚೋದಿಸಿದೆ, ಅವರಿಗೆ ಜ್ಞಾನ-ವಿಜ್ಞಾನವನ್ನು ಪರಿಚಯಿಸಿದೆ. ಇಂತಹ ಹಿರಿಮೆಯುಳ್ಳ ಪತ್ರಿಕೋದ್ಯಮದ ಮಹಾ ಅಧ್ಯಾಯಯೊಂದು ಕಣ್ಮರೆಯಾಗುತ್ತಿರುವ ನೋವು ದೇಶ, ಧರ್ಮ, ಗಡಿಗಳನ್ನು ಮೀರಿ ಅಭಿಮಾನಿಗಳನ್ನು ದುಃಖಕ್ಕೆ ದೂಡಿದೆ.
ಬಹುಶಃ ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌ಗೆ ಸರಿಸಾಟಿಯಾದ ಮತ್ತೊಂದು ಪತ್ರಿಕೆಯನ್ನು ಜಗತ್ತು ಕಂಡಿಲ್ಲದಿರಬಹುದು. 135 ವರ್ಷಗಳ ಕಾಲ ಭೂಮಿಯ ಅಗಲ, ಕಡಲಿನ ಆಳ, ಆಕಾಶದ ಎತ್ತರ, ಚಂದ್ರನ, ಮಿನುಗುವ ನಕ್ಷತ್ರಗಳ ಸಂಸಾರ, ಮಾನವನ ಉಗಮ, ಅರಳಿದ-ನಶಿಸಿದ ನಾಗರಿಕತೆಗಳು, ಕಣ್ಮರೆಯಾದ ಸಂಸ್ಕೃತಿ, ಜೀವಜಾಲಗಳ ಸಂವಾದ, ತಂತ್ರಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನೆಲ್ಲಾ ಸ್ಪರ್ಶಿಸುತ್ತಾ, ಅನ್ವೇಷಿಸುತ್ತಾ, ವಿಶ್ಲೇಶಿಸುತ್ತಾ ಅಮೂಲ್ಯ ಜ್ಞಾನಗಳನ್ನು ಮನೆಮನೆಗಳಿಗೆ ತಲುಪಿಸಿದ ಕೀರ್ತಿಯನ್ನು ಬೇರಾವ ಪ್ರಕಟಣೆಗಳು ಪ್ರತಿಪಾದಿಸಲು ಸಾಧ್ಯವಿಲ್ಲ, ಅಷ್ಟೇ ಅಲ್ಲ ಜಗತ್ತಿನ ಕೋಟ್ಯಂತರ ಓದುಗರೊಂದಿಗೆ ಪ್ರಾಮಾಣಿಕವಾಗಿ ಸಂವಾದಿಸಿದ ವಿಶ್ವಾಸ, ನಂಬಿಕೆ, ಮನುಕುಲಕ್ಕೆ, ಜೀವಿಗಳಿಗೆ ಇರುವುದೊಂದೇ ಭೂಮಿ ಎಂದು ಎಚ್ಚರಿಸಿ, ಜಾಗೃತಿ ಮೂಡಿಸಿದ ಹಿರಿಮೆ ಅದಕ್ಕಿದೆ. ಸಮಾಜದ ಕತ್ತಲೆಯನ್ನು ಜ್ಞಾನದ ಪೊರಕೆಯಿಂದ ಗುಡಿಸಿಹಾಕಿದ ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್ ನಿಧಾನವಾಗಿ ಕಣ್ಮುಚ್ಚುತ್ತಿದೆ.
ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌ನ ಅವನತಿಗೆ ಕಾರ್ಪೋರೇಟ್ ಧರ್ಮಗಳು ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಇದೇನೇ ಇರಲಿ, ಜಗತ್ತಿನಲ್ಲಿ ಅತ್ಯಂತ ಶ್ರೀಮಂತರಿದ್ದಾರೆ, ಅಗಣಿತ ಕಾರ್ಪೋರೇಟ್ ಕಂಪನಿಗಳಿದ್ದಾವೆ. ಕೇವಲ ಔತಣಕೂಟಗಳಿಗೆ, ಮದುವೆಗಳಿಗೆ ವ್ಯಯಿಸುವ ಸ್ವಲ್ಪ ಭಾಗದ ಹಣದಲ್ಲೇ ಜಗತ್ತು ಕಂಡ ಈ ಅದ್ಭುತ ಪವಿತ್ರ ಪತ್ರಿಕೆಯೊಂದನ್ನು ಉಳಿಸಿಕೊಳ್ಳಬಹುದಲ್ಲ ಎಂಬ ನೋವು ನಮ್ಮದು.
ಆದರೆ ಇಂದಿನ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಸೃಜನಶೀಲತೆ, ಜ್ಞಾನ, ಕಲೆ ಎಲ್ಲವೂ ಬಂಧನದಲ್ಲಿವೆ. ಸಂವೇದನೆ ಇಲ್ಲವಾಗಿದೆ. ಅವುಗಳ ಆತ್ಮವೇ ಪ್ರಾಫಿಟ್ ಅಂಡ್ ಲಾಸ್ ಅಕೌಂಟ್. ಈ ಮನೋಧರ್ಮದಿಂದಾಗಿ ಜ್ಞಾನ, ಕಲೆ, ಸಂಸ್ಕೃತಿಗಳು ಕಣ್ಮರೆಯಾಗುತ್ತಾ ಸಾಗಿ, ಅಜ್ಞಾನದ ಕತ್ತಲು ಮತ್ತೆ ಜಗತ್ತನ್ನು ಆಳಲು ಹೆಚ್ಚಿನ ಸಮಯ ಹಿಡಿಯುವುದಿಲ್ಲ. ಮನುಕುಲದ ಚರಿತ್ರೆಯಲ್ಲಿ ಇದೊಂದು ದುರಂತದ ಅಧ್ಯಾಯವಾಗಿ ಉಳಿದುಬಿಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.