ADVERTISEMENT

ನಾಗಮಂಗಲ ಬೆಣ್ಣೆಗೆ ಕರಗುವ ಮನ

ಉಲ್ಲಾಸ್.ಯು.ವಿ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
ನಾಗಮಂಗಲ ಬೆಣ್ಣೆ 
ನಾಗಮಂಗಲ ಬೆಣ್ಣೆ    
ನಾಗಮಂಗಲ ತಾಲ್ಲೂಕು ಗುಣಮಟ್ಟದ ಬೆಣ್ಣೆ ತಯಾರಿಸುವುದಕ್ಕೆ ಖ್ಯಾತಿ ಪಡೆದಿದೆ. ಆದ್ದರಿಂದಲೇ ನಾಗಮಂಗಲ ಬೆಣ್ಣೆ ಎಂದೇ ಹೆಸರಾಗಿದೆ. ಈ ಬೆಣ್ಣೆ ರುಚಿಯ ಹಿಂದೆ ಇಲ್ಲಿನ ರೈತರಿಗೆ ಹಲವಾರು ತಲೆಮಾರಿನಿಂದ ಬಂದ ನೈಪುಣ್ಯವಿದೆ.

ಆಗಷ್ಟೇ ಕತ್ತಲು ಸರಿದು ಬೆಳಕು ಹರಿಯುತ್ತಿತ್ತು. ನಾಲ್ಕೈದು ಮಹಿಳೆಯರು ಒಟ್ಟಾಗಿ ಬಿಂಡಿಗನವಿಲೆಯ ಬಸ್‌ ನಿಲ್ದಾಣ ಸಮೀಪವಿರುವ ಸಂತೆಗೆ ಬಂದರು. ಅವರ ಕೈಯಲ್ಲಿ ಬ್ಯಾಗುಗಳು ಇದ್ದವು. ಅವುಗಳಿಂದ ಬಕೆಟುಗಳನ್ನು ತೆಗೆದು ಬೆಣ್ಣೆಯನ್ನು ಮುದ್ದೆ ಕಟ್ಟಿ ಹರಿವಾಣಗಳಲ್ಲಿ ಒಪ್ಪವಾಗಿ ಜೋಡಿಸುತ್ತಿದ್ದರು. ಇವರ ಕೆಲಸ ಇನ್ನೂ ಮುಗಿದಿರಲಿಲ್ಲ, ಅಷ್ಟರಲ್ಲೇ ಇನ್ನೊಂದು ಗುಂಪು ಬಂದಿತು. ಹೀಗೆ ಅರ್ಧಗಂಟೆ ಅವಧಿಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು, ಪುರುಷರು ಹರಿವಾಣದಲ್ಲಿ ಬೆಣ್ಣೆಮುದ್ದೆಗಳನ್ನು ಇಟ್ಟು ವ್ಯಾಪಾರಕ್ಕೆ ಸಿದ್ಧವಾಗಿದ್ದರು.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು (ಸೋಮವಾರ), ಕದಬಹಳ್ಳಿ (ಶನಿವಾರ) ಬಿಂಡಿಗನವಿಲೆ (ಬುಧವಾರ)ಯಲ್ಲಿ ಬೆಳ್ಳಂಬೆಳಿಗ್ಗೆ ಸಂತೆಗೆ ಭೇಟಿ ನೀಡಿದರೆ ಈ ದೃಶ್ಯ ಕಾಣಸಿಗುತ್ತದೆ.

ಗುಣಮಟ್ಟದ ಬೆಣ್ಣೆಗೆ ಹೆಸರಾಗಿರುವ ಈ ಸಂತೆಗಳಲ್ಲಿ ಕೆಲವೇ ಗಂಟೆಗಳಲ್ಲಿ ರೈತರು ತಂದ ಬೆಣ್ಣೆ ಮಾರಾಟವಾಗಿ ಖಾಲಿ ತಟ್ಟೆ ಹಿಡಿದು ಸಾಗುವುದನ್ನು ನೋಡಬಹುದು. ಎಲ್ಲಕ್ಕಿಂತ ಮಿಗಿಲಾಗಿ ಬೆಣ್ಣೆ ಮಾರಾಟ ಮಾಡುವ ಮಹಿಳೆಯರ ಮಾತಿನ ಕೌಶಲ, ಚೌಕಾಸಿ ಮಾಡುವ ಪರಿಯೋ ಅದ್ಭುತ.

ADVERTISEMENT

ಬಿಂಡಿಗನವಿಲೆ, ಕದಬಹಳ್ಳಿ, ಬೆಳ್ಳೂರು ಸಂತೆಗಳಲ್ಲಿ ಸಿಗುವ ಬೆಣ್ಣೆಯ ವಿಶೇಷ ಏನು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ... ಹಿಂದಿನಿಂದಲೂ ಈ ಹೋಬಳಿಗಳ ಬಹುತೇಕ ರೈತರು ಜೀವನೋಪಾಯಕ್ಕಾಗಿ ಬೆಣ್ಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಬೇಕಾದ ನೈಪುಣ್ಯವನ್ನು ಅಳವಡಿಸಿಕೊಂಡಿರುವುದು ಗುಣಮಟ್ಟದ ಬೆಣ್ಣೆ ಸಿಗಲು ಕಾರಣ. ಜೊತೆಗೆ ಇಲ್ಲಿನ ಜನ ಡೇರಿಗೆ ಹಾಲು ಹಾಕುವ ಸಮಯದಲ್ಲಿ ಕೃಷಿ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ ಸಮಯದ ಹೊಂದಾಣಿಕೆ ಮಾಡಿಕೊಳ್ಳಲಾಗದೇ ಬಿಡುವಾದಾಗ ಬೆಣ್ಣೆ ತೆಗೆದು ಲಾಭ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ. ಸಂತೆಯಲ್ಲಿ ಬೆಣ್ಣೆಯದೇ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಹಿವಾಟು ನಡೆಯುತ್ತದೆ.

ಇಲ್ಲಿನ ಬೆಣ್ಣೆಗೆ ರಾಜ್ಯದ ವಿವಿಧ ನಗರಗಳಲ್ಲಿ ಬೇಡಿಕೆ ಇದೆ. ಸಾಮಾನ್ಯ ಹಸುವಿನ ಬೆಣ್ಣೆ ಕೆ.ಜಿ ಗೆ ₹ 600 ಇದೆ. ಹಸುವಿನ ಹಾಲಿನಲ್ಲಿ ನಿರೀಕ್ಷೆಯಷ್ಟು ಬೆಣ್ಣೆ ಬರುವುದಿಲ್ಲ. ಆದ್ದರಿಂದ ಸಂತೆಯಲ್ಲೂ ಅದಕ್ಕೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಹಸುವಿನ ಬೆಣ್ಣೆಯು ಬೇಡಿಕೆಗೆ ತಕ್ಕಂತೆ ₹ 700ವರೆಗೆ ಮಾರಾಟ ಮಾಡಲಾಗುತ್ತದೆ. ಜೊತೆಗೆ ನಾಗಮಂಗಲದ ದೇಸಿ ಹಸುವಿನ ಬೆಣ್ಣೆಗೆ ಅಪಾರ ಬೇಡಿಕೆ ಇದೆ. ದೇಸಿ ಹಸುವಿನ ಬೆಣ್ಣೆಗೆ ಕೆ.ಜಿಗೆ ಸಾವಿರ ರೂಪಾಯಿ ಕೊಡಲು ಸಿದ್ಧವಿರುವ ಗ್ರಾಹಕರೂ ಇದ್ದಾರೆ. ಪ್ರತಿ ವಾರ ತಾಲ್ಲೂಕಿನಲ್ಲಿ ನಡೆಯುವ ಬೆಣ್ಣೆ ಸಂತೆಗೆ ಸುಮಾರು 250-300 ರೈತರು ಬರುತ್ತಾರೆ.

ಹಲವು ರೈತ ಕುಟುಂಬಗಳ ನಿರ್ವಹಣೆಗೆ ಬೆಣ್ಣೆ ಮಾರಾಟವೇ ಮೂಲವಾಗಿದೆ. ಸಂತೆಗೆ ಕೇವಲ ವರ್ತಕರು ಬಂದರೆ ವ್ಯಾಪಾರವೇ ನೀರಸ, ಜೊತೆಗೆ ಹೆಚ್ಚಿನ ಬೆಲೆಯೂ ಸಿಗುವುದಿಲ್ಲ. ಆದರೆ ಮಾರ್ವಾಡಿಗಳು ಬಂದರೆ ದಿನಬಳಕೆಗೆ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುವುದರಿಂದ ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಈ ಕಾರಣಕ್ಕಾಗಿಯೇ ರೈತರ ವ್ಯಾವಹಾರದ ಒಲವು ಮಾರ್ವಾಡಿಗಳ ಕಡೆಗೇ ಹೆಚ್ಚಾಗಿರುತ್ತದೆ.

ನಾಗಮಂಗಲ ತಾಲ್ಲೂಕಿನ ಬೆಣ್ಣೆ ಸಂತೆಗಳಲ್ಲಿ ಸಿಗುವ ಎಮ್ಮೆಯ ಬೆಣ್ಣೆಗೆ ಮೊದಲಿನಿಂದಲೂ ಬೆಂಗಳೂರಿನಲ್ಲಿ ಭಾರೀ ಬೇಡಿಕೆಯಿದೆ. ಅಲ್ಲಿ ಮಾರಾಟವಾಗುವ ಬೆಣ್ಣೆಯು ಇಲ್ಲಿನ ಸಂತೆಗಳಿಂದ ಬರುತ್ತದೆ ಎಂಬುದು ಎಷ್ಟೋ ಬೆಣ್ಣೆ ಪ್ರಿಯರಿಗೆ ತಿಳಿದಿಲ್ಲ. ‘ನಾಗಮಂಗಲ ಬೆಣ್ಣೆ’ಯ ಪರಿಮಳ ಬೆಂಗಳೂರಿನ ಶ್ರೀನಗರ, ಜಯನಗರ, ಹನುಮಂತನಗರ, ಬಸವನಗುಡಿ, ಅಕ್ಕಿಪೇಟೆ, ಬಳೆಪೇಟೆ, ಚಾಮರಾಜಪೇಟೆ ಸೇರಿದಂತೆ ಕೆ.ಆರ್.ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯನ್ನು ಸೃಷ್ಟಿಸಿದೆ. ಅಲ್ಲದೇ ಇಲ್ಲಿನ ಬೆಣ್ಣೆ ಖರೀದಿಗೆ ಮಂಗಳೂರು, ಮೈಸೂರು, ತುಮಕೂರು, ಹಾಸನ ಸೇರಿದಂತೆ ವಿವಿಧ ನಗರಗಳಿಂದ ಜನರು ಬರುತ್ತಾರೆ. ಮಾರ್ವಾಡಿಗಳ ಮೂಲಕ ನಾಗಮಂಗಲ ಬೆಣ್ಣೆಯ ಘಮಲು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೂ ಪಸರಿಸಿದೆ.

ಬೆಳ್ಳೂರು, ಕದಬಹಳ್ಳಿ, ಬಿಂಡಿಗನವಿಲೆಗಳಲ್ಲಿ ಬೆಣ್ಣೆ ಸಂತೆ ನಡೆದರೂ ವ್ಯಾಪಾರಕ್ಕಾಗಿ ಶ್ರವಣಬೆಳಗೊಳ, ತುರುವೆಕೆರೆ, ಚನ್ನರಾಯಪಟ್ಟಣ ತಾಲ್ಲೂಕಿನ ರೈತರೂ ಬೆಣ್ಣೆ ತಂದು ಮಾರಾಟ ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ.

ಹಿಂದೆ ಮಹಿಳೆಯರು ಬೆಣ್ಣೆ ತೆಗೆಯಲು ‘ಕೈ ಮಂತು’ಗಳನ್ನು ಬಳಸಿ ದಿನಗಟ್ಟಲೆ ಮೊಸರು ಕಡೆದು ಬೆಣ್ಣೆ ತೆಗೆಯುತ್ತಿದ್ದರು. ಈಗ ತಂತ್ರಜ್ಞಾನದ ಕೊಡುಗೆಯಿಂದಾಗಿ ಬೆಣ್ಣೆ ತೆಗೆಯಲು ಯಂತ್ರಗಳು ಬಂದಿದ್ದು, ರೈತರು ಅವುಗಳ ಮೊರೆ ಹೋಗಿದ್ದಾರೆ.

ರೈತರು ಬೆಣ್ಣೆ ಮಾರಾಟ ಮಾಡಲು ತಾಲ್ಲೂಕಿನ ವಿವಿಧ ಊರುಗಳಿಂದ ಬೆಳಗಿನ ಜಾವವೇ ಕಾಲ್ನಡಿಗೆಯಲ್ಲಿ ಬರುತ್ತಿದ್ದ ದಿನಗಳು ಇದ್ದವು. ಈಗ ಕಾಲ ಬದಲಾಗಿದೆ. ಸೌಲಭ್ಯಗಳು ಹೆಚ್ಚಾಗಿದ್ದು ರೈತರು ವಾಹನಗಳಲ್ಲಿ ಬಂದು ಮಾರಾಟ ಮಾಡಿ ಹೋಗುತ್ತಾರೆ. ‘ನಾವು ಉಂಡೆ ಲೆಕ್ಕದಲ್ಲಿ ಮಾರಾಟ ಮಾಡಿದರೆ ಲಾಭವಾಗುತ್ತದೆ. ಉಂಡೆಗೆ ನೂರರವರೆಗೂ ಮಾರಾಟ ಮಾಡಬಹುದು. ಒಂದು ಉಂಡೆಯನ್ನು ಮುನ್ನೂರು, ನಾನೂರು ಮತ್ತು ಐನೂರು ಗ್ರಾಂ ವರೆಗೆ ಕಟ್ಟಿರುತ್ತೇವೆ. ನಮ್ಮಲ್ಲಿ ಹಸುವಿನ ಬೆಣ್ಣೆಗೆ ಭಾರಿ ಬೇಡಿಕೆಯಿದ್ದು, ಶುದ್ಧ ಬೆಣ್ಣೆಯನ್ನು ಗ್ರಾಹಕರಿಗೆ ಪೂರೈಸುವುದರಿಂದ ನಿರಂತರವಾದ ಬೇಡಿಕೆಯಿದೆ’ ಎಂದು ಹನುಮನಕೊಪ್ಪಲಿನ ರೈತ ನಂಜೇಗೌಡ ಹೇಳಿದರು.

ಬೆಟ್ಟಗುಡ್ಡಗಳು, ಹೊಲಗದ್ದೆ ಮತ್ತು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ, ಔಷಧೀಯ ಸಸ್ಯಗಳು ಹೇರಳವಾಗಿ ಬೆಳೆಯುವುದರಿಂದ ಹಾಗೂ ದೇಸಿಯ ಹಸುಗಳ ಅವುಗಳನ್ನು ತಿನ್ನುವುದರಿಂದ ಹಾಲಿನಲ್ಲಿ ಮತ್ತು ಬೆಣ್ಣೆಯಲ್ಲೂ ಔಷಧೀಯ ಗುಣಗಳು ಇರುತ್ತವೆ ಎಂದು ರೈತರು ಹೇಳುತ್ತಾರೆ.

‘ಬೆಂಗಳೂರಿನಲ್ಲಿ ಬೆಣ್ಣೆ ಖರೀದಿ ಮಾಡಿದರೆ ಕಣ್ಮುಂದೆಯೇ ಮೋಸ ಹೋಗುತ್ತೇವೆ. ಆದರೆ ಇಲ್ಲಿ ಕೊಡುವ ಹಣಕ್ಕೆ ಮೋಸವಿಲ್ಲ. ಗುಣಮಟ್ಟದ ಬೆಣ್ಣೆ ಸಿಗುತ್ತದೆ. ಮನೆ ಬಳಕೆಗೆ ಮೂರರಿಂದ ನಾಲ್ಕು ದೊಡ್ಡ ಡಬ್ಬಗಳಷ್ಟು ಬೆಣ್ಣೆಯನ್ನು ಪ್ರತಿ ತಿಂಗಳು ಖರೀದಿ ಮಾಡುತ್ತೇನೆ. ಹದಿನೆಂಟು ವರ್ಷಗಳಿಂದ ಈ ಸಂತೆಯಲ್ಲಿಯೇ ಬೆಣ್ಣೆ ಖರೀದಿ ಮಾಡುತ್ತಿದ್ದೇನೆ. ಇಲ್ಲಿಗೆ ನಿರಂತರವಾಗಿ ಬರುವುದರಿಂದ ರೈತರ ನೇರ ಸಂಪರ್ಕವೂ ಇದೆ. ವ್ಯಾಪಾರಿಗಳಿಗಿಂತ ಹತ್ತೋ, ಇಪ್ಪತ್ತೋ ರೂಪಾಯಿ ಹೆಚ್ಚು ನೀಡಿ ಖರೀದಿ ಮಾಡುತ್ತೇವೆ’ ಎಂದು ಬೆಂಗಳೂರಿನ ಮಾರ್ವಾಡಿ ರಾಮ್ ಹೇಳಿದರು.

ತಟ್ಟೆಗಳಲ್ಲಿ ಹೀಗೆ ಬೆಣ್ಣೆಗಳ ಉಂಡೆಗಳನ್ನು ಒಪ್ಪವಾಗಿ ಜೋಡಿಸಿಟ್ಟು ಗ್ರಾಹಕರ ನಿರೀಕ್ಷೆಯಲ್ಲಿ ಮಹಿಳೆಯರು

ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿಯಲ್ಲಿ ಬೆಣ್ಣೆ ತೆಗೆಯುವ ಯಂತ್ರದೊಂದಿಗೆ ಮಹಿಳೆ

ಬಿಂಡಿಗನವಿಲೆ ಸಂತೆಯಲ್ಲಿ ಬೆಣ್ಣೆ ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.