ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅಸ್ಪೃಶ್ಯತೆಯ ಕಳಂಕವನ್ನು ತೊಳೆಯಲು ತಮ್ಮದೇ ರೀತಿಯಲ್ಲಿ ಹೋರಾಡಿದರು. ಕೋಲಾರ ಜಿಲ್ಲೆಯ ‘ಅರಿವು ಶಿವಪ್ಪ’ ಹತ್ತು ವರ್ಷಗಳ ಹಿಂದೆ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಆರಂಭಿಸಿದ್ದು, ಇವರೊಂದಿಗೆ ಸಾವಿರಾರು ಹೆಜ್ಜೆಗಳು ಸೇರಿ ಕಾಲುದಾರಿಯೇ ನಿರ್ಮಾಣವಾಗಿದೆ!
‘ನಮ್ಮ ಹಳ್ಳಿಯ ಪಾಂಡುರಂಗ ದೇವಸ್ಥಾನವನ್ನು ಕಟ್ಟಿದವರಲ್ಲಿ ನಮ್ಮಪ್ಪ ಆಂಜಿನಪ್ಪ, ದೊಡ್ಡಪ್ಪ ಪೈಲ್ವಾನ್ ಸ್ಟಾರ್ ಮಣಿ ಕೂಡ ಇದ್ದರು. ಕಟ್ಟಿದ ಮೇಲೆ ಅಲ್ಲಿಗೆ ಹೋಗುವ ಅವಕಾಶವೇ ಸಿಕ್ಕಿರಲಿಲ್ಲ. ಯಾಕೆಂದರೆ ನಾವು ದಲಿತರು. ಆದರೆ, ಹಳ್ಳಿಯಲ್ಲಿ ಅರಿವು ಶಿವಪ್ಪನವರು ಏರ್ಪಡಿಸಿದ್ದ ‘ದಲಿತರ ಗೃಹ ಪ್ರವೇಶ’ ಕಾರ್ಯಕ್ರಮದ ನಂತರ ನಮ್ಮಲ್ಲಿ ಹೊಸ ಎಚ್ಚರ ಮೂಡಿಸಿತ್ತು. ಇತರೆ ಜಾತಿಗಳ ಮಂದಿಯ ಮನೆಯೊಳಗೆ ಕುಳಿತು ಮಾತನಾಡುವ ನಾವು, ದೇವಾಲಯಕ್ಕೂ ಯಾಕೆ ಹೋಗಬಾರದೆನ್ನಿಸಿತು. ಗುಡಿಯನ್ನು ಕಟ್ಟಿದವರಿಗೆ, ಅದು ಹೇಗಿದೆ ಎಂದು ನೋಡುವ ಅವಕಾಶವೇ ಇಲ್ಲವೆಂದರೆ ಹೇಗೆ?’
ಕೋಲಾರ ತಾಲ್ಲೂಕಿನ ಹೂವಳ್ಳಿಯ ಯುವಕ ನಾಗರಾಜ್ ಹೇಳುತ್ತಾ ಹೋದರು...
‘ಸರಿ, ಎಲ್ಲ ಮುಖಂಡರೊಂದಿಗೆ ಮಾತಾಡಿದೆವು. ಪ್ರತಿ ಸಮುದಾಯದಿಂದಲೂ ನಾಲ್ವರು ಮುಖಂಡರನ್ನು ಆಯ್ಕೆ ಮಾಡಲಾಯಿತು. ನಮ್ಮ ಸಮುದಾಯದಿಂದಲೂ ನಾಲ್ವರು ಮುಖಂಡರಿದ್ದರು. ವರ್ಷಕ್ಕೊಮ್ಮೆ ನಡೆಯುವ ಕರಗದ ಜಾತ್ರೆಯಲ್ಲಿ ಪಾಡುರಂಗ ಗುಡಿಗೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸುವ ತೀರ್ಮಾನವಾಯಿತು. ನನ್ನ ಜೊತೆ ಗುಡಿಯ ಒಳಕ್ಕೆ ಬಂದ ಅಪ್ಪ, ದೊಡ್ಡಪ್ಪ ಇಬ್ಬರೂ ದೇವಾಲಯದಲ್ಲಿ ತಾವು ನಿಲ್ಲಿಸಿದ್ದ ಕಂಬಗಳನ್ನು ತಬ್ಬಿಕೊಂಡು ನಿಂತ ಕ್ಷಣವನ್ನು ಜೀವನದಲ್ಲಿ ಮರೆಯಲಾರೆ. ಇದು ನಮ್ಮ ಬದುಕಿನಲ್ಲಿ, ಹಳ್ಳಿಯಲ್ಲಿ ಆದ ದೊಡ್ಡ ಬದಲಾವಣೆ..’
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿಯಲ್ಲಿ ಇಪ್ಪತ್ತನಾಲ್ಕು ವರ್ಷಗಳ ಹಿಂದೆ ನಡೆದಿದ್ದ ದಲಿತರ ನರಮೇಧ ಯಾರಿಗೆ ನೆನಪಿಲ್ಲ?. ಈಗ ಅದೇ ನೆಲದಲ್ಲಿ ಅಸ್ಪೃಶ್ಯತೆಯ ವಿರುದ್ಧ ಸುಧಾರಣೆಯ ಮಾದರಿ ಮೂಡಿದೆ. ಕುರಟಹಳ್ಳಿ ಇಂಥ ಬದಲಾವಣೆಗೆ ಸಾಕ್ಷಿಯಾಗಿದೆ.
ಅಲ್ಲಿಯೂ ಇತ್ತೀಚೆಗೆ ಊರ ಹಬ್ಬ ಚೌಡೇಶ್ವರಿ ದೀಪೋತ್ಸವವನ್ನು ಎಲ್ಲ ಸಮುದಾಯದವರೂ ಸೇರಿಯೇ ಆಚರಿಸಿದ್ದಾರೆ. ದಲಿತರನ್ನು ಕೂಡಿಕೊಂಡು ಉತ್ಸವ ಮಾಡಬೇಕೆ, ಬೇಡವೆ ಎಂಬ ದ್ವಂದ್ವವೇ ಅಲ್ಲಿ ದೀಪೋತ್ಸವಕ್ಕೆ ಹಲವು ವರ್ಷಗಳಿಂದ ತಡೆಯಾಗಿತ್ತು. ಗ್ರಾಮದ ರೈತ ರಾಧಾಕೃಷ್ಣ ಅವರ ಮನೆಯಲ್ಲಿ, ಮುಳಬಾಗಿಲಿನವರಾದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಸಮ್ಮುಖದಲ್ಲಿ ಶಿವಪ್ಪ ಏರ್ಪಡಿಸಿದ್ದ ‘ದಲಿತರ ಗೃಹ ಪ್ರವೇಶ’ ಕಾರ್ಯಕ್ರಮ ಅದನ್ನು ಕರಗಿಸಿದ ಬಳಿಕ, ದಲಿತರ ಕೇರಿಯಲ್ಲೂ ಮೆರವಣಿಗೆ ನಡೆದು, ಊರ ಹಬ್ಬಕ್ಕೆ ಎಲ್ಲರೂ ಒಟ್ಟಾಗಿದ್ದಾರೆ.
ಬಯಲು ಸೀಮೆಯ ಅವಳಿ ಜಿಲ್ಲೆಗಳಲ್ಲಿ ಮನವಿಟ್ಟು ಓಡಾಡಿದರೆ ಇಂಥ ಸುಧಾರಣೆಯ ಮಾದರಿಗಳು ಈಗ ಹಲವು ಹಳ್ಳಿಗಳಲ್ಲಿ ಸಿಗುತ್ತವೆ. ಇದೇನೂ ಧುತ್ತೆಂದು ಆಗಿದ್ದಲ್ಲ. ಒಂದು ದಶಕದ ನಿರಂತರ ಪ್ರಯತ್ನದ ಫಲ.
ಅಸ್ಪೃಶ್ಯತೆ ನಿವಾರಣೆಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ನಡೆಸಿದ ಸಂಘರ್ಷದ ಜೀವನ ಮತ್ತು ಹೋರಾಟಕ್ಕೆ ಕೊನೆಯೇ ಇಲ್ಲ ಎಂಬ ಸನ್ನಿವೇಶ ಈಗಲೂ ದೇಶದಲ್ಲಿದೆ. ಅಸ್ಪೃಶ್ಯತೆ ನಿಷೇಧಿಸಿ ಕಾನೂನು ಜಾರಿಯಾಗಿದೆ ಎಂದು ಆಳುವವರು ಹೇಳುತ್ತಾರೆ. ಆದರೆ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಹಲವು ರೂಪಗಳಲ್ಲಿ ಇನ್ನೂ ಉಸಿರಾಡುತ್ತಿದೆ. ನಗರೀಕರಣಕ್ಕೆ ಒಳಗಾದ ಬಳಿಕವೂ ಹಳ್ಳಿಗಳಲ್ಲಿ ಜಾತಿ ತಾರತಮ್ಯದಲ್ಲೇನೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ದಲಿತರು ಇತರರ ಮನೆ, ದೇವಾಲಯಕ್ಕೆ ಬರುವಂತಿಲ್ಲ ಎಂಬ ನಿಷೇಧ ನುಡಿ ಗಾಳಿಯಲ್ಲಿ, ಹೇಳುವವರ ಗಂಟಲಲ್ಲಿ, ಕೇಳಿಸಿಕೊಳ್ಳುವವರ ಎದೆಯಲ್ಲಿ ಬೆಚ್ಚಗೇ ಇದೆ. ಕೆಲವೊಮ್ಮೆ ಅದು ಹೊರಬರುತ್ತದೆ. ಹಲವೊಮ್ಮೆ ಒಳಗೇ ಉಳಿದುಕೊಂಡೇ ಫರ್ಮಾನು ಹೊರಡಿಸುತ್ತದೆ. ‘ಅಸ್ಪೃಶ್ಯತೆಯನ್ನೇ ಜೀವಿಸುವ ಈ ಹಳ್ಳಿಗಳ ಸಹವಾಸವೇ ಬೇಡ’ ಎಂದು ಎದ್ದು ನಗರದ ಕಡೆಗೆ ನಡೆದ ಹೊಸ ತಲೆಮಾರಿನ ಹಾದಿಯಲ್ಲೂ ಅದು ಇದೆ.
‘ಹಳ್ಳಿಯಲ್ಲಿ ಅಸ್ಪೃಶ್ಯತೆ ಇದೆ’ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದರೆಂಬ ಏಕೈಕ ಕಾರಣಕ್ಕೆ ಬಳ್ಳಾರಿಯ ಹಳ್ಳಿಯೊಂದರಲ್ಲಿ ಕೆಲವು ವರ್ಷಗಳ ಹಿಂದೆ ದಲಿತ ಯುವಕನೊಬ್ಬನನ್ನು ಹಳ್ಳಿ ಬಿಡುವಂತೆ ಮಾಡಲಾಗಿತ್ತು. ನಗರದಲ್ಲಿ ಮನೆ ಮಾಡಿದ ಆತ ಮತ್ತೆ ಅಲ್ಲಿಗೆ ಹೋಗಲಿಲ್ಲ.
ಕೋಲಾರ–ಚಿಕ್ಕಬಳ್ಳಾಪುರ ಎಂಬ ಅವಳಿ ಜಿಲ್ಲೆಗಳಲ್ಲಿ ಈ ಸುಧಾರಣೆ ಹೇಗೆ ಸಾಧ್ಯವಾಯಿತು ಎಂಬುದನ್ನು ತಿಳಿಯಲು ‘ದಲಿತರ ಗೃಹ ಪ್ರವೇಶ’ ಎಂದರೇನೆಂದು ಅರ್ಥವಾಗಬೇಕು. ಅದನ್ನು ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಜಿ.ಶಿವಪ್ಪ ತಮ್ಮ ಮನೆಯಿಂದಲೇ ಆರಂಭಿಸಿದರು. ಅದು ‘ಅಸ್ಪೃಶ್ಯತೆ ಮುಕ್ತ ಭಾರತ’ದತ್ತ ನಡಿಗೆಯ ಮೊದಲ ಹೆಜ್ಜೆ. ಅದು ಅವರ ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳ, ಸ್ವಂತ ಹಣದಿಂದ ಮಾಡುವ ಕಾಯಂ ಕಾಯಕ.
ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮಣಿಘಟ್ಟ ಗೊಲ್ಲಹಳ್ಳಿಯ ತಮ್ಮ ಮನೆಯಲ್ಲಿ ಹತ್ತು ವರ್ಷದ ಹಿಂದೆ, ತಂದೆ ಗಟ್ಟಪ್ಪನವರ ತಿಥಿಯ ದಿನವೇ ಮನೆಮಂದಿಯ ಮನವೊಲಿಸಿ ಹಳ್ಳಿಯ ಎಲ್ಲ ದಲಿತರನ್ನೂ ಮನೆಯೊಳಕ್ಕೆ ಕರೆದುಕೊಂಡು ‘ದಲಿತರ ಗೃಹ ಪ್ರವೇಶ’ ಕಾರ್ಯಕ್ರಮವನ್ನು ಆರಂಭಿಸಿದ್ದರು. ಸುತ್ತಮುತ್ತಲಿನ ಹಳ್ಳಿಯ ನೂರಾರು ದಲಿತರು ಅಂದು ಅವರ ಮನೆಯಲ್ಲಿ ಉಂಡು, ತತ್ವಪದಗಳನ್ನು ಹಾಡಿದ್ದರು.
ಅದು ಅಭಿಯಾನವಾಗಿ, ಅಸ್ಪೃಶ್ಯತೆ ನಿರ್ಮೂಲನೆಯ ಸಂದೇಶವನ್ನು ಕರ್ನಾಟಕದ ಹತ್ತಾರು ಹಳ್ಳಿಗಳಲ್ಲಿ ಸೌಹಾರ್ದದ ನೆಲೆಯಲ್ಲಿ ಹರಡುತ್ತಾ, ನೆರೆಯ ಆಂಧ್ರ ಪ್ರದೇಶ, ತಮಿಳುನಾಡಿನ ಸಾವಿರಾರು ಹೃದಯಗಳನ್ನೂ ತಾಕಿಕೊಂಡು ಹತ್ತನೇ ವರ್ಷ ಪೂರ್ಣಗೊಳಿಸುತ್ತಿದೆ. ಇತ್ತೀಚೆಗೆ ನಿಧನರಾದ ತಾಯಿಯ ತಿಥಿಯನ್ನೂ ಅವರು ಅಸ್ಪೃಶ್ಯತೆ ನಿರ್ಮೂಲನೆಯ ಅವಕಾಶವನ್ನಾಗಿ ಪರಿವರ್ತಿಸಿದ್ದರು. ಅಂದು ರಾತ್ರಿ ನಡೆದ ತತ್ವಪದ ಗಾಯನದಲ್ಲೂ ನೂರಾರು ಮಂದಿ ಭಾಗವಹಿಸಿದ್ದರು.
2014–2024; ಅಸ್ಪೃಶ್ಯತೆ ನಿರ್ಮೂಲನೆಗಾಗಿ ಶುರುವಾದ, ಮನಪರಿವರ್ತನೆಯ, ಸುಧಾರಣಾವಾದಿ ಅಭಿಯಾನದ ಒಂದು ದಶಕದ ಪಯಣದ ಎರಡು ಬಿಂದುಗಳಿವು. ಆದಿಮ ಬಿಂದು ಬಾಬಾಸಾಹೇಬ್ ಅಂಬೇಡ್ಕರ್ ಅವರದ್ದು ಸಂಘರ್ಷದ ದಾರಿ. ಒಕ್ಕಲಿಗ ಸಮುದಾಯದ ಶಿವಪ್ಪ ಅವರದ್ದು ಗಾಂಧೀಜಿ ಮತ್ತು ಬುದ್ಧನ ದಾರಿ. ಅವರು ಈಗ ಜನರ ನಡುವೆ ‘ಅಸ್ಪೃಶ್ಯತೆ ನಿರ್ಮೂಲನೆಯ ಅರಿವು ಶಿವಪ್ಪ’.
ಅವರೊಂದಿಗೆ ರೈತ, ದಲಿತ, ಮಹಿಳಾ, ವಿದ್ಯಾರ್ಥಿ, ಯುವ ಸಂಘಟನೆಗಳೂ ಹೆಜ್ಜೆ ಹಾಕಿವೆ. ಜಿಲ್ಲಾಡಳಿತವೂ ಕೈಜೋಡಿಸಿದೆ. ಜನಪ್ರತಿನಿಧಿಗಳ ಬೆಂಬಲವೂ ನಿರಂತರವಾಗಿದೆ. ಅವರೀಗ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಉಸ್ತುವಾರಿ ಸಮಿತಿಯ ಸದಸ್ಯ. ಟೀಕೆ, ವಿರೋಧ–ಮೆಚ್ಚುಗೆ ಜೊತೆಗೇ ವರ್ಷದಿಂದ ವರ್ಷಕ್ಕೆ ಹಲವು ರೂಪಗಳನ್ನು ಅಭಿಯಾನ ದಾಟಿ ಬಂದಿರುವುದು ವಿಶೇಷ.
‘ಗೃಹ ಪ್ರವೇಶ’ ಶುರುವಾದ ವರ್ಷವೇ, ಮುಳಬಾಗಲಿನ ಕಾಡೇನಹಳ್ಳಿಯಲ್ಲಿ ಚೌಡೇಶ್ವರಿ ಮತ್ತು ಸೋಮೇಶ್ವರ ಗುಡಿಯೊಳಕ್ಕೆ ದಲಿತರು ಪ್ರವೇಶಿಸಿದರು. ಅದೇ ವೇಳೆ, ‘ನಿಮ್ಮ ದೇವರು, ದೇವಸ್ಥಾನ ಬೇಡವೇ ಬೇಡವೆಂದು ನಾವೇ ದೂರವಿರುವಾಗ ಮತ್ತೇಕೆ ನಮ್ಮವರನ್ನು ಅಲ್ಲಿಗೆ ಕರೆದೊಯ್ಯುತ್ತೀರಿ’ ಎಂದು ಕೆಲವು ದಲಿತ ಸ್ನೇಹಿತರ ಆಕ್ಷೇಪವೂ ಎದುರಾಗಿತ್ತು. ಅದರ ನಡುವೆಯೇ, ದಲಿತರಿಗೆ ಪ್ರವೇಶವಿಲ್ಲದ ಜಿಲ್ಲೆಯ ಸುಮಾರು ಒಂದು ಸಾವಿರ ದೇವಾಲಯಗಳಲ್ಲಿ ‘ಮುಕ್ತ ಪ್ರವೇಶವಿದೆ’ ಎಂಬ ಫಲಕ ಹಾಕಬೇಕೆಂದು ಪತ್ರ ಬರೆದು ಜಿಲ್ಲಾಡಳಿತದ ಮೇಲೆ ಒತ್ತಡ ತಂದರು. ಆಗ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರೂ ಸ್ಪಂದಿಸಿ, ಸುತ್ತೋಲೆ ಹೊರಡಿಸಿದರು. ಅದು ಇಡೀ ರಾಜ್ಯಕ್ಕೆ ಅನ್ವಯವಾಗುವಂಥ ಆದೇಶವಾಗಿದ್ದು ಈಗ ಇತಿಹಾಸ.
ಅಂಬೇಡ್ಕರರ 125ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಸಂಗಡಿಗರೊಂದಿಗೆ ಆರಂಭಿಸಿದ ‘ಅಸ್ಪೃಶ್ಯತೆ ಆಚರಿಸದಿರಿ’ ಪತ್ರ ಚಳವಳಿಗೆ, ‘ನಮ್ಮಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿಲ್ಲ’ ಎಂಬ ಮಾರುತ್ತರಗಳು ಬಂದವು! ಶಿವಪ್ಪ ವಿಚಲಿತರಾಗದೆ, ‘ಅಸ್ಪೃಶ್ಯತೆಯನ್ನು ಆಚರಿಸುವುದಿಲ್ಲ’ ಎಂದು ಶಾಲೆ, ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸುವ ಕಾರ್ಯಕ್ರಮ ನಡೆಸಿದರು. ನೆರೆಯ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಯತ್ತಲೂ ಕೊಂಡೊಯ್ದರು.
‘ನೀರಿನ ಅಸ್ಪೃಶ್ಯತೆ‘ ನಿವಾರಣೆಗಾಗಿ ಹಳ್ಳಿಗಳಲ್ಲಿ ‘ಒಂದು ಊರು, ಒಂದೇ ನೀರು‘ ಅಭಿಯಾನವನ್ನು ಆರಂಭಿಸಿದರು. ಕೋಲಾರ ತಾಲ್ಲೂಕಿನ ಬಂಡಹಳ್ಳಿಗೆ ಅಂದಿನ ತಹಶೀಲ್ದಾರ್ ಗಂಗಪ್ಪನವರನ್ನೇ ಕರೆದೊಯ್ದರು. ಊರಿನ ಬಾವಿಯಲ್ಲಿ ದಲಿತರು ಅಂದು ನಿರುಮ್ಮಳರಾಗಿ ನೀರು ಸೇದಿದರು.
ಈಗ ಹಳ್ಳಿಗಳಲ್ಲಿ ದಲಿತರು ಮತ್ತು ಇತರೆ ಜಾತಿಗಳವರ ಮನೆಗಳಲ್ಲಿ ಪರಸ್ಪರ ಸಹಭೋಜನವೂ ನಡೆದಿದೆ. ‘ಸಮತೆಯ ಟೀ’ ಕಡಿಮೆ ಖರ್ಚಿನಲ್ಲಿ ಅಸಮಾನತೆಯನ್ನು ಮೆಟ್ಟಿನಿಲ್ಲುವ ವಿಶೇಷ ಪ್ರಯತ್ನ.
ಅಭಿಯಾನವು ದಶಕ ಪೂರೈಸುವ ಹೊತ್ತಿಗೆ, ಮನಪರಿವರ್ತನೆಯ ಮಾದರಿಯಾಗಿ ‘ಅಸ್ಪೃಶ್ಯತೆ ಮುಕ್ತ ಮನೆ’ ಪರಿಕಲ್ಪನೆಯು ಮೈದಾಳಿದೆ. ಅದರ ಮೊದಲ ಕಾರ್ಯಕ್ರಮ ಕಳೆದ ಮಾರ್ಚ್‌ನಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಗರಕೆರೆಯಲ್ಲಿ ನಡೆಯಿತು. ಎನ್.ಎಸ್.ಜಗದೀಶ್– ಡಿ.ಜೆ.ಸೌಮ್ಯ ದಂಪತಿಯು ‘ಇದು ಅಸ್ಪೃಶ್ಯತೆ ಮುಕ್ತ ಮನೆ. ನಮ್ಮ ಹಳ್ಳಿಯ ದಲಿತರೂ ಸೇರಿದಂತೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಒಳಗೆ ಬನ್ನಿ’ ಎಂಬ ಫಲಕವನ್ನು ಹಾಕಿ, ಗ್ರಾಮದ ದಲಿತರನ್ನು ಮನೆಗೆ ಆಹ್ವಾನಿಸಿ ಸಹಭೋಜನ ಮಾಡಿದರು. ಇದು, ಇತರೆ ಜಾತಿಗಳ ಮನೆ–ಮನಗಳಲ್ಲಿರುವ ಅಸ್ಪೃಶ್ಯತೆಯನ್ನು ತೊಡೆದುಹಾಕುವ ಹೊಸ ಪ್ರಯತ್ನ.
ಈಗ ಕೋಲಾರ ಜಿಲ್ಲೆಯ ಎಲ್ಲ ತಾಲ್ಲೂಕಿನ 60 ಹಳ್ಳಿಗಳ ಸುಮಾರು 150 ಮನೆಗಳಲ್ಲಿ ಇಂಥ ಫಲಕಗಳನ್ನು ನೋಡಬಹುದು. ಆಂಧ್ರದಲ್ಲಿ ತೆಲುಗಿನಲ್ಲೂ ಫಲಕ ಅಳವಡಿಸಲು ಸಿದ್ಧತೆ ನಡೆದಿದೆ.
‘ಸಮಾನತೆಯ ಆಶಯಗಳನ್ನು ಬಲಪಡಿಸಲು, ಸಹೋದರತೆಯನ್ನು ಸಹಜಗೊಳಿಸಲು ಅಪ್ಪ–ಅಮ್ಮನ ನೆನಪಿನ ಅಚಲ ತತ್ವಗಾಯನ ಮತ್ತು ವಾರ್ಷಿಕ ತಿಥಿಗಳು ನೆರವಾಗಿವೆ. ಅವರಿಬ್ಬರೂ ಈಗ ಇಲ್ಲವೆಂಬ ನೋವಿದ್ದರೂ ಒಂದು ಸಾಮಾಜಿಕ ಕ್ರಾಂತಿ ಅವರ ನೆನಪಿನಲ್ಲೇ ಆರಂಭವಾಗಿ ಮುನ್ನಡೆಯುತ್ತಿದೆ ಎಂಬ ಖುಷಿ ಇದೆ’ ಎನ್ನುವ ಶಿವಪ್ಪನವರ ಮುಂದೆ, ಅಸ್ಪೃಶ್ಯತೆಯನ್ನು ತೊಡೆಯಲು ಶಾಂತಿ–ಸೌಹಾರ್ದದ ದಾರಿಗಳು ತೆರೆದುಕೊಳ್ಳುತ್ತಲೇ ಇವೆ. ಅಸ್ಪೃಶ್ಯತೆ ಆಚರಣೆಯಲ್ಲಿರುವ ಹಳ್ಳಿಗಳಿಂದ ಅವರಿಗೆ ಕರೆಗಳು ಬರುತ್ತಲೇ ಇವೆ.
ಅಸ್ಪೃಶ್ಯತೆ ನಿರ್ಮೂಲನೆಗೆ ಜೊತೆಯಾಗಲು ಬಯಸುವವರು ಅವರನ್ನು (7760415263) ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.