ADVERTISEMENT

ಸಾಹಿತ್ಯ, ಓದು, ಚರ್ಚೆ, ಸಂವಾದ ಇತ್ಯಾದಿ...

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
ಕೇಳು ಮನಸೇ ಕಾರ್ಯಕ್ರಮದಲ್ಲಿ ಲೇಖಕ ಅನಂತ್ ಕುಣಿಗಲ್
ಕೇಳು ಮನಸೇ ಕಾರ್ಯಕ್ರಮದಲ್ಲಿ ಲೇಖಕ ಅನಂತ್ ಕುಣಿಗಲ್   

ಬೆಂಗಳೂರು ಎಂಬ ಮಹಾನಗರಕ್ಕೆ ಕಾಲಿಟ್ಟು ನಾಲ್ಕೈದು ದಿನಗಳು ಆಗಿದ್ದವು. ಏಕಾಂಗಿತನ ಕಾಡುತ್ತಿತ್ತು. ಆಗ ಜೊತೆಯಾಗಿದ್ದು ಸೋಷಿಯಲ್‌ ಮೀಡಿಯಾ. ಫೇಸ್‌ಬುಕ್‌ವೊಂದರ ಪೇಜ್‌ನಲ್ಲಿ ‘ಬಾ ಗುರು ಬುಕ್‌ ತಗೋ’ ಎಂಬುದಾಗಿ ಆಹ್ವಾನ ನೀಡಿರುವುದು ಕಾಣಿಸಿತು. ನಾನು ಕುತೂಹಲಗೊಂಡು ಅದರ ಬಗ್ಗೆ ಹುಡುಕಾಡಿದೆ. ಪುಸ್ತಕ ಬರೆದ ಲೇಖಕರೇ ರಸ್ತೆಬದಿಯಲ್ಲಿ ನಿಂತು ಪುಸ್ತಕ ಮಾರುತ್ತಾರೆ‌ ಎನ್ನುವುದು ತಿಳಿಯಿತು!

ಈ ಅಭಿಯಾನವನ್ನು ಆರಂಭಿಸಿದವರು ಸಾಹಿತಿ ಜಯರಾಮಚಾರಿ. ಅವರ ಫೇಸ್‌ಬುಕ್‌ ಖಾತೆಯಲ್ಲಿ ಇಣುಕಿದಾಗ, ಸಾಹಿತಿ ವಸುಧೇಂದ್ರ ಹಂಚಿಕೊಂಡ ಫೇಸ್‌ಬುಕ್‌ ಪೋಸ್ಟಿನಿಂದ ಪ್ರೇರಿತರಾಗಿ ಇದನ್ನು ಆರಂಭಿಸಿದಾಗಿ ಹೇಳಿಕೊಂಡಿದ್ದರು. ಅವರಿಗೆ ಸಾಥ್‌ ನೀಡಿದ್ದು ಮತ್ತೊಬ್ಬ ಸಾಹಿತಿ ಬಿ.ಕೆ. ವಿಕ್ರಂ. ವರ್ಷದ ಹಿಂದೆ ಕಬ್ಬನ್ ಪಾರ್ಕ್‌ನಲ್ಲಿ ಪುಸ್ತಕ ಮಾರಲು ಹೊರಟ ಲೇಖಕರು, ಈಗ ಬೆಂಗಳೂರಿನ ವಿವಿಧ ಭಾಗಗಳಲ್ಲಿ ತಿಂಗಳಲ್ಲಿ ಎರಡು ಬಾರಿ ‘ಬಾ ಗುರು ಬುಕ್ ತಗೋ’ ಎನ್ನುತ್ತಾ 45 ದಿನಗಳಲ್ಲಿ ತಾವೇ ಬರೆದ ಪುಸ್ತಕಗಳ 1700 ಪ್ರತಿಗಳನ್ನು ಮಾರಾಟ ಮಾಡಿದ್ದಾರೆ! ಈ ಸಾಹಸಕ್ಕೆ 40ಕ್ಕೂ ಹೆಚ್ಚು ಸಾಹಿತಿಗಳು ಕೈಜೋಡಿಸಿದ್ದಾರೆ. ‘ತಮ್ಮ ಪುಸ್ತಕಗಳನ್ನು ತಾವೇ ಮಾರಾಟ ಮಾಡುವ ಮೂಲಕ ಹೊಸ ಅನುಭವದ ಜೊತೆಗೆ ಹೊಸ ಓದುಗರು, ಪುಸ್ತಕ ಮಾರಾಟದ ಕಷ್ಟಸುಖ ಗೊತ್ತಾಗುತ್ತಿದೆ’ ಎನ್ನುತ್ತಾರೆ ಜಯರಾಮಾಚಾರಿ. 

ಫೇಸ್‌ಬುಕ್‌ನಲ್ಲಿ ಕಣ್ಣಿಗೆ ಬಿದ್ದ ಮತ್ತೊಂದು ವಿಭಿನ್ನ ಕಾರ್ಯಕ್ರಮ ‘ಹಳೇ ಬಾಟ್ಲಿ ಹೊಸ ವೈನು’. ಈ ಹೆಸರೇ ಆಕರ್ಷಕ. ಜಯರಾಮಚಾರಿ ಜೊತೆ ವಿಕ್ರಂ‌ ಬಿ.ಕೆ, ಕಿರಣ್‌ಕುಮಾರ್ ಕೆ.ಆರ್. ಸೇರಿಕೊಂಡು ಆರಂಭಿಸಿದ ‘ಹಳೇ ಬಾಟ್ಲಿ ಹೊಸ ವೈನು-ಸಮಕಾಲೀನ ಬರಹಗಾರರ ಅಭಿವ್ಯಕ್ತಿಗೊಂದು ವೇದಿಕೆ’ ಎನ್ನುವ ಈ ಕಾರ್ಯಕ್ರಮ ಹೊಸ ಪ್ರಯೋಗ ಎನ್ನಲು ಅಡ್ಡಿಯಿಲ್ಲ. ಸಮಕಾಲೀನ ಸಾಹಿತಿಗಳ ಕೃತಿಗಳ ಬಗ್ಗೆ ಹಿರಿಯ ಸಾಹಿತಿಗಳು ಸಂವಾದ ನಡೆಸಿಕೊಡುವ ಮೂಲಕ ಹೊಸ ಹೊಳಹುಗಳನ್ನು ಸ್ಪುರಿಸುವ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮದ ಮೂರು ಸಂಚಿಕೆಗಳು ಇದುವರೆಗೆ ಜರುಗಿದೆ. ‘ಹಲೋ ಕತೆಗಾರ’, ‘ಹಲೋ ಕತೆಗಾರ್ತಿ’ ಹಾಗೂ ‘ಕವಿಗಳಿಗೆ ಕ್ಲಾಸು’ ಹೆಸರಿನಲ್ಲಿ ಸಾಹಿತ್ಯ ಸಂವಾದ ನಡೆಸುತ್ತಿದ್ದಾರೆ.

ADVERTISEMENT

‘ಮಾಸದ ಮಂಥನ’–ಪ್ರತಿ ತಿಂಗಳ ಮೊದಲ ಭಾನುವಾರ ಬೆಂಗಳೂರಿನ‌ ದೊಡ್ಡಕನ್ನೆಲ್ಲಿಯ ‘ಸಾನಿಧ್ಯ’ದಲ್ಲಿ ನಡೆಯುವ ಕಾರ್ಯಕ್ರಮ. ಇದರಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಅಧ್ಯಾತ್ಮ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರೊಂದಿಗೆ ಸಂವಾದ, ಕಾರ್ಯಗಾರ, ವಿಚಾರ ಸಂಕಿರಣ ನಡೆಯುತ್ತದೆ. 2017ರಲ್ಲಿ ಶುರುವಾದ ಮಾಸದ ಮಂಥನದಲ್ಲಿ ‌ಇದುವರೆಗೆ 65 ಸಂಚಿಕೆಗಳಾಗಿವೆ. ಕವಿ ಸುಬ್ರಾಯ ಚೊಕ್ಕಾಡಿ, ಬೇಲೂರು ರಘುನಂದನ್, ಎಚ್.ಡುಂಡಿರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಇದರ ರೂವಾರಿ ಶಿವಕೀರ್ತಿ.

ಸಾಹಿತಿ ವಸುಧೇಂದ್ರ ‘ನಾಕೊಳ್ಳೇ ಮಾತು’ ಎನ್ನುವ ಹೊಸ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಇಲ್ಲಿ ವಸುಧೇಂದ್ರ ಲೇಖಕರ ಜೊತೆಗೆ ಸಂವಾದ ನಡೆಸುತ್ತಾರೆ. ಲೇಖಕರ ಬರಹ, ಬದುಕು, ಹವ್ಯಾಸ, ಸವಾಲುಗಳನ್ನು ತಿಳಿಯುವ ಪ್ರಯತ್ನ ಇದಾಗಿದೆ. ಚರ್ಚ್ ಸ್ಟ್ರೀಟ್‌ನ ದಿ ಬುಕ್ ವರ್ಮ್‌ನಲ್ಲಿ ನಡೆದ ಮೊದಲ ಸಂಚಿಕೆಯಲ್ಲಿ ಕತೆಗಾರರಾದ ಕರ್ಕಿ ಕೃಷ್ಣಮೂರ್ತಿ ಹಾಗೂ ಕಾವ್ಯ ಕಡೆಮೆ ಅವರೊಂದಿಗೆ ಸಂವಾದ ನಡೆಸಿದರು. ಇದುವರೆಗೆ ಎರಡು ಸಂಚಿಕೆಗಳು ನಡೆದಿವೆ. ಇನ್ನು ಮುಂದೆ ತಿಂಗಳಿಗೊಮ್ಮೆ ‘ನಾಕೊಳ್ಳೇ ಮಾತು’ಗಳನ್ನು ಸಾಹಿತ್ಯ ಪ್ರೇಮಿಗಳು ಕೇಳಬಹುದು.

ಪುಸ್ತಕ ತಗೊಳ್ಳಿ...

ಅಂದು ಭಾನುವಾರ ಮುಂಜಾನೆ. ರಸ್ತೆಬದಿಯಲ್ಲಿ ಕನ್ನಡ ಪುಸ್ತಕಗಳನ್ನು ಹರಡಿಕೊಂಡು ನಿಂತಿದ್ದ ಹುಡುಗನೊಬ್ಬ, ‘ಬನ್ನಿ, ಪುಸ್ತಕ ತಗೊಳ್ಳಿ’ ಎಂದು ಮುಗುಳ್ನಗೆ ಬೀರುತ್ತಾ ಆಹ್ವಾನಿಸಿದ. ರಸ್ತೆಬದಿಯ ಖಾಲಿ ಜಾಗದಲ್ಲಿ ಸ್ಟಾಂಡ್‌ನಲ್ಲಿ ಒಂದಿಷ್ಟು ಪುಸ್ತಕಗಳನ್ನು ಜೋಡಿಸಿಟ್ಟಿದ್ದನು. ಪಕ್ಕದಲ್ಲಿ ‘ಕನ್ನಡ ಪುಸ್ತಕ ಓದಿ ಎಷ್ಟು ದಿನ ಆಯ್ತು?’ ಎಂಬ ಫಲಕ ನೋಡಿದ ನನಗೆ, ‘ಹೌದಲ್ವಾ, ಹೈಸ್ಕೂಲು ಕಾಲೇಜು ದಿನಗಳಲ್ಲಿ ಹುಚ್ಚಿಗೆ ಬಿದ್ದವನಂತೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕೆ.ಶಿವರಾಮ ಕಾರಂತ, ಎಲ್‌.ಎಲ್‌.ಭೈರಪ್ಪ ಅವರ ಪುಸ್ತಕಗಳನ್ನು ಓದುತ್ತಿದ್ದವನು, ಈಗ ಓದಿ ಎಷ್ಟು ದಿನ ಆಯ್ತು’ ಎಂದು ಪ್ರಶ್ನಿಸಿಕೊಂಡಾಗ, ಕೊನೆಯ ಬಾರಿ ಓದಿದ ಪುಸ್ತಕದ ಹೆಸರು ಕೂಡ ನೆನಪಿಗೆ ಬರಲಿಲ್ಲ. ಒಂದೆರಡು ಪುಸ್ತಕ ಕೊಂಡುಕೊಂಡು, ಪುಸ್ತಕ ಮಾರುತ್ತಿದ್ದ ಹುಡುಗನ ಬಳಿ ಮಾತಿಗಿಳಿದೆ.

‘ಇದು ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್ ಅವರ ಪರಿಕಲ್ಪನೆ. ಕನ್ನಡ ಪುಸ್ತಕಗಳನ್ನು ಕನ್ನಡಿಗರು ಇರುವ ಕಡೆಗಳಲ್ಲಿ ಮಾರಾಟ ಮಾಡಬೇಕು. ಪುಸ್ತಕ ಓದುವವರ ಸಂಖ್ಯೆ ಜಾಸ್ತಿಯಾಗಬೇಕು ಎನ್ನುವ ಪ್ರಯತ್ನವಿದು. ಆರೇಳು ತಿಂಗಳುಗಳಿಂದ ಪ್ರತಿ ಭಾನುವಾರ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ, ರಸ್ತೆಬದಿಗಳಲ್ಲಿ ನಿಂತು ಪುಸ್ತಕ ಮಾರುತ್ತಿದ್ದೇವೆ. ನಮ್ಮಲ್ಲಿ ಬಹುತೇಕರು ವಿದ್ಯಾರ್ಥಿಗಳು. ಇದರಿಂದ ನಮಗೆ ಸಂಭಾವನೆ ಸಿಗುತ್ತೆ’ ಎಂದನು ಆ ಹುಡುಗ.

‘ಕೇಳು ಮನಸೇ’–ಇದು ಓಪನ್ ಮೈಕ್ ಕಾರ್ಯಕ್ರಮ. ಕನ್ನಡದಲ್ಲಿ ಕಥೆ, ಕವನ ವಾಚನಕ್ಕಾಗಿಯೇ ಸೃಷ್ಟಿಯಾದ ವೇದಿಕೆ. ವಿಶಿಷ್ಟ, ವಿಭಿನ್ನ ರೀತಿಯ ಸಾಹಿತ್ಯ ಚಟುವಟಿಕೆಗಳನ್ನು ಮಾಡುತ್ತಿದೆ. ಕತೆಗಾರ ಪ್ರವೀಣ್‌ಕುಮಾರ್ ಜಿ. ನೇತೃತ್ವದಲ್ಲಿ 2022ರಿಂದ ನಡೆಯುತ್ತಿರುವ ‘ಕೇಳು ಮನಸೇ’ ತಿಂಗಳಲ್ಲಿ ಒಂದು ಬಾರಿ ನಡೆಯುತ್ತದೆ. ಇದುವರೆಗೆ 16 ಸಂಚಿಕೆಗಳಾಗಿವೆ. ಸುಚಿತ್ರಾ ಫಿಲ್ಮ್‌ ಸೊಸೈಟಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಒಂದು ಸಂಚಿಕೆಯಲ್ಲಿ ಆರು ಜನರಿಗೆ ಅವಕಾಶವಿದ್ದು, ಕನ್ನಡದ ಒಳ್ಳೆಯ ಕತೆ, ಕವನಗಳು ಇಲ್ಲಿ ಕೇಳಲು ಸಿಗುತ್ತವೆ. 

‘ಅರಳಿಕಟ್ಟೆ’ ಎನ್ನುವ ಓಪನ್ ಮೈಕ್ ಕೂಡ ಕನ್ನಡಿಗರ ಮನ ಗೆದ್ದಿದೆ. ಕನ್ನಡಿಗರಿಗಾಗಿ ಹಾಗೂ ಕನ್ನಡಕ್ಕಾಗಿ ಇರುವ ಓಪನ್ ಮೈಕ್ ವೇದಿಕೆಗಳಲ್ಲಿ ಇದೂ ಒಂದು. ಎರಡು ವರ್ಷಗಳ ಹಿಂದೆ ಶುರುವಾದ ಅರಳಿಕಟ್ಟೆಯು ಕತೆ, ಕವನ, ಹಾಡು, ಅನುಭವಗಳಿಗೆ ವೇದಿಕೆಯಾಗಿದೆ. ಪ್ರತಿ ತಿಂಗಳಿಗೊಮ್ಮೆ ಭಾನುವಾರದಂದು ಬಸವನಗುಡಿಯ ಪಾಪ್ಸ್ ಆಫ್ ಪಾಸ್ಟೆಲ್‌ ಸಭಾಂಗಣದಲ್ಲಿ ಹಾಗೂ ವಿಶೇಷ ಸಂದರ್ಭದಲ್ಲಿ ಬೆಂಗಳೂರಿನ ವಿವಿಧೆಡೆ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಹೊಸಬರ ಈ ತಂಡ ವಿಶೇಷ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಪ್ರತಿಭೆಗಳಿಗೆ, ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದೆ‌.  ಬೆಂಗಳೂರು ಹೇಳಿಕೇಳಿ ಮಹಾನಗರ. ಈ ಊರಲ್ಲಿ ಅದೆಷ್ಟೋ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬಹುದು. ಏನಾದರೇನು, ಕನ್ನಡನಾಡಿನ ರಾಜಧಾನಿಯಲ್ಲಿ ಕನ್ನಡ ಸಾಹಿತ್ಯ, ಓದು, ಚಿಂತನ, ಮಂಥನ, ಸಂವಾದ ನಡೆಯುತ್ತಲೇ ಇರಲಿ. ಕನ್ನಡ ಓದಿನ ಅಭಿರುಚಿ ಬೆಳೆಯುತ್ತಲೇ ಇರಲಿ ಎಂದು ಮನಸ್ಸು ಹಂಬಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.