ADVERTISEMENT

ಸ್ವಸ್ಥಿ ಪೊರೆದ ಅಳಿಲು ಮರಿಗಳು!

ಬೀರಣ್ಣ ನಾಯಕ ಮೊಗಟಾ
Published 13 ಅಕ್ಟೋಬರ್ 2024, 0:25 IST
Last Updated 13 ಅಕ್ಟೋಬರ್ 2024, 0:25 IST
ಅಂಗೈಯಲ್ಲಿ ಅಳಿಲು ಮರಿಗಳ ಆಟ
ಅಂಗೈಯಲ್ಲಿ ಅಳಿಲು ಮರಿಗಳ ಆಟ   

ಅಳಿಲು ಸೇವೆ ಎನ್ನುವುದನ್ನು ಅರ್ಥವಾಗದ ದಿನದಿಂದಲೂ ಕೇಳುತ್ತಾ ಬೆಳದವರು ನಾವು. ಇದು ರಾಮಾಯಣದಿಂದ ಕೊಡುಗೆಯಾಗಿ ಬಂದ ‘ಅಳಿಲು ಸೇವೆ’ಯಲ್ಲ..ಇದು ‘ಅಳುವಿನ ಸೇವೆ’!

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ನಮ್ಮ ಮನೆಯ ತೋಟದಲ್ಲಿ ಹಲವು ಸಣ್ಣ ಪುಟ್ಟ ಪ್ರಾಣಿಗಳು ಹಾಗೂ ಪಕ್ಷಿಗಳು ಬಿಡಾರ ಹೂಡುವುದು ಹೊಸತೇನಲ್ಲ. ಪಿಕಳಾರ ಪಕ್ಷಿ ಮನೆಯ ಕಿಟಕಿಯಲ್ಲಿಯೇ ಗೂಡು ಕಟ್ಟಿ ತನ್ನ ಸಂಸಾರ ಶುರು ಮಾಡಿದರೆ, ಅಳಿಲುಗಳು ನಿನಗೇನು ಕಡಿಮೆ ಎಂಬಂತೆ ಮನೆಯ ಎರಡು ಕಡೆ ನಾಲ್ಕೈದು ವರ್ಷಗಳಿಂದ ತಾವೇ ಮೂಲಗೇಣಿದಾರರು ಎನ್ನುವಂತೆ ಗೂಡು ಮಾಡಿ ವಾಸಿಸುತ್ತಿವೆ. ಒಂದು ಬಿಡಾರ ಕೆಳಮನೆಯಲ್ಲಿದ್ದರೆ, ಇನ್ನೊಂದು ಬಿಡಾರ ಮಾಳಿಗೆಯ ಮೇಲಿದೆ. ಈ ಪ್ರಾಣಿ ಪಕ್ಷಿಗಳಿಗೆ ನಮ್ಮ ಹೆದರಿಕೆ ಎಂಬುದೇ ಇಲ್ಲ. ಸಮಯಕ್ಕೆ ಅನುಸಾರವಾಗಿ ಅವುಗಳಿಗೆ ನಾವೇ ಹೆದರಬೇಕು!

ಅಂದು ಭಾನುವಾರ. ಮಾಳಿಗೆಯ ಮೇಲಿನ ಅಳಿಲಿನ ಬಿಡಾರದಿಂದ ವಾಸನೆ ಬರಲು ಶುರುವಾಯಿತು. ಜೊತೆಗೆ ‘ಚಿಂವ್...ಚಿಂವ್...’ಎನ್ನುವ ದಯನೀಯ ಧ್ವನಿ ಬೇರೆ. ಅಳಿಲು ಗೂಡಿನ ಹತ್ತಿರ ಹೋಗಿ ನೋಡಿದಾಗ ಆಶ್ಚರ್ಯ ಮತ್ತು ಆಘಾತ ಕಾದಿತ್ತು. ತಾಯಿ ಅಳಿಲು ಯಾವುದೋ ಕಾರಣದಿಂದ ಅಸುನೀಗಿ ಕೊಳೆತು ವಾಸನೆ ಬರುತ್ತಿದ್ದರೆ, ಅದರ ಮೂರು ಮರಿಗಳು ಹಸಿವಿನಿಂದ ‘ಚಿಂವ್...ಚಿಂವ್...’ಎನ್ನುತ್ತಾ ನಿತ್ರಾಣಗೊಂಡಿದ್ದವು. ಪ್ರಾಣಿ ಪಕ್ಷಿಗಳ ಕುರಿತು ಅಪಾರ ಪ್ರೀತಿ ಹೊಂದಿರುವ ಸ್ವಸ್ಥಿ ಭಟ್ಟ ಅವರು ಆ ಮರಿಗಳನ್ನು ಗೂಡಿನಿಂದ ಕೆಳಗಿಳಿಸಿ ಪ್ರಯಾಸ ಪಟ್ಟು ಹಾಲುಣಿಸಿದರು. ಹೊತ್ತು ಹೊತ್ತಿಗೆ ಚೇತರಿಸಿಕೊಂಡ ಮರಿಗಳು ನಿಧಾನವಾಗಿ ಹಣ್ಣಿನ ತುಂಡುಗಳನ್ನು ತಿನ್ನಲು ಶುರು ಮಾಡಿದವು. ಹಸಿವೆಯಾದಾಗ ‘ಚಿಂವ್...ಚಿಂವ್...’ಎನ್ನುತ್ತ ಅವುಗಳಿಗೆ ತಾಯಿಯಾಗಿರುವ ಸ್ವಸ್ಥಿ ಭಟ್ಟರನ್ನು ಕರೆಯುತ್ತಿದ್ದವು. ಲವಲವಿಕೆಯಿಂದ ಬೆಳೆಯುತ್ತಿರುವ ಅವು ಸ್ವಸ್ಥಿ ಭಟ್ಟರನ್ನು ನೋಡಿದರೆ ಅವರ ಮೈಏರಿ ಓಡಾಡುತ್ತವೆ. ಮಕ್ಕಳನ್ನು ಕಂಡರೆ ಖುಷಿ ಪಡುವ ಈ ಅಳಿಲು ಮರಿಗಳು ಅವರ ಮೈ ಏರಿದರೆ ಅಲ್ಲೇ ಇರಲು ಹಟ ಮಾಡುತ್ತವೆ.

ADVERTISEMENT

ಈಗಾಗಲೇ ಈ ಮರಿಗಳಿಗೆ ನಾಮಕರಣ ಕೂಡಾ ಆಗಿದೆ. ಹೆಣ್ಣು ಮರಿಗಳು ಚಿಂಟು, ಚಾರು, ಗಂಡು ಮರಿಗೆ ಚೋಟು ಎಂದು ಹೆಸರಿಡಲಾಗಿದೆ. ಬೆಳೆದು ಹೊರಗೆ ಬದುಕುವ ಸಾಮರ್ಥ್ಯ ಬಂದ ನಂತರ ತೋಟದಲ್ಲಿ ಬಿಡುವಾಸೆ ಸ್ವಸ್ಥಿ ಅವರದಾಗಿತ್ತು. ಅವು ಮನೆ ತುಂಬಾ ಓಡಾಡಿ ತಾವೇ ಹಣ್ಣುಗಳನ್ನು ತಿನ್ನಲಾರಂಭಿಸಿದವು. ಹಿಡಿಯಲು ಹೋದರೆ ಓಡಿ ತಪ್ಪಿಸಿ ಕೊಳ್ಳುತ್ತಿದ್ದವು. ಅಡಿಕೆಮರದ ಹತ್ತಿರ ತೆಗೆದುಕೊಂಡು ಹೋದಾಗ ಅವೇ ಮರಕ್ಕೆ ಹಾರಿ, ನಮ್ಮನ್ನು ನೋಡುತ್ತ, ನೋಡುತ್ತ ಸರಸರನೆ ಮರ ಏರಿ ಮರೆಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.